Poem

ನಿಲ್ಲದ ಘಳಿಗೆ

ಆಕೆಯ ಹೊಟ್ಟೆ ಸಿಡಿದಿತ್ತು
ಜ್ವಾಲಾಮುಖಿಯ ಲಾವಾದಂತೆ
ಕಣ್ಣೀರ ಹನಿ ಅಂಬುಧಿಗೆ
ಸವಾಲೊಡ್ಡಿದ ದುಃಖ
ಪಾತಾಳಕ್ಕೂ ತಲುಪಿದ ನಿಟ್ಟುಸಿರು
ಕೇಳಿಸಿತು ದೇವ ದೇವತೆಗಳಿಗೂ

ಬಂದ ಬಹುಸಂಖ್ಯಾತ ಆತ್ಮೀಯರೂ
ಕೈ ಚೆಲ್ಲಿ ಸಮಾಧಾನಿಸಲು ಸೋತು
ಕಣ್ಣೀರೊಂದಿಗೆ ತಮ್ಮ ಕಣ್ಣೀರ ಸೇರಿಸಿ
ದಿಗಿಲುಗೊಂಡು ನೋಡುವುದು
ಉಳಿದ ಏಕೈಕ ಸಂಭವ
ಸಾಧ್ಯತೆಗಳು ಅಸಾಧ್ಯ ಆದ ಘಳಿಗೆ

ಇನನ ಸುಪ್ರಭಾತದೊಂದಿಗೆ
ಕಣ್ಣ ಬಿಟ್ಟ ಮಗು, ಮುಗಿಸಿ
ನಿತ್ಯಕರ್ಮ, ಅರ್ಧ ಗ್ಲಾಸ್ ಕ್ಷೀರ
ಕಣ್ಣು ಮಿಟುಕಿಸುತ್ತ ಅವಸರದಿ ಕುಡಿದು
ಡಬ್ಬಿ, ನೀರು ಬ್ಯಾಗ್ ಹೊತ್ತು
ಇಷ್ಟಗಲದ ಕುಸುಮ ನಗೆ ಅಂಗಳದಲ್ಲಿ ಚೆಲ್ಲಿ
ಅಪ್ಪನ ಜೊತೆ ಗಾಡಿಯ ಮೇಲೆ

ದಿನವೂ ಕರೆಯಲು ಬರುವ ಅಪ್ಪ
ಅದ್ಹೇಗೆ ಬೇರೆ ಕಂಡ ಶಾಲಾ ನಂತರ
ಆಚೆ ಇದ್ದ ಅಪ್ಪನನ್ನು ಕಂಡಿದ್ದೆ
ಒಮ್ಮೆಲೇ ಓಡಿ ವ್ಯಸ್ತ ರಸ್ತೆ
ಯಮರೂಪಿ ಕಾರ್ ಗಾಲಿಯ ಕೆಳಗೆ
ಹೌಹಾರಿ ಸ್ತಬ್ಧ ನಿಂತ ಅಪ್ಪ

ಈಗ ಬರುವ ಪುಟ್ಟ ಮಗ
ಕಾದ ತಾಯಿಗೆ ಕಳೇಬರದ ದರುಶನ
ಗುಂಡು ಹೊಕ್ಕ ಸ್ಥಿತಿಯ ಆಕೆ
ಎವೆಯಿಕ್ಕದೇ ಎರಡೂ ಕೈಯಲ್ಲಿ
ಹಿಡಿದು, ಮಗು ಹುಟ್ಟಿದ ಕ್ಷಣ
ಸಂಭ್ರಮ ಅರೆಗಳಿಗೆ ನೆನಪಿಸಿಕೊಂಡು

- ಮಾಲಾ.ಮ.ಅಕ್ಕಿಶೆಟ್ಟಿ, ಬೆಳಗಾವಿ.

ಮಾಲಾ ಮ. ಅಕ್ಕಿಶೆಟ್ಟಿ

ಕವಯತ್ರಿ ಮಾಲಾ ಮ. ಅಕ್ಕಿಶೆಟ್ಟಿ ಮೂಲತಃ ಬೆಳಗಾವಿಯವರು. ವೃತ್ತಿಯಿಂದ ಉಪನ್ಯಾಸಕಿ. ಅವರ ಹಲವಾರು ಕವಿತೆ, ಕತೆ, ಲೇಖನ, ಮಕ್ಕಳ ಕತೆ, ಲಲಿತ ಪ್ರಬಂಧಗ ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ.

More About Author