Poem

ಮಥನ

ಸರಳವಲ್ಲ ಸಖಿ ಸುಲಭವಲ್ಲ
ಅಂದುಕೊಂಡಷ್ಟು
ಬೆಣ್ಣೆ ದೊರಕುವುದು
ಅದು ತಮಾಷೆಯೂ ಅಲ್ಲ
ಹುಡುಗಾಟವಂತೂ ಅಲ್ಲವೇ ಅಲ್ಲ ;
ತಣ್ಣನೆಯ ಮನದ ಭಾವಗಳ
ಗಟ್ಟಿ ಹಾಲನು ಬದುಕ
ಕಷ್ಟಗಳ ಬಿಸಿಗಿಟ್ಟು
ಜೀವ ತುಂಬಿ ಉಕ್ಕದಂತೆ
ಒಡೆಯದಂತೆ
ಜೋಪಾನವಾಗಿ ಕಾಯಿಸುವುದು
ಅರಿಷಡ್ವೈರಿಗಳೆಂಬ
ಕಳ್ಳ ಬೆಕ್ಕು
ಕದಿಯದಂತೆ
ಕುಡಿಯದಂತೆ
ಕುದಿದ ಹಾಲನು
ಮುಚ್ಚಿಟ್ಟು ತಣಿಸುವುದು ;
ಎಚ್ಚರದಿಂದ ತಾಳ್ಮೆಯಿಂದ
ಹುಳಿ ಹೆಚ್ಚದಂತೆ
ಸಂಯಮದ ಹೆಪ್ಪಿಟ್ಟು
ಕಡೆಗೋಲಲಿ ಮಥಿಸುವುದು ;
ಸಹನೆ ನೆಮ್ಮದಿಯ
ಮೃದು ಬೆಣ್ಣೆಗೆ
ಜೀವನವಿಡೀ ಕಾಯುವುದು
ಕರಗದಂತೆ
ಜತನದಿಂದ ಕಾಪಿಡುವುದು

- ಶಾಂತಲಾ ರಾಜಗೋಪಾಲ್

ವಿಡಿಯೋ
ವಿಡಿಯೋ

ಶಾಂತಲಾ ರಾಜಗೋಪಾಲ್

ಶಾಂತಲಾ ರಾಜಗೋಪಾಲ್ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ/ಅಂಕೋಲಾದವರು. ಬೆಳೆದಿದ್ದು ಹಾಗೂ ವಿದ್ಯಾಭ್ಯಾಸ ಪಡೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಮೂಡಬಿದ್ರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ಬಿ.ಎ ಮತ್ತು ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ L.L.B ಪದವಿಯನ್ನು ಪಡೆದಿದ್ದಾರೆ. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರವಾಗಿದ್ದು, ಇವರ ಕವನಗಳು ಮಯೂರ, ತುಷಾರ ಮತ್ತು ಕರ್ಮವೀರಗಳಲ್ಲಿ ಪ್ರಕಟವಾಗಿರುತ್ತದೆ.  

More About Author