Poem

ತುಂಬು ಬಸಿರಿಗೂ ಬಂಜೆತನ ಬಂದಂತಿದೆ

ಒಲುಮೆಯ ಅಕ್ಷಯಪಾತ್ರೆಗೆ ಪ್ರೀತಿಯ ಬರಬಂದಿದೆ
ಸಾಗರದ ಅಲೆಗೂ ಒಂಟಿತನ ಕಾಡಿದೆ
ಶುರುವೇ ಆಗದಂತ ಕಥೆಗೆ ಪೂರ್ಣವಿರಾಮ ಬಿದ್ದಂತಿದೆ
ಕಚಗುಳಿ ಇಟ್ಟ ಕೈಗಳೇಕೋ ಮರಗಟ್ಟಿದಂತಾಗಿದೆ

ಕಾರಣವೇ ಇಲ್ಲದೇ ನಿರ್ಗಮಿಸಿದ್ದಕ್ಕೆ ಕಾರಣ ಬೇಕಿದೆ
ಮತ್ತೆ ಮತ್ತೆ ಮರುಕಳಿಸುವ ನೆನಪಿಗೆ ಮರೆವಾಗಬೇಕಿದೆ
ಕಣ್ಣ ಮುಂದಿನ ಕನಸುಗಳಿಗೆ ಜೊಂಪು ಬಂದಂತಿದೆ
ತಿರುಗಿ ಬರುವೆ ಎಂಬ ಭ್ರಮೆ ಜೋರಾಗಿದೆ

ಅಳಿದು ಉಳಿದ ನೆನಪುಗಳ ಮೂಟೆ ಕಟ್ಟುತ್ತಿದ್ದೇನೆ
ಕೈಗಳೇಕೋ ಶಕ್ತಿ ಇಲ್ಲದೇ ಕುಸಿಯುತ್ತಿವೆ
ಭಾರವಾದ ಮೂಟೆಯನ್ನೇನೋ ಹೊತ್ತುಬಿಡುವೆ
ನೀನೇ ತುಂಬಿರುವ ಹೃದಯದ ಕಥೆಯೇ ಕಷ್ಟವಾಗಿದೆ

ನೀ ಬಿಟ್ಟು ಹೋದ ಕಾರಣಕ್ಕೋ ಏನೋ
ತುಂಬು ಬಸಿರಿಗೂ ಬಂಜೆತನ ಆವರಿಸಿದೆ
ನನ್ನ ಸ್ಥಿತಿಯ ನಾನೇ ನೆನೆದು ಕರುಣೆ ಉಕ್ಕಿದಂತಿದೆ
ಕಣ್ಣೀರ ಕಡಲಿಗೂ ಕೊನೆ ಮೊದಲು ಬೇಕಿದೆ

ಪ್ರಣಿತ ತಿಮ್ಮಪ್ಪ ಗೌಡ

ಲೇಖಕಿ ಪ್ರಣಿತ ತಿಮ್ಮಪ್ಪ ಗೌಡ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದವರು. ಕನ್ನಡದಲ್ಲಿ ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವೀಧರರು. ಭರತನಾಟ್ಯದಲ್ಲಿ ಸೀನಿಯರ್ ಹಂತವನ್ನು ಪೂರ್ಣಗೊಳಿಸಿದ್ದಾರೆ. ಓದುವ ಹವ್ಯಾಸದೊಂದಿಗೆ ಇನ್ನೂರಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿರುವ ಇವರು 100 ಕ್ಕೂ ಹೆಚ್ಚು ಪ್ರಾಜೆಕ್ಟ್ ಗಳಿಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ದ್ವಿತೀಯ ಪಿ.ಯು.ಸಿ ಯಲ್ಲಿ ತಾಲೂಕಿನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಕ್ಕಾಗಿ ಕರ್ನಾಟಕ ಸರ್ಕಾರವು ಕನ್ನಡ ಮಾಧ್ಯಮ ಪ್ರಶಸ್ತಿ  ಹಾಗೂ ಜ್ಞಾನ ಮಂದಾರ ಟ್ರಸ್ಟ್ ‘ಜ್ಞಾನಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇವರ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 

More About Author