Poem

ಕ್ಷಮಿಸಿಬಿಡು ನನ್ನ

ಇರುವುಗಳ ಇತಿ ಸುರಿದು ಗತದ ಹಾಸವ
ತಿರುಚಿ ಬುದ್ಧಂ ಶರಣಂ ಗಚ್ಚಾಮಿ ಎಂದು
ಇತಿಹಾಸವ ಉದ್ಗರಿಸಿದ ಮಂದಿ
ಪ್ರೀತಿ ಹಂಚಿ ನೀ ನಡೆದ ದಾರಿಯಲಿ ನಾ ನಿಂತು ನೋಡಲು ಬಿಡಲಿಲ್ಲ

ಗೌಜು ಬೀದಿಯ ಗವಾರರು
ಇವರು
ನಗವಷ್ಟೇ ಗಣ್ಯ ಜನಕೆ
ಗೌತಮ ನಿನ್ನ
ಮುಗುಳ್ನಗುವಲ್ಲ...!

ಹೆಬ್ಬೆರಳ ಮಾಲೆಯ
ಕಗ್ಗಲ್ಲ ಅಸುರನೆದೆಯಲ್ಲಿ ದಯದ ಅಮೃತಬಳ್ಳಿ
ತಾ ಮೊಳೆತು ಮಾನವನಾದವನ ಜೀವನವ
ನೆನೆವವರ ಗುಂಪಿನಲಿ;
ನಿನ್ನ ಉನ್ಮಿಷಿತ ಎದೆಯ ಉದಾಹೃತ ನುಡಿಗಳೆಂದೂ
ಉದಾಸೀನ ಮತಿಯ ಉನ್ಮತ್ತ ಮನಕ್ಕಿರಲಿ,
ಕಿವಿಗಳಿಗೂ ತಾಕಲಿಲ್ಲ...!

ಸತ್ಯ ಕದ್ದ ಕಳ್ಳರ ಪೈಕಿ
ಗೊಡ್ಡು ಮೌಢ್ಯದ ಗಳಗಂಟೆಯ ಹಿಡಿದು
ಓಡಿದವನ ಬೆನ್ನಟ್ಟಿದ ಮಂದಿ
ಸಿಕ್ಕೀತು ಹೇಗೆ ನೀ ನಮಗಿತ್ತ ಅರಿವಿನ ಬುತ್ತಿ

ಆ ಉನ್ನಿದ್ರ ಇರುಳಿನ ಬಹಳಷ್ಟು ಪರಿಚಯ
ನಮಗಿದ್ದರೂ
ನಿನ್ನಂತೆ ಉದೀಚೀನ ನಡಿಗೆಯ
ಉದಾತ್ತ ಬುದ್ದನ ಉದ್ಗಮಕ್ಕಲ್ಲದೆ
ಕೇವಲ ಉದ್ವೇಲ ಬಯಕೆಗಳ ಈಡೇರಿಕೆಗಷ್ಟೇ ಸೀಮಿತ
ಪಡಿಸಿದವರು ನಾವು
ಆಸೆ ತೊರೆದು ಬದುಕ ಬದುಕಿರೆಂದ ನಿನ್ನ
ತೊರೆದು ಜೀವಿಸಲೊರಟವರು

-ಪಾಪಣ್ಣ

ಪಾಪಣ್ಣ

ಪಾಪಣ್ಣ ಅವರು ಮೂಲತಃ ಮೈಸೂರಿನವರು. ಬಾಲ್ಯದಿಂದಲೂ ಸಾಹಿತ್ಯ, ಕಲೆ, ನಟನೆಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಚೈತ್ರಾಕ್ಷಿ ರಂಗಭೂಮಿಯಲ್ಲಿ ಹವ್ಯಾಸಿ ರಂಗಭೂಮಿ ಕಲಾವಿದನಾಗಿ ಜಲಗಾರ ನಾಟಕದಲ್ಲಿ ನಟಿಸಿದ್ದು ರಂಗ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ. ಕಾವ್ಯ ಪ್ರಾಕಾರಗಳಾದ ಮುಕ್ತಕ, ಹಾಯ್ಕು, ಟಂಕಾಗಳಲ್ಲಿ ಹಲವು ಕವಿತೆಗಳನ್ನು ಪ್ರಕಟಿಸಿದ್ದು, ನವ್ಯ ನವೋದಯದ ಕವಿತೆಗಳನ್ನು ರಚಿಸಿದ್ದಾರೆ. ಸದ್ಯಕ್ಕೆ ಬೆಂಗಳೂರಿನ ಹೋಟೆಲ್ ಒಂದರಲ್ಲಿ ವೇಟರ್ ಆಗಿದ್ದಾರೆ.

More About Author