Poem

ಕಟ್ಟುಪದ

ಆಳವಾದ ಕಡಲಿಗೆ ಆಳವಿಲ್ಲದ ದಡವು
ಅತ್ತ ಹೋಗಿ ಇತ್ತ ಬರುವ ಮಾಯಾ ಹಡಗು
ದೋಣಿ ಮುಳುಗಲು ಸಣ್ಣ ರಂಧ್ರ ಸಾಕು
ದೇಹ ಮುಳುಗದಿರಲು ಸಶಕ್ತ ಪಂಚೇಂದ್ರಿಯಗಳಿರಬೇಕು
ಆಳದ ಕಡೆಗೆ ಹೋದ ಯಾನ ದಡದೆಡೆಗೆ ಬರುವುದು
ದಡದಲಿ ನಿಂತ ಕಣ್ಣೋಟ ಆಳದ ಕಡೆಗೆ ನೋಡುವುದು
ಗೂಟದ ಹಗ್ಗ ಕಸಿದು ಪಾಶದ ಹಗ್ಗ ಸೇರುವ ತನಕ
ದೇಹ ದೋಣಿಗಳ ಯಾನಕ್ಕೆ ದಿಕ್ಸೂಚಿಯಾಗಯ್ಯಾ
ಶ್ವೇತಪ್ರಿಯ ಗುರುವೆ

ಕೈಚಾಚಿದ ಗರ್ಭದ ಸುತ್ತಾ ಮೈಚಾಚಿದೆ ಧರೆಯು
ಭುವಿಯಂಥ ಗರ್ಭದ ಸುತ್ತೆಲ್ಲಾ ಜೇಡರ ಬಲೆಯು
ಒಣಗುತ್ತಿದೆ ತಾಯ ಮೊಲೆಯು
ಮಳೆಯನ್ನೇ ನೋಡುತ್ತಿದೆ ಒಣಗಿದ ನೆಲವು
ಗಾಳಿಯಲಿ ತೇವವಿಲ್ಲ ನಾಲಿಗೆಯಲಿ ಹಸಿಯ ಪಸೆಯಿಲ್ಲ
ಕರುಳು ಸುತ್ತಿಕೊಂಡ ಮಗುವಿಗೆ ಗರ್ಭಜಲವೇ ಇಲ್ಲ
ಒಳಗರ್ಭ ಹೊರಗರ್ಭ ಮಿಡುಕುತ್ತಿರುವ ಕಾಲದಲಿ
ಗರ್ಭಸಂಜಾತರಿಗೆ ಮಳೆಯ ನೀರು
ಮೊಲೆಯ ಹಾಲಿನ ಅರ್ಥ ತಿಳಿಸಯ್ಯಾ
ಒಳಜೀವವ ಬಿಡದೆ ಉಳಿಸಯ್ಯಾ
ಶ್ವೇತಪ್ರಿಯ ಗುರುವೆ…

ಬೇಲೂರು ರಘುನಂದನ್

ಬೇಲೂರು ರಘುನಂದನ್ ಹಾಸನ ಜಿಲ್ಲೆಯ ಬೇಲೂರಿನವರು. ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಎಂ.ಎ.ಪದವೀಧರರು.ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ‘ದೇಜಗೌ ಅವರ ಅನಲಾ ಮತ್ತು ದುಷ್ಟಬುದ್ದಿ ನಾಟಕಗಳು’ ವಿಷಯವಾಗಿ ಎಂ.ಫಿಲ್ ಮತ್ತು ಕನ್ನಡ ರಂಗಭೂಮಿ ಮತ್ತು ಸಿನಿಮಾ: ವ್ಯಕ್ತಿ ನೆಲೆಯ ತಾತ್ವಿಕ ಚಿಂತನೆಗಳು’ ವಿಷಯವಾಗಿ ಪಿಎಚ್ ಡಿ ಪದವೀಧರರು.  ಕವಿ ಹಾಗೂ ನಾಟಕಕಾರರಾಗಿ ಗುರುತಿಸಿಕೊಂಡಿರುವ ರಘುನಂದನ್ ಅವರ ಹಲವು ಕಾವ್ಯ ಸಂಕಲನ, ಕಟ್ಟುಪದಗಳ ಗುಚ್ಛ, ಮಕ್ಕಳ ಕತಾ ಸಾಹಿತ್ಯ, ಪ್ರವಾಸ ಸಾಹಿತ್ಯ ಹಾಗೂ 8 ನಾಟಕ ಪುಸ್ತಕಗಳು ಪ್ರಕಟಗೊಂಡಿವೆ.

ಪ್ರಶಸ್ತಿ-ಪುರಸ್ಕಾರಗಳು: 2017 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಗೆ ಸದಸ್ಯರಾಗಿ ಆಯ್ಕೆಗೊಂಡ ಬೇಲೂರು ಅವರಿಗೆ ಕುವೆಂಪು ಯುವಕವಿ ಪುರಸ್ಕಾರ, ಬೇಂದ್ರೆಗ್ರಂಥ ಬಹುಮಾನ, ಸಾಲು ಮರದತಿಮ್ಮಕ್ಕ ಹಸುರು ಪ್ರಶಸ್ತಿ, ಎಚ್.ಎಸ್.ವಿ. ಪುಟಾಣಿ ಸಾಹಿತ್ಯ ಪುರಸ್ಕಾರ, ತೇಜಸ್ವಿ ಕಟ್ಟೀಮನಿ ಯುವ ಪುರಸ್ಕಾರ, ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ದೊರೆತಿವೆ.

More About Author