Poem

ಮಗಳು ಹೊರಗಿನವಳಾಗುತ್ತಾಳೆ!

ತವರಿಗೆ ಉಳಿಯಲು ಬಂದವಳು
ಬಟ್ಟೆಗಳನ್ನು ಬೀರುವಿನ ಒಳಗೆ
ಜೋಡಿಸಿಡುವ ಬದಲಿಗೆ
ಹಾಗೆಯೇ ಮಡಚಿಟ್ಟು
'ಇನ್ನೇನು ಎರಡು ದಿನವಲ್ಲವೇ,
ಬ್ಯಾಗಲ್ಲೇ ಇರಲಿ ಬಿಡು, ಹೊರಡುವಾಗ
ಜೋಡಿಸುವುದು ತಪ್ಪುತ್ತದೆ' ಅಂದು
ಬೇರೆಲ್ಲೋ ನೋಡುವಾಗ
ಮಗಳು ಹೊರಗಿನವಳಾಗುತ್ತಾಳೆ..

'ಅಪ್ಪಾ ಮಗುವಿಗೆ ಇಂತಹ ವಸ್ತು ತನ್ನಿ'
ಎಂದಾಗ ಹೊರಟವರನ್ನು ತಡೆದು ತನ್ನ ಪರ್ಸ್'ನಿಂದ ಹಣವೆತ್ತಿ ಕೊಡುವಾಗ
ಮಗಳು ಹೊರಗಿನವಳಾಗುತ್ತಾಳೆ...

ಮನೆಯ ಯಾವುದೋ ವಸ್ತುವನ್ನು ತೆಗೆದುಕೊಳ್ಳುವ
ಮೊದಲು 'ಅಮ್ಮಾ/ಅಣ್ಣಾ ತೆಗೆದುಕೊಳ್ಳಲೇ?'
ಕೇಳುವ ಆ ಪ್ರಶ್ನೆಯ ಪರಕೀಯ ಭಾವದಲ್ಲಿ
ಮಗಳು ಹೊರಗಿನಳಾಗುತ್ತಾಳೆ...

ಎಲ್ಲರ ಕೋಣೆಗೆ ಹಾಗೆಯೇ ನುಗ್ಗುತ್ತಿದ್ದವಳು
'ಒಳಗೆ ಬರಬಹುದೇ?' ಎಂದು ಕೇಳುವ
ಆ ಅಪರಿಚಿತ ಭಾವ ಸುಳಿವಲ್ಲಿ
ಮಗಳು ಹೊರಗಿನವಳಾಗುತ್ತಾಳೆ...

ಹೆತ್ತವರನ್ನು ನೋಯಿಸಬಾರದೆಂದು
ಸುಖದ ನಗುವಿನ ಮುಖವಾಡ ಹಾಕಿ
ಕಣ್ತಪ್ಪಿಸಿ ಎಲ್ಲರೊಟ್ಟಿಗೆ ಮಾತನಾಡುವಾಗ
ಮಗಳು ಹೊರಗಿನವಳಾಗುತ್ತಾಳೆ...

ಕನ್ಯಾದಾನ ಮಾಡಿಕೊಟ್ಟ ಕೂಡಲೇ
ಮಗಳು ಬೇರೆಯವಳಾಗುವುದಿಲ್ಲ
ಹೇಗೋ ಏನೋ ಆ ಭಾವ ತನ್ನಷ್ಟಕ್ಕೇ ಹುಟ್ಟಿದ ಮೇಲೆ
ಮಗಳು ಹೊರಗಿನವಳಾಗಿ ಬಿಡುತ್ತಾಳೆ.

- ರಶ್ಮಿ ಉಳಿಯಾರು

ರಶ್ಮಿ ಉಳಿಯಾರು

ರಶ್ಮಿ ಉಳಿಯಾರು ಅವರು ಮೂಲತಃ ಉಡುಪಿಯವರು. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರ. ಹಾಡುವುದು, ಬರವಣಿಗೆ, ಪುಸ್ತಕಗಳ ಸಂಗ್ರಹ ಅವರ ಹವ್ಯಾಸ.

More About Author