Poem

ಪ್ರೇಮ ಸಿಂಚನ

ಪಿಡಿದ ಕರಗಳು ಹೇಳ ಬಯಸಿದ
ಹಿಡಿತ ಬಿಡದಿರು ಗೆಳೆಯನೆ
ನಡುವೆ ಅಂತರ ಬೇಡದಿರಲದು
ನಡೆವೆ ಸನಿಹಕೆ ಹೃದಯವೆ

ನೆಟ್ಟ ನೋಟದಿ ಎಲ್ಲ ಅರಿತೆನು
ಕೊಟ್ಟು ಪಡೆಯುವ ಭಾಷೆಯ
ಮಧುರ ಭಾವಕೆ ಸೋತು ನಿಂತಿಹೆ
ಅಧರ ಕಂಪನವರಿಯದೆ

ಹಳೆಯ ನೆನಪಿನ ಗುಂಗಿನೊಡನೆಯೆ
ಬೆಳೆದು ನಿಂತಿದೆ ಗೆಳೆತನ
ಬಾಳಿನುದ್ದಕು ಪ್ರೀತಿ ಜೀಕುತ
ಗೋಳು ಮರೆಸುವ ಸಿರಿತನ

ಹಸಿರಿನಂಗಳ ಕೂಗಿ ಕರೆದಿದೆ
ಉಸಿರು ತುಂಬುವ ಒಲವಿಗೆ
ನಾನು ನೀನೂ ಜೊತೆಯಲಿರಲದು
ಬಾನು ಇರುವುದು ಸಾಕ್ಷಿಗೆ

ನೂರು ಬಯಕೆಯ ಹೇಳುವಾತುರ
ತೂರಿ ಕಂಗಳ ಒನಪಲಿ
ಅರಿವೆ ನಿನ್ನಯ ಎದೆಯ ಭಾಷೆಯ
ಬೆರೆತು ಬಯಸಿದ ರೀತಿಲಿ

-ಭಾರತಿ ಕೊಲ್ಲರಮಜಲು

ಭಾರತಿ ಕೊಲ್ಲರಮಜಲು

ಲೇಖಕಿ ಭಾರತಿ ಕೊಲ್ಲರಮಜಲು ಮೂಲತಃ ಪುತ್ತೂರಿನ ಮಣಿಯ ಕೃಷಿ ಕುಟುಂಬದವರು. ಕತೆ, ಕವನ, ರುಬಾಯಿ, ಗಝಲ್, ಮುಕ್ತಕಗಳು, ಪರಿಸರ ಪ್ರೇರಿತ ಕೃತಿಗಳ ರಚನೆಯ ಜೊತೆಗೆ, ಶಾಸ್ತ್ರೀಯ ಸಂಗೀತ ಅವರ ಆಸಕ್ತಿಯ ಕ್ಷೇತ್ರ.

More About Author