Story

ಸಂಕ್ರಾಂತಿಯ ಕ್ರಾಂತಿ

ಲೇಖಕ, ಕತೆಗಾರ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ ಕತೆ, ಕವನಗಳು ಹಲವಾರು ಕಡೆ ಪ್ರಕಟಗೊಂಡಿದೆ. ಅವರ ‘ಸಂಕ್ರಾಂತಿಯ ಕ್ರಾಂತಿ’ ಕತೆ ನಿಮ್ಮ ಓದಿಗಾಗಿ..

ಸಂಕ್ರಾಂತಿ ಒಂದು ತಿಂಗಳು ಇರಬೇಕಾದರೆ, ಈ ಸಲ ಸಂಕ್ರಾಂತಿಗೆ ಏನೇನು ಮಾಡಬೇಕು ಎಂದು ತನ್ನ ಗೆಳೆಯರೊಡನೆ ಚರ್ಚಿಸುತ್ತಿದ್ದ ಮಾದ. ತಮ್ಮ ಕೇರಿಯ ಹಸು, ದನ , ಎಮ್ಮೆಗಳು ಊರಿನ ಜನರ ಹಸು, ದನಗಳಿಗಿಂತ ಹೆಚ್ಚು ಸುಂದರವಾಗಿ ಕಾಣಿಸಬೇಕು, ಊರ ಗ್ರಾಮ ಪಂಚಾಯಿತಿ ಅಧ್ಯಕ್ಷರ ಮಗ ನಾಗಾರಾಜನ ಸೊಕ್ಕು ಮುರಿಯಬೇಕು ಎಂದೆಲ್ಲಾ ಕನಸು ಕೊಟ್ಟತೊಡಗಿದ್ದ. ಊರಿನ ದೇವಸ್ಥಾನಕ್ಕೆ ಪ್ರವೇಶವಿಲ್ಲದಿದ್ದರೂ ಊರ ಅಲಂಕಾರಗೊಂಡ ಹಸು-ದನಗಳ ಪ್ರದರ್ಶನಕ್ಕೆ ಕೇರಿಯ ಜನಕ್ಕೂ ಪ್ರವೇಶವಿತ್ತು. ಶಾಲೆಯಲ್ಲಿ ತಾನೊಬ್ಬನೇ ಪ್ಯಾಂಟು ಧರಿಸುವವ ಎಂದು ಜಂಬ ತೋರಿಸುತ್ತಿದ್ದ ನಾಗರಾಜನೆಂದರೆ ಎಲ್ಲರಿಗೂ ಕೋಪವೇ ಇತ್ತು, ಆದರೆ ತಮ್ಮ ಅಪ್ಪ-ಅಮ್ಮಂದರಿಗೆ ಕೂಲಿ ಕೆಲಸ ಕೊಡುತ್ತಿದ್ದ ನಾಗರಾಜನ ಅಪ್ಪನೆಂದರೆ ಕೇರಿಯ ಮಕ್ಕಳಿಗೆ ಭಯವಿತ್ತು.

ಚುನಾವಣೆ ಬಂದಾಗ ರಾಜಕಾರಣಿಗಳು ಹೇಳುತ್ತಿದ್ದ ಕ್ರಾಂತಿ ಪದ ಕಿವಿಯಲ್ಲಿ ಬಿದ್ದಿತ್ತು. ಈ ಸಂಕ್ರಾಂತಿಗೆ ಕ್ರಾಂತಿ ಆಗಬೇಕು ಎಂದುಕೊಂಡ ಮಾದ.

ಸಂಕ್ರಾಂತಿಗೆ ಊರ ಮೈದಾನದಲ್ಲಿ ಅಲಂಕಾರಗೊಂಡ ರಾಸುಗಳ ಪ್ರದರ್ಶನವಿರುತ್ತದೆ. ಹೆಚ್ಚು ಸುಂದರವಾಗಿ ಅಲಂಕರಿಸಿದ ಹಸು, ಎಮ್ಮೆ, ಎತ್ತು ಗಳಿಗೆ ಬಹುಮಾನವೂ ಇರುತ್ತದೆ. ಸದಾ ಊರ ರಾಸುಗಳಿಗೇ ಬಹುಮಾನ ಸಿಗುತ್ತಿರುತ್ತದೆ. ಈ ವರ್ಷ ಹೇಗಾದರೂ ಮಾಡಿ ತಮ್ಮ ರಾಸುಗಳಿಗೇ ಬಹುಮಾನ ಬರಬೇಕು ಎಂದು ಹಠಕ್ಕೆ ಬಿದ್ದವರಂತೆ ಮಾದ ಆತನ ಇತರ ಸ್ನೇಹಿತರು ನಿರ್ಧರಿಸಿದ್ದಾರೆ. ಊರ ರಾಸುಗಳಿಗಿಂತ ತಮ್ಮ ರಾಸುಗಳು ಹೆಚ್ಚು ಅಂದಕಾಣುವಂತೆ ಅಲಂಕರಿಸಲು ಹಣ ಬೇಕಾಗುತ್ತದೆ. ಒಳ್ಳೆಯ ಬಣ್ಣ ಬಣ್ಣದ ಬಟ್ಟೆ, ಕೊಂಬಿಗೆ ಬಳಿಯಲು ಬಣ್ಣ, ಹೂವು ಮುಂತಾದ ವಸ್ತುಗಳು ಬೇಕಾಗುತ್ತವೆ. ದಿನದ ಕೂಲಿಯಮೇಲೆ ಬದುಕುವವರಿಗೆ ಹಣ ಎಲ್ಲಿಂದ ಬರುವುದು. ಮಾದ ಹಾಗು ಆತನ ಸ್ನೇಹಿತರು ಮುಖ ಸಪ್ಪಗೆ ಮಾಡಿಕೊಂಡು ಓಡಾಡುತ್ತಿರುವ ರೀತಿನೋಡಿ ಅಪ್ಪ ಅಮ್ಮಂದರಿಗೆ ನೋವಾಗುತ್ತದೆ, ಆದರೆ ಅವರಿಗೆ ಕೊಡಲು ಯಾರ ಹತ್ತಿರವೂ ಒಂದು ಪೈಸಾ ಇಲ್ಲಾ. ಬರುವ ಕೂಲಿಯಲ್ಲಿ ಅನಂತಯ್ಯ ಅವರ ಅಂಗಡಿಯಲ್ಲಿ ಸ್ವಲ್ಪ ರಾಗಿಹಿಟ್ಟು ತಂದು, ಹಿತ್ತಲಲ್ಲಿ ಬೆಳೆದ ತರಕಾರಿಯಲ್ಲಿ ಸಾರುಮಾಡಿ ದಿನದೂಡುವುದು. ಸ್ವಲ್ಪ ಹಣ ಮಿಕ್ಕರೆ ಯುಗಾದಿಗೆ ಒಂದು ಬಟ್ಟೆ ಕೊಳ್ಳುವುದು. ತಮ್ಮ ತಂದೆ ತಾಯಂದಿರ ಆರ್ಥಿಕ ಸ್ಥಿತಿ ಬಲ್ಲ ಕೇರಿಯ ಮಕ್ಕಳು ಅವರನ್ನು ಹಣ ಕೇಳಲು ಹೋಗಲಿಲ್ಲ. ಕೇರಿಯ ಮಕ್ಕಳು ಅವರ ತಾಯಂದಿರನ್ನು ಯಾವುದಕ್ಕೂ ಪೀಡಿಸಿದವರೂ ಅಲ್ಲ. ತಮಗೆ ಸ್ವಾಭಾವಿಕವಾಗಿ ಬಂದಿದ್ದ ಬುದ್ದಿಯಿಂದ ಮನೆಯ ಸ್ಥಿತಿ ಅರಿವಾಗಿತ್ತು.

ಹೀಗಿರಲು, ಶಾಲೆಯ ಹೆಡ್ ಮಾಸ್ತರ್ ಮಲ್ಲಪ್ಪನವರು ಒಂದು ಪ್ರಕಟಣೆ ಹೊರಡಿಸಿದರು. ತಾಲ್ಲೂಕ ಮಟ್ಟದಲ್ಲಿ ಕ್ರೀಡೆಗಳ ಸ್ಪರ್ಧೆ ಇದೆ, ಅದರಲ್ಲಿ ಓಟದ ಸ್ಪರ್ಧೆ, ಕಬ್ಬಡ್ಡಿ, ಕೋ ಕೋ ಹೇಗೆ ಅನೇಕ ಕ್ರೀಡೆಗಳು ನಡೆಯುತ್ತವೆ. ಗೆದ್ದರೆ ಬಹುಮಾನವಿರುತ್ತದೆ. ಓಟದ ಸ್ಪರ್ಧೆಯಲ್ಲಿ ಗೆದ್ದವರಿಗೆ ಒಂದು ಸಾವಿರ ಮೊದಲ ಬಹುಮಾನ ಇತ್ಯಾದಿ ಹೇಳಿ ಮಕ್ಕಳಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಲು ಆಸೆ ತೋರಿಸಿದರು. ಯಾವುದೇ ತರಬೇತಿ ಇಲ್ಲದ ತಮ್ಮ ಮಕ್ಕಳು ಯಾವುದೇ ಕ್ರೀಡೆಯಲ್ಲಿ ಗೆಲ್ಲುವ ಅವಕಾಶವಿರದಿದ್ದರೂ , ಮಕ್ಕಳನ್ನು ಊರ ಜನರ ಎದುರಿಗೆ ಪಟ್ಟಣಕ್ಕೆ ಕರೆದುಕೊಂಡು ಹೋಗುವುದು ಒಂದು ಹೆಮ್ಮೆ ಎನಿಸಿತು ಮಾಸ್ತರರಿಗೆ. ಊರ ಶಾಲೆ ಒಂದರಿಂದ ಏಳನೇ ತರಗತಿಯವರಿಗೆ ಮಾತ್ರ ನಡೆಯುತ್ತಿತ್ತು, ಇಬ್ಬರು ಮಾಸ್ತರರು ಇದ್ದರು. ಸ್ಪರ್ಧೆಯಲ್ಲಿ ಐದರಿಂದ ಏಳನೇ ತರಗತಿಯ ಮಕ್ಕಳು ಭಾಗವಹಿಸಬಹುದಿತ್ತು. ಏಳನೇ ತರಗತಿಯಲ್ಲಿ ಇದ್ದ ಮಾದನಿಗೆ, ತನ್ನ ಹಸುವಿನ ಅಲಂಕಾರಕ್ಕೆ ಹಣ ಗಳಿಸಲು ಇದೊಂದು ಒಳ್ಳೆಯ ಮಾರ್ಗ ಅನಿಸಿತು. ಮೇಸ್ಟ್ರ ಹತ್ತಿರ ಹೋಗಿ " ಓಟಕ್ಕೆ ನನ್ನ ಹೆಸರು ಬರ್ಕೊಳ್ಳಿ ಸಾ" ಅಂದ. ಗಟ್ಟಿ ಮುಟ್ಟಾಗಿದ್ದ ಅವನ ದೇಹವನ್ನು ಒಂದು ಸಲ ನೋಡಿದ ಮೇಸ್ಟ್ರು "ಚನ್ನಾಗಿ ಪ್ರಾಕ್ಟೀಸ್ ಮಾಡಬೇಕು, ಊರಿಗೆ ಹೆಸರು ತರಬೇಕು" ಎಂದು ಹೇಳಿ ನಿನ್ನ ಹೆಸರು ಲಿಸ್ಟ್ನಲ್ಲಿ ಸೇರಿಸಿದ್ದೇನೆ ಎಂದರು. ಮಾದ ತನ್ನ ಸಹಪಾಠಿಗಳಲ್ಲಿ ತನ್ನ ಹೆಸರು ಲಿಸ್ಟಿನಲ್ಲಿ ಇದೆ ಎಂದು ಹೇಳಿ ಆಗಲೇ ತಾನು ಗೆದ್ದೇ ಬಿಟ್ಟಿದ್ದೇನೆ ಎಂಬಂತೆ ಖುಷಿಪಟ್ಟ. ನಾಗರಾಜನೂ ಲಿಸ್ಟನ್ನಲ್ಲಿ ನನ್ನ ಹೆಸರೂ ಇದೆ ಎಂದು ಹೇಳಿ, ತಾನೇ ಮೊದಲು ಬರುವುದು ಎಂದು ಹೇಳಿ ಮಾದನ ಆಸೆಗೆ ಸ್ವಲ್ಪ ತಣ್ಣೀರು ಎರಚಿದ. ಹಾಲು, ತುಪ್ಪ, ಮೊಸರು ಉಂಡು ಬೆಳೆಯುತ್ತಿರುವ ದೇಹದ ನಾಗರಾಜನ ದೇಹ ಸಾಕಷ್ಟು ಗಟ್ಟಿ ಮುಟ್ಟಾಗಿತ್ತು. ಮಾದನಿಗೆ ಸ್ವಲ್ಪ ಅಳುಕುಂಟಾಯಿತು.

ಈ ಸಮಯದಲ್ಲಿ ಒಂದು ದಿನ ಹೆಡ್ ಮಾಸ್ತರರನ್ನು ಮನೆಗೆ ಕರೆಸಿಕೊಂಡ ನಾಗರಾಜನ ಅಪ್ಪ, ತನ್ನ ಮಗನಿಗೆ ಒಳ್ಳೆಯ ತರಬೇತಿ ಕೊಟ್ಟು ಅವನನ್ನೇ ಗೆಲ್ಲಿಸಬೇಕು ಎಂದು ಅಪ್ಪಣೆ ಕೊಡಿಸಿದ್ದಲ್ಲದೆ, ತನ್ನ ಮನೆಯೊಂದನ್ನು ಬಾಡಿಗೆಯಿಲ್ಲದೆ ಮಾಸ್ತರರ ವಾಸಕ್ಕೆ ಕೊಡುತ್ತೇನೆ ಎಂದು ಮಾಸ್ತರರಲ್ಲಿ ಆಸೆ ಹುಟ್ಟಿಸಿದ. ಮಾಸ್ತರರು ಹಾಗೇ ಆಗಲಿ ಎಂದು, ಪಿ.ಟಿ. ಟೀಚರ್ ಆಗಿದ್ದ ತನ್ನ ಹೆಂಡತಿಯ ತಮ್ಮನನ್ನು ಊರಿಗೆ ಕರಿಸಿ ನಾಗರಾಜನಿಗೆ ಪ್ರಾಕ್ಟೀಸ್ ಮಾಡಿಸಹತ್ತಿದರು. ಮಾದನಿಗೆ, ಪಿ.ಟಿ. ಟೀಚರ್ಗೆ ಹೆಚ್ಚು ಶುಲ್ಕವಿದೆ, ನಿನಗೆ ಕೊಡಲು ಆಗದು, ನೀನೆ ಪ್ರಾಕ್ಟೀಸ್ ಮಾಡಿಕೊ ಎಂದುಬಿಟ್ಟರು. ಈ ಮದ್ಯೆ ತನ್ನ ಸಹಪಾಠಿಯಾಗಿದ್ದ ಅನಂತಯ್ಯ ಅವರ ಮಗ ರಮೇಶ ಒಂದು ಉಪಾಯ ಹೇಳಿದ, ತಾನು ನಾಗರಾಜನಿಗೆ ಪಿ.ಟಿ. ಟೀಚರ್ ಹೇಳಿಕೊಡುವ ಉಪಾಯಗಳನ್ನು ಕೇಳಿಸಿಕೊಂಡು ನಿನಗೆ ಹೇಳುತ್ತೇನೆ ನೀನು ಹಾಗೆ ಪ್ರಾಕ್ಟೀಸ್ ಮಾಡು. ಮಾದನಿಗೆ ಖುಷಿ ಆಯಿತು. ದಿನ ಬೆಳಿಗ್ಗೆ ನಾಗರಾಜನಿಗೆ ಸಿಗುತ್ತಿದ್ದ ತರಬೇತಿಯನ್ನು ನೋಡುತ್ತಿದ್ದ ರಮೇಶ ಅದೇ ದಿನ ಸಂಜೆ ಮಾದನಿಗೆ ತಾನೇ ತರಬೇತಿಗಾರನೆಂಬ ಖುಷಿಯಲ್ಲಿ ಉಪಾಯಗಳನ್ನು ಹೇಳುತ್ತಿದ್ದ. ಮಾದ ಸಂಜೆ ಹಾಗು ಬೆಳಿಗ್ಗೆ ಎರಡೂ ಸಲ ತನ್ನ ಕೇರಿಯಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದ.

ಸ್ಪರ್ಧೆಯ ದಿನ ಬಂದೇ ಬಿಟ್ಟಿತು, ಇರುವುದರಲ್ಲಿ ಒಳ್ಳೆಯ ಅಂಗಿಯೊಂದನ್ನು ಧರಿಸಿ ಮಾದ ಇತರೊಡನೆ ಬಸ್ ಹತ್ತಿದ. ಕೇರಿಯ ಮರಿಗಮ್ಮ ದೇವರ ಕುಂಕುಮ ಜೋಬಲ್ಲಿ ಇತ್ತು.

ಎಲ್ಲಾ ಸ್ಫರ್ಧೆಯ ಕೊನೆಯಲ್ಲಿ ಓಟದ ಸ್ಪರ್ಧೆ ಇತ್ತು. ಯಾವುದರಲ್ಲೂ ತನ್ನ ಶಾಲೆಯ ಮಕ್ಕಳು ಗೆಲ್ಲದಿದ್ದರೂ, ನಾಗರಾಜ ಓಟದ ಸ್ಪರ್ಧೆಯಲ್ಲಿ ಗೆಲ್ಲುವನೆಂಬ ನಂಬಿಕೆ ಮಾಸ್ತರರಿಗಿತ್ತು. ನಾಗರಾಜನ ಅಪ್ಪ ಬೇರೆ ಬಂದು ತನ್ನ ನೆಂಟರ ಮನೆಯಲ್ಲಿ ಉಳಿದುಕೊಂಡು, ನಾಗರಾಜನಿಗೆ ಒಳ್ಳೆಯ ಆರೈಕೆ ಮಾಡಿಸಿದ್ದರು. ಅದಲ್ಲದೆ ಪಿ.ಟಿ. ಟೀಚರ್ ಹೇಳಿಕೆಯಂತೆ, ನಾಗರಾಜನಿಗೆ ಒಂದು ಜೊತೆ ರನ್ನಿಂಗ್ ಶೂ ಕೊಡಿಸಿದರು. ಇತರ ಮಕ್ಕಳನ್ನು ಶಾಲೆಯೊಂದರಲ್ಲಿ ಉಳಿಸಿದ್ದರು.

ಓಟದ ಸ್ಪರ್ಧೆ ಬಂದೇ ಬಿಟ್ಟಿತು. ನಾಗರಾಜ ಹೆಮ್ಮೆಯಿಂದ ತನ್ನ ಹೊಸ ರನ್ನಿಂಗ್ ಶೂಗಳನ್ನು ನೋಡಿಕೊಂಡು, ಮಾದನನ್ನು ತಿರಸ್ಕಾರದಿಂದ ನೋಡಿ ನಕ್ಕ. ಮಾದ ಕಣ್ಣು ಮುಚ್ಚಿಕೊಂಡು ಮರಿಗಮ್ಮನನ್ನು ನೆನಸಿಕೊಂಡು ಓಡಲು ಸಿದ್ಧನಾದ. ಓಟ ಪ್ರಾರಂಭದಲ್ಲಿ ಸ್ವಲ್ಪ ಹಿಂದಿದ್ದ ಮಾದ , ತನ್ನ ಹಸುವಿನ ಅಲಂಕಾರವನ್ನು ನೆನಸಿಕೊಂಡು ಎದೆಯಲ್ಲಿ ಕೆಚ್ಚು ತಂದುಕೊಂಡು ಎಲ್ಲರ ಹಿಂದಿಕ್ಕಿ ಓಡಿದ. ರಾತ್ರಿ, ಹಗಲು ಮಾಡಿದ್ದ ಪ್ರಾಕ್ಟೀಸ್ ಸಹಾಯಕ್ಕೆ ಬಂತು. ಮಾದ ಮಾದ ಎಂದು ಊರ ಮಕ್ಕಳು ಜೋರಾಗಿ ಕಿರುಚಿದಾಗಲೇ ತಾನು ಗೆದ್ದಿದ್ದೇನೆ ಎಂದು ಅರಿವಾಯಿತು. ಚಪ್ಪಲಿ ಇಲ್ಲದೇ ನಡೆದಾಡಿ ಮಾಗಿದ್ದ ಮಾದನ ಪಾದಕ್ಕೆ ಏನೂ ಆಗಿರಲಿಲ್ಲ. ಮಾದ ಜೋರಾಗಿ ಉಸಿರೆಳೆದು ಬಿಟ್ಟು ನಾಗರಾಜನನ್ನು ನೋಡಿದ, ನಾಗರಾಜ ಕೋಪದಿಂದ ಮುಖ ಊದಿಸಿಕೊಂಡು ಅಲ್ಲಿಂದ ತನ್ನ ತಂದೆಯೊಡನೆ ಹೊರಟು ಹೋದ. ಮಾಸ್ತರರು ಮಾದನನ್ನು ತಬ್ಬಿಕೊಂಡು ನನ್ನ ಕ್ಷಮಿಸು ಮಾದ ಎಂದು ಹೇಳಿ ಹೆಮ್ಮೆಯಿಂದ ಅವನ ಬೆನ್ನು ತಟ್ಟಿದರು. ಬಹುಮಾನದ ಹಣ ಒಂದು ಸಾವಿರ ರೂಪಾಯಿ ಕೈಗೆ ಬಿದ್ದಾಗ ಮಾದನಿಗೆ ಅಳು ಬಂದಿತು. ಮಾಸ್ತರರನ್ನು ಕರೆದುಕೊಂಡು ಹೋಗಿ ತನ್ನ ಹಸುವಿನ ಅಲಂಕಾರಕ್ಕೆ ಬೇಕಾದ ವಸ್ತುಗಳನ್ನು ಕೊಂಡ. ಮಾಸ್ತರರು ಹುಡುಗರಿಗೆ ಸಿನಿಮಾ ತೋರಿಸಬೇಕು ಎಂದು ಕೊಂಡಾಗ, ಮಾದ ಟಿಕೆಟ್ಗೆ ಹಣ ನಾನೇ ಕೊಡುತ್ತೇನೆ ಎಂದ. ಉಳಿದ ಹಣವನ್ನು ಭದ್ರವಾಗಿ ಜೇಬಿನಲ್ಲಿ ಇಟ್ಟುಕೊಂಡು ಸಿನಿಮಾ ನೋಡಿದ. ಸಿನಿಮಾ ಮುಗಿದಮೇಲೆ, ಹೊರಗಡೆ ಬಂದು ಬಸ್ ಹತ್ತಿ ಜೇಬು ತಡವಿಕೊಂಡರೆ ಅಲ್ಲಿ ಹಣವಿರಲಿಲ್ಲ. ಗಾಬರಿಯಿಂದ ತನ್ನ ಎಲ್ಲಾ ಜೇಬುಗಳನ್ನು, ಬ್ಯಾಗನ್ನು ತಡವಿದ, ಎಲ್ಲೂ ಹಣವಿರಲಿಲ್ಲ. ಸಿನೆಮಾ ಟಾಕೀಸ್ನಲ್ಲಿ ಯಾರೋ ಎಗರಿಸಿದ್ದಾರೆ ಎಂದು ಎಲ್ಲರೂ ಹೇಳಿ ಮಾದನನ್ನು ಸಮಾಧಾನ ಪಡಿಸಿದರು. ಮಿಕ್ಕಿದ್ದ ದುಡ್ಡು ಅಮ್ಮನಿಗೆ ಕೊಡಲು ಎಣಿಸಿದ್ದ ಮಾದ ಹಸು ಅಲಂಕಾರಕ್ಕೆ ವಸ್ತುಗಳು ಸಿಕ್ಕವಲ್ಲ ಎಂದು ಸಮಾಧಾನಗೊಂಡು ಊರಿಗೆ ಮರಳಿದ.

ಸಂಕ್ರಾಂತಿ ಹತ್ತಿರ ಬಂದಿತು. ಮರುದಿನ ಬೇಗ ಎದ್ದು ತನ್ನ ಹಸುವಿಗೆ ತಾನು ತಂದಿದ್ದ ವಸ್ತುಗಳಿಂದ ಅಲಂಕಾರ ಮಾಡಬೇಕು ಎಂದು ಮಾದ ಬೇಗನೆ ಊಟದ ಶಾಸ್ತ್ರ ಮುಗಿಸಿ ಜಗಲಿಯಲ್ಲಿ ಮಲಗಿಕೊಂಡ. ರಾತ್ರಿಯೆಲ್ಲಾ ತನ್ನ ಹಸುವಿಗೇ ಮೊದಲನೇ ಬಹುಮಾನ ಬಂದಂತೆ ಹಲವಾರು ಕನಸುಗಳು. ಬೆಳಿಗ್ಗೆ ಎದ್ದಾಗ ಆಗಲೇ ಚನ್ನಾಗಿ ಬೆಳಕಾಗಿತ್ತು. ತನ್ನನ್ನು ಬೇಗ ಎಬ್ಬಿಸಲಿಲ್ಲ ಎಂದು ಅಮ್ಮನಮೇಲೆ ಮುನಿಸು ತೋರಿ, ಹಸು ಕಟ್ಟಿದ್ದ ಜಾಗಕ್ಕೆ ಓಡಿದ. ಹಸುವನ್ನು ಚನ್ನಾಗಿ ತೊಳೆದು, ಅಲಂಕರಿಸಲು ಮನಸಿನಲ್ಲಿ ಯೋಚಿಸಿಕೊಂಡಿದ್ದ. ಅಲ್ಲಿ ಹೋದರೆ ಹಸು ಇರಲಿಲ್ಲ. ಮನೆಯೊಳಕ್ಕೆ ಓಡಿಬಂದ.

ಮುದ್ದೆ ತಿರುವುತಿದ್ದ ಅಮ್ಮನಿಗೆ " ಹಸು ಎಲ್ಲಿ" ಎಂದು ಗಾಭರಿಯಿಂದ ಕೇಳಿದ. ಹಸು ಅಲಂಕಾರಕ್ಕೆ ಮಾದ ಏನೆಲ್ಲಾ ಯೋಚಿಸಿಕೊಂಡಿದ್ದ ಎಂದು ಅವನ ಅಮ್ಮನಿಗೆ ತಿಳಿದಿತ್ತು. ಅವಳು ಕಣ್ಣೀರು ತಂದುಕೊಂಡು ನಡೆದಿದ್ದನ್ನು ಹೇಳಿದಳು.

ಹಿಂದಣ ರಾತ್ರಿ ಮಾದ ಮಲಗಿದ ಮೇಲೆ, ನಾಗರಾಜನ ಅಪ್ಪ ಮಾದನ ಮನೆಗೆ ಬಂದು, ತನ್ನಿಂದ ಎಂದೋ ಸಾಲಮಾಡಿದ್ದ ಹಣ ಹಿಂತಿರುಗುವಂತೆ ಪೀಡಿಸಿದ್ದ. ಮಾದನ ಅಪ್ಪ ಪರಿ ಪರಿಯಾಗಿ ಬೇಡಿಕೊಂಡರೂ ಕೇಳದೆ ತನ್ನ ಸಾಲಕ್ಕೆ ಹಸು ಹೊಡೆದುಕೊಂಡು ಹೋಗಿದ್ದ. ಇದೊಂದು ದಿನ ಬಿಟ್ಟು ನಾಳೆ ಹೊಡೆದುಕೊಂಡು ಹೋಗಿ ಎಂದು ಬೇಡಿಕೊಂಡರೂ ಕೇಳಲಿಲ್ಲ. ಹಣ ಕೊಟ್ಟು ಹಸು ತೆಗೆದುಕೊಂಡು ಹೋಗು ಎಂದು ಹೇಳಿ ಹೋಗಿದ್ದ.ಮಾದನಿಗೆ ದುಃಖ ತಡೆದುಕೊಳ್ಳಲಾಗಲಿಲ್ಲ, ಮನೆಯ ಹೊರಗಡೆ ಬಂದು ಜಗಲಿಯ ಮೇಲೆ ಕುಳಿತು ಬೋರೆಂದು ಅತ್ತುಬಿಟ್ಟ. ಕಣ್ಣೊರಿಸಿಕೊಂಡು ಹೊರಗಡೆ ಹೋಗಲು ಎದ್ದಾಗ, ಮನೆಗೆ ಸ್ವಲ್ಪ ದೂರದಲ್ಲಿ ವ್ಯಂಗದಿಂದ ನಗುತ್ತಿದ್ದ ನಾಗರಾಜನ ಮುಖ ಕಂಡಾಯಿತು.

ಎಂ.ವಿ. ಶಶಿಭೂಷಣ ರಾಜು

ಲೇಖಕ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ ಕತೆ, ಕವನಗಳು ತರಂಗ, ಕರ್ಮವೀರ, ಅವಧಿ, ಕೆಂಡಸಂಪಿಗೆ, ಕನ್ನಡಪ್ರಭ ಮತ್ತು ಪ್ರಜಾವಾಣಿಯೂ ಸೇರಿದಂತೆ ಅನೇಕ ಪತ್ರಿಕೆಗಳಲಿ ಪ್ರಕಟವಾಗಿವೆ. ಅಮೆರಿಕಾದ ಸಾಹಿತ್ಯಘೋಷ್ಠಿಗಳಲ್ಲಿಯೂ ಭಾಗಿಯಾಗುತ್ತಾರೆ.

ಕೃತಿಗಳು:  ಮೌನದ ಮೊರೆಹೊಕ್ಕಾಗ, ಕಥನ ಕವನ, ದ್ವಂದ್ವ, ಮತ್ತು ನೆನಪುಗಳೇ ಹಾಗೆ. ಐ ಸೀ ಯು ಗಾಡ್, ಲೈಫ್ ಅಂಡ್ ಡೆತ್, ಇಮಿಗ್ರೇಷನ್ ದಿ ಪೈನ್, ಲಾಸ್ಟ್ ಲೈಫ್,

More About Author