Poem

ಪ್ರಾಸ 

 

ಮಂದಿ ಒಂದಾಗಬೇಕಾದರೆ ಕೂಡಬೇಕು ಸಂಬಂಧ
ಮನೆ ಊರು ದೇಶಕ್ಕೂ ಇರಲಿ ಪ್ರಾಸಬಂಧ

ಪ್ರಾಸವೆಂದರೆ ಹೊಂದಬೇಕು ಒಂದಕ್ಕೊಂದು:
ಬಿದಿರ ಗಳುವಿಗೆ ಸ್ವರದ ಮನೆ
ಪಾಯಸಕ್ಕೆ ಬೆಲ್ಲ ಸಂಜೆಗೆನ್ನೆಗೆ ಕೆಂಪು
ಸುಂದರ ಹೆಜ್ಜೆಗೊಂದು ಅಂದದ ಗೆಜ್ಜೆ
ಮಲ್ಲಿಗೆಗೆ ಮಲ್ಲಿಗೆಯದೇ ಪರಿಮಳ
ತುಟಿಗಳಿಗೆ ಅಳುವೋ ನಗುವೋ
ಸಂದರ್ಭಕ್ಕೆ ತಕ್ಕಂತೆ

ಕೂಡಿಕೊಂಡರೇನೆ ಪ್ರಾಸ. ಅಳುವ ಸಂದರ್ಭದಲ್ಲಿ
ನಕ್ಕರೆ ಹೇಗೆ? ರಾಜಕೀಯದಲ್ಲಿ ಪಳಗಿದ ಹುರಿಯಾಳು
ಬೊಬ್ಬೆ ಹಾಕುವುದನ್ನು ಬಿಟ್ಟು
ಹಾಡಿದರೇನು ಚಂದ ಮಾಯಾಮಾಳವಗೌಳ?
ಇರಿಯಬಹುದೆ ಚೂರಿ ತನಗೆ ನೋವಾದರೆ?
ಹೊಂದಿಕೊಂಡೀತೆ ಮಹಾಕಾವ್ಯದ ಮಹಾಛಂದಸ್ಸಿನ ಜತೆ ಹನಿಗವನ?
ನದಿಗಳಷ್ಟೇ ಸಾಕೆ ಸಮುದ್ರಕ್ಕೆ?

ಪ್ರಾಸಕ್ಕೂ ಬೆಸಸಂಖ್ಯೆಗೂ ಎಣ್ಣೆಸೀಗೆ. ಸಮಸಂಖ್ಯೆಯಾದರೆ
ಕನಸಿನಲ್ಲಾದರೂ ಸುಸಂಗತವಾದೀತು ಬದುಕು
ನವೋದಯ ಕಾವ್ಯದ ಹಾಗೆ
ಛಂದೋಬದ್ಧ ಪ್ರಾಸ ಒಳಪ್ರಾಸ ಅನುಪ್ರಾಸ ಸುಹಾಸ
ಸಮಸಮನಾಗಿ ಎಡ ಬಲ

ಬಲವಿದ್ದರೇನೇ ಎಡಕ್ಕೆ ಪ್ರಾಸ
ಅಥವಾ ಬಲಕ್ಕೆ. ಇಲ್ಲದಿದ್ದರೆ ಬರೀ ಪರಿಹಾಸ

ಮನುಷ್ಯನ ಪಾಡು ನೋಡಿ: ಪ್ರೀತಿಸಬೇಕು ದ್ವೇಷಿಸಬೇಕು ಒಟ್ಟಿಗೆ
ಅಳಬೇಕು ನಗಬೇಕು ಅವೇ ಕಣ್ಣುಗಳಿಂದ
ತಲೆ ಸವರಬೇಕು ಕಲ್ಲೆಸೆಯಬೇಕು ಅವೇ ಕೈಯಿಗಳಿಂದ
ಶಪಿಸಬೇಕು ಕ್ಷಮಿಸಬೇಕು
ನೆನಪಿಟ್ಟುಕೊಳ್ಳಬೇಕು ಮರೆತುಬಿಡಬೇಕು

ಹೆಚ್ಚುಕಡಿಮೆಯಾದರೆ ಪ್ರಾಸದ ಹ್ರಾಸ
ವ್ಯವಸ್ಥೆ ಅವ್ಯವಸ್ಥೆ ಅರ್ಥ ಅಪಾರ್ಥ
ಕಲೆ ಧರ್ಮ ನ್ಯಾಯ ಕಾನೂನು ಸ್ವಾತಂತ್ರ್ಯ ಅನುಕಂಪ ಇತ್ಯಾದಿ
ಇದ್ದೂ ಇಲ್ಲದಂತೆ ವ್ಯರ್ಥ

ಅದಕ್ಕೇ ನೋಡಿ ಅಪರೂಪದಲ್ಲಿ ಅಪರೂಪ ಗಾಂಧಿ ಅಂಬೇಡ್ಕರರು
ಯಾರಿದ್ದಾರೆ ಅವರಿಗೆ ಪ್ರಾಸವಾಗುವವರು?

ಎಸ್. ದಿವಾಕರ್‌

ಎಸ್. ದಿವಾಕರ್ ಅವರು 28 ನವೆಂಬರ್ 1944 ರಲ್ಲಿ ಜನಿಸಿದರು.  ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯಲ್ಲಿ. ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಅಂಕಣ ಬರಹ, ಭಾಷಾಂತರ, ಸಂಪಾದನೆ ಇವೆಲ್ಲದರಲ್ಲಿ ಸ್ವೋಪಜ್ಞತೆ ಮತ್ತು ವಿಶಿಷ್ಟತೆ ಮೆರೆದಿರುವ ಎಸ್. ದಿವಾಕರ್‌, ಸವಿಸ್ತಾರ ಓದಿನ ಜಾಗೃತ ಮನಸ್ಸಿನ ಲೇಖಕರು.

ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಅಮೆರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಕನ್ನಡ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಪ್ರಕಟಿತ ಕೃತಿಗಳಾದ  ಇತಿಹಾಸ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ ಆಯ್ದ ಕತೆಗಳು (ಕಥಾ ಸಂಕಲನಗಳು), ಆತ್ಮಚರಿತ್ರೆಯ ಕೊನೆಯ ಪುಟ (ಕವನ ಸಂಕಲನ), ನಾಪತ್ತೆಯಾದ ಗ್ರಾಮಾಫೋನು, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ (ಪ್ರಬಂಧಗಳು), ಪ್ರಪಂಚ ಪುಸ್ತಕ (ವಿಮರ್ಶಾ ಲೇಖನಗಳು), ಪಂಡಿತ ಭೀಮಸೇನ ಜೋಶಿ (ವ್ಯಕ್ತಿಚಿತ್ರ), ಕಥಾಜಗತ್ತು, ಜಗತ್ತಿನ ಅತಿಸಣ್ಣ ಕತೆಗಳು, ಉತ್ತರ ದಕ್ಷಿಣ ದಿಕ್ಕುಗಳನ್ನು ಬಲ್ಲವನು, ಹಾರಿಕೊಂಡು ಹೋದವನು (ಅನುವಾದಿತ ಕಥೆಗಳು), ವೆನಿಸ್ಸಿನಲ್ಲಿ ಸಾವು, ಹಳ್ಳಿ, ಪೋಸ್ಟ್ ಮ್ಯಾನ್ (ಅನುವಾದಿತ ಕಾದಂಬರಿಗಳು), ಮಾಸ್ಟರ್ ಬಿಲ್ಡರ್ (ಅನುವಾದಿತ ನಾಟಕ), ಶತಮಾನದ ಸಣ್ಣಕತೆಗಳು, ಸಣ್ಣಕತೆ 1983, ಕನ್ನಡ ಅತಿ ಸಣ್ಣಕತೆಗಳು, ನಾದದ ನವನೀತ, ಬೆಸ್ಟ್ ಆಫ್ ಕೇಫ (ಸಂಪಾದಿತ ಕೃತಿಗಳು).

 

More About Author