Poem

ನನ್ನೊಲವೇ…

ಖಾಲಿ ಮನಸಿನೊಳಗೆ ಹರಿದಾಡೊ ಭಾವಗೀತೆ
ಎದೆಯ ಹಾಳೆಯಲ್ಲಿ ನಿತ್ಯ ನಿನ್ನದೇನೆ ಪ್ರೇಮ ಕವಿತೆ |ಪ|

ಎಷ್ಟು ಬರೆದರೂ ಅಂತ್ಯ ಕಾಣದ ಸಾಲು
ಜಗವ ಮರೆಸಿದೆ ಕಾಡೋ ನೆನಪುಗಳ ಅಮಲು

ಮತ್ತೇರಿಸಿದೆ ಹಳೆ ಶೀಶೆಯ ಮದನಾರಿ ಮದಿರೆ
ಕುಡಿಸಿ ತಲೆಕೆಡಿಸಿ ಮರೆಸಿದೆ ನನ್ನ ಸವಿ ನಿದಿರೆ

ಬರಲಾರೆಯಾ ಸವಿಗನಸಿನ ನಿಶೆಯಾಗಿ
ಮುಂಜಾವಲಿ ನೀ ಚೈತನ್ಯದ ಉಷೆಯಾಗಿ

ನೀ ಕುಂಚದೊಳಗೆ ಜಿನುಗೋ ಬಣ್ಣವಾದೆ
ನನ್ನೆದೆಯ ಪಟದೊಳಗೆ ಅಚ್ಚಾದ ಚಿತ್ರವಾದೆ

ಹೃದಯ ಸಾಗರದಿ ಭೋರ್ಗರೆದಿದೆ ಪ್ರೇಮ ರುಧಿರ
ಕಾಲ್ಗೆಜ್ಜೆ ಸದ್ದಿಗೆ ಎದೆ ಕಂಪಸಿ ಅಲೆಗಳ ಅಬ್ಬರ

ನಾಜೂಕು ಹೃದಯ ಸಹಿಸದೀ ತಲ್ಲಣ
ನೀ ಜೊತೆಯಿರಲು ಹೊಂಗನಸುಗಳ ರಿಂಗಣ

ನಿಲುಕದ ನಕ್ಷತ್ರ ಹಿಡಿವ ಖಯಾಲಿ
ಸಿಗದ ಹುಳಿ ದ್ರಾಕ್ಷಿ ಬಯಕೆ ಮನದಲಿ

ಸೆಳೆತ ತುಡಿತ ಮಿಡಿತ ಬಯಕೆಗಳ ಹಾವಳಿ
ಏನಾಗುತಿದೆ ಹರೆಯವೇ ನೀ ಬಲು ಪೋಲಿ

ಸಿಗಲಾರೆಯಾ ಓ ನನ್ನ ಜೀವಾಮೃತವೇ
ನಿನ್ನ ಸಖ್ಯ ಸಿಗಲು ನಾನೆಂದೂ ಚಿರಾಯುವೇ

ಖಾಲಿ ಮನಸಿನೊಳಗೆ ಹರಿದಾಡೊ ಭಾವಗೀತೆ
ಎದೆಯ ಹಾಳೆಯಲ್ಲಿ ನಿತ್ಯ ನಿನ್ನದೇನೆ ಪ್ರೇಮ ಕವಿತೆ...

ರವಿನಾಗ್‌ ತಾಳ್ಯ

ರವಿನಾಗ್‌ ತಾಳ್ಯ ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಗ್ರಾಮದವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ. ಹೊಳಲ್ಕೆರೆ ಪುರಸಭಾ ಕಾರ್ಯಾಲಯದಲ್ಲಿ ಜೂನಿಯರ್ ಪ್ರೋಗ್ರಾಮರ್ ಆಗಿ ಗುತ್ತಿಗೆ ಆಧಾರದ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ. ಆನ್ ಲೈನ್ ಕವಿಗೋಷ್ಠಿಗಳಲ್ಲಿ ಹಾಗೂ ವಿವಿಧ ಸಾಮಾಜಿಕ ಜಾಲತಾಣಗಳು ಆಯೋಜಿಸುವ ಸಾಹಿತ್ಯಕ ಗೋಷ್ಠಿಗಳನ್ನು ಪಾಲ್ಗೊಳ್ಳುವುದು ಅವರ ಹವ್ಯಾಸ. ಅವರ ಕವನಗಳು  ನಾಡಿನ ವಿವಿಧ ಪತ್ರಿಕೆಗಳಲ್ಲಿ, ಜಾಲತಾಣಗಳಲ್ಲಿ ಪ್ರಕಟಗೊಂಡಿವೆ. 

More About Author