Poem

ಕಾಯಕದ ಹಾದಿ

ದೇಹವೆಂಬ ಅಂಗ ದೇಶದೊಳು
ಇವೆ ನಾನಾ ಪಂಥಗಳು
ಪಚನ ಪ್ರಕೃತಿ ನಂಬಿದವನೊಬ್ಬ!
ಬುದ್ಧಿಯ ತೀಕ್ಷಣತೆಯ ಮೆಚ್ಚಿದವನೊಬ್ಬ!
ರುಧಿರ ರಕ್ತಾಕ್ಷಿಯ ಸ್ಮರಿಸುವನೊಬ್ಬ!
ಪವನ ಪ್ರಾಣದ ಪಾರಾಯಣದಿ ಅವನೊಬ್ಬ!
ಎಲ್ಲರದೂ ಕಾಯಕ ಹಾದಿ
ಒಳ ತಿರುಳ ತೊಳೆದಾಗ ಜೀವನ ಶುದ್ಧಿ!

ಇರದು ಶ್ರೇಷ್ಠತೆಯ ಭಾವ
ಸಮತೆ, ಸಹಕಾರ, ಸಮನ್ವತೆ ಮನೋಭಾವ
ಒಂದು ನಿಂತರೆ ಎಲ್ಲವೂ ವಿಕಾರ
ಆಕೃತಿ ಸೃಷ್ಟಿಸಿ ಕಳುಸಿದ ದೇವ
ಅರಿತು ಒಳಗ, ಬೆಳಗು ಜಗದ ಹೊರಗ.

ನಾನು ನಾನೆಂಬ ಮಂದಿ ಜಗದೊಳಗೆ
ಆರಿದೆ ಅರಿವ ಜ್ಯೋತಿ ಕಾಯದೊಳಗೆ
ಕಾಯಕದೊಳು ಯಾವುದು ಮಿಗಿಲು?
ನುಡಿವುದು ಬುದ್ಧಿ
"ದೇವನ ಇರುವಿಕೆ ಕಾಣು
ಬಿಸಿಲಿನ ತಾಪಕೆ ಸುರಿವ ಬೆವರಿನೊಳು".

- ನಿರಂಜನ ಕೇಶವ ನಾಯಕ

ನಿರಂಜನ ಕೇಶವ ನಾಯಕ

ಕವಿ ನಿರಂಜನ ಕೇಶವ ನಾಯಕ ಮೂಲತಃ  ಕುಮಟಾದವರು.  ಎಂ. ಎ ಇಂಗ್ಲಿಷ್ ಪದವಿ, ಬಿ. ಎಡ್ ಜೊತೆಗೆ ಜರ್ಮನ್ ಭಾಷೆಯಲ್ಲಿ ಡಿಪ್ಲೋಮ ಪದವಿ ಪಡೆದಿದ್ದಾರೆ. ಪ್ರಸ್ತುತ ಮಂಗಳೂರಿನಲ್ಲಿ ವಾಸ್ತವ್ಯವಿರುವ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸರಕಾರಿ ಮಾದರಿ ಶಾಲೆಯಲ್ಲಿ ಆಂಗ್ಲ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 

More About Author