Story

ಮುಗಿಲೆತ್ತರದ ಕಡಲು

ಸಮಕಾಲೀನ ಕನ್ನಡ ಗದ್ಯ ಸಾಹಿತ್ಯದಲ್ಲಿ ಹೊಸ ಹಾದಿಯನ್ನು ಹಿಡಿದಿರುವ ಕನಕರಾಜ್ ಆರನಕಟ್ಟೆ ಮೂಲತ: ಚಿತ್ರದುರ್ಗ ಜಿಲ್ಲೆಯವರು. ಕರ್ನಾಟಕ, ಭಾರತ ಮೊದಲ್ಗೊಂಡು ಹಲವಾರು ದೇಶ, ಭಾಷೆ, ಸಂಸ್ಕೃತಿಗಳ ಮುಖಾಮುಖಿಯಾಗಿಸಿ ಓದುಗರಿಗೆ ಹೊಸದಾದ ಅನುಭವ ನೀಡುವ ಇವರ ಲೇಖನ ಮತ್ತು ಕಥೆಗಳು ಕನ್ನಡ ನವ್ಯೋತ್ತರ ಸಾಹಿತ್ಯದ ಯುವ ಫಸಲು. ಅವರ ಇತ್ತೀಚಿನ ಕತೆ ಮುಗಿಲೆತ್ತರದ ಕಡಲು ನಿಮ್ಮ ಓದಿಗಾಗಿ.

ಒಂದೆಂಬ ಎರಡು
ಆಕಾಶಕ್ಕೆ ಮೂರೇ ಗೇಣು ಇದೆ ಎನ್ನುತ್ತಾ ಅಬ್ದುಲ್ ಗಫೂರ್ ಕಣ್ಣ ಇರುಕಿಕೊಂಡು ದೊಡ್ಡ ಮರವೊಂದರ ಬೃಹದಾಕಾರ ಕೊಂಬೆಯ ಮೇಲೆ ಕೂತಿದ್ದ. ಅವನ ಕಿವಿಯೊಳಗೆ ಜೋರಾದ ಕಡಲಲೆಯ ಸದ್ದು, ಅಥವಾ ಮೈಮನವೆಲ್ಲ ನೀರಿನ ಗುಮ್ಮೆನ್ನುವ ಸದ್ದು. ಆ ಸದ್ದಿನೊಳಗಿಂದ ಫಾತಿಮಾ ಮೆಲ್ಲಗೆ ಮೂಡಿ ಅವನ ಕಣ್ಣುಗಳಲಿ ಅರಳ ತೊಡಗಿದಳು.

ನಾವಿಕ ಡಿಯಾಗೊ ಫರ್ನಾಂಡಿಸ್‍ನ ಕಿವಿಯೊಳಗೆ ನೀರಿನ ಸದ್ದು ಮಾತ್ರ ಇರಲಿಲ್ಲ, ಅವಳ ಹೆಜ್ಜೆಯ ಸದ್ದೂ ಉಸಿರಾಡುತ್ತಿತ್ತು. ಅವನ ಕಣ್ಣೆದುರಿಗೆ ಘಟಿಸುತ್ತಿರುವ ದೃಶ್ಯಗಳು ಅವನನ್ನು ಅಚ್ಚರಿಯ ಆಳಕ್ಕೆ ತಳ್ಳಿದ್ದವು. ಆ ಸಮಯದಲ್ಲೇ ಪೋರ್ಚಗೀಸ್‍ನಲ್ಲಿದ್ದ ಅವನ ತಾಯಿ ಭೂಮಿಯೊಳಗೆ ಕಣ್ಮರೆಯಾದುದು.

ಸುಕುಮಾರ್ ಕಿವಿಯೊಳಗೆ ನೀರಿನ ಸದ್ದು ಮಾತ್ರ ಕೇಳಿಸುತ್ತಿರಲಿಲ್ಲ ಬದಲಿಗೆ ಬಾಂಬಿನ ಸದ್ದೂ. ಆಕಾಶದಲ್ಲಿ ತೇಲುತ್ತಿರುವ ಅವನ ಗೆಳೆತಿಯನ್ನು ಹಿಡಿಯಲು “ಅಮೋಕ್... ಅಮೋಕ್...” ಎಂದು ಕೂಗುತ್ತಾ ಓಡುತ್ತಿದ್ದ. ನೀರಿನ ಗುಳುಂ ಸದ್ದು ಅವನನ್ನು ಹಿಂಬಾಲಿಸುತ್ತಾ ಓಡುತ್ತಿತ್ತು. ಆಗಲೇ ಆಗಸದಿಂದ ಪಟಪಟನೆ ಜೋರು ಹನಿಗಳು ಬೀಳಲು ಶುರು ಮಾಡಿದವು.

ಎರಡೆಂಬ ಒಂದು
ಅವಳು ಇಲ್ಲಿಯೇ ಮುಳುಗಿದ್ದಾ? ಅಬ್ದುಲ್ ಗಫೂರ್‍ಗೆ ಚೂರು ಭಯ ಮುತ್ತಿಕೊಂಡಿತು. ತನ್ನೊಂದಿಗೆ ಹಡಗಿನಲ್ಲಿದ್ದವರೆಲ್ಲ ಎಲ್ಲಿ ಹೋದರು?! ಎನ್ನುವ ಪ್ರಶ್ನೆಗಿಂತ ಈಗವನನ್ನು ಕಾಡುತ್ತಿದ್ದುದು ಕೊಲಂಬೊದಿಂದ ದಶಕಗಳಿಂದ ಹಿಂದೆ ತಾನು ಮಾಲ್ಡೀವ್ಸ್‍ಗೆ ಕರೆ ತಂದಿದ್ದ ರೂಬಾ ಈ ಅನಂತ ಸಾಗರದಲ್ಲಿ ಎಲ್ಲಿ ಬಿದ್ದು ಸತ್ತು ಹೋಗಿರಬಹುದು ಎನ್ನುವ ಪ್ರಶ್ನೆಯೇ! ಸುತ್ತಲೂ ನೋಡಿದ. ನೀರು... ನೀರು... ದೂರದೆಲ್ಲೆಲ್ಲೊ ಚುಕ್ಕಿಯಂತೆ ಅಸ್ಪಷ್ಟವಾಗಿ ಕಾಣುತ್ತಿರುವ ಯಾವುದೊ ದ್ವೀಪದೊಳಗಿನ ತೆಂಗಿನ ಮರಗಳು. ಅದು ದ್ವೀಪ ಎನ್ನುವುದೂ ಅನುಮಾನವೇ! ಮನಸ್ಸಿನ ಒತ್ತಡದಿಂದ ಅವನ ಕೈಕಾಲುಗಳು ಚಣ ವಿರಾಮ ಪಡೆದು ಈಗ ಸ್ತಬ್ದವಾಗಿ ನಿಂತಿದ್ದವು. ದಣಿವಾರಿಸಿಕೊಳ್ಳಲೂ ಸಮಯವಿಲ್ಲದಂತೆ ಅವು ಸುಮಾರು ಐದು ಗಂಟೆಗಳಿಂದ ಒಂದೇ ಸಮನೇ ಬಡಿದಾಡಿ ಈಗ ತಾನೇ ತುಸು ವಿರಾಮದಲಿ ನಿಟ್ಟುಸಿರು ಬಿಟ್ಟಿವೆ. ಕಡಲಾಳದಿಂದ ಎದ್ದು ಬರುವ ಮೀನುಗಳಿಗೆ ಗಫೂರ್‍ನ ಇಡೀ ದೇಹವೇ ಆಹಾರವಾಗಿ ಬಿಡುವ ಅಪಾಯವಿರುವುದರಿಂದ ಅವು ತೆರೆದ ಕಣ್ಣುಗಳಲಿ ನೀರನ್ನು ದಿಟ್ಟಿಸುತ್ತಲೇ ಇವೆ. ಮಾಲ್ಡೀವ್ಸ್‍ನ ಹಿಂದೂ ಮಹಾ ಸಾಗರದ ಈ ಹವಳ ಕಡಲಿನ ಮಧ್ಯದಲಿ ಸಿಕ್ಕಿ ಹಾಕಿಕೊಂಡಿರುವ ತಮ್ಮ ಒಡೆಯ ಅಬ್ದುಲ್ ಗಫೂರ್‍ನನ್ನು ಬಾಯಿಗೆ ಬಂದಂತೆ ಬೈದು ಸುಸ್ತಾಗಿದ್ದವು ಅವು. ಪಾಪ ಅವನೇನು ಮಾಡುತ್ತಾನೆ, ತಮ್ಮಂತೆಯೇ ಅವನ ಸೇವಕರಾಗಿರುವ ಎರಡು ಕಣ್ಣುಗಳಿಂದಲೇ ಇಷ್ಟೆಲ್ಲ ಆಗಿದ್ದು... ರಾಜಧಾನಿ ಮಾಲೆಯಲ್ಲಿ ಅವು ಕೆಲ ವರ್ಷಗಳ ಹಿಂದೆ ಆಯಿಷಾಳನ್ನು ನೋಡದೇ ಇದ್ದಿದ್ದರೆ ಅವಳನ್ನು ಇವನು ಮದುವೆಯಾಗಿ ವಿಚ್ಛೇಧನ ನೀಡಿ ಮತ್ತೆ ಅವಳ ಸೇರಲು “ತಿನದು” ಎನ್ನುವ ಸಣ್ಣ ದ್ವೀಪ ಪಟ್ಟಣದ ಏರ್ ಪೋರ್ಟಿಗೆ ಬರುವ ಅವಶ್ಯಕತೆಯೇ ಬರುತ್ತಿರಲಿಲ್ಲ. ಹಾಗೆ ಬಂದುದರಿಂದಲೇ ಹೀಗೆ ನಡು ಕಡಲಿನಲಿ ತತ್ತರಿಸುತ್ತಾ ಜೀವವ ಕಾಪಾಡಿಕೊಳ್ಳಲು ಅವನು ತಿಣುಕಾಡುತ್ತಿರುವುದು... ಎಂದು ಬೇಸರಿಸಿಕೊಂಡು ಅಬ್ದುಲ್ ಗಫೂರ್‍ನ ಕಣ್ಣುಗಳ ಮೇಲೆ ಅಗಾಧ ಸಿಟ್ಟು ಉಕ್ಕಿ ಅವುಗಳನ್ನು ತಿವಿಯಲಾಗದೆ ಅಸಹಾಯಕತೆಯಲ್ಲಿ ನರಳಾಡುತ್ತಿವೆ ಅವನ ಕೈಕಾಲುಗಳು.

ಅಬ್ದುಲ್ ಗಫೂರ್‍ನ ಕುತ್ತಿಗೆಯವರೆಗಿನ ದೇಹವನ್ನು ಕಡಲು ಹಿಡಿದುಕೊಂಡಿದ್ದರೆ ಉಳಿದ ತಲೆ ಮತ್ತು ಮುಖವನ್ನು ಗಾಳಿ ಹಿಡಿದಿಟ್ಟಿತ್ತು. ಕಣ್ಣುಗಳು ಅವನ ತಲೆಯನ್ನೆತ್ತಿಸಿ ಆಕಾಶವ ನೋಡಿಸಿದವು. ಅಲ್ಲಿ ಬಿಳಿ ಮೋಡಗಳು ನಿಶ್ಚಲವಾಗಿ ನಿಂತಿದ್ದವು. ಆಕಾಶ ದುಂಡಗಿರುವುದು ಅವನಿಗೆ ಮಹದಾಶ್ಚರ್ಯ ತಂದಿತು. ಆಕಾಶವನ್ನು ನೋಡಿಯೇ ಬಹುಶಃ ಭೂಮಿ ದುಂಡಗಿದೆ ಎಂದು ಹೇಳಿದರೇನೊ ವಿಜ್ಞಾನಿಗಳು ಎಂದುಕೊಂಡ. ಹೌದು, ಹಾಗೇ ಇರಬೇಕು... ಮತ್ತಿನ್ನೇನು?! ಭೂಮಿ ದುಂಡಗಿದೆ ಎಂದು ಹೇಳಿದವರು ಇಡೀ ಭೂಮಿಯನ್ನೇ ಸುತ್ತಿ ಬಂದವರೆ?! ಸಾಧ್ಯವಿಲ್ಲ... ಆಕಾಶವನ್ನು ನೋಡಿಯೇ ಅವರುಗಳು ಹಾಗೆ ಭಾವಿಸಿರಲಿಕ್ಕೇ ಬೇಕು... ಅದು ಹೇಗಾದರೂ ಇರಲಿ, ಈ ಆಕಾಶಕ್ಕೆ ಭೂಮಿಯಂತೆ ಗುರುತ್ವಾಕರ್ಷಣ ಬಲ ಇದ್ದಿದ್ದರೆ ತಾನು ಬದುಕುತ್ತಿದ್ದನೇನೊ ಎಂದು ಬಿಳಿಯ ಮೋಡಗಳನ್ನೇ ಭಾರ ಕಣ್ಣುಗಳಲ್ಲಿ ನೋಡುತ್ತಾ ತಿನದುವಿನಲ್ಲಿರುವ ಸರ್ಕಾರಿ ಕಛೇರಿಗಳಿಗೆ ಈ ವಿಷಯವನ್ನು ಯಾರೂ ಮುಟ್ಟಿಸಿಲ್ಲವೇ ಎಂದು ಚಡಪಡಿಸಿದ. ಹೀಗೆ ಹಡಗೊಂದು ಮುಳುಗಿ ಹೋಗಿ ತಾನು ಮಾತ್ರ ಬದುಕಿರುವುದು ದೂರದ ದ್ವೀಪಗಳಲ್ಲಿ ಇರುವವರಿಗೆ ಗೊತ್ತಾಗಲು ಹೇಗೆ ಸಾಧ್ಯ! ಯಾವುದಾದರೂ ಹಡಗು ಇತ್ತ ಕಡೆ ಬಂದರೇನೇ ಈ ವಿಷಯ ಜಗತ್ತಿಗೇ ಗೊತ್ತಾಗುವುದು... ಎಂದುಕೊಂಡು ವಿರಾಮ ನೀಡಿದ್ದ ಕೈಕಾಲುಗಳಿಗೆ ಮತ್ತೆ ಕೆಲಸ ಕೊಟ್ಟು ಅವನು ತಲೆ ಬಗ್ಗಿಸಿದಾಗ ಶ್ರೀಲಂಕಾದ ತಮಿಳು ಹುಡುಗಿ ರೂಬಾ ಅವನೆದುರು ತೇಲುತ್ತಿರುವಂತೆ ಕಂಡು ಧಗ್ಗನೆ ಮೈಗೆ ಬೆಂಕಿ ಹತ್ತಿಕೊಂಡಂತೆ ಕಂಪಿಸಿ ಚಂಗನೆ ಹಿಂದೆ ತಿರುಗಿ ಕೈಗಳ ಬೀಸುತ್ತಾ ಕಾಲುಗಳಲಿ ನೀರನ್ನು ಬಾರಿಸಿ ಎಷ್ಟು ಸಾಧ್ಯವೊ ಅಷ್ಟು ದೂರ ಹೋಗಿ ಏದುಸಿರು ಬಿಟ್ಟು ನೀರನ್ನು ಕುಡಿದು ತಕ್ಷಣ ಎಚ್ಚೆತ್ತು ಬಾಯಲ್ಲಿದ್ದ ನೀರನ್ನು ಕಕ್ಕಿದ. ಕಡಲಿನೊಳಗೆ ಹೀಗೆ ಅಸಂಭವವೇನಾದರೂ ಘಟಿಸಿ ನೀರಿನೊಳು ಸಿಕ್ಕಿ ಹಾಕಿಕೊಂಡರೆ ಎಷ್ಟೇ ಕಷ್ಟ ಆದರೂ ನೀರನ್ನು ಕುಡಿಯಬಾರದು ಎಂದು ಅವನಿಗೆ ಅವನ ತಾತ ಹೇಳಿದ್ದು ಚೆನ್ನಾಗಿ ನೆನಪಿದೆ. ಎಲ್ಲವನ್ನೂ ಬಲ್ಲ ಸರ್ವಶಕ್ತನೇ, ಆ ಶ್ರೀಲಂಕಾದ ಹುಡುಗಿಗೆ ತಾನು ಮಾಡಿದ ಪಾಪವ ಮನ್ನಿಸಿ ಬಿಡು... ನನ್ನ ಜೀವ ಉಳಿಸು... ಇನ್ನೆಂದಿಗೂ ತಾನು ಇನ್ನೊಬ್ಬರ ಜೀವದೊಂದಿಗೆ ಆಟ ಆಡಲಾರೆ. ಫಾತ್ಮಾಳಿಗೆ ಮಾಡಿದ ಅನ್ಯಾಯವನ್ನೇ ಆಯಿಷಾಳಿಗೂ ಮಾಡಿದೆ... ಕ್ಷಮೆ ಕೇಳಿ ಅವಳನ್ನೊಪ್ಪಿಸಿ ಮತ್ತೆ ಹೊಸ ಬದುಕು ಕಟ್ಟಿಕೊಳ್ಳಬೇಕಿದೆ... ಮಾಲೆಯಲ್ಲಿ ಕೊಂಡುಕೊಂಡಿರುವ ಅಪಾರ್ಟ್‍ಮೆಂಟ್‍ನಲ್ಲಿ ಅವಳಿಲ್ಲದೆ ಬದುಕಲಾರೆ... ಜೀವನವೇ ಸುಟ್ಟು ಕರಕಲಾದಂತೆ ಬಾಸವಾಗುತ್ತಿದೆ... ಆಯಿಷಾಳನ್ನು ಚೆಂದ ನೋಡಿಕೊಳ್ಳುತ್ತೇನೆ... ಸರ್ವ ಶಕ್ತನೇ... ನನ್ನನ್ನು ಬದುಕಿಸು... ಹಡಗು ಕಳುಹಿಸಿ ನನ್ನನ್ನು ಕಾಪಾಡು... ಸೃಷ್ಟಿಕರ್ತನೇ... ಕಡಲಲ್ಲಿರುವ ಷೈತಾನ್ ಏನಾದರೂ ರೂಬಾಳ ವೇಷದಲ್ಲಿ ಬಂದು ನನ್ನನ್ನು ಹೆದರಿಸುತ್ತಿರಬೇಕು... ನಿನ್ನ ಸೇವಕನನ್ನು ಷೈತಾನ್‍ಗಳಿಂದ ರಕ್ಷಿಸು! ನನ್ನ ದೇಹದಲ್ಲಿ ಉಸಿರ ಉಳಿಸು! ದಡ ಸೇರಿಸು... ಉಜುಬಿಲ್ಲಾಹಿ ಸಮೀಉಲ್ ಅಲೀಮ್ ಮಿನ್ ಷೈತಾನುರ್ ರಜೀಮ್...

ಬೆಳಗಾವಿಯಿಂದ ತಪ್ಪಿಸಿಕೊಂಡು ಪ್ಯಂಜಿಮ್‍ಗೆ ಬಂದಿದ್ದ ರುಕ್ಮಿಣಿ ಅಂದು ಬಂದರಿನಲ್ಲಿ ನಿಂತಿದ್ದ ಹಡಗೊಂದರಲ್ಲಿ ಅವಿತುಕೊಂಡು ಕೂತಿದ್ದವಳನ್ನು ತಾನು ಆ ಗುಮ್ಮೆನ್ನುವ ಕತ್ತಲಲ್ಲೂ ಹೇಗೆ ನೋಡಲು ಸಾಧ್ಯವಾಯಿತೊ... ಆ ಗಳಿಗೆಯಿಂದ ತನ್ನ ಬದುಕಿಗೇ ಹೊಸ ಅರ್ಥ ಸಿಕ್ಕಂತಾಗಿದ್ದು ಸುಳ್ಳಲ್ಲ... ಇಂಡೀಸ್‍ನ ಹುಡುಗಿಯರನ್ನು ಮದುವೆಯಾಗಬೇಕು ಎಂಬ ತಮ್ಮ ಪೋರ್ಚಗೀಸ್ ಸರ್ಕಾರದ ಆಜ್ಞೆಯನ್ನು ವಿರೋಧಿಸಲು ತ್ರಾಣವಿಲ್ಲದೆ ರಾತ್ರಿಯಿಡೀ ಗಸ್ತು ತಿರುಗುತ್ತಿದ್ದಾಗಲೇ ತಾನವಳನ್ನು ನೋಡಿದ್ದು. ಓಹ್! ಅದೆಷ್ಟು ಮಾಂತ್ರಿಕ ಮೈಮಾಟದವಳು! ಗೊಂಬೆಯಂತಹ ಮೈಸಿರಿಯುಳ್ಳ ಹುಡುಗಿಯರು ಈ ಕಪ್ಪು ಅನಾಗರೀಕರಲ್ಲೂ ಇದ್ದಾರೆ ಎಂಬುದು ತನಗೆ ಗೊತ್ತಾಗಿದ್ದೇ ಅವಳನ್ನು ನೋಡಿದ ಮೇಲೆಯೇ! ಒಳ್ಳೆಯ ನೃತ್ಯಗಾರ್ತಿ. ಅವಳ ಪಾದಗಳ ಚಲನೆಯಲ್ಲಿ ನಾ ಮೈ ಮರೆತು ಹೋಗುತ್ತಿದ್ದೆ. ಪ್ಯಂಜಿಮ್‍ನ ಶಾಸ್ತ್ರಿಯೊಬ್ಬರು ಜ್ಯೋತಿಷ್ಯ ಹೇಳಿದ್ದರು, ತಾನು ಅವಳನ್ನು ತನ್ನ ಸ್ವಂತ ಊರಿಗೆ ಕೊಂಡೊಯ್ಯುತ್ತೇನೆಂದು. ಇಂಡೀಸ್‍ರ ಜ್ಯೋತಿಷ್ಯದಂತೆ ಅವಳನ್ನು ಯುರೋಪ್‍ಗೆ ಕರೆದುಕೊಂಡು ಹೋಗೇ ಹೋಗುತ್ತೇನೆ... ಬಿಳೀ ಚರ್ಮದ ಪರಂಗಿಯವನ ಆಸೆಗೆ ಬಲಿಯಾದ ಅಸಂಖ್ಯ ಕಪ್ಪು ಹುಡುಗಿಯರಂತೆಯೇ ಅವಳೂ ಆರಂಭದಲ್ಲಿ ಭಯದಿಂದ ತತ್ತರಿಸಿ ಹೋಗಿದ್ದಳು. ಕಾಮಕ್ಕಿಂತ ಪ್ರೀತಿಯ ಕಾರಣಕ್ಕೇ ಅವಳ ಹಿಂದೆ ಬಿದ್ದಿದ್ದೇನೆ ಎಂಬುದು ತನಗೇ ಅರ್ಥವಾಗಲು ತಿಂಗಳುಗಳು ಬೇಕಾದವು... ಅವಳ ಮನಸ್ಸೂ ತನ್ನನ್ನು ಅಪ್ಪಿಕೊಂಡ ನಂತರವೇ ಅವಳನ್ನು ತಾನು ಮದುವೆಯಾದದ್ದು. ಪ್ರಭುತ್ವದ ಎಲ್ಲಾ ಆಜ್ಞೆಗಳನ್ನು ಚಾಚೂ ತಪ್ಪದೆ ಪಾಲಿಸುವ ತನ್ನಂತಹ ಸಾಮಾನ್ಯ ನೌಕರರರಲ್ಲಿ ತನ್ನೀ ಕಾರ್ಯ ಅಚ್ಚರಿ ತಂದಿದ್ದು ಸುಳ್ಳಲ್ಲ. ಗೆಳೆಯರೊಟ್ಟಿಗೆ ಆ ಆಜ್ಞೆಗೆ ತಾನು ವಿರೋಧವನ್ನು ವ್ಯಕ್ತಪಡಿಸಿದ್ದೆ... ಅವರುಗಳಲ್ಲೇ ಯಾರೋ ಒಬ್ಬ ಹಿರಿಯ ಅಧಿಕಾರಿಗಳಿಗೆ ಹೇಳಿರಬೇಕು. ಫ್ರೆಂಚರ ಜೊತೆ ಸೇರಿ ತಾನು ಇಂಡೀಸ್‍ನ ಪೋರ್ಚಗೀಸ್ ಮತ್ತು ಬ್ರಿಟಿಷ್ ಕಾಲೊನಿಗಳ ವಿರುದ್ಧ ಸಂಚು ಮಾಡುತ್ತಿದ್ದೇನೆಂದು ಹಿರಿಯ ಅಧಿಕಾರಿಗಳಿಗೆ ಅವರುಗಳಲ್ಲೊಬ್ಬ ಹೇಳಿರಬೇಕು. ಹಾಗಾಗಿಯೇ ಜಕಾರ್ತಾಕ್ಕೆ ಹೋಗುವ ಹಡಗನ್ನು ಮುನ್ನಡೆಸಬೇಕೆಂದು ಪ್ರಭುತ್ವ ತನ್ನ ಕಳಿಸಿತೇನೊ... ಎರಡು ತಿಂಗಳಷ್ಟೇ ಆಗಿತ್ತು, ರುಕ್ಮಿಣಿ ಎಂಬ ಕಪ್ಪು ಚೆಲುವೆಯನ್ನು ಮದುವೆಯಾಗಿ... ಅವಳನ್ನು ಬೀಳ್ಕೊಡುವಾಗ ಅದೆಷ್ಟು ನೋವು ಅನುಭವಿಸಿದಳು... ‘ಜಕಾರ್ತಾದಿಂದ ಬಹುದೊಡ್ಡ ವಸ್ತುವೊಂದನ್ನು ನಿನಗೆ ಉಡುಗೊರೆಯಾಗಿ ತರುತ್ತೇನೆ... ಕೇವಲ ಐದು ತಿಂಗಳಷ್ಟೆ, ಬೇಗನೇ ವಾಪಸ್ ಬಂದು ಬಿಡುತ್ತೇನೆ’ ಎಂದು ಹೇಳಿ ಬಂದಿದ್ದೆ.

ಜಕಾರ್ತಾವನ್ನು ನೋಡುವ ಉತ್ಸಾಹದ ಜೊತೆ ಅವಳ ನೆನಪಲ್ಲಿ ಜೀಕುತ್ತಿದ್ದ ತನ್ನನ್ನು ಕೆಣಕಲೆಂದೇ ಹಡಗಿನೊಳಗೆ ನೀರು ತೂರಿತೇನೊ... ಹೌದು, ಇದು ಖಂಡಿತವಾಗಿಯೂ ಪ್ರಭುತ್ವದ ಸಂಚೇ! ತನ್ನ ಜೊತೆ ಹಡಗಲ್ಲಿ ಇದ್ದ ಹದಿನೈದು ಜನರು ಒಂದಲ್ಲ ಒಂದು ಬಗೆಯಲ್ಲಿ ಪ್ರಭುತ್ವದ ವಿರುದ್ಧ ಅಸಮಾಧಾನ ಹೊಂದಿದವರೇ... ಹಡಗಿನೊಳಗಿದ್ದ ಪ್ರಭುತ್ವದ ಕಟ್ಟಾ ಸೇವಕರು ಒಬ್ಬೊಬ್ಬರನ್ನು ಮಂಡಿಯೂರಿಸಿ ಬಂದೂಕುಗಳಲ್ಲಿ ಗುಂಡು ಹಾರಿಸಿ ಕೊಂದು ಕಡಲಿಗೆ ಎತ್ತಿ ಹಾಕುತ್ತಿದ್ದರು. ತನ್ನ ಸರದಿ ಇನ್ನೇನು ಬರಬೇಕು ಎನ್ನುವಾಗ ಚಂಡಮಾರುತವೊಂದು ಕಡಲೊಳಗಿಂದ ದಿಢೀರನೆ ಅಪ್ಪಳಿಸಿ ತಮ್ಮ ಹಡಗನ್ನು ಮುಳುಗಿಸಿತು. ತನ್ನ ಮುಂದೆ ಇದ್ದ ಇಬ್ಬರು ಹಾಗು ಹಿಂದೆ ಇದ್ದ ಮೂವರು ಒಟ್ಟಿನಲ್ಲಿ ಆರು ಜನ ಶಿಕ್ಷೆಯಿಂದ ತಪ್ಪಿಸಿಕೊಂಡ ಸಮಾಧಾನ, ಸಂತೋಷಗಳನ್ನು ಅನುಭವಿಸುವುದರೊಳಗೆ ಎಲ್ಲವೂ ನೀರು ಪಾಲಾಯಿತು. ತನ್ನ ಹೊರತಾಗಿ ಯಾರೊಬ್ಬರೂ ಉಳಿಯಲಿಲ್ಲ... ಪ್ರಭುತ್ವದ ಕಟ್ಟಾ ಸೇವಕರೂ ಮುಳುಗಿ ಹೋದರು... ಕಡಲಿಗೇನು ಗೊತ್ತೇ? ಇವರು ಸೇವಕರು, ಇವರು ವಂಚಕರು ಎಂದು!? ಅವನು ಹೇಳಿದ್ದು ಸರಿ... ತಮ್ಮ ಪ್ರಭುತ್ವಗಳು ಹೇಳುವುದೆಲ್ಲವೂ ಸುಳ್ಳು... ಇಂಡಿಯಾದಂತಹ ಬೇರೊಂದು ಮಣ್ಣಿನ ಸಂಪತ್ತನ್ನು ತಮ್ಮ ನಾಡಿಗೆ ತೆಗೆದುಕೊಂಡು ಹೋಗುವುದು ತಮ್ಮ ದೇಶಗಳ ಅಭಿವೃದ್ಧಿಗಲ್ಲ, ಬದಲಿಗೆ ರಾಜರುಗಳ, ಅವರ ಸಂಬಂಧಿಕರ ಮತ್ತು ಸಿರಿವಂತ ಪೋರ್ಚಗೀಸರ ಏಳಿಗೆಗಾಗಿಯೇ ತಮ್ಮಂತಹ ಸಾಮಾನ್ಯರು ಅನ್ಯ ದೇಶಗಳಿಗೆ ಬಂದು ದುಡಿಯುತ್ತಿದ್ದೇವೆ. ಸಿಗುವ ನೂರೊ ಇನ್ನೂರೊ ದುಡ್ಡಿಗಾಗಿ ಹೀಗೆ ಅನ್ಯರ ಸಂಪತ್ತನ್ನು ಲೂಟಿ ಹೊಡೆದು ಯುರೋಪ್‍ಗೆ ಕಳುಹಿಸುತ್ತಿದ್ದೇವೆ... ಇಂಡಿಯಾವನ್ನು ಗಮನಿಸಿದ್ಯಾ? ಅಲ್ಲಿ ನಮಗಿಂತಲೂ ಕಷ್ಟದಲ್ಲಿ ಬದುಕುತ್ತಿರುವ ಅಸಂಖ್ಯರು ಇದ್ದಾರೆ... ಶೋಷಣೆಯೊಳಗೆ ಬದುಕುತ್ತಿದ್ದೇವೆ ಎಂಬ ಅರಿವೇ ಇಲ್ಲದೆ ಅವರುಗಳು ಬದುಕುತ್ತಿದ್ದಾರೆ... ಹೀಗೆ ಆತ ಹೇಳುತ್ತಲೇ ಹೋಗುತ್ತಿದ್ದ. ಆಗಲೇ ತನಗೆ ಅರಿವಾಗಿದ್ದು... ರುಕ್ಮಿಣಿ ಯಂತಹ ಕಪ್ಪು ಹುಡುಗಿಯನ್ನು ತಾನು ಮದುವೆಯಾಗಿದ್ದು ಎಷ್ಟು ಒಳ್ಳೆಯ ನಿರ್ಧಾರವೆಂದು... ಅವಳನ್ನು ವರಿಸಿದ್ದರೂ ತನ್ನ ಒಳ ಮನಸ್ಸು ಅವಳನ್ನು ಹೆಂಡತಿ ಎಂದು ಒಪ್ಪಿರಲಿಲ್ಲ... ರಾತ್ರಿಯೆಲ್ಲ ಕಾವಲು ಕೆಲಸದ ನಿಮಿತ್ತ ಗಸ್ತು ತಿರುಗುತ್ತಿದ್ದಾಗಲೇ ರುಕ್ಮಿಣಿ ಯನ್ನು ನೋಡಿದ್ದು. ಅವಳನ್ನು ನೋಡಿದ ಚಣವೇ ತನ್ನ ನಿರ್ಧಾರವನ್ನು ಬದಲಿಸಿಕೊಂಡೆನೇ!? ಇಲ್ಲ... ಮಾರನೆಯ ದಿನ ಬೆಳಿಗ್ಗೆಯೇ! ಹೌದು, ಬೆಳಿಗ್ಗೆಯೇ! ಭೂ ಮಂಡಲದ ಮಧ್ಯ ರೇಖೆಯಲ್ಲಿನ ಇಲ್ಲಿಯ ಸೂರ್ಯ ಪ್ರಖರವಾಗಿ ಉರಿಯಲಾರಂಭಿಸಿದ ಹೊತ್ತಲ್ಲೇ ಆ ಕಪ್ಪು ದೇವಕನ್ಯೆಯನ್ನು ನೋಡಿದ್ದು! ಅವಳು ಮಾಡುತ್ತಿದ್ದ ನೃತ್ಯ ಇನ್ನೂ ತನ್ನ ಕಣ್ಣ ಮುಂದೆಯೇ ಇದೆ! ತಾನು ಬದುಕಲೇ ಬೇಕು... ಅವಳನ್ನು ತನ್ನ ನಾಡಿಗೆ ಕರೆದೊಯ್ಯಬೇಕು... ತನ್ನ ತಂದೆ ಹೇಳಿಕೊಟ್ಟ ಕಡಲು ಪಯಣದ ರಹಸ್ಯಗಳನ್ನು ಒಂದೂ ಬಿಡದೇ ನೆನಪಿಸಿಕೊಳ್ಳಬೇಕು... ಯಾವುದಾದರೂ ಹಡಗು ಬಂದೇ ಬರುತ್ತದೆ. ಸಿಲೋನ್‍ಗೋ ಆಫ್ರಿಕಾಕ್ಕೊ ಅಥವ ಡಚ್ ಈಸ್ಟ್ ಇಂಡೀಸ್‍ಗೊ ಹೋಗುವ ಯಾವುದಾದರೂ ಒಂದು ಯುರೋಪಿಯನ್ ಹಡಗು ಬಂದೇ ಬರುತ್ತದೆ... ಅಕಸ್ಮಾತ್ ಅರಬ್ ಹಡಗುಗಳು ಬಂದರೆ!? ಇಲ್ಲ, ಅವರು ಬರಲು ಸಾಧ್ಯವೇ ಇಲ್ಲ... ಅವರನ್ನು ಈಗಾಗಲೇ ಸೋಲಿಸಿ ಮಾರ್ಗದ ಅಧಿಪತ್ಯವನ್ನು ತಾವು ಸಾಧಿಸಲಾಗಿದೆ... ಅದೆಷ್ಟು ತಿಂಗಳಾದರೂ ಸರಿ ನಾ ಬದುಕಬೇಕು... ಎಷ್ಟೇ ಕಷ್ಟ ಆದರೂ ನಿದ್ರೆ ಮಾಡಲೇ ಬಾರದು ಮತ್ತು ಮೀನುಗಳಿಗೆ ಆಹಾರವಾಗಿ ಬಿಡಬಾರದು. ಕಣ್ಣ ತೆರೆದೇ ನಿದ್ರೆ ಮಾಡುವುದು ಹೇಗೆ ಎನ್ನುವುದನ್ನು ತನ್ನ ತಂದೆ ಹೇಳಿಕೊಟ್ಟಿದ್ದಾರೆ. ಅದನ್ನು ಆಗಾಗ ತಾನು ರಾತ್ರಿಯ ಹೊತ್ತು ಗಸ್ತು ತಿರುಗುವಾಗ ಮಾಡಿದ್ದೇನೆ. ಈಗದನ್ನು ಪೂರ್ಣ ಪ್ರಮಾಣದಲ್ಲಿ ಮಾಡಬೇಕಿದೆ. ಈ ದಾರಿಯಲ್ಲಿ ಹಡಗೊಂದು ಬರುವವರೆಗೂ ತಾನು ಬದುಕಲೇ ಬೇಕು... ಆಗಲೇ ರುಕ್ಮಿಣಿಯನ್ನು ತಾನು ಸೇರಲಾಗುವುದು... ಪಾಪ...ಒಂಟಿಯಾಗಿ ಅದೆಷ್ಟು ತವಕಿಸುತ್ತಿದ್ದಾಳೊ ಈಗ! ಓ ಕರ್ತನೇ ಬದುಕಿಸು ನನ್ನನ್ನು... ಸ್ತೋತ್ರ... ‘ನೀನು ಕರ್ತರನ್ನು ಪ್ರಾರ್ಥಿಸಿ ಏನೇನು ಬೇಡಿಕೊಳ್ಳುತ್ತೀಯೊ ಅವನ್ನೆಲ್ಲ ಹೊಂದಿದ್ದೀ ಎಂದು ನಂಬು’ ... ಸ್ತೋತ್ರ...

ಚುನಾವಣೆ ಪ್ರಚಾರಕ್ಕೆಂದು ರಾಜೀವ್ ಗಾಂಧಿ ಬರುವ ಒಂದು ವಾರದ ಹಿಂದೆಯಷ್ಟೇ ಅವನು ಮದ್ರಾಸ್‍ನಿಂದ ಹೊರಟು ತಿರುವನಂತಪುರಂಗೆ ಹೋಗಿದ್ದು. ಅಲ್ಲಿಯೂ ನಿಲ್ಲಲಾಗದೆ ವಿಮಾನ ಹತ್ತಿ ಮಾಲ್ಡೀವ್ಸ್‍ಗೆ ಹೋದ. ರಾಜಧಾನಿ ಮಾಲೆಯಲ್ಲೂ ನಿಲ್ಲಲಾಗದೆ ಯಾವುದೊ ಹಡಗಿನ ಕತ್ತಲಲ್ಲಿ ಅವಿತು ಕೂತಿದ್ದ. ಆ ಹಡಗು ಹಿಂದೂ ಮಹಾ ಸಾಗರದಲ್ಲಿ ತೇಲುತ್ತಾ ಸಾಗುತ್ತಿದ್ದಾಗ ಎದ್ದು ಅಲ್ಲಿದ್ದವರಿಗೆ ಅವನು ಕಾಣಿಸಿಕೊಂಡು ಗದ್ದಲ, ಗಲಾಟೆಗೆ ಕಾರಣನಾಗಿದ್ದ. ಹೇಗೊ ಎಲ್ಲರೂ ಸಮಾಧಾನಗೊಂಡು ತಿನದು ಎನ್ನುವ ಮಾಲ್ಡೀವ್ಸ್‍ನ ದ್ವೀಪವೊಂದರಲ್ಲಿ ಹಡಗು ತಾತ್ಕಾಲಿಕವಾಗಿ ಒಂದು ದಿನ ನಿಂತಾಗ ಅಲ್ಲಿ ಅವನು ಇಳಿದುಕೊಳ್ಳಬೇಕೆಂದು ನಿರ್ಧಾರವಾಯಿತು. ಅವನೂ ಒಪ್ಪಿಕೊಂಡಿದ್ದ. ಕಡಲಿನ ಮೇಲೆ ಅದುವೇ ಅವನ ಮೊದಲ ದೀರ್ಘ ಪಯಣ. ಮೊದಲ ಬಾರಿಗೆ ಹಡಗಲ್ಲಿ ಪಯಣ ಸುವವರಿಗೆ ಘಟಿಸುವಂತೆ ಇವನಿಗೂ ವಾಂತಿ ನಿಲ್ಲದೇ ಬರುತ್ತಿತ್ತು. ಅವನ ಸಹಾಯಕ್ಕೆ ಬಂದವರಲ್ಲಿ ಮಾಲ್ಡೀವ್ಸ್ ಸೇನೆಯ ಅಧಿಕಾರಿ ಸಮೀರ್ ಮೊಹಮದ್ ಕೂಡ ಒಬ್ಬ. “ನಿಮ್ಮ ಪ್ರೆಸಿಡೆಂಟ್‍ನನ್ನು ಮದ್ರಾಸ್‍ನಲ್ಲಿ ಯಾರೋ ಬಾಂಬ್ ಹಾಕಿ ಕೊಂದರಲ್ಲ, ಗೊತ್ತಿಲ್ವಾ?” ಎಂದು ಕೇಳಿ ಬಹುದೊಡ್ಡ ಆಘಾತಕ್ಕೆ ಅವನನ್ನು ತಳ್ಳಿದ್ದ. ಹಾಗೆ ಸತ್ತಿದ್ದು ರಾಜೀವ್ ಗಾಂಧಿಯೇ ಎಂದು ಗೊತ್ತಾಗಲು ಅವನಿಗೆ ಹೆಚ್ಚಿನ ಸಮಯವೇನೂ ಬೇಕಾಗಲಿಲ್ಲ. ಆ ಅಘಾತಕ್ಕಿಂತ ಅವನನ್ನು ಹೆಚ್ಚಾಗಿ ಕಾಡಿದ್ದು ಅವನ ಆತ್ಮೀಯ ಗೆಳತಿಯೂ ಸಹೋದ್ಯೋಗಿಯೂ ಆದ ಕಿಳಿ ಕುಟ್ಟಿ. ಅವಳನ್ನು ಅವನು ಹಾಗೆಯೇ ಕರೆಯುತ್ತಿದ್ದುದು, ಗಿಣಿ ಮರಿಯೆಂದು! ಅವಳ ನಿಜ ಹೆಸರು ಆನಂದಿ. ತಮಿಳು ದಿನ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರೂ ಪರಸ್ಪರ ಪರಿಚಯವಾಗಿ ಒಳಗೊಳಗೆ ಒಬ್ಬರನ್ನೊಬ್ಬರು ತೀವ್ರವಾಗಿ ಪ್ರೀತಿಸುತ್ತಿದ್ದರು. ಆದರೆ ಆ ವಿಷಯವನ್ನು ಹೇಳುವ ಸಾಹಸವನ್ನು ಇಬ್ಬರೂ ಮಾಡಿರಲಿಲ್ಲ. ದಿನದಿನಕ್ಕೆ ತೀವ್ರವಾಗಿ ಸಾಗುತ್ತಿದ್ದ ಅವರ ಸ್ನೇಹ ಪ್ರೇಮದ ಮಜಲನ್ನು ತಲುಪುವುದರೊಳಗೆ ಕಂದಕವೊಂದು ನಿರ್ಮಾಣವಾಯ್ತು. ರಾಜೀವ್ ಗಾಂಧಿಯ ಚುನಾವಣೆಯ ಪ್ರಚಾರವೇ ಅವರಿಬ್ಬರ ನಡುವೆ ಬಹುದೊಡ್ಡ ಅಂತರವನ್ನು ಸೃಷ್ಟಿಸಿ ಅವನನ್ನು ಅವಳಿಂದ ದೂರ ಓಡಿಸಿತ್ತು. ರಾಜೀವ್‍ರನ್ನು ಹುಚ್ಚಿಯಂತೆ ಆರಾಧಿಸುತ್ತಿದ್ದ ಆನಂದಿ ಕುಣಿದು ಕುಪ್ಪಳಿಸಿ ಪೆರಂಬದೂರ್‍ನಲ್ಲಿಯ ಅವರ ಪ್ರಚಾರದ ಸುದ್ದಿಯನ್ನು ತಾನೇ ಕವರ್ ಮಾಡುವುದೆಂದು ಸಂಪಾದಕರನ್ನು ಕಾಡಿ ಬೇಡಿ ಒಪ್ಪಿಸಿದ್ದಳು. “ಇಂಡಿಯನ್ ಆರ್ಮಿ ಮಾಡಿದ ಅನಾಚಾರಗಳಿಗೆ ರಾಜೀವ್ ಹೇಗೆ ಜವಬ್ದಾರಿಯಾಗ್ತಾರೊ ದಡ್ಡ...” ಎಂದು ಹೇಳಿ ತನ್ನ ಸೀಕ್ರೆಟ್ ಪ್ರೇಮಿಯನ್ನು ಆ ಸಭೆಯ ಫೊಟೊ ತೆಗೆಯಲು ತನ್ನೊಂದಿಗೆ ಬರುವಂತೆ ಒತ್ತಾಯಿಸಿದ್ದಳು. ಇವನು ಉರಿದು ಬಿದ್ದಿದ್ದ. ತಾನು ಸತ್ತು ಹೋದರೂ ಸರಿ ಆತನ ಭಾವಚಿತ್ರವನ್ನು ತನ್ನ ಕ್ಯಾಮೆರಾದೊಳಗೆ ಸೆರೆ ಹಿಡಿಯುವುದಿಲ್ಲ, ಎಂದು ಅವಳೊಂದಿಗೆ ಜೋರು ಜಗಳ ಮಾಡಿ “ನೀನು ಅಲ್ಲಿಗೆ ಹೋದರೆ ಇದೇ ಕೊನೆ, ನನ್ನೊಂದಿಗಿನ ಸ್ನೇಹವನ್ನು ಮರೆತು ಬಿಡು” ಎಂದು ಅವಳ ದಿಟ್ಟಿಸಿದ್ದ. ಅವನಿಂದ ಕ್ಯಾಮೆರಾವನ್ನು ಕಿತ್ತುಕೊಂಡು ತುಟಿಗಳ ಹಿಗ್ಗಿಸಿ, ನಾಲಗೆಯ ಹೊರ ಚಾಚಿ ಅವನನ್ನು ಅಣಕಿಸಿ ಕತ್ತು ಅಲ್ಲಾಡಿಸಿದ್ದಳು.

ಅವಳಿಂದ ಕ್ಯಾಮೆರಾವನ್ನು ವಾಪಸ್ ಇಸಿದು ಕೊಳ್ಳದೆ ಅವಳನ್ನೇ ಚಣ ನೋಡಿ ಬೆನ್ನ ತಿರುಗಿಸಿ ಹೊರಟಿದ್ದ. ಇವನ ಕೋಪ ಕ್ಷಣಿಕವಾದುದು ಎಂದು ದೃಢವಾಗಿ ನಂಬಿದ್ದ ಅವಳಿಗೆ ಹೀಗೆ ಇವನು ಸುಳಿವೇ ಇಲ್ಲದೆ ಕಾಯಾಗುತ್ತಾನೆ ಎಂದವಳಿಗೆ ಗೊತ್ತಿರಲಿಕ್ಕಿಲ್ಲ. ಜಗತ್ತಲ್ಲೇ ಅವನು ಅತಿಯಾಗಿ ಪ್ರೀತಿಸಿದ್ದು, ನಂಬಿದ್ದು ತನ್ನನ್ನೇ ಎಂಬುದೂ ಅವಳಿಗೆ ಗೊತ್ತಿರಲಿಲ್ಲ. ಇವನ ಬಡತನದ ಹಿನ್ನೆಲೆ ಅವಳು ಅರಿತ್ತಿದ್ದರೂ ಅವನ ಒಳಗಿನ ಅಗಾಧ ನೋವಿನ ಹುಚ್ಚು ಹೊಳೆಯ ಪರಿಚಯವೇ ಇರಲಿಲ್ಲ; ಹಾಗೆ ನೋಡಿದರೆ ಆಳದ ಆ ರಭಸ ಹೊಳೆ ಅವನಿಗೇ ಗೊತ್ತಿರಲಿಲ್ಲ! ಅವನಿಗೇ ಗೊತ್ತಿಲ್ಲದೆ ಮನಸ್ಸಿನಾಳದ ತಂತಿಯೊಳಗೆ ಹರಿದಾಡುತ್ತಿದ್ದ ಆ ಹೊಳೆಯೇ ಅವನನ್ನು ಹೀಗೆ ಹಿಂದೂ ಮಹಾ ಸಾಗರದ ಮಧ್ಯದಲ್ಲಿ ತೇಲಿಸುವಂತೆ ಮಾಡಿದ್ದು; ಅವನು ತೇಲಿದ್ದು ಮಾತ್ರವಲ್ಲದೆ ಆ ಹಡಗಿನಲ್ಲಿದ್ದ ಎಲ್ಲರನ್ನು ಮುಳುಗಿಸಲು ಕಾರಣವಾಗಿದ್ದು. ಆ ಒಳಗಿನ ಅವ್ಯಕ್ತ ಹೊಳೆ ಉಕ್ಕಿ ಹೊರಗೆ ಧುಮುಕಲು ಕಾರಣವಾಗಿದ್ದು ವಾಂತಿ ಮಾಡುತ್ತಿದ್ದಾಗ ಅವನ ಸಹಾಯಕ್ಕೆ ಬಂದ, ರಾಜೀವ್ ಗಾಂಧಿ ಸಾವಿನ ವಿಚಾರ ಹೇಳಿದ, ಆ ಮೂಲಕ ತನ್ನ ಆತ್ಮೀಯ ಗೆಳತಿ ಆನಂದಿಗೆ ಏನಾಯ್ತೊ ಎಂದು ತೀವ್ರವಾಗಿ ಚಡಪಡಿಸಲು ಕಾರಣನಾದ ಮಾಲ್ದೀವ್ಸ್ ಸೇನೆಯ ಅಧಿಕಾರಿ ಸಮೀರ್ ಮೊಹಮದ್. ಆತ ಹೇಳಿದ ಮತ್ತೊಂದು ವಿಷಯವನ್ನು ಕೇಳಿದ್ದೇ ಒಳಗಿನ ಆ ಅವ್ಯಕ್ಯ ಹೊಳೆ ಚಂಗನೆ ಅವನ ಕಣ್ಣಿಗೆ ಎಗರಿ ಮಿದುಳನ್ನು ಗರಗರ ತಿರುಗಿಸಿ ಕೂಗಾಡಿಸಿ ಕೈಗೆ ಸಿಕ್ಕವರನ್ನೆಲ್ಲ ಬಡಿದು ಜಾಡಿಸಿ, ತನ್ನ ರಭಸಕ್ಕೆ ಕಾರಣನಾದ ಸಮೀರ್ ಮೊಹಮದ್‍ನನ್ನು ಅವನಿಂದ ಕೊಲ್ಲಿಸಿ ಹಡಗಿನ ಕತ್ತಲ ತಳಭಾಗಕ್ಕೆ ಚಂಗನೆ ಜಿಗಿದು ತೂತಿಕ್ಕಿ ಹಡಗನ್ನೇ ಮುಳುಗಿಸಿ ಅವನನ್ನು ಮಾತ್ರ ನೀರಲ್ಲಿ ತೇಲಿಸಿ ಉಳಿದವರನ್ನು ಮುಗಿಸಿ ಹಾಕಿತ್ತು.

ಅವಳನ್ನು ಅಲ್ಲಿಯೇ ಕಾಯಲು ಹೇಳಬಾರದಿತ್ತೇ? ಹಾಗೆ ಹೇಳಿ ಅವಳ ಸಾವಿಗೆ ತಾನು ಕಾರಣನಾದನೇ? ತಾನು ಅವಳನ್ನು ಶ್ರೀಲಂಕಾದಿಂದ ಕರೆ ತರಬಾರದಾಗಿತ್ತು... ಅವಳನ್ನು ಹಾಗೆ ಬಿಟ್ಟು ತಾನು ಫಾತ್ಮಾಳ ಮನೆಯೊಳಗೆ ಅವಿತು ಕೂತಿರದೆ ಇರದಿದ್ದಲ್ಲಿ ಸರ್ಕಾರ ತನ್ನನ್ನು ಬಂಧಿಸುವ ಸಾಧ್ಯತೆಗಳಿದ್ದವು. ತಮ್ಮ ದೇಶದ ಅಧ್ಯಕ್ಷರ ವಿರುದ್ಧ ಬಂಡೆದ್ದವರು ರಾಜಧಾನಿ ಮಾಲೆಯನ್ನು ಆಕ್ರಮಿಸಿ ಹೊಸ ಸರ್ಕಾರ ರಚಿಸಿಕೊಳ್ಳಲು ಯತ್ನಿಸಿದರಂತೆ. ಇಪ್ಪತ್ತು ಮೂವತ್ತು ಬಂಡಾಯಗಾರರನ್ನೇ ಎದುರಿಸಲಾಗದೆ ಮಾಲ್ಡೀವ್ಸ್ ಸರ್ಕಾರವೇ ನಡುಗಿ ಹೋದಾಗ ಪಕ್ಕದ ಇಂಡಿಯಾ ತನ್ನ ಸೇನೆಯನ್ನು ಕಳುಹಿಸದೇ ಇದ್ದಿದ್ದರೆ ಇಂದು ಹೊಸ ಸರ್ಕಾರವಾದರೂ ಇರುತ್ತಿತ್ತು... ತಾನು ಅಧ್ಯಕ್ಷರ ವಿರೋಧಿಯೆನ್ನುವುದೇನೊ ನಿಜ, ಹಾಗಂತ ಅವರ ವಿರುದ್ಧ ಯಾವುದೇ ಸಂಚು ಹೂಡಿರಲಿಲ್ಲ. ಆದರೆ ಮನೆ ಕೆಲಸಕ್ಕೆಂದು ಆ ಶ್ರೀಲಂಕನ್ ತಮಿಳು ಹುಡುಗಿಯನ್ನು ಕರೆ ತಂದದ್ದು ತನಗೆ ಬಹುದೊಡ್ಡ ಅಪಾಯವನ್ನು ತಂದೊಡ್ಡಬಹುದು ಎಂದು ತಾನು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಅವಳು ಕೊಲಂಬೊದಿಂದ ಮಾಲೆಗೆ ಬಂದು ಇಳಿದ ದಿನವೇ ಅದು ಸಂಭವಿಸಬೇಕೆ!? ಅವಳನ್ನು ಮಜೀದಿ ಮಾಗುವಿನಲ್ಲಿರುವ ಸರ್ಕಾರಿ ಕಛೇರಿಯೊಂದರ ಬಳಿ ನಿಲ್ಲಿಸಿ ಅಲ್ಲೇ ಕಾಯುತ್ತಿರಬೇಕೆಂದು ಹೇಳಿ ತಾನು ಮರೆತು ಬಂದಿದ್ದ ದಾಖಲೆಗಳನ್ನು ತರಲು ತನ್ನ ಮೊದಲನೆಯ ಹೆಂಡತಿ ಮನೆಗೆ ಹೋದೆ... ಆದರೆ ಮನೆಯಿಂದ ಹೊರ ಬರುವುದರೊಳಗೆ ಮಾಲೆ ನಗರವನ್ನು ಯಾರೋ ಬಂಡುಕೋರರು ಆಕ್ರಮಿಸಿಕೊಂಡರೆಂಬ ಸುದ್ದಿ ಸಿಡಿಲಿನಂತೆ ಎರಗಿತು. ಸರ್ಕಾರಿ ಕಛೇರಿಗಳನ್ನೆಲ್ಲ ಅವರು ವಶಪಡಿಸಿಕೊಂಡರೆಂದು, ಪೊಲೀಸ್ ವ್ಯವಸ್ಥೆಯನ್ನೇ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರೆಂದು ಸುದ್ದಿ ಬೆಂಕಿಯಂತೆ ಹರಡಿತು. ಎಲ್ಲರೂ ಭಯಭೀತಗೊಂಡು ನಡುಗುವಂತಹ ಸಮಯ. ತನ್ನಂತಹ ಕೆಲವರಿಗೆ ಮಾತ್ರ ಅಪರಿಮಿತ ಸಂತೋಷ ಉಕ್ಕಿಸಿದ ಗಳಿಗೆ ಅದು. ಸಂಜೆಯ ಹೊತ್ತಿಗೆ ತಿಳಿಯಿತು, ಆಕ್ರಮಣ ಮಾಡಿದ್ದು ತಮ್ಮ ದೇಶದ ಬಂಡುಕೋರರಲ್ಲ, ಬದಲಿಗೆ ಶ್ರೀಲಂಕಾದ ತಮಿಳು ಬಂಡುಕೋರರೆಂದು. ತನಗೆ ಆಗಲೇ ನೆನಪಾಗಿದ್ದು ರೂಬಾ ಎನ್ನುವ ಶ್ರೀಲಂಕಾದ ತಮಿಳು ಹುಡುಗಿ. ಅವಳನ್ನು ಮಜೀದಿ ಮಾಗುವಿನಲ್ಲಿ ಕಾಯಲು ಹೇಳಿ ದಾಖಲೆಯೊಂದನ್ನು ತೆಗೆದುಕೊಂಡು ಹೋಗಲು ಬಂದಿದ್ದೆ. ಅವಳ ಟೂರಿಸ್ಟ್ ವೀಸಾವನ್ನು ಮನೆಗೆಲಸದವರ ವೀಸಾಕ್ಕೆ ಬದಲಾಯಿಸಬೇಕಿತ್ತು. ಅದರೊಳಗೆ ಅಸಂಭವವೊಂದು ಸಂಭವಿಸಿ ಎಲ್ಲವೂ ತಲೆ ಕೆಳಗಾಯ್ತು. ಮಾರನೇ ದಿನ ಬಂದ ಇಂಡಿಯಾದ ಪಡೆಗಳು ಶ್ರೀಲಂಕಾದ ತಮಿಳು ಬಂಡುಕೋರರನ್ನು ಸೆರೆ ಹಿಡಿದು ಮಾಲ್ಡಿವ್ಸ್‍ನ್ನು ವಾಪಸ್ ಅಧ್ಯಕ್ಷರಿಗೆ ಕೊಟ್ಟಿದ್ದರು. ಇಂಡಿಯಾದ ಪ್ರೆಸಿಡೆಂಟ್ ರಾಜೀವ್ ಗಾಂಧಿಯೂ ತಮ್ಮ ಅಧ್ಯಕ್ಷರೂ ಆತ್ಮೀಯ ಸ್ನೇಹಿತರಂತೆ. ಹಾಗಾಗಿ ಈತನನ್ನು ಆ ಗಾಂಧಿ ರಕ್ಷಿಸಿದ್ದ. ಎಲ್ಲವೂ ತಿಳಿ ಆದ ಮೇಲೆ ತಾನು ರೂಬಾಳನ್ನು ಹುಡುಕಿಕೊಂಡು ಹೋದೆ. ಅವಳು ಎಲ್ಲಿಯೂ ಕಾಣಲಿಲ್ಲ. ಎಷ್ಡು ಹುಡುಕಿದರೂ ಸಿಗಲೇ ಇಲ್ಲ. ಮಾರನೇ ದಿನ ದಿನಪತ್ರಿಕೆಗಳಲ್ಲಿ ನೋಡಿದೆ. ಇಂಡಿಯಾದ ಸೇನೆ ಬಂಧಿಸಿದ ಶ್ರೀಲಂಕಾದ ತಮಿಳು ಬಂಡುಕೋರರ ಪಟ್ಟಿಯಲ್ಲಿ ರೂಬಾಳ ಹೆಸರೂ ಮತ್ತು ಭಾವಚಿತ್ರವಿತ್ತು. ನೋಡಿ ಹೌಹಾರಿ ತೆಪ್ಪಗಿದ್ದೆ. ಅವಳನ್ನು ಮಾಲ್ಡೀವ್ಸ್‍ಗೆ ಕರೆ ತಂದದ್ದು ತಾನೇ ಎಂದು ಅಪ್ಪಿತಪ್ಪಿಯೂ ಯಾರ ಬಳಿಯೂ ಹೇಳಲಿಲ್ಲ. ಫಾತ್ಮಾಳಿಗೂ ಹೇಳಿದ್ದೆ, ಯಾರ ಬಳಿಯೂ ಬಾಯಿ ಬಿಡದಂತೆ ...

ಬಹುಶಃ ರೂಬಾ ತಮಿಳು ಬಂಡುಕೋರ ಹೆಣ್ಣಾಗಿದ್ದಿರಬಹುದಾ? ಕೊಲಂಬೊದಲ್ಲಿ ಕೆಲಸ ಬೇಕೆಂದು ತನ್ನ ಜೊತೆ ನಾಟಕ ಆಡಿ ಮಾಲೆಗೆ ಬಂದಿದ್ದಾ? ತನ್ನ ತಾಯಿಗೆ ಕಿಡ್ನಿ ಚಿಕಿತ್ಸೆಗೆಂದು ಕೊಲಂಬೊ ಹೋಗಿದ್ದಾಗ ಆ ಆಸ್ಪತ್ರೆಯ ಎದುರಿನ ರಸ್ತೆಯ ಕತ್ತಲಲ್ಲಿ ನಿಂತಿದ್ದಳು. ತಾನು ಊಟ ತರಲು ಹೊರಗೆ ಹೋಗುತ್ತಿದ್ದಾಗ ದಡಕ್ಕನೆ ಕತ್ತಲಿಂದ ಬೀದಿ ದೀಪಕ್ಕೆ ಎಗರಿ ಏನೋ ಸಿಂಹಳೀಯಲ್ಲಿ ಕೇಳಿದಳು. ಅರ್ಥವಾಗದೆ ಮತ್ತಷ್ಟು ಬೆಚ್ಚಿದಾಗ “ಸೆಕ್ಸ್ ಬೇಕಾ?” ಎಂದು ಇಂಗ್ಲಿಷ್‍ನಲ್ಲಿ ಕೇಳಿದ್ದಳು. ಕೋಪಗೊಂಡು ಹೊರಟು ಹೋಗಿದ್ದೆ. ವಾಪಸ್ ಬರುವಾಗ ಅವಳು ಅಲ್ಲೇ ನಿಂತಿದ್ದಳು. ತನ್ನನ್ನು ನೋಡಿ ಅವಮಾನಿತಳಾದಂತೆ ಕತ್ತಲಲ್ಲಿ ಮರೆಗೆ ಹೋಗಿದ್ದಳು. ಮಾರನೇ ದಿನ ಅವಳನ್ನು ಬೆಳಕಲ್ಲಿ ನೋಡಿದೆ. ಅವಳು ಉಟ್ಟಿದ್ದ ಬಟ್ಟೆ, ಬಾಡಿದ ಮುಖ ನೋಡಿ ಪಾಪ ಎನ್ನಿಸಿತು. ಕರೆದು ತಿಂಡಿ ಕೊಡಿಸಿದೆ. ತನ್ನ ಜೊತೆ ಮಾಲ್ಡೀವ್ಸ್‍ಗೆ ಬರುವೆಯಾ? ತನ್ನ ವಯಸ್ಸಾದ ತಾಯಿಯನ್ನು ನೋಡಿಕೊಳ್ಳಲು ಒಬ್ಬರು ಬೇಕು ಎಂದಿದ್ದೆ. ಅವಳು ತಕ್ಷಣ ಒಪ್ಪಿಕೊಂಡಳು. ಫ್ರಾನ್ಸ್‍ಗೆ ಕಳ್ಳತನದ ಹಡಗಲ್ಲಿ ಹೋಗಲು ತಾನು ಹಣ ಸೇರಿಸುತ್ತಿರುವುದಾಗಿಯೂ ನೀವು ಕೊಡುವ ಸಂಬಳದ ಮೂಲಕ ಆ ಹಣ ಸಿಕ್ಕಿದ್ದೇ ತಾನು ವಾಪಸ್ ಕೊಲಂಬೊಕ್ಕೆ ಬಂದು ಫ್ರಾನ್ಸ್‍ಗೆ ಹೋಗಿ ಬಿಡುವುದಾಗಿ ಹೇಳಿದ್ದಳು. ಪ್ಯಾರಿಸ್‍ನಲ್ಲಿ ಅವಳ ಅಣ್ಣ ಇರುವುದಾಗಿಯೂ ತನ್ನ ಅಪ್ಪ ಅಮ್ಮ ಯುದ್ಧದಲ್ಲಿ ಸತ್ತು ಹೋದುದಾಗಿ, ತನ್ನವರೆಂದು ಅವಳಿಗೆ ಇರುವುದೇ ತನ್ನ ಅಣ್ಣ ಮಾತ್ರ ಎಂದು ಹೇಳಿದ್ದಳು. ತಾನವಳನ್ನು ಅಂದು ನೋಡದೇ ಇದ್ದಿದ್ದರೆ ಅವಳು ಮಾಲೆಗೆ ಬರುತ್ತಲೇ ಇರಲಿಲ್ಲ... ಬಂದು ಇಂಡಿಯಾದ ಸೇನೆಗೆ ಸೆರೆ ಸಿಕ್ಕುತ್ತಿರಲಿಲ್ಲವೇನೊ... ಸುಮಾರು ತಿಂಗಳುಗಳ ಕಾಲ ಭಯದಲ್ಲೇ ನರಳಿದ್ದೆ. ಎಲ್ಲಿ ಆಕೆ ತನ್ನ ಹೆಸರನ್ನು ಹೇಳಿಬಿಡುವಳೊ ಎಂದು... ಹಮ್ದುಲುಲ್ಲಾಹ್... ಆಕೆ ಹೇಳಲೇ ಇಲ್ಲ. ಹಾಗೆ ಹೇಳಲು ಪೊಲೀಸ್ ಅಥವಾ ಸೇನೆ ಅವಕಾಶವೇ ಕೊಟ್ಟಿರುವುದಿಲ್ಲ... ಒಂದು ವರ್ಷ ಕಳೆದು ತನ್ನ ಸಂಬಂಧಿಕ ಪೊಲೀಸ್‍ನ ಬಳಿ ಸೆರೆ ಸಿಕ್ಕ ಶ್ರೀಲಂಕಾದ ತಮಿಳು ಬಂಡುಕೋರರ ಬಗ್ಗೆ ಕೇಳಿದಾಗಲೇ ಗೊತ್ತಾಗಿದ್ದು. ಅವರಲ್ಲಿ ಕೆಲವರನ್ನು ಇಂಡಿಯಾದ ಸೇನೆ ಕೊಂಡೊಯ್ಯುತ್ತೆಂದು. ಅವರಲ್ಲಿದ್ದ ಹುಡುಗಿಯರನ್ನು ಯಾರೋ ರಹಸ್ಯವಾಗಿ ಭೋಗಿಸಿ ಕಡಲೊಳಗೆ ಎತ್ತಿ ಹಾಕಿದರಂತೆ... ಅಂತೆ ಕಂತೆ... ಎಷ್ಟು ನಿಜವೋ ಗೊತ್ತಿಲ್ಲ. ತಮಗೆ ತೊಂದರೆ ನೀಡಿದವರನ್ನು ಜನ ಹೀಗೇ ಅಲ್ಲವೇ ಆಡಿಕೊಂಡು ನಗುವುದು... ಅಥವಾ ನಿಜ ಆಗಿದ್ದರೆ... ಇಂಡಿಯಾದ ಸೇನೆಗೆ ಸೆರೆ ಸಿಕ್ಕ ರೂಬಾ ಹಾಗೇ ಸತ್ತು ಹೋದಳೇ!? ಅವಳು ಏನಾದರೆ ತನಗೇನಂತೆ... ತಾನು ಬದುಕಿದರೆ ಸಾಕು... ತಾನು ಬಂದ ಹಡಗು ಮುಳುಗಿ ಹೋದ ವಿಷಯ ತಿನದುವಿಗೆ ಇನ್ನೂ ತಲುಪಿಲ್ಲವೇ!? ಹಾಳಾದ ಫುಟ್‍ಬಾಲ್ ಆಟಗಾರರಿಂದಲೇ ಇದು ಸಂಭವಿಸಿದ್ದು.

ಫಾರಸ್ ಮಾತೊಡಾದಲ್ಲಿ ನಡೆದ ಫುಟ್‍ಬಾಲ್ ಮ್ಯಾಚ್‍ಗೆ ಹೋಗಲು ಅಷ್ಟು ಜನ ಹಡಗಲ್ಲಿ ಹತ್ತಬೇಕಿತ್ತೇ? ಫುಟ್‍ಬಾಲ್‍ನ್ನು ಹುಚ್ಚಾಗಿಸಿಕೊಂಡ ಹಾಳಾದ ನನ್ಮಕ್ಳು... ತನಗೆಲ್ಲಿ ಹೋಗಿತ್ತು ಬುದ್ಧಿ? ಅಷ್ಟು ಜನ ಇದ್ದ ಆ ಕಿತ್ತು ಹೋದ ಹಡಗಲ್ಲಿ ತಾನು ಹತ್ತ ಬೇಕಿತ್ತಾ? ತಾನು ಬರುತ್ತೇನೆನ್ನುವುದು ಗೊತ್ತಾಗಿಯೇ ಆಯಿಷಾ ತಿನದು ಬಿಟ್ಟು ಫಾರಸ್ ಮಾತೊಡಾ ದ್ವೀಪದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಹೋಗಿದ್ದಾಳೆ... ಅಗೊ, ಯಾವುದೊ ವಿಮಾನ ಹಾರಿ ಹೋಗುತ್ತಿದೆ... ಖಂಡಿತ ತಾನವವರಿಗೆ ಕಾಣಿ ಸುವುದಿಲ್ಲ! ಭೂಮಿಯಿಂದ ನೋಡಿದರೆ ವಿಮಾನ ನಿಧಾನವಾಗಿ ಚಲಿಸುತ್ತಿದೆ ಅನ್ನಿಸುತ್ತದೆ... ವಿಮಾನದೊಳಗೆ ಕೂತಿರುವಾಗಲೂ ಹಾಗೇ ಅಲ್ಲವೇ ಅನ್ನಿಸುವುದು!? ಕೊಲಂಬೊಗೆ ಹೋಗುವಾಗ ತಾನು ಹಾಗೇ ಅಲ್ಲವೇ ಭಾವಿಸಿದ್ದು... ಕತ್ತಲ ಆಕಾಶದಲ್ಲಿ ಅದೆಷ್ಟು ಚೆಂದ ಕಾಣುತ್ತಿದೆ ವಿಮಾನದ ಬೆಳಕು! ಅದು ಆಕಾಶದಲ್ಲಿ ಅಷ್ಟು ಮೇಲೆ ಹಾರಲೇಬೇಕೆ? ಕೂಗಳತೆಯ ದೂರದಲ್ಲಿ ಹೋಗಿದ್ದರೆ ತಾನು ಕೂಗಾಡಿ, ಕೈಗಳ ಆಡಿಸಿಯೊ ಅವರ ಗಮನ ಸೆಳೆದು ಜೀವ ಉಳಿಸಿಕೊಳ್ಳಬಹುದಿತ್ತು. ಭೂಮಿಯಿಂದ ಅಣತಿ ದೂರದಲ್ಲಿ ವಿಮಾನಗಳು ಹಾರಿ ಹೋಗುವಂತಿರಬಾರದಿತ್ತೇ!? ಅಮೆರಿಕಾದಲ್ಲಿ ದೊಡ್ಡ ಬಿಲ್ಡಿಂಗ್‍ನ್ನು ಕೆಡವಿದರಲ್ಲಾ, ಉಗ್ರಗಾಮಿಗಳು, ಅವರು ಹೇಗೆ ವಿಮಾನವನ್ನು ಅಷ್ಟು ಕೆಳಗೆ ಹಾರಿಸಿದರೊ?! ಅರೆ ಹೌದು, ಆಯಿಷಾ ತಿನದುವಿಗೆ ಬಂದದ್ದು ಅವಳ ತಮ್ಮನನ್ನು ಹುಡುಕಿಕೊಂಡೆ?! ಅವಳ ತಮ್ಮ ಯೂಸುಫ್ ಯಾವುದೊ ಮೂಲಭೂತವಾದಿ ಸಂಘಟನೆ ಹೆಸರೇಳುತ್ತಾ ಅದಕ್ಕೆ ಸೇರಬೇಕು ಎನ್ನುತ್ತಿದ್ದ... ಐದು ತಿಂಗಳಿಂದ ಅವನು ಕಾಣಿಸಿಕೊಳ್ಳುತ್ತಿಲ್ಲ ಎಂದು ಕೇಳ್ಪಟ್ಟೆ... ತಮ್ಮ ದೇಶ ನಿಜವಾದ ಇಸ್ಲಾಂ ಪಾಲಿಸಬೇಕೆಂದು ಹುಟ್ಟಿಕೊಂಡಿರುವ ಹೊಸ ಗುಂಪಿನ ಜೊತೆ ಅವನು ಇದ್ದಾನಂತೆ. ಯೂಸುಫ್ ಎಂದರೆ ಆಯಿಷಾಳಿಗೆ ಪ್ರಾಣ... ಎಲ್ಲಿ ಹೋದನೊ... ಒಂದು ಪಕ್ಷ, ಆಫ್ಘಾನಿಸ್ತಾನಕ್ಕೆ ಹೋಗಿರಬಹುದೇ!? ಡ್ರಗ್ಸ್ ತೆಗೆದುಕೊಂಡು ಬೀದಿ ಸುತ್ತುತ್ತಿದ್ದವನು ಇವತ್ತು ಧರ್ಮವನ್ನುಳಿಸುವವ... ಹಹಹಹ... ಧರ್ಮವನ್ನು ಹಾಳು ಮಾಡಲೆಂದೇ ಇಂತಹವರುಗಳು ಹುಟ್ಟಿಕೊಂಡಿದ್ದಾರೆ... ಅರೆ! ಏನದು?!

ಅಗೊ ಅಲ್ಲಿ? ದೂರದಲ್ಲಿ! ಪಕ್ಷಿಗಳೇ!? ಅಲ್ಲ... ಎರಡು ದಿನಗಳಿಂದ ಒಂದು ಪಕ್ಷಿಯೂ ಇತ್ತ ಬಂದಿಲ್ಲ... ಅರೆ! ನಿನ್ನೆ ರಾತ್ರಿಯಿಂದ ತಾನು ಏನೊಂದನ್ನೂ ತಿಂದಿಲ್ಲ... ಮೀನುಗಳೂ ಸಿಗುತ್ತಿಲ್ಲ... ಏನದು? ಬೆಟ್ಟದಂತೆ ಕಾಣಿಸುತ್ತಿರುವುದು? ಹೌದು! ನೀರ ಬೆಟ್ಟ! ಕಡಲ ನೀರು ಆಕಾಶವ ಮುಟ್ಟುತ್ತಾ ತನ್ನತ್ತ ನುಗ್ಗುತ್ತಿದೆ...ಅರೆ!

ನೀರು ಬೃಹದಾಕಾರವಾಗಿ ಚಲಿಸುತ್ತಾ ಆಕಾಶವ ಮುಟ್ಟುತ್ತಾ ಬರುತ್ತಿತ್ತು. ಬಿಳಿಯ ಮೋಡಗಳನ್ನು ಹಿಂದೆ ತಳ್ಳುತ್ತಾ ವೇಗವಾಗಿ ನುಗ್ಗುತ್ತಿರುವ ಆ ಕಡಲ ಪರ್ವತವನ್ನು ನೋಡಿ ಅಚ್ಚರಿಗೊಂಡು ಚಣ ಅದುರಿ ಹಿಂದೆ ತಿರುಗಿ ಈಜಲು ಹೋದವನು ಹಾಗೇ ನಿಂತ. ಆ ನೀರ ಬೆಟ್ಟಕ್ಕೆ ಮುಖ ಮಾಡಿ ಅದನ್ನೇ ದಿಟ್ಟಿಸುತ್ತಾ ಕಾಲು ಕೈಗಳ ಆಡಿಸುತ್ತಾ ಕಡಲನ್ನೊಮ್ಮೆ ಬಾಯಿ ತುಂಬಾ ತುಂಬಿಕೊಂಡು ಉಫ್‍ಫ್‍ಫ್ ಎಂದು ಅದರತ್ತ ನೀರನ್ನು ಉಗಿದ. ಕಡಲ ನೀರನ್ನು ತನ್ನೊಳಗೆ ಎಳೆದುಕೊಂಡು ಬೃಹದಾಕಾರವಾಗಿ ಬೆಳೆಯುತ್ತಾ ಬರುತ್ತಿರುವ ಕಡಲ ಬೆಟ್ಟದಿಂದ ತಪ್ಪಿಸಿಕೊಂಡ ಮೀನುಗಳು ಇವನ ಮುಂದೆ ಹಾರಿ ಬಂದು ಬೀಳುತ್ತಿದ್ದವು. ಚಂಗನೆ ಎಗರಿ ಇವನು ಅವುಗಳ ಹಿಡಿಯಲು ಶುರು ಮಾಡಿದ. ಇವನ ತಣ್ಣನೆಯ ಕೈಗಳಿಗೆ ಸಿಗದೆ ಅವು ಜಾರಿ ಕಡಲೊಳಗೆ ಬಿದ್ದು ಮಾಯವಾಗುತ್ತಿದ್ದವು. ಆದರೆ ಟ್ಯೂನಾ ಮರಿಯೊಂದು ಇವನ ಹಸಿವನ್ನು ಅರಿತಂತೆ ಅನಾಯಾಸವಾಗಿ ಇವನ ಬಾಯಿಯೊಳಕ್ಕೆ ಬಂದು ಬಿತ್ತು. ತಟಕ್ಕನೆ ಅದನ್ನು ನುಂಗಿ ಮತ್ತಷ್ಟು ಮೀನುಗಳ ಹಿಡಿಯಲು ತನ್ನ ಕೈಕಾಲುಗಳಿಗೆ ಆದೇಶಿಸಿದ. “ಈ ಟ್ಯೂನಾ ಮೀನುಗಳು ಮಾಲ್ದೀವಿಯನ್ನರನ್ನೆಂದೂ ಕೈ ಬಿಡವು,” ಎಂಬ ತನ್ನ ಗೆಳೆಯರ ಮಾತು ಅವನಿಗೆ ನೆನಪಾಗಿ ಖುಷಿಗೊಂಡು ತಿರುಗಿದ. ಕಡಲ ಪರ್ವತ ಇವನ ಬಹು ಸಮೀಪಕ್ಕೆ ಬಂದಿತ್ತು. ಗಿಡ ಮರ- ಪ್ರಾಣಿ ಪಕ್ಷಿ, ಇನ್ನು ಏನೇನೊ ಆ ಕಡಲ ಪರ್ವತದ ತುಂಬಾ ಹಾರುತ್ತಾ ಅವನತ್ತ ಬರುತ್ತಿದ್ದವು. ಇಡೀ ಭೂ ಮಂಡಲವೇ ಬಂದರೂ ಸರಿಯೇ ತಾನು ಅಂಜುವುದಿಲ್ಲ ಎನ್ನುವಂತೆ ಅದನ್ನು ಎದುರುಗೊಳ್ಳಲು ಗಟ್ಟಿಯಾಗಿ ನೆಟ್ಟಗೆ ನಿಶ್ಚಲನಾಗಿ ಕೈಕಾಲುಗಳನ್ನು ಸೆಟೆದುಕೊಂಡು ಅವನು ಎದೆಯುಬ್ಬಿಸಿ ನಿಂತ.

ತಿಳಿ ನೀಲಿ ತೆರೆಯ ಆಗಸ ಪೂರ್ಣ ಚಂದಿರನನ್ನು ಹೊತ್ತು ಉಣಿಸುತ್ತಿದ್ದ ಹಾಲನ್ನು ಹೀರುತ್ತಾ ರಾತ್ರಿಯೆಲ್ಲ ಎದ್ದೇ ಇದ್ದ ಅವನು ಪೂರ್ವದಲಿ ಸೂರ್ಯ ಕಾಣಿಸಿಕೊಳ್ಳುವ ಸಮಯಕ್ಕೆ ಸರಿಯಾಗಿ ಜೋಂಪು ಬಂದಂತಾಗಿ ತೆರೆದ ಕಣ್ಣಲ್ಲೇ ನಿದ್ರಿಸುತ್ತಿದ್ದ ಅವನನ್ನು ಏನೋ ಸ್ಪರ್ಶಿಸಿದಂತಾಗಿ ದಕ್ಕನೆ ಎಚ್ಚರಗೊಂಡ. ತುಸು ಗಲಿಬಿಲಿಗೊಂಡು ನೀರನ್ನು ಬಡಿದು ಕಾಲುಗಳ ಬಲದಿಂದ ದೇಹವನ್ನು ಹಿಂದೆ ತಿರುಗಿಸಿ ನೋಡಿದ. ಹತ್ತಾರು ಹೂವು, ಎಲೆಗಳು ತೇಲುತ್ತಿದ್ದವು. ಕಡಲ ಈ ಭಾಗದಲ್ಲಿ ಇಷ್ಟು ದಿನ ಮೀನು, ಪಕ್ಷಿಗಳು ಹೊರತಾಗಿ ಏನೂ ಕಂಡಿರಲಿಲ್ಲ. ಇದೇನು ಇಂದು? ಎಲ್ಲಿಂದ ಬಂದವು? ಎಂದು ಸುತ್ತಲೂ ನೋಡಿದ. ಆಗಸವನ್ನು ಮುಟ್ಟುವವರೆಗೂ ಎಲ್ಲಾ ದಿಕ್ಕುಗಳಿಗೂ ತುಂಬಿ ಕೊಂಡಿದ್ದ ನೀರ ಹೊರತಾಗಿ ಅವನಿಗೆ ಏನೊಂದೂ ಕಾಣಲಿಲ್ಲ. ಬಹುಶಃ ದೂರದ ಯಾವುದೊ ದ್ವೀಪವೊಂದರಿಂದ ತೇಲುತ್ತಾ ಬಂದಿರಬೇಕೆಂದು ಕೊಂಡಾಗ ಅವನ ಒಳಗೆ ಕಿಡಿಯೊಂದು ಹತ್ತಿಕೊಂಡಂತಾಗಿ ತಟ್ಟನೆ ಕಾಲುಗಳ ಮೇಲೆ ಎತ್ತಿ ದೇಹವನ್ನು ನೀರ ಮೇಲೆ ತೇಲಿಸಿಕೊಂಡು ಈಜುತ್ತಾ ಮತ್ತೇನಾದರೂ ಸಿಗಬಹುದೇ ಎಂದು ಹುಡುಕಾಡಿದ. ಎಲೆ ಹೂಗಳ ಹೊರತು ಏನೊಂದು ಕಾಣಲಿಲ್ಲ. ತಲೆ ಎತ್ತಿ ನೋಡಿದ. ತಿಳಿ ಬಂಗಾರದ ಬಣ್ಣವನ್ನು ಆಕಾಶಕ್ಕೆ ಪೂಸುತ್ತಾ ಸೂರ್ಯ ಮೇಲೇರುತ್ತಿದ್ದ. ಮೀನುಗಳು ಪುಳಕ್ಕನೆ ಮೇಲೆ ಜಿಗಿದು ಗಾಳಿಯನ್ನು ಹೀರಿಕೊಂಡು ಕಡಲಿನೊಳಗೆ ದುಂಮ್ ಎಂದು ಬಿದ್ದು ತಟ್ಟನೆ ಆಳಕ್ಕೆ ಹೋಗಿ ಎಡಕ್ಕೊ ಬಲಕ್ಕೊ ತಿರುಗುತ್ತಿದ್ದವು.

ದ್ವೀಪ ಯಾವುದಾದರೂ ಸಿಗುವವರೆಗೂ ಈಜುತ್ತಾ ಹೋಗಲೇ ಎಂದು ಸುತ್ತಲೂ ನೋಡಿದ. ತಕ್ಷಣ ನಿಂತು ನೀರಿನೊಳಗೆ ದೇಹವ ಬಿಟ್ಟು ದ್ವೀಪ ಯಾವ ಕಡೆ ಇರಬಹುದು ಎಂದು ಹುಡುಕಾಡಿದ. ಉರಿಯುತ್ತಿರುವ ಸೂರ್ಯನ ಪ್ರಖರ ಬೆಳಕಲ್ಲಿ ಏನೊಂದು ಕಾಣುತ್ತಿಲ್ಲ. ದೂರದಲ್ಲೆಲ್ಲೊ ಖಂಡಿತ ದ್ವೀಪ ಇರಬೇಕು. ಅಲ್ಲಿಂದಲೇ ಇವು ತೇಲುತ್ತಾ ಬಂದಿರಬೇಕು... ಆ ದ್ವೀಪದಲ್ಲಿ ಯಾರೊಬ್ಬರೂ ಯುರೋಪಿಯನ್ನರು ಹೋಗಿರಲಿಲ್ಲವೆಂದಾದಲ್ಲಿ ಅದನ್ನು ತನ್ನ ಸ್ವಂತಕ್ಕೆ ಮಾಡಿಕೊಳ್ಳಬಹುದು. ಅಥವ ತಮ್ಮ ಪೋರ್ಚಗೀಸರ ಸರಹದ್ದಿನೊಳಗೆ ತಂದು ಅರಸರ ಬಳಿ ಬಹು ದೊಡ್ಡ ಕಾಣಿಕೆ ಸ್ವೀಕರಿಸಬಹುದು... ಹೊರಡೋಣವೇ...!? ಯಾವ ಕಡೆ ಎಂದು ಈಜುವುದು? ಸಮ ರಾತ್ರಿಯಲ್ಲಿ ಕಿವಿಯನ್ನು ಚುರುಕುಗೊಳಿಸಿ ಕೇಳಿಸಿಕೊಳ್ಳಬೇಕು, ಏನಾದರೂ ಮನುಷ್ಯರ ವಾಸನೆ ಹೊಡೆಯುತ್ತದೆಯೇ ಎಂದು... ಈಗಲೇ ಹೋಗುವುದು ಬೇಡ...ಎಂದು ತೀರ್ಮಾನಿಸಿ ತೇಲುತ್ತಿದ್ದ ಹೂವಿನ ದಳಗಳನ್ನು ಆರಿಸಿ ಬಾಯಲ್ಲಿ ಹಾಕಿಕೊಂಡ. ಮೀನುಗಳ ಹಿಡಿಯಲು ಕಡಲ ಪಕ್ಷಿಗಳು ಇತ್ತ ಬರುವುದು ಸಂಜೆಯೇ! ಈ ಸಂಜೆ ಒಳ್ಳೆಯ ಪೊಗರುದಸ್ತಾದ ಹಕ್ಕಿಯೊಂದನ್ನು ಹಿಡಿದು ರೆಕ್ಕೆಗಳ ಕಿತ್ತು ತಿನ್ನಬೇಕು... ಬಂದೂಕಾದರೂ ಇದ್ದಿದ್ದರೆ ಸುಲಭವಾಗಿ ಅವುಗಳ ಬೇಟೆಯಾಡಬಹುದಿತ್ತು. ಹೌದು! ಈ ಪಕ್ಷಿಗಳು ನಡು ಕಡಲಲ್ಲಿ ಎಲ್ಲಿ ಹೇಗೆ ವಿರಾಮ ತೆಗೆದುಕೊಳ್ಳುತ್ತವೆ!? ನೀರ ಮೇಲೆ ಅವು ಕೂರುತ್ತವೆಯೇ!? ಹಾಗೆ ಕೂತರೆ ದೊಡ್ಡ ಮೀನುಗಳು ಅವುಗಳನ್ನು ನುಂಗಿ ಬಿಡುವ ಅಪಾಯಗಳಿದೆಯೇ!? ಹಹಹ... ಇದುವರೆವಿಗೂ ತಾನು ಒಂದು ಬೃಹತ್ ಮೀನನ್ನು ನೋಡಿಯೇ ಇಲ್ಲ... ಎಂದುಕೊಳ್ಳುತ್ತಿರುವಾಗ ಅವನ ತಲೆ ಮೇಲೆ ಎರಡು ಬಿಳೀ ಬಣ್ಣದ ಕೊಕ್ಕರೆಯಂತಹ ಹಕ್ಕಿಗಳು ಸಣ್ಣಗೆ ಸದ್ದು ಮಾಡುತ್ತಾ ಜೋರಾಗಿ ಪೂರ್ವದ ಕಡೆ ಹೋಗುತ್ತಿದ್ದವು. ಇವ್ಯಾವು!? ಹೊಸ ಥರದ ಕೊಕ್ಕರೆಗಳು... ಇಂಡೋ ಸಾಗರದಲ್ಲಿ ಸಿಕ್ಕಿ ಹಾಕಿಕೊಂಡಿರುವ ಇಷ್ಟು ದಿನದ ತನ್ನೀ ದಿನಗಳಲ್ಲಿ ಒಮ್ಮೆಯೂ ಇಂತಹವುಗಳನ್ನು ಕಂಡೇ ಇಲ್ಲವಲ್ಲ! ಯಾವುದೊ ದೂರ ಪ್ರದೇಶದ ಹಕ್ಕಿಗಳೇ ಇರಬೇಕವು. ಬಹುಶಃ ಕರಿಯರ ಖಂಡದ ಕಾಡುಗಳಿಂದ ಬಂದದ್ದೇ ಇರಬೇಕು. ಓ! ಹಕ್ಕಿಯ ಪುಟ್ಟ ಮಿದುಳೊಳಗೆ ನೆನಪಿನ ಕಣಜವೇ ಇದೆಯೇನೊ! ಋತು ಋತುವಿಗೂ ಬದಲಾಗುವ ಅವುಗಳ ವಾಸ್ತವ್ಯವನ್ನು ಅದೆಷ್ಟು ನಿಖರವಾಗಿ ಅವು ನೆನಪಲ್ಲಿಟ್ಟುಕೊಳ್ಳುತ್ತವೆ! ಮನುಷ್ಯ ಪಕ್ಷಿಗಳಂತೆ ಹಾರುವಂತಿದ್ದಿದ್ದರೆ!? ಇಂಡೀಸ್‍ನಿಂದ ಲಿಸ್ಬನ್‍ಗೆ ತಾನು ಕೆಲವೇ ವಾರಗಳಲ್ಲಿ ಹೋಗಿ ತಲುಪುತ್ತಿದ್ದೆ.

ಕಡಲಿಗೆ ತಾನು ಬಿದ್ದು ಎಷ್ಟು ದಿನ ಆಗಿರಬಹುದು? ತಮ್ಮ ಹಡಗು ಇಂಡೀಸ್ ಬಿಟ್ಟಿದ್ದು ಜೂನ್ 7, 1754. ತನಗಿನ್ನೂ ಸರಿಯಾಗಿ ನೆನಪಿದೆ... ಏಕೆಂದರೆ ಅಂದು ಚಕ್ರವರ್ತಿ ಮೂರನೇ ಜಾನ್ ಹುಟ್ಟಿದ ದಿನ. ಭೂ ಭಾಗ ಇರುವ ಕಡೆಯೆಲ್ಲ ಪೋರ್ಚಗೀಸರ ಅಧಿಪತ್ಯವನ್ನು ಪಸರಿಸಿದವನು... ಆತನ ಸೈನ್ಯದಲ್ಲೇ ತನ್ನ ತಂದೆ ನಾವಿಕನಾಗಿ ಇದ್ದುದು... ಆತನ ನಂತರ ಪೋರ್ಚಗೀಸರ ಅಧಿಪತ್ಯ ಜಾರುತ್ತಾ ಸ್ಪೇನ್‍ನ ಯುದ್ಧದೊಂದಿಗೆ ಕರಗುತ್ತಾ ಬರುತ್ತಿದೆ. ಬ್ರೆಸೀವ್‍ನ ರಿಯೋ ಡ್ಜೆನೆರಿಯೊ ಮತ್ತು ಈಸ್ಟ್ ಇಂಡೀಸ್‍ನ ಪ್ಯಂಜಿಮ್ ಇಲ್ಲದ್ದಿದ್ದರೆ ತಮ್ಮ ದೇಶ ಉಳಿಯುವುದೇ ಕಠಿಣವಾಗುತ್ತಿತ್ತೇನೊ... ತಮ್ಮ ಅಧೀನದಲ್ಲಿದ್ದ ಇಂಡೀಸ್‍ನ ಎಷ್ಟೊ ಭೂಭಾಗಗಳು ಈಗ ಇಂಗ್ಲಿಷರ, ಫ್ರೆಂಚರ ವಶವಾಗಿವೆ. ತಾವು ಪ್ಯಂಜಿಮ್‍ಗೆ ಸೀಮಿತವಾಗುತ್ತಿದ್ದೇವೆ. ಆದರೂ ಇಂಡೀಸ್‍ನ ಸಂಪರ್ಕ ಭಾಷೆಯಾಗಿ ಇಂದಿಗೂ ಪೋರ್ಚಗೀಸ್ ಇರುವುದು ನಿಜಕ್ಕೂ ಖುಷಿ ತರುತ್ತದೆ... ಎಲ್ಲವೂ ಆ ಸ್ಪೈನ್‍ನಿಂದಲೇ ತಾವು ಹೀಗೆ ಕಿರಿದಾಗುತ್ತಿರುವುದು. ಆ ಯುದ್ಧವನ್ನು ತಾವು ಗೆದ್ದಿದ್ದರೆ ಬಹುಶಃ ಮೂರನೇ ಜಾನ್ ಕಟ್ಟಿದ್ದ ಸಾಮ್ರಾಜ್ಯವನ್ನು ಉಳಿಸಿಕೊಳ್ಳಬಹುದಿತ್ತೇನೊ... ತನ್ನ ತಂದೆ ಸ್ಪೈನ್ ಯುದ್ಧಕ್ಕೆ ಹೋಗಿ ವಾಪಸ್ ಬರಲೇ ಇಲ್ಲ. ಅವನ ಕಡಲ ಪಯಣ ತನ್ನ ಬಾಲ್ಯದಲ್ಲಿ ಉಂಟು ಮಾಡುತ್ತಿದ್ದ ಸಂಚಲನ ಈಗಲೂ ನೆನಪಿದೆ. ಆತನಂತೆ ತಾನೂ ತನ್ನ ಸೋದರರ ಜೊತೆ ಮರದ ತೊಗಟೆಗಳಲ್ಲಿ ದೋಣಿಮಾಡಿಕೊಂಡು ಆಟವಾಡುತ್ತಿದ್ದುದು ಇನ್ನೂ ಚೆಂದ ನೆನಪಿದೆ... ಕಡಲಲ್ಲಿ ಆಟ ಆಡುತ್ತಾ ಪಕ್ಷಿಗಳನ್ನು, ಮೀನುಗಳನ್ನು ಹಿಡಿದು ಆಟ ಆಡುತ್ತಿದ್ದುದ ನೆನೆಸಿದರೆ ನಗು ಬರುತ್ತದೆ. ಆಗ ತನ್ನ ತಾಯಿ ಎಲ್ಲರನ್ನೂ ಗದರಿಸಿ ಓಡಿಸುತ್ತಿದ್ದುದು ಇನ್ನೂ ಕಣ್ಣ ಮುಂದೆಯೇ ಇದೆ. ಅವಳಿಗೆ ನಾನು ನಾವಿಕನಾಗುವುದು ಇಷ್ಟವಿರಲಿಲ್ಲ. ರಾಜರ ಕೋಟೆಯೊಳಗೆ ಯಾವುದಾದರೂ ಕೆಲಸವನ್ನು ಹಿಡಿಯಬೇಕೆಂದೇ ಬಯಸಿದ್ದಳು, ಪಾಪ ಮುದುಕಿ! ಕಡಲತ್ತ ತಿರುಗಿಯೂ ನೋಡಬಾರದೆಂದು ಮತ್ತು ಸೈನ್ಯಕ್ಕೆ ಸೇರಲೇ ಬಾರದೆಂದು ತನ್ನ ಮಕ್ಕಳನ್ನು ಬೆಳೆಸಿದಳು... ಹಹಹ... ಆದರೆ ತಾನು ಮನೆ ಬಿಟ್ಟು ಲಿಸ್ಬಾನ್‍ಗೆ ಓಡಿ ಹೋಗಿ ಬ್ರೆಸಿವ್‍ಗೆ ಹೋಗುವ ಹಡಗಿನಲ್ಲಿ ಕೆಲಸಕ್ಕೆ ಸೇರಿಕೊಂಡೆ... ಅವಳನ್ನು ನೋಡಿಯೇ ಎಷ್ಟು ವರ್ಷಗಳಾದವು! ಹೇಗಿದ್ದಾಳೊ ಏನೋ!? ಪಾಪ, ಅವತ್ತು ತಪ್ಪಿಸಿಕೊಂಡಳು... ಅಂದು ನಡೆದ ಜಗಳದಲ್ಲಿ ತಾನು ಅವಳನ್ನು ಕೊಂದು ಬಿಡುತ್ತಿದ್ದೇನೇನೊ... ಛೇ! ಹೋಗಬೇಕು... ಅವಳನ್ನು ನೋಡಬೇಕು... ಸಾಯುವುದರೊಳಗೆ ಅವಳ ಹಣೆಗೆ ಮುತ್ತಿಟ್ಟು ಅಪ್ಪಿಕೊಳ್ಳಬೇಕು. ಅರೆ!? ಅದೊ ದೋಣಿಗಳು... ತಾನು ಬಾಲ್ಯದಲ್ಲಿ ಆಡುತ್ತಿದ್ದ ಅದೇ ಮರದ ಪೊಟರೆಗಳ ದೋಣಿಗಳು... ಅಥವ ಮರದಿಂದ ಉದುರಿದ ಪೊಟರೆಗಳೇ!? ಹಾಗಾದರೆ ಇಲ್ಲೇ ಎಲ್ಲೊ ದ್ವೀಪವೊಂದಿದೆ... ಅಲ್ಲಿ ಮಕ್ಕಳು ಆಟವಾಡುತ್ತಿದ್ದಾರೆ... ಖಂಡಿತ... ಖಂಡಿತ ಇದ್ದಾರೆ. ಅಗೊ... ಅಗೊ... ಅದೇನದು ... ಬರುತ್ತಿರುವುದು ಹಡಗೇ!? ಉರಿಯುತ್ತಿರುವ ಸೂರ್ಯನ ಕೆಳಗೆ ಬರುತ್ತಿದೆ... ಏನದು!? ಇಳಿಯುತ್ತಿರುವ ಸೂರ್ಯ ಇಷ್ಟು ಪ್ರಖರವಾಗಿ ಉರಿಯುತ್ತಿರುವುದನ್ನು ತಾನು ಇದೇ ಮೊದಲ ಬಾರಿಗೆ ನೋಡುತ್ತಿರುವುದು! ಬರುತ್ತಿರುವುದು ಏನೆಂದು ಸ್ಪಷ್ಟವಾಗಿ ಕಾಣುತ್ತಿಲ್ಲ.

ಅರೆ! ಏನಿದು!? ಸಾವಿರಾರು ಪಕ್ಷಿಗಳು ಪೂರ್ವ ದಿಕ್ಕಿಗೆ ಹೋಗುತ್ತಿವೆ. ಹೌದು, ಪಕ್ಷಿಗಳೇ! ಕೊಕ್ಕರೆ ಮಾತ್ರವಲ್ಲದೆ ನೂರಾರು ಪ್ರಭೇಧಗಳ ಹಕ್ಕಿಗಳು! ಆಕಾಶವನ್ನೇ ಮುಚ್ಚಿಕೊಳ್ಳುವಷ್ಟು ಪಕ್ಷಿಗಳು! ಅರೆ... ಎಲ್ಲವೂ ಹೊಸ ಪಕ್ಷಿಗಳೇ! ಇದುವರೆವಿಗೂ ಇಂಡೀಸ್‍ನ ಈ ಕಡಲಲ್ಲಿ ತಾನು ಕಂಡಿರದ ಪಕ್ಷಿಗಳ ಪರ್ವತ! ಅರೆ... ಕಡಲೊಳಗೂ ಪಕ್ಷಿಗಳೇ ! ಏಯ್ಯಿಯ್ಯಿಯ್ಯ್..

ಅವನನ್ನು ತಳ್ಳುತ್ತಾ ಕಡಲೊಳಗೆ ಥರಾವರಿ ಮೀನುಗಳು ಪೂರ್ವಕ್ಕೆ ವೇಗವಾಗಿ ಹೋಗುತ್ತಿದ್ದವು. ಬೆಚ್ಚಿಬಿದ್ದ ಅವನು ಅವುಗಳಿಂದ ತಪ್ಪಿಸಿಕೊಳ್ಳುತ್ತಾ ನೀರನ್ನು ತಳ್ಳುತ್ತಾ ಎಗರುತ್ತಿದ್ದ. ತಲೆ ಮೇಲೆ ಹೋಗುತ್ತಿರುವ ಪಕ್ಷಿಗಳು ಎಲ್ಲಿ ತನ್ನನ್ನು ಕುಕ್ಕಿ ಬಿಟ್ಟಾವು ಎಂಬ ಆತಂಕ ಅವನನ್ನು ಮುತ್ತಿಕೊಂಡು ಕಾಲ ಕೆಳಗೆ ಯಾವುದೊ ಭಾರೀ ಮೀನೊಂದು ತೆವಳಿದಂತಾಗಿ ಮತ್ತೆ ಎಗರಿ ಕೆಳಗೆ ನೋಡಿದ. ಗಾಜಿನಂತಿದ್ದ ನೀರಲ್ಲಿ ಬಣ್ಣಬಣ್ಣದ ನೂರಾರು ಬೃಹತ್ ಮೀನುಗಳು ಹೋಗುತ್ತಿರುವುದು ಸ್ಪಷ್ಟವಾಗಿ ಕಂಡವು. ಕಡಲ ಮೇಲೆ ಅಂಗಾತ ಉಲ್ಟಾ ಮಲಗಿ ಎಷ್ಟು ಸಾಧ್ಯವೊ ಅಷ್ಟು ಕಣ್ಣಗಲಿಸಿ ಚಲಿಸುತ್ತಿರುವ ಬೃಹತ್ ಮೀನುಗಳನ್ನು ತದೇಕ ಚಿತ್ತದಿಂದ ನೋಡಿದ. ಅರೆ! ಇವು ತನ್ನ ಹುಟ್ಟೂರಿನ ಮೀನುಗಳಲ್ಲವೇ ಎಂದು ಪುಲಕಗೊಂಡು ಕಣ್ಣ ಮಿಟುಕಿಸದೆ ಅವುಗಳ ನೋಡಿ ತಕ್ಷಣ ಏನೋ ಹೊಳೆದು ದೇಹವನ್ನು ಕಡಲೊಳಗೆ ಇಳಿಬಿಟ್ಟು ಮತ್ತೆ ತಲೆಯೆತ್ತಿ ನೋಡಿದ. ಪೂರ್ವಕ್ಕೆ ಹೋಗುತ್ತಿರುವ ಪಕ್ಷಿಗಳಲ್ಲಿ ತನ್ನ ಊರ ಪಕ್ಷಿಗಳೂ ಕಂಡಂತಾಗಿ ಮತ್ತಷ್ಟು ಹುರುಪು ಮೂಡಿ ಅವು ಇಷ್ಟು ದೂರ ಬರಲು ಕಾರಣ ಏನು? ಎಂದು ಯೋಚಿಸತೊಡಗಿದಾಗ ಮನಸ್ಸು ಕಸಿವಿಸಿಗೊಂಡು ಚಡಪಡಿಸತೊಡಗಿತು. ಈಗ ಆಕಾಶವೇ ಕಾಣುತ್ತಿಲ್ಲ... ಬರೀ ಪಕ್ಷಿಗಳೇ ತುಂಬಿಕೊಂಡಿದ್ದವು. ಹೋಗುತ್ತಿದ್ದ ಹಕ್ಕಿಗಳಲ್ಲೊಂದು ರೆಕ್ಕೆ ಮುರಿದು ಇವನ ಮುಂದೆ ಬಿದ್ದು ನೀರಲ್ಲಿ ಒದ್ದಾಡುವಾಗ ಇವನು ಮತ್ತಷ್ಟು ಕಳವಳಗೊಂಡ ... ತನ್ನ ಊರಲ್ಲಿ ಏನೋ ನಡೆದಿರಬಹುದು ಎಂದು ಯೋಚಿಸತೊಡಗಿದ.

ಅದೊ ಅಲ್ಲೊಬ್ಬ ಹಾರುತ್ತಿದ್ದಾನೆ... ನಿನ್ನನ್ನೂ ಬಿಡುವುದಿಲ್ಲ... ಸುವರ್... ನನ್ನನ್ನೇ ಕುಟುಕೋದಿಕ್ಕೆ ಬರ್ತೀರಾ? ಬರ್ರೊ... ಅದೆಷ್ಟು ಜನ ಬರ್ತೀರೊ ಬನ್ನಿ... ಆ ನನ್ಮಗ ಮಾಲ್ಡೀವನ್ ಆರ್ಮಿಯವನು ಹೇಳದಿದ್ರೆ ಇಲ್ಲಿ ನಡೆದ ವಿಷಯ ನನಗೆ ಗೊತ್ತಾಗುತ್ತಲೇ ಇರಲಿಲ್ಲ... ಮದ್ರಾಸ್‍ಗೆ ಹೋಗಿದ್ದೇ ಇದರ ಬಗ್ಗೆ ಒಂದು ಕವರ್ ಸ್ಟೋರಿ ಬರೆಯುತ್ತೀನಿ ಇರ್ರೊ... ನಾನೊಬ್ಬ ಬರೀ ಫೊಟೊ ಜರ್ನಲಿಸ್ಟ್ ಅಂದ್ಕೊಂಡ್ರಾ!?... ನನಗೂ ಬರೀಲಿಕ್ಕೆ ಬರುತ್ತೆ... ಬರೀ ಲೇಖನ ಮಾತ್ರ ಅಲ್ಲ, ಕಾದಂಬರಿಯೂ ಬರೆಯಬಲ್ಲೆ. ಯಾಕೆ? ಜರ್ನಲಿಸ್ಟ್‍ರು ಕಾದಂಬರಿ ಬರೆಯಲು ಸಾಧ್ಯವಿಲ್ವಾ? ಮಾಕ್ವೆಸ್ ಬರೀಲಿಲ್ವಾ... ಅವನ ಹಾಗೆ ನಾನೂ ಬರೆಯುತ್ತೇನೆ. ಅದ್ಯಾವುದೊ ಕಾದಂಬರಿಯಲ್ಲಿ ನನ್ನ ಹಾಗೆ ಕಡಲಲ್ಲಿ ಸಿಕ್ಕಿ ಕೊಂಡವನ ಬಗ್ಗೆ ಕಾದಂಬರಿಯೊಂದನ್ನು ಅವನು ಬರೆದಿದ್ದಾನೆ... ಅದರ ಕಥೆ ನನಗೆ ನೆನಪಿದೆ... ಅಲ್ಲಿ ಪಕ್ಷಿಗಳ ತಿಂದು ಆ ಕಥೆಯ ನಾಯಕ ಬದುಕುತ್ತಾನೆ... ನಾನೂ ಹಾಗೇ ಬದುಕಿ ನೀವು ನಡೆಸಿದ ಈ ಹತ್ಯೆ-ಅತ್ಯಾಚಾರಗಳನ್ನು ಜಗತ್ತಿಗೆ ತೋರಿಸುತ್ತೇನೆ... ಅವುಗಳನ್ನು ಸಾಕ್ಷಿ ಸಮೇತ ಬರೆದು ಪುಸ್ತಕವನ್ನಾಗಿ ಪ್ರಕಟಿಸಿ ಅದನ್ನು ವಿಶ್ವಸಂಸ್ಥೆಗೆ ತೆಗೆದುಕೊಂಡು ಹೋಗುತ್ತೇನೆ. ಅಂತರ್ರಾಷ್ಟ್ರೀಯ ನ್ಯಾಯಾಲಯದಲ್ಲಿ ನಿಮ್ಮ ವಿರುದ್ಧ ದಾವೆ ಹೂಡಿ ವಿಚಾರಣೆ ನಡೆಸಲು ಒಬ್ಬನೇ ಹೋರಾಟ ನಡೆಸ್ತೀನಿ... ನಿಮ್ಮ ವಿರುದ್ಧ ಮಾತ್ರ ಅಲ್ಲ... ತಮ್ಮ ಉದ್ದೇಶಗಳಿಗಾಗಿ ಸಾಮಾನ್ಯರನ್ನು ಎಳೆದುಕೊಳ್ಳುವವರ ಮೇಲೂ... ಎಲ್ಲವೂ ಶುರುವಾಗುವುದು ಆ ಭೂಮಿಯಿಂದಲೇ... ಯಾರೊಬ್ಬರೂ ಭೂಮಿಯ ಮೇಲೆ ಕಾಲೂರಲೇಬಾರದು, ಗಾಳಿಯಲ್ಲೇ ನಡೆದಾಡುವಂತಹ ತಂತ್ರಜ್ಞಾನವನ್ನು ಕಂಡು ಹಿಡಿಯಲು ಅಲ್ಲಿ ಒತ್ತಾಯಿಸುತ್ತೇನೆ. ಹಾಗೆ ಮಾಡಿದರೆ ನಮ್ಮ ಜನಗಳಿಗೆ ಈ ಭೂಮಿಯ ಮೇಲಿನ ಮೋಹ ಹೋಗುತ್ತದೆ, ಆ ಮುಖೇನ ಸಂಕುಚಿತತೆ ಮಾಯವಾಗುತ್ತದೆ... ನಾನೊಬ್ಬ ಸ್ಟೇಟ್ಸ್‍ಮೆನ್, ಡ್ರೀಮರ್...

ಎಂದು ಹೇಳಿಕೊಳ್ಳುತ್ತಾ ಅವನು ಚಂಗನೆ ಎಗರಿ ಕಡಲ ಮೇಲೆ ನಿಂತು ಬಿರ್ರನೆ ನಡೆಯಲು ಶುರು ಮಾಡಿದ. ಕಡಲ ನೀರಲ್ಲಿ ಅವನ ಹೆಜ್ಜೆಗಳು ಗುಳುಂ ಗುಳುಂ ಎಂದು ಸದ್ದು ಮಾಡುತ್ತಾ ಕರಗಿ ಹೋಗುತ್ತಿದ್ದವು. ಇದ್ಯಾವುದನ್ನು ಗಮನಿಸದೆ ಅವನು ನೆಟ್ಟಗೆ ನೀರ ಮೇಲೆ ಹೆಜ್ಜೆಗಳ ಊರುತ್ತಾ ನೀಳ ಕಡಲಲ್ಲಿ ನಿಲ್ಲದೆ ನಡೆಯುತ್ತಿದ್ದ. ಅವನು ಹೀಗೆ ಬಿರುಸಾಗಿ ಹೋಗುತ್ತಿದ್ದುದು ಆಕಾಶದಲ್ಲಿ ಹಾರುತ್ತಾ ಮೀನುಗಳನ್ನು ಹಿಡಿಯಲು ಹೊಂಚು ಹಾಕುತ್ತಿರುವ ವ್ಯಕ್ತಿಯನ್ನು ಹಿಡಿಯಲು. ಆಕಾಶದಲ್ಲಿ ಮೋಡಗಳು ಕಪ್ಪುಗುಟ್ಟುತ್ತಾ ಭಾರವಾಗತೊಡಗಿದ ಸಮಯ.

ಕಡಲಿಗೂ ಆಕಾಶಕ್ಕೂ ಜೀಕುತ್ತಿದ್ದ ಆ ವ್ಯಕ್ತಿ ಮನುಷ್ಯನೊಬ್ಬ ತನ್ನತ್ತ ಬರುತ್ತಿರುವುದನ್ನು ನೋಡಿ ರೆಕ್ಕೆ ಬಡಿಯುತ್ತಾ ಕ್ರೀಕ್ ಕ್ರೀಕ್ ಎಂದು ಕೂಗಿಕೊಂಡು ತನ್ನ ಬೆಟಾಲಿಯನ್ನಿಗೆ ಸಿಗ್ನಲ್ ಕೊಟ್ಟು ಹಾರುತ್ತಾ ಹೋಗುತ್ತಿರುವುದ ನೋಡಿ ಇವನು ಮತ್ತಷ್ಟು ಆವೇಶದಿಂದ ಆ ವ್ಯಕ್ತಿಯ ಕೆಳಗೆ ಓಡಿದ.

ಹಾರುತ್ತಿರುವ ಆ ವ್ಯಕ್ತಿ ನೋಡನೋಡುತ್ತಿದ್ದಂತೆ ತಟ್ಟನೆ ತನ್ನ ಗೆಳತಿಯಾಗಿ ಬದಲಾದದ್ದನ್ನು ಕಂಡು ಬಹುದಾಶ್ಚರ್ಯಗೊಂಡು ಚಣ ನಿಂತು ಮತ್ತೆ ಓಡ ತೊಡಗಿದ. “ಕಿಳಿ ಕುಟ್ಟಿ, ನಿಲ್ಲುಡಿ, ಕಿಳಿ ಕುಟ್ಟಿ” ಎಂದು ಕೂಗುತ್ತಾ ಓಡುತ್ತಿದ್ದ. ಅವನ ಕಿವಿಗಳೊಳಗೆ ನೀರಿನ ಗುಳುಂ ಸದ್ದುಗಳು ಕ್ರಮೇಣ ಬಾಂಬಿನ ಸದ್ದುಗಳಾಗಿ ಮಾರ್ಪಟ್ಟು ತಲೆ ಗಿರ್ರೆಂದು ಆಕಾಶವ ನೋಡುತ್ತಾ ಅವನು ನೀರಿನ ಮೇಲೆ ಓಡುವಾಗ ಸ್ಟೀಫನ್ ಜ್ವೀಗ್ ನ “ಅಮೋಕ್” ಕಾದಂಬರಿ ಯಾಕೊ ನೆನಪಾಗಿ ಮತ್ತಷ್ಟು ಹುರುಪುಗೊಂಡವನಂತೆ ಬಿರುಸಾಗಿ ಓಡುತ್ತಾ ಜೋರಾಗಿ ಕಿರುಚಿಕೊಳ್ಳತೊಡಗಿದ ...

ಕನಕರಾಜ್ ಆರನಕಟ್ಟೆ

ಸಮಕಾಲೀನ ಕನ್ನಡ ಗದ್ಯ ಸಾಹಿತ್ಯದಲ್ಲಿ ಹೊಸ ಹಾದಿಯನ್ನು ಹಿಡಿದಿರುವ ಕನಕರಾಜ್ ಆರನಕಟ್ಟೆ ಮೂಲತ: ಚಿತ್ರದುರ್ಗ ಜಿಲ್ಲೆಯವರು. ಕರ್ನಾಟಕ, ಭಾರತ ಮೊದಲ್ಗೊಂಡು ಹಲವಾರು ದೇಶ, ಭಾಷೆ, ಸಂಸ್ಕೃತಿಗಳ ಮುಖಾಮುಖಿಯಾಗಿಸಿ ಓದುಗರಿಗೆ ಹೊಸದಾದ ಅನುಭವ ನೀಡುವ ಇವರ ಲೇಖನ ಮತ್ತು ಕಥೆಗಳು ಕನ್ನಡ ನವ್ಯೋತ್ತರ ಸಾಹಿತ್ಯದ ಯುವ ಫಸಲು. ಸಾಹಿತ್ಯ ಮಾತ್ರವಲ್ಲದೆ ಸಿನಿಮಾದಲ್ಲೂ ಆಸಕ್ತಿ ಹೊಂದಿರುವ ಇವರು ಕಿರುಚಿತ್ರಗಳನ್ನು ನಿರ್ದೇಶಿಸುತ್ತಿದ್ದಾರೆ. ಇವರ ಮೊದಲನೇ ಕಿರುಚಿತ್ರ “ಬರ್ಮಾ ಎಕ್ಸ್ ಪ್ರೆಸ್” ಹಲವು ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೆ ಆಯ್ಕೆಗೊಂಡು ನ್ಯೂಯಾರ್ಕ್‍ನ “ಸೌತ್ ಏಷಿಯನ್ ಇಂಟರ್‍ನ್ಯಾಷನಲ್ ಫಿಲ್ಮ್ ಫೆಸ್ಟಿವಲ್” ಮತ್ತು “ರಾಜಸ್ತಾನ ಫಿಲಂ ಫೆಸ್ಟಿವಲ್” ಗಳಲ್ಲಿ ಉತ್ತಮ ಕಿರುಚಿತ್ರ ಎಂಬ ಗೌರವವನ್ನು ಪಡೆದಿದೆ. ತಮಿಳು ಮತ್ತು ಅರೆಬಿಕ್ ಭಾಷೆಗಳಲ್ಲೂ ಇವರು  ಕಿರುಚಿತ್ರಗಳನ್ನು ನಿರ್ದೇಶಿಸುತ್ತಿದ್ದಾರೆ. ಭಾರತ, ಮಾಲ್ಡೀವ್ಸ್, ಲಿಬಿಯಾ ದೇಶಗಳಲ್ಲಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ ಪ್ರಸ್ತುತ ಇವರು ಸೌದಿ ಅರೇಬಿಯಾದ ಪ್ರಿನ್ಸ್ ಸತ್ತಾಮ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯ ಬೋಧಿಸುತ್ತಿದ್ದಾರೆ.

More About Author