Poem

ವಕ್ರೀಭವನ

 

ಮನೆಯಲ್ಲಿದ್ದುದು ಒಂದೇ ಕನ್ನಡಿ
ಪರಿಷೆಯಲಿ ತಂದದ್ದು
ಬೆಲ್ಜಿಯಮ್‌ ಗಾಜು ಬೀಟೆ ಮರದ ಫ್ರೇಮು, ಗದೆ ಭಾರ
ದೇವರಗೂಡಿನ ಮಗ್ಗುಲಿಗೇ ಈ ದರ್ಪಣದ ಸ್ಥಾವರ
ಈಬತ್ತಿ ಎಳೆಯುವವರು, ಗಂಧದ ಬೊಟ್ಟಿಕ್ಕುವವರು
ಕಂಚಿಕುಂಕುಮ ಸರಿ ಮಾಡಿಕೊಳ್ಳುವವರು
ಎಲ್ಲರೂ ಅಲ್ಲೇ, ಅದು ಇದ್ದಲ್ಲೇ, ಎಟುಗದಿದ್ದರೂ
ಮೆಟ್ಟಿಲುಗಾಲೇರಿಸಿ
ಸಕುಟುಂಬ ಸಪರಿವಾರ ಬಳಕೆ ; ಲಗತ್ತು ಸ್ಥಿರ ಎಚ್ಚರಿಕೆ
‘ಕೈಯಲ್ಲಿ ಹಿಡಿಯಬ್ಯಾಡ್ರೇ, ಗೋಡೆ ಮೇಲಿದ್ದಂಗೇ ನೋಡಿಕೊಳ್ರೇ’
ನಾವು ಅಕ್ಕ ತಂಗೇರು ಕದ್ದು ಮುಚ್ಚಿ
ಅಮ್ಮನಿಲ್ಲದ ಹೊತ್ತು ಮೊಳೆಯಿಂದ ಇಳಿಸಿ
ನಡುಮನೇ ಬೆಳಕಿಗೆ ಹುಷಾರಾಗಿ ಸಾಗಿಸಿ
ಒಬ್ಬರಾದ ಮೇಲೊಬ್ಬರು ನೋಡಿಕೊಂಡು.....
ಇದ್ದುದ್ದ ಇದ್ದಂಗೇ ತೋರಿಸುತ್ತಿತ್ತು
ದಪ್ಪಗಿದ್ದರೆ ದಪ್ಪಗೆ ಕಪ್ಪಗಿದ್ದರೆ ಕಪ್ಪಗೆ
ಮೂಗಿನ ಹೊರಳೆ ಎತ್ತಿದ್ದವಳಿಗೆ ಎತ್ತಿ
ಎಸೂಳ ಮೂಗನ್ನು ಎಸೂಳಾಗೇ ಇರಿಸಿ

2
ಹಾಸ್ಟೆಲ್ಲಿನಲ್ಲಿ ಎಷ್ಟೊಂದು ಕನ್ನಡಿಗಳೆಂದರೆ
ಬಾಗಿಲಿಗೊಂದು, ಕದಕ್ಕೊಂದು,
ಟ್ರಂಕೊಳಗೊಂದು, ವ್ಯಾನಿಟಿ ಜಿಪ್ಪಿಗೊಂದು
ಒಂದೇ ರೂಮಲ್ಲಿ ಕಿಕ್ಕಿರಿದಂತೆ
ಹನ್ನೆರಡು ತುಪ್ಪೇರದ ದರ್ಪಣ
ತಿಪಟೂರಿನ ಕೊಬ್ಬರಿ ಮಂಡೀ ಹುಡುಗಿ
ಒಂದು ಮಗ್ಗುಲು ಕಿಟಕಿಯನ್ನೇ ಮುಚ್ಚಿಬಿಟ್ಟಿದ್ದಳು
ಮೂರೂವರೆ ಅಡಿಯ ಅರೆನಿಲುವುಗನ್ನಡಿ ತೂಗಿ
ಮಲೆಯಾಳಿಯದು ಐದು ಮೂಲೆಯ ಆಯನ
ಮೇಲೊಂದು ಮಾಯಾ ಮುಚ್ಚಳ ಬೇರೆ
ವಿಜಯವಾಡದ ಕನ್ನಡಿಯ ಸುತ್ತ
ಪರ್ಪಸ್ಸೇ ಮರೆಸುವಂತ ಕುಸುರಿಗೆಲಸ
ನಾವುಗಳು ನಂಮ್ಮೆತ್ತರಕ್ಕನುಕೂಲವಾದ ಕಡೆ
ಅವಳಿಗಿಂತ ಇವಳಿಗಿಂತ ನಾನೇ ಚೆಂದ ಎನಿಸುವೆಡೆ
ಬ್ಯಾಕ್‌ಬಟನ್ನಿನ ಹುಕ್ಕು ಭದ್ರವೇ
‘ಬಿ’ಪಟ್ಟಿ ಹದ್ದುಬಸ್ತಿನೊಳಗಿದೆಯೇ
ಇತ್ಯಾದಿ.....,
ಭೂಗೋಳಿಕ ವಿವರಗಳ ತಪಶೀಲಾದ ಮೇಲೆ
ಹಗೂರ ಪ್ಲಾಸ್ಟಿಕ್ಕಿನ ಕಟ್ಟಿನಲ್ಲಿ ಹುದುಗಿದ್ದ
ಹ್ಯಾಂಡ್‌ ಮಿರರ್‍ರಿನಲಿ
ಮುಖಚರಿತ್ರೆ

3

ಕೆಲಸ್ಕಕೆ ಸೇರಿದೆ ; ಎಪ್ಪತ್ತರ ದಶಕದ ಕೊನೆಯರ್ಧ
ರಿಪೋರ್ಟಾದ ದಿನವೇ ಸಾಹೇಬರು ಆದೇಶಿಸಿದರು
‘ಎಮರ್ಜೆನ್ಸಿ ಜಾರಿಯಲ್ಲಿದೆ ಗೊತ್ತೇನ್ರೀ
ಕಾಲಕ್ಕೆ ಸರಿಯಾಗಿ ಡ್ಯೂಟಿಗೆ ಬರ್ರಿ
ಹೊತ್ತು ಪಕ್ಕಾದ ಮೇಲೇ ಕಛೇರಿ ಬಿಡ್ರಿ’
ಮೊಟ್ಟಮೊದಲ ಸಂಬಳದಲ್ಲೊಂದು ಸ್ವಂತ ಕನ್ನಡಿ ಕೊಂಡಿದ್ದೆ
ಬಸ್ಸು ಹತ್ತಿ ಇಳಿದು
ಮುಂದಿನದು ಬಂದೀತೋ ಇಲ್ಲವೋ
ಸದಾ ಭಯದಲ್ಲೇ ಕಾಯ್ದು ಕಾಯ್ದು ಕಾಯ್ದು,
ತುಥ್‌ ಇದರವ್ವನ....
ಕನ್ನಡಿಯ ಸದುಪಯೋಗವಿರಲಿ
ದುರುಪಯೋಗವೂ ಆಗಲಿಲ್ಲ ಕಣ್ರೀ

4
ಅತ್ತೆಯಿಲ್ಲದ ಅತ್ತೆ ಮನೆ ಸೇರಿದೆ
ಪಡಸಾಲೆಯಲ್ಲಿ ನರಸಿಂಹದೇವರು ಏಕಕಾಲಕ್ಕೆರಡು ಸಲ
ಉದ್ಭವಿಸಬಹುದಾದ ದೊಡ್ಡ ಅಲಮಾರು
ಅದಕ್ಕಂಟಿಸಿದ್ದ ಆಳೆತ್ತರದ ಕನ್ನಡಿ
ಇತ್ತ ಬಂದರೆ ಅತ್ತ ಹೋದರೆ ಅನಾಮತ್ತಾಗಿ
ಚಲನವಲನಗಳ ಮಹಜರು
ನಿಯಮನುಸಾರ ಈ ಸಪಾಟು ಮಸೂರ
ಅಡುಗೆ ಮನೆಯಲ್ಲಿದ್ದರೂ ಬಿಂಬಿಸುತ್ತಿತ್ತು
ನನ್ನನ್ನು ಇಡೀ ಮನೆಗೆ
ಈ ಮುಂಡೇದನ್ನ ಕಳಚಿಬಿಡೋಣವೆಂದು
ಸ್ಕೂೃಗಳನ್ನೊಂದೊಂದೇ ಸಡಿಲಿಸುತ್ತ ಬಂದೆ
ಅಷ್ಟೊತ್ತಿಗೆ ಬಸುರಿ
ಬಾಣಂತಿ ಕೋಣೆಗೆ ಕನ್ನಡಿ ನಿಷಿದ್ಧ
ಒಂದು ದಿನ ಯಾವುದೋ ಮಾಸ್‌ ಕ್ಯಾಂಪಲ್ಲಿ
ಯಶಸ್ವಿ ಸಂತಾನಹರಣ ಶಸ್ತ್ರಚಿಕಿತ್ಸೆ

5

ಹೊಸಮನೆಯಲ್ಲಿ
ರೂಮಿನ ಅಳತೆ ಮೊದಲೇ ಅಳೆದು
ಕ್ಯೂಟಾಗಿಯೂ ಟಫ್‌ ಆಗಿಯೂ, ನೈಸಾಗಿಯೂ ಇರುವ
ಡ್ರೆಸ್ಸಿಂಗ್‌ ಟೇಬಲ್‌ ತಂದಿರಿಸಲಾಗಿದೆ
ಮುಂದೊಂದು ಕುಂಡೆಯೂರಲು ಗಿಡ್ಡಮಣೆ
ಅಂಗರಾಗಗಳಿಗೆಲ್ಲ ಕ್ರಮಾನುಸಾರಿ ಮುಚ್ಚುಖಾನೆ
ಕೂತಂತೆಯೇ ಎಲ್ಲ ಪಾರ್ಶ್ವಗಳೂ ತೆರೆದು
ವದನಾರವಿಂದಕ್ಕೇ ಸೀದಾ ಬೆಳಕುಬಿದ್ದು
ವಾಹ್‌!.... ಅದ್ಭುತ
ಕೆಲಸ ಮುಗಿಸಿ ಬಂದು ನಿಲ್ಲುತ್ತೇನೆ
ಅದರ ಮುಚ್ಚಳ, ಅದರ ಬಿರಡೆ, ಅದರ ತಲೆ ಇದರ
ಕಾಲು,
ಸ್ಟಿಕ್ಕು, ಪಿನ್ನು, ಬ್ಯಾಂಡು, ಕ್ಲಿಪ್ಪು .... ಸಂತೆ ಗೋಜಲು
ಈಡಾಡಿರುವುದನ್ನೆಲ್ಲ ಒಕ್ಕಲೂಡಿ
ಒರಸು ಸಿಗದಿದ್ದರೆ ಸೆರಗಲ್ಲೇ ಗಾಜಿನ ಧೂಳೊರೆಸಿ
ಆ ನಡುವೆ ಮುಖ ಕಂಡರೆ
ನಂದೇನಾ ಎಂದುಕೊಳ್ಳುತ್ತ.....,

6

ಅಕ್ಕಾ ಕೇಳೇ, ನಾನೆಷ್ಟೊಂದು ಕನ್ನಡಿ ಕಂಡೆ

ವಿಡಿಯೋ

ಲಲಿತಾ ಸಿದ್ದಬಸವಯ್ಯ

ಕವಯತ್ರಿ ಲಲಿತಾ ಸಿದ್ದಬಸವಯ್ಯ ಅವರು  ಬಿ.ಎಸ್ಸಿ. ಪದವೀಧರೆ. 27-02-1955 ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಜನಿಸಿದರು. ತಂದೆ ಸಿದ್ದಲಿಂಗಯ್ಯ, ತಾಯಿ ಪುಟ್ಟಮ್ಮಣ್ಣಿ.

‘ಮೊದಲ ಸಿರಿ, ಇಹದ ಸ್ವರ, ಬಿಡಿಹರಳು (ಹನಿಗವನಗಳು), ಕಣ್ಣಿನೆಲ, ದಾರಿನೆಂಟ, ಇನ್ನೊಂದು ಸಭಾಪರ್ವ’ ಕವನ ಸಂಕಲನಗಳನ್ನು ಹೊರತಂದಿದ್ದಾರೆ.

‘ಮಿ. ಛತ್ರಪತಿ ಆನಘಟ್ಟ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಬಿ.ಎಂ.ಶ್ರೀ. ಕಾವ್ಯ ಪ್ರಶಸ್ತಿ, ಪುತಿನ ಕಾವ್ಯ ಪ್ರಶಸ್ತಿ, ಮಾಣಿಕಬಾಯಿ ಕಾವ್ಯ ಪ್ರಶಸ್ತಿ, ಕಾವ್ಯಾನಂದ ಮುಂಬೈ ಹೊರನಾಡು ಪ್ರಶಸ್ತಿ, ಅಂಜೂರ ಪ್ರತಿಷ್ಠಾನದ ರಾಜ್ಯ ಪ್ರಶಸ್ತಿ’ ಲಭಿಸಿವೆ. 

More About Author