Story

ಸಾಹುಕಾರ ಚಪ್ಪಲ್ ಅಂಗಡಿ

ಆ ಸರ್ಕಲಿನ ಬಲಬದಿಯ ಫುಟಪಾತ ಮೇಲೆ ಸಣ್ಣ ಆಲದ ಗಿಡವೊಂದಿದೆ ಅದು ಆಗ ತಾನೆ ಹಚ್ಚಿ ಎರಡ್ಮೂರು ವರ್ಷಗಳಾಗಿರಬೇಕು ನೆರಳು ಕೊಡುವಷ್ಟು ದೊಡ್ಡದಾಗಿ ಬೆಳೆಯದಿದ್ದರು ತಕ್ಕ ಮಟ್ಟಿಗೆ ನೆರಳು ಕೊಡಬಲ್ಲದು ಆ ನೆರಳಿನ ಆಸರೆಗೆ ಚಪ್ಪಲ ಪಾಲೀಸುಗಾರನೊಬ್ಬ ತನ್ನ ಕಾಯಕದಲ್ಲಿ ನಿರತನಾಗಿರುತಿದ್ದ ಫುಟಪಾತಿನ ಮುಂದಿನ ರಸ್ತೆ ಯಾವಾಗಲೂ ವಹಾನ ಸಂಚಾರ ಹೆಚ್ಚಾಗಿತ್ತು ಯಾಕೆಂದರೆ ಇಲ್ಲಿಂದಲೇ ಬಸ್ ಅಟೋ ಬೈಕ್ ಕಾರ ಜೀಪು ಮತ್ತಿತರ ವಹಾನ ಮಾರ್ಕೇಟ ಮತ್ತಿತರ ಕಡೆ ಹೋಗುತಿದ್ದವು ಸಮೀಪದಲ್ಲೇ ಒಂದು ಪ್ರತಿಷ್ಠಿತ ಮಂದಿರ ಕೂಡ ಇದೆ ಆದು ಅನೇಕರ ಶ್ರದ್ಧಾ ಭಕ್ತಿಯ ಕೇಂದ್ರವಾಗಿತ್ತು ಫುಟಪಾತ ಮೇಲೆ ಸಣ್ಣ ಪುಟ್ಟ ವ್ಯಾಪಾರ ಜೋರಾಗಿ ನಡೆಯುತಿತ್ತು ಹೂ, ಹಣ್ಣು, ತೆಂಗು, ಮಾರುವವರ ಕೊಳ್ಳುವವರ ಮದ್ಯ ಚೌಕಾಸಿ ಸಾಮಾನ್ಯವಾಗಿರುತಿತ್ತು ಮಂದಿರಕ್ಕೆ ಹೋಗುವ ಭಕ್ತಾದಿಗಳು ತಮ್ಮ ಚಪ್ಪಲಿ ಹೊರ ಗೇಟಿನ ಹತ್ತಿರ ಬಿಟ್ಟು ನಾವು ದೇವರಿಗೆ ಹೋಗಿ ಬರ್ತೀವಿ ಚಪ್ಪಲಿ ಕಡೆ ಸ್ವಲ್ಪ ನಿಗಾ ಇರಲಿ ಅಂತ ಆಲದ ಗಿಡದ ಕೆಳಗೆ ಕುಳಿತು ಪಾಲೀಸ ಮಾಡುತಿದ್ದ ಕರೆಪ್ಪನಿಗೆ ಹೇಳುತಿದ್ದರು ಅವರ ಮಾತಿಗೆ ಆತ ಹ್ಞೂಂ ಅಂತ ತಲೆಯಾಡಿಸುತಿದ್ದ ಕರೆಪ್ಪನ ಸುತ್ತಲೂ ಜನ ಸುತ್ತುವರಿದು ಚಪ್ಪಲಗಳ ಪಾಲಿಸು ದುರಸ್ತಿ ಅಂತ ಮಾಡಿಸಿಕೊಳ್ಳುತಿದ್ದರು ಅವರ ಜೊತೆ ಕರೆಪ್ಪ ಆಗಾಗ ದೇಶಾವರಿ ಚರ್ಚೆಯೂ ಮಾಡುತಿದ್ದ.

ಪಾಲೀಸ ಡಬ್ಯದಲ್ಲಿ ಬ್ರಶ್ ತುದಿ ಅದ್ದಿ ಚಪ್ಪಲಿಗಳಿಗೆ ಹಚ್ಚಿ ಅದರ ಮೇಲೆ ಕ್ರೀಮ ಲೇಪಿಸಿ ಸುಮಾರು ಹೊತ್ತು ಬ್ರಶಿನಿಂದ ತಿಕ್ಕಿ ಮಿರಿಮಿರಿ ಮಿಂಚುವಂತೆ ಮಾಡಿದಾಗ ಹಳೆಯ ಚಪ್ಪಲಿಗಳು ಕೂಡ ಹೊಸದರಂತೆ ಕಾಣುತಿದ್ದವು ಭೇಷ್ ಕರೆಪ್ಪ ನಾನು ಎಷ್ಟೊ ಕಡೆ ಪಾಲೀಸ ಮಾಡಸೀನಿ ಆದರೆ ನಿನ್ನಂಗ ಈ ಸರ್ಕಲಿನಲ್ಲಿ ಯಾರೂ ಪಾಲೀಸೇ ಮಾಡಂಗಿಲ್ಲ ಅಂತ ಒಬ್ಬಾತ ಹೊಗಳಿ ಐವತ್ತರ ನೋಟು ಇವನ ಕೈಗಿಟ್ಟಾಗ ಕರೆಪ್ಪ ಖುಷಿಗೊಂಡು ಉಳಿದ ರೊಕ್ಕಾ ವಾಪಸ್ ಕೊಟ್ಟ . ನಾಲ್ಕಾರು ರುಪಾಯಿ ಚಿಲ್ಲರೆ ಉಳಿದರೆ ಇರಲಿ ನೀನೇ ಇಟ್ಕೊ ಅಂತ ಇವನಿಗೆ ಅನೇಕರು ಹೇಳುತಿದ್ದರು. ಆ ಆಲದ ಗಿಡ ನೆರಳು ಕಡಿಮೆ ಕೊಡುತಿತ್ತು ಪ್ರಖರ ಬಿಸಿಲಿನಿಂದ ರಕ್ಷಣೆ ಪಡೆಯಲು ಕರೆಪ್ಪ ಛತ್ರಿ ವ್ಯವಸ್ಥೆಯೂ ಮಾಡಿಕೊಂಡಿದ್ದ ಸಾಯಂಕಾಲ ಕೆಲಸಾ ಮುಗಿಸಿ ಮನೆಗೆ ಹೋಗುವಾಗ ಛತ್ರಿ ತೆಗೆದು ಚಾಪೆಯಲ್ಲಿ ಸುತ್ತಿ ಗಿಡದ ಬುಡದಲ್ಲಿಡುತಿದ್ದ ಅದು ಹಳೆಯ ಛತ್ರಿ ಆಗಿರುವುದರಿಂದ ಯಾರು ಕೂಡ ಅದನ್ನು ತೆಗೆದುಕೊಂಡು ಹೋಗುತಿರಲಿಲ್ಲ ಮುಂಜಾನೆ ಬರುವತನಕ ಅದು ಇದ್ದ ಜಾಗದಲ್ಲೇ ಇರುತಿತ್ತು. ಕರೆಪ್ಪ ಯಾವಾಗಲು ಬಿಳಿ ಬಣ್ಣದ ಪೈಜಾಮ ಶರ್ಟ್ ತಲೆಗೊಂದು ಹಸಿರು ಬಣ್ಣದ ಮಂಕಿ ಟೋಪಿ ಧರಿಸುತ್ತಿದ್ದ ಬರುವಾಗ ಹೋಗುವಾಗ ಕೈಯಲ್ಲಿ ತೂತು ಬಿದ್ದ ಅದೇ ಹಳೆಯ ಚೀಲ ಇರುತಿತ್ತು ಅದರಲ್ಲಿ ಪಾಲೀಸ ಮಾಡುವ ಡಬ್ಬ ಬ್ರಶ್ ರಿಪೇರಿ ಸಾಮಾನು ಇರುತಿದ್ದವು ಅವುಗಳನ್ನು ಚಾಪೆಯ ಮೇಲೆ ಹರಡಿ ಕೆಲಸದಲ್ಲಿ ನಿರತನಾದರೆ ಮುಗೀತು ಸಾಯಂಕಾಲದ ತನಕ ಬೆವರೊರೆಸಿಕೊಳ್ಳಲು ಪುರುಸೊತ್ತೇ ಸಿಗುತಿರಲಿಲ್ಲ ಇವನ ಕೈಗಳು ಬಣ್ಣದ ಕಲೆಯಿಂದ ಮಾಸಿರುತಿದ್ದವು ಇವನ ಹತ್ತಿರ ಪಾಲಿಸು ದುರಸ್ತಿಗಾಗಿ ಬರುವವರು ಬಹುತೇಕರು ಸ್ಥಳೀಯರೇ ಆಗಿದ್ದರು ಹೆಚ್ಚು ಕಡಿಮೆ ಪರಿಚಯಸ್ಥರು ಕೆಲವೊಮ್ಮೆ ಹೊಸಬರು ಯಾರಾದ್ರೂ ಬಂದು ಇವನಿಂದ ಪಾಲೀಸ ಮಾಡಿಸಿಕೊಂಡು ಹೋದರೆ ಅವರೆಂದೂ ಇವನ ಪಾಲೀಸ ಮರೆಯುತಿರಲಿಲ್ಲ ಪುನಃ ಯಾವಾಗಾದ್ರು ಸರ್ಕಲ್ ಕಡೆ ಬಂದರೆ ಇವನ ಹತ್ರಾನೇ ಬಂದು ಪಾಲೀಸ ಮಾಡಿಸಿಕೊಂಡು ಹೋಗುತಿದ್ದರು ಅಷ್ಟೊಂದು ನಿಪುಣ ಪಾಲೀಸಗಾರನಾಗಿದ್ದ.

ಕರೆಪ್ಪ ಮೊದಲ ಬಾರಿಗೆ ಪಾಲೀಸ ಕೆಲಸ ಆರಂಭಿಸಿದಾಗ ಪಾಲೀಸ ಮಾಡುವದೇ ಗೊತ್ತಿರಲಿಲ್ಲ ಒಂದು ಪಾಲೀಸ ಡಬ್ಬ ಒಂದು ಬ್ರಶ್ ತಂದು ಫುಟಪಾತ ಮೇಲೆ ಕೂಡುತಿದ್ದ ದಿನದಲ್ಲಿ ಒಂದೆರಡು ಗಿರಾಕಿ ಮಾತ್ರ ಬರುತಿದ್ದವು ಎಲ್ಲ ಚಪ್ಪಲಿಗೂ ಒಂದೇ ಬಣ್ಣ ಬಳೆಯುತಿದ್ದ ಇದರಿಂದ ಚಪ್ಪಲಿ ಅಂದಗೆಟ್ಟು ಹೋಗುತಿದ್ದವು ಹರಿದ ಚಪ್ಪಲಿಗೆ ಯಾವ ರೀತಿ ಹೊಲಿಗೆ ಹಾಕಬೇಕು ರಿಪೇರಿ ಮಾಡಬೇಕು ಅನ್ನುವದೂ ಗೊತ್ತಿರಲಿಲ್ಲ ಪಾಲೀಸ ಮಾಡಿಸಿಕೊಂಡು ಹೋದವರು ಸಂತೃಪ್ತಿಯಾಗದೆ ಗೊಣಗುತ್ತಾ ಹೋಗುತಿದ್ದರು ಕೆಲವರು ಇವನ ಮೇಲೆ ಸಿಟ್ಟು ಮಾಡಿಕೊಂಡರೆ ಇನ್ನೂ ಕೆಲವರು ರೊಕ್ಕಾ ಕೊಡದೆ ತಕರಾರು ತೆಗೆದು ಹಾಗೇ ಹೋಗುತಿದ್ದರು ಪಾಲೀಸ ಮಾಡಿದರು ಇವನು ಒಮ್ಮೊಮ್ಮೆ ಖಾಲಿಗೈಯಿಂದ ಮನೆಗೆ ಹೋಗುತಿದ್ದ ಆಗ ಬಹಳ ಬೇಸರವಾಗುತಿತ್ತು ಈ ಕೆಲಸ ಮಾಡುವದೇ ಬೇಡ ಬೇರೆ ಯಾವುದಾದರೂ ಕೆಲಸ ಮಾಡಬೇಕು ಅಂತ ಅನಿಸುತಿತ್ತು ಆದರೆ ಬೇರೆ ಏನು ಮಾಡೋದು? ಹೋಟೆಲು, ಅಂಗಡಿ ಏನಾದರೂ ಮಾಡಲು ಹಣ ಬೇಕು ಅಂತ ಇದೇ ಕೆಲಸ ಮುಂದುವರೆಸಿದ.

ಒಂದು ಸಲ ಇವನ ಕಡೆಯಿಂದ ಪಾಲೀಸ ಮಾಡಿಸಿಕೊಂಡ ವ್ಯಕ್ತಿಯೊಬ್ಬ ಪಾಲೀಸ ಛೊಲೊ ಮಾಡಿ ಕೊಟ್ಟಿಲ್ಲ ಅಂತ ಸಿಟ್ಟಾಗಿ ಇವನ ಅಂಗೀ ಕಾಲರ್ ಹಿಡಿದು ಎಳೆದಾಡಿ ಪಾಲೀಸ ಬರದಿದ್ದರೆ ಯಾಕೆ ಮಾಡತಿ? ಯಾರಿಗಾದರೂ ಕೈಕಾಲು ಬಿದ್ದು ಬಿಕ್ಛಾ ಬೇಡಿ ಜೀವನಾ ಸಾಗಿಸು ಅಂತ ಬೈದು ಮಾನ ಕಳೆದಿದ್ದ ಇದರಿಂದ ಕರೆಪ್ಪನ ಮನಸ್ಸಿಗೆ ನೋವಾಗಿತ್ತು ಇಂತಹ ಬೈಗುಳ ಇತರರ ಕಡೆಯಿಂದಲೂ ಆಗಾಗ ಬೈಸಿಕೊತಿದ್ದ ಆದರೆ ಏನು ಮಾಡೋದು ಮಜಬೂರ ಆಗಿದ್ದ . ಗಿರಾಕಿಗಳು ತನ್ನ ಗಂಡನ ಜೊತೆ ತಕರಾರು ಮಾಡುವ ವಿಷಯ ಹೆಂಡತಿ ಯಂಕವ್ವನಿಗೆ ಯಾರೊ ಬಂದು ತಿಳಿಸಿದರು ಅವಳು ಒಂದಿನ ತನ್ನ ಕೆಲಸ ಕಾರ್ಯ ಬಿಟ್ಟು ನೇರವಾಗಿ ಇವನು ಕೆಲಸಾ ಮಾಡುವ ಸ್ಥಳಕ್ಕೆ ಬಂದು ಊರಾಗ ಕೂಲಿ ಕೆಲಸಾ ಮಾಡೋದು ಬಿಟ್ಟು ಇದ್ಯಾಕ ಮಾಡತೀದಿ? ಅಲ್ಲಿ ತಾಸು ಗಳಿಗೆ ಆರಾಮ ಕುಂತರೂ ನಡೀತಿತ್ತು ಯಾರೂ ಹಂಗ್ಯಾಕ ಮಾಡಿದೆ? ಹಿಂಗ್ಯಾಕ ಮಾಡಿದೆ? ಅಂತ ಕೇಳುತಿರಲಿಲ್ಲ ಗೊತ್ತಿಲ್ಲದ ಈ ಕೆಲಸಕ್ಕೆ ಕೈ ಹಾಕಿ ಮಂದಿ ಕಡೆಯಿಂದ ಬೈಸಿಕೊಳ್ಳೋದು ಛೊಲೊ ಕಾಣಸ್ತಾದೇನು? ಅಂತ ಬುದ್ಧಿವಾದ ಹೇಳಿದ್ದಳು.

ಹೆಂಡತಿಯ ಮಾತು ಸರಿಯಾಗಿದ್ದರೂ ಕರೆಪ್ಪನ ಕಡೆಯಿಂದ ಕೂಲಿ ಕೆಲಸಾ ಆಗುತಿರಲಿಲ್ಲ ಆ ಶಕ್ತಿ ಸಾಮರ್ಥ್ಯವೂ ಇವನಲ್ಲಿ ಉಳಿದಿರಲಿಲ್ಲ ಏನಾದರೂ ನೌಕರಿ ಮಾಡಬೇಕು ಅಂತ ಅಲ್ಲಲ್ಲಿ ವಿಚಾರಿಸಿದ್ದ ಆದರೆ ಓದು ಬರಹ ಬಾರದವನಿಗೆ ಎಲ್ಲಿಯೂ ನೌಕರಿ ಸಿಕ್ಕಿರಲಿಲ್ಲ ಅನಿವಾರ್ಯವಾಗಿ ಈ ಕೆಲಸದಲ್ಲಿ ತೊಡಗಿದ ಇದು ಹೆಚ್ಚು ಹೈರಾಣಾಗದೆ ನೆರಳಿಗೆ ಕುಳಿತು ಮಾಡುವ ಈ ಕೆಲಸವಾಗಿತ್ತು ಆದರೆ ಸರಿಯಾಗಿ ಬರದೇ ಇರುವದರಿಂದ ಸಮಸ್ಯೆ ಎದುರಿಸಿದ . ಗಿರಾಕಿ ಬೈತಾರೆ ಹೆಂಡತಿ ಬೈತಾಳೆ ಅಂತ ತಲೀಗಿ ಹಚ್ಚಿಕೊಂಡು ಈ ಕೆಲಸಾ ಬಿಡಬೇಡ ಸ್ವಲ್ಪ ದಿನ ಹಂಗೇ ಕೆಲಸಾ ಮಾಡತಾ ಹೋದಿ ಅಂದರೆ ನಿನ್ನ ಕೈ ಸಾಫ್ ಆಗಿ ಪರಫೆಕ್ಟ ಆಗತಿ ಇನ್ನೂ ಒಂದೆರಡು ಹೊಸ ಪಾಲೀಸ ಡಬ್ಬ ಬ್ರಶ್ ತೊಗೊಂಡು ಬಾ ಚಪ್ಪಲಿ, ಬೂಟುಗಳಿಗೆ ಯಾವ್ಯಾವ ಬಣ್ಣ ಹಚ್ಚಿ ಯಾವ ರೀತಿ ಪಾಲೀಸ ಮಾಡಬೇಕು ಅನ್ನುವದರ ಬಗ್ಗೆ ಯಾರಾದರೂ ಒಬ್ಬ ಛೊಲೊ ಪಾಲೀಸಗಾರನ ಹತ್ರಾ ಹೋಗಿ ಒಂದೆರಡು ದಿನ ಕಲ್ತು ಬಾ ಆವಾಗ ನೋಡು ಎಲ್ಲರೂ ನಿನ್ನ ಹತ್ರಾನೇ ಪಾಲೀಸ ಮಾಡಿಸಲು ಬರ್ತಾರೆ ನೀನು ಕೇಳಿದಷ್ಟು ರೊಕ್ಕಾ ಕೊಟ್ಟು ಹೋಗತಾರೆ ಅಂತ ಹಿತೈಷಿಗಳು ಸಲಹೆ ಕೊಟ್ಟರು ಅವರ ಸಲಹೆ ಕರೆಪ್ಪನಿಗೆ ಸಮಯೋಚಿತವೆನಿಸಿ ಒಬ್ಬ ಅನುಭವಿ ಪಾಲೀಸಗಾರನ ಹತ್ರಾ ಹೋಗಿ ಆತನಿಗೆ ಚಹಾ ನಾಷ್ಟಾ ಮಾಡಿಸಿ ಅವನಿಂದ ಪಾಲೀಸು ರಿಪೇರಿ ಮಾಡುವುದು ಕಲಿತು ಬಂದ.

ಕರೆಪ್ಪ ಎಂದಿನಂತೆ ತನ್ನ ಕಾಯಕದಲ್ಲಿ ನಿರತನಾದ ಮಂದಿರದಲ್ಲಿ ಯಾವುದೊ ಒಂದು ಧಾರ್ಮಿಕ ಕಾರ್ಯಕ್ರಮವಿತ್ತು ಬಂದು ಹೋಗುವವರ ಸಂಖ್ಯೆ ಹೆಚ್ಚಾಗಿತ್ತು ದಿನದಕ್ಕಿಂತಲೂ ಹೆಚ್ಚಿನ ಜನಾ ಇವನನ್ನು ಸುತ್ತುವರಿದು ಪಾಲೀಸ ಮಾಡಿಕೊಡು ನಾವು ಊರಿಗೆ ಹೋಗಬೇಕು ಬಾಜಾರಿಗೆ ಹೋಗಬೇಕು ಆ ಕೆಲಸಾ ಇದೆ ಈ ಕೆಲಸಾ ಇದೆ ಅಂತ ಒಂದೇ ಸವನೆ ಅವಸರ ಮಾಡುತಿದ್ದರು ಅವರಿಗೆ ಸಮಾಧಾನ ಮಾಡಿ ಪಾಲೀಸ ಮಾಡಿ ಕೊಡುವದು ಕರೆಪ್ಪನಿಗೆ ಕಷ್ಟದ ಕೆಲಸವೇ ಆಗಿತ್ತು ಯಾರೋಬ್ಬರು ಮೊದಲಿನಂತೆ ಪಾಲೀಸ ಛೊಲೊ ಮಾಡಿಲ್ಲ ಅಂತ ತಕರಾರು ಮಾಡುವದಾಗಲಿ ರೊಕ್ಕಾ ಕೊಡದೆ ಹಾಗೇ ಹೋಗುವದಾಗಲಿ ಮಾಡಲಿಲ್ಲ ಪಾಲೀಸ ಮಾಡುವದರಲ್ಲಿ ಬಹಳ ಎಕ್ಸಫರ್ಟ ಆಗೀದಿ ಮೊದ ಮೊದಲು ಯಾರೂ ನಿನ್ನ ಹತ್ರಾ ಪಾಲೀಸಿಗೇ ಬರುತಿರಲಿಲ್ಲ ಆಗ ಕೆಲಸಿಲ್ಲದೆ ಸುಮ್ಮನೆ ಕೂಡುತಿದ್ದೆ ಆದರೀಗ ಪಾಲೀಸ ಮಾಡಿಸಲು ಜನ ಮುಗಿ ಬೀಳತಿದ್ದಾರೆ ಅಂತ ಅನೇಕರು ಪ್ರಶಂಸಿಸಿದರು.

ಸುಮಾರು ಅರ್ಧ ಗಂಟೆ ಕಳೆಯುವುದರಲ್ಲಿ ಹತ್ತಿಪ್ಪತ್ತು ಜೋಡು ಚಪ್ಪಲಿ ಪಾಲೀಸ ಮಾಡಿಕೊಟ್ಟ ಅದಾದ ಮೇಲೂ ಪಾಲೀಸ ಮಾಡಿಸಲು ಜನ ಹಾಗೆ ಬರ್ತಾನೆ ಇದ್ದರು ಏನಾದರೂ ಜಾದೂ ಕಲ್ತೀದೇನು? ಎಷ್ಟು ಫಾಸ್ಟ ಪಾಲೀಸ ಮಾಡತಿ ಅಂತ ಒಬ್ಬಿಬ್ಬರು ಪ್ರಶ್ನಿಸಿದರು ಅವರ ಮಾತಿಗೆ ಕರೆಪ್ಪ ಮುಗ್ಳನಗೆ ಬೀರಿದ ಅದೇ ಸಮಯ ಅಪರಿಚಿತ ವ್ಯಕ್ತಿಯೊಬ್ಬ ಪಾಲೀಸ ಮಾಡಿಸಿಕೊಳ್ಳಲು ಕರೆಪ್ಪನ ಹತ್ತಿರ ಬಂದ ಆತ ಮಧ್ಯೆ ವಯಸ್ಸಿನ ವ್ಯಕ್ತಿ ಬಿಳಿ ಅಂಗಿ ಧೋತಿ ತೊಟ್ಟಿದ್ದ ದಷ್ಟ ಪುಷ್ಟ ಶರೀರ ಗಜ್ಜರಿಯಂತಹ ಮೈಬಣ್ಣದ ಹೊಂದಿದ್ದ ತರಕಾರಿ ತುಂಬಿದ ಕೈಚೀಲ ಹಿಡಿದಿದ್ದ ಆತ ಹೊಸಬನಾಗಿದ್ದರಿಂದ ಅನೇಕರು ಅವನಿಗೆ ಪ್ರಶ್ನಾರ್ಥಕವಾಗಿ ನೋಡಿ ಅಕ್ಕ ಪಕ್ಕದ ಹಳ್ಳಿಯವನಿರಬೇಕು ಅಂತ ಭಾವಿಸಿದರು ಯಾರೂ ವಿಚಾರಿಸಲು ಹೋಗಲಿಲ್ಲ ಅಷ್ಟರಲ್ಲಿ ಆತನ ಜೇಬಿನಲ್ಲಿದ್ದ ಮೊಬೈಲ್ ರಿಂಗಾಯಿತು ಹೊರ ತೆಗೆದು ಹಲೊ ಅಂತ ಸ್ವಲ್ಪ ಹೊತ್ತು ಮಾತನಾಡಿ ನನ್ನ ಮೊಮ್ಮಗಳು ಫೋನ್ ಮಾಡಿದ್ದಾಳೆ ಅವಳಿಗೆ ಚಾಕಲೇಟ್ ಬೇಕಂತೆ ತರದಿದ್ದರೆ ಕೋಪ ಮಾಡಕೊತಾಳೆ ನಾನು ಹೋಗಿ ತರ್ತೀನಿ ನನ್ನ ಚಪ್ಪಲಿ ಪಾಲೀಸ ಮಾಡಿಡು ಅಂತ ಕರೆಪ್ಪನಿಗೆ ಹೇಳಿ ತನ್ನ ಕೈಚೀಲ ಇವನ ಹತ್ತಿರ ಇಟ್ಟು ರಸ್ತೆಯ ಆಚೆ ಇರುವ ಅಯ್ಯಂಗಾರ್ ಬೇಕರಿ ಕಡೆ ಹೊರಟ ಇನ್ನೇನು ರಸ್ತೆ ದಾಟಬೇಕು ಅನ್ನುವಷ್ಟರಲ್ಲಿ ಬಲಗಡೆಯಿಂದ ವೇಗವಾಗಿ ಬಂದ ಬೈಕ ಆತನಿಗೆ ಡಿಕ್ಕಿ ಹೊಡೆಯಿತು ಕ್ಛಣ ಮಾತ್ರದಲ್ಲೇ ಆತ ರಸ್ತೆಯ ಮೇಲೆ ಕುಸಿದು ಬಿದ್ದ ಅಕ್ಕ ಪಕ್ಕದ ಜನ ಜಮಾವಣೆಗೊಂಡರು ಎರಡೂ ಕಾಲಿನ ಮೇಲೆ ಬೈಕ್ ಹಾದು ಹೋಗಿದ್ದರಿಂದ ಎಲುಬು ಮುರಿದು ರಕ್ತ ಸ್ರಾವವಾಗುತಿತ್ತು ನೋವಿನಿಂದ ಒಂದೇ ಸವನೆ ನರಳುತಿದ್ದ ಯಾರೋ ಒಬ್ಬಾತ ತಕ್ಷಣ ಅಂಬುಲೆನ್ಸಿಗೆ ಕರೆ ಮಾಡಿ ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಿದ.

ನೋಡ್ರಿ ಜೀವನ ಹಿಂಗೇ ಇರ್ತಾದಂತ ಹೇಳಲಿಕ್ಕೆ ಬರೋದಿಲ್ಲ ರಸ್ತೆ ದಾಟುವದರಲ್ಲಿ ಈ ಅನಾಹುತ ಸಂಭವಿಸಿತು ಯಾವೂರವನೊ ಏನೊ ಪಾಪ ಅಂತ ಜನ ಪರಸ್ಪರ ಹಳಾಳಿಸಿದರು ಕರೆಪ್ಪ ಈ ಘಟನೆ ಕಣ್ಣಾರೆ ಕಂಡು ಮನಸ್ಸಿಗೆ ಅಘಾತವಾಯಿತು ಉಸಿರು ಬಿಗಿ ಹಿಡಿದು ಗಿಡದ ಕೆಳಗೆ ಬಂದು ಕುಳಿತ ಪಾಲೀಸ ಮಾಡಲು ಕೂಡ ಮನಸ್ಸಾಗಲಿಲ್ಲ ಆತ ಬಿಟ್ಟು ಹೋದ ಚಪ್ಪಲಿ ಕಡೆ ಒಂದೇ ಸವನೆ ಕಣ್ಣು ಬಡಿಯದೆ ನೋಡತೊಡಗಿದ ಆ ಚಪ್ಪಲಿ ನಿನ್ನ ಹತ್ರಾ ಇಟ್ಕೊಂಡು ಏನು ಮಾಡತಿ ಅವರಿಗೆ ಒಯ್ದು ಕೊಟ್ಟು ಬರಬಾರದಾ? ಇನ್ನೂ ಹೊಸ ಚಪ್ಪಲಿ ಕಂಡಂಗ ಕಾಣಸ್ತಾವೆ ಅಂತ ಪಕ್ಕದಲ್ಲಿ ನಿಂತವನೊಬ್ಬ ಕರೆಪ್ಪನಿಗೆ ಸಲಹೆ ನೀಡಿದ ನಾನೇ ಒಯ್ದು ಕೂಡುತಿದ್ದೆ ಆದರೆ ಯಾವ ಆಸ್ಪತ್ರೆ ಅಂತ ನನಗೂ ಗೊತ್ತಿಲ್ಲ ಎಂದು ಅಸಹಾಯಕತೆ ತೋರ್ಪಡಿಸಿದ ಈ ಚಪ್ಪಲಿ ತೊಗೊಂಡಾದರೂ ಆ ವ್ಯಕ್ತಿ ಏನು ಮಾಡತಾನೆ? ಅವನೇ ಸಂಕಟದಲ್ಲಿದ್ದಾನೆ ಆರಾಮ ಆಗಿ ಮೊದಲಿನಂಗ ನಡೆಯಲು ಬರಬೇಕಾದರೆ ಮೂರ್ನಾಲ್ಕು ತಿಂಗಳಾದರೂ ಬೇಕು ಆಮ್ಯಾಲ ತಾನೇ ಬಂದು ತೊಗೊಂಡು ಹೋಗ್ತಾನೆ ಅಂತ ಇನ್ನೊಬ್ಬ ಸಲಹೆ ನೀಡಿದ ನನಗೆ ಆಸ್ಪತ್ರೆ ಯಾವದು ಅಂತ ಗೊತ್ತು ಆದರೆ ಬೇರೆ ಯಾವುದಾದರೂ ವಸ್ತು ಇದ್ದರೆ ಒಯ್ದು ಕೂಡುತಿದ್ದೆ ಈ ಚಪ್ಪಲಿ ಒಯ್ದು ಕೊಡಲು ಅಸಹ್ಯ ಅಂತ ಬಿಳಿ ಬಣ್ಣದ ಪ್ಯಾಂಟ್ ಶರ್ಟ್ ಧರಿಸಿದ ವ್ಯಕ್ತಿಯೊಬ್ಬ ಕಡ್ಡಿ ಮುರಿದಂತೆ ಹೇಳಿದ ಏನು ಮಾಡೋದು ಅಂತ ಕರೆಪ್ಪನಿಗೆ ಗೊತ್ತಾಗದೆ ಚಪ್ಪಲಿಗಳನ್ನು ಪೇಪರಿನಲ್ಲಿ ಸುತ್ತಿ ತರಕಾರಿ ಕೈಚೀಲದ ಜೊತೆ ಮನೆಗೆ ತೆಗೆದುಕೊಂಡು ಹೋದ ಅವತ್ತು ಹೋದ ಕರೆಪ್ಪ ಸುಮಾರು ದಿನ ಕಳೆದರೂ ಈ ಸರ್ಕಲ್ ಕಡೆ ಬರಲೇ ಇಲ್ಲ ಕೆಲವರಿಗೆ ಇವನು ಬರದೇ ಇರುವದು ಆಶ್ಚರ್ಯವಾಯಿತು ಕರೆಪ್ಪ ಎಂದೂ ಪಾಲೀಸ ಕೆಲಸಾ ಬಿಟ್ಟು ಮನೆಯಲ್ಲಿ ಕೂಡುವವನಲ್ಲ ಆದರೆ ಯಾಕೆ ಬಂದಿಲ್ಲ ಈ ಕೆಲಸಾ ಬಿಟ್ಟು ಬೇರೆ ಯಾವುದಾದರೂ ಕೆಲಸಾ ಮಾಡತಿರಬೇಕೇ? ಮತ್ಯಾವ ಕೆಲಸಾ ಮಾಡತಾನೆ? ಇದೇ ಕೆಲಸಾ ಛೊಲೊ ನಡದಿದೆ ಲಾಭನೂ ಆಗುತಿದೆ ಅಂತ ಯೋಚಿಸಿದರು ಆದರೆ ಕರೆಪ್ಪನ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ.

ಆತನಿಲ್ಲದೆ ಆ ಆಲದ ಗಿಡ ಕೂಡ ಭಣಗೊಡತಿತ್ತು ಚಾಪೆಯಲ್ಲಿ ಸುತ್ತಿದ ಛತ್ರಿ ಕೂಡ ಹಾಗೇ ಇತ್ತು ಮಂದಿರಕ್ಕೆ ಬರುವ ಭಕ್ತರಿಗೂ ಚಪ್ಪಲಿ ಎಲ್ಲಿ ಬಿಡುವದು ಕರೆಪ್ಪ ಇದ್ದರೆ ನಿಗಾ ಮಾಡುತಿದ್ದ ಈಗ ದೇವರ ಧ್ಯಾನ ಮಾಡುವಾಗಲೂ ಚಪ್ಪಲಿ ಕಡೆ ಗಮನ ಹರಿಸಬೇಕಾಗಿದೆ ಅಂತ ಕೆಲವರು ಮಾತಾಡಿದರು ಇತ್ತೀಚೆಗೆ ದಿನಾ ಒಬ್ಬಿಬ್ಬರಾದರೂ ಚಪ್ಪಲಿ ಕಳೆದುಕೊಂಡು ಬರಿಗಾಲಿಂದ ತೆರಳುತಿದ್ದರು. ಸುಮಾರು ದಿನಗಳ ನಂತರ ಕರೆಪ್ಪ ಅದೇ ಆಲದ ಗಿಡದ ಕೆಳಗೆ ಪ್ರತ್ಯಕ್ಷವಾಗಿ ಆಶ್ಚರ್ಯ ಮೂಡಿಸಿದ ಆತನ ವೃತ್ತಿಯಲ್ಲೂ ಬದಲಾವಣೆ ಕಂಡು ಬಂತು ಪಾಲೀಸ ಮಾಡುವ ಸ್ಥಳದಲ್ಲಿ ಒಂದು ಚಪ್ಪಲ ಅಂಗಡಿ ತೆರೆದಿದ್ದ ಅದರಲ್ಲಿ ವಿವಿಧ ಬಗೆಯ ಹೊಸ ಚಪ್ಪಲಿ ಬೂಟು ಮಾರಾಟಕ್ಕಿಟ್ಟಿದ್ದ ಜೊತೆಗೆ ಪಾಲೀಸು ರಿಪೇರಿ ಕೆಲಸವೂ ಮಾಡತೊಡಗಿದ ಡಬ್ಬಾ ಇಟ್ಟಿದ್ದು ಛೊಲೊ ಮಾಡಿದೆ ಇದರಿಂದ ಮಳೆ ಬಿಸಿಲಿನಿಂದ ರಕ್ಷಣೆ ಸಿಗುತ್ತದೆ ಅಂತ ಜನ ಕೂಡ ಪ್ರಶಂಸಿಸಿದರು ಕರೆಪ್ಪ ಇಷ್ಟು ದಿನ ಪಾಲೀಸ ಮಾಡಿ ರೊಕ್ಕಾ ಜಮಾಸಿರಬೇಕು ಅದಕ್ಕೆ ಡಬ್ಬಾ ಇಟ್ಟಿದ್ದಾನೆ ಅಂತ ಮಾತಾಡಿಕೊಂಡರು ಆದರೆ ಡಬ್ಬಾ ಅಂಗಡಿಯ ಮೇಲೆ ದಪ್ಪ ಅಕ್ಷರದಿಂದ ಸಾಹುಕಾರ ಚಪ್ಪಲ ಅಂಗಡಿ ಅಂತ ತಲೆಬರಹ ಬರೆಸಿದ್ದ ಆ ತಲೆಬರಹ ಅನೇಕರಿಗೆ ಆಶ್ಚರ್ಯದ ಜೊತೆ ಕುತೂಹಲವೂ ಮೂಡಿಸಿತು.

ಸಾಹುಕಾರ ಚಪ್ಪಲ ಅಂಗಡಿ ಅಂತ ಯಾಕೆ ಬರೆಸಿದ್ದಾನೆ ಕರೆಪ್ಪನ ಅಡ್ಡ ಹೆಸರೇನಾದರೂ ಸಾಹುಕಾರ್ ಅಂತ ಇದೆಯೇ? ಇವನು ಸಾಹುಕಾರ್ ಆಗಿದ್ದರೆ ಈ ವೃತ್ತಿ ಯಾಕೆ ಮಾಡುತಿದ್ದ. ಇವನ ಪೂರ್ವಜರು ಸಾಹುಕಾರ್ ಆಗಿರಬೇಕೆ? ಯಾರಿಗೆ ಗೊತ್ತು? ವೃತ್ತಿ ಮಾಡಲು ಸಾಹುಕಾರ, ಬಡವ ಅನ್ನುವದೇನಿದೆ ಯಾರು ಯಾವ ವೃತ್ತಿ ಬೇಕಾದರೂ ಆರಿಸಿಕೊಳ್ಳಬಹುದು ಅಂತ ತಮ್ಮ ತಮ್ಮಲ್ಲೇ ಯೋಚಿಸಿದರು ಆದರೆ ಯಾರೋಬ್ಬರು ಕೂಡ ತಲೆಬರಹದ ಬಗ್ಗೆ ಕರೆಪ್ಪನಿಗೆ ವಿಚಾರಿಸಲಿಲ್ಲ ಪಾಲೀಸ ಮಾಡಿಸಿಕೊಳ್ಳಲು ಬರುವವರಿಗೆ ಈ ತಲೆಬರಹ ಪ್ರಶ್ನೆಯಾಗೇ ಕಾಡಿತು. ಕರೆಪ್ಪ ಸಾಹುಕಾರ ನನ್ನ ಚಪ್ಪಲಿ ಬೇಗ ಪಾಲೀಸ ಮಾಡಿ ಕೊಡು ಊರಿಗೆ ಹೋಗಬೇಕು ಅಂತ ಒಬ್ಬಾತ ಹೇಳಿದ ನಾನ್ಯಾಕ ಸಾಹುಕಾರ ಆಗ್ತೀನಿ ಅಂತ ಕರೆಪ್ಪ ಮುಗ್ಳನಗೆ ಬೀರಿದ ಆದರೆ ಸಾಹುಕಾರ್ ರಹಸ್ಯದ ಬಗ್ಗೆ ಯಾವುದೇ ವಿವರಣೆ ಕೊಡದೆ ಆತನಿಗೆ ಪಾಲೀಸ ಮಾಡಿ ಕೊಟ್ಟು ಕಳಿಸಿದ.

ಅವತ್ತು ಬೈಕ ಡಿಕ್ಕಿ ಹೊಡೆದು ಆಸ್ಪತ್ರೆ ಸೇರಿದ ವ್ಯಕ್ತಿಯೇ ರಾಘವೇಂದ್ರ ಸಾಹುಕಾರ ಆತ ಸಮೀಪದ ಹಳ್ಳಿಯವನು ಮೇಲಾಗಿ ಆಸ್ತಿವಂತ ತಾನು ಬೆಳೆದ ತೊಗರಿ ಕಲಬುರಗಿ ಗಂಜಿಗೆ ಹೋಗಿ ಮಾರಿದಾಗ ಎರಡು ಲಕ್ಷ ರುಪಾಯಿ ಬಂದಿದ್ದವು ಅವು ಜೇಬಿನಲ್ಲಿಟ್ಟುಕೊಂಡರೆ ಕಳ್ಳ ಕಾಕರ ಭಯ ಅಂತ ಪೇಪರಿನಲ್ಲಿ ಸುತ್ತಿ ತರಕಾರಿ ತುಂಬಿದ ಕೈಚೀಲದ ತಳಭಾಗದಲ್ಲಿ ಹಾಕಿದ್ದ ಬಸ್ ಹತ್ತಿ ತಮ್ಮೂರಿಗೆ ಹೋಗಲು ಈ ಸರ್ಕಲಿಗೆ ಬಂದಾಗ ಅಪಘಾತ ಸಂಭವಿಸಿತು ಆತ ಬಿಟ್ಟು ಹೋದ ಆ ಕೈಚೀಲ ಕರೆಪ್ಪ ಮನೆಗೆ ತೆಗೆದುಕೊಂಡು ಬಂದು ನೋಡಿದಾಗ ಅದರಲ್ಲಿ ಲಕ್ಛಗಟ್ಟಲೇ ಹಣ ಇದ್ದಿದ್ದು ಗೊತ್ತಾಯ್ತು ಆಗ ಗಂಡ ಹೆಂಡತಿ ಇಬ್ಬರೂ ಚರ್ಚಿಸಿ ವಾಪಸ್ ಕೊಡುವ ನಿರ್ಧಾರ ಮಾಡಿದರು ಕರೆಪ್ಪ ಹಾಗೋ ಹೀಗೋ ಮಾಡಿ ಆಸ್ಪತ್ರೆಯ ವಿಳಾಸ ಪತ್ತೆ ಹಚ್ಚಿ ಧಾವಿಸಿ ಬಂದ ಆಸ್ಪತ್ರೆಯ ಮಂಚದ ಮೇಲೆ ಸಾಹುಕಾರ್ ತನ್ನ ಎರಡೂ ಕಾಲಿಗೂ ಪ್ಲಾಸ್ಟರ್ ಹಾಕಿಕೊಂಡು ಮಲಗಿದ್ದ ಕರೆಪ್ಪನಿಗೆ ನೋಡಿದ ಕೂಡಲೇ ಗುರುತು ಹಿಡಿದು ಎದ್ದು ಕುಳಿತ. ಕರೆಪ್ಪ ಸಾಹುಕಾರ್ ಮುಖವನ್ನೇ ನೋಡುತ್ತಾ ನಿಮ್ಮ ಆಯಸ್ಸು ಗಟ್ಟಿಯಾಗಿದೆ ಮತ್ತೆ ಹುಟ್ಟಿ ಬಂದಂತಾಯಿತು ಆ ದೇವರು ಜೀವ ಉಳಿಸಿದ ಅಂತ ಹೇಳಿದಾಗ ಸಾಹುಕಾರ್ ಕಣ್ಣು ತೇವಗೊಂಡವು ಗಂಡನ ಆರೈಕೆಯಲ್ಲಿ ತೊಡಗಿದ್ದ ಸಾಹುಕಾರ್ ಹೆಂಡತಿಯ ಕಂಠ ಬಿಗಿದು ದುಃಖ ಉಕ್ಕಿ ಬಂತು ಕೋರಳಲ್ಲಿನ ಮಂಗಳಸೂತ್ರ ಕಣ್ಣಿಗೊತ್ತಿಕೊಂಡು ಕಣ್ತುಂಬಾ ನೀರು ತಂದಳು ಇವು ತೊಗೊಳ್ರಿ ಅವತ್ತು ನೀವು ಬಿಟ್ಟು ಹೋದ ಚಪ್ಪಲಿ ಪಾಲೀಸ ಮಾಡಿ ಹಾಗೆ ಇಟ್ಟಿದ್ದೆ ಈ ಕೈಚೀಲದಲ್ಲಿನ ಹಣ ಸರಿಯಾಗಿದೆ ಇಲ್ಲವೊ ಒಮ್ಮೆ ಏಣಿಸಿಕೊಳ್ಳಿ ಅಂತ ಆ ಕೈಚೀಲ ಸಾಹುಕಾರ ಮುಂದಿಟ್ಟ ಕೈಚೀಲ ನೋಡಿ ಸಾಹುಕಾರನಿಗೆ ಆಶ್ಚರ್ಯವಾಯಿತು ಇಂತಹ ಕಾಲದಲ್ಲೂ ಪ್ರಾಮಾಣಿಕರು ಇರುತ್ತಾರೆಯೇ? ಅಂತ ತನ್ನ ತಾನೇ ಪ್ರಶ್ನಿಸಿಕೊಂಡು ನನಗೆ ಈ ಹಣ ವಾಪಸ್ ಬರುವ ಯಾವ ಖಾತ್ರಿಯೂ ಇರಲಿಲ್ಲ ಇದರಾಸೆ ಬಿಟ್ಟು ಬಿಟ್ಟಿದ್ದೆ ಆದರೆ ನೀನು ನನ್ನ ಹುಡುಕಿ ತಂದು ಮುಟ್ಟಿಸಿರುವದು ನೋಡಿದರೆ ನಿನಗೆ ಎಷ್ಟು ಕೃತಜ್ಞತೆ ಹೇಳಿದರು ಕಡಿಮೆ ಅಂತ ಹೊಗಳಿದ ಸಾಹುಕಾರ್ ಮಾತಿನಿಂದ ಕರೆಪ್ಪನ ಮುಖದ ಮೇಲೆ ಸಂತೃಪ್ತಿಯ ಭಾವ ತೇಲಾಡಿತು ಕರೆಪ್ಪನಿಗೆ ಪಕ್ಕದಲ್ಲಿ ಕೂಡಿಸಿಕೊಂಡು ಆ ಕೈಚೀಲದಲ್ಲಿ ಕೈ ಹಾಕಿ ಐನೂರರ ಬಂಡಲ ತೆಗೆದು ಕೊಡಲು ಮುಂದಾದ ಆದರೆ ಕರೆಪ್ಪ ನಯವಾಗಿ ನಿರಾಕರಿಸಿ ನನಗೇನೂ ಹಣ ಬೇಡ ಎಂದನು ಆದರೆ ಸಾಹುಕಾರ್ ಒತ್ತಾಯಪೂರ್ವಕ ನೋಟಿನ ಬಂಡಲ ಕರೆಪ್ಪನ ಜೇಬಿನಲ್ಲಿಟ್ಟು ಬೆನ್ನು ಚಪ್ಪರಿಸಿ ಕಳಿಸಿದ ಆಗ ಇವನ ಖುಷಿ ಮುಗಿಲಿಗೆ ಮೂರೇ ಗೇಣು ಅನ್ನುವಂತಾಯಿತು ಜೀವನದಲ್ಲಿ ಒಮ್ಮೆಯೂ ನೋಟಿನ ಬಂಡಲ್ ನೋಡಿರಲಿಲ್ಲ ಮನೆಗೆ ಬಂದು ಹೆಂಡತಿಗೆ ವಿಷಯ ತಿಳಿಸಿದಾಗ ಅವಳೂ ಖುಷಿಗೊಂಡಳು ಈ ಹಣ ಏನು ಮಾಡೋದು ಅಂತ ಪರಸ್ಪರ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದರು ಇನಾಮ ಹಣದಲ್ಲಿ ಒಂದು ಡಬ್ಬಾ ಮಾಡಿಸಿ ಚಪ್ಪಲ್ ಅಂಗಡಿ ಆರಂಭಿಸ್ತೀನಿ ಎಂದಾಗ ಹೆಂಡತಿ ಸಮ್ಮತಿಸಿದಳು ಚಪ್ಪಲ ಅಂಗಡಿ ಮೇಲೆ ಸಾಹುಕಾರ ಚಪ್ಪಲ ಅಂಗಡಿ ಅಂತ ಹೆಸರಿಟ್ಟು ಋಣ ತೀರಿಸಿದ !!!

ಶರಣಗೌಡ ಬಿ.ಪಾಟೀಲ ತಿಳಗೂಳ

ಲೇಖಕ ಶರಣಗೌಡ ಪಾಟೀಲ ಅವರು  ಕಲಬುರಗಿ ಜಿಲ್ಲೆಯ ತಿಳಗೂಳ ಗ್ರಾಮದವರು. ಸ್ನಾತಕೋತ್ತರ ಪದವೀಧರರು. ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಕೃತಿಗಳು: ಹಿಟ್ಟಿನ ಗಿರಣಿ ಕಿಟ್ಟಪ್ಪ (ಲಲಿತ ಪ್ರಬಂಧಗಳ ಸಂಕಲನ)’, ತೊರೆದ ’ಗೂಡು (ಕಾದಂಬರಿ), ಕೆಂಪು ಶಲ್ಯ ಫಕೀರೂ ಹಾಗೂ ಇತರ ಕಥೆಗಳು (ಕಥಾ ಸಂಕಲನ), ಕಾಳು ಕಟ್ಟದ ಕಣ್ಣೀರು, ಭೀಮಾ ತೀರದ ತಂಗಾಳಿ (ಕಾದಂಬರಿಗಳು)  

ಪ್ರಶಸ್ತಿ-ಪುರಸ್ಕಾರಗಳು:  ಇವರ ‘ಹಿಟ್ಟಿನ ಗಿರಣಿ ಕಿಟ್ಟಪ್ಪ  ಕೃತಿಗೆ 2017-18 ನೇ ಸಾಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಡಿ ಮಾಣಿಕರಾವ ಹಾಸ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಲಭಿಸಿದೆ. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ. ಶಿಕ್ಷಕರ ಕಲ್ಯಾಣ ನಿಧಿಯ ರಾಜ್ಯ ಮಟ್ಟದ ಪ್ರಬಂಧ  ಸ್ಪರ್ಧೆಯ ಪ್ರಶಸ್ತಿ. ಸಾಧಕ ಶಿಕ್ಷಕ ಪ್ರಶಸ್ತಿ, ಕನ್ನಡ ನಾಡು ಲೇಖಕರ ಓದುಗರ ಸ ಸಂಘದಿಂದ ಯಶೋದಮ್ಮ ಸಿದ್ದಬಟ್ಟೆ ಸ್ಮಾರಕ ಪುಸ್ತಕ  ಪ್ರಶಸ್ತಿ  ಗುರುಕುಲ ಪ್ರತಿಷ್ಠಾನದಿಂದ ಸಾಹಿತ್ಯ ಶರಭ ಪ್ರಶಸ್ತಿಗಳು ಲಭಿಸಿವೆ. 
 

More About Author