Poem

ಮೂರು ಕವಿತೆಗಳು

 "ಕೊಳ ಮತ್ತು ಕಲ್ಲು"

ಕೊಳಕ್ಕೆ ಬಿದ್ದ ಕಲ್ಲು
ವೃತ್ತವಾಗುತ್ತಲೆ, 
ತೀರಕ್ಕೆ ತಲುಪುತ್ತದೆ.
ಈಗ ಕಲ್ಲು, 
ಬಿದ್ದ ಕೊಳದಲ್ಲಿದೆಯೋ!
ಇಲ್ಲ ದಡದಲ್ಲಿ!

*
ತನ್ನ ಸರದಿಗಾಗಿ
ಕಾಯುತ್ತಿರುವ,
ದಡದ ಮತ್ತೊಂದು ಕಲ್ಲಿಗೆ
ಮೂಲೆಗಳಿಂದಲೇ ತುಂಬಿರುವ
ಚೌಕವಾಗುವ ಬಯಕೆ,
ಆದರೆ ಕೊಳಕ್ಕೆ ಬಿದ್ದ ಮೇಲೆ
ವೃತ್ತವಾಗದೆ ಬೇರೆ ಆಯ್ಕೆಗಳಿಲ್ಲ!

*
ಅಣ್ಣಾ ಕಲ್ಲಣ್ಣ ನೋಡೋ
ಜಲದೊಳಗೆ ಮೈದುಂಬಿ ನಗುತ್ತಾಳೆ
ಈ ನೈದಿಲೆ,
ನಾಳೆ ಅದ್ಯಾವ ಕಟುಕನ ಕೈಗೆ ಸಿಕ್ಕು
ಮುರಿದು ಹೋಗುತ್ತಾಳೋ!
ನಮಗೋ ದಡ,
ದಡ ಬಿಟ್ಟರೆ ಕೊಳದ ತಳ!

*
ರೆಕ್ಕೆಯ ಮುರಿದರು 
ಛಲವನು ಬಿಡದೆ
ಹಾರುತ್ತಿದೆ ಬಸವನ ಕುದುರೆ,
ಮುರಿದವರಾರು? 
ಕೊಳದಲಿ ಮಿಂದು
ದಡದಲಿ ನಿಂತು
ಕಂಡವರಾರು?
ನಿಜವದು ತಿಳಿದರು ಹೇಳಲು ಬಾಯಿಗಳಿಲ್ಲ! 

*
ದಡಕ್ಕು ಮತ್ತು ನೀರಿಗೂ 
ಇರುವ ವ್ಯತ್ಯಾಸವನ್ನೇ ಅಳಿಸಿ
ತನ್ನ ಮಾಯಾಜಾಲದಲ್ಲಿ ಬಂಧಿಸುವಳಲ್ಲ
ಈ ಅನುದಿನದ ಅಂತರಗಂಗೆ 
ಇವಳ ನಂಬಿ ಪಾತಳಕ್ಕೆ ಬಿದ್ದವರೆಷ್ಟೋ!

ಲೆಕ್ಕ ಉಂಟೆನೋ ಕಲ್ಲಣ್ಣ?
ನಾವು ಇತ್ತ ತೇಲಲು ಇಲ್ಲ!
ಮುಳುಗಿ ಮೇಲೆ ಏಳಲು ಇಲ್ಲ!

*
ಕೊಳದ ದಡದ ಮೇಲೆ ಬಿದ್ದುಕೊಂಡಿದ್ದ
ದಡೂತಿ ಕಲ್ಲೊಂದು ಸಣ್ಣ ಕಲ್ಲಿಗೆ ಹೇಳಿತು,
ತೇಲಲು ನಮಗೆ ದೇಹ ಹಗುರವಾಗಿಲ್ಲ
ಮುಳುಗಿ ಏಳಲು ನಾವು ನೀರಕ್ಕಿಯಲ್ಲ
ಬಿದ್ದಾಗ ಈಜಿ ದಡ ಸೇರಲು 
ಮೀನುಗಳಂತೆ ನಮಗೆ ರೆಕ್ಕೆಯು ಇಲ್ಲ!
ಇಲ್ಲಿ ಬಿದ್ದಿರಬೇಕು
ಇಲ್ಲ ಯಾವುದೋ ಮಾಂತ್ರಿಕನ ಕೈ 
ತೆಗೆದು ಎಸೆದಾಗ ಕೊಳದ ತಳದಲ್ಲಿರಬೇಕು!

*
ಕೊಳದ
ದಡದ ಬದಿಯಲಿ ತೆವಳುತ್ತಾ ಸಾಗುತ್ತಿದ್ದ
ಎರೆಹುಳುವೊಂದನು ಶಂಖುವಿನ ಹುಳ ಕೇಳಿತ್ತು,
ತೆವಳಿ ತೆವಳಿ ಸವೆಯುವುದು ಎಷ್ಟು ದಿನ
ನಮಗೂ ಪಾದಗಳಿರಬೇಕಿತ್ತು! 
ನಗುತ್ತಲೆ ಹಾಡಿತ್ತು ಎರೆಹುಳು,

ಬಿದ್ದಿರುವ ಕಲ್ಲುಗಳಿಗೆ ಮೀನಾಗುವ ಬಯಕೆ
ಮುಳುಗಿ ಏಳುವ ನೀರಕ್ಕಿಗೆ ನೈದಿಲೆಯಾಗುವ ಬಯಕೆ
ನಗುವ ನೈದಿಲಿಗೆ ತೆವಳಿ ಸಾಗುವ ಹುಳವಾಗುವ ಬಯಕೆ
ನನಗೆ ಹದ್ದಾಗುವ ಬಯಕೆ 
ನಿನಗೆ ಪಾದ ಪಡೆದು ಜಂಗಮನಾಗುವ ಬಯಕೆ
ಈ ಮಾಯೆಗೆ ಕೊನೆಯಿಲ್ಲವೆಂದು!

ಆಡಿಯೋ
ವಿಡಿಯೋ

 'ಪಾತಾಳಗರಡಿ'

ಯಾವ ಕವಿತೆ ಬರೆದು ನೀನು,
ನೂರು ಜನರ ಮುಂದೆ ಓದಿ,
ನೀನು ನಿನ್ನ ದುಃಖವನ್ನು ಹೇಳುವೆ?
ಬರೆದು ಅಳಿಸಿ,
ಅಳಿಸಿ ಬರೆದು,
ತಿದ್ದಿತೀಡಿ ಒಪ್ಪುವಂತೆ,
ಬರೆದ ಕವಿತೆ,
ಯಾವ ರೀತಿ
ನಿಜವ ಜಗಕೆ ತೋರ್ಪುದು?

ಅಳಿಲ ಮೇಲೆ ಮೂರು ಗೆರೆಯ 
ರಾಮ ಬರೆದನಂತೆ!
ಅಂತೆ ನೀನು ಕವಿತೆ ಬರೆದು,
ನೋವ ನೀಗಿ ದುಃಖ ಮರೆವುದುಂಟೆ?

ಕತ್ತಲೊಳಗೆ ಬೆಳಕ ಕಣ್ಣು,
ರೆಪ್ಪೆ ತೆರೆದು,
ನೂರು ಬಣ್ಣ ಹರಡಿ,
ಕಡಲಿನಾಳ ತಲುಪಲಿ.
ಪಾತಾಳಗರಡಿಯಂತೆ,
ನಿನ್ನ ಮನವು ನಿನ್ನ ನೋವ,
ಕವಿತೆಯಲ್ಲಿ ಹಿಡಿದು,
ಮೇಲೆ ಮೇಲೆ ತರಲಿ!

ಆಡಿಯೋ
ವಿಡಿಯೋ

'ಎಲ್ಲಿ ಹೋದಳು ಶಿಂಷೆ?'

ಎಲ್ಲಿ ಹೋದಳು ಶಿಂಷೆ?
ಬೇವ ಘಮವನು ತೊರೆದು!
ಅವಳು ಕೊರೆದು ಕಡೆದ 
ಕಲ್ಲು ಕೂಗಿ ಕರೆದಿದೆ! 

ಕೃಷ್ಣತುಳಸಿಯು ಮೈದುಂಬಿ ನಿಂತಿದೆ! 
ತುಂಬೆಹೂ ಕವಿಗೆ 
ಪಿಸುಗುಡುತ ಕೇಳಿದೆ!  
ಎಲ್ಲಿ ಹೋದಳು ಶಿಂಷೆ?

ನದಿಯು ಬಯಲಾಗಿದೆ!
ಕಪ್ಪೆಚಿಪ್ಪಿಗೂ ದಣಿವಾಗಿ
ಶೋಕಗೀತೆಯ ಹಾಡಿದೆ.
ಎಲ್ಲಿ ಹೋದಳು ಶಿಂಷೆ?

ನೆರೆದು ನಿಂತ ಹೊಂಬಾಳೆಯು!
ತನ್ನ ಚರಮಗೀತೆಯ ತಾನೆ 
ಬರೆದು ಬರೆದು ನೊಂದಿದೆ.
ಎಲ್ಲಿ ಹೋದಳು ಶಿಂಷೆ?

ತೊರೆದು ಹೋದವಳು,
ಕರಗಿ ಹೋದಳೆ?
ಎಲ್ಲಿ ಹೋದಳು ಶಿಂಷೆ?

ಆಡಿಯೋ
ವಿಡಿಯೋ

ಶಂಕರ್ ಸಿಹಿಮೊಗ್ಗೆ

ಮಿಂಚುಳ್ಳಿ ಸಾಹಿತ್ಯ ಪತ್ರಿಕೆಯ ಮುಖ್ಯ ಸಂಪಾದಕರಾದ ಶಂಕರ್ ಸಿಹಿಮೊಗ್ಗೆಯವರು ಹುಟ್ಟಿದ್ದು ಮಲೆನಾಡು ಶಿವಮೊಗ್ಗದಲ್ಲಿ. ತಂದೆ ಗೋವಿಂದರಾಜು, ತಾಯಿ ನಾಗಮ್ಮನವರು. ಬಾಳ ಗೆಳತಿ ಅನುಷಾ ಹೆಗ್ಡೆಯವರೊಂದಿಗೆ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ. 

ಜವಹರಲಾಲ್ ನೆಹರು ಇಂಜಿನಿಯರಿಂಗ್ ಕಾಲೇಜಿನಲ್ಲಿ ಟೆಲಿಕಮ್ಯೂನಿಕೇಷನ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿ, ಖಾಸಗಿ ಕಂಪೆನಿಯೊಂದರಲ್ಲಿ ಸೀನಿಯರ್ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಓದು, ಬರವಣಿಗೆ, ಚಾರಣ ಮತ್ತು ನಾಟಕ ಮುಂತಾದ ಸೃಜನಶೀಲ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಂಜಿನಿಯರಿಂಗ್ ಓದುವಾಗಲೇ ಡಿ.ವಿ.ಎಸ್. ರಂಗಶಿಕ್ಷಣ ಕೇಂದ್ರದಲ್ಲಿ ಒಂದು ವರ್ಷದ ರಂಗಭೂಮಿ ತರಬೇತಿಯನ್ನು ಪಡೆದುಕೊಂಡು ಈವರೆಗೆ ಸುಮಾರು ಹತ್ತಕ್ಕು ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅವುಗಳಲ್ಲಿ ಮ್ಯಾಕ್ ಬೆತ್, ಮಹಾಬಲಯ್ಯನ ಕೋಟು, ವಸುದೈವ ಕುಟುಂಬಕಂ, ಮತ್ತು ದಕ್ಷಯಜ್ಞ ಮುಖ್ಯವಾದವುಗಳು.

ಕೆಲಸದ ನಡುವೆಯೂ ಸಾಹಿತ್ಯ ರಂಗಭೂಮಿಯತ್ತ ಒಲವಿಟ್ಟುಕೊಂಡಿರುವ ಕಾರಣ ಇವರು ಬೆಂಗಳೂರಿನಲ್ಲಿ ಸ್ನೇಹಿತರೊಡಗೂಡಿ 'ಚೈತ್ರಾಕ್ಷಿ ರಂಗಭೂಮಿ' ಎಂಬ ರಂಗತಂಡವನ್ನು ಕಟ್ಟಿಕೊಂಡಿದ್ದಾರೆ. ಈ ರಂಗತಂಡದ ಮೂಲಕ ಇದುವರೆಗೂ ಜಲಗಾರ,  ಹೆಣದ ಬಟ್ಟೆ ಮತ್ತು ಅನಿಮಲ್ ಫಾರ್ಮ್ ಎಂಬ ಮೂರು ನಾಟಕಗಳನ್ನು ಪ್ರದರ್ಶಿಸಲಾಗಿದೆ. ಕಾಲೇಜು ಓದುವ ದಿನಗಳಲ್ಲಿ ಸಾಗರದ ಹೆಗ್ಗೋಡಿನ 'ನೀನಾಸಂ ಶಿಬಿರ'ಗಳಲ್ಲಿ ತಪ್ಪದೆ ಭಾಗವಹಿಸುತ್ತಿದ್ದೆ, ಶಿಬಿರಗಳಲ್ಲಿ ನಡೆಯುತ್ತಿದ್ದ ವಿಮರ್ಶೆ ಸಾಹಿತ್ಯ ಸಂವಾದದಂತಹ ಕಾರ್ಯಕ್ರಮಗಳು ನನ್ನ ಕಲಿಕೆಯಲ್ಲಿ ಹೆಚ್ಚು ಪ್ರಭಾವ ಬೀರಿವೆ ಎನ್ನುತ್ತಾರೆ.

ಇವರ ಮೊದಲ ಕವನ ಸಂಕಲನ 'ಕುದುರೆಯ ವ್ಯಥೆ' 2015 ರಲ್ಲಿ ಪ್ರಕಟಣೆಗೊಂಡಿದೆ. ರಾಜಕಾರಣದ ಬಗ್ಗೆ ಸ್ಪಷ್ಟ ನಿಲುವುಗಳಿಟ್ಟುಕೊಂಡಿರುವ ಇವರು ಸಾಹಿತ್ಯ ನನ್ನ ನೆಚ್ಚಿನ ಹವ್ಯಾಸ ಎನ್ನುತ್ತಾರೆ, ಇದುವರೆಗೂ ಇವರ ಪದ್ಯ, ಕತೆ, ನಾಟಕ ವಿಮರ್ಶೆ ಮತ್ತು ಲೇಖನಗಳನ್ನು ವಿಜಯ ಕರ್ನಾಟಕ, ಪ್ರಜಾವಾಣಿ, ವಾರ್ತಾ ಭಾರತಿ, ಅವಧಿ, ಬುಕ್ ಬ್ರಹ್ಮ, ಶಿವಮೊಗ್ಗ ಟೈಮ್ಸ್, ಮಾಸ ಪತ್ರಿಕೆಗಳಾದ ಸುಧಾ, ನಿಮ್ಮೆಲ್ಲರ ಮಾನಸ ಮತ್ತು ಸಖಿ ಪ್ರಕಟಿಸಿವೆ. 'ಬಾನ ಬಯಲ ಚುಕ್ಕಿಗಳು', 'ಕಾವ್ಯಯಾನ', 'ಕಿರಂ ಹೊಸ ಕವಿತೆ ಸಂಪುಟ 1,2,2', 'ವಿಶ್ವಶಕ್ತಿ - 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ', ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿತ 'ಕವಿತೆ- 2021' ಮತ್ತು 'ಕವಿತೆ- 2022' ಸಂಪಾದಿತ ಕೃತಿಗಳಲ್ಲಿ ಇವರ ಕವಿತೆಗಳು ಪ್ರಕಟಣೆಗೊಂಡಿವೆ. ‘ಗಾಂಧಿಯಾನ ಟ್ರಸ್ಟ್ ಮತ್ತು ಭಾರತೀಯ ವಿದ್ಯಾಭವನ’ ಪ್ರಕಟಿಸಿದ ‘ಕಿರಿಯರು ಕಂಡ ಗಾಂಧಿ’ ಸಂಪಾದಿತ ಕೃತಿಯಲ್ಲಿ ಇವರ ‘ನಮ್ಮಳೊಗೊಬ್ಬ ಗಾಂಧಿ’ ಲೇಖನ ಪ್ರಕಟವಾಗಿದೆ. ಪ್ರಜಾವಾಣಿಯಲ್ಲಿ ಪ್ರಕಟಗೊಂಡಿದ್ದ ಇವರ 'ಹೊಳಲೂರಿನ ಹಾಸ್ಟೆಲ್ ಹುಡುಗರು' ಕತೆಯು ಬೆಂಗಳೂರು ವಿಶ್ವವಿದ್ಯಾಲಯದ ಬಿ.ವಿ.ಎ. ಮತ್ತು ಬಿ.ಎಫ್.ಎ. ಪದವಿಗೆ ಕನ್ನಡ ಭಾಷೆಯ ಪಠ್ಯವಾಗಿದೆ. ಇವರ 'ಇರುವೆ ಮತ್ತು ಗೋಡೆ' ಕವಿತೆಗಳ ಹಸ್ತಪ್ರತಿಯು 2023ನೇ ಸಾಲಿನ ಕಡೆಂಗೋಡ್ಲು ಕಾವ್ಯ ಪುರಸ್ಕಾರ ಪಡೆದುಕೊಂಡಿದೆ.

ಮಿಂಚುಳ್ಳಿ ಪ್ರಕಾಶನ ಮತ್ತು ಮಿಂಚುಳ್ಳಿ ಕಾವ್ಯ ಬಳಗದ ಮೂಲಕ ಸಾಹಿತ್ಯಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಕವಿಗೋಷ್ಠಿ ಮತ್ತು ಕಾವ್ಯ ಸ್ಪರ್ಧೆಗಳನ್ನು ಏರ್ಪಡಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಮಿಂಚುಳ್ಳಿ ಬಳಗದ ಮೂಲಕ 'ಮಿಂಚುಳ್ಳಿ ಕವಿಗೋಷ್ಠಿ', 'ಪಳಗನ್ನಡ ಓದು' ಮತ್ತು ನಿರಂತರ ಏಳುದಿನಗಳ 'ಬರಗೂರು ಕಾವ್ಯ ಸಪ್ತಾಹ' ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಜೊತೆಗೆ ಬಳಗದ ಮೂಲಕ 'ಕಾಡುವ ಕಿರಂ 2020' ಆನ್ಲೈನ್ ಕಾರ್ಯಕ್ರಮಕ್ಕೆ ತಾಂತ್ರಿಕ ಸಹಾಯ ನೀಡಿದ್ದಾರೆ.‌ ಹಿರಿಯ ಕವಿ 'ಗೋಪಾಲ ಕೃಷ್ಣ ಅಡಿಗ'ರಿಗೆ ನೂರು ವಸಂತಗಳು ತುಂಬಿದ ಸಂದರ್ಭದಲ್ಲಿ ಗೆಳೆಯರು ಸೇರಿ "ನೂರು ಅಡಿ ನೂರು ಮಡಿ" ಎಂಬ ಫೇಸ್‌ಬುಕ್‌ ಲೈವ್ ಕಾರ್ಯಕ್ರಮ ಏರ್ಪಡಿಸಿ ಒಂದೇ ಸಮಯದಲ್ಲಿ ನೂರು ಜನ ಯುವಕವಿಗಳು ಅಡಿಗರ ಕವಿತೆಗಳನ್ನು ವಾಚನ ಮಾಡಿ ಕಾವ್ಯ ನಮನ ಸಲ್ಲಿಸಿದ್ದಾರೆ. ಆ ಮೂಲಕ ಕನ್ನಡ ಸಾಹಿತ್ಯ ವಲಯದೊಂದಿಗೆ ನಂಟು ಬೆಸೆಯುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ. 

More About Author