Story

ಕತ್ತಲಲಿ ಕರಗಿದವರು

ಲೇಖಕ, ಕತೆಗಾರ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ ಕತೆ, ಕವನಗಳು ತರಂಗ, ಕರ್ಮವೀರ, ಅವಧಿ, ಕೆಂಡಸಂಪಿಗೆ, ಕನ್ನಡಪ್ರಭ ಮತ್ತು ಪ್ರಜಾವಾಣಿಯೂ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಅವರ ‘ಕತ್ತಲಲಿ ಕರಗಿದವರು’ ಕತೆ ನಿಮ್ಮ ಓದಿಗಾಗಿ....

ರಾತ್ರಿಯಿಡೀ ಅವಳ ಪಕ್ಕದಲ್ಲಿ ಕುಳಿತು ಅವಳ ತಲೆ ಸವರುತ್ತಲೇ ಇದ್ದ. ಆಗಾಗ ಅವಳು ಕೆಮ್ಮಿದಾಗ ನೀರು ಕುಡಿಸುತ್ತಿದ್ದ. ಅವಳ ಮೈ ಸುಡುತ್ತಿತ್ತು. ಏನು ಮಾಡಬೇಕೆಂದು ತಿಳಿಯದಾಗದೆ ಅವಳನ್ನು ನೋಡುತ್ತಾ ಕುಳಿತಿದ್ದ. ಅವಳು ಅವನ ಕೈಹಿಡಿದು, ಎಲ್ಲಿ ತನ್ನ ಪಕ್ಕದಿಂದ ಎದ್ದು ಹೋಗುವನೋ ಎಂದು ಭಯದಿಂದ ಕಣ್ಣುಮುಚ್ಚಿ ಧೈರ್ಯ ತಂದುಕೊಳ್ಳುತ್ತಿದ್ದಳು. ಆಗ ಬೆಳಗಿನ ಜಾವ ಐದು ಗಂಟೆ ಸಮಯ, ಸಣ್ಣ ಗುಡಿಸಿಲಿನಂತಹ ಟೆಂಟಿನಲ್ಲಿ ಕೆಳಗೆ ಹಾಸಿದ್ದ ರಗ್ಗಿನ ಮೇಲೆ ಮಲಗಿ, ತನ್ನ ಸೀರೆಯೊಂದನ್ನೇ ಹೊದ್ದುಕೊಂಡಿದ್ದ ಅವಳ ಕಾವಲಿಗೆ ಎಂಬಂತೆ ಅವನು ಪಕ್ಕದಲ್ಲೇ ಕುಳಿತು ಮೌನವಾಗಿ ರೋಧಿಸುತಿದ್ದ. ಆಗಾಗ ಯಾರಮೇಲೋ ಕೋಪವೆಂಬತೆ ಕೈ ಮುಷ್ಟಿ ಹಿಡಿದು ಶಬ್ದವಾಗದಂತೆ ನೆಲಕ್ಕೆ ಗುದ್ದುತ್ತಿದ್ದ. ದೂರದಲ್ಲಿ ನಾಯಿಗಳು ಕೂಗಿಕೊಳ್ಳುತ್ತಿದ್ದವು, ಆಗಾಗ ದೂರದಲ್ಲಿ ಓಡಾಡುತ್ತಿದ್ದ ವಾಹನಗಳ ಶಬ್ದ ಕೇಳಿಬರುತ್ತಿತ್ತು. ಎರಡು ಮೂರುದಿನದಿಂದ ಇಬ್ಬರೂ ಸರಿಯಾಗಲಿ ಊಟ ಮಾಡಿರಲಿಲ್ಲ, ತಿನ್ನಲು ಏನೂ ಇರಲಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಕೊಟ್ಟಿದ್ದ ಬ್ರೆಡ್ಡನ್ನು ಹೊಂಚಿಕೊಂಡು ತಿನ್ನುತ್ತಿದ್ದರು. ಮತ್ತೆ ಬ್ರೆಡ್ಡಿಗೆ ಹೋದಾಗ ಆಸ್ಪತ್ರೆಯ ಕಾವಲುಗಾರ ಅಲ್ಲಿಂದ ಓಡಿಸಿಬಿಟ್ಟಿದ್ದ. ಯಾವುದಾರೂ ಅಂಗಡಿಗೆ ನುಗ್ಗಿ ಸ್ವಲ್ಪ ತಿಂಡಿಗಳನ್ನು ಎತ್ತಿಕೊಂಡು ಓಡೋಣವೇ ಎಂದು ಅವನಿಗೆ ಅನಿಸಿದ್ದು ಉಂಟು, ಅಕಸ್ಮಾತ್ ಸಿಕ್ಕಿಬಿದ್ದರೆ ಪೋಲಿಸಿಗೆ ಹಿಡಿದುಕೊಟ್ಟರೆ ಗುಡಿಸಿನಲಿ ಅವಳು ಒಂಟಿಯಾಗಿಬಿಡುತ್ತಾಳೆ ಎಂದುಕೊಂಡು, ಅಲ್ಲಿಯೇ ನಲ್ಲಿಯಲ್ಲಿ ನೀರಿಡಿದುಕೊಂಡು ಬಂದಿದ್ದ. ಉಪವಾಸ ಅವನಿಗೆ ಹೊಸದಲ್ಲವಾದರೂ, ಅವಳನ್ನು ಉಪವಾಸ ಇರಲು ಬಿಡುವುದಿಲ್ಲ ಎಂದು ಮನಸಿನಲ್ಲಿ ಶಪಥ ಮಾಡಿದ್ದ. ಎಲ್ಲಿ ತನ್ನ ಶಪಥಭಂಗ ಆಗುವುದೋ ಎಂದು ಆಗಾಗ ಕಣ್ಣೀರು ಇಡುತ್ತಿದ್ದ. ಎದ್ದು ಹೊರಗಡೆ ಹೋಗೋಣ, ಇಲ್ಲ ಮಲಗೋಣ ಎಂದರೆ ಎಲ್ಲಿ ಅವಳು ತಾನು ಪಕ್ಕದಲ್ಲಿ ಇರದ ವೇಳೆ ಕಣ್ಣುಮುಚ್ಚುವಳೋ ಎಂದು ಭಯದಿಂದ ಅಲ್ಲೇ ಕುಳಿತಿದ್ದ.

ಕೆಟ್ಟು ಪಟ್ಟಣ ಸೇರು ಎನ್ನುತ್ತಾರೆ ಆದರೆ ತಾವು ಪಟ್ಟಣ ಸೇರಿ ಕೆಟ್ಟೆವು ಎಂದುಕೊಂಡ. ಹಳ್ಳಿಯಲ್ಲಿ ಬಂಧುಗಳು ಯಾರೂ ಇರದಿದ್ದರೂ ಇರವವರೆಲ್ಲರೂ ಸ್ವಂತದವರೇ ಅನಿಸುತಿತ್ತು. ಈ ಪರಿಸ್ಥಿತಿಯಲ್ಲಿ ಅವರು ಸುಮ್ಮನಿರುತ್ತಿದ್ದರೇ ಅನಿಸಿತು. ಈಗ ಯಾರೂ ಅಲ್ಲಿಂದ ಬರುವ ಹಾಗಿಲ್ಲ, ನಾವು ಇಲ್ಲಿಂದ ಹೋಗುವ ಹಾಗಿಲ್ಲ. ಬೆಂಗಳೂರಿನಿಂದ ಹೋದವರಿಗೆ ಹಳ್ಳಿಯ ಒಳಗೆ ಬಿಡುತ್ತಿಲ್ಲ, ಹೊರಗೆ ತಂತಿ ಬೇಲಿ ಹಾಕಿ ತಡೆಯುತ್ತಿದ್ದಾರೆ ಎಂದು ಕೇಳಿಸಿಕೊಂಡಿದ್ದ. ಇದೆಂತಹ ಪರಿಸ್ಥಿತಿ, ತನ್ನವರನ್ನು ಸೇರಲು ಬಿಡದ ಸ್ಥಿತಿ. ಊರಲ್ಲಿ ಎಲ್ಲಾ ಹೇಗಿದ್ದಾರೋ. ಕೆಲಸದ ಒತ್ತಡದಿಂದ ದಿನ ಸಾಗಿ ಹೋಗುತ್ತಿದ್ದಾಗ ಯಾರ ನೆನಪು ಬಂದಿರಲಿಲ್ಲ. ಈಗ ಊರ ಪ್ರತಿಯೊಬ್ಬರ ನೆನಪೂ ಬರುತ್ತಿದೆ. ಬಾವಿಯ ಮನೆಯ ನಂಜುಂಡ ಹೇಗಿದ್ದಾನೋ ಎಂದುಕೊಂಡ, ಪಕ್ಕನೆ ನಂಜುಂಡ ತಾನು ಜಗಳವಾಡಿಕೊಂಡು, ಕೈ ಕೈ ಮಿಲಾಯಿಸಿ ದೂಳಿನಲ್ಲೆಲ್ಲಾ ಹೊರಳಾಡಿ ಹೊಡೆದಾಡಿಕೊಂಡಿದ್ದು ನೆನಪಾಯಿತು. ತನ್ನ ಶತ್ರುವಾದರೂ ಅವನ ಬಗ್ಗೆ ಮನಸ್ಸು ಮರುಕಗೊಳ್ಳುತ್ತಿದೆ, ಇಬ್ಬರೂ ಜಗಳವಾಡಿದ್ದು ಹೊಟ್ಟೆ ಪಾಡಿಗಾಗಿ, ಯಾರಿಗೆ ಆಸ್ತಿಯಿದೆ, ಇಬ್ಬರೂ ಕೂಲಿ ಮಾಡುವವರೇ. ಒಳ್ಳೆಯವನೇ ಪಾಪ, ಹಿತ್ತಲಮನೆ ಗಾಯಿತ್ರಕ್ಕನಿಗೆ ಹೆರಿಗೆ ನೋವು ಬಂದಾಗ, ಬಂಡಿ ಹೂಡಲು ಒಂದು ಎತ್ತು ಇಲ್ಲದಿದ್ದಾಗ, ತಾನೇ ಒಂದುಕಡೆ ಎಂಟು ಮೈಲಿ ಗಾಡಿ ಎಳೆದು ಆಸ್ಪತ್ರೆಗೆ ಸೇರಿಸಿದ್ದ. ಎಲ್ಲರ ನೆನಪೂ ಮನದಲ್ಲಿ ಹಾದು ಹೋಯಿತು. ತಾನು ಊರು ಸೇರುವಹೊತ್ತಿಗೆ ಯಾರು ಇರುತ್ತಾರೋ ಇಲ್ಲವೋ, ನಾನೂ, ಸಾವಿತ್ರಿ ಇರುತ್ತೇವೋ ಇಲ್ಲವೋ ಎಂದುಕೊಂಡ. ಒಂದೇ ಭಂಗಿಯಲ್ಲಿ ಕುಳಿತು ಬೆನ್ನು ನೋವು ಶುರುವಾಯಿತು, ಹಾಗೆಯೇ ಹಿಂದೆ ಜರುಗಿ ಗೋಡೆಗೆ ಒರಗಿದ, ಮನ, ಪರಸ್ಥಿತಿಗೆ ಕಾರಣ ಹುಡುಕಲು ತೊಡಗಿತು.

ಅಪ್ಪ , ಅಮ್ಮ ತೀರಿಕೊಂಡಾಗ ವಯಸ್ಸು ೫ ವರ್ಷ, ಅಜ್ಜಿ ತಾತ ಬೆಳೆಸಿದ್ದರು. ವಯಸ್ಸಿಗೆ ಬಂದಾಗ ತನ್ನ ಹಾಗೆಯೇ ಬೆಳೆದ ಸಾವಿತ್ರಿಯನ್ನು ತಂದು ಮದುವೆ ಮಾಡಿಸಿದ್ದರು. ಮದುವೆ ನಡೆದ ಎರಡು ವರ್ಷದೊಳಗೆ ಇಬ್ಬರೂ ತಬ್ಬಲಿಗಳಾಗಿದ್ದರು. ಇಬ್ಬರಿಗೂ ಆಸ್ತಿ ಇರಲಿಲ್ಲ. ಇಬ್ಬರೂ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಇರುವ ಹಳೇಮನೆ ಒಂದು ಹದ ಮಳೆ ಬಂದರೆ ಬೀಳುವ ಹಾಗಿತ್ತು. ಏನಾದರೂ ಮಾಡಿ ಹಣ ಸಂಪಾದಿಸಿ ಅಜ್ಜಿ ತಾತರ ನೆನಪಿನ ಮನೆಯನ್ನು ದುರಸ್ತಿ ಮಾಡಿಸಬೇಕು ಎಂದು ಕೊಳ್ಳುತ್ತಿದ್ದ. ಕೂಲಿಯಿಂದ ಬರುವ ಧಾನ್ಯ, ಸ್ವಲ್ಪ ಹಣ ಬದುಕುವುದಕ್ಕೆ ಸರಿಹೋಗುತ್ತಿತು. ಆಗ ಮನಸಿಗೆ ಬಂದಿದ್ದು ಹಬ್ಬದ ದಿನ ಬಣ್ಣ ಬಣ್ಣದ ಬಟ್ಟೆ ತೊಟ್ಟು ಬಸ್ಸಿನಿಂದ ಇಳಿಯುತ್ತಿದ್ದ, ಬೆಂಗಳೂರು ನಗರದಲ್ಲಿರುವ ತನ್ನ ಹಳ್ಳಿಯ ಜನ. ಅವರು ಎರಡೆರಡು ಬ್ಯಾಗುಗಳನ್ನು ಹಿಡಿದು ಬಸ್ಸಿನಿಂದ ಗಂಭೀರವಾಗಿ, ಆ ಬ್ಯಾಗುಗಳಲ್ಲಿ ಚಿನ್ನ ತುಂಬಿದವರಂತೆ ಇಳಿಯುತ್ತಿದ್ದರೆ ಅವರನ್ನೇ ನೋಡುತ್ತಾ ನಿಲ್ಲುತಿದ್ದ. ಯಾರನ್ನಾದರೂ ಕೇಳಿ ತಾನು ನಗರಕ್ಕೆ ಹೋಗಬೇಕು, ಹಣ ತಂದು ಮನೆ ಸರಿಮಾಡಿಸಬೇಕು ಎಂದು ಮನಸಿನಲ್ಲಿ ಯೋಚಿಸುತಿದ್ದ. ಒಂದು ದಿನ ಹಳೇಮರದ ಗೋಪಾಲನನ್ನು ಕೇಳಿದರೆ ಜೋರಾಗಿ ನಕ್ಕು ಬಿಟ್ಟಿದ್ದ "ಓದಿದ ನಮಗೆ ಅಲ್ಲಿ ಕೆಲಸ ಇಲ್ಲ ಇನ್ನು ಹೆಬ್ಬೆಟ್ಟು ನಿನಗೆ ಎಂತ ಕೆಲಸ ಸಿಗುತ್ತೆ" ಎಂದು ನಗಾಡಿದ್ದ. "ನೀನು ಓದಿದ್ದು ಏಳನೇ ಕ್ಲಾಸ್ ಅಷ್ಟೇ" ಎಂದು ಹೇಳುವಷ್ಟು ಕೋಪ ಬಂದಿತ್ತು, ಎಲ್ಲಿ ಅವರ ಮನೆ ಕೂಲಿಗೆ ಕಲ್ಲು ಬೀಳುವುದೋ ಎಂದು ಸುಮ್ಮನಾಗಿದ್ದ.

ಅಂತೂ ಇಂತೂ ಸಾವಿತ್ರಿಯನ್ನು ಒಪ್ಪಿಸಿದ್ದಾಯಿತು. ಅವಳನ್ನು ಕರೆದುಕೊಂಡು ಮನೆಯ ಬೀಗದ ಕೈಯನ್ನು ಪಕ್ಕದ ಮನೆ ನರಸಮ್ಮನಿಗೆ ಕೊಟ್ಟು ದೇವರಮೇಲೆ ಭಾರ ಹಾಕಿ ಒಂದು ಮುಂಜಾನೆ ಬೆಂಗಳೂರಿಗೆ ಹೊರಟ. ಬಸ್ಸಿನಲ್ಲಿದ್ದ ಅನೇಕ ಜನ ಬೆಂಗಳೂರಿಗೆ ಹೋಗುವುದು ಒಂದು ಹಿರಿಮೆಯಂತೆ, ಮಹತ್ಕಾರ್ಯಕ್ಕೆ ಹೊರಟಿದ್ದೇವೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದರು. ಕೆಲವರು ಮುಖದಲ್ಲಿ ಗಂಭೀರತೆ ತಂದುಕೊಂಡು ತಾವು ವಿಶೇಷ ವ್ಯಕ್ತಿಗಳು ಎಂಬಂತೆ ತೋರಿಸಿಕೊಳ್ಳುತ್ತಿದ್ದರು. ಇನ್ನೂ ಕೆಲವರು ತಮಗೆ ಬೆಂಗಳೂರು ಚೆನ್ನಾಗಿ ಗೊತ್ತು ಎಂಬಂತೆ, ಎಲ್ಲಿ ಇಳಿಯಬೇಕು ಹೇಗೆ ಇಂತಹ ಕಡೆ ಹೋಗಬೇಕು ಎಂದು ಪಕ್ಕದಲ್ಲಿ ಕುಳಿತವರಿಗೆ ವಿವರಿಸುತ್ತಿದ್ದರು. ಅವರ ಹಾವ ಭಾವ ನೋಡಿ ಬೆಂಗಳೂರಿನ ಚಿತ್ರಣವನ್ನು ಸಾವಿತ್ರಿ ತಂದುಕೊಂಡಳು. ಅಂತಹ ಮಾಯಾನಗರಕ್ಕೆ ಹೋಗುವುದು ಈಗ ಖುಷಿ ಸಂಗತಿ ಅನಿಸತೊಡಗಿತ್ತು.

ಮಧ್ಯಾಹ್ನದ ಹೊತ್ತಿಗೆ ಬೆಂಗಳೂರು ಸೇರಿ ಅಲ್ಲಿನ ಮರದ ಕೆಳಗೆ ಕುಳಿತು, ಮನೆಯಿಂದ ತಂದಿದ್ದನ್ನು ತಿಂದು ಸುಧಾರಿಸಿಕೊಂಡರು. ಮುಂದೆ ಎಲ್ಲಿ ಹೋಗುವುದು ಎಂದು ತಿಳಿದಿರಲಿಲ್ಲ. ಬೆಂಗಳೂರಿನಿಂದ ಹಳ್ಳಿಗೆ ಬರುತಿದ್ದ ಜನ ಹೇಳುತಿದ್ದ ಮಾತು ಒಂದು ನೆನಪಿತ್ತು, ನಗರದ ದೊಡ್ಡ ಸೇತುವೆಯ ಕೆಳಗೆ ಹಳ್ಳಿಗಳಿಂದ ಬಂದ ಜನ ಇದ್ದು, ಕಟ್ಟಡ ಕಟ್ಟುವ ಕೆಲಸಕ್ಕೆ ಹೋಗುತ್ತಾರೆ ಎಂದು. ತನಗೆ ಗಾರೆ ಕೆಲಸ ಚೆನ್ನಾಗಿ ಗೊತ್ತಿದೆ ಎಂಬ ಆತ್ಮ ವಿಶ್ವಾಸ ಬೇರೆ ಇತ್ತು. ಸಾವಿತ್ರಿ ಇಟ್ಟಿಗೆ ಹೊರಲು ಸಿದ್ಧಳಾಗಿದ್ದಳು. ಸಾಯಂಕಾಲದವರೆಗೂ ಓಡಾಡಿದಮೇಲೆ ಒಂದು ಸೇತುವೆಯ ಕೆಳಗೆ ಜನ ಮೂರು ಕಲ್ಲನು ಇಟ್ಟು ಅನ್ನ ಬೇಯಿಸಿಕೊಳ್ಳುತಿದ್ದರು. ಅಲ್ಲಿ ಹೋಗಿ ನಿಂತುಕೊಂಡರು. ಅಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದ ಗಂಡಸರು ಯಾವೂರು ಎಂದರು. ಅವರು ತಮ್ಮನ್ನು ಮಾತನಾಡಿಸಿದ ಖುಷಿಯನ್ನು ಮುಖದ ತುಂಬಾ ತಂದುಕೊಂಡು "ಮಸರ ಅಂತ, ಇಲ್ಲೇ ಮಧುಗಿರಿ ಅತ್ರ" ಎಂದ. "ಹೌದಾ ನಮ್ಮದು ಪಾವಗಡ" ಎಂದ ಒಬ್ಬ. ಅಷ್ಟು ಹೇಳಿದ್ದೆ ತಡ ಪಕ್ಕದಮನೆಯವರೇ ಸಿಕ್ಕಹಾಗೆ ತನ್ನ ಜೀವನದ ಇಡೀ ವೃತಾಂತ ಹೇಳಿದ.

ಆ ರಾತ್ರಿ ಅಲ್ಲಿಯ ಜನ ಇಬ್ಬರಿಗೂ ಅಲ್ಲಿ ಮಲಗಲು ಅಣಿವು ಮಾಡಿಕೊಟ್ಟರು. ಅಲ್ಲಿದ್ದ ಒಂದು ಮುದುಕಿ "ಹೂಂ ಯಾವಾಗ ಪೊಲೀಸ್ನವರು ಬಂದು ಜಾಗ ಖಾಲಿ ಮಾಡಿಸ್ತಾರೋ' ಎಂದು ಗೊಣಗಿಕೊಂಡಿದ್ದು ಕೇಳಿಸಿತು. ಬೆಳಿಗ್ಗೆ ಹತ್ತಿರ ಎದ್ದು ಹತ್ತಿರದಲ್ಲೇ ಇದ್ದ ಸುಲಭ್ ಶೌಚಾಲಯದಲ್ಲಿ ಬೆಳಗಿನ ಕಾರ್ಯಮುಗಿಸಿ,ಅಲ್ಲಿ ಕೊಟ್ಟ ಕಾಫಿ ಹೀರಿ ಅವರ ಜೊತೆಯೇ ಕಟ್ಟಡವೊಂದರ ಕೆಲಸಕ್ಕೆ ಹೋಗಿದ್ದರು, ಆದಿನ ಸಾಯಂಕಾಲ ಇಬ್ಬರ ಕೈಗೂ ಹಣ ಬಿದ್ದಾಗ, ನೋಡಿ ಖುಷಿ ಪಟ್ಟರು, ಇಬ್ಬರ ಹಣಸೇರಿ ಒಂದು ದಿನಕ್ಕೆ ೩೦೦ ರೂಪಾಯಿ ಆಗಿತ್ತು, ಹಳ್ಳಿಯಲ್ಲಿ ಅಷ್ಟು ಹಣ ಬೇಕಿದ್ದರೆ ಒಂದು ವಾರ ದುಡಿಯಬೇಕಾಗಿತ್ತು, ಹೀಗೆಯೇ ಒಂದು ವರ್ಷ ದುಡಿದು ಊರು ಸೇರಬೇಕೆಂದುಕೊಂಡರು. ಕಾಲ ಹೀಗೆ ಕಳೆಯುತ್ತಿರಲು, ಕೊರೋನಾ ಮಾರಿ ಎಲ್ಲಿಂದಲೋ ದಪ್ಪನೆ ಬಂತು ಬಿತ್ತು. ಎಲ್ಲವೂ ನಿಂತು ಹೋಯಿತು. ಕಟ್ಟಡ ಕೆಲಸವಲ್ಲದೆ ಭಿಕ್ಷೆ ಬೇಡಲೂ ಸಾಧ್ಯವಾಗಾದಾಯಿತು. ಪೋಲಿಸಿನವರು ಬಂದು ಎರಡು ದಿನದಲ್ಲಿ ಜಾಗ ಖಾಲಿ ಮಾಡುವಂತೆ ಹೇಳಿ ಹೋದರು. ಮರುದಿನ ಅಲ್ಲಿದ್ದ ಜನ ಬೇರೆ ಬೇರೆ ಕಡೆ ಹೊರಟುಹೋದರು. ಅವರಿವರನ್ನು ಕೇಳಿ ಬೆಂಗಳೂರಿನ ಸ್ಲಂ ಒಂದರಲ್ಲಿ ಗುಡಿಸಲಿನಂತಿದ್ದ ಮನೆಯನ್ನು ಬಾಡಿಗೆಗೆ ಪಡೆದು ಇರತೊಡಗಿದರು. ಊರಿಗೆ ಹೋಗಲು ಯಾವ ಬಸ್ಸುಗಳೂ ಇರಲಿಲ್ಲ, ಅದಲ್ಲದೆ ಯಾರನ್ನೂ ಪೋಲಿಸಿನವರು ರಸ್ತೆಗೆ ಬಿಡುತ್ತಿರಲಿಲ್ಲ. ಗುಡಿಸಲು ಸೇರುವ ಮೊದಲು ಬೇಕಿದ್ದ ಅಡುಗೆ ಪಾತ್ರೆ, ಪದಾರ್ಥಗಳನ್ನು ತಂದುಕೊಂಡಿದ್ದರು. ಊರಿಗೆ ಹೋದರೆ, ಬೆಂಗಳೂರಿನಿಂದ ಬಂದ ಜನರನ್ನು ಊರ ಒಳಗಡೆ ಬಿಡುವುದಿಲ್ಲ ಎಂಬ ಸುದ್ದಿ ತಿಳಿದುಬಂತು, ಏನು ಮಾಡುವುದೋ ತಿಳಿಯದೆ ಗುಡಿಸಿನಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು. ಇಷ್ಟುದಿನ ಉಳಿಸಿದ್ದ ಹಣ ನಿಧಾನವಾಗಿ ಕರಗಲಾರಂಬಿಸಿತು. ಇನ್ನು ಹೆಚ್ಚು ಎಂದರೆ ಹದಿನೈದು ದಿನ ಕಾಲ ದೂಡಬಹುದಾಕಿತ್ತು. ಎಲ್ಲರ ಬಾಯಲ್ಲೂ ಲಾಕ್ ಡೌನ್ ಎಂಬ ಪದ ಆಡಲಾರಂಭಿಸಿತ್ತು. ಅಗತ್ಯ ಸಾಮಗ್ರಿಗೆ ಬೆಳಿಗ್ಗೆ ಸ್ವಲ್ಪ ಹೊತ್ತು ಅಣಿವು ಮಾಡಿಕೊಟ್ಟಿದ್ದರು. ಎಲ್ಲಾಕಡೆ ಹೆಚ್ಚು ಜನ ಸೇರುವುದು ನಿಷೇದಿಸಲಾಗಿತ್ತು.

ಒಂದು ದಿನ ತರಕಾರಿ ತರಲು ಹೋಗಿದ್ದಾಗ, ಅಲ್ಲಿಯೇ ಇದ್ದ ಪೋಲೀಸಿನವರನ್ನು ಕೇಳಿದ್ದ " ಸಾರ್ ಊರಿಗೆ ಹೋಗಬಹುದಾ? ಎಂದು "ಎಲ್ಲೂ ಹೋಗಲು ಬಿಡುತ್ತಿಲ್ಲ, ಇನ್ನು ಸ್ವಲ್ಪ ದಿನ ಲಾಕ್ ಡೌನ್ ಇದೆ' ಎಂದಿದ್ದರು. ತಾನು ಆಕಡೆ ತಿರುಗಿದಾಗ ಒಬ್ಬ ಪೋಲೀಸಿನವನಿಗೆ ಇನ್ನೊಬ್ಬ ಪೊಲೀಸ್ ಹೇಳುತಿದ್ದ.

ಈ ಲಾಕ್ ಡೌನ್ ಎಲ್ಲಾ ಬಡವರಿಗೆ ನಿನ್ನೆ ನೋಡಿದ್ಯಾ ಆ ಮಂತ್ರಿ ಮನೆಯಲ್ಲಿ ಹುಟ್ಟಿದಬ್ಬದ ಪಾರ್ಟಿನ, ಮಾಸ್ಕು ಇಲ್ಲ ಸೋಶಿಯಲ್ ಡಿಸ್ಟೆನ್ಸ್ ಇಲ್ಲಾ"

ಒಂದು ಕಾದಂಬರಿಯಲ್ಲಿ ಒಂದು ಮಾತು ಬರುತ್ತೆ " ಈ ಪ್ರಪಂಚ ಇರೋದು ಸುಂದರವಾಗಿರೋರಿಗೆ, ಓದಿದವರಿಗೆ, ಬುದ್ದಿವಂತರಿಗೆ, ಶ್ರೀಮಂತರಿಗೆ, ಅಧಿಕಾರ ಇರೋರಿಗೆ ಅಲ್ಲ ಅದೆಲ್ಲಾ ಇಲ್ಲದೋರಿಗೂ ಇಲ್ಲಿ ಜೀವಿಸಲು ಅಷ್ಟೇ ಹಕ್ಕಿದೆ ಎಂದು"

"ಅದೆಲ್ಲಾ ಪುಸ್ತಕ್ಕಕದಲ್ಲಿ, ಇಲ್ಲಿ ಬೆಲೆ ಇರೋದು ನೀನು ಹೇಳಿದ ಎಲ್ಲಾ ಇರೋರಿಗೆ ಮಾತ್ರ"

ಆದಿನ ಸಾವಿತ್ರಿಯೊಡನೆ ಹಳ್ಳಿ ವಿಷಯ ಮಾತನಾಡುತ್ತಾ ಕುಳಿತಿದ್ದ, ಸಾವಿತ್ರಿ ಗೆಲುವಿನಿಂದ ಹಳ್ಳಿಯಲ್ಲಿ ನಡೆದ ತಮಾಷೆ ಸಂಗತಿಗಳನ್ನು ಹೇಳುತಿದ್ದಳು. ಇಬ್ಬರೂ ಬಿದ್ದು ಬಿದ್ದು ನಕ್ಕಿದ್ದರು. ಅಜ್ಜಿ ತಾತನನ್ನು ನೆನಸಿಕೊಂಡು ದುಃಖಗೊಂಡಿದ್ದರು. ಹಳ್ಳಿಯನ್ನು ನೆನಸಿಕೊಂಡು ಬೇಸರಗೊಂಡಿದ್ದರು. ಆ ದಿನ ರಾತ್ರಿ ಸಾವಿತ್ರಿಗಯ ಗಂಟಲು ಕೆರತ ಶುರುವಾಯಿತು. ಬೆಳಗಿನ ಹೊತ್ತಿಗೆ ಮೈ ಬಿಸಿ ಏರಿತು. ಇಬ್ಬರೂ ಗಾಭರಿಗೊಂಡರು.

"ಮಾಮ ಇದು ಕರೋನಾನಾ?" ಎಂದು ಕೇಳಿದಳು.

"ಪರೀಕ್ಷೆ ಮಾಡಿಸೋಣ, ಗಾಭರಿಯಾಗಬೇಡ, ನಾನಿದ್ದೇನೆ" ಎಂದಿದ್ದ

ಸರ್ಕಾರಿ ಆಸ್ಪತ್ರಗೆ ಹೋಗುವ ಹೊತ್ತಿಗೆ ಅಲ್ಲಿ ದೊಡ್ಡ ಸಾಲಿತ್ತು. ಎರಡು ಗಂಟೆ ಕಳೆದ ಮೇಲೆ ಸಾವಿತ್ರಿಯ ಸರದಿ ಬಂದಿತ್ತು. ಸಾವಿತ್ರಿಯನ್ನು ಮರದ ಕೆಳಗೆ ಕೂರಿಸಿ , ತಾನೇ ಸಾಲಿನಲ್ಲಿ ನಿಂತಿದ್ದ. ಅಲ್ಲಿ ಎಲ್ಲರೂ ಕೆಮ್ಮುತ್ತಿದ್ದರು, ಅಸ್ವಸ್ಥರಾಗಿದ್ದರು. ಎಲ್ಲರ ಮುಖದಲ್ಲಿ ಭಯ. ಅಲ್ಲಿ ಕೆಲವರನ್ನು ಸ್ಟ್ರೆಚರ್ನಲ್ಲಿ ಮಲಗಿಸಿ ಆಸ್ಪತ್ರೆ ಒಳಗಡೆ ಕೊಂಡೊಯ್ಯುತ್ತಿದ್ದರು. ಇಡೀ ಆಸ್ಪತ್ರೆಯೇ ರೋಗಿಯಂತೆ ಕಾಣಿಸಿತು.

ಸಾವಿತ್ರಿಗೆ ಟೆಸ್ಟ್ ಮಾಡಿ, ಕೆಲವು ಮಾತ್ರೆಗಳನ್ನು ಕೊಟ್ಟು, ರಿಪೋರ್ಟ್ ಎರಡು ದಿನ ಆದಮೇಲೆ ಬರುತ್ತದೆ ಆಮೇಲೆ ಬನ್ನಿ ಎಂದರು. ಮನೆಗೆ ಬಂದ ರಾತ್ರಿ ಜ್ವರ ಏರಿತು, ವಿಪರೀತ ಕೆಮ್ಮುತ್ತಿದ್ದಳು. ಏನಾಗುವುದು ಎಂದು ಗಾಭರಿಗೊಂಡು ಅವಳನ್ನು ತನ್ನಲ್ಲಿದ್ದ ಸೈಕಲ್ ಮೇಲೆ ಕೂರಿಸಿಕೊಂಡು ಮತ್ತೆ ಆಸ್ಪತ್ರೆಗೆ ಬಂದ. ಒಬ್ಬ ಇಲ್ಲಿ ಬೆಡ್ ಖಾಲಿ ಇಲ್ಲ, ಬೇರೆಕಡೆ ಹೋಗಿ ಎಂದು ಹೇಳಿದ. ಇಡೀ ರಾತ್ರಿ ಎಲ್ಲಾ ಆಸ್ಪತ್ರೆಗಳಿಗೆ ತಿರುಗಿದರು, ಎಲ್ಲೂ ಬೆಡ್ ಖಾಲಿ ಇಲ್ಲ. ಕೆಲವು ಕಡೆ ಔಷದಿ ಕೊಟ್ಟು ಕಳಿಸಿದರು. ಏನು ಮಾಡಲು ತೋಚದೆ ಮನೆಗೆ ಬಂದರು. ಕೆಲವು ಆಸ್ಪತ್ರೆಗಳಲ್ಲಿ ಕಾರಿನಲ್ಲಿ ಬಂದಿಳಿದ ಜನಗಳು ಸುಲಭವಾಗಿ ಒಳಹೋಗುತ್ತಿದ್ದುದ್ದನ್ನು ನೋವಿನಿಂದ ನೋಡಿ ಬಂದಿದ್ದರು. ಅಲ್ಲಿ ಕೇಳಿದಾಗ ಅವರೆಲ್ಲಾ ದುಡ್ಡಿರುವವರು ಅವರಿಗೆ ಎಲ್ಲಾ ಸಿಗುತ್ತೆ ಎಂದಿದ್ದರು. ಖಾಸಗಿ ಆಸ್ಪತ್ರೆಯವರಿಗೂ ಅಂಗಲಾಚಿದ್ದ, ಅವನ ಅವತಾರ ನೋಡಿಯೇ ಅವನನ್ನು ಒಳಗಡೆಯೇ ಬಿಟ್ಟುಕೊಂಡಿರಲಿಲ್ಲ.

ರಾತ್ರಿ ಜ್ವರ ಏರುತ್ತಲೇ ಹೋಯಿತು. ಅವಳಿಗೆ ನೀರುಕುಡಿಸುತ್ತಾ ಇಡೀ ರಾತ್ರಿ ಕುಳಿತಿದ್ದ. ಬೆಳಿಗ್ಗೆ ಏಳು ಗಂಟೆ ಆಗುವಹೊತ್ತಿಗೆ ಜೋರಾಗಿ ಒಂದು ಸಲ ಉಸಿರನ್ನು ಎಳೆದುಕೊಂಡ ಸಾವಿತ್ರಿ ಉಸಿರು ನಿಲ್ಲಿಸಿದಳು. ಅರ್ಧಗಂಟೆ ಅವಳ ಮುಖ ನೋಡುತ್ತಲೇ ಕುಳಿತ. ಆಮೇಲೆ ಅವಳಿಗೆ ಸ್ನಾನ ಮಾಡಿಸಿದ, ಅವಳ ಇಷ್ಟದ ಸೀರೆಯನ್ನು ಉಡಿಸಿದ. ಅವಳ ದೇಹವನ್ನು ತನ್ನ ಹೆಗಲ ಮೇಲೆ ಹೊತ್ತು, ಹತ್ತಿರದಲ್ಲೇ ಇದ್ದ ಸ್ಮಶಾನಕ್ಕೆ ಹೊರಟ. ಅಲ್ಲಿ ಹೋದಾಗ ಇಡೀ ಸ್ಮಶಾನವೇ ಸತ್ತ ದೇಹಗಳಿಂದಲೂ, ಬೇಯುತ್ತಿರುವ ಶವಗಳ ಚಿತೆಗಳಿಂದಲೂ ತುಂಬಿಹೋಗಿತ್ತು. ಅಲ್ಲಿಯ ಕೆಲಸಗಾರ ಇಲ್ಲಿ ಶವ ಸುಡಲು ಸ್ಥಳ ಇಲ್ಲವೆಂದು ಹೊರಗಟ್ಟಿದ. ಇಡೀದಿನ ಒಂದಾದ ನಂತರ ಒಂದು ಸ್ಮಶಾನಕ್ಕೆ ತುರುಗಿದ, ಎಲ್ಲೂ ಸುಡಲಾಗಲಿ, ಹೊಳಲಾಗಲಿ ಜಾಗ ಸಿಗಲಿಲ್ಲ. ಯಾವ ಸ್ಮಶಾನ ನೋಡಿದರೂ ಶವಗಳಿಂದಲೇ ತುಂಬಿತ್ತು. ಆಂಬ್ಯುಲೆನ್ಸಗಳು ಸಾಲು ಸಾಲಾಗಿ ನಿಂತಿದ್ದವು. ಜನರು ತಮ್ಮವರನ್ನೇ ಕಳೆದುಕೊಂಡ ದುಃಖ ಮರೆತು ಯಾವಾಗ ತಮ್ಮವರ ಶವ ಸಂಸ್ಕಾರವಾಗುವುದೋ, ಯಾವಾಗ ಮನೆ ಸೇರಿಕೊಳ್ಳುವುದೋ ಎಂದು ಚಡಪಡಿಸುತ್ತಿದ್ದರು. ಅಳುವುದನ್ನೇ ಮರೆತು ಬೇಸರಕ್ಕೆ, ಸುಸ್ತಿಗೆ ಆಕಳಿಸುತಿದ್ದರು. ತಮ್ಮವರ ಶವ ಪಕ್ಕದಲ್ಲೇ ಇದ್ದರೂ, ಕೆಲವರು ಅದನ್ನು ನೋಡದೆ ತಮ್ಮ ಮೊಬೈಲ್ ಫೋನ್ ನೋಡುತ್ತಾ ಕುಳಿತಿದ್ದರು. ಕೆಲವರು ಲೋಕಾಭಿರಾಮವಾಗಿ ಹರಟೆ ಹೊಡೆಯುತ್ತಿದ್ದರು. ಅಲ್ಲಿಯ ಕೆಲಸಗಾರ ಮಾತ್ರ ತಾನು ಎಷ್ಟು ಜಾಸ್ತಿ ಕೆಲಸ ಮಾಡುತಿದ್ದೇನೆ, ಹೇಗೆ ತನಗೆ ಹಣ ಸಿಗುತ್ತಿಲ್ಲ ಎಂಬುದನ್ನು ಬಂದವರ ಹತ್ತಿರವೆಲ್ಲಾ ಹೇಳುತ್ತಿದ್ದ. ಕಾದು, ಕಾದು ಕತ್ತಲಾದ್ದರಿಂದ ಸಾವಿತ್ರಿಯ ದೇಹವನೆತ್ತಿಕೊಂಡು ಮತ್ತೆ ಮನೆಗೆ ಬಂದ.

ಊಟ ನಿದ್ದೆಯಿಲ್ಲದೆ ಎರಡು ದಿನದಿಂದ ಸುಸ್ತಾಗಿ ಹೋಗಿತ್ತು. ಅಳುವುದಕ್ಕೂ ಅಗಲಿರಲಿಲ್ಲ. ಕುಳಿತು ಗೊಳೋ ಎಂದು ಅತ್ತುಬಿಟ್ಟ, ಅವಳನ್ನು ತಬ್ಬಿ ತಬ್ಬಿ ಅತ್ತ. ಹಾಗೇ ಅವಳ ಮೇಲೆ ತಲೆ ಇಟ್ಟು ಮಲಗಿದ. ಎದ್ದಾಗ ರಾತ್ರಿ ಎಂಟು ಗಂಟೆಯಾಗಿತ್ತು. ಹಸಿವಾಗುತಿತ್ತು. ಸ್ಮಶಾನದಲ್ಲಿ ಕೆಲವರು ಅನ್ನ ಸಾರು ಹಂಚುತಿದ್ದರು, ಅದನ್ನು ಹಿಡಿದುಕೊಂಡು ಬಂದಿದ್ದ. ಅದನ್ನೇ ಹೊಟ್ಟೆ ತುಂಬಾ ಊಟ ಮಾಡಿದ. ಸಾವಿತ್ರಿಯನ್ನು ಮಣ್ಣು ಮಾಡಲು ಜಾಗ ಸಿಗಲು ಎಷ್ಟು ದಿನವಾಗುವುದೋ ಗೊತ್ತಿರಲಿಲ್ಲ. ಹಾಗೆ ನೋಡುತ್ತಾ ಕುಳಿತಿದ್ದ, ಸ್ವಲ್ಪ ಹೊತ್ತು ಕುಳಿತಿದ್ದು, ಎದ್ದು ಸಾವಿತ್ರಿ ಶವವನ್ನು ಪಕ್ಕಕ್ಕೆ ಸರಿಸಿದ. ಮೂಲೆಯಲ್ಲಿ ಇಟ್ಟಿದ್ದ ಗುದ್ದಲಿ, ಗಡಾರಿಯನ್ನು ಎತ್ತಿಕೊಂಡು ಅಗಿಯತೊಡಗಿದ. ಸಾಕಷ್ಟು ಅಗಿದಮೇಲೆ ಸಾವಿತ್ರಿ ದೇಹವನ್ನು ಗುಂಡಿಯಲ್ಲಿ ಮಲಗಿಸಿದ. ಅವಳ ಬಟ್ಟೆ ಬರೆ ಅವಳ ದೇಹಕ್ಕೆ ಹೊದಿಸಿ ಮಣ್ಣು ಸುರಿದ, ಗುಂಡಿಯನ್ನು ತುಂಬಿದಮೇಲೆ ಮಣ್ಣನ್ನು ಸಮತಟ್ಟಾಗಿ ಹರಿಡಿದ. ಹರಡಿದ ಮೇಲೆ ಅದರಮೇಲೆ ಚಾಪೆ ಹಾಸಿಕೊಂಡು ಮಲಗಿದ. "ಬಂದುಬಿಡು ಮಾವ ಈ ಜನರ ಸವಾಸ ಸಾಕು" ಎಂದು ಸಾವಿತ್ರಿ ಗುಂಡಿಯಿಂದ ಕೂಗಿದ ಹಾಗಾಯಿತು. ಗಟ್ಟಿಯಾಗಿ ಕಣ್ಣುಮುಚ್ಚಿದ. ಗಂಟಲಿನಲಿ ನೋವು ಇದೆ ಅನಿಸಿತು. ಸ್ವಲ್ಪಹೊತ್ತಿನಲಿ ಜ್ವರ ಬಂದಹಾಗಿದೆ ಅನಿಸಿತು. ಆ ರಾತ್ರಿ ಜ್ವರ ಏರುತ್ತಲೇ ಹೋಯಿತು.

 

ರಚನೆ : ಎಂ. ವಿ. ಶಶಿಭೂಷಣ ರಾಜು

ಎಂ.ವಿ. ಶಶಿಭೂಷಣ ರಾಜು

ಲೇಖಕ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ ಕತೆ, ಕವನಗಳು ತರಂಗ, ಕರ್ಮವೀರ, ಅವಧಿ, ಕೆಂಡಸಂಪಿಗೆ, ಕನ್ನಡಪ್ರಭ ಮತ್ತು ಪ್ರಜಾವಾಣಿಯೂ ಸೇರಿದಂತೆ ಅನೇಕ ಪತ್ರಿಕೆಗಳಲಿ ಪ್ರಕಟವಾಗಿವೆ. ಅಮೆರಿಕಾದ ಸಾಹಿತ್ಯಘೋಷ್ಠಿಗಳಲ್ಲಿಯೂ ಭಾಗಿಯಾಗುತ್ತಾರೆ.

ಕೃತಿಗಳು:  ಮೌನದ ಮೊರೆಹೊಕ್ಕಾಗ, ಕಥನ ಕವನ, ದ್ವಂದ್ವ, ಮತ್ತು ನೆನಪುಗಳೇ ಹಾಗೆ. ಐ ಸೀ ಯು ಗಾಡ್, ಲೈಫ್ ಅಂಡ್ ಡೆತ್, ಇಮಿಗ್ರೇಷನ್ ದಿ ಪೈನ್, ಲಾಸ್ಟ್ ಲೈಫ್,

More About Author