Poem

ನಮ್ಮೂರಿನ ಚಂದ್ರಮತಿಯರು

ತಲೆತುಂಬಾ ತಾವರೆ ಮೊಗ್ಗುಗಳ ಮುಡಿದು
ಬಟ್ಟೆಯೊಗೆಯಲು ಕೆರೆ
ಕೋಡಿಯ ಬಳಿ ಬಂದಾಗ,
ಸತ್ಯಹರಿಶ್ಚಂದ್ರರ ಕತೆಗಳ
ನೀವೊಮ್ಮೆ ಕೇಳಬೇಕು;
ಮೂಗುತಿಗಳ ಮುರಿಸಿಕೊಂಡವರು;
ಜುಟ್ಟು ಹಿಡಿದು ಗದ್ದವ ಕಿತ್ತಿಸಿಕೊಂಡವರು,
ಕತ್ತಿನಶಿರಕ್ಕೆ 'ಧುಮ್ಮನೇ' ತಟ್ಟಿಸಿಕೊಂಡವರು,
ಕುಡಿದ ಗಂಡನ ವಿಕೃತಕಾಮಕ್ಕೆ ಮೊಲೆಗಳ
ಚಿವುಟಿಸಿಕೊಂಡವರು,
ತುಟಿ ತುಟಿಗಳ ಕಚ್ಚಿ ಪರಚಿ ಮುಖ ಊದಿಸಿಕೊಂಡರ -
ಒಮ್ಮೆ ಮಾತನಾಡಿಸಬೇಕು, ಅವರು ಹೇಳುವ ಮಾತುಗಳ ಕೇಳಬೇಕು;
ಇವರೆ ನಮ್ಮೂರಿನ ಚಂದ್ರಮತಿಯರು.


ಸೂರ್ಯಮತಿಯೆಂಬರು ಇದ್ದಾರೆಯೇ ಎಂದರೆ
ಇರಬಹುದು ಬಿಡಿ ಎಂದು ನುಲಿಯುವ
ಅಸಾಂಗತ್ಯವ ಹೇಳುವವರು!
ಒಳಗೆ ನಾದಿನಿ ಅತ್ತಿಗೆ ಅತ್ತೆಯರು ಇದ್ದಾರೆ
ಆಮೇಲೆ ಸಿಗುವೆನು,
ಗದ್ದೆಯಿಂದ ಮೈದುನ ,ಮಾವಂದಿರು ಬಂದರೆಂದು
ಸೆರಗನ್ನು ಕವಚಿಕೊಂಡು ಕದದ ಹಿಂದೆ
ನಡುಗುವವರು -
ನಮ್ಮೂರಿನ ಚಂದ್ರಮತಿಯರು!


ಕೆನ್ನೆಗೆ ಗೆಜ್ಜೆಮಾಟಿಗಳ ಜೋಡಿಸಿಕೊಂಡವರು,
ಕಾಲ್ಗಡಗ ಕೈಗಡಗಗಳ ತೊಟ್ಟು ಗಂಡನ ಮುಂದೆ
ತಕಥೈ ತಕಥೈ! ಎಂದು ಕುಣಿಯುವವರು,
ಮುದ್ದೆಯ ನೊರೆ ಎಸರು ಉಕ್ಕುವಾಗ
ಹೊರಗೆ ಗೆಳೆತಿಯರ ಜೊತೆ ಕೂಡಿ ನಗುವವರು,

ಹೊಡೆದ ಮುದ್ದೆಮಡಕೆಗಳ ದಂಡಕ್ಕೆ
ತವರಿನಮನೆ ಕಡೆ ಹೋಗುವವರು -
ಇವರು ನಮ್ಮೂರಿನ ಚಂದ್ರಮತಿಯರು!


ಎತ್ತುಗಳಿಗೆ ಹುಲ್ಲು ನೀರಿಟ್ಟು
ಅತ್ತೆಗೆ ಸ್ನಾನ ಮಾಡಿಸಿ ಮಾವನಿಗೆ ಬಿಸಿಮುದ್ದೆಕೊಟ್ಟು

ಮಾರಿಗುಡಿಗೆ ಮೊಸರನ್ನ ಆರತಿಯೆತ್ತಿ -
ಹೊಲಗದ್ದೆಗಳ ಕಡೆ ಹೊರಡುವವರು
ನಮ್ಮೂರಿನ ಚಂದ್ರಮತಿಯರು!

'ಹ್' 'ಹ್ಮು' ಎಂದೆಲ್ಲ ಕ್ಯಾತೆ ತೆಗೆಯುವುದಿಲ್ಲ
ಗಂಡ ಹೊಡೆದರು ' ಹೊಡೆಯಲಿ ಬಿಡಿ,
ಗಂಡ ತಾನೇ, ಅವನು ಕುಡಿದು ಬಂದಾಗ ನಾನು ಇಕ್ಕಡಿಸುವೆ' ಎಂದು ಗದ್ದಗಳರಳಿಸಿ
ನಗುವವರು-
ನಮ್ಮೂರಿನ ಚಂದ್ರಮತಿಯರು!

ಆಡಿಯೋ
ವಿಡಿಯೋ

ಪಟೇಲ ಸತ್ತ!

ಅಯ್ಯೋ! ಪಟೇಲ ಸತ್ತನಂತೆ
ಮಡದಿ ಮಕ್ಕಳ ತೊರೆದು ಹೋಗೆ ಬಿಟ್ಟನಂತೆ!
ರಾಮರಾಮ!
ಗೂಡುಕಟ್ಟಿದ ಹಕ್ಕಿಗಳಿಗೆ ಕೂಳಿಲ್ಲ
ಹಾಲಾಗಿರುವ ಬತ್ತದ ತೆನೆಗಳಿಗೆ ಕಾಯಿಯಾಗುವ
ತವಕ ತಿಳಿಯಲಿಲ್ಲ
ತೊಗರಿ ಹೊಲದ ಮೊಲಗಳಿಗೆ ಹುಲ್ಲಿಲ್ಲ ನೀರಿಲ್ಲ,
ಹೋಗೆ ಬಿಟ್ಟನಲ್ಲ ಈ ಪಟೇಲ!

ಬೆಟ್ಟಕ್ಕೆ ದಾರಿಯೇ ಕಾಣುತಿಲ್ಲ
ತುಂಬಿದ ಕೆರೆಗೆ ತೂಬು ಕೀಳಲಿಲ್ಲ
ಊರಮುಂದೆ ದೀಪಹಚ್ಚಿ ಯಾರೂ
ದೀಪಾವಳಿಯ ಮಾಡಲಿಲ್ಲ!
ಕೋಣ ಕಡಿದು ಮಾರಿಹಬ್ಬವ ಕೂಡ
ಆಚರಿಸಲಿಲ್ಲ!
ಸೋಮಕುಣಿತ,ಪಟಕುಣಿತ ಹೆಜ್ಜೆಕುಣಿತ
ಹರಿಸೇವೆ ಗಿರಿಸೇವೆಗಳ ಮಾಡಲೇ ಇಲ್ಲ
ಪಟೇಲ ಸತ್ತೆ ಬಿಟ್ಟ!

ಅಲಲೇ, ಅಲಲೇ ಎಂದೆಲ್ಲ ಬರುವ ಜನರ
ದಂಡು-
ಅವನ ಹೆಣಕ್ಕೆ ಒಂದಿಡಿ ಮಣ್ಣು ಸುರಿದು
ಹೋದೆಯಾ? ಮತ್ತೆ ಬರಬೇಡ
ಎಂದು ಕೋಳಿಪಿಳ್ಳೆಯ ನೀವಿಸಿ ಎಸೆದರು
ಅವರ ದಣಿವು ಇಂಗಲೇ ಇಲ್ಲ!
ಪಟೇಲ ಸತ್ತು ಹೋದ!

ಆಡಿಯೋ
ವಿಡಿಯೋ

ಕೀರ್ತಿ ಪಿ. (ಸೂರ್ಯ ಕೀರ್ತಿ)

ಕೀರ್ತಿ ಪಿ. ಅವರು ಮೂಲತಃ ತುಮಕೂರಿನವರು. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಬೆಟ್ಟಹಳ್ಳಿ ಅವರ ಹುಟ್ಟೂರು.  'ಸೂರ್ಯಕೀರ್ತಿ' ಎನ್ನುವ  ಕಾವ್ಯನಾಮದ ಮೂಲಕ ಬರವಣಿಗೆಯಲ್ಲಿ ತೊಡಗಿರುವ ಕೀರ್ತಿ, ಕನ್ನಡದ ಭರವಸೆಯ ಕವಿ. ಗ್ರಾಮೀಣ ಬದುಕಿನ ವಿಸ್ತಾರಗಳನ್ನುಅವರ ಬರಹಗಳಲ್ಲಿ ಕಾಣಬಹುದು. ಬೆಂಗಳೂರು ವಿಶ್ವವಿದ್ಯಾಲಯದಿಂದ ವಾಣಿಜ್ಯಶಾಸ್ತ್ರದಲ್ಲಿ  ಸ್ನಾತಕೋತ್ತರ ಪದವಿಯನ್ನು ( ಎಂ.ಕಾಂ) ಉನ್ನತ ಶ್ರೇಣಿಯಲ್ಲಿ ಪಡೆದಿರುವ ಕೀರ್ತಿ, ಸಾಹಿತ್ಯದ ಆಸಕ್ತಿಯಿಂದ ಈಗ ಕನ್ನಡ ಎಂ.ಎ ಓದುತ್ತಿದ್ದಾರೆ. ಜೊತೆಗೆ ಹಲವು ರಾಷ್ಟ್ರೀಯ ಮತ್ತು ಅಂತರ  ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. 

2017 ನೇ ಸಾಲಿನಲ್ಲಿ ಕರ್ನಾಟಕ ಸರಕಾರ, ಕನ್ನಡ ಪುಸ್ತಕ ಪ್ರಾಧಿಕಾರದಿಂದ " ಚೈತ್ರಾಕ್ಷಿ" ಎಂಬ ಕವಿತಾ ಸಂಕಲನ ಧನ ಸಹಾಯ ಪಡೆದುಕೊಂಡು ಲೋಕಾರ್ಪಣೆಯಾಗಿದೆ. ಈ ಪುಸ್ತಕಕ್ಕೆ 2018ನೇ ಸಾಲಿನ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಕೊಡುವ "ಸುಮನ್ ಸೋಮಶೇಖರ ಸೋಮವಾರ ಪೇಟೆ ದತ್ತಿ" ಪ್ರಶಸ್ತಿ ಲಭಿಸಿದೆ.

ಇವರ ನಿರ್ದೇಶನದ ಎರಡು ನಾಟಕಗಳು " ಜಲಗಾರ ಮತ್ತು ಹೆಣದ ಬಟ್ಟೆ" ಯಶಸ್ವಿಯಾಗಿ ಪ್ರದರ್ಶನಗೊಂಡಿವೆ. ಕತೆ, ಪ್ರಬಂಧ, ಕಾವ್ಯ,ವಿಮರ್ಶೆ ಹೀಗೆ ಸಾಹಿತ್ಯದ ಹಲವು ವಿಭಾಗಗಳಲ್ಲಿ ಕೃಷಿಯಲ್ಲಿ ತೊಡಗಿರುವ ಕೀರ್ತಿ, ಸಂಸ್ಕೃತ ಕಾವ್ಯಗಳ ಓದು, ಬೌದ್ಧ ಸಾಹಿತ್ಯ, ಶಾಸನ ಮತ್ತು ಪುರಾತತ್ವ, ಹಳಗನ್ನಡ ಓದು ಮತ್ತು ವ್ಯಾಕರಣ, ರಂಗಭೂಮಿ ಮುಂತಾದ ಕ್ಷೇತ್ರಗಳಲ್ಲಿ ಆಸಕ್ತಿಯೊಂದಿದ್ದಾರೆ.

ಇವರ ವಿಮರ್ಶೆ, ಕವಿತೆ, ಪ್ರಬಂಧ, ಕತೆಗಳು ವಿಜಯಕರ್ನಾಟಕ', ವಾರ್ತಾಭಾರತಿ, ತರಂಗ, ಸುಧಾ,ಅವಧಿ ಸೇರಿದಂತೆ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

More About Author

Comments

ಸ್ಪರ್ಧೆಯ ಕತೆಗಳು
ಸ್ಪರ್ಧೆಯ ಕವಿತೆಗಳು
Magazine
With us

Top News
Exclusive
Top Events