Poem

ಕೆಸರಿನ ಕಮಲ

ವಾಸವಿರುವುದಿಂದು ನಾಲ್ಕು ಗೋಡೆಗಳ ಮದ್ಯೆ
ಅಲ್ಲೇ ಬಂಡಿಯನ್ನು ಎಳೆದಾಡುವ ಕೆಲಸ
ಸಮಾಜದ ಹಂಗಿಲ್ಲ!,ಜಾತಿ - ಧರ್ಮಗಳ ಕಚ್ಚಾಟವಿಲ್ಲ!
ಕೇವಲ ಗಿರಾಕಿಗಳ ಕಾಟವಷ್ಟೇ

ಬಂದು ಹೋದವರೆಷ್ಟು? ಆಕೆಗೆ ತಿಳಿದಿಲ್ಲ
ಎಲ್ಲವೂ ತನ್ನಿಷ್ಟಕ್ಕಲ್ಲ,ಮನೆಯ ಉಳಿಸುವ ಒದ್ದಾಟವಿದು
ಕುಳಿತು,ನಿಂತು,ಮಲಗಿ ಬೇರೆ ಬೇರೆಯ ನಾಟಕವಾಡಿಹರು
ನಾಟಕದಲ್ಲೇ ಜೀವನವ ರೂಪಿಸುವ ಬಡಿದಾಟವಿದು

ಆಕೆಯ ಚೆಲುವನ್ನು ಸವಿದವರೇ
ಇಟ್ಟಿಹರು ಆಕೆಗೊಂದು ಮುದ್ದಾದ ಹೆಸರು
ಸಮಾಜದೆದುರು ಆ ' ಮುದ್ದು ' ಬೆತ್ತಲಾಗಿತ್ತು
ಬೆತ್ತಲಾದವಳ ಜೀವನವೆಲ್ಲಾ ಬರೀ ' ಕೆಸರು '

ಬದಲಾಗುವುದೆನ್ನ ಜೀವನವೆಂದು ಕಾಯುತಿಹಳು
ದಿನ - ದಿನವೂ ತನ್ನನ್ನು ತಾನು ಅರ್ಪಿಸಿಕೊಂಡು
ಅದರಲ್ಲಿ ತನಗೆ ಇಟ್ಟಿರುವ ಹೆಸರು
ಸ್ಥಾನಮಾನಗಳನ್ನು ಜೊತೆಗೆ ಸೇರಿಸಿಕೊಂಡು

-ವಿದ್ವಾನ್ ಮಂಜುನಾಥ ಎನ್ ಪುತ್ತೂರು

ವಿದ್ವಾನ್ ಮಂಜುನಾಥ್ ಎನ್

ವಿದ್ವಾನ್ ಮಂಜುನಾಥ್ ಎನ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಮಂಜುನಾಥ್ ಅವರು ಸಾಹಿತ್ಯದ ಜೊತೆಗೆ ಭರತನಾಟ್ಯ, ಸುಗಮ ಸಂಗೀತ, ಯಕ್ಷಗಾನ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ವೃತ್ತಿಪರ ಭರತನಾಟ್ಯ ಕಲಾವಿದರಾಗಿ ಕಲ್ಬುರ್ಗಿಯಲ್ಲಿ ನೆಲೆಸಿದ್ದಾರೆ.

More About Author