Poem

ಕಲ್ಕಿ 

ಸಮಕಾಲೀನ ಯುವ ಪ್ರತಿಭೆ ಪ್ರವೀಣ್ ಕುಮಾರ್ ಜಿ. ಅವರು ಮೂಲತಃ ಬಳ್ಳಾರಿಯವರು. ಕನ್ನಡ ಚಲನಚಿತ್ರ ರಂಗದಲ್ಲಿ ನಿರ್ದೇಶನ ಮತ್ತು ಬರವಣಿಗೆ ವಿಭಾಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರಿಗೆ ಕತೆ, ಕವನ ರಚನೆ, ಸಾಹಿತ್ಯ ಆಸಕ್ತಿಯ ಕ್ಷೇತ್ರಗಳು. ಅವರ ಹಲವಾರು ಕತೆ, ಕವನ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿದ್ದು 2020ನೇ ಸಾಲಿನ ಕಹಳೆ ಕತಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಸಂದಿದೆ. ಅವರ ‘ಕಲ್ಕಿ’ ಕವಿತೆ ಇಲ್ಲಿದೆ.

 

ಒದ್ದ ಸೇರಿನ ಅಕ್ಕಿ ಕಾಳುಗಳು ಇನ್ನೂ ಮನೆಯೊಳಗೇ ಇದ್ದವು..
ಮದುವೆಯ ಕಾರಿನ ಡಿಕ್ಕಿಯಲ್ಲಿತ್ತು ಸಿಂಗಾರಕ್ಕೆಂದು ಅಂಟಿಸಿದ್ದ
ಒಣಗಿದ ಕೆಂಪು ಗುಲಾಬಿ..

 

ಲಗ್ನದಲ್ಲಿ ಉಳಿದಿದ್ದ ಅರಿಶಿನ ಇಂದಾಗಿತ್ತು ಖಾಲಿ..
ಮುಡಿ ಏರಬೇಕಿದ್ದ ಮಲ್ಲಿಗೆ, ಎದೆಯ ಮೇಲಿವೆ ಹಾರಗಳಲಿ..
ಅವಳೇ ಹಚ್ಚಿ ದೇವರ ಮುಂದೆ ಇಡುತ್ತಿದ್ದ ದೀಪ
ಇಂದು ಅವಳ ತಲೆಯ ಪಕ್ಕ..
ನೀರು ಸ್ವಲ್ಪ ಬಿಸಿ ಇದ್ದರೂ ಬೇಡವೆನ್ನುತ್ತಿದ್ದವಳಿಗೆ
ಇಂದು ಅಂಗಳದಲ್ಲಿ ನಾಲ್ಕು ಜನರ ಮುಂದೆ ಜಳಕ..

 

ಮದುವೆಯ ಸೀರೆಯನ್ನು ಇನ್ನೂ ಒಗೆಯಲು ಕೊಟ್ಟಿರಲಿಲ್ಲ..
ಹೊಸ ಡಾಂಬಾರು ಗುಳಿಗೆಯ ಪ್ಯಾಕೆಟ್ಟೂ ಹರಿದಿರಲಿಲ್ಲ..
ಗಂಡನ ಕಪಾಟು ಇನ್ನೂ ಬ್ರಹ್ಮಚಾರಿಯಾಗಿಯೇ ಇತ್ತು..

 

ಮಾಜಿ ಗೆಳೆಯ ಕೊಟ್ಟಿದ್ದ ವಾಚು ನಿಧಾನ ಓಡುತ್ತಿತ್ತು..
ಗೆಳತಿಯರು ಕೊಟ್ಟಿದ್ದ ಮೇಕಪ್ ಸೆಟ್ಟು ಹಾಗೇ ಇತ್ತು..

 

ಅಂದು ಮೂರಾದಾಗ ನಗು, ಇಂದು ಆರಾದವು ಗಂಟು,
ಇನ್ನೊಮ್ಮೆ ಬಿದ್ದ ತಾಳಿಯಿಂದ ಮುತ್ತೈದೆ ಸಾವು..
ಉಂಗುರದಲ್ಲಿನ ಒಂಟಿ ಅಕ್ಷರ, ಹಸಿರು ಗಾಜಿನ ಬಳೆಗಳು,
ಬೈತಲೆಯಲ್ಲಿ ಅಂಟಿದ್ದ ಕುಂಕುಮ, ಬೆರಳು ಕಚ್ಚಿರುವ ಕಾಲುಂಗುರ,
ಅವನದ್ದೇ ಹೆಸರು ಹೇಳುತ್ತಿದ್ದವು..
ಒಳ್ಳೇ ಗಂಡ ಸಿಗ್ತಾನ ಎಂದಿದ್ದ ಅಜ್ಜಿ ಅಳುತ್ತಿತ್ತು ಬಿಕ್ಕಿ ಬಿಕ್ಕಿ..

 

ಉಸಿರುಗಟ್ಟಿದ್ದ ಹಗ್ಗಕ್ಕೆ ಎರಡು ಬಲಿ,
ಬಸುರಿ ಮತ್ತು ಭವಿಷ್ಯದ ಕಲ್ಕಿ..

ಕಲಾಕೃತಿ : ಅಶೋಕ ಶೆಟಕರ್‌

ಪ್ರವೀಣ್ ಕುಮಾರ್ ಜಿ.

ಸಮಕಾಲೀನ ಯುವ ಪ್ರತಿಭೆ ಪ್ರವೀಣ್ ಕುಮಾರ್ ಜಿ. ಅವರು ಮೂಲತಃ ಬಳ್ಳಾರಿಯವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿ ಕನ್ನಡ ಚಲನಚಿತ್ರ ರಂಗದಲ್ಲಿ ನಿರ್ದೇಶನ ಮತ್ತು ಬರವಣಿಗೆ ವಿಭಾಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೂರ್ಮಾವತಾರ, ಸಕ್ಕರೆ, ಎಂದೆಂದೂ ನಿನಗಾಗಿ, ಕಹಿ, ದನ ಕಾಯೋನು ಮತ್ತು ಮುಗುಳು ನಗೆ ಚಿತ್ರಗಳ ನಿರ್ದೇಶನ ತಂಡದ ಸದಸ್ಯರಾಗಿ ಕಾರ್ಯನಿರ್ವಹಣೆ. ಕತೆ, ಕವನ ರಚನೆ ಅವರ ಆಸಕ್ತಿಯ ಕ್ಷೇತ್ರಗಳು. ಅವರ ಕತೆಗಳು ಪ್ರಜಾವಾಣಿ, ಮಯೂರ, ಸುಧಾ, ತುಷಾರ, ಕನ್ನಡಪ್ರಭ, ವಿಜಯ ನೆಕ್ಸ್ಟ್, ಸಂಕ್ರಮಣ, ಮಂಗಳ ಮುಂತಾದ ಪತ್ರಿಕೆ, ಮ್ಯಾಗಸೈನ್‌ಗಳಲ್ಲಿ ಪ್ರಕಟವಾಗಿವೆ.

ಕೃತಿಗಳು: ಎಡೆ (ಕತಾಸಂಕಲನ) 

More About Author