Poem

ಲಗೇಜು

ಗೊತ್ತಿದೆ
ಒಂದೇ ಬಾರಿ ಸಾಯುತ್ತೇವೆ, 
ಎರಡು ಬಾರಿಯಲ್ಲ 
ನೂರಾರು ಬಾರಿಯೂ ಅಲ್ಲ ಎನ್ನುವುದು..!! 
ಇದು ತಿಳಿದಿದ್ದರೂ 
ಹೆಣಗುತ್ತೇವೆ ಬದುಕಿನ ಹೆಣಗಾಟಕ್ಕೆ 

  

ಸತ್ತ ಮೇಲೆ ಬರುವುದು 
ಯಾವುದೂ ಇಲ್ಲ 
ಅದೂ ತಿಳಿದಿದೆ ನಮಗೆ.. 
ಆದರೆ ಎಮ್ಮಯ ವ್ಯಾಮೋಹ ಮಾತ್ರ 
ಆತು ಕುಳಿತಿದೆ 
ವ್ಯರ್ಥ ಅನರ್ಥ ವಸ್ತುಗಳ ಮೇಲೆಯೇ..!! 

  

ಸತ್ತ ಸೂರಿಗಳ 
ಭೌತಿಕ ಆಸ್ತಿಗಳೆಲ್ಲ ಉಳಿದಿವೆ 
ರತ್ನ ಮಣಿ ಜಡಿತ ಸುವರ್ಣ ಮುಕುಟ 
ಆಭರಣ ಅಪರಂಜಿ ನಾಣ್ಯದೊಟ್ಟಲು 
ಮನೆ ಮಹಲ್ಲು 
ಅರಮನೆ ಸೆರೆಮನೆ 
ಸರಸದ ಶೃಂಗಾರ ಮಂದಿರ 
ಗಾಡಿ ಘೋಡಾ ಇನ್ನೂ ಏನೇನೋ 
ಎಲ್ಲ ಎಲ್ಲ ಸಂಪಾದನೆ 
ಹೊರಡುವಾಗೆಲ್ಲ ಉಳಿಯುತ್ತವೆ ಹಿಂದೆಯೇ.. 

  

ಅನಾರೋಗ್ಯ ಒಕ್ಕರಿಸುತ್ತದೆ 
ವ್ಯರ್ಥ ಚಿಂತೆಯಲ್ಲಿ 
ರಾತ್ರಿಗಳು ಕಳೆಯುತ್ತವೆ ನಿದ್ರಾರಾಹಿತ್ಯವಾಗಿ.. 
ಹಗಲುಗಳು ಉರುಳುತ್ತವೆ ನೆಮ್ಮದಿಯಿಲ್ಲದೆ.. 

  

ನಮ್ಮ ಚಿಂತೆಯೇ ಅಂತಲ್ಲ 
ಮಕ್ಕಳ ಬದುಕಿನ ಚಿಂತೆ 
ಅವರು ವಿವಾಹಿತರಾಗಿ 
ಸೊಸೆ ಮನೆಗೆ ಬಂದರೂ 
ಮೊಮ್ಮಕ್ಕಳು ಜನಿಸಿದರೂ 
ಅವರ ಭವಿಷ್ಯದ ಚಿಂತೆಯೂ ನಮ್ಮ ತಲೆಗೇ..!! 

  

ಊರ ಚಿಂತೆ ತಲೆಯಲ್ಲಿ ಕಟ್ಟಿದರೆ ಗೂಡು 
ರೋಗ ರುಜಿನ ಕಾಡದೆ ಆಗುತ್ತದೆ ಇನ್ನೇನು..? 
ರಕ್ತದೊತ್ತಡ ಹೆಚ್ಚಾಗುತ್ತದೆ 
ಇಲ್ಲವೆ ಕಡಿಮೆಯಾಗುತ್ತದೆ.. 

  

ಸಕಾಲದಲ್ಲಿ ಊಟ ತಿಂಡಿಗಳಿಲ್ಲದೆ 
ಹಿಮೊಗ್ಲೊಬಿನ್ ಹೃಸ್ವಗೊಳ್ಳುತ್ತದೆ.. 
ಹಾಸಿಗೆಯಲ್ಲಿ ಬೇಸರದ ಉರುಳು 
ಬೇಗುದಿಯ ಮನಸ್ಸು 
ಸಕಾರಾತ್ಮಕ ಯೋಚನೆಗಳೇ ಇಲ್ಲ 
ಎಲ್ಲ ಎಲ್ಲ ಎಡವಟ್ಟಿಗೆ ಎಡೆಕೊಡುವವು 
ವ್ಯರ್ಥ ಚಿಂತೆಗಳೇ.. 

  

ಮಕ್ಕಳು ಮರಿಗಳ ನೆರವಿ ಸುತ್ತಮುತ್ತ 
ಹಾಸುಗೆ ಬಿಟ್ಟು ಮೇಲೆದ್ದು 
ಮೊದಲಿನಂತೆ ಎದ್ದು ಓಡಾಡುವುದೆಂದು? 
ಚಿಂತೆ ವ್ಯಾಕುಲಗಳು ಪೀಡಿಸುತ್ತವೆ ಅವರನ್ನೂ . 

  

ನಮ್ಮದಲ್ಲದ ಹೊರೆ ಹೊರುವುದರಲ್ಲಿ 
ನಿಸ್ಸೀಮಿರು ನಾವೇ ಏನೋ.. 
ನಮ್ಮ ಕಾಲ ಮುಗಿಯಿತು 
ಕರ್ತವ್ಯಗಳೆಲ್ಲ ಇತಿಶ್ರೀಗೊಂಡವು ಅನ್ನಿಸಿದರೂ 
ಮತ್ತೆ ಮತ್ತೆ ಕರುಳು ಬಳ್ಳಿಯ 
ಕ್ಷೇಮಕ್ಕೇ ಎಳಸುತ್ತದೆ ಮನಸ್ಸು.. 

  

ನಮ್ಮ ನಮ್ಮ ತಲೆ ಹೊರೆ 
ನಾವು ಹೊತ್ತರೆ ಸಾಕಲ್ಲವೇ. 
ಅವರಿವರ ಹೊರೆಯನ್ನು 
ನಾವು ಹೊರುವುದರಲ್ಲಿ ಇದೆಯೇ ಸಾರ್ಥಕ್ಯ..? 
ಲಗೇಜು ಹಗುರವಾದಷ್ಟು ಪ್ರಯಾಣ ಸುಖಕರ 
ಈ ನೀತಿ ಅಳವಡ ಬಾರದೆ 
ನಮ್ಮ ಬದುಕಿನ ಯಾತ್ರೆಗೂ...!! 

  

ನಮ್ಮ ಲಗೇಜು ನಮ್ಮ ತಲೆಯ ಮೇಲೆ 
ನಿಮ್ಮ ಲಗೇಜು ನಿಮ್ಮ ತಲೆಯ ಮೇಲೆ 
ಇಲ್ಲವೆ ಬಗಲು ಅಥವಾ ಹೆಗಲ ಮೇಲೆ.. 
ಇದೇ ಸರಿಯಾದ ನೀತಿ.. 
ಬೇರೆಯವರ ಹೊರೆ ಹೊರುವುದಕ್ಕೆ 
ನಾವೇನು ಕೂಲಿಗೆ ನಿಂತವರೇ..!! 
ಬೇಡವೇ ಬೇಡ ಅನುಪಯುಕ್ತ ಉಸಾಬರಿ 

ಲಕ್ಷ್ಮಣ ಕೌಂಟೆ

ಕಾದಂಬರಿಕಾರ ಲಕ್ಷ್ಮಣ ಕೌಂಟೆಯವರು 1958 ಡಿಸೆಂಬರ್‌ 10 ರಂದು ಜನಿಸಿದರು. ಮೂಲತಃ ಗುಲಬರ್ಗದವರು. ರಂಗಭೂಮಿ ಅವರ ಅಭಿರುಚಿಯ ಕ್ಷೇತ್ರ. ಓದು, ಸಾಹಿತ್ಯ ರಚನೆ, ನಾಟಕ ಅವರ ಒಲವಿನ ಪ್ರವೃತ್ತಿ. ಅವರು ಬರೆದ ನಾಟಕ 'ಕಲೆಯ ಕೊಲೆ ಅರ್ಥಾತ್ ಕಲಾವಿದನ ಕಣ್ಣೀರು' ರಂಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಲೀಲಾತರಂಗ, ಸಂಚಲನ, ಅನುಪರ್ವ, ಸಮರ್ಪಿತ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ.

More About Author