Poem

ಸಂ..ಪತನ ಸಮಕಾಲೀನ ಕವಿತೆಗಳು

ಹಿಂದಿನ ರಾತ್ರಿ ಆದದ್ದೆಲ್ಲಾ ಕತ್ತಲೆಯಲ್ಲಲ್ಲಾ
ಎಲ್ಲಾ ನಡೆದದ್ದು, ಹೊಳೆಯುತ್ತಿದ್ದ ಭವಿಷ್ಯದ ನಡುಮನೆಯಲ್ಲೆ
ಬೆಳಕಿನ ಮೈ ಉರಿದಿತ್ತಲ್ಲಾ, ಅದುವು ಕತ್ತಲ ಸರಿಸಿತ್ತು..!
ನೆಲಕಚ್ಚಿದ್ದ ನೆರಳು, ಧಗಧಗಿಸಿ ಬೆಯುತ್ತಲ್ಲೇ, ಕೆಂಪಗಾಗಿತ್ತು
ಕೆರಳಿದ್ದ, ಕಾಂತಿ ತುಂಬಿದ್ದ ಕಣ್ಣಳಲ್ಲಿನ ಜ್ವಾಲೆ
ಚುಕ್ಕಿ-ಚಂದ್ರನ ದಿಟ್ಟಿಸುತ್ತ ದಿಕ್ಕರಿಸುತ್ತಲೇ ಸುಟ್ಟಿತ್ತು..!
ನಡುಕದ ನಡುವೆಯೇ ಬಲವಂತದಲೇ ನೆತ್ತರ ನುಂಗುತ್ತಾ
ಕನಸ್ಸು ಹೊತ್ತ ಮನಸ್ಸು ನಿಧಾನಿಸಿಯೇ ಉಸಿರ ಚೆಲ್ಲಿತ್ತು
ಮತ್ತೊಂದು, ಬೆತ್ತಲ ಭವಿಷ್ಯದ ಪುಟ ತಿರುವಿತ್ತು...!!

ಹೊಸ ದೇಶಕಟ್ಟಲು ಕಾನೂನು ಬಂದಾಯ್ತು..!
ಕೃಷಿಯ ವಹಿವಾಟಿಗೂ, ನಿಯಮಾವಳಿ ತಂದಾಯ್ತು
ಹದವಾದ ನೆಲದಲ್ಲಿ ತೇವಾಂಶ ಹೆಚ್ಚಾಯ್ತು
ಹೊಸ ದೇಶಕಟ್ಟಲು, ಕಾನೂನು ಬಂದಾಯ್ತು..!
ಸಾಗರದಾಚೆಗಿನ ದೇಗುಲದಿ ಹರಕೆ ಇಟ್ಟಾಯ್ತು
ಹೊಸ ಮೋಡಿ ಮಾಂತ್ರಿಕನ ಎದೆಯಗಲ ಹೆಚ್ಚಾಯ್ತು
ಹೊಸ ದೇಶಕಟ್ಟಲು ಹೊಸ ಕಾನೂನು ಬಂದಾಯ್ತು..!
ಸಂಜೆಯ ಸೂರ್ಯಂಗೆ ದೌಡು ಹೆಚ್ಚಾಯ್ತು
ಹೊಲ-ಗದ್ದೆ ತುಂಬೆಲ್ಲಾ, ಹಣ/ಹೆಣ ಬಿತ್ತುವ ಹೊತ್ತಾಯ್ತು
ಹೊಸ ದೇಶಕಟ್ಟಲು ಕಾನೂನು ಬಂದಾಯ್ತು..!!

ಆ ಸಂಜೆಯಲ್ಲಿ ಬೆಳಕು ಹಾಗೆಯೇ ಇತ್ತು..!
ಹೊತ್ತು ಮುಳುಗುತ್ತಲೇ ಇರಲಿಲ್ಲ
ಕಡಲಾಚೆಗಿನ ಬಾನಲ್ಲೂ ಬಣ್ಣ ಬದಲಾಗುತ್ತಿರಲಿಲ್ಲ
ಅಲೆಗಳ ಏರಿಳತದಲ್ಲೆನೂ ಬದಲಾವಣಿ ಯಾಗಿರಲಿಲ್ಲ
ಹಕ್ಕಿಗಳೂ ಮರಳಿ ಗೂಡನ್ನು ಸೇರ ಬಯಸುತ್ತಿರಲಿಲ್ಲ..!
ಬಿಗಿ ಹಿಡಿದಿದ್ದ ಬೆರಳ ತುದಿಮಾತ್ರ ಬೆವರಿತ್ತು
ಕಳಚಿ ಸ್ವತಂತ್ರ್ಯವಾಗುವ ತವಕದಲ್ಲಿತ್ತಾದರೂ
ಹಾರುತ, ಹರಿಯುತ ಹೇಗೋ ಹೊರನಡೆಯಲು,
ತುದಿಯಂಚಿಗೆ ಕಾದಿತ್ತು...!
ಆ ಸಂಜೆಯ ಬಾನು-ಕಡಲು-ಹಕ್ಕಿಗಳೂ
ಬೆರಳ ತುದಿಯಂಚನ್ನೇ ನೋಡಲು ಹಾತೊರೆದಿತ್ತು...!!?.

 

ಹಾಗೇ ನೀ ಸುಮ್ಮನಿದ್ದರೆ ಹೇಗೆ...!?
ಸಮಯ ನಿಲ್ಲುವಂತದಲ್ಲಾ,
ಗಾಳಿ,ಬೆಳಕು,ನೀರೂ ಪಸರಿಸುವುದ ಬಿಡುವುದಿಲ್ಲ,
ಮೌನದೊಳಗೆ ಘನೀಕರಿಸಿದ್ದ ಭಾವಗಳೂ,‌ ಹನಿಯೊಡೆದು ಒಂದೊಮ್ಮೆ ಹರಿಯುವುದಲ್ಲಾ,
ನಡು ನಿದ್ದೆಯಲಿ ಎಚ್ಚೆತ್ತ ಮನವು ಸುಮ್ಮನಿರುವಂತದಲ್ಲ,
ಇಷ್ಟೆಲ್ಲಾ ತಿಳಿದು,ತಿಳಿಹೇಳಿದ್ದ ನೀನೇ ಸುಮ್ಮನಿದ್ದರೆ...,
ಇನ್ನಿಂತಹಃ ಘಳಿಗೆಯಲಿ, ಅದೇಗೆ ಸುಮ್ಮನಿರಲಿ ನಾ...?
ಓ ಛಲವೆ, ಅದೇಗೆ ಸುಮ್ಮನಿರಬಯಸಿರುವೆ ನೀ...!!?.

ಜೀವ ಕೊಟ್ಟು, ಹೊರನಡೆದ ಉಸಿರು,
ಜೀವ ತುಂಬಲು ಒಳ ಹೊರಟ ಉಸಿರು,
ಜತೆಯಾಗೆ ಉಸಿರಾಗಲು ಸಾಧ್ಯವೇ..!?
ಜೀವ ತೊರೆದ ದೇಹದಿಂದ, ಹೊರನಡೆದ ಉಸಿರು,
ಜೀವ ಕೊಡಬಯಸುತ್ತ, ಒಳನಡೆದಿಹ ಉಸಿರು,
ಎದುರಾದಾಗ‌, ಯಾರಲ್ಲಿ ದುಃಖ ಉಸಿರೊಡೆವುದು..!?

ಸಂಪತ್ ಐಗಳಿ

ಬೆಳಗಾವಿಯ ಅಥಣಿ ತಾಲುಕಿನ ಐಗಳಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿ, ಕೊಡಗಿನ ಗಿರಿಗಳನಡುವೆ ಬೆಳೆಯುತ ವ್ಯಾಸಂಗ ಮುಗಿಸಿದ ಸಂ..ಪತರ ಆಸಕ್ತಿ ಸೆಳೆದದ್ದು ಪತ್ರಿಕಾ ರಂಗದ ಕಡೆ. ಮೊದಲಿನಿಂದಲೇ ಆದಿವಾಸಿ ಸ್ನೇಹತರ ಒಡನಾಟ, ಪ್ರಕೃತಿ ಸಂರಕ್ಷಣೆ, ವನ್ಯ ಜೀವನದ ಜಾಡಿನ ಸುತ್ತಲಿನ ಆಸಕ್ತಿಯುನ್ನು ಹೆಚ್ಚಿಸಿತ್ತು. ಸುಸ್ಥಿರ ಅಭಿವೃದ್ಧಿಯಲ್ಲಿ ಉನ್ನತ ವ್ಯಾಸಂಗ ಮುಗಿಸಿದ ಸಂ...ಪತ ಕೆಲಕಾಲ 'ಕೌಶಲ್ಯ ಭಾರತದ' ಯೋಜನೆಯ ಭಾಗವಾಗಿ ಕಾರ್ಯನಿರ್ವಹಿಸಲು ಬೆಂಗಳೂರಿಗೆ ನೇಮಕವಾದ ಇವರು, ಇದೀಗ ಬೆಂಗಳೂರಿನ ಸಂವಾದ-ಬದುಕು ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ತ್ಯಾಜ್ಯ ನಿರ್ವಹಣೆಯು ಇವರ ಆಸಕ್ತಿ ವಿಷಯವಾಗಿದ್ದು, ತ್ಯಾಜ್ಯದ ನಿರ್ವಹಣೆ ಬಗೆಗಿನ ಹೊಸ ಬಗೆಯ ಕೋರ್ಸ್ಸನ್ನು ನಿರ್ವಹಿಸುತ್ತಿದ್ದಾರೆ. ಯುವ ಸಮುದಾಯಕ್ಕೆ ಸುಸ್ಥಿರ ಜೀವನೋಪಾಯವನ್ನು ರೂಪಿಸುವದು ಇವರ ಗುರಿಯಾಗಿದ್ದು, ಅದು ಪರಿಸರ ಸಂರಕ್ಷಣೆಗೆ ಪೂರಕವಾಗಿರುವದರ ಸುತ್ತಲೇ ಇರಬಯಸುತ್ತಾರೆ. ಕವಿತೆ ಅವರ ಆಸಕ್ತಿಯ ಪ್ರಕಾರ.

More About Author