Story

ಒಮಲ್ತಿ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನವರಾದ ಅಂಜನಾ ಹೆಗಡೆ ಹತ್ತು ವರ್ಷಗಳ ಕಾಲ ಬಿಪಿಓ ಒಂದರಲ್ಲಿ ಕೆಲಸ ಮಾಡಿದ್ದು, ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಒಮಲ್ತಿ ಕತೆ ನಿಮ್ಮ ಓದಿಗಾಗಿ

ಒಮಲ್ತಿ ಇರದೇ ಇದ್ದಿದ್ದರೆ ಈ ಕಥೆಯೂ ಇರುತ್ತಿರಲಿಲ್ಲ. ಒಮಲ್ತಿಯೇ ನಮ್ಮ ಕಥಾನಾಯಕಿ ಯಾಕಾಗಬೇಕು ಎನ್ನುವ ಪ್ರಶ್ನೆಗೆ ನನ್ನಲ್ಲೂ ಉತ್ತರವಿಲ್ಲ. ನನ್ನ ಕಣ್ಣಿಗೆ ಒಮ್ಮೆಯೂ ಕಾಣಿಸಿಕೊಳ್ಳದೇ ನೆನಪಿನಲ್ಲಿ ಮಾತ್ರ ಉಳಿದು ಹೋದ ಒಮಲ್ತಿಯ ಬಗ್ಗೆ ನನಗೆ ಅಪಾರವಾದ ಆಸಕ್ತಿ, ಗೌರವ ಎರಡೂ ಇವೆ. ಅವಳು ಯಾವತ್ತಾದರೂ ಒಮ್ಮೆ ಸಿಗಬಹುದು, ಸಿಕ್ಕಾಗ ಅವಳೊಂದಿಗೆ ಲೋಕಾಭಿರಾಮದ ಮಾತನಾಡುತ್ತ ಒಮ್ಮೆಯಾದರೂ ಕವಳದ ರುಚಿಯನ್ನು ಸವಿಯಬೇಕು ಎನ್ನುವ ಆಸೆಯೊಂದನ್ನು ನಾನು ಬಿಟ್ಟುಕೊಟ್ಟಂತೆ ಅನ್ನಿಸಿ ಕಳವಳವಾಗುತ್ತದೆ ಒಮ್ಮೊಮ್ಮೆ.

ಈ ಕವಳದ ಮೋಹ ನನಗೆ ಅಂಟಿಕೊಂಡಿದ್ದು ಸದಾಶಿವ ಭಟ್ಟರಿಂದ. ಹದವಾಗಿ ಬೆಳೆದ ನಾಗಬಳ್ಳಿ ಎಲೆಯ ತೊಟ್ಟು ಮುರಿದು, ಕುಡಿಯ ಚೂರೊಂದನ್ನು ಹಣೆಯಂಚಿಗೆ ಅಂಟಿಸಿಕೊಂಡು ಎಲೆಯ ನಾರು ಬಿಡಿಸುವಾಗ ಭಟ್ಟರ ಕಣ್ಣುಗಳಲ್ಲಿ ಹೊಸ ಬಗೆಯ ಚುರುಕೊಂದು ಕಾಣಿಸಿಕೊಳ್ಳುತ್ತಿತ್ತು. ಎಡಗೈಯಲ್ಲಿ ನಾಜೂಕಾಗಿ ಎಲೆಯನ್ನು ಹಿಡಿದುಕೊಂಡು ಬಲಗೈ ಹೆಬ್ಬೆರಳು ಮತ್ತು ತೋರುಬೆರಳುಗಳಿಂದ ಮೇಲ್ಪದರದ ಒಂದೊಂದೇ ಎಳೆಯನ್ನು ಬಿಡಿಸುವಾಗ ಭಟ್ಟರು ಈ ವಿದ್ಯೆಯನ್ನು ಯಾರಿಂದ ಕಲಿತಿರಬಹುದು ಎಂದು ಯೋಚಿಸಿದ್ದಿದೆ ನಾನು. ಪದ್ಮಾಸನದ ಭಂಗಿಯಲ್ಲಿ ಕುಳಿತು ಭಟ್ಟರು ಎಲೆಗೆ ಹದಮಾಡಿದ ಸುಣ್ಣ ಹಚ್ಚುವಾಗ ಸಾಕ್ಷಾತ್ ಸದಾಶಿವನೇ ಕವಳದ ಬಟ್ಟಲಿನ ಎದುರು ಆಸೀನನಾದಂತೆ ವಿಶಿಷ್ಟವಾದ ಕಳೆಯೊಂದು ದೇವಸ್ಥಾನದ ಜಗಲಿಯನ್ನು ಆವರಿಸುತ್ತಿತ್ತು.

ಭಟ್ಟರು ಕವಳವನ್ನು ಬಾಯೊಳಗೆ ಇಡುತ್ತಿದ್ದಂತೆಯೇ ನಾವೆಲ್ಲ ಆವತ್ತಿನ ಕಥೆ ಕೇಳಲಿಕ್ಕೆ ಸಿದ್ಧರಾಗುತ್ತಿದ್ದೆವು. ದೇವಸ್ಥಾನದ ಅಂಗಳದಲ್ಲಿದ್ದ ಅಶ್ವತ್ಥ ಎಲೆ ಗಾಳಿಗೆ ಅಲ್ಲಾಡಿದರೂ ಕೇಳಿಸುವಷ್ಟು ನಿಶ್ಶಬ್ದ ಆ ಕ್ಷಣದಲ್ಲಿ ಜಗಲಿಗೆ ಪ್ರಾಪ್ತವಾಗುತ್ತಿತ್ತು. ಊರಿನ ಮಧ್ಯದಲ್ಲಿದ್ದ ಆ ದೇವಸ್ಥಾನ ಅಜ್ಜನ ಕಾಲದಿಂದಲೂ ಹೀಗೆಯೇ ಇದೆ ಎಂದು ಕಮೀಟಿಯಲ್ಲಿದ್ದ ದೊಡ್ಡಪ್ಪ ಹೇಳುತ್ತಿದ್ದ. ತೊಲೆಗೆ ಗೆದ್ದಲು ಹಿಡಿದಾಗಲೋ ಅಥವಾ ಹಂಚು ಒಡೆದು ಮಳೆಯ ನೀರು ಸೋರಿದಾಗಲೋ ಆಗೊಮ್ಮೆ ಈಗೊಮ್ಮೆ ರಿಪೇರಿ ಕಾಣುತ್ತಿದ್ದ ದೇವಸ್ಥಾನಕ್ಕೆ ವಿಶೇಷ ಸೊಬಗು ಸಿಕ್ಕಿದ್ದು ಕೆಂಪುಬಣ್ಣದ ಸಿಮೆಂಟ್ ನೆಲದಿಂದಾಗಿ. ಫ್ರೆಂಚ್ ವಿಂಡೋದಂತಹ ಉದ್ದನೆಯ ಮರದ ಕಿಟಕಿಗಳು, ಯಾವುದೇ ವಿನ್ಯಾಸದ ಕೆತ್ತನೆಯಿಲ್ಲದ ಆರಡಿ ಅಗಲದ ಹೊಳೆವ ಮರದ ಬಾಗಿಲುಗಳು ದೇವಸ್ಥಾನಕ್ಕೊಂದು ಅನನ್ಯ ಸೌಂದರ್ಯವನ್ನು ಒದಗಿಸಿದ್ದವು. ಹುಣ್ಣಿಮೆಯಂದೋ, ಚಂಪಾಷಷ್ಟಿಯಂದೋ, ಬಲಿಪಾಡ್ಯಮಿಯಂದೋ ಊರಿನವರೆಲ್ಲ ಸೇರುತ್ತಿದ್ದ ದೇವಸ್ಥಾನ ಉಳಿದ ದಿನಗಳಲ್ಲಿ ದಿವ್ಯ ಮೌನವೊಂದನ್ನು ತಾಳುತ್ತಿತ್ತು.

ಜೀವನದೆಡೆಗೆ ಯಾವುದೇ ತಕರಾರಿಲ್ಲದೆ ಆ ಮೌನದೊಂದಿಗೆ ಹೊಂದಾಣಿಕೆ ಮಾಡಿಕೊಂಡವರು ಸದಾಶಿವ ಭಟ್ಟರು. ಇವರಿಗಿಂತ ಮುಂಚೆ ದೇವಸ್ಥಾನ ನೋಡಿಕೊಳ್ಳುತ್ತಿದ್ದ ಪುರೋಹಿತರು ತೀರಿಕೊಂಡಾಗ ಅವರ ಕುಟುಂಬ ದೇವಸ್ಥಾನ ಬಿಡುವ ಪ್ರಸಂಗ ಬಂತು. ಶಿವಮೊಗ್ಗದ ಹೈಸ್ಕೂಲೊಂದರಲ್ಲಿ ಸಂಸ್ಕೃತ ಶಿಕ್ಷಕನಾಗಿದ್ದ ಅವರ ಮಗ ಅಮ್ಮ ಮತ್ತು ತಂಗಿಯನ್ನು ತಾನಿದ್ದಲ್ಲಿಗೆ ಕರೆಸಿಕೊಂಡಾಗ ಹೊಸ ಪುರೋಹಿತರನ್ನು ಹುಡುಕಬೇಕಾದ ಅನಿವಾರ್ಯತೆ ಬಂತು. ಗೋಳಿಕೊಪ್ಪ ಶಾಲೆಯ ಮಾಸ್ತರಾಗಿದ್ದ ರಾಮಚಂದ್ರ ಭಟ್ಟರವರೆಗೆ ಈ ಸುದ್ದಿ ತಲುಪಿ, ತಮ್ಮ ದೂರದ ಸಂಬಂಧಿಯಾದ ಸದಾಶಿವ ಭಟ್ಟರನ್ನು ಕರೆತಂದಿದ್ದರು. ರಾಮಚಂದ್ರ ಭಟ್ಟರು ಕೊಟ್ಟ ವಿವರಣೆಯ ಪ್ರಕಾರ ಸದಾಶಿವ ಭಟ್ಟರು ಸಂಸ್ಕ್ರತದಲ್ಲಿ ಎಂಎ ಮಾಡಿ ಮೈಸೂರಿನ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದವರು. ಒಂದು ದಿನ ಇದ್ದಕ್ಕಿದ್ದಂತೆ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಕುಮಟಾದ ಮೂಲಮನೆಗೆ ಬಂದು ಪೌರೋಹಿತ್ಯವನ್ನು ಆರಂಭಿಸಿದರು. ತಂದೆ ತಾಯಿ ಇಲ್ಲದ ಭಟ್ಟರನ್ನು ಅಣ್ಣಂದಿರು ಮದುವೆಯ ಬಗ್ಗೆ ಪ್ರಸ್ತಾಪವೆತ್ತಿದ್ದಕ್ಕೆ ಭಟ್ಟರು ನಿರಾಕರಿಸಿದರಂತೆ. ಯಾರೆಷ್ಟೇ ಕೇಳಿದರೂ ತಾವು ಕೆಲಸಬಿಟ್ಟಿದ್ದಕ್ಕೂ, ಮದುವೆಯಾಗದೇ ಇರುವುದಕ್ಕೂ ಕಾರಣವೇನೆಂದು ಬಾಯಿಬಿಡಲಿಲ್ಲವಂತೆ. ಯಾವುದಾದರೂ ದೇವಸ್ಥಾನವಿದ್ದರೆ ಹೋಗಿ ಉಳಿದುಕೊಂಡು ದೇವರ ಸೇವೆ ಮಾಡುವ ಆಸಕ್ತಿ ತೋರಿಸಿದಾಗ ರಾಮಚಂದ್ರ ಭಟ್ಟರು ಇಲ್ಲಿಗೆ ತಂದು ಸೇರಿಸಿದ ಸದಾಶಿವ ಭಟ್ಟರು ಊರಿನವರ ಪ್ರೀತಿಗೆ ಪಾತ್ರರಾಗಿದ್ದು ತಮ್ಮ ವರ್ಚಸ್ಸು ಹಾಗೂ ಚುರುಕು ವ್ಯಕ್ತಿತ್ವದಿಂದ. ಊರಿನಲ್ಲಿ ಯಾರ ಮನೆಯ ಪೂಜೆಯೇ ಆಗಿರಲಿ ಸದಾಶಿವ ಭಟ್ಟರು ಇರಲೇಬೇಕು. 'ಓ ಭಟ್ರು ಬಂದ್ರು ಇನ್ನು ತೊಂದ್ರೆ ಇಲ್ಲ' ಎನ್ನುವಷ್ಟು ವಿಶ್ವಾಸ ಹಾಗೂ ಅವಲಂಬನೆ ಊರಿನವರಿಗೆ ಅವರ ಮೇಲೆ. ಹಬ್ಬಗಳಲ್ಲಿಯೂ ಅಷ್ಟೇ, ಊರಿನ ಕನಿಷ್ಠ ಏಳೆಂಟು ಮನೆಗಳ ಪೂಜೆಯನ್ನಾದರೂ ಬೇಸರವಿಲ್ಲದೇ ಸಾಗಿಸುತ್ತಿದ್ದರು. ದಿನ ಬೆಳಗಾದರೆ ದೇವಸ್ಥಾನದ ಮೆಟ್ಟಿಲು ತೊಳೆಯುವುದರಿಂದ ಹಿಡಿದು, ಬಾಗಿಲ ತೋರಣದವರೆಗಿನ ಜವಾಬ್ದಾರಿಯನ್ನು ಒಬ್ಬರೇ ನಿಭಾಯಿಸುತ್ತಿದ್ದ ಭಟ್ಟರಿಗೆ ಮದುವೆಯಾಗುವಂತೆ ಊರಿನವರೆಲ್ಲ ಒತ್ತಾಯಿಸಿದ್ದೂ ಆಯಿತು. ಭಟ್ಟರು ಮಾತ್ರ ಯಾವುದಕ್ಕೂ ಜಗ್ಗದೇ ತಾವಾಯಿತು ತಮ್ಮ ಕವಳವಾಯಿತು ಎಂಬಂತಿದ್ದರು.

ದಿನನಿತ್ಯ ದೇವಸ್ಥಾನದ ಸಂಪರ್ಕಕ್ಕೆ ಬರುತ್ತಿದ್ದ ಎಂಟು ಮನೆಗಳಲ್ಲಿ ಒಂದು ಮನೆಯಲ್ಲಿದ್ದದ್ದು ಆರು ಹೆಣ್ಣುಮಕ್ಕಳು ಮಾತ್ರ. ಅವರೆಲ್ಲ ಮದುವೆಯಾಗಿ ಗಂಡನ ಮನೆ ಸೇರಿದ್ದಲ್ಲದೇ ಅವರ ಸಂಸಾರಗಳು ಹುಬ್ಬಳ್ಳಿ, ಬೆಂಗಳೂರು, ಪುಣೆ ಎಂದು ಹಂಚಿಹೋಗಿದ್ದವು. ವರ್ಷಕ್ಕೊಮ್ಮೆಯೋ, ಎರಡು ಸಲವೋ ಬಂದು ನಾಲ್ಕು ದಿನ ಉಳಿದು ವಯಸ್ಸಾದ ಅಪ್ಪ ಅಮ್ಮನ ಕಾಲುಮುಟ್ಟಿ ನಮಸ್ಕರಿಸಿ ವಾಪಸ್ಸಾಗುತ್ತಿದ್ದರು. ಅವರ ಮನೆಯ ಗಿರಿಜತ್ತೆ ಮಾತ್ರ ಎಮ್ಮೆ ಕರು ಹಾಕಿದಾಗ ಗಿಣ್ಣದ ಹಾಲು ಕೊಡಲೆಂದೋ ಅಥವಾ ಶುಗರ್ ಚೆಕಪ್ಪಿಗೆಂದೋ ಸಿದ್ದಾಪುರಕ್ಕೆ ಹೋಗುವಾಗ ಮನೆಯಿಂದ ಹೊರಬಿದ್ದದ್ದು ಎಷ್ಟೋ ಅಷ್ಟೇ. ಪ್ರತೀ ಸೋಮವಾರ ಅಶ್ವತ್ಥಮರ ಸುತ್ತಲೆಂದು ದೇವಸ್ಥಾನಕ್ಕೆ ಬರುತ್ತಿದ್ದಳಾದರೂ ಅವಳು ಬರುವ ಹೊತ್ತಿನಲ್ಲಿ ಕಾಗೆಯೂ ಎದ್ದಿರುತ್ತಿರಲಿಲ್ಲ. ಹಾಗಾಗಿ ಊರಿನವರಿಗೆಲ್ಲ ಗಿರಿಜತ್ತೆ ಗಿಣ್ಣದ ಗಿರಿಜತ್ತೆ ಆಗಿಹೋಗಿದ್ದಳು. ಅವಳು ಮನೆಯಿಂದ ಹೊರಗೆ ಬಂದಳೆಂದರೆ ದಿನಕ್ಕೊಂದು ಮನೆಯಂತೆ ಎಲ್ಲರ ಮನೆಗೂ ಗಿಣ್ಣದ ಹಾಲು ಸಿಗುತ್ತಿತ್ತು.

ಇನ್ನುಳಿದ ಏಳು ಮನೆಗಳಲ್ಲಿ ಇದ್ದ ಎಂಟು ಮಕ್ಕಳಲ್ಲಿ ಹತ್ತನೇ ಕ್ಲಾಸು ಓದುತ್ತಿದ್ದ ನಾನೇ ದೊಡ್ಡವಳು. ಮೂರನೇ ಕ್ಲಾಸಿನ ಮಹೇಶನಿಂದ ಶುರುವಾಗುತ್ತಿದ್ದ ನಮ್ಮ ಗ್ಯಾಂಗಿಗೆ ಸದಾಶಿವ ಭಟ್ಟರ ಕಥೆಗಳನ್ನು ಬಿಟ್ಟರೆ ದೊಡ್ಡ ಮನರಂಜನೆಯೆಂದರೆ ನನ್ನ ಹೈಸ್ಕೂಲಿನ ಕಥೆಗಳು. ವರ್ಷಕ್ಕೊಮ್ಮೆ ನಡೆಯುವ ಗ್ಯಾದರಿಂಗ್, ಮೈಸೂರು ಪ್ರವಾಸ, ಹತ್ತನೇ ಕ್ಲಾಸಿನ ಹುಡುಗನೊಬ್ಬ ಎಂಟನೇ ಕ್ಲಾಸಿನ ಹುಡುಗಿಗೆ ಲವ್ ಲೆಟರ್ ಬರೆದಿದ್ದು ಹೆಡ್ ಮಾಸ್ಟರಿಗೆ ಗೊತ್ತಾಗಿ ಅವರು ಹುಡುಗನ ಅಪ್ಪನನ್ನು ಹೈಸ್ಕೂಲಿಗೆ ಕರೆಸಿದ್ದು ಹೀಗೆ ಎರಡು ದಿನಕ್ಕೊಮ್ಮೆಯಾದರೂ ನನ್ನ ನೇತೃತ್ವದಲ್ಲಿ ಮೀಟಿಂಗೊಂದು ದೇವಸ್ಥಾನದ ಜಗಲಿಯ ಮೇಲೆ ಫಿಕ್ಸ್ ಆಗುತ್ತಿತ್ತು. ಭಟ್ಟರು ಯಾರದೋ ಮನೆಯ ಪೂಜೆಗೆ ಹೋದಾಗಲೋ ಅಥವಾ ಸಾಮಾನು ತರಲೆಂದು ಸಿದ್ದಾಪುರಕ್ಕೆ ಹೋದಾಗಲೆಲ್ಲ ಕರವೀರ ಬೀಜ, ಬಳೆಚೂರುಗಳೆಲ್ಲ ನಮ್ಮ ಆಟಿಕೆಗಳಾಗಿ ದೇವಸ್ಥಾನದ ಜಗಲಿ ಸೇರುತ್ತಿದ್ದವು. ಇದರ ಮಧ್ಯೆ ಗ್ಯಾಂಗಿನಲ್ಲಿ ಏನಾದರೂ ಜಟಾಪಟಿಯಾದಾಗ ಅದನ್ನು ಬಗೆಹರಿಸುವ ಜವಾಬ್ದಾರಿ ಕೂಡಾ ನನ್ನ ತಲೆಗೇ ಬರುತ್ತಿತ್ತು. ಆಗ ಕೆಲಸಕ್ಕೆ ಬರುತ್ತಿದ್ದದ್ದು ಅದೇ ಹೈಸ್ಕೂಲಿನ ಕಥೆಗಳು. ಹಳೆಯ ಕಥೆಗಳಿಗೇ ಹೊಸ ಬಣ್ಣ ಬಳಿದು, ಹೊಸ ಚಮತ್ಕಾರವೊಂದು ಜರುಗಿದಂತೆ ನಾನು ನನ್ನೆಲ್ಲ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದಂತೆ ಜಗಳಗಳೆಲ್ಲ ತಣ್ಣಗಾಗಿ ಎಂದಿನಂತೆ ಮನೆ ಸೇರುತ್ತಿದ್ದೆವು. ಇಂತಹ ಪ್ರಹಸನಗಳು ಜರುಗಿದಾಗೆಲ್ಲ ನಾನು ಸದಾಶಿವ ಭಟ್ಟರ ಉತ್ತರಾಧಿಕಾರಿ ಎನ್ನುವ ವಿಚಿತ್ರ ಗರ್ವವೊಂದು ನನ್ನ ತಲೆಗೇರುತ್ತಿತ್ತು.

ಹೀಗೆ ಭಟ್ಟರು ದೇವಸ್ಥಾನದಲ್ಲಿಲ್ಲದ ಒಂದು ಸಂಜೆ ನಮ್ಮ ಗ್ಯಾಂಗಿನಲ್ಲಿ ಇದ್ದಿದ್ದರಲ್ಲೇ ಸ್ವಲ್ಪ ದೊಡ್ಡ ಹುಡುಗ ಪ್ರಶಾಂತ ಹೊನ್ನೆಮರಘಟ್ಟದ ಪ್ರಸ್ತಾಪ ಇಟ್ಟ. ಮೊನ್ನೆ ಗೇರುಬೀಜ ಕೊಯ್ಯಲೆಂದು ಹೊನ್ನೆಮರಘಟ್ಟಕ್ಕೆ ಅಪ್ಪನ ಜೊತೆಗೆ ಹೋಗಿದ್ದ ಪ್ರಶಾಂತ ಅಲ್ಲೊಂದು ಸಂಪಿಗೆಹಣ್ಣಿನ ಮರ ನೋಡಿದ್ದ. ಅಪ್ಪನನ್ನು ಕೇಳಿದ್ದಕ್ಕೆ, ಈಗ ಕತ್ತಲಾಗಿದೆ ಮರ ಹತ್ತುವ ಸಮಯವಲ್ಲ ಎಂದಿದ್ದಾರೆ. ತುಂಬಾ ಹಣ್ಣಾಗಿದೆ, ತನಗೆ ಮರ ಹತ್ತಲು ಗೊತ್ತು ಎನ್ನುವ ಸಿಂಪಲ್ ಪ್ರಪೋಸಲ್ ಅದು. ಎಲ್ಲರಿಗೂ ಸಂಪಿಗೆಹಣ್ಣಿನ ಆಸೆ ಎಷ್ಟಿತ್ತೆಂದರೆ ಐದೇ ನಿಮಿಷದಲ್ಲಿ ನಮ್ಮ ಗ್ಯಾಂಗು ಹೊನ್ನೆಮರಘಟ್ಟಕ್ಕೆ ಕಾಲಿಟ್ಟಾಗಿತ್ತು. ಆ ಜಾಗಕ್ಕೆ ಹೊನ್ನೆಮರಘಟ್ಟವೆಂದು ಯಾವ ಕಾರಣಕ್ಕಾಗಿ ಹೆಸರು ಬಂತೆನ್ನುವುದು ಯಾರಿಗೂ ಗೊತ್ತಿಲ್ಲ. ಅದನ್ನೊಂದು ಚಿಕ್ಕ ಘಟ್ಟವೆಂದು ಒಪ್ಪಿಕೊಳ್ಳಬಹುದಾದರೂ ಅಲ್ಲಿ ಒಂದೇ ಒಂದು ಹೊನ್ನೆಮರವೂ ಕಣ್ಣಿಗೆ ಬೀಳುತ್ತಿರಲಿಲ್ಲ. ಸುಮಾರು ಹತ್ತೆಕರೆ ವಿಸ್ತೀರ್ಣದ ಆ ಜಾಗ ಸರಕಾರದ್ದು. ಒಂದಿಷ್ಟು ಗೇರು, ಬಿದಿರುಗಳನ್ನು ಬಿಟ್ಟರೆ ಯಾವುದೋ ವರ್ಷ ವನಮಹೋತ್ಸವದ ಸಂಭ್ರಮಕ್ಕೆ ಬೆಳೆಸಿದ ಅಕೇಶಿಯಾ ಮರಗಳು ತುಂಬಿಕೊಂಡಿದ್ದ ಜಾಗ ಆಸುಪಾಸಿನ ಮನೆಗಳಿಗೆ ಹೇಳಿ ಮಾಡಿಸಿದಂತಹ ಸ್ಮಶಾನವಾಗಿತ್ತು.

ಇದ್ಯಾವುದರ ಪರಿವೆಯಿಲ್ಲದೇ ಪ್ರಶಾಂತ ಸಂಪಿಗೆಹಣ್ಣಿನ ಮರವೇರಿ, ಟೊಂಗೆಗಳ ಸಮೇತ ಹಣ್ಣುಗಳೆಲ್ಲ ಯಥಾಪ್ರಕಾರ ದೇವಸ್ಥಾನದ ಜಗಲಿಯೇರಿದವು. ಸದಾಶಿವ ಭಟ್ಟರು ತಲನಜಡ್ಡಿಯ ತಿಥಿಯೊಂದನ್ನು ಸಾಗಿಸಿ, ನಾಗಬಳ್ಳಿಯ ಎಲೆಕಟ್ಟಿನೊಂದಿಗೆ ಅಷ್ಟೊತ್ತಿಗಾಗಲೇ ವಾಪಸ್ಸಾಗಿದ್ದರು. ಪ್ರಶಾಂತ ಎದೆಯುಬ್ಬಿಸಿ ಯುದ್ಧವೊಂದನ್ನು ಗೆದ್ದ ಸಂಭ್ರಮದಲ್ಲಿ ಹೊನ್ನೆಮರಘಟ್ಟದ ಪ್ರಕರಣವನ್ನು ವಿವರಿಸುತ್ತಿದ್ದಂತೆ ಭಟ್ಟರು, "ಅದು ಒಮಲ್ತಿಯ ಜಾಗ" ಎಂದು ಘೋಷಿಸಿಬಿಟ್ಟರು. ಅವರು ಒಮಲ್ತಿ ಎಂದಾಗ ಆ ಕ್ಷಣ ಅಲ್ಲಿ ಸಂಭವಿಸಿದ ಸ್ವಾಭಾವಿಕವಲ್ಲದ ಸಂವಹನದಿಂದಾಗಿ, ಇದು ಸದಾಶಿವ ಭಟ್ಟರ ಬೇರೆಲ್ಲ ಕಥೆಗಳಿಗಿಂತ ವಿಭಿನ್ನವಾಗಿರಬೇಕು ಎನ್ನಿಸಿದ್ದು ನನಗೆ ಮಾತ್ರ. ದೇವಸ್ಥಾನದ ಜಗಲಿಯ ಪ್ರಹಸನ, ಪ್ರಕರಣಗಳನ್ನು ಮನೆಯಲ್ಲಿ ಚರ್ಚಿಸಕೂಡದೆಂಬ ಅಲಿಖಿತ ನಿಯಮದಿಂದಾಗಿ ನನಗೆ ಒಮಲ್ತಿಯ ಒಗಟನ್ನು ಬಿಡಿಸಲಾಗಲೇ ಇಲ್ಲ.

ಮರುದಿನವೂ ಸದಾಶಿವ ಭಟ್ಟರ ಕಥೆಯಲ್ಲಿ ದಾಸವಾಳ ಹಣ್ಣು, ಅಶ್ವತ್ಥಕಟ್ಟೆಗೆ ಹಾವು ಬಂದಿದ್ದು, ಗೋಳಿಕೊಪ್ಪದ ಬೆಕ್ಕು ಮರಿ ಹಾಕಿದ್ದು, ಶ್ರೀಕೃಷ್ಣ ಬಾಯಲ್ಲಿ ಬ್ರಹ್ಮಾಂಡ ತೋರಿಸಿದ್ದು ಎಲ್ಲವೂ ಇತ್ತು; ಒಮಲ್ತಿ ಮಾತ್ರ ಇರಲಿಲ್ಲ. ನಾನು ಒಮಲ್ತಿಯನ್ನು ಜಗಲಿಗೆ ಎಳೆಯುವ ಪ್ರಯತ್ನ ಮಾಡಿದೆನಾದರೂ ಭಟ್ಟರು ಜಗ್ಗಲಿಲ್ಲ. ಇವತ್ತು ಚೌತಿ; ಒಮಲ್ತಿಯ ವಿಷಯ ಹೇಳಬಾರದು ಎಂದೋ, ಇವತ್ತು ವಸುಮತಿಯ ಚಿಕ್ಕಮ್ಮನ ಮಗನ ಚೌಲ; ಅವಳಿಲ್ಲದೇ ಇರುವಾಗ ಒಮಲ್ತಿ ಕಥೆ ಹೇಳಿದರೆ ಅವಳಿಗೆ ಬೇಜಾರಾಗಬಹುದು ಎಂದೋ ನಂಬಲಾಗದ ಕಾರಣಗಳನ್ನು ಕೊಡುತ್ತಿದ್ದರು. ಈ ಚೌತಿಗೂ ಒಮಲ್ತಿಗೂ ಎಲ್ಲಿಯ ಸಂಬಂಧವೆಂದು ನಾನು ಯೋಚಿಸುತ್ತಿದ್ದೆನಾದರೂ ಬಾಯಿಬಿಟ್ಟು ಭಟ್ಟರನ್ನು ಕೇಳುತ್ತಿರಲಿಲ್ಲ. ಆದರೆ ನಾನು ಪ್ರತಿಸಲ ಒಮಲ್ತಿಯ ಹೆಸರೆತ್ತಿದಾಗಲೂ ಭಟ್ಟರ ಕಣ್ಣುಗಳೊಳಗಿನ ಚುರುಕು ಅರೆಕ್ಷಣ ಸ್ತಬ್ಧವಾದಂತೆ ಅನ್ನಿಸುತ್ತಿತ್ತು.

ಹೈಸ್ಕೂಲು ಮುಗಿಸಿದ ನಾನು ಪಿಯುಸಿಗೆ ಸಾಗರಕ್ಕೆ ಸೇರಿದ ಮೇಲೆ ದೇವಸ್ಥಾನದ ಒಡನಾಟ ಕಡಿಮೆಯಾಗುತ್ತಾ ಬಂತು. ತಿಂಗಳಿಗೊಮ್ಮೆ ಊರಿಗೆ ಬಂದಾಗಲೆಲ್ಲ ಅಡಿಕೆ ಸುಲಿಯುತ್ತಲೋ ಅಥವಾ ಅಂಗಳ ಸಾರಿಸಿ ರಂಗೋಲಿ ಹಾಕುತ್ತಲೋ ಸಮಯ ಕಳೆದುಹೋಗಿ ನಮ್ಮ ಗ್ಯಾಂಗು ಲೀಡರಿಲ್ಲದೇ, ಮಧ್ಯಂತರದಲ್ಲೇ ಮುಗಿದುಹೋದ ಸಿನೆಮಾದಂತೆ ಕೊನೆಯೊಂದನ್ನು ಕಾಣಬೇಕಾಗಿ ಬಂತು. ನನಗೂ ಕೆಲಸ ಸಿಕ್ಕಿ ಬೆಂಗಳೂರು ಸೇರಿ ಹಬ್ಬಕ್ಕೆ ಮಾತ್ರವೇ ಊರು ಎಂಬಂತಾಯಿತು. ದಿನಗಳು ಕಳೆದಂತೆ ಊರಿನ ಸಂಪರ್ಕವೇ ಕಡಿದುಹೋದಂತಾಗಿ ಅಮ್ಮನ ಬಾಯಿಯಿಂದ ಕೇಳುತ್ತಿದ್ದ ನಮ್ಮ ಗ್ಯಾಂಗಿನ ಚಿಕ್ಕಪುಟ್ಟ ಸುದ್ದಿಗಳೇ ನನ್ನನ್ನು ಕಥೆಗಳಾಗಿ ಸಂತೈಸತೊಡಗಿದವು. ವಸುಮತಿಯ ಅಪ್ಪ ಅಮೆರಿಕಾದಲ್ಲಿರುವ ಒಳ್ಳೆಯ ಹುಡುಗ ಸಿಕ್ಕಿದನೆಂದು ಪಿಯುಸಿ ಮುಗಿಯುತ್ತಿದ್ದಂತೆಯೇ ಅವಳ ಮದುವೆ ಮಾಡಿದ್ದು; ಪ್ರಶಾಂತ, ಮುಕುಂದ ಎಂಜಿನೀಯರಿಂಗ್ ಓದಲೆಂದು ಬೆಂಗಳೂರು ಸೇರಿದ್ದು; ಶ್ಯಾಮಲಾ, ಲಕ್ಷ್ಮಿ ಇಬ್ಬರೂ ಪಿಯುಸಿಯಲ್ಲಿ ಫೇಲಾಗಿ ಮದುವೆಗೆ ಗಂಡು ಹುಡುಕುತ್ತಿರುವುದು; ಮಹೇಶ, ನಾಗರಾಜ ಇಬ್ಬರೂ ಸಿದ್ದಾಪುರದಲ್ಲಿ ಪಿಯುಸಿಗೆ ಸೇರಿದ್ದು ಎಲ್ಲವೂ ಗೊತ್ತಾಗಿದ್ದು ಅಮ್ಮನಿಂದಲೇ. ಎಲ್ಲ ಕಥೆಗಳೂ ಪಿಯುಸಿಯೊಂದಿಗೇ ತಳುಕು ಹಾಕಿಕೊಂಡಂತೆ, ಬದುಕು ಮಾತ್ರ ಅಲ್ಲೇ ಹತ್ತನೇ ತರಗತಿಯಲ್ಲಿ ದೇವಸ್ಥಾನದ ಜಗಲಿಯಲ್ಲೇ ಉಳಿದುಹೋದಂತೆ ಅನ್ನಿಸುತ್ತಿತ್ತು ನನಗೆ.

ಊರಿಗೆ ಹೋದಾಗಲೆಲ್ಲ ಸದ್ದುಗದ್ದಲವಿಲ್ಲದ ಹೊನ್ನೆಮರಘಟ್ಟ ನನ್ನ ಕಾದಂಬರಿ ಓದುವ ತಾಣವಾಯಿತು. ಒಮ್ಮೆ ಕೃಷ್ಣಾಷ್ಟಮಿಗೆಂದು ಊರಿಗೆ ಹೋದಾಗ ಅಮ್ಮ ಸದಾಶಿವ ಭಟ್ಟರು ತೀರಿಕೊಂಡರೆಂದೂ, ಹೊಸ ಪುರೋಹಿತರು ಸಿಗುವವರೆಗೂ ಹಬ್ಬ ಸಾಗಿಸಲಿಕ್ಕೆ ತುಂಬೆಬೈಲಿನ ಸುಬ್ರಾಯ ಭಟ್ಟರ ಮಗ ಸದಾನಂದ ಬರುತ್ತಾನೆಂದೂ ವರದಿ ಒಪ್ಪಿಸಿದಳು. ಸದಾನಂದ ಇನ್ನೂ ಮಂತ್ರ ಕಲಿಯುತ್ತಿದ್ದಾನೆ, ಪಾಪ ಈ ಸಲ ಕೃಷ್ಣನಿಗೆ ಪೂಜೆ ಸರಿಯಾಗುತ್ತೋ ಇಲ್ಲವೋ ಎಂದು ಕೃಷ್ಣನೆಡೆಗೊಂದು ಸಹಾನುಭೂತಿಯನ್ನೂ ತೋರಿಸಿದಳು. "ನೀನು ಕಾದಂಬರಿ ಓದುವುದಾದರೆ ಮನೆಯಲ್ಲೇ ಕುಳಿತು ಓದು; ಹೊನ್ನೆಮರಘಟ್ಟದಲ್ಲೇ ಸದಾಶಿವ ಭಟ್ಟರನ್ನು ಸುಟ್ಟಿದ್ದು, ಸದ್ಯ ಆ ಕಡೆಗೆ ಹೋಗಬೇಡ" ಎನ್ನುವ ತಾಕೀತು ಕೂಡಾ ತೂರಿಬಂತು. ನನಗೆ ಮಾತ್ರ ಆ ಕ್ಷಣಕ್ಕೆ ಬಾಯಲ್ಲಿ ಬ್ರಹ್ಮಾಂಡ ತೋರಿದ ಶ್ರೀಕೃಷ್ಣನೂ, ಸದಾಶಿವ ಭಟ್ಟರ ಕಣ್ಣಿನ ಚುರುಕನ್ನು ಸ್ತಬ್ಧಗೊಳಿಸಿದ ಒಮಲ್ತಿಯೂ ಒಟ್ಟಿಗೇ ದೇವಸ್ಥಾನದ ಜಗಲಿಮೇಲೆ ಕೂತು ಸಂಪಿಗೆಹಣ್ಣು ತಿಂದಂತೆ ಅನ್ನಿಸಿತು. ಭಟ್ಟರು ತೀರಿಕೊಂಡಿದ್ದು ಹೇಗೆ, ಮೊದಲು ಯಾರು ನೋಡಿದ್ದು, ಯಾರು ಕಾರ್ಯ ಮಾಡಿದ್ದು ಎಂಬಿತ್ಯಾದಿ ಯಾವ ವಿವರಗಳನ್ನೂ ಕೇಳುವ ಮನಸ್ಸಾಗಲಿಲ್ಲ. ಭಟ್ಟರೊಂದಿಗೆ ಬೆಸೆದುಕೊಂಡಿದ್ದ ಬಾಲ್ಯ, ನಾಯಕತ್ವ ವಹಿಸುತ್ತಿದ್ದ ನೆನಪುಗಳೆಲ್ಲ ಒಂದೊಂದಾಗಿ ಕಳಚಿ ನನ್ನ ಗತ್ತು-ಗರ್ವಗಳ ಸಾಮ್ರಾಜ್ಯ ಕೊನೆಯಾದಂತಾಗಿ ಚಡಪಡಿಸಿದೆ.

ಈಗ ವೇದಾಧ್ಯಯನ ಮುಗಿಸಿ ಸದಾನಂದನೇ ದೇವಸ್ಥಾನದ ಜವಾಬ್ದಾರಿ ಹೊತ್ತಿದ್ದಾನೆ. ಸದಾಶಿವ ಭಟ್ಟರನ್ನು ಊರು ನಿಧಾನವಾಗಿ ಮರೆಯಲಾರಂಭಿಸಿದೆ. ಪ್ರತಿ ಹಬ್ಬಕ್ಕೂ ಹಾಜರಿ ಹಾಕುತ್ತಿದ್ದ ನಾನು ಕೂಡಾ ಈಗ ನವರಾತ್ರಿಗೆ ಹೋದರೆ ದೀಪಾವಳಿಯನ್ನೋ, ದೀಪಾವಳಿಗೆ ಹೋದರೆ ಕೃಷ್ಣಾಷ್ಟಮಿಯನ್ನೋ ಸ್ಕಿಪ್ ಮಾಡಿಬಿಡುತ್ತೇನೆ. ಅಮ್ಮ ಮಾತ್ರ ಕಳೆದುಕೊಳ್ಳುವುದೊಂದು ಜಗದ ನಿಯಮವೆಂಬಂತೆ ಯಾರಿರಲೀ ಬಿಡಲೀ ನಿರ್ಲಿಪ್ತಳಾಗಿ ಬಟ್ಟಲಿನ ತುಂಬ ನೀಲಿ ಶಂಖಪುಷ್ಪವನ್ನು ಕೊಯ್ದು ತಪ್ಪದೇ ದೇವಸ್ಥಾನಕ್ಕೆ ಕೊಟ್ಟುಬರುತ್ತಾಳೆ. ದೊಡ್ಡಪ್ಪನ ಮೊಮ್ಮಗಳ ತೊಟ್ಟಿಲು ಔತಣಕ್ಕೆ ಬರಲೇಬೇಕೆಂಬ ಅಮ್ಮನ ಒತ್ತಾಯಕ್ಕೆ ಮಣಿದು ಊರಿಗೆ ಹೋದಾಗ ಯಾವತ್ತಿನಂತೆ ಕಾದಂಬರಿ ಹಿಡಿದು ಹೊನ್ನೆಮರಘಟ್ಟಕ್ಕೆ ಹೊರಟೆ. ಅಮ್ಮನೂ ಗೇರುಬೀಜ ಕೊಯ್ಯಲೆಂದು ನನ್ನ ಜೊತೆಯಾದಳು. ನಾನು ಓದಲಿಕ್ಕೆಂದು ನೆರಳಿನ ಜಾಗ ಹುಡುಕುತ್ತ ಪ್ರಶಾಂತನ ಸಾಹಸಗಾಥೆಯನ್ನು ಮೆರೆದ ಸಂಪಿಗೆಹಣ್ಣಿನ ಮರದ ಹತ್ತಿರ ಹೋಗುತ್ತಿದ್ದಂತೆಯೇ ಅಮ್ಮ "ಆ ಮರದ ಪಕ್ಕದಲ್ಲೇ ಸದಾಶಿವ ಭಟ್ಟರನ್ನು ಸುಟ್ಟಿದ್ದು, ಸ್ವಲ್ಪ ದೂರ ಕುಳಿತ್ಕೊಂಡು ಓದು" ಎಂದಾಗ ಒಮಲ್ತಿಯ ಕಥೆಗೆ ಹೊಸ ಚಾಲನೆ ಸಿಕ್ಕಿದಂತಾಯಿತು. "ಒಮಲ್ತಿ ಇಲ್ಲೇ ಎಲ್ಲೋ ಇರಬೇಕಲ್ಲವೇ, ಭಟ್ಟರು ಹೇಳಿದ್ದೆಲ್ಲ ಅರೆಬರೆ ನೆನಪಿನಲ್ಲಿದೆ, ಮತ್ತೊಮ್ಮೆ ಹೇಳು" ಎನ್ನುತ್ತಾ ಭಟ್ಟರ ಆತ್ಮವನ್ನು ಕಾಯುವವಳಂತೆ ಮರದಿಂದ ಸ್ವಲ್ಪ ದೂರದಲ್ಲಿ ಕುಳಿತೆ. ಸದಾಶಿವ ಭಟ್ಟರು ನನಗ್ಯಾವತ್ತೂ ಒಮಲ್ತಿಯ ಕಥೆಯನ್ನು ಹೇಳಿರಲೇ ಇಲ್ಲ ಎನ್ನುವುದನ್ನು ಅಮ್ಮನಿಗೆ ಗೊತ್ತಾಗದಂತೆ ಮ್ಯಾನೇಜ್ ಮಾಡಿದ ನನ್ನ ನಟನಾ ಸಾಮರ್ಥ್ಯದ ಬಗ್ಗೆ ಮತ್ತೊಮ್ಮೆ ಹೆಮ್ಮೆಯೆನಿಸಿತು. ಅಣ್ಣನ ಅಂಗಿಯೇ ಬೇಕೆಂದು ಹಠ ಮಾಡುತ್ತಿದ್ದ ಮೂರನೇ ಕ್ಲಾಸಿನ ಮಹೇಶ ಚಂದದೊಂದು ನಗು ಚಿಮ್ಮಿಸಿ ಮಾಯವಾದಂತಾಯ್ತು.

ನಾನು ಚಿಕ್ಕವಳಾಗಿದ್ದಾಗ ರಾತ್ರಿಯಾದ ಮೇಲೆ ಹೊನ್ನೆಮರಘಟ್ಟದ ಹಾದಿಯಲ್ಲಿ ಓಡಾಡಲು ಊರವರೆಲ್ಲ ಭಯಪಡುತ್ತಿದ್ದರಂತೆ. ಸದಾಶಿವ ಭಟ್ಟರು ಹೊಸದಾಗಿ ನಮ್ಮೂರಿಗೆ ಬಂದಾಗ ಹಾಣಜಿಬೈಲಿನ ದೀಪಾವಳಿಯ ಲಕ್ಷ್ಮಿಪೂಜೆ ಮುಗಿಸಿ ರಾತ್ರಿ ದೇವಸ್ಥಾನಕ್ಕೆ ಹಿಂದಿರುಗುತ್ತಿದ್ದಾಗ, ಅರ್ಧ ಘಟ್ಟ ಹತ್ತುತ್ತಿದ್ದಂತೆ ಬಿಳಿಸೀರೆಯ ಸುಂದರವಾದ ಹೆಂಗಸೊಬ್ಬಳು ಎದುರಿಗೆ ಬಂದು 'ಭಟ್ರೇ ಒಂದು ಕವಳ ಕೊಡಿ' ಎಂದಳಂತೆ. ಈ ಅಪರಾತ್ರಿಯಲ್ಲಿ ಯಾರು ಕವಳ ಹಾಕಬಹುದು ಎಂದು ಭಟ್ಟರು ಆಶ್ಚರ್ಯವಾಗಿ ಎಲೆ ಅಡಿಕೆ ತೆಗೆದುಕೊಟ್ಟರೆ, ಸುಣ್ಣವನ್ನೂ ಕೇಳಿದಳಂತೆ. ಭಟ್ಟರು ಸಂಚಿಗೆ ಕೈ ಹಾಕಿ ಸುಣ್ಣದ ಅಂಡೆ ತೆಗೆಯುವಷ್ಟರಲ್ಲಿ ಎಲೆ ಅಡಿಕೆ ನೆಲದ ಮೇಲೆ ಬೀಳಿಸಿಕೊಂಡಿದ್ದಳಂತೆ. ಭಟ್ಟರು ಎಲೆ ಅಡಿಕೆ ಹೆಕ್ಕಲೆಂದು ಬಗ್ಗಿದಾಗ ಆ ಹೆಂಗಸು ಅವರ ಕುತ್ತಿಗೆಗೆ ಕೈ ಹಾಕಿ ಉಗುರುಗಳನ್ನು ಕುತ್ತಿಗೆಯೊಳಗೆ ಇನ್ನೇನು ಇಳಿಸಿಯೇಬಿಡುತ್ತಾಳೆ ಎನ್ನುವಷ್ಟರಲ್ಲಿ, ಭಟ್ಟರು ಎರಡೂ ಕೈಗಳಲ್ಲಿ ಜನಿವಾರ ಹಿಡಿದುಕೊಂಡು ಜೋರಾಗಿ ಗಾಯತ್ರಿ ಮಂತ್ರ ಹೇಳಿದರಂತೆ. ಗಾಯತ್ರಿ ಮಂತ್ರದ ಶಕ್ತಿಗೆ ಹೆಂಗಸಿನ ಹಿಡಿತ ಸಡಿಲವಾಯಿತಂತೆ. ಭಟ್ಟರು ತಲೆ ಎತ್ತುವಷ್ಟರಲ್ಲಿ ಎಲೆ ಅಡಿಕೆಯನ್ನು ಅಲ್ಲಿಯೇ ಬಿಟ್ಟು ಆ ಹೆಂಗಸು ಮಾಯವಾಗಿದ್ದಳಂತೆ. ಇಷ್ಟೂ ಕಥೆಯನ್ನೂ ಅಮ್ಮ ಡೀಟೇಲುಗಳಿಲ್ಲದೇ ಹೇಳಿ ಮುಗಿಸಿದಾಗ, ಅಯ್ಯೋ ಈ ಕಥೆಯನ್ನು ಸದಾಶಿವ ಭಟ್ಟರ ಬಾಯಿಯಿಂದಲೇ ಕೇಳಬೇಕೆನ್ನಿಸಿತ್ತು ನನಗೆ. ಅಮ್ಮನ ಹೊಸ ಕಾಸಿನಸರದ ಬಗ್ಗೆಯೂ ಆಸಕ್ತಿ ತೋರಿಸದ ನಾನು ಈ ಒಮಲ್ತಿಯ ಬಗ್ಗೆ ಇಷ್ಟೊಂದು ಆಸಕ್ತಿ ತೋರಿಸಿದ್ದು ಅವಳಿಗೆ ಆಶ್ಚರ್ಯವೆನ್ನಿಸಿರಬೇಕು. ಮರದ ಕೆಳಗೆ ಬಿದ್ದ ಗೇರುಬೀಜಗಳನ್ನು ಹೆಕ್ಕುತ್ತ, "ಸದಾನಂದನ ಅಪ್ಪ ಸುಬ್ರಾಯ ಭಟ್ಟರು ಸತ್ತಿದ್ದು ಕೂಡಾ ಈ ಒಮಲ್ತಿಯಿಂದಲೇ ಎಂದು ಸುದ್ದಿ, ಸಾಯುವಾಗ ಅವರ ಕುತ್ತಿಗೆಯ ಮೇಲೆ ಉಗುರಿನ ಗುರುತುಗಳಿದ್ದವಂತೆ, ಉಗುರಿನ ಗಾಯದಿಂದಲೇ ನಂಜಾಗಿ ಅವರು ಸತ್ತಿದ್ದಿರಬೇಕು; ದೇವರು ಯಾರ್ಯಾರ ಬದುಕು ಸಾವುಗಳನ್ನು ಯಾರ್ಯಾರ ಕೈಗೆ ಒಪ್ಪಿಸಿರುತ್ತಾನೋ! ಸದಾಶಿವ ಭಟ್ಟರ ಮಂತ್ರಶಕ್ತಿಗೆ ಒಮಲ್ತಿ ಊರು ಬಿಟ್ಟುಹೋಗಿದ್ದು; ಭಟ್ಟರು ದೇವರಂತೆ ಬರದಿದ್ದರೆ ಇನ್ನೆಷ್ಟು ಜನರ ಪ್ರಾಣ ತೆಗೀತಿತ್ತೋ ಏನೋ" ಎನ್ನುತ್ತಾ ಗೇರುಬೀಜಗಳನ್ನು ಸೆರಗಿನಲ್ಲಿ ಕಟ್ಟಿಕೊಂಡು ಅಮ್ಮ ಮನೆಗೆ ಹೊರಟಳು.

ಅಮ್ಮ ಮನೆಗೆ ಹೋಗಿ ಅದೆಷ್ಟೋ ಹೊತ್ತಿನವರೆಗೂ ಒಮಲ್ತಿಯ ಸುತ್ತ ಸುತ್ತಿಕೊಂಡ ಸಾವು-ಬದುಕುಗಳ ಸತ್ಯಾಸತ್ಯತೆಗೆ ಮುಖಾಮುಖಿಯಾಗಿ ನಾನು ಅಲ್ಲೇ ಕುಳಿತಿದ್ದೆ. ಆ ಹೆಂಗಸಿಗೆ ಒಮಲ್ತಿಯೆಂದು ಹೆಸರಿಟ್ಟಿದ್ದು ಯಾರು ಎನ್ನುವ ಪ್ರಶ್ನೆಯೊಂದು ನನ್ನಲ್ಲೇ ಉಳಿದುಹೋಯಿತು. ಒಮಲ್ತಿ ಊರು ಬಿಟ್ಟು ಹೋಗಿದ್ದೇ ಆದರೆ ಭಟ್ಟರು ಯಾವ ಕಾರಣಕ್ಕಾಗಿ "ಅದು ಒಮಲ್ತಿಯ ಜಾಗ" ಎಂದಿರಬಹುದು; ಹೊನ್ನೆಮರಘಟ್ಟದಲ್ಲೇ ಅದು ತನಗಾಗಿ ಕಾಯುತ್ತಿರುವಂತೆ ಭಟ್ಟರಿಗೆ ಅನ್ನಿಸಿರಲೂಬಹುದು. ಕಾಲೇಜಿನ ಕೆಲಸವನ್ನು ಕಾರಣವಿಲ್ಲದೇ ಭಟ್ಟರು ಬಿಟ್ಟುಬಂದಿದ್ದಕ್ಕೂ, ಸಂಸಾರವನ್ನು ತ್ಯಜಿಸಿದ್ದಕ್ಕೂ, ಈ ಒಮಲ್ತಿಗೂ ಏನಾದರೂ ಸಂಬಂಧ ಕಾಣಿಸಬಹುದೇ ಎಂದು ಹುಡುಕಿದೆ. ಎಂಟನೇ ಕ್ಲಾಸಿನ ಹುಡುಗಿಗೆ ಲವ್ ಲೆಟರ್ ಬರೆದ ಹುಡುಗ ನೆನಪಾಗಿ ಭಟ್ಟರು ಯಾರನ್ನಾದರೂ ಪ್ರೀತಿಸಿದ್ದರೆ ಅದು ಯಾರಾಗಿರಬಹುದು ಎನ್ನುವ ಹೊಸ ಯೋಚನೆಯೊಂದು ಹುಟ್ಟಿಕೊಂಡಿತು. ಆ ಕ್ಷಣದ ಯಾವ ಯೋಚನೆಗಳೂ ಒಂದಕ್ಕೊಂದು ಹೊಂದಿಕೊಳ್ಳದೇ, ಎಲ್ಲವೂ ಅಸಮಂಜಸವೆನ್ನಿಸಿದವು. ಎಲ್ಲರಲ್ಲೂ ಸಾವಿನ ಭಯ ಹುಟ್ಟಿಸುತ್ತಿದ್ದ ಒಮಲ್ತಿಯಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಂಡವರ ಎದೆಯಲ್ಲಿ ಹೊಸದೊಂದು ಪ್ರೀತಿ ಹುಟ್ಟಿದ್ದಿರಬಹುದು; ಅಂಥದ್ದೊಂದು ಪ್ರೀತಿಯ ಹೊಳಹು ಒಮಲ್ತಿಯ ಜೀವನದ ಉದ್ದೇಶವಿರಬಹುದು. ಊರಿನವರ ಪಾಲಿಗೆ ದೇವರಾಗಿ ಬಂದಿದ್ದ ಸದಾಶಿವ ಭಟ್ಟರು ಸಲಹಿದ್ದೂ ಅದೇ ಪ್ರೀತಿಯನ್ನೇ ಅಲ್ಲವೇ ಅಂದುಕೊಂಡ ಕ್ಷಣ ಅವರ ಆತ್ಮ ನನ್ನ ಪಾಲಿನ ಜೀವನವನ್ನು ಸಲಹುತ್ತಿರುವಂತೆ ನಿರಾಳತೆಯೊಂದು ಮನಸ್ಸನ್ನು ಆವರಿಸಿತು. ಸಂಪಿಗೆಹಣ್ಣಿನ ಮರದ ತುಂಬಾ ನಾಗಬಳ್ಳಿಯಾಗಿ ಚಿಗುರಿ ಒಮಲ್ತಿ ಭಟ್ಟರ ಆತ್ಮವನ್ನು ಪೊರೆದಂತೆನ್ನೆಸಿತು.

 

ಅಂಜನಾ ಹೆಗಡೆ

ಲೇಖಕಿ ಅಂಜನಾ ಹೆಗಡೆ ಹುಟ್ಟಿ ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನಲ್ಲಿ. ಮದುವೆಯಾಗಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಹತ್ತು ವರ್ಷಗಳ ಕಾಲ ಬಿಪಿಓ ಒಂದರಲ್ಲಿ ಕೆಲಸ ಮಾಡಿದ ಅನುಭವವಿದ್ದು ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. "ಕಾಡ ಕತ್ತಲೆಯ ಮೌನಮಾತುಗಳು" ಕವನ ಸಂಕಲನ ಹಾಗೂ "ಬೊಗಸೆಯಲ್ಲೊಂದು ಹೂನಗೆ" ಪ್ರಬಂಧಗಳ ಸಂಕಲನ ಪ್ರಕಟವಾಗಿವೆ. ಓದು-ಬರೆಹದ ಜೊತೆಗೆ ಗಾರ್ಡನಿಂಗ್ ನೆಚ್ಚಿನ ಹವ್ಯಾಸ.

More About Author