Poem

ಮಣ್ಣಿನ ಮಕ್ಕಳ ಕೊಳ್ಳಿಗಿ ಗೋಣಿ ಚೀಲ 

ಬ್ಯಾನಿಗಳ ಬಜಾರದಾಗ
ಗುಳಿಗಿಗಿ ಹೋಗ ರೋಗಕ್ಕ
ಕೂಸಿನಂಗ ಎಸಿ ಒಳಗ ಇಟ್ಟ
ಸೋಸಿ ನೆತ್ತರ ಕುಡಿಯೊ ಕಾಲ

ಅಂಗಾಲನ ಆನಿ ಅಳುಕಿದಂಗ
ಇದ್ದೋರು ಇಟ್ಟ ಕೂನ
ಅಡಕಲ ಗಡಿಗಿ ಸಂಧ್ಯಾನ ಕೈ
ತಿಪ್ಪಲಕ್ಕ ಕೂಡಿಟ್ಟ ರೊಕ್ಕಕ
ಮಣ್ಣಿನ ಮಕ್ಕಳ ಕೊಳ್ಳಿಗಿ ಗೋಣಿ ಚೀಲ
ಚಿಮಣದ ಬೆಳಕಿಗಿ ಕರಿ ನೆರಳು

ಓಣಿ ಮನಿಯೊಳಗಿನ ಪುಟ್ಯಾನ ರೊಟ್ಟಿ ಬುಸ್ರು
ಗೂಟದ ಕಾರ್ ಟೈರಿನ ದೂಳಿಗಿ
ಬಡವರ ಹೆಣಗಳ ಮ್ಯಾಲ ನಾರಕತ್ಯಾವ
ದಣಿಗಳ ಹಾದರದ ಹಾರ

ತುತ್ತ ಕುಳಿಗೂ ಸುಂಕದ ಕುಲಾಯಿ
ಬಣಚಿ ಹಾಕಿದ ಖಂಡಕ ದೀವಟಗಿ
ಶನಿ ಹೊತ್ತ ಜಿಂಕಿ ಬೆನ್ನ ಹತ್ಯಾರ
ಪರಿಯಣದಾಗಿನ ಬಾನ ಬಿಟ್ಟು

ಬೆರಕಿ ಮಂದಿ ಕೈಯಾಗ ಸಿಟಿ
ಶೋಕಿ ಪಕಿರಪ್ಪನ ಕೈಯಾಗ ಲಾಠಿ
ಕಾಲು ಎಷ್ಟಾದರೂ ಓಡ್ಯಾವು
ತೆಲೆಯರ ಎಷ್ಟು ಓಡಿತು

ಜಂತಿ ಇಲ್ಲದ ಮ್ಯಾಳಗಿ ಮ್ಯಾಗ
ಟಿವೆಂಕಿ ಅಳತಾ ಕುಂತಾದ
ಕಾಗಿ ಬಳಗ ಕೂಗಿ ಹೇಳ್ಯಾದ
ಹಗೆತನ ಬಿಡ್ರಿ ದೇಶ ಕಟ್ಟರಿ

ಪಿ. ನಂದಕುಮಾರ್

ಪಿ. ನಂದಕುಮಾರ್

ಪಿ. ನಂದಕುಮಾರ್ ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕಕ್ಕೇರಾ ಗ್ರಾಮದವರು. ಸದ್ಯ ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಕಾವ್ಯ, ಕಥೆ, ವಿಮರ್ಶೆ, ಸಂಶೋಧನೆಗಳಲ್ಲಿ ಆಸಕ್ತಿ ಹೊಂದಿರುವ ಅವರ ಲೇಖನ, ವಿಮರ್ಶೆ, ಕವಿತೆಗಳು ಬುಕ್ ಬ್ರಹ್ಮ ಸೇರಿದಂತೆ ಹಲವು ಸಾಹಿತ್ಯಿಕ ವೆಬ್ ಸೈಟ್, ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 

More About Author