Story

ಸೆಲೆ

ಕನ್ನಡ ಕಾವ್ಯಲೋಕದ ಭರವಸೆಯ ಕವಿ ಶೋಭಾ ಹಿರೇಕೈ ಕೊಂಡ್ರಾಜಿ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು. ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು ‘ಅವ್ವ ಮತ್ತು ಅಬ್ಬಲಿಕೆ’ ಕವನ ಸಂಕಲನದ ಮೂಲಕ ಕನ್ನಡ ಕಾವ್ಯಲೋಕವನ್ನ ಪ್ರವೇಶಿಸಿದರು. ಅವರ ಹೊಸ ಕತೆ ‘ಸೆಲೆ’ ನಿಮ್ಮ ಓದಿಗಾಗಿ.
ಧರ್ಮಣ್ಣ ಆ ಊರಿಗೆ ಬಂದು ಹೆಚ್ಚು ಕಮ್ಮಿ ಹತ್ತು ವೈಶಾಖಗಳೇ ಕಳೆದಿರಬೇಕು. ಊರೆಂದರೆ ಊರಲ್ಲ ಅದು, ಹೊಳೆಯಂಚು. ಏರಲ್ಲೊಂದು, ತಗ್ಗಲ್ಲೊಂದು, ಆ ಬದಿಗೊಂದು ಈ ತುದಿಗೊಂದು, ಹೀಗೆ ಐದಾರು ಮನೆಗಳು. ಟಾರು ರಸ್ತೆಗೆ ತಾಗಿಕೊಂಡಿದ್ದ ತನ್ನ ದೊಡ್ಡೂರಿನಿಂದ ಆತ ಇಲ್ಲಿ ಬಂದು ಮನೆ ಕಟ್ಟಿಕೊಳ್ಳಲು ಒಂದು ಕಾರಣವಿತ್ತು. ಇದ್ದ ಊರಲ್ಲಿ ಆಚೆ ಈಚೆ ಕೈಕಾಲಾಡಲೂ ಜಾಗವಿಲ್ಲದೆ ಇವರ ಮನೆ ಕೋಳಿ ಅವರ ಮನೆ ಅಂಗಳದಲ್ಲಿ ಹೇತರೆ ಜಗಳ. ಅವರ ಕುರಿ ಇವರ ಹಿತ್ತಲ ಮೆಂದರೆ ಜಗಳ. ಕೇಳಿ ಕೇಳಿ ರೋಸಿ ಹೋಗಿದ್ದ ಧರ್ಮಣ್ಣ "ಸಾಯಲಿ ಇದೇನು ಬೇಡವೇ ಸಾತು, ಮಕ್ಕಳ ಕಟ್ಕೊಂಡು ಜಮೀನಿನ ತಲೆಯಲ್ಲಿ ಒಂದ್ ಗುಡಿಸಲಾದರೂ ಹಾಕ್ ಬಿಡನ " ಅಂದಿದ್ದ. ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ಆ ಬೆಟ್ಟದ ತುದಿಗೆ ಹ್ಯಾಗಿರಬೇಕು ಅನ್ನೋ ವಿಚಾರ ಬಂದು ಸಾತವ್ವ ಕ್ಷಣ ಕಂಗೆಟ್ಟರೂ... ಗಂಡನ ಮಾತಿಗೆ ಎಂದೂ ಎದುರಾಡದ ಆಕೆ "ಹು" ಅಂದಿದ್ದಳು.

ಊರು ಬಿಡುವುದೆಂದರೆ ಸುಲಭದ ಮಾತೇ? ಕುರಿ ಕೋಳಿ ಜಗಳ ಏನೇ ಇದ್ದರೂ...ಆರಾದ್ರೆ ಹಬ್ಬದ ಕುರಿ ತರುವಾಗ, ಚೌತಿಯ ಗೌರಿ ಕಳಿಸುವಾಗ, ದೀಪಾವಳಿಯ ಹೋರಿ ಓಡಿಸುವಾಗ, ಮದುವೆ, ಚೌಳಗಳಲ್ಲಿ ಕವಣ ಕಟ್ಟುವಾಗ, ಯಾರಾದರೂ ಸೀಕು ಸಂಕಟ ಬಂದು ಆಸ್ಪತ್ರೆ ಸೇರಿದಾಗ, ಒಂದೇ ಮನೆಯವರಾಗಿ ಬಿಡುವ ಊರ ಮಂದಿಯನ್ನು ಬಿಟ್ಟು ಹೊರಡುವುದು ಗೊತ್ತಾದಾಗಿನಿಂದ ಉಸ್ ಉಸ್ ಎನ್ನುತ್ತಾ ಸಾತವ್ವ ತನ್ನ ದು:ಖದ ಉಸಿರನ್ನು ಆಗಾಗ ಹೊರ ಹಾಕುತ್ತಿದ್ದಳು. ಅವಳ ಜೊತೆ ಕಟ್ಟಿಗೆ ತರಲು, ಗದ್ದೆ ನೆಡಲು, ಅಡಿಕೆ ಸುಲಿಯಲು ಮೈಯ್ಯಾಳು ಮಾಡಿಕೊಂಡು ಕೆಲಸ ಮಾಡುವ ಜತೆಗಾತಿ ಗೆಳತಿಯರೆಲ್ಲ ಸಾತವ್ವನ ಕುಟುಂಬವನ್ನು ಊರ ಬಿಟ್ಟು ನಾಲ್ಕೈದು ಮೈಲಿ ದೂರದಲ್ಲಿರುವ ಗದ್ದೆ ಬಳಿ ಕಳಿಸುವಾಗ ಕಂಬನಿ ಮಿಡಿದಿದ್ದರು. ದಿನಕ್ಕೊಂದು ಮನೆಯಂತೆ ಊಟಕ್ಕೆ ಕರೆದು..". ಅಲ್ಲಿ ಒಂದೇ ಮನೆ. ಊರಿಲ್ಲ ಕೇರಿಲ್ಲ.. ಹ್ಯಾಂಗ್ ಇರ್ತಿರೇನೋ.." ಎಂದು ಆತಂಕ ಪಡುತ್ತಲೇ ಉಡಿ ತುಂಬಿ ಕಳಿಸುವಾಗ ಹೆಣ್ಮಗಳು ತವರಿಂದ ಗಂಡನ ಮನೆಗೆ ಹೋಗುವ ಭಾವುಕತೆ ಎಲ್ಲರಲ್ಲೂ..

ಪಕ್ಕದ ಮನೆಯ ಗಂಗವ್ವನಂತೂ, ಹೊತ್ತಲ್ಲದ ಹೊತ್ತಿನಲ್ಲಿ ನೆಂಟರು ಬಂದಾಗ, ಕಡಿಮೆ ಬಿದ್ದ ಅನ್ನಕ್ಕೆ, ಸಾರಿಗೆ, ಚಾಪುಡಿ ಸಕ್ಕರೆಗೆ, ಲೋಟ ಹಾಲಿಗೆ.. ಹಿತ್ತಲ ಕಡೆಯಿಂದ ಬಂದು " ಸಾತು , ಸಾತು ಎಂದು ಮೆಲ್ಲಗೆ ಕರೆಯುವುದನ್ನು ನೆನೆ ನೆನೆದು ದು:ಖಿಸಿದ್ದಳು. ಇಲ್ಲಿ ಎಲ್ಲರ ನಡುವೆ ಓಡಾಡಿ ಆಡಾಡಿ ಬೆಳೆಯುತ್ತಿರುವ ಮಕ್ಕಳನ್ನು ಅಲ್ಲಿ ಒಂಟಿ ಮಾಡಿ ಬಿಡುವ ಚಿಂತೆ ಧರ್ಮಣ್ಣನನ್ನೂ ಕಾಡಿ, ಓರಿಗೆಯವರಲ್ಲಿ ಹೇಳಿಕೊಂಡಿದ್ದು ಕೇಳಿ ಸಾತವ್ವ " ಇಲ್ಲೇ ಇದ್ದು ಬಿಡಣ್ರಿ, ಆದಂಗೆ ಆಗಲಿ, ಅಲ್ಲಿ ಹೋದ್ರು ಬೆಳೆ ಬೇಸಾಯ ಬರೋದಷ್ಟೇ...ಹಂದಿ, ಮಂಗದ ಬಾಯಿಗೆ ಹದ " ಎಂದು ಹೇಳಿ ನೋಡಿದರೂ ಅವಳ ಮಾತು ವ್ಯರ್ಥ ವಾಗಿ, ಮನೆಯ ಒಂದೊಂದೇ ಸಾಮಾನು ದಾಟಿಸಿ ಮನೆ ಬಿಡುವ ದಿನ ಹತ್ತಿರ ಬಂದಿತ್ತು.

ಸೇರೊದ್ದು ಬಂದ ನಾಲ್ಕೇ ದಿನಕ್ಕೇ ಅತ್ತೆ ಇಲ್ಲದ ಮನೆಯ ಜವಾಬ್ದಾರಿ ತಾನೇ ತೆಗೆದುಕೊಂಡ ಸಾತವ್ವ ಇರುವೊಬ್ಬ ಮಾವನನ್ನು ತಂದೆಯಂತೆ ನೋಡಿಕೊಂಡಿದ್ದಳು. ಮದುವೆಯಾದ ಮರು ವರ್ಷವೇ ಉಪ್ಪಿನ ಕಾಯಿಗೆಂದು ಜೀರಿಗೆ ಮಾವಿನ ಮಿಡಿ ಮರ ಹುಡುಕಿಕೊಂಡು ಹೋದ ಮಾವ ಕೂಡಾ ಹೆಣವಾಗಿ ಬಂದಾಗ ಗಂಡ ಹೆಂಡತಿ ಇಬ್ಬರೂ ಆ ಕುಟುಂಬದಲ್ಲಿ ಅನಾಥರಾಗಿ ಬಿಟ್ಟಿದ್ದರು. ಸಾತವ್ವ ಮಾವನ ನೆನಪಿಸಿ ಕಣ್ಣೊರೆಸಿ ಕೊಂಡಳು. ಮಾವ ಕಟ್ಟಿದ ಹಳೆ ಮನೆ. ಉದ್ದುದ್ದ ಜಗುಲಿ... ಅಷ್ಟೇ ಉದ್ದದ ಅಡುಗೆ ಕೋಣೆ. ಬೆಳಿಗ್ಗೆ ಎದ್ದುಸಗಣಿ ಹಾಕಿ ಹಾಳೆ ಕಡಿ ಹಿಡಿದು ಸಾರಿಸಬೇಕು.. ಎಷ್ಟು ಕಷ್ಟ ಪಟ್ಟಿದ್ದಳು ಸಾತವ್ವ, ಮದುವೆಯಾದ ಹೊಸದರಲ್ಲಿ. ಹೇಗೆ ಸಾರಿಸಿದರೂ ಸಗಣಿ ಗೋಡೆಯ ಅಂಚಿಗೆ ತಾಗಿ... "ಒಂದ್ ಸಾರಿಸೋಕು ಬರದ ಹುಡುಗಿ ಹ್ಯಾಂಗೆ ಸಂಸಾರ ಮಾಡಿಕೊಂಡು ಹೋಗುತ್ತಾಳೋ...ಹೇಳಿ ಕೊಡಲು ಅತ್ತೆ ಇಲ್ಲದ ಮನೆ ಬೇರೆ...ಒಂದ್ ಲೆಕ್ಕದಲ್ಲಿ ಇಲ್ಲದ್ದೇ ಒಳ್ಳೇದು.. ಇದ್ದಿದ್ರೆ ಕಷ್ಟಿತ್ತು.

ಅತ್ತಿಗೆ ನಾದಿನಿಯರನ್ನೆಲ್ಲ ಹೇಗೆ ಕರ್ದು ಕಳಿಸಿ ಮಾಡ್ತಾಳೋ...ಅವರಿನ್ನು ಹೊಳೇಲೇ ಕಾಲ್ ತೊಳ್ಕೊಂಡ್ ಬರೋದೇನೋ...ಧರ್ಮುಗೆ ಯಾರ್ ಹಚ್ಚಿ ಬಿಟ್ರೆನೋ ಇಂಥ ನೆಂಟಸ್ತನ. ಲೋಕದಲ್ಲಿ ಹೆಣ್ಣೇ ಹುಟ್ಟಿಲ್ಲ ಅನ್ನೋ ಹಂಗೆ. ಬರೀ ಚಂದ ತಗೊಂಡು ಸಂಸಾರ ಮಾಡಕಾಗ್ತದ " ಎಂಬ ಆಚೀಚೆ ಹಿರಿ ದನಿಗಳಿಗೆಲ್ಲ " ನೀ ಸುಮ್ನಿರು ತಲೆ ಕೆಡಿಸ್ಕಿಬೇಡ " ಎಂದು ಗಂಡ ಸಮಾಧಾನಿಸಿದಾಗೆಲ್ಲ... ಅಲ್ಲಿ ಅವ್ವ " ನನ್ಮಗಳು ಏನೂ ಕಷ್ಟ ಕಂಡೋಳೇ ಅಲ್ಲ. ಎಲ್ಲ ಹೊಣೆ ಒಂದೇ ಸಲ ಹೆಗಲಿಗೆ. ಹೇಳಿ ಕೇಳಿ ಮಾಡೋಕೆ ಅತ್ತೆನೂ ಇಲ್ಲ. ಪರದೇಸಿ ಆಗಬಿಟ್ಳು" ಅಂತ ಕಂಡ ಕಂಡೋರ ಕಡೆ ಹೇಳಿದ್ದೆಲ್ಲ ಇಂದು ಮತ್ತೆ ನೆನಪಾಗಿ ಎದೆ ಭಾರವಾಯಿತು ಸಾತವ್ವಳಿಗೆ.

ಮದುವೆಯಾಗಿ ತಿಂಗಳ ಶಾಸ್ತ್ರ ಮುಗಿಸಿ, ಕವಣ ತೆಗೆದು ಕೋಳಿ ಊಟ ಉಂಡು ಊರಿಂದ ಬಂದ ನೆಂಟರು ಅಷ್ಟೇ ಹೋಗಿದ್ದು, ರೂಮಿಲ್ಲದ ಆ ಮನೆಯಲ್ಲಿ ಸುಟ್ಟ ಇಟ್ಟಿಗೆಯಿಂದ ಗಂಡ ತಮಗಾಗಿ ಒಂದು ಹೊಸ ರೂಮು ಕಟ್ಟಿದ್ದು, ಪಕ್ಕದ ಮನೆಯ ತಿಪ್ಪಜ್ಜ ಗೋಡೆ ಕಟ್ಟುತ್ತಿರುವ ಗಂಡನನ್ನು ಛೇಡಿಸಿದ್ದು, ಅವಳಿಗೂ ನಾಚಿಕೆಯಾಗಿ ಕೋಣೆ ಕಟ್ಟಿ ಮುಗಿವವರೆಗೂ.. ಯಾರೇ ಗಂಡಸರಿದ್ದರೂ ಜಗುಲಿ ಕಡೆ ಮುಖ ತೋರಿಸದೇ ಹಿಂದೆ ಹಿತ್ತಲ ಕಡೆಯೇ.. ಕೆಲಸದಲ್ಲಿರುವಂತೆ ನಟಿಸಿದ್ದು..

ಆಮೇಲೆ ಎರಡು ಮಕ್ಕಳ ತೊಟ್ಟಿಲ ಲಾಲಿ ಇಲ್ಲಿಂದಲೇ ಕೇಳಿದ್ದು.. ಮತ್ತೂ ಇಲ್ಲಿಯವರೆಗೂ ಆ ಕೋಣೆಯ ರಂಗು ಹಾಗೇ ಉಳಿದದ್ದು..
ಹೀಗೇ ಒಂದಾ.. ಎರಡಾ.. ಈ ಮನೆಯ ನೆನಪು!
ಸಾತವ್ವ ಅದೇ ರೂಮಲ್ಲಿ ಕಾಲಿಟ್ಟು ಮತ್ತೆ ನಾಚಿ ನೀರಾದಳು.

ಇನ್ನೇನು ಹೋಗುವ ದಿನ ಬಂದಾಗಿದೆ. ಧರ್ಮಣ್ಣ ಹೊಸ ಗೂಡು ಕಟ್ಟಿ , ಓಡಾಡಿ ಸೋತು ಸುಣ್ಣವಾಗಿದ್ದಾನೆ . ಸಾತವ್ವ ಮಾತ್ರ ಮತ್ತೆ ಮತ್ತೆ ಈ ಮನೆಯ ಜಂತಿ, ಕೋಳು, ಕಿಡಕಿ ಬಾಗಿಲು, ಬಾವಿಕಟ್ಟೆಯೊಂದಿಗೂ ಮಾತಾಡುತ್ತಲೇ ಇದ್ದಾಳೆ.

ಅಂದು ಮದುವೆಯ ಮೊದಲ ವರ್ಷದ ದೀಪಾವಳಿ ಬೂರೆ ಹಬ್ಬ .. ಅತ್ತೆಯ ದಾರೆಯ ಸೀರೆ ಉಟ್ಟೇ.. ಬಾವಿ ನೀರೆತ್ತುವುದು ಪದ್ದತಿ. ಗಂಡ ಎಷ್ಟು ಹುಡುಕಿದರೂ ಹಳೆಯ ಟ್ರಂಕ್ನಲ್ಲಿ ಅತ್ತೆ ಸೀರೆ ಸಿಗುತ್ತಿಲ್ಲ. ಓರಗೆಯವರೆಲ್ಲ ನೀರು ತುಂಬುವ ಶಾಸ್ತ್ರಕ್ಕೆ ಬಂದು ನಿಂತಾಗಿದೆ.. ಸೀರೆ ಸಿಗದೆ ಮಂಕಾಗಿದ್ದವಳಿಗೆ.". ಅತ್ತೆ ಬಣ್ಣ ಉಡಲು ಕೂಡಾ ಪುಣ್ಯ ಬೇಕು. ಹೋಗು ಯಾವುದಾದರೂ ಹೊಸ ಸೀರೆ ಇದ್ದರೆ ಉಟ್ಟು ಬಾ. ನಾವು ಮನೆಗೆ ಹೋಗಿ ಹಬ್ಬ ಮಾಡಬೇಕು" ಅಂದ ಕುಟುಂಬದ ಹಿರಿಯತ್ತೆಯ ಕುಹಕ ಮಾತಿಗೆ..ಬಿಂದಿಗೆಯ ಜೊತೆ ನಾಲ್ಕು ಹನಿ ಕಣ್ಣೀರು ಇದೇ ಬಾವಿಗೆ ಸೇರಿತ್ತಲ್ಲವೇ.. ಆಮೇಲಾಮೇಲೆ ಎಂದೂ ಬತ್ತದೆ ಇರುವ ಈ ಬಾವಿಯ ಕುರಿತು.." ಸಾತು ನಮ್ಮ ಬಾವಿ ಯಾಕೆ ಬತ್ತೋದಿಲ್ಲ ಹೇಳು... ಆ ನೀರಲ್ಲಿ ನಿನ್ನ ಕಣ್ಣೀರು ಸೇರಿದ್ದಕ್ಕೆ "ಗಂಡ ಅದೆಷ್ಟೋ ಸಲ ಛೇಡಿಸಿ ಕಾಲೆಳೆದದ್ದು ನೆನಪಾಗಿ ಸಾತವ್ವ.. " ಗಂಗವ್ವ... ಅಲ್ಲೂ ನಮ್ಮ ಮೇಲೆ ಕರುಣೆ ಇರಲವ್ವ ಎಂದು ಕೈ ಮುಗಿದಾಗ ಮತ್ತೆರಡು ನೀರ ಹನಿ ಬಾವಿಕಟ್ಟೆಯ ಮೇಲುದುರಿತು.

ಸಾತವ್ವ ಅಂದು ಕೊಂಡ ಪ್ರಾರ್ಥನೆ ಗಂಗವ್ವಳಿಗೆ ಕೇಳಿಸಲೇ ಇಲ್ಲ ಎಂಬಂತೆ, ಇಲ್ಲಿಗೆ ಬಂದು ದಶಕ ಕಳೆದರೂ ನೀರಿಗಾಗಿ ಅವರು ಪರದಾಡುವ ಪರದಾಟ ನಿಲ್ಲಲೇ ಇಲ್ಲ. ಹರಿವ ಹೊಳೆಯನ್ನೇ ಎಲ್ಲದಕ್ಕೂ ನೆಚ್ಚಿಕೊಂಡಿದ್ದರು. ಮಳೆಗಾಲದಲ್ಲಿ ನೆಟ್ಟ ಗದ್ದೆ ಸಸಿಗಳನ್ನೂ ಬಿಡದೇ ಉಕ್ಕಿ ಕೊಚ್ಚಿ ಒಯ್ಯುವ ನದಿ ಬೇಸಿಗೆ ಬಂತೆಂದರೆ ಬತ್ತಿ ಹೋಗಿ ತಾನೂ ಹರಿದಿದ್ದೆ ಸುಳ್ಳು ಎಂಬಂತೆ ನಿರ್ಲಿಪ್ತವಾಗಿ ಬಿಡುತ್ತಿತ್ತು. ನೀರಿಗಾಗಿ ನದಿಯನ್ನೇ ನಂಬುವುದು ಕಷ್ಟವಾದಾಗ ತೆರೆದ ಬಾವಿ ತೆಗೆಯುವುದು ಕಷ್ಟ ಆದರೂ.

ಸಾಲ ಸೋಲ ಮಾಡಿ ಬಾವಿ ತೆಗೆದು ಆಗಿತ್ತು. ಆದರೆ ಅವರ ಅದೃಷ್ಟಕ್ಕೆ, ಬಾವಿಯಾಳ ಪಾತಾಳ ಕಂಡಿತೆ ಹೊರತು ನೀರು ಮಾತ್ರ ಬೇಸಿಗೆಯ ದಾಹ ತಣಿಸಲಿಲ್ಲ. ಮನೆ ದಾರಿ ಸವೆಸಿ ಸವೆಸಿ ಅಂತೂ ಇಂತೂ ಪಂಚಾಯಿತಿಗೆ ಆರಿಸಿ ಕಳಿಸಿದ ಬೀರಣ್ಣನಿಂದ ಅಂತೂ ಒಂದು ಬಾವಿಯನ್ನು ಮಂಜೂರಿ ಮಾಡಿಸಿಕೊಂಡು ಬಂದಿದ್ದ ಧರ್ಮಣ್ಣ. ತಮ್ಮ ತಮ್ಮ ಮನೆ ಸಮೀಪವೇ ಬಾವಿ ಮಾಡಬೇಕೆಂದು , "ಅವನ ಬೇಲಿ ತಾ ದಾಟುವುದಿಲ್ಲ, ಇವರ ಮನೆ ದಿಕ್ಕಿನ ಕಡೆ ಮುಖ ಹಾಕಿಯೂ ಮಲಗುವುದಿಲ್ಲ " ಎಂಬ ಇದ್ದ ಮೂರು ಮನೆಯವರಲ್ಲೇ ಜಗಳ ಆಗಿ ಸರಕಾರಿ ಬಾವಿಯು ಸದ್ದಿಲ್ಲದೆ ಹೊರಟು ಹೋದಾಗ ನೀರಿಗಾಗಿ ಮಾಡುವ ಪ್ರಯತ್ನ ಬಿಟ್ಟು.. ರಣ ಬಿಸಿಲಲ್ಲಿ ಬತ್ತಿ ಹೋದ ಹೊಳೆಯಲ್ಲೇ ಗುಂಡಿ ತೋಡಿ... ಬೊಗಸೆ ಬೊಗಸೆ ನೀರನ್ನೇ ಕೊಡ ಪಾನ ತುಂಬಿಸಿ ಹೇಗೋ ಬೇಸಿಗೆಯ ದಿನಗಳ ದೂಡಿ ಮಳೆಗಾಗಿ ಕಾಯುತ್ತಿದ್ದರು. ದೊಡ್ಡ ಮಗನ ಮದುವೆಯನ್ನು ತುಳಸಿ ಮದುವೆ ಆಗುವುದೊಂದೇ ಕಾದು, ದೀಪಾವಳಿ ಮರುದಿನವೇ ಮುಗಿಸಿ ಬಿಟ್ಟಿದ್ದರು.

ಇಷ್ಟು ದಿನ ಹೆಂಡತಿ ಸಾತು ಸೊಂಟ ಮುರಿದುಕೊಂಡು ಮೈಲಿಯಾಚೆಯಿಂದ ನೀರು ಹೊತ್ತಳೆಂದರೆ, ಈಗಿನ ಕಾಲದ ಹೆಣ್ಣು ಮಕ್ಕಳು ನೀರು ಹೊತ್ತಾರೆಯೇ? ಕೆಲಸ ಇಲ್ಲದೆ ಮನೆಯಲ್ಲಿರುವ ತನ್ನ ಮಗನಿಗೆ ಹೆಣ್ಣು ಸಿಕ್ಕಿದ್ದೇ ಪುಣ್ಯ. ಅಂತಾದ್ದರಲ್ಲಿ ದೊಡ್ಡ ಕುಟುಂಬದಿಂದ ಬಂದ ಹೆಣ್ಣು ಮಗಳಿಗೆ ನೀರಿನ ಸಂಕಟ ತಾಗಬಾರದು ಮತ್ತು ಹೆಣ್ಣು ಕೊಟ್ಟ ಬೀಗರ ಕಣ್ಣಲ್ಲಿ ತಾನು ಸಣ್ಣವನಾಗಬಾರದೆಂದು ಹೆಂಡತಿ ಸಾತುವಿನ ಬಳಿ ಧರ್ಮಣ್ಣ ಈ ವಿಷಯ ಚರ್ಚಿಸಿದ " ನೋಡು ಸಾತು, ಹ್ಯಾಂಗಿದ್ದರೂ ಸಾಯೋತನಕ ಸಾಲದಲ್ಲಿರೋದೆ. ನಿಮ್ಮ ಸಂಘದ ಸರ್ ಕಡೆ ಮಾತಾಡೋಣ.‌ ಒಂದ್ ಐವತ್ತು ತೆಗೆದು ಅತ್ಲಾಗೆ ‌ಒಂದ್ ಬೋರ್ ಹೊಡೆಸಿಯೇ ಬಿಡೋಣ." ಅಂದ ಗಂಡನ ಮಾತು ಹೆಂಡತಿಗೂ ಒಪ್ಪಿಗೆಯಾಗಿ ಆ ವಾರದಲ್ಲೇ ಆಂದ್ರದ ಬೋರ್ ಗಾಡಿ ಗುಡ್ಡ ಇಳಿದು ಇವರ ಮನೆ ಅಂಗಳಕ್ಕೆ ಬಂದು ನಿಂತು ಆಗಿತ್ತು.

ಬೆಳಿಗ್ಗೆ ದೂರದ ಕೆರೆಗದ್ದೆ ತಿಮ್ಮಣ್ಣ ಕೈಯ್ಯಲ್ಲೊಂದು ಕಾಯಿ ಹಿಡಿದು ಜಲ ನೋಡಿದ್ದೇ ನೋಡಿದ್ದು. ಸುತ್ತ ಮುತ್ತ ಎಲ್ಲೇ ತಿರುಗಿದರೂ ಅಂತರ್ ಜಲದ ಸುಳಿವೇ ಇಲ್ಲ ಅಂತ ಕೈ ಚೆಲ್ಲಿ ಕುಂತ ತಿಮ್ಮಣ್ಣ, ತಾನು ಅದೆಷ್ಟು ಜಲ ನೋಡಿದ್ದು... ಒಂದೂ ಫೇಲಾಗದೆ ಎಲ್ಲವೂ ನೀರುಕ್ಕಿಸಿದ ಯಶೋಗಾಥೆಯನ್ನು ಹೇಳುತ್ತ ಕುಳಿತವನು ತಕ್ಷಣ ಕಣ್ ಮುಚ್ಚಿ ಏನೋ ಹೊಳೆದವನಂತೆ ಎದ್ದು ಗದ್ದೆಯ ಕಣದತ್ತ ಹೊರಟೇ ಬಿಟ್ಟ. "ಇದೊಂದು ಕೊನೆಯ ಪ್ರಯತ್ನ.. ನೋಡೆ ಬಿಡುವ" ಎನ್ನುತ್ತಾ ಮತ್ತೊಂದು ಕವಳ ಬಾಯೊಳು ಸೇರಿಸಿ, ತುಸು ಜಗಿದಂತೆ ಮಾಡಿ, ಪಿಚಕ್ಕೆಂದು ಹೂವಿನ ಗಿಡದ ಬುಡಕ್ಕೇ ಉಗುಳಿ ಕಾಯಿ ಕೈಯಲ್ಲಿ ಹಿಡಿದು ಕಣದತ್ತ ನಡೆದೇ ಬಿಟ್ಟ. ಅವನ ಹಿಂದೆ ನೀರಿಗಾಗಿ ಕಾದ ಬಡಪಾಯಿಗಳು.

ಚಪ್ಪಲಿ ತೆಗೆದು ಕಣಕ್ಕೆ ಕಾಲಿಟ್ಟಿದ್ದೆ ತಡ ಕೈಯ್ಯಲ್ಲಿದ್ದ ಕಾಯಿ ಗರಗರ ತಿರುಗೇ ಬಿಡ್ತು."ಒಂದ್ ಪೈಸೆ ವಿಚಾರ ಮಾಡಬೇಡಿ. ನೀರ್ ಬರದಿದ್ರೆ ಆಮೇಲೆ ಹೇಳಿ. ನಂದ್ ಇದೇ ಕೊನೆ ಆಗ್ ಬಿಡ್ತದೆ. ನಾ ಎಲ್ಲೂ ಜಲ ನೋಡೋಕೆ ಹೋಗೋದಿಲ್ಲ ಇನ್ನೂ.. " ಕವಳ ವನ್ನೆಲ್ಲ ಬುರ್ ಎಂದು ಉಗುಳಿ ಹೇಳಿದ ತಿಮ್ಮಣ್ಣನ ಮಾತು ಎಲ್ಲರಿಗೂ ಗಂಗೆ ಮನೆಯಂಗಳದವರೆಗೂ ಹರಿದು ಬಂದಷ್ಟೇ ಖುಷಿ ಕೊಟ್ಟಿತ್ತು.

ಅಷ್ಟರೊಳಗೆ ಸಾತವ್ವ ಪ್ರಧಾನ ಬಾಗಿಲ ಹೂ ಬಲಕ್ಕೇ ಬಿದ್ದಿತ್ತೆಂದೂ.. ಅದೇ ವೇಳೆಗೆ ಹಲ್ಲಿ ಲೊಚಗುಟ್ಟಿತ್ತೆಂದು ..ಮನಸಲ್ಲೇ ಭೂತಪ್ಪನ ಕಟ್ಟೆಗೊಂದು ಜೋಡಿ ಹಾರ್ ಗೋಳಿ ಹರಕೆಯನ್ನು ಬರುವ ಸಂಕ್ರಮಣಕ್ಕೆ ಮಾಡಿಕೊಡುವುದಾಗಿ ಹರಕೆ ಹೊತ್ತೆನೆಂದೂ ಹೇಳಿದಳು. ಇಷ್ಟಾದರೂ ಸಮಾಧಾನವಿಲ್ಲದ ಧರ್ಮಣ್ಣ " ಸಾತು ಪಕ್ಕಾ ನೀರು ಬೀಳ್ತತೋ ಇಲ್ಲೋ.. ತಡಿ ಕೇಳೆ ಬರ್ತನಿ" ಅಂತ ಪಕ್ಕದೂರಿನ ಭಟ್ಟರ ಮನೆ ಕಡೆ ಹೊರಟಾಗ .." ಭಟ್ ರು, ಶೆಟ್ ರು ಅಂತ ಹೋದೆ ಅಂದರೆ ಬೋರ್ ಗಾಡಿ ಗಟ್ಟನೆ ಹತ್ತಿಸಿ ಬಿಡ್ತನಿ ನೋಡು " ಅಂತ ಎಂದೂ ಈ ರೀತಿ ಕೂಗದ ಮಗ ಕೂಗಿದ್ದು ಕಂಡು ಕ್ಷಣ ಅವಕ್ಕಾಗಿ ಬೇಸರ ಗೊಂಡ ಧರ್ಮಣ್ಣ ಹೊಸ ಅಂಗಿ ಕಳಚಿಟ್ಟು.. ಕಣದಲ್ಲೇ ಬೋರ್ ತೆಗೆಸುವ ತೀರ್ಮಾನಕ್ಕೆ ಬಂದ. ಬೋರ್ ಗಾಡಿಗೆ ಡೀಜಲ್ಲೇ ಕಡಿಮೆ ಎಂದು ತರ ಹೋದ ಡ್ರೈವರ್ ಆ ದಿನ ರಾತ್ರಿ ಆದರೂ ಬರದೆ .. ಎಷ್ಟು ಬೇಗ ನೀರು ಕಾಣುತ್ತೇವೋ ಎಂದು ಕುಂತವರಿಗಂದು ನಿರಾಸೆಯೇ ಆಯಿತು.

ಎಂದು ಮನೆ ಕಡೆ ಹಾಯದ ಹಕ್ಕಲ ದ್ಯಾವ ಅಂದು ರಾತ್ರಿ ತಮ್ಮನೆ ಕಡೆ ಬಂದಿದ್ದು, ಬರಬರುತ್ತಲೇ ಧರ್ಮಣ್ಣ " ನೀ ಬೋರು ತೆಗೆಸಕೆ ಹೊಂಟಿದ್ದು ಅಂತೂ ಚೊಲೋ ಆತು .ಆದ್ರೆ ಎಲ್ಲಿ ತೆಗೆಸ್ತಿ ಬೋರು ? ಮಾಲ್ಕ್ಯಾಗೋ? ಫಾರೆಸ್ಟ್‌ ಖಾತೆಗೋ?"ಎಂದು ಕೇಳಿ ಧರ್ಮಣ್ಣ ನ ತಲೆಗೊಂದು ಹುಳ ಬಿಟ್ಟು ಹೋಗಿದ್ದ." ಹೌದು ಮಾಲ್ಕಿಯಲ್ಲಿ ಎಲ್ಲೈತಿ ಜಾಗ?ನಾಲ್ಕು ಗದ್ದೆ ಹಾಳಿ ಬಿಟ್ರೆ.ಗದ್ದೆಯ ಕಣ ಕೂಡಾ ಫಾರೆಸ್ಟೇ ಅಂತೆ. ಅಗಳ ಹೊಡೆಸೋಕೆ ಬಂದ ಗಾರ್ಡ್ ಸಾಬ್ರಿಗೆ ಕಾಲ್ಬಿದ್ದು ಅದು ಹೇಗೋ ಅಗಳ ಸ್ವಲ್ಪ ಸರಿಸಿದ್ದೆ. ಈಗ ಅಲ್ಲೇ ನೀರು ಬರ್ತದಂತೆ. ಏನಾದರೂ ಆಗಲಿ ಅಲ್ಲೇ ಬೋರ್ ತೆಗೆಸೋದು. ನೀರಿಗೆ ಯಾರಾದರೂ ತೊಂದರೆ ಮಾಡಾರ್ಯೆ... ಅವರೂ ಅನ್ನ ತಿಂತಾರೆ." ಅಂತ ಕಣದಲ್ಲಿ ಬೋರ್ ಗಾಡಿಗೆ ಪೂಜೆ ಮಾಡಿಸಿದ ಧರ್ಮಣ್ಣ.

ಗುಡ್ಡದ ತುದಿ ಮನೆಯಲ್ಲಿ ಎದ್ದ ಮೋಟಾರಿನ ಸದ್ದಿಗೆ ಹೊಳೆಯಾಚೆಯ ಊರವರು ಒಬ್ಬೊಬ್ಬರೆ ಜಮಾಯಿಸಲು ಶುರು ಮಾಡಿದರು. ಕಿವಿ ತಮಟೆ ಹರಿದು ಹೋಗುವಂತೆ ರೊಂಯೆನ್ನೋ ಶಬ್ದ ಮೈಲಿಯಾಚೆಗೂ ಕೇಳುತ್ತಿತ್ತು. ತಾಸಿಗೆ ನೂರಡಿಯಂತೆ ಮೂರು ತಾಸಿಗೆ ಮುನ್ನೂರು ಅಡಿ ಭೂಮಿಯೆದೆ ಕೊರೆದರೂ ನೀರ ಸೆಲೆಯ ಸುಳಿವಿಲ್ಲ.

ಈ ಮದ್ಯೆ ಬುರ್ ಎಂದು ಒಮ್ಮೆಲೆ ಗುಡ್ಡೆ ಗುಡ್ಡೆಯಾಗಿ ಹೊರ ಚಿಮ್ಮುವ ಮಣ್ಣ ರಾಶಿ, ಕಲ್ಲಿನ ಹುಡಿಗಳು ದೂರದಿಂದ ನೀರು ಚಿಮ್ಮಿದಂತೆ ಕಾಣುತಿತ್ತು. ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೀರ ಸೆಲೆ ನೋಡಲು ಕಾಯುತ್ತ ಕುಳಿತಿದ್ದ ಧರ್ಮಣ್ಣ... ನೀರೇ ಉಕ್ಕುತ್ತಿದೆ ಎಂದು ತಿಳಿದು..."ಸಾತು...ಗಂಗವ್ವ ಬಂದೆ ಬಿಟ್ಳು ಬಾ" ಅಂತ ಕೂಗಿದಾಗ.. ಸಾತವ್ವ ಪೂಜೆಗೆ ಹಣ್ಣು ಕಾಯಿಯ ಸಮೇತ ಬಂದೇ ಬಿಟ್ಟಿದ್ದಳು.

ಇಲ್ಲ ನೀರ ಹರಿವಿಲ್ಲ! ಕೊನೆಯ ಪ್ರಯತ್ನ ವೆಂಬಂತೆ, ಧರ್ಮಣ್ಣ ಸುಳಿಗಾಯಿಯನ್ನು ಮಷಿನ್ನಿಗೆ, ಮಣ್ಣ ರಾಶಿಗೆ ಸುಳಿ ಸುಳಿದು ಮೈಮೇಲೆ ಬಂದವನಂತೆ ಭೂತಪ್ಪನ ಕಟ್ಟೆ ಕಡೆ ಓಡಿದ. ಕಟ್ಟೆಯಿಂದ ಬರುವುದರೊಳಗೆ ಇವರ ಮನೆಯ ಕಟ್ಟೆಯ ಮೇಲೆ ಕುಳಿತ ಗಾರ್ಡ್ ಮತ್ತು ಫಾರೆಸ್ಟ್ ಸಾಬ್ರನ್ನು ನೋಡಿ ಉರಿ ಬಿಸಿಲಲ್ಲೂ ಧರ್ಮಣ್ಣ ನ ಮೈ ತಣ್ಣಗಾಗಿ ಬಿಡ್ತು. ಹಕ್ಕಲ ದ್ಯಾವ ಅವನ ಕಣ್ ಮುಂದೆ ಸುಳಿದು ಹೋದ. ಸಾಹೆಬ್ರ ದೊಡ್ಡ ದನಿಗೆ ಹೆದರಿದ ಧರ್ಮಣ್ಣ, ಹೆಂಡತಿ ತಂದಿಟ್ಟ ಧರ್ಮಸ್ಥಳ ಸಂಘದ ಸಾಲದಲ್ಲೆ ಒಂದೈದು ಸಾವಿರ ಎಣಿಸಿಕೊಟ್ಟ. ಆ ಹಣಕ್ಕಾಗಿ ಇನ್ನಾರ ಮನೆಯ ಕದ ತಟ್ಟುತ್ತಾನೆ ಈ ಬಡ ಪಾಯಿ ಎಂಬುದು ಕಾಡ ಕಾವಲಿಗೆ ಅರ್ಥವಾಗಲಿಲ್ಲ. ದುಡ್ಡ ಎಣಿಸುತ್ತ ಆ ಆಕೃತಿಗಳು ಮರೆಯಾದವು.

ಏನೇ ಆದರೂ ಭೂಮಿ ಹನಿಯೊಡೆಯಲಿಲ್ಲ. ಕಲ್ಲಿನ ಧೂಳು ಗಾಢವಾಗುತ್ತ ಸುರುಳಿ ಸುರುಳಿಯಲ್ಲಿ ಮನೆಯನ್ನು ಮುತ್ತುತ್ತಲೇ ಇತ್ತು. ಮಣ್ಣನ್ನು ಅಂಗೈಮೇಲೆ ಹರಡಿಕೊಂಡು ಜಲ ಕಂಡು ಹಿಡಿದ ತಿಮ್ಮಣ್ಣ.. " ನೀರು ಬರೋ ಲಕ್ಷಣ ಇಲ್ಲ. ನಿಲ್ಲಿಸಿ ಬಿಡುವ .ನಿಮ್ಮ ಅದೃಷ್ಟಕ್ಕೆ ನೀರಿನ ಭಾಗ್ಯ ಇಲ್ಲ ಅನ್ನಿಸ್ತೈತಿ" ಅಂದಾಗ ನಾನೂರು ಅಡಿ ಸೇರಿದ ಎಲ್ಲ ಪೈಪುಗಳು ಒಂದೊಂದಾಗಿ ಮೇಲೆದ್ದವು.

" ದೇವರಿಗೆ ಕಣ್ಣಿಲ್ಲ, ಭೂತಾಯಿಗೂ ಕರುಣೆ ಇಲ್ಲ, ನಮ್ಮ ಜನ್ಮಕ್ಕೆ ನೀರಿನ ಭಾಗ್ಯವೇ ಇಲ್ಲ... " ಎನ್ನುತ್ತಾ ಕಣ್ಣೊರೆಸಿಕೊಂಡ ಸಾತವ್ವ ಹಣ್ಣು ಕಾಯಿಯ ಬುಟ್ಟಿಯನ್ನು ಅಲ್ಲೇ ಮೂಲೆಗೊತ್ತಿದಳು. ಧರ್ಮಣ್ಣ ಅಲ್ಲೇ ಕುಸಿದು ಕುಳಿತ. ಭೂಮಿಯೊಡಲಲ್ಲಿ ಒಡೆಯದ ಸೆಲೆ ಇವನ ಕಣ್ಣಲ್ಲಿ ಒಡೆದಿತ್ತು. ಮಗ ಬೋರ್ ಗಾಡಿಯವರಿಗೆ ಕಡಿಮೆ ಬಿದ್ದ ಹಣ ಕಡ ತರಲು ಗುಡ್ಡವೇರಿದ.

ಶೋಭಾ ಹಿರೇಕೈ ಕಂಡ್ರಾಜಿ

ಶೋಭಾ ಹಿರೇಕೈ ಕಂಡ್ರಾಜಿ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು. ಸದ್ಯ ಸಿದ್ದಾಪುರ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶೋಭಾ ಕನ್ನಡ ಕಾವ್ಯಲೋಕದ ಭರವಸೆಯ ಕವಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇವರ ಮೊದಲ ಕವನ ಸಂಕಲನ 'ಅವ್ವ ಮತ್ತು ಅಬ್ಬಲಿಕೆ' ಪ್ರಕಟಣೆಗೊಳ್ಳುತ್ತಿದ್ದು. ಕವಿತೆಗಳ ಮೂಲಕ ಮನೆಮಾತಾಗಿದ್ದಾರೆ.

More About Author