Poem

ನೆಲದ ನಡುಗೆಯ ನುಡಿ

ಕತ್ತಲು ಕಾಣದ ಕೋಣೆಗೆ ಎತ್ತಲದೊ ಕರಿ ಮೋಡ
ಇದ್ದೊಂದ ಬಾಗಲಿಗೆ ಮೂರು ಕೊಂಡಿ ಸುತ್ತಲೂ ಕಿಟಕಿಗಳದೆ ಕಣ್ಣು
ಅಕ್ಕಪಕ್ಕದ ಗಿಡಗಳಿಗೆ ಹಸಿರೆಂಬ ಹರೆಯ ಕಳೆದು ಮುಪ್ಪೆಂಬ ಹಳದಿ ಆವರಿಸುವ
ಕಾಲವದು

ಅಟ್ಟದಮನಿ ತೊಲಬಾಗಲಿಗೆ
ಕಟ್ಟಿದ ಜೋಳದ ತೆನೆ ಗುಚ್ಛ
ಬಿಟ್ಟಿ ದುಡುಮೆಯ ಫಲವಿವು ದೋತರಕ್ಕೊಂದು ಗಟ್ಟಿ ಕಚ್ಛೆ
ಉಟ್ಟ ಅಂಗಿಗೆ ಆಕಾಶದ ಚುಕ್ಕೆಗಳ ತ್ಯಾಪೆ

ಸತ್ತು ಹೋಗಿದೆ ಸತ್ಯ ಹೊಟ್ಟೆಯ ಶಕ್ತಿ ರಟ್ಟೆಗೆ ಬರುಹೊತ್ತಿಗೆ
ಬಚ್ಚಿಟ್ಟ ಬುತ್ತಿಯ ಒಂದೊತ್ತು ಊಟ
ಕಂಕಳಲಿರಿವ ಮಕ್ಕಳಿಗೆ
ಗುಟುಕು ನೀರು ಇವರ ಜಠರಕ್ಕೆ

ಲೋಕ ಕಾಯಕದ ಪಾಪಕ್ಕೆ
ತೇಕುವ ಜೋಕುಮಾರರು
ಕುಲವೆಂಬ ಮಲಕ್ಕೆ ಹಂಟಿದ ಹುಳಗಳಿವೆ
ನೂಕಾಟ ನಾಟಕದ ಪಾತ್ರಕ್ಕೆ ತೆರೆಮೇಲೆ ಅರೆಜೀವ ಅದರ ಹಿಂದೆ ಬರಿ ದೇಹ

ಸಂದಕಿನೊಳಗಿದ್ದ ಘಳಿಗಿ ಮುರಿಯದ ಸೀರಿ ಗಂಟೆಗೊಮ್ಮೆ ಗಲಿಬಿಲಿ ಎಂದೊಮ್ಮೆ
ಬರುವದು ಬೀದಿಗೆ ನೆಲದ ನಡೆಗೆ ನುಡಿ ಬರೆವ ಋತುಮಾನವದು

ಪಿ. ನಂದಕುಮಾರ

ಪಿ. ನಂದಕುಮಾರ್

ಪಿ. ನಂದಕುಮಾರ್ ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕಕ್ಕೇರಾ ಗ್ರಾಮದವರು. ಸದ್ಯ ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಕಾವ್ಯ, ಕಥೆ, ವಿಮರ್ಶೆ, ಸಂಶೋಧನೆಗಳಲ್ಲಿ ಆಸಕ್ತಿ ಹೊಂದಿರುವ ಅವರ ಲೇಖನ, ವಿಮರ್ಶೆ, ಕವಿತೆಗಳು ಬುಕ್ ಬ್ರಹ್ಮ ಸೇರಿದಂತೆ ಹಲವು ಸಾಹಿತ್ಯಿಕ ವೆಬ್ ಸೈಟ್, ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 

More About Author