Poem

ಸ್ಮಶಾನದಲಿ ಹೇಳಿದ ನಗ್ನಸತ್ಯ

ಬಾ,
ಸ್ಮಶಾನದ ಅಂಗಳದ ತುಂಬಾ ಆಟಿಕೆ
ಹರಿವಿಕೊಂಡು ಮನಬಿಚ್ಚಿ ಆಡೋಣ
ಅಂಜಿಕೆಬೇಡ...!
ಧಹಿಸುತ್ತಿದ್ದವರು,ದಫನ್ ಆದವರು
ಬಿಳಿಬಟ್ಟೆ ಸುತ್ತಿಕೊಂಡು ಧಹಿಸಲು
ಸರಧಿಯಲಿ ಮಲಗಿದವರು,
ಕಂಪೌಂಡಿನ ಆಚೆ ಆಂಬ್ಯುಲೆನ್ಸ್ ನಲಿ
ಬರುತ್ತಿರುವವರು ಹೀಗೆ....
ಎಲ್ಲರೂ ನಮ್ಮವರೇ
ಉಸಿರು ನಿಲ್ಲಿಸಿ ಶವವಾಗಿದ್ದಾರಷ್ಟೇ

ನಿನ್ನೆವರಿಗೂ ರಕ್ತಸಂಚಲನ ಉಕ್ಕುವಷ್ಟಿತ್ತು
ಇವತ್ತು ಯಾರೋ ದ್ರೋಹಿಗಳೆಂದು
ವ್ಯಾಘ್ರದನಿಯಲಿ ಬೊಟ್ಟು
ಮುಂದೆ ಮಾಡಿ ತೋರಿಸುತ್ತಿದ್ದರು
ಉಳಿದ ನಾಲ್ಕು ಬೆರಳು ಅವರತ್ತಲೇ
ಇದ್ದವು...!!
ಉಕ್ಕುತ್ತಿದ್ದ ರಕ್ತ ನಾಲಿಗೆಯನು ಹತ್ತಿಕ್ಕಿಸಿ
ಮೂಲೆಯನು ಸೇರುವಂತೆ ಮಾಡಿತು
ಬಿತ್ತರಗೊಂಡ ಟಿವಿಯಲೂ ಅವರೇ
ಕಾಣುತ್ತಿದ್ದರು

ಬಿಸಿಲು ಇರಿದು ನರಳುವ ಟಾರಿನ ರೋಡು
ಮುಗಿಲಿಗೆ ಮುತ್ತಿಸುವ ಕಾಂಕ್ರೆಟ್ ಗಿಡಗಳು
ದಾರಿಹೋಕರಿಲ್ಲದಿದ್ದರೂ
ದಾರಿ ತೋರುವ ಫಲಕಗಳು
ಅತ್ತಿಂದಿತ್ತ ಅತ್ಯುತ್ಸಾಹದಿಂದ
ಮಣ್ಣು ಅಗೆಯಲು ಹೊರಟ
ರಾಕ್ಷಸಪ್ರವೃತ್ತಿಯ ಬೋಲ್ಡಜರ್ ಗಳು
ಆಧಾರಸ್ತ0ಭ ಇಲ್ಲದ,
ಬಾಗಿಲು ಮುಚ್ಚಿದ ಮನೆಯಿಂದ
ನುಸುಳುತ್ತಾ ಹೊರ ಬಂದು ಬಿಕ್ಕುವ ದನಿ
ಜೊತೆಗಾರ ಬರುವದನ್ನು ಕಾಯುತ್ತಾ
ಕುಳಿತ ಬೆಂಚುಗಲ್ಲಿನ ಕುರ್ಚಿಗಳು
ಕೊಳೆತು ನಾರುವ ಬೀದಿಬದಿಯಲಿ
ಬಾಡಿ ಬಿದ್ದ ಬಿಳಿಹೂವುಗಳು
ಕಾಲು ಮುರಿದು ಉಸಿರು ನಿಲ್ಲಿಸಿದ
ಆಕ್ಸಿಜನ್ ಹೊತ್ತ ಗಾಡಿಗಳು
ಅಲ್ಲಿ ಯಾರೋ ಹೂಮಾಲೆಗಳನ್ನು
ಚೋಟುದ್ದ ಸೂಜಿಯಲಿ
ಪೋಣಿಸುತ್ತಾ ಕುಳಿತವರು ಮುಂದೆ
ದಾಖಲೆ ಬೇಡಿಕೆ....!
ಶಿಸ್ತಿನ ಸಿಪಾಯಿಗಳಂತೆ ಸಾಲುಗಟ್ಟಿ ಮಸಣದತ್ತ
ಮಣ್ಣು ಹೊತ್ತೊಯ್ಯುವ ಇರುವೆಗಳು

ಭಕ್ತರು ಬರದಿದ್ದರೂ,
ಬಾಗಿಲಲಿ ನಿಂತು ದಾರಿ ಕಾಯುವ ದೇವರುಗಳು
ತರಕಾರಿ ತರಲು ಕೈಚೀಲ ಹಿಡಿದು
ಹೊರಟರೂ ನರಕದ ಕಡೆ ಹೊರಟಂತೆ
ಒಮ್ಮತವಾಗುವ ಭಯ...!

ಆ ರಸ್ತೆಯಲ್ಲಿ ಹೋಗುವದು ಬೇಡವೇ ಬೇಡ

ಇಲ್ಲಿ ಒಬ್ಬರಿಗೊಬ್ಬರು ಹೆಗಲಾದವರು,
ಪರಿಚಯವೇ ಇಲ್ಲದೆ ಬಿಳ್ಕೊಡಲು
ಬಂದವರು,
ಸಾಮೂಹಿಕವಾಗಿ ರೋಧಿಸಿದವರು
ಯಾರೋ ಮಾಡಿದ ತಪ್ಪಿಗೆ ಶವವಾದವರು
ಹೀಗೆ ....
ನಮ್ಮವರೆನ್ನಲು ಹಲವರಿದ್ದಾರೆ

ರಾಯಸಾಬ ಎನ್ ದರ್ಗಾದವರ

ರಾಯಸಾಬ ಎನ್ ದರ್ಗಾದವರ ಅವರು ಮೂಲತಃ ಹುಬ್ಬಳ್ಳಿ ತಾಲೂಕಿನ ಕಟ್ನೂರು ಗ್ರಾಮದವರು. ವೃತ್ತಿಯಿಂದ ಹುಬ್ಬಳ್ಳಿ ಶಹರದ ಪೊಲೀಸ್ ಸಶಸ್ತ್ರ ಮೀಸಲು ಪಡೆಯ ಪೇದೆಯಾಗಿ 2012 ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಹುಬ್ಬಳ್ಳಿ ನೆಹರು ಕಾಲೇಜಿನಿಂದ ಪದವೀಧರರು. ಕತೆ, ಕವಿತೆ ಬರೆಯುವ ಮೂಲಕ ಸಾಹಿತ್ಯಿಕವಾಗಿ ತಮ್ಮನ್ನುಗುರುತಿಸಿಕೊಂಡಿದ್ದಾರೆ. ದಿನಪತ್ರಿಕೆ, ವೆಬ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ಅವರ ಕವಿತೆಗಳು "ಕಾವ್ಯದ ಹುಳು"ತಂಡದವರು ನಡೆಸಿಕೊಡುವ 'ಚಿತ್ರ ನೋಡಿ ಕವಿತೆ ಬರೆಯಿರಿ' ಸ್ಪರ್ಧೆಯಲ್ಲಿ ದ್ವಿತೀಯ ಮತ್ತು ಕನ್ನಡ ಕಲರವ ಮತ್ತು ಅವ್ವ ಪುಸ್ತಕಾಲಯದವರು ನಡೆಸಿದ ಕಾವ್ಯ ಸ್ಪರ್ಧೆಯಲ್ಲಿ ಟಾಪ್ 5 ಸರಣಿಯಲ್ಲಿ ಬಹುಮಾನ ಪಡೆದಿವೆ.

More About Author