Poem

ಸಿರಿವಂತೆ ಗೌರಿ

 

ಮೀನು ಮಾರುವ ಗೌರಿ
ಸಿರಿವಂತೆ..
ಕಡಲ ಕಿನಾರೆಯಲ್ಲಿ
ಹಣೆಯ ಮೇಲೆ ಕೈಯೊರಗಿ
ಅನತಿ ದೂರದಲ್ಲಿ ಬರುವ
ದೋಣಿಯತ್ತ ,
ಅಪ್ಪಳಿಸುವ ಅಲೆಗಳ ವಂದನೆ ಸ್ವೀಕರಿಸುತ,
ಕಾಗೆ ಹದ್ದುಗಳೊಡನೆ ಗೊಣಗುತ್ತಾ
ಕಣ್ ಮಿಟುಕಿಸದೆ ಕಾದಿಹಳು....

ಮಿಟುಕಾಡುವ ಮೀನಕಂಡು
ತನ್ನ ಕೈಜೋಡಿಸುತ್ತಾಳೆ ,
ಬಲಾಢ್ಯ ಮೀನುಗಾರನೊಡನೆ,
ಬಲೆಗೆ ಸಿಲುಕಿದ ಮೀನ ಆಯ್ದು
ತುಂಬಿಸಲು ಬುಟ್ಟಿಯನ್ನು,

ತಲೆ ಮೇಲೆ ಬುಟ್ಟಿ ಹೊತ್ತಾಕೆ,
ಒಂದೇ ನೇರನಡಿಗೆ
ಒಡೆಯರ ಮನೆಯಂಗಳಕೆ,
ಹೋಯ್ ಎಂದವಳ ,
ಹಸಿವ ದನಿ ಕೇಳಿ,
ಬಾಳೆ ಚೊಳಕೆಯಲ್ಮೂರು
ನೀರ್ದೋಸೆ ಮೇಲೆ ಜೋನಿಬೆಲ್ಲ
ತಂದಿಟ್ಟ ಅಮ್ಮಾವ್ರು
ಹೋಗಿ ನಿಂತದ್ದು ಗೌರಿಯ
ಮೀನು ಬುಟ್ಟಿಯ ಮುಂದೆ,

ಹೊನ್ನನ ಮಗಳ ಲವ್ ಸ್ಟೋರಿ
ಗುಸುಗುಟ್ಟುತ್ತಾ, ನಮ್ಗ್ಯಾಕೆ ಅಮ್ಮೋರೆ ?
ಕಂಡೋರ ಮನೆ ಸುದ್ದಿ?
ಕಾಣೆ ಮೀನ್ ತಂದಿದ್ದೆ ಗೌಲಿಲ್ಲ,
ಒಡಿದೀರ್ಗಂದೆ ತಂದದ್ದು,
ತೆಗೆದಾಕಿದಳು ಮಡಿಕೆಗೆ.

ಹಾದಿಯಲಿ ಎದುರಾಗೋ ಬೀರ, ಕಮಲಿ
ನೂರಕ್ಕಾರು ಮೀನು ಕೇಳಿದೊಡನೆ,
ಪ್ಯಾಟೀಲಿ ಸಿಕ್ರೆ ನಂಗೈನೂರರದ್ದು ತಂದ್ಕೊಡು!!
ಮುಖ ಸಿಡಿಸಿ ಒಂದು ಫರ್ಲಾಂಗ್
ನಡೆದಾಕೆ , ಹಿಂತಿರುಗಿ ಕೇಳುವಳು
ಕೊಳ್ಳುವೆಯಾ ಒಂದೆಚ್ಕೊಟ್ರೆ?

ಒಡೆಯನಿಂದಿಡಿದು ಫಕೀರನ
ಚೌಕಾಶಿ ದಿನಂಪ್ರತಿ.
ಊರೂರ ಸುತ್ತಿ ,
ಕಡಲ ಕುಡಿಗಳ ಮೀನು ಚಪಲ
ತೀರಿಸುವಾಕೆ
ಸಿರಿವಂತೆ ಗೌರಿ

ಚಿತ್ರ : ಸೌಮ್ಯ ಭಾಗವತ್‌

ದೇವರಾಜ್ ನಾಯಕ

ಕವಿ ದೇವರಾಜ್ ನಾಯಕ ಅವರು ಮೂಲತಃ ಕರಾವಳಿಯ ಅಂಕೊಲಾ ತಾಲೂಕಿನವರು. ಬೆಂಗಳೂರಿನ ಪಿ.ಇ.ಎಸ್  ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ ಪದವಿ ಪಡೆದು ಪ್ರಸ್ತುತ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಣೆ. ಇವರ ಅನೇಕ ಕವನಗಳು ಕನ್ನಡ ದಿನಪತ್ರಿಕೆ ಮತ್ತು ಅಂತರ್ಜಾಲ ತಾಣದಲ್ಲಿ ಪ್ರಕಟಗೊಂಡಿವೆ. ಬುಕ್ ಬ್ರಹ್ಮ ನಡೆಸಿದ ಆಗಸ್ಟ್(2020) ತಿಂಗಳ ' ಜನ ಮೆಚ್ಚಿದ ಕವಿತೆ' ಪ್ರಶಸ್ತಿಗೆ ಭಾಜನರಾಗಿದ್ದಾರೆ.

More About Author