Story

ಯೂಥನೇಶಿಯಾ ಕಾರ್ಪೊರೇಟ್ ಇತ್ಯಾದಿ...

ಲೇಖಕಿ ಜಯಶ್ರೀ ದೇಶಪಾಂಡೆ ಅವರು ಮೂಲತಃ ವಿಜಯಪುರದವರು. ಮನಃಶಾಸ್ತ್ರ ಹಾಗೂ ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವೀಧರರು. ದೇಶ ಸುತ್ತುವುದರ ಜೊತೆಗೆ ಅಲ್ಲಿಯ ಜನ, ಭಾಷೆ, ಆಹಾರ, ಸಂಸ್ಕೃತಿಯನ್ನು ತಮ್ಮ ಲೇಖನಗಳ ಮೂಲಕ ಪರಿಚಯಿಸುತ್ತಿದ್ದಾರೆ. ಪ್ರಸ್ತುತ ಅವರ `ಯೂಥನೇಶಿಯಾ ಕಾರ್ಪೊರೇಟ್ ಇತ್ಯಾದಿ...' ಕತೆ ನಿಮ್ಮ ಓದಿಗಾಗಿ...

" ಮೊದಲು ಇವರ ನೆಕ್ಸ ಸ್ ಮುರಿಯಬೇಕಿದೆ.. ಡರ್ಟಿ ಕಾನಡೀಸ್."

ಉದ್ದಕ್ಕೂ ಚಾಚಿಕೊಂಡ ಲೌoಜಿನ ಎಡಬಲದಲ್ಲಿ ಪಿಳಪಿಳಗುಟ್ಟುತ್ತಿದ್ದ ಕಂಪ್ಯೂಟರುಗಳ ಸಮುದ್ರವನ್ನು ದಾಟುತ್ತಿರುವಾಗ ಬಲಬದಿಯ ಫೈಬರ್ ಗ್ಲಾಸಿನ ಮುಚ್ಚಿದ ಬಾಗಿಲಿನ ಸಂದಿಯ ಗಾಳಿಯ ಜೊತೆಗೆ ಹೊರಬಂದು ಪುನೀತ್ ನ ಕಿವಿಗೆ ಬಿದ್ದಿದ್ದುವು ಸಾಗರಿಕಾಳ ದಪ್ಪದನಿಯ ಒರಟು ಭಾಷೆಯ ಶಬ್ಧಗಳು. ಹಿಂದು ಮುಂದಿನ ಯೋಚನೆ ಎಂದೂ ಮಾಡಿದವಳಲ್ಲ ಈ ಹೆಂಗಸು. ಮಾತಾಡುವ ಮೊದಲು ಅದಕ್ಕೊಂದು ಮರ್ಯಾದೆ ಇದೆ ಎನ್ನುವ ಕನಿಷ್ಠ ಜ್ಞಾನ ಸಹ ಇಲ್ಲದವರೆಲ್ಲ ದೊಡ್ಡ ದೊಡ್ಡ ಡಿಪಾರ್ಟ್ಮೆಂಟಿನ ಮುಖ್ಯಸ್ಥರಾಗಿ ಸ್ಥಾಪಿತರಾಗಿರುವುದು ಈ ಕಂಪನಿಯ ವೈಶಿಷ್ಟ್ಯ...ಎಲ್ಲಾ ಎಮ್ ಎನ್ಸಿಗಳ ಹೊಟ್ಟೆಗಳೊಳಗಿದ್ದು ಹೊರಬಿದ್ದೂ ಬೀಳದ ಕಹಿ ಗುಟ್ಟುಗಳ ಹಾಗೆ. ಬಾಹ್ಯ ಲೋಕಕ್ಕೆ ಗೋಚರವಾಗುವ ಇಲ್ಲಿನ ಬುದ್ಧಿಮತಿತ್ವದ ಒಳಾವರಣದ ಕಪ್ಪು ಲೇಪಗಳ ಹಾಗೆ. ಒಂದು ಪ್ಲಸ್ ಕೋಟಿ ಜನ ಜಿಜಿಗಿಜಿಗುಡುವ ರಾಜಧಾನಿ ಕೊಟ್ಟು ಕರೆದು ಇಟ್ಟುಕೊಂಡ ಮೆದುಳುಗಳ ತಾಂತ್ರಿಕ ಸರ್ಕಸ್ಸಿನ ತರಂಗಗಳೊಳಗಿನ ವೈಯುಕ್ತಿಕ ಭ್ರಮೆಗಳು.

ತಲೆ ಕೆಟ್ಟು ಹೋಯಿತು...ಹೆಚ್ಚು ಗಮನಿಸದೆ ಸರ ಸರ ಮುಂದೆ ನಡೆದಾಗ ಹಿಂದಿಂದ ಪರೇಶ್ ಚಟವಾಲ್ ಕರೆದಿದ್ದ. ''ಹೇಯ್ ಪ್ರಿನ್ಸ್..ಯಾಕೋ ಅಷ್ಟು ಜೋರಾಗಿ ಓಡ್ತೀ..ಒಲಿಂಪಿಕ್ಸ್ ಸೇರಿ ಅಲ್ಲೇನಾದ್ರೂ ರನ್ನಿಂಗ್ ರೇಸಿನಲ್ಲಿ ಬಿದ್ದು ಬರುವ ಇರಾದೆಯೋ...'' ಪುನೀತ್ ಗೆ ಈ ಹೆಸರಿಟ್ಟವನವನೇ! ವಯಸ್ಸು ಒಂದೇ, ಕೂತುಕೊಳ್ಳೋದೂ ಒಂದೇ ಸೆಕ್ಷನ್ನಿನ ಅಕ್ಕ ಪಕ್ಕದ ಕ್ಯಾಬಿನ್, ಸಲಿಗೆ ಸಹಜದ್ದು.

''ವೆರಿ ಫನ್ನಿ, ಬೀಳೋದೆಲ್ಲ ನೀನು ನೋಡಿಕೋ..ಹಿಡಿಂಬಿ ಮಾತಾಡಿದ್ದು ಕೇಳಿದೆಯಾ?''

ಪುನೀತ ನಕ್ಕ, ವ್ಯಂಗ್ಯ ಹಾಸಿಕೊಂಡ ನಗು. ಹಿಡಿಂಬಿ ಇನ್ನಾರೂ ಅಲ್ಲ, ಇದೇ ಸಾಗರಿಕಾ! ಇಡೀ ಸೆಕ್ಷನ್ನೇ ಒಂದಾಗಿ ರಾಮಾಯಣ ಮಹಾಭಾರತ ತಡಕಾಡಿ ಕಿತ್ತು ತೆಗೆದು ಅವಳಿಗೆ ಹಚ್ಚಿದ್ದ ಕೊಂಕಿನ ನಾಮಧೇಯ ಹಿಡಿಂಬಿ... ಎಮ್ಮೆನ್ಸಿಯಾದರೇನು ಸಮಾನಾಂತರ ರೇಖೆಗಳಿಗಿಲ್ಲಿ ಜಾಗ ಇಲ್ಲ ಅನ್ನುವ ಸಿದ್ಧಾಂತಕ್ಕೆ ಸಾಗರಿಯೇ ನಿದರ್ಶನ. ಮನುಷ್ಯರನ್ನು ಮನುಷ್ಯರಾಗಿ ಟ್ರೀಟ್ ಮಾಡದ ಅವಳ ಬುದ್ಧಿಗೊಂದು ಬಹುಮಾನ ಬೇಡವೇ?

''ಯಾರ ಮುಂದೆ ನಡೆದಿತ್ತು ಈ ರಗಳೆ?'' ಪರೇಶನಂದ,

''ಸಿಬಿಲ್ ..'' ಇವನೆಂದ.

''ಆ.. ಅಲ್ಲಿದೆ ನೋಡು ಒಳಮರ್ಮ.'' ಪರೇಶ್ ಹಾಕುವ ಲೆಕ್ಕಾಚಾರಗಳು ಇವನಿಗೆಷ್ಟೋ ಬಾರಿ ಅರ್ಥವಾಗಲ್ಲ. ಅವೆರಡೂ ಕಂತೆಗೆ ತಕ್ಕ ಬೊಂತೆ ಅನ್ನೋದು ಗೊತ್ತಿಲ್ವೆ..ಇದು ಮಾತಾಡಿದ್ದಕ್ಕೆ ಆ ಹುಚ್ಚು ಸಿಬಿಲಿ ಭೋ ಪರಾಕ್ ಎಂದು ತಾಳ ತಟ್ಟಿರಬೇಕು, ಬಿಟ್ಬಿಡು.

ಕೆಲವರಿಗೆ ಬದುಕನ್ನು ಇಡಿಯಾಗಿ ಒಂದೇ ಗುಕ್ಕಿನಲ್ಲಿ ಇನ್ನಿಲ್ಲದಂತೆ ಬದುಕಿಬಿಡುವ ಹುಮ್ಮಸ್ಸು. ಸಿಬಿಲ್ ಮೊಹಾಂತಿ ಇಂಥ ಪಂಗಡಕ್ಕೆ ಸೇರುವ ಇಡೀ ಸೆಕ್ಷನ್ನಿನ ಗಾಸಿಪ್ ಚಾನಲ್, ವಿಚಿತ್ರ ಮುಗ್ಧತೆ ಸೂಸುವ ಆ ಕಣ್ಣುಗಳಲ್ಲಿ ಎಲ್ಲರಿಗೂ ಸುಲಭವಾಗಿ ಅರ್ಥವಾಗದ್ದೇನೋ ಇದೆ. ಅವಳಿಗೆ ತಿಳಿಯದಿದ್ದ ಸುದ್ದಿಗಳು ಪ್ರಪಂಚದಲ್ಲ್ಲೇ ಇಲ್ಲ. ಅವಳ ಮನೆಗೂ ಸಾಗರಿಕಾ ಮನೆಗೂ ನಡುವೆ ಇದ್ದ ಒಂದೇ ಒಂದು ತೆಳು ಗೋಡೆಗೆ ಬಹಳಷ್ಟನ್ನು ಗುಟ್ಟು ಬಿಟ್ಟು ಕೊಡುವ ಸಾಮರ್ಥ್ಯವಿದೆ. ಸಾಗರಿಕಾಗೂ ಅವಳ ಗಂಡ ನಿಶಾಂತ್ ಬ್ಯಾನರ್ಜಿಗೂ ಈ ಮೊದಲು ನಡೆದ, ಇನ್ಮೇಲೆ ನಡೆಯಬಹುದಾದ ರಕ್ಕಸ ಜಗಳಗಳೆಲ್ಲದರ ದು:ಖವನ್ನು ಇವಳೆದುರು ತೋಡಿಕೊಳ್ಳುವ ಹಂಬಲ ಸಾಗರಿಗೆ. ನಿಶಾಂತ್ ಗೆ ಅದೇ ಮನೆಗಳ ಗುಂಪಿನ ಮೂರನೆಯ ಬಿಲ್ಡಿಂಗಿನ ರಶ್ಮಿ ಸಿಂಗಾಡಾಳ ಜೊತೆ ಏನೋ ಲಿಂಕ್ ಇದೆ ಅನ್ನುವ ಸಂಕಟವನ್ನು ತನ್ನಿಂದ ಮುಚ್ಚಿಟ್ಟಿಲ್ಲ , ಇಂಥ ಕೆಲವು ಹೊರಬೀಳಬಾರದ ಸಂಗತಿಗಳು ಸಿಬಿಲ್ ಅಂತರಂಗದಿಂದ ಕಳಚಿಕೊಂಡು ಒಮ್ಮೊಮ್ಮೆ ಇಲ್ಲಿ- ಅಕಸ್ಮಾತ್ ಆದರೂ ಬಹಿರಂಗ ಆಗುವುದಿತ್ತು. ಹೆಣ್ಮಕ್ಕಳ ಬಾಯಲ್ಲಿ ಗುಟ್ಟು ನಿಲ್ಲಬಾರದು ಎಂದು ಶಾಪ ಕೊಟ್ಟಿಲ್ಲವೇ ಧರ್ಮರಾಜ ಅಂದೆಂದೋ ?

ಒರಿಯಾ ಮೂಲ ಸಿಬಿಲ್ಲಳದು, ಅದರಿಂದಾಗಿ ಪಕ್ಕದ ನೆಲದ ಬಂಗಾಲೀ ಭಾಷೆ ಸಹ ಅರ್ಥವಾಗುವುದೇನು ಕಷ್ಟವಿಲ್ಲ ಅನ್ನುತ್ತಾಳೆ. ಅವರಿಬ್ಬರೊಳಗೆ ಇರುವುದು ನಿಜವಾದ ಸ್ನೇಹವೋ ಇಲ್ಲ ದ್ವೇಷವೋ ಎರಡೂ ಅರ್ಥವಾಗದ ಹಲವಾರು ಸೆಕ್ಷನ್ನಿನವರು ಪ್ರಾಜೆಕ್ಟುಗಳು ಸುಸೂತ್ರವಾಗಿ ನಡೆಯುವುದು ಮುಖ್ಯ, ಇನ್ನುಳಿದದ್ದು ಹೆಂಗಳೆಯರ ಮಾಮೂಲಿ ಅಂತ ತೀರ್ಮಾನಿಸಿ ಎಲ್ಲ ಸುದ್ದಿಯ ಮಜಾ ತೊಗೊಳ್ಳುವುದನ್ನು ಮಾತ್ರ ಬಿಟ್ಟಿಲ್ಲ. ಆದರೂ ಅದು ಗೆಳೆತನವೇ ಹೌದು ಮತ್ತು ಅವರಿಬ್ಬರ ಸ್ನೇಹಕ್ಕೆ ಇನ್ನೂ ಹೆಚ್ಚಿನ ಅರ್ಥಗಳಿವೆ ಎನ್ನುವ ವಾಸನೆ ಮೂಸಿದವನು ಮೋಹನ್ ಪುಣೇಕರ್. ಕಾರ್ಪೊರೇಟ್ ಜಗತ್ತಿನ ಒಳಸುಳಿಗಳನ್ನರ್ಥ ಮಾಡಿಕೊಂಡವರು ಕಡಿಮೆ. ಒಂದೋ ಅಲ್ಲೇ ಈಜಿ ದಡ ಮುಟ್ಟುವ ಗಟ್ಟಿಗರಾಗಿರಬೇಕು ಇಲ್ಲ ಅರ್ಧದಲ್ಲೇ ಕೈಸೋತು ಮುಳುಗಬೇಕು. ಸಾಗರದಂತೆ ಆಳ ಅಗಲ ತೋರಿ ಹೊಳೆಯುವ ಇದರೊಡಲಿನ ಕಪ್ಪು ಇಳಿದ ಮೇಲಷ್ಟೇ ತಿಳಿಯುವುದು ಖರೆ. ಇಲ್ಲಿ ಮೋಹನ್ ದಡ ಮುಟ್ಟುವ ಮೊದಲ ಜಾತಿ.

ಲಂಚ್ ಅಥವಾ ಬ್ರೇಕ್ ಫಾಸ್ಟ್ ನ ವಿರಾಮ, ''ಯು ನೋ ವಾಟ್ ಹ್ಯಾಪೆಂಡ್ ಎಸ್ಟೆರ್ಡೇ'' ಗ್ರೀನ್ ಟೀ ಹೀರುತ್ತ ಸಿಬಿಲ್ ಸುರು ಮಾಡಿದರೆ ಒಂದು ಸ್ವಾರಸ್ಯಕರ ರೋಚಕ, ಅದೂ ತಮ್ಮದೇ ಆಫೀಸಿನ ಯಾರದೋ ಯಾರ ಜೊತೆಗೋ ನಡೆದ ವೀಕೆಂಡ್ ಸುದ್ದಿ ಎಂದರ್ಥ..ಪುಂಖಾನುಪುಂಖ ಸಮಾಚಾರಗಳು. ರೀಸರ್ಚ್ ಅಸಿಸ್ಟಂಟ್ ಸುಮನ್ ಕೌರ್ ಸುಮ್ಮನಿರದೆ ''ಹೀಗೆ ಗಾಸಿಪ್ ಮಾತಾಡ್ತಾ, ಒಟಗುಡ್ತಾ ನೂರು ವರ್ಷ ಬದುಕಿಬಿಡ್ತೀಯಾ ಸಿಬಿ ನೀನು? ತಡ್ಕೊಳ್ಳೋಕಾಗಲ್ಲವೇನು?''ಅಂದರೂ ಒಳಗೊಳಗೇ ಆ ಹರಟೆಗಳ ಸುಖಿಸಿದ ಗುಟ್ಟನ್ನು ಬಿಡಲಾರದವಳು.

''ನೂರಲ್ಲ ಸುಮ್ಸ್ ನೂರಾ ಇಪ್ಪತ್ತು ವರ್ಷ ಬದುಕ್ತೀನಿ ನಾನು..ನೀವೆಲ್ಲ ಮುಂದೆ ಹೋಗಿ ನನಗಾಗಿ ಕಾಯ್ರಿ..'' ಅಂದಾಳು. ಈ ಸಿಬಿಲ್ ಅಂದರೆ ಯಾವುದನ್ನೂ ಇಟ್ಟುಕೊಳ್ಳದೆ ಪ್ರತಿಯಾಗಿ ತಕ್ಷಣ ಕೊಟ್ಟೇಬಿಡುವ ಜಾತಿ..ಅದಮ್ಯ ಜೀವನೋತ್ಸಾಹಕ್ಕೆ ಅದೊಂದು ಪಕ್ಕಾ ಉದಾಹರಣೆ..ಬದುಕಿನ ಒಂದೊಂದು ಕ್ಷಣವೂ ಉಕ್ಕಿ ಹರಿದ ನದಿಯಂತೆ ಚಿಮ್ಮಿ ಆ ತನ್ನ ಬದುಕು ಕನಿಷ್ಠ ನೂರಿಪ್ಪತ್ತರದಿರಲಿ ಅನ್ನುವ ವಿಚಿತ್ರ ಹುಚ್ಚವಳಿಗೆ. ಯಾವುದೇ ಮಾಲ್ ನಲ್ಲಿ ಬಂದಿಳಿದ ಹೊಸ ವಿನ್ಯಾಸದ ಉಡುಪು, ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳಿಗೆ ಸಿಬಿಲ್ಲೇ ಮೊದಲ ಗಿರಾಕಿ. ಅವಳ ಪಗಾರ ಇಷ್ಟು ಖರೀದಿಯನ್ನು ಹೇಗೆ ಪೂರೈಸುತ್ತೆ ಅನ್ನುವ ಕುತೂಹಲ ಇವರಿಗೆ.

''ಕಮ್ಮಾನ್ ಪರೇಶ್ ಏನು ಹೇಳು..'' ಇವನಂದ. ಮತ್ತಷ್ಟು ನಕ್ಕ ಅವನು.

'' ನಿನ್ನ ದುಃಖ ಸಾಗರಿ ಮಾತಿನ ಬಗ್ಗೆ ತಾನೇ? ಹೊಸದೇನಿದೆ ಅದರಲ್ಲಿ ? ಮೊನ್ನೆ ಅಲ್ಲಿಗೆ ಹೋಗಿ ಬಂದಾಗಿನಿಂದ ಈ ಆಟಾಟೋಪ ದುಪ್ಪಟ್ಟಾಗಿದೆ ಅಷ್ಟೇ! ತುಂಬಾ ಹೆಚ್ಚು ಖುಷ್ ಮಾಡಿ ಬಂದಿರಬೇಕು ಟಾಮೀನ...''

ಚಟವಾಲ್ ಮಜಲು ಮಜಲಿನ ನಗೆ ನಕ್ಕ. ಅವನು ಸದಾ ಅದೇ ನಗು ನಗ್ತಾನೆ.. ತನ್ನ ಮಾತಿಗೆ ಯಾರು ಏನು ತಿಳೀಬಹುದು ಅನ್ನುವ ಯೋಚನೆ ಅವನಿಗಿಲ್ಲ..

''ಅಲ್ಲ, ನೆಕ್ಸಸ್ ಅಂತೆ ನಮ್ಮದು. ನಮ್ಮ ರಾಜ್ಯದಲ್ಲಿ ಕೂತು , ನಮ್ಮ ಅನ್ನ, ನಮ್ಮ ದುಡ್ಡು ತಿಂದವರಿವರು. ನಮ್ಮ ನೆಲ, ನಮ್ಮ ಭಾಷೆ, ನಮ್ಮ ಮೂಲದಲ್ಲಿ ತಾನು ಬಂದು ತಳ ಊರಿ ಪಾರ್ಥೇನಿಯಮ್ ಥರ ಹಬ್ಬಿಕೊಳ್ತಾ ಇರೋ ಇವರು ನಮ್ಮದನ್ನೂ ನೆಕ್ಸಸ್ ಅನ್ನುವ ಧೈರ್ಯ ಮಾಡ್ತಾರಲ್ಲ.. ''

''ಪುನೀತ್ ನಿಂದು ಬರೀ ಸಾತ್ವಿಕ ಆಕ್ರೋಶ ಕಣಮ್ಮ.. ಮತ್ತು ಇದೊಂದು ಎಮ್ಮೆನ್ಸಿ ಮರೆತೆಯಾ?'' ಪರೇಶ್ ಅವನ ಮೂಗಿನ ತುದಿಯಮೇಲೆ ತನ್ನ ತೋರುಬೆರಳೊತ್ತಿದ, ''ಒಂಟೆ ಮತ್ತು ಅರಬನ ಕತೆ ಗೊತ್ತಾ? ಇವರೆಲ್ಲ ಒಂಟೆಗಳು.. ನೀವು ಅರಬ್ಬರಾಗದೆ ಒಂಟೆಗೆ ಅದರ ಜಾಗ ತೋರಿಸಿ,'ಆಯ್ತು ನೀನಿಲ್ಲಿರು, ಹೊಟ್ಟೆಗೆಲ್ಲ ಖುಷಿಯಾಗಿರುವಷ್ಟು ತಿಂದುಕೊಂಡು ಮಜಾ ಮಾಡು. ಅದು ಬಿಟ್ಟು ನನ್ನ ಜಾಗಕ್ಕೆ ಕಣ್ಣಿಟ್ಟೆಯೋ ಮತ್ತೇನಿಲ್ಲ ಅಷ್ಟೇ' ಅನ್ನೋದನ್ನ ತೋರಿಸಿಕೊಡಬೇಕಿತ್ತು... ಇದನ್ನ ನೀವೆಲ್ಲ ಒಟ್ಟಾಗಿ ಮಾಡದಿದ್ರೆ ಇನ್ನೇನಾಗುತ್ತೆ? ದಿ ಅರಬ್ ಅಂಡ್ ದಿ ಕ್ಯಾಮಲ್ ಅಷ್ಟೇ ತಾನೇ ಹ..ಹಾ..ಹಾ ಅಲ್ಲ, ಮೊದ್ಲು ಅವಳು ಟಾಮೀನ ಮರಳು ಮಾಡಿ ಬುಟ್ಟಿಗೆ ಹಾಕ್ಕೊಂಡಿರೋದಕ್ಕೆ ಏನಾದ್ರೂ ಮಾಡಿ. ಆಗ ಅವಳದು ಅರ್ಧ ಸೊಕ್ಕು ಇಳಿಯುತ್ತೆ.. ಲಾ..ಲಾ..ಲಾ..'' ಬಂದಷ್ಟೇ ಜೋರಾಗಿ ಮರಳಿದನವ.

ಖರೆ..ಖರೆ ಖರೆ..

'ಟಾಮಿ' ಪದ ಪುನೀತಗೂ ನಗು ತರಿಸಿದ್ದಕ್ಕೆಕಾರಣ ಉಂಟು.. ಟಾಮ್ ಅರ್ಥಾತ್ ಥಾಮಸ್ ಬುಚರ್ ಸಾಗರಿಕಾಳ ಶುಗರ್ ಡ್ಯಾಡಿ.. ಐವತ್ತು ಪ್ಲಸ್ ಆಗಿಹೋಗಿದ್ದರೂ ಹತ್ತತ್ರ ನಲವತ್ತೋ ನಲವತ್ತೆರಡೋ ಅನಿಸುವ ಅವನ ಶರೀರಕ್ಕೆ

ಕಾಮದ ಕಾಟ ಅಗಾಧವಿತ್ತೆನ್ನುವ ಬಹಿರಂಗ ಗುಟ್ಟು ಎಲ್ಲ ಸೆಕ್ಷನ್ನುಗಳ ಗುಸುಗುಸುವಿಗೆ ಗ್ರಾಸ. ಆದರೂ ಅವ ಹೇಳಿ ಕೇಳಿ ಕಂಪೆನಿಯ ಎಂಟು ಪರ್ಸೆಂಟ್ ಭಾಗೀದಾರ. ತಮ್ಮ ಹೆಡ್ ಆಫೀಸಿರುವ ಸ್ಟಾಕ್ ಹೋಮಿನಲ್ಲಿ ಅವನದು ಭದ್ರ ತಳ..ಸಾಗರಿಕಾಗೆ ಇಲ್ಲಿನ ಬ್ರಾಂಚಿನಲ್ಲಿ ಇಡೀ ಡಿಪಾರ್ಟ್ಮೆಂಟ್ ಕೈಗೆ ಬಂದಾಗಿನಿಂದ ತನ್ನ ಕೆಲಸ ನೋಡುವುದಕ್ಕಿಂತ ಮಹತ್ವದ್ದು ಅವನ ಅಚ್ಚು ಮೆಚ್ಚಾಗಿರೋದಷ್ಟೆನಾ? ಬರೀ ತನ್ನ ಬಾಸ್ ಟಾಮ್ ಜೊತೆ ಒಡನಾಡಿದ್ದಾ? ಇಲ್ಲ, ಅದಕ್ಕಿಂತ ಹೆಚ್ಚಿನದೊಂದೇನೋ ಕುದ್ದು ಕುದ್ದು ಹಳೇದಾಗಿರುವ ಸಂಗತಿ.

''ಓಯ್, ಕಚ್ಚೆ ಹರುಕರಿಗೆ ಜಗತ್ತಿನಲ್ಲಿ ಬರವಿಲ್ಲ.ಬಟ್ ಇವನಿಗೆ ಕಚ್ಛೆಯೇ ಇಲ್ಲವಲ್ಲ ಅದಕ್ಕೆ ಚಡ್ಡಿಹರುಕ ಅನ್ನೋಣ'' ಪರೇಶ್ ಮಾತಿಗೆ ಉಳಿದವರು ಖೊಳ್ಳನೇ ನಕ್ಕು ಕೂತಲ್ಲೇ ಚಿಮ್ಮಿದರೆ ಟಾಮ್ ನನ್ನೇ ಅನುಕರಿಸಿ ಅವನ ಹಾಗೆಯೇ ಗಲ್ಲ ಉಬ್ಬಿಸಿ ಮೆಳ್ಳೆಗಣ್ಣು ತಗೆದು ಪೂರ್ವ ಪಶ್ಚಿಮ ನೋಡಿ ಇದೇ ಚಟವಾಲ್ ಇನ್ನೂ ಹೆಚ್ಚು 'ಖೋಖೋ ನಗುವ..

''ಇವಳು ಮಾತ್ರ ಸತಿ ಸಾವಿತ್ರಿಯೋ? ಸ್ಟಾಖೋಮಿಗೆ ಹೋಗಲು ಒಂಟಿ ಕಾಲಲ್ಲಿ ನಿಂತಿರ್ತಾಳಲ್ಲ? ನಲವತ್ತಾರು ಸೈಜಿನ ಸುಮನ್ ಕೌರ್ ಗೆ ಸಾಗರಿಕಾಳ ಮೂವತ್ತಾರು ಮೂವತ್ತೆಂಟನ್ನು ದಾಟದೆ ಉಳಿದಿರೋ ಶೇಪು ಸೈಜಿನ ಬಗ್ಗೆ ಅಸೂಯೆ ಇದ್ರೆ ತಪ್ಪಿಲ್ಲ.

'' ನಿಮಗೆ ಇವತ್ತು ಬೇರೆ ಅಜೆಂಡಾ ಯಾವುದೂ ಇಲ್ಲವೇನು...ಇನ್ನರ್ಧ ಗಂಟೆ ಇಲ್ಲೇ ಕಳೆದರೆ ಶಾಮಣ್ಣನ ಕಣ್ಣುಗಳೆರಡರಲ್ಲೂ ಕೆಂಪು ಬಣ್ಣ ಚಿಮ್ಮುತ್ತೆ ಗೊತ್ತಿಲ್ಲವೇನು? ಸ್ಟುಪಿಡ್ಸ್.. ಮೊದ್ಲು ಮುಗಿಸಿ ಆ ಸಾಗರೀ ಬಗ್ಗೆ ಮಾತಾಡೋದನ್ನ. ''

ಭೋರ್ಗರೆಯುತ್ತಿದ್ದ ಕಾಫಿ ಟೇಬಲ್ ವಾಗ್ವಾದವನ್ನು ತಡೆಯುವ ಹಠಕ್ಕೆ ಬಿದ್ದಂತೆ ಮೋಹನ್ ಮುಂದಿನ ಒಂದು ತಾಸಿನಲ್ಲಿ ತಾವೆಲ್ಲ ಬೋರ್ಡ್ ರೂಮಿನಲ್ಲಿ ಮೀಟಿಂಗಿಗಾಗಿ ಕರೆದಿರುವ ಶಾಮ್ ಘನಶ್ಯಾಮ್ ನೆನಪು ತಂದು ರೀಜನಲ್ ಡೈರೆಕ್ಟರ್ ಕರೆದ ಮೀಟಿಂಗಿನ ಮಹತ್ವವ ಎತ್ತಿ ಝಾಡಿಸಿ ಇವರ ಮುಖಕ್ಕೆ ಹಿಡಿದು ಅಲ್ಲಿಂದೆದ್ದು ಹೋದರೆ

ಸುಮನ್ ಕೌರ್ ಅದಕ್ಕೆ ಹಣಿಯದೆ ಇನ್ನೂ ಒಂದು ಒಗ್ಗರಣೆ ಹಾಕುತ್ತ, 'ಕಮ್ಮಾನ್ ಗೈಸ್ ಇವಳು ತನ್ನ ಕಚ್ಚೆ ಬಿಚ್ಚದಿದ್ರೆ ಅವನು ಕೈ ಹಾಕೋಕಾಗುತ್ತಾ...'' ಕಿಸಕ್ ನಕ್ಕರೆ, ಶಾಲಿನಿ ತಡೆಯುತ್ತಾಳೆ ''ಕಂಟ್ರೋಲ್ ಮಾಡ್ಕೋ ಸುಮನ್ಯಾ, ಯಾರೋ ಮಾಡಿದ ಪಾಪಕ್ಕೆ ನಾವ್ಯಾಕೆ ಆಡಿ ಬಾಯಿ ಹೊಲಸು ಮಾಡ್ಕೋಬೇಕು?''

''ಕಾಫಿ ಮುಗಿದಿಲ್ವೇನ್ರೋ ಇನ್ನೂ? ನೀ ನಡಿಯೋ ಇಲ್ಲಾಂದ್ರೆ ನಿಜಕ್ಕೂ ಶಾಮಣ್ಣನ ಕಣ್ಣಿಂದ ರಕ್ತಧಾರೆ ನೋಡಬೇಕಾದೀತು.'' ಪುನೀತ್ ನ ಮೋಹನ ಎಬ್ಬಿಸಿ ಇಬ್ಬರೂ ಬೋರ್ಡ್ ರೂಮು ಸೇರುವುದಕ್ಕೂ ಸಾಗರಿಕಾ ಶ್ಯಾಮ್ ಘನಶ್ಯಾಮ್ ಜೊತೆಯಲ್ಲೇ ನಗುತ್ತ ಒಳಗೆ ಕಾಲಿಟ್ಟದ್ದಕ್ಕೂ ಸರಿಹೋಯ್ತು. ಲ್ಯಾಪ್ ಟಾಪ್ಗಳ ಕಿನ್ ಕಿನ್ ಸದ್ದಿನ ಜೊತೆ ಮೂರು ತಿಂಗಳ ಸೇಲ್ಸ್, ಮಾರ್ಕೆಟಿಂಗ್ ಸ್ಥಿತಿಗತಿಗಳು ಮಾತಿನ, ವಾದ ವಿವಾದಗಳ ಉಯ್ಯಾಲೆ ಅಡಿ ಲಾಭದ ಅಂಕಿ ಸಂಖ್ಯೆಗಳ ಇಳಿತ ಸ್ಟಾಕ್ ಹೋಮನ್ನು ತಲ್ಲಣಕ್ಕೆ ತಂದಿರುವುದರ ಮೂಲಕ್ಕೆ ಕೈಯಿಟ್ಟು ಎಲ್ಲಿ ರಿಪೇರಿ ಮಾಡಬೇಕು, ಎಲ್ಲಿ ಕತ್ತರಿ ಇಡಬೇಕು ಅನ್ನುವ ಪಟ್ಟಿಯೊಂದು ಸಿದ್ಧವಾಗತೊಡಗಿತು..

********************************

ಅಪ್ಪನಿಗೆ ಹನ್ನೆರಡು ಇಂಜೆಕ್ಷನ್ ಕೊಡಿಸಬೇಕಿದೆ. ಕಳೆದ ಎರಡು ವರ್ಷಗಳಿಂದ ಅವರ ಉಸಿರಿನ ಒಂದೊಂದೇ ಕ್ಷಣದ ಮುಕ್ತಾಯಕ್ಕೆ ಅಸಹಾಯಕ ಸಾಕ್ಷಿಯಾಗಿರುವ ಡಾ. ಚಂದ್ರಮೌಳಿ ನಿನ್ನೆಯೇ ಹೇಳಿದ್ದರು. ಒಂದು ಇಂಜೆಕ್ಷನ್ನಿಗೆ ಎಂಟು ಸಾವಿರ ರೂಪಾಯಿ, ಅದೂ ಇಲ್ಲೇ ತೊಗೊಂಡರೆ. ಶ್ರೀನಿಧಿಗೆ ಹೇಳಿದ್ದ ಪುನೀತ್, ಹೇಗಾದರೂ ಅಲ್ಲಿಂದ- ಅಂದರೆ ವಾಷಿಂಗ್ಟನ್ನಿಂದ-ಕಳಿಸು ಅಂದಿದ್ದ. ಅಲ್ಲಿನ ಔಷಧದ ಗುಣಮಟ್ಟ ಒಳ್ಳೆಯದಿರುತ್ತದೆಯೇ? ಹಾಗೇನಿಲ್ಲ ಅದನ್ನೇ ಇಲ್ಲೂ ತಂದು ಕೊಟ್ಟರೂ ಆದೀತು, ಹಣದ ಪ್ರಶ್ನೆ ಅನ್ನುವುದೇನಿಲ್ಲ ತನಗೆ ಬರುವ ಹತ್ತತ್ತರ ಎರಡು ಲಕ್ಷದ ಸಂಬಳ ಆ ಭಾರ ತಡೆಯಲಾರದೇನಲ್ಲ, ಅದಕ್ಕಿಂತ ಅಪ್ಪನಿಗೆ ತನ್ನಿಂದ ಇನ್ನೂ ಹೆಚ್ಚು ಮಾಡಲಾಗದ ನೋವಿಗೆ 'ಔಷಧಿಗಳನ್ನೆಲ್ಲ ಕಳಿಸಿಕೊಡಲಿಕ್ಕಾದರೂ ಬಿಡು' ಅನ್ನುತ್ತಿದ್ದ ತಂಗಿಗೆ ಹೂಂ ಅಂದಿದ್ದ.. ಆದರೆ ಏನೇ ಕೊಟ್ಟರೂ ಅಪ್ಪ ಉಳಿಯುತ್ತಾರೆ ಅನ್ನುವ ಖಾತರಿಯನ್ನು ಯಾವ ಧನ್ವಂತರಿಯೂ ಕೊಡುತ್ತಿಲ್ಲ.. ಇನ್ನು ಅವರ ಅಸ್ತಮಾನಕ್ಕೆ ಉಳಿದಿರುವ ಸಮಯವಾದರೂ ಎಷ್ಟೋ?

ಮೊದಲ ಸಲ ಆ ಶಬ್ದ ಕೇಳಿದಾಗ ತನಗೂ ಮೈ ಥರಥರ ಕಂಪಿಸಿದ್ದು ಸುಳ್ಳಲ್ಲ. ಯೂಥನೇಶಿಯ.. ದಯಾಮರಣ!

ಆಡಲು ಇನ್ನೂ ಮಾತಾಡಲು ನಾಲಿಗೆ ಹೊರಳುತ್ತಿದ್ದ ಆ ದಿನಗಳಲ್ಲಿ ಅಪ್ಪ ಕೈ ಹಿಡಿದು ಅಂಗಲಾಚಿದ್ದರು.. ಇನ್ನೂ ಸತ್ತಿರಲಿಲ್ಲ ಆಗ ಅವರ ನಾಲಿಗೆ. ಈಗ ಅದೂ ನಿಷ್ಕ್ರಿಯ! ''ಹೇಗಾದರೂ ಮಾಡು..ಏನಾದ್ರೂ ಮಾಡು ಕೋರ್ಟನ್ನೊಪ್ಪಿಸಿ ನಾನಂದಿದ್ದು ಮಾಡು ಪುನ್ನೀ..ನಾ ತಡ್ಕೊಳ್ಳಲಾರೆ ಕಣೋ.. ಇನ್ನು ಸಾಕು..ಸಾಕು..'' ಕಲ್ಲೂ ಕರಗುವ ಹಾಗೆ ಬೇಡಿಕೊಂಡಿದ್ದರು ಅಪ್ಪ. ಸಂಕಟ ಹೊಟ್ಟೆಯ ತುಂಬ ಮುರಿಗೆ ಹಾಕಿ ತಿರುಚುವ ಅನುಭವ... ಮಾಡಲಾಗುತ್ತದೆಯೇ ಅದನ್ನು.. ಇಂದೇ ಸಾಯಿ ಅಂತ ಕಳಿಸಿಬಿಡುವುದೇ?? ಕೋರ್ಟಿನ ಜಜ್ ನ ಗಡಸು ಮಖಕ್ಕೆ, ಆ ಪ್ರಶ್ನೆಗಳಿಗೆ ಯಾವ ರೀತಿಯ ಸಬೂಬು ಕೊಟ್ಟು ಸುಮ್ಮನಾಗಿಸಲಿ? ಕಾನೂನಿನ ನೂರೆಂಟು ಕಡ್ಡಾಯಗಳ ಸಾಲುಗಳನ್ನು ಯಾವ ರೀತಿ ತುಂಬಿಸಲಿ?

ಅವರ ಕಣ್ಣಲ್ಲಿ ನೀರಿರಲಿಲ್ಲ.. ಎಂದೋ ಬತ್ತಿ ಹೋದ ಸಾಗರ ಅದು.ಅಮ್ಮ ಹೋದಾಗಲೇ ಯಾರಿಗೂ ಕಾಣದ ಹಾಗೆ ಆ ಕಣ್ಣೀರಿನ ಕೊಳವನ್ನವರು ಮುಗುಚಿ ಹಾಕಿದ ಲಕ್ಷಣಗಳ ತಾನರಿತಿದ್ದ..ನಿಟ್ಟುಸಿರು ಅಪ್ರಯತ್ನವಾಗಿ ಹೊರಬರುವಾಗ ಅವರ ದೇಹ ಇಡೀ ಚುಚ್ಚಲ್ಪಟ್ಟು ಹೊರ ಚಾಚಿಕೊಂಡು ಮಾನಿಟರ್ ಗಳಿಗೆ ಜೋಡಿಸಿಕೊಂಡ ವೈರುಗಳ ಸರಣಿ, ಮಾನಿಟರಿನಲ್ಲಿ ಕೆಂಪು, ಹಸಿರು ದೀಪ, ಗೆರೆ ಚುಕ್ಕಿ ಏನೇನೋ ಮೂಡಿಸುತ್ತ ಚಲಿಸುವ ಬೆಳಕಿನ ಸಂದೇಶ ಅವರ ಜೀವ ಇನ್ನೂ ಇದೆ ಹೋಗಿಲ್ಲ ಅಂತ ತಾನೇ? ಹೀಗೆ ಅವನನ್ನು ಕೊಳೆಯಿಸುವುದರಲ್ಲಿ ಏನಾದರೂ ಅರ್ಥವಿದೆಯೇ? ಆದರೆ ಹಾಗೆಂದು ಸಾವಿನ ಹಾಳೆಗೆ ಮೊದಲೇ ಸಹಿ ಮಾಡಲೇ?

ಹಾಸ್ಪಿಟಲ್ಲಿನ ಕೋಣೆಯಿಂದ ಹೊರಬರಲು ಏಳುತ್ತಿದ್ದಾಗ ಮೊಬೈಲಿನಲ್ಲಿ ಶ್ರೀನಿಧಿಯ ಮೆಸೇಜು ಕಾಣಿಸಿತು.. 'ಇಂಜೆಕ್ಷನ್ಸ್ ಕಳಿಸಿದ್ದೇನೆ. ಅವನಿ ಬರ್ತಾ ಇದ್ದಾಳೆ ಇಂಡಿಯಾಕ್ಕೆ, ಅವಳ ಕೈಯಲ್ಲಿ ಕೊಟ್ಟೆ. ತುಂಬಾ ಅವಸರವಾಗಿ ಬೇಕಾಗಿಲ್ಲ ಅನ್ಕೋತೀನಿ. ಯಾಕಂದರೆ ಅದು ನಿನ್ನಲ್ಲಿಗೆ ಬಂದು ಮುಟ್ಲಿಕ್ಕೆ ಒಂದು ವಾರ ಬೇಕು. ಅಪ್ಪ ಹೇಗೆ.. ಏನಾದ್ರೂ ಸುಧಾರಣೆ?'

ಶ್ರೀ ಪ್ರತಿಬಾರಿ ಕೇಳುವ ಮಾತಿದು.. ಎಲ್ಲ ಗೊತ್ತಿದ್ದೂ ಕೇಳುವ ಮಾತು. ಅಮೆರಿಕದಿಂದ ಅವಳು ಅಪ್ಪನೆನ್ನುವ ಜೀವಚ್ಛವಕ್ಕೆ- ಇಂಗ್ಲೀಷಿನಲ್ಲಾದರೆ ನಾಜೂಕಿನ ಒಂದು ಶಬ್ದವೇ ಉಂಟಲ್ಲ ವೆಜೆಟೇಟಿವ್ ಕಂಡೀಷನ್ ಎಂದು - ಬಾಡಿದ, ಕೊಳೆತು ಕರಿಯಾದ ಸೊಪ್ಪಿನ ಹೋಲಿಕೆ! ಇದೇ ಆಗಬೇಕಿತ್ತೇ ಅಪ್ಪ? ಅವರನ್ನುಳಿಸುವ ಭರವಸೆಯ ಗಾಳಿ ಊದುವ ಔಷಧಿ ಕಳಿಸಿಕೊಟ್ಟಾಗಲೆಲ್ಲಾ ಇಬ್ಬರೊಳಗೂ ಎದ್ದೇಳುವ ಆಸೆಯ ಬೆಳಕೊಂದರ ಅಪೇಕ್ಷೆ ಮೂಡಿಸುವ ಮಾತು.. ಅಲ್ಲ, ಬೇಕೆಂದರೆ ಅಮೆರಿಕಕ್ಕೆ ಅಪ್ಪನನ್ನು ಕರೆದೊಯ್ದು ಚಿಕಿತ್ಸೆ ಕೊಡಿಸುವುವುದು ತಮಗೆ ಅಸಾಧ್ಯ ಅಲ್ಲ. ಅದನ್ನೂ ಮಾಡಿಯೇವು. ಇದ್ದೊಂದು ರಕ್ತಬಂಧದ ಅವನ ನಂಟು ನಮ್ಮಿಬ್ಬರಿಗೂ ಅತ್ಯಗತ್ಯವಾಗಿ ಬೇಕಿತ್ತು, ಇದೆ ಆದರೆ ಅವನ ದೇಹ ಸೋತು ಕೈ ಚೆಲ್ಲಿ ಭವದ ಬಂಧವನ್ನು ಹೆಚ್ಚು ಕಡಿಮೆ ಕಳಚಿಕೊಂಡೇ ಒಂದೂವರೆ ವರ್ಷಕ್ಕೆ ಹತ್ತಿರ . ಅಂದಿನಿಂದ ಅಪ್ಪ ಎಷ್ಟು ಸಲ ನಮ್ಮಿಬ್ಬರನ್ನು 'ಸಾವು ಕೊಡಿಸಿ' ಎಂದು ಅಂಗಲಾಚಿದರೋ ಲೆಕ್ಕ ಇಡಲಾರೆ..

ಭೂಮಿಗೆ ಅವರ ಜೀವವನ್ನು ಬಂಧಿಸಿಟ್ಟಿರುವ ತಂತುವಿನ ಕಣಕಣಗಳು ಸೋತು ಕೈ ಚೆಲ್ಲಿ, ಆ ಸೋಲಿಗೆ ಇವರಿಗರ್ಥವಾಗದ ಒಂದು ಹೆಸರಿಟ್ಟು ತಮ್ಮ ಟ್ರೀಟ್ಮೆಂಟ್ ಅನ್ನುವ ಪ್ರಯೋಗಗಳಲ್ಲಿ ಪೂರಾ ಮುಳುಗಿದ ರಾಮ್ ಶೆಟ್ಟಿ ಡಾಕ್ಟರ್, - ಅಲ್ಲ ಅವರೂ ತಮ್ಮ ಕೈಲಾದುದನ್ನೇ ಮಾಡುತ್ತಿರುವುದು- ಅಪ್ಪನನ್ನು ಆಸ್ಪತ್ರೆಗೆ ಸೇರಿಸಿದಂದೇ 'ಐ ಕಾಂಟ್ ಅಶ್ಯೂರ್ ಹಿಸ್ ರಿಕವರಿ'' ಅನ್ನುವ ಎದೆ ನಡುಗಿಸುವ ಮಾತು ಹೇಳಿದ ಕ್ಷಣ ಛೆ.. ಅಂದೇ ಅಪ್ಪ ಮುಗಿದಿದ್ದ..ಅವನ ದೇಹ ನುಲಿದು ನುಲಿದು ಯಾತನೆಯ ಮಡುವಲ್ಲಿ ಸಾವನ್ನು ಕರೆಯುತ್ತ ಮಲಗಿತ್ತು.. ಎಂತೆಂಥವರನ್ನು ಹದ್ದು ಹೊಂಚು ಹಾಕಿ ಹಕ್ಕಿಯನ್ನೊಯ್ಯುವಂತೆ ಕಿತ್ತು ಒಯ್ಯುವ ಸಾವು ಅಪ್ಪನಂಥ ಕೆಲವರಿಗೆ ಅಷ್ಟು ದಯೆ ತೋರಿಸೀತೆ? ಇಲ್ಲ.. ''ಹಾಗಾದರೆ ಹೀಗೆಯೇ ಅವರು ಬದ್ಕಿರೋ ಸಮಯವಾದರೂ ಎಷ್ಟು?'' ಈ ಪ್ರಶ್ನೆಗೆ ವೈದ್ಯರಲ್ಲೆ ಇಲ್ಲದ ಉತ್ತರ ತಾನೆಲ್ಲಿಂದ ಕಂಡುಕೊಂಡಾನು? ಕರೆಯುವವರಿಗೆ ಬಾರದ ಸಾವು.ಯಕ್ಷನೂ ಧರ್ಮರಾಜನಿಗೆ ಹಾಕದೆ ಇದ್ದ ಮಿಲಿಯನ್ ಡಾಲರ್ ಪ್ರಶ್ನೆ!

''ಶ್ರೀ.. ಪುನೀ ನಾನೊಲ್ಲೆ ಕಣರೋ..ಸಾಕು ಏನಾದ್ರೂ ಮಾಡಿ ಪರ್ಮಿಷನ್ ತೊಗೊಳ್ಳಿ '' ಅಪ್ಪನ ಕಣ್ಣುಗಳಿಂದಿಳಿಯುತ್ತಿದ್ದ ಅಸಹಾಯಕ ಕಣ್ಣೀರಿನಿಂದುರು ಸ್ತಬ್ಧವಾಗುತ್ತಿದ್ದ ತಮ್ಮಿಬ್ಬರ ಆಲೋಚನಾ ಶಕ್ತಿಗೆ ಅವನು ಕೇಳುವ ದಯಾಮರಣ ನಮ್ಮಲ್ಲಿ ಸಲೀಸಾಗಿ ದೊರೆಯಲಾರದೆನ್ನುವುದನ್ನು ಹೇಳಲಾಗದೆ ನಾಲಿಗೆ ಕುಸಿದ ಅನುಭವ.. ಅಪ್ಪನ ಚಿಕಿತ್ಸೆ ಮಾಡಿದ, ಮಾಡ್ತಿದ್ದ ವೈದ್ಯರುಗಳ ತಂಡಕ್ಕೆ ದುಂಬಾಲು ಬಿದ್ದು ಈ ಬಗ್ಗೆ ಸಲಹೆ ತೊಗೊಂಡಾಯಿತು. ಪುನೀತ್, ಶ್ರೀನಿಧಿಯ ಇಚ್ಛೆ, ಇಷ್ಟದ ಪ್ರಶ್ನೆಗಳನ್ನೆಲ್ಲ ಒಳಗೊತ್ತಿಕೊಂಡು ಅಪ್ಪನ ಹಠಕ್ಕೆ ಯೂಥನೇಶಿಯ ಅನ್ನುವ ದಯಾಮರಣಕ್ಕಾಗಿ ಕೋರ್ಟಿನ ಮೆಟ್ಟಿಲು ಏರಿಯಾಯಿತು.

'' ದಯಾಮರಣಕ್ಕೆ ಮೊನ್ನೆ ಕೋರ್ಟು ಒಂದು ಬಗೆಯ ಒಪ್ಪಿಗೆ ಕೊಟ್ಟಿದೆ ಅನ್ನುವುದು ನಿಜ'' ತಮ್ಮ ಕನ್ನಡಕವನ್ನು ಇನ್ನಷ್ಟು ಏರಿಸಿಕೊಳ್ಳುತ್ತ ಹೇಳಿದ ಅಡ್ವೊಕೇಟ್ ಹಣೆಯಲ್ಲಿ ನಿರಿಗೆಗಳಿನ್ನೂ ಇವೆ.. ''ಇದು ಪ್ಯಾಸಿವ್ ಯೂಥನೇಷಿಯಾ ಅಥವ ರೋಗಿಗೆ ಔಷದಿ, ಆಹಾರದ ಸಪ್ಲೈ ನಿಲ್ಲಿಸಿದಾಗ ಆಗುವ ಮರಣ.. ಆದರೂ ಇಲ್ಲಿ ಬಹಳಷ್ಟನ್ನು ಪ್ರೂವ್ ಮಾಡಬೇಕಾಗುತ್ತೆ.. ಕೋರ್ಟು ಇದನ್ನ ನೀವು ಹೇಳಿದಾಕ್ಷಣಕ್ಕೆ ಒಪ್ಪುವ ಬಗ್ಗೆ ಈಗಲೇ ನಾ ಏನೂ ಹೇಳೋಕ್ಕಾಗಲ್ಲ ಪುನೀತ್.. ಮೊದಲಿನ ಮಾತು ಈಗಿಲ್ಲ,...ಆದರೂ''

ಅವರ ಹಣೆಯ ಮೇಲೆ ಏರಿಳಿದ ನೆರಿಗೆಗಳು ಮುಂದಿನ ಮಾತು ಅಲ್ಲೇ ಸ್ಥಗಿತಕ್ಕೆ ಸೂಚನೆ. ಇದು ಹೌದು ಅಲ್ಲ ಎರಡೂ ಆಗಬಹುದೆನ್ನುವ ರೀತಿ ಅಡ್ವೊಕೇಟ್ ರಾಜನ್ ತಲೆ ಆಡಿಸಿದ್ದು ಏನನ್ನೂ ಹೇಳದೆಯೂ ಬಹಳಷ್ಟು ಹೇಳಿತ್ತು.

ಯೂಥನೇಶಿಯ ಬಗ್ಗೆ ತಾನೂ ಶ್ರೀ ಇಬ್ಬರೂ ಇಡೀ ಅಂತರಜಾಲವನ್ನೇ ತಲೆಕೆಳಗು ಮಾಡಿ ಜಾಲಾಡಿ ಆಗಿತ್ತು ದಯಾಮರಣ ಯಾಕೆ, ಏನು, ಹೇಗೆ ಎಲ್ಲೆಲ್ಲಿ ನಡೆಯುತ್ತೆ, ಯಾವ್ಯಾವ ದೇಶ ಇದಕ್ಕೆಲ್ಲ ಯಾವ ಬಗೆ ಒಪ್ಪಿಗೆ ನೀಡುತ್ತೆ... ಯಾವ ವಿಧಾನಗಳಲ್ಲೆಲ್ಲ ದಯಾಮರಣ ಸಾಧ್ಯ..ನಮ್ಮಲ್ಲಿ ಈ ಅರ್ಜಿಯ ಗತಿ ಏನಾಗಬಹುದು.ತಮಗೆಲ್ಲಾ ಬಾಯಿಪಾಠ!

ಅದನ್ನೇ ತಮ್ಮ ಭಾಷೆಯಲ್ಲಿ ಪುನರುಚ್ಚರಿಸಿದ್ದು ಅಷ್ಟೇ, ಅಡ್ವೊಕೇಟ್ ರಾಜನ್ ''ನಿಮಗ್ಗೊತ್ತಿರುವ ಸಂಗತಿಯೇ...'' ಖಚಿತ ಮಾತಿನವರವರು,

''ನನ್ನ ಕಡೆಯಿಂದ ನಿಮಗೆ ಯಾವ ಭರವಸೆಯನ್ನೂ ಕೊಡೋದು ಕಷ್ಟ . ಅರುಣಾ ಶಾನ್ಬಾಗ್ ಕೇಸು ಗೊತ್ತಲ್ಲ ನಿಮಗೆ? ನಿರಂತರ ಇಪ್ಪತ್ತೇಳು ವರ್ಷ ಆಕೆ ಬದುಕಿದ್ದು ಕಿಂಗ್ ಎಡ್ವರ್ಡ್ ಹಾಸ್ಪಿಟಲ್ಲಿನ ನರ್ಸುಗಳು ಕೊಳವೆಯಿಂದ ಮೂಗಿಗೆ ಇಳಿಸುತ್ತಿದ್ದ ಹನಿ ಗ್ಲೂಕೋಸಿನಲ್ಲಿ.. ಉಳಿದ ದೇಹ ಬರೀ ನಿರ್ಜೀವ ಸೊಪ್ಪಿನ ಥರ .ಆದರೆ ಅವಳದ್ದೇ ಯುಥನೇಶಿಯ ಅಥವಾ ಮರ್ಸಿ ಕಿಲ್ಲಿಂಗ್ ಪಿಟಿಷನ್ ಒಪ್ಪಲೇ ಇಲ್ಲ ಕೋರ್ಟ್.. ಈಗ ಆ ನಿರ್ಧಾರ ಬದ್ಲಾಗಿದೆ ಅನ್ನೋದು ನಿಜ, ಆದರೂ ನಿಮ್ಮ ಕೇಸು ಹೇಗೆ ತೀರ್ಮಾನ ಆದೀತೋ ಏನು ನಿರ್ಧಾರ ತೊಗೊಳ್ಳುತ್ತೋನಾನು ಮೊದಲೇ ಹೇಳ್ಳಾರೆ, ಎವ್ರಿಥಿಂಗ್ ಡಿಪೆಂಡ್ಸ್''

''ಗೊತ್ತು ಸರ್.. ನಮಗೂ ಇದರಂಥ ಸಂಕಟ ಇನ್ನಿಲ್ಲ.. ಅಪ್ಪಾ ಅಷ್ಟು ಹಠ ಮಾಡ್ಲಿಲ್ಲಾಂದ್ರೆ ನಾವೀ ನಿರ್ಧಾರಕ್ಕೆ ಬರೋದು ಸಾಧ್ಯವೇ ಇರಲಿಲ್ಲ.. ಅವರ ಸ್ಥಿತಿ ಕಣ್ಣಿಂದ ನೋಡಲಾಗಲ್ಲ'' ಶ್ರೀನಿಧಿಯಾ ಸಂಕಟದ ಬಿಕ್ಕುಗಳಿಗೆ ಕೊಂಚ ಚಲಿಸಿದ ರಾಜನ್ ನಿಟ್ಟುಸಿರು ತಳ್ಳಿ ಹಣೆ ತೀಡಿಕೊಂಡು, 'ನೋಡುವಾ' ಅಷ್ಟೇ.

ಯಾರದೇ ಚರಮ ಕ್ಷಣವನ್ನು ಬರಮಾಡಿಕೊಳ್ಳುವ ಹಕ್ಕು ಕೈಗೆಟುಕಿಸಿಕೊಳ್ಳುತ್ತಿದ್ದೇವೆಯೇ ನಾವು? ಹುಟ್ಟನ್ನು ನಿರ್ಧರಿಸಲಾಗದವರು ಸಾವನ್ನು ನಿರ್ಧರಿಸುತ್ತಿದ್ದೇವೆಯೇ? ಮೃತ್ಯುವಿನ ಪ್ರತಿಯೊಂದು ಹಂತವನ್ನೂ ಅದೇ ಯಾಕೆ ನಿರ್ಧರಿಸುತ್ತೆ? ಈಗ..ಇಲ್ಲ ಇನ್ನೊಂದು ದಿನ..ಇಲ್ಲಿಲ್ಲ..ನಾಳೆ..ನಾಡಿದ್ದು ಅಥವಾ ಯಾವಾಗ ಅಂತ ಹೇಳಲ್ಲ ಕಾದಿರು ಬಂದೆ ಅನ್ನುತ್ತಾ ಕಣ್ಣೆದುರಲ್ಲೇ ಕುಣಿಯುತ್ತ ನಿಂತರೆ..?

ತಮ್ಮ ಮರ್ಸಿ ಕಿಲ್ಲಿಂಗ್ ಯಾನೆ ದಯಾಮರಣ ಪಿಟಿಷನ್ ಕೋರ್ಟಿನಲ್ಲಿದೆ. ನಾಳೆಯೋ ನಾಡಿದ್ದೋ, ಅಥವಾ ಒಂದು ತಿಂಗಳೋ ಗೊತ್ತಿಲ್ಲ ,ಏನೋ ಒಂದು ತೀರ್ಮಾನ ತಿಳಿದರೂ ತಿಳಿದೀತು...ಒಂದು ವೇಳೆ ಒಪ್ಪಿತು ಅಂದರೆ..ಅಂದರೆ.. ಕೊಂದುಬಿಡುವುದೇ ಅಪ್ಪನನ್ನು? ತಲೆ ಧಿಮಿ ಧಿಮಿ ತಿರುಗಿತು.

***********************************************************************

ಕಳೆದ ಮೂರು ದಿನದಿಂದ ತುರಿಸಿಕೊಳ್ಳಲೂ ಪುರುಸೊತ್ತು ಇಲ್ಲದಂತೆ ಆಗಿರಲಿಕ್ಕೆ ಕಾರಣ ಅಂದರೆ ಚೀನಾದಿಂದ ಬಂದಿಳಿದಿದ್ದ ತಮ್ಮ ವಿಭಾಗದ ಗ್ಲೋಬಲ್ ಟೀಮಿನ ಮುಖ್ಯಸ್ಥೆ ಶಿಯಾ ಪೀ , ಮತ್ತು ಬೆಳ್ಳುಳ್ಳಿ ಎಸಳಿನಂಥ ಕಣ್ಣಿನ, ಹಳದೀರೇಷ್ಮೆಗೂದಲಿನ, ಹೆಣ್ಣೋ, ಗಂಡೋ, ಬೇಗ ಗುರುತು ಸಿಗಲಾರದಂಥ ಅವಳ ಎರಡು ಮಿನಿ ಟೀಮ್ ಮೆoಬರು ಹುಡುಗರೇ ಕಾರಣ ಅನಿಸಿತ್ತು ಪುನೀತ್ ಗೆ.

ಸಾಕಾಯ್ತಪ್ಪ ಕತ್ತೆ ಕೆಲಸ ಅಂತ ಮೈ ಮುರಿದವನಿಗೆ ಕಂಪ್ಯೂಟರ್ ತೆರೆತುಂಬ ಚಾಚಿಕೊಂಡ ಆ ಇಡೀ ವರ್ಷದ ಕಂಪನಿಯ ತಮ್ಮ ಬ್ರಾಂಚಿನ ಹಣಕಾಸಿನ ಜಾತಕದ ರೂಪು ರೇಷೆಗಳ ಅಡಿ ಟಿಪ್ಪಣಿಗಳ ಸಾಲು ಸರಾಸರಿ ಓದಿ, ತಿದ್ದಿ, ಕಳೆದು , ಕೂಡಿಸಿ, ಜೋಡಿಸಿ..ಅಬ್ಬಬ್ಬಾ.. ನಾಳೆಯೊಳಗಾಗಿ ಪೂರ್ಣ ಫೈಲು ತಯಾರಾಗದಿದ್ದಲ್ಲಿ ಇಂಗ್ಲೀಷನ್ನು ಚೈನೀಸಲ್ಲೆ ಮಾತಾಡುವ ಶಿಯಾಳ ಜೂನಿಯರ್ ಪಡ್ಡೆಗಳ ಪ್ರಶ್ನೆಗಳನ್ನೆದುರಿಸುವ ಆ ಕ್ಷಣಗಳು ಕಿರಿಕಿರಿ ಅನಿಸಿ, ಅಲ್ಲ ತಾನೇ ಯಾಕಿಷ್ಟು ಇದರಲ್ಲಿ ದುಡಿಯಬೇಕು? ಹಾಗೆ ಕಂಡರೆ ಇದು ಸಿಬಿಲ್ ಮೊಹಾಂತಿ ಮಾಡಿ ಮುಗಿಸಬೇಕಿದ್ದ ಕೆಲಸ. ತಾನು ಎಚ್ ಆರ್ ಮತ್ತು ಫೈನಾನ್ಸ್ ಎರಡರಲ್ಲೂ ಪರಿಣಿತ ಅಂತ ತಿಳಿದಿದ್ದುದಕ್ಕೆ ಅಲ್ಲವೇ ಸಾಗರಿಕಾ ಇಷ್ಟು ನಯಕ್ಕಿಳಿದು ಸಿಬಿಲ್ ಕೆಲಸಕ್ಕೆ ತನ್ನ ಸಹಾಯ ಕೇಳಿದ್ದು?

ಇತ್ತೀಚೆಗೆ ಸಿಬಿಲ್ ಸಾಗರಿಯ ಯಾವುದೇ ಸುದ್ದಿ ತುಟಿ ಪಿಟ್ ಬಿಡಲಾರದೆ ಮುಗುಮ್ಮಾಗಿರೋದು ತಮ್ಮೆಲ್ಲರ ಗಮನಕ್ಕೆ ಬರಲಾರದೆ ಇಲ್ಲ. ಎಮ್ಮೆನ್ಸಿ ಗಳಲ್ಲಿ ಯಾರೂ ಯಾರಿಗೂ ಶಾಶ್ವತವಾಗಿ ಶತ್ರುಗಳಲ್ಲ! ಹಿಡಿಂಬಿ ಇವಳನ್ನು ಬುಟ್ಟಿಗೆ ಹಾಕ್ಕೊಂಡಿರುವ ಲಕ್ಷಣಗಳು ಸ್ಪಷ್ಟ. ತಿಂಗಳಿಗಿಷ್ಟು ಎಂದು ನಡೀಬೇಕಾಗಿರುವ ಕಾರ್ಪೊರೇಟ್ ತರಬೇತಿಯ ಸೆಷನ್ ಗಳನ್ನ ಏರ್ಪಡಿಸುವಲ್ಲಿ ಅವರಿಬ್ಬರೂ ಥೇಟ್ ಅಕ್ಕ ತಂಗಿ ಆಗಿ ಮುಗುಂ ಮಾತುಗಳೊಡನೆ, ನೋಡನೋಡುವಷ್ಟರಲ್ಲಿ ಅರೇಂಜ್ ಮಾಡ್ತಿದ್ದದ್ದು ತಾನು ಗಮನಿಸಿದ್ದರೂ ಮಾಡಿದರೆ ಮಾಡಿಕೊಳ್ಳಲಿ ತನಗೆ ತಲೆ ಬಿಸಿ ಕಡಿಮೆ ಆದರೆ ಮತ್ತೇನು? ಆದರೆ ತಪ್ಪಲೆ ಅಷ್ಟು ಪ್ರಮಾಣದಲ್ಲಿ ಕುದ್ದು ಕುದ್ದು ಹೊಗೆ ಎಬ್ಬಿಸುವ ಸುಳಿವು ಖಂಡಿತ ಇಲ್ಲ.

'' ಅಂತೂ ಬೆಂಗಾಲಿ ಟ್ಯೂನಿಗೆ ಒಡಿಸ್ಸಿ ನಾಚ್ ಶುರು ಆಯ್ತು..'' ಮೋಹನ್ ನಕ್ಕಿದ್ದ.

ಖರೆ ಅಂದು ನಡೆದದ್ದೇನು? ಇಂದು ಕೂತು ನೆನಪಿಸಿಕೊಂಡರೆ ಎಲ್ಲ ಅಯೋಮಯ.

ಸಾಗರಿಕಾ ತನ್ನ ಕ್ಯಾಬಿನ್ನಿಗೆ ತನ್ನನ್ನು ಕರೆದೊಯ್ದಾಗ ಅಚ್ಚರಿ ಆಗಿತ್ತು, ಇಷ್ಟು ನಯವೂ ಸಾಧ್ಯವೇ ಇವಳಿಗೆ ?

ಎರಡೇ ವಾಕ್ಯ ಅಲ್ಲಿಂದಿಲ್ಲಿಂದು ಆಡಿ ''ಲುಕ್ ಪುನೀತ್, ನಾನು ನಿನ್ನ ಹೊಗಳ್ತೀನಿ ಅನ್ಕೋಬೇಡ.. ಆದರೆ ಫೈನಾನ್ಸ್ ಪ್ರಾಬ್ಲೆಮ್ಸ್ ನಿಮ್ಮ ಕೈಯಲ್ಲಿ ಎಷ್ಟು ಸಲೀಸು ಪಾರಾಗಿಬಿಡ್ತವೆ ಅಂದರೆ ಐ ರಿಯಲಿ ಡೋಂಟ್ ಹ್ಯಾವ್ ಟು ವರಿ ಅಬೌಟ್ ಎನಿಥಿಂಗ್.. ಸೊ ಪ್ಲೀಸ್ ಕೊಂಚ ಸಿಬಿಲ್ ಗೆ ಹೆಲ್ಪ್ ಮಾಡ್ತೀಯ? '' ಅನ್ನುತ್ತ 'ನೋಡು ಬೇಕಿದ್ರೆ ನಿನಗೆ ಪ್ಯಾರಿಸ್, ಅಥವಾ ಲಕ್ಸಂಬರ್ಗಿಗೆ ಮೂರ್ನಾಲ್ಕು ತಿಂಗಳು ಟ್ರೇನಿಂಗ್ ಸೆಶನ್ ಹಾಕಿ ಕಳಿಸಿಕೊಡ್ತೀನಿ. ಒಂಚೂರು ಕೆಲಸ ಮಾಡಿ ಮಿಕ್ಕಿದ್ದು ಮಜಾ ಮಾಡಿ ಯೂರೋಪು ಸುತ್ತಿ ಬಾ.. ವಾಟ್ ಸೇ? '' ತನ್ನ ಹಾಸ್ಯಕ್ಕೆ ತಾನೇ ಖೋ ಖೋ ನಕ್ಕಳು..

ಸಿಬಿಲ್ಲಳ ಒಂದಿಷ್ಟು ಕೆಲ್ಸದ ಭಾರ -ಬೇಕೋ ಬೇಡವೋ ಹೆಗಲೇರಿತ್ತು. ಇಲ್ಲ ಅನ್ನೋದು ಕಷ್ಟ ಅಂತ ತನಗೂ ಗೊತ್ತು.. ಕಾರಣ ತಾನು ಅಪ್ಪನಿಗಾಗಿ, ಅವನ ಆರೋಗ್ಯದಲ್ಲಿ ಕುಸಿತ ಕಂಡಾಗಲೆಲ್ಲ ಅಥವಾ ಯಾವಾಗ ರಜ ಬೇಕು ಅಂದರೂ' ಸರಿ ಹೋಗು' ಅನ್ನುತ್ತಾ ಕಿರಿಕಿರಿ ಇಲ್ಲದೆ ಒಪ್ಪತ್ತಿದ್ದಳಲ್ಲ ಸಾಗರಿ.. ಆ ಋಣ ಬಾಯಿ ಕಟ್ಟಿತ್ತು..ಏನಾದರೇನಂತೆ ಪರ್ಯವಸಾನ ತಿಳಿಯದ ಮೂರ್ಖ ತಾನು!

ಅಪ್ಪನ ನೆನಪು ಹಿಂದೆಯೇ ಚಿಮ್ಮಿ ಈ ಸ್ಥಿತಿಯಲ್ಲಿರುವ ಅವನನ್ನು ಬಿಟ್ಟು ತಾನು ಎಲ್ಲಿಗಾದರೂ ಹೋಗುವ ನಿಮಿಷವನ್ನು ಕನಸಿನಲ್ಲೂ ಕಲ್ಪಿಸಲಾರೆ...ಅಷ್ಟೇ.

******************************************

ಕನ್ನಡದವರ ಮೇಲಿರುವ ಸಿಟ್ಟು, ಅಸಹನೆ ಇವೆಲ್ಲ ಬಚ್ಚಿಟ್ಟುಕೊಂಡವಳಲ್ಲ ಹಿಡಂಬಿ..ಇದೇ ಸಾಗರಿಕಾ.

ಅವಳದೇನಿದ್ದರೂ ಅವಳ ಒರಟು ಬಾಯಿಯ ಕರಿ ನಾಲಿಗೆಯಲ್ಲಿಂದ ಹೊರಬಿದ್ದೇ ಬೀಳ್ತಿತ್ತು.. ಇಲ್ಲಿನ ಕನ್ನಡದವರು ಹೇಳುವ ಮಾತೆಲ್ಲ ಒಂದು ನೆಕ್ಸಸ್ ನ ಭಾಗ ಎಂದು ಖಚಿತ ನಂಬಿದ ಅವಳಿಗೆ ಇದನ್ನೆಲ್ಲಾ ಹತ್ತಿಕ್ಕುವ ಹೆಣ್ಣು ಹುಲಿ ತಾನೆಂಬ ಭ್ರಮೆಯೋ?

ಒಳಗೊಳಗೇ ಕುದಿಯುವ ಈ ತಾಪ ಪುನೀತ್ ಥರವೇ ಆಫೀಸಿನ ಕನ್ನಡ ಭಾಷಿಗರ ನೋವು ಅನ್ನೋದು ಪರೇಶ್ ಚಟವಾಲ್ ನ ಹಾಸ್ಯಕ್ಕೆ ಸಾಮಗ್ರಿ.

'' ವಾಟ್ ಮ್ಯಾನ್? ನೀವೆಲ್ಲ ಒಂದಾಗ್ರಿ ನೋಡೋಣ.. ನೀವು ಕನ್ನಡದವರು ಸ್ವಾಭಿಮಾನ ಬೆಳೆಸಿಕೊಂಡ್ರೆ ಇಂಥವರ ಆಟ ನಡೆಯುತ್ತಾ? ನಿಮ್ಮಲ್ಲಿ ಒಗ್ಗಟ್ಟಿಲ್ಲ ಪುನೀ.. ಎಲ್ಲಿ ನಮ್ಮ ಗುಜರಾತಿಗೆ ಬಂದು ಈ ಆಟ ಆಡ್ಲಿಕ್ಕೆ ನೋಡಲಿ ಅವಳು, ಆಗ ಗೊತ್ತಾಗುತ್ತೆ. ನಮ್ಮ ಅಸ್ಮಿತೆಯನ್ನ ನಾವು ಬಿಟ್ಟು ಕೊಡದಿದ್ರೆ ಹೊರಗಿನವರು ದುರುಪಯೋಗ ಮಾಡ್ಕೊಳ್ಳಿಕ್ಕೆ ಸಾಧ್ಯ ಇಲ್ಲ ಅಂತ ಗೊತ್ತಿಲ್ವೆ ನಿಮಗೆ? ''

'ಇವಳು ನೆಕ್ಸಸ್ ಮುರೀತೀನಿ ಅಂತಾಳಲ್ಲ.' ಕ್ಷೀಣವಾಗಿ ಬಂದ ಮಾತು. ''ಕಮಾನ್ ಗಾಯ್ !ಅವಳೊಂದು ಪಿಶಾಚಿ.. ಅದೇನ್ ಮುರೀತೀಯೋ ಮುರ್ಕೊ ಅನ್ನಿ..ಹ.. ಹಾ.. ''

ಅವನ ಮಾತಿನಲ್ಲಿರುವ ಹುರುಳು ತಳ್ಳಿಹಾಕುವಂಥದ್ದೇನಿಲ್ಲ. ಇಲ್ಲವಾದಲ್ಲಿ ತಮ್ಮ ಬ್ರಾಂಚಿನ ಇಡೀ ವರ್ಷದ ರಜಾ ಕ್ಯಾಲೆಂಡರು ಸಿದ್ಧಪಡಿಸುವಾಗ 'ದಸರೆಯ ಕೊನೆ ವಿಜಯದಶಮಿಯ ದಿನದ ರಜ ಯಾಕೆ ಕೇವಲ ದುರ್ಗಾಪೂಜೆ ದಿನದ ರಜೆ ಸಾಕು' ಅಂತ ಹಿಡಂಬಿ ಹಠ ಹಿಡಿದಿದ್ದು, ಅದನ್ನು ತಾನು ಪ್ರಬಲವಾಗಿ ವಿರೋಧಿಸಿದ್ದು, ಆದರೂ ಮೀಟಿಂಗಿನಲ್ಲಿ ಜೊತೆ ಕುಳಿತಿದ್ದ ಅಪ್ಪಟ ಕನ್ನಡದ ಗುರುಪ್ರಸಾದ್, ಸುಂದರ ರಾಜು ಮತ್ತು ಅಶೋಕ್ ಪಾಟೀಲ್ ಮೂವರೂ ಬಾಯಿಗೆ ಬೀಗ ಬಿದ್ದ ಹಾಗೆ ಮಾತಿಲ್ಲದೆ ಕುಳಿತದ್ದು ಈ ಉಗ್ರ ಹಿಡಂಬಿಯನ್ನು ಎದುರು ಹಾಕಿಕೊಳ್ಳಬಾರದೆಂಬುದಕ್ಕೋ ಅಥವಾ ಪರೇಶ್ ಹೇಳುವ ಹಾಗೆ ಇದು ನಮ್ಮ ಅಲ್ಲ, ಈ ಮೂವರಂಥ ಅನೇಕರ ಅಭಿಮಾನ ಶೂನ್ಯತೆಯೋ?

'' ಇಂಪಾಸಿಬಲ್ 'ಅಂದಿದ್ದ ತಾನು, ''ದಸರೆ ನಮ್ಮ ನಾಡಹಬ್ಬ, ಅವತ್ತು ಮನೆಯಲ್ಲಿ ಪೂಜೆ ಮಾಡಿ ಬನ್ನಿ ಮುಡೀತೀವಿ, ಅದು ನಮ್ಮ ನೂರಾರು ವರ್ಷಗಳ ಸಂಪ್ರದಾಯ. ನಿಮ್ಮಲ್ಲಿನ ದುರ್ಗಾ ಪೂಜೆಗಿರೋಷ್ಟೇ ಇಂಪಾರ್ಟನ್ಸ್ ನಾವಿದಕ್ಕೆ ಕೊಡ್ತೀವಿ. ಗುರ್ಗಾಷ್ಟಮಿಗಂತೂ ರಜೆ ಇದ್ದೇ ಇದೆ. ಆದ್ರೆ ಕೊನೆ ದಿನ ಯಾಕ್ ಬೇಡ? ನಮ್ಮಿಡೀ ರಾಜ್ಯಕ್ಕೆ ಅವತ್ತು ಸಂಭ್ರಮ.. ಯಾಕೆ? ಮೈಸೂರಿನ ವಿಜಯದಶಮಿ ಮೆರವಣಿಗೆ ನೋಡೋಕೆ ನೀವೇ ಹೋಗಿರಲಿಲ್ವ?.. ಅವತ್ತು ಸಹ ಆಫೀಸಿಗೆ ಬಂದು ಕೆಲಸ ಮಾಡಿ ಅಂದರೆ ಆಗದು.''

ತನ್ನ ಸಮರ್ಪಕ, ತಾರ್ಕಿಕ ವಿವರಣೆಗೆ ಉತ್ತರವಿಲ್ಲದೆ ತನ್ನ ಕೋಪವನ್ನು ಒಳಗೆ ಸರಿಸಿಕೊಂಡು ''ಓಕೆ ಹಾಗಾದ್ರೆ, ನೀವಿಷ್ಟು ಹಠ ಮಾಡೋದಾದ್ರೆ ಇನ್ನೇನು? '' ಅಂದು ಮೀಟಿಂಗ್ ಮುಗಿಸಿದ್ದಳು ಸಾಗರಿಕಾ. ಅದನ್ನು ತನ್ನ ಅವಮಾನ ಎಂದೇ ಭಾವಿಸಿ ಹೆಡೆ ಮೆತ್ತಿಸಿಕೊಂಡಂಥ ನಾಗರ ಹಾವದು...

ಇಲ್ಲಿದ್ದ ಕನ್ನಡದವರ ಗ್ರೂಪ್ ಒಂದನ್ನು ಕಟ್ಟಿ ಒಂದು ಹಾಡು, ನಾಟಕ, ಜಾನಪದ, ಸಾಹಿತ್ಯ, ಪುಸ್ತಕ ಎಂದು ತಾವೆಲ್ಲ ಒಂದಿಷ್ಟು ಕಾರ್ಯಕ್ರಮ ಮಾಡಿದ್ದರಲ್ಲಿ ಇವಳಿಗ್ಯಾವ ದ್ರೋಹ ಆಗಿದೆ? ರೀಜನಲ್ ಡೈರೆಕ್ಟರ್ ಮೊದಲು ಮಾಡಿಕೊಂಡು ಇಡೀ ಆರು ಸೆಕ್ಷನ್ನುಗಳ ಆರು ನೂರು ಮಂದಿ ಬಂದು ಆನಂದಿಸಿ ವೆಲ್ ಡನ್ ಅಂದು ಹೋಗಿದ್ದಾರೆ.. ಅದು ನೆಕ್ಸಸ್ ಆಗಿಬಿಟ್ತಾ?

ಆಫೀಸ್ ಕೆಫೆಟೇರಿಯಕ್ಕೆ ಕೇಟರಿಂಗ್ ನವನು ಬಂಗಾಳಿಯೇ ಆಗಿರಬೇಕೆನ್ನುವ ಹಠಕ್ಕೆ ಬೇಡ ಅಂತ ಅಡ್ಡ ನಿಂತು ಅದಕ್ಕೆ ಬೇಡ ಅನ್ನಲ್ಲ, ಅದೂ ಇರಲಿ, ಕೆಫೆಟೇರಿಯದ ಇನ್ನೊಂದು ಭಾಗ ಆಗಿರಲಿ, ಆದರೆ ನಮ್ಮವರ ಅಪ್ಪಟ ರುಚಿ ಇರಲಿ, ಅದನ್ನು ಯಾಕೆ ಒದ್ದೋಡಿಸ್ತೀಯಾ ಅಂದಿದ್ದು ಅಪರಾಧವೇ?

ಇವಳ ಮತ್ತು ಇವಳಂಥ ಇನ್ನೂ ಕೆಲವು ಕನ್ನಡ ದ್ವೇಷಿಗರ ಅಸಹನೆಗೆ ತಾನು ಈ ನೆಕ್ಸಸ್ ನ ಪ್ರತಿರೂಪ ಅನಿಸ್ತಿದ್ದೇನೆಯೇ? ಪ್ರತಿನಿಧಿಯಾಗಿದ್ದೇನೆಯೇ? ಇದು ಚಟವಾಲ್ ಹೇಳುವಂತೆ ಒಂಟೆ ಮತ್ತು ಅರಬನ ಕತೆಯಾಗ್ತಿದೆಯೇ?

'ಅವಳು ಬಂಗಾಲಿ, ಇವನು ಪಂಜಾಬಿ, ಆಚೆ ಮಲೆಯಾಳಿ, ಇತ್ತ ಇವರು ತೆಲುಗು, ತಮಿಳರು...ನೀವು ಮರಾಠಿಗರು.. ಆ ಪರೇಶ್ ಭಯಂಕರ ಗುಜರಾತಿ.. ಅಪ್ಪೋ. ಎಲ್ಲ ಇಲ್ಲಿ ಬಂದು ಜಾಂಡಾ ಊರಿ ..ನಮ್ಮಲ್ಲೇ ಯಾಕಿಷ್ಟು ಇವರೆಲ್ರ ಹೀನತನ ನಡೆಯುತ್ತೆ? ನಮ್ಮನ್ನೇ ಕೀಳಾಗಿ ನೋಡೋಷ್ಟು ' ತನ್ನನ್ನು ಸದಾ ಕಾಡಿದ, ತಾನೇ ನೂರು ಬಾರಿ ಕೇಳಿಕೊಂಡಿದ್ದ ಈ ಪ್ರಶ್ನೆಯನ್ನೇ ಒಮ್ಮೆ ಮೋಹನ್ ಎದುರಲ್ಲಿ ಇಟ್ಟಿದ್ದ..''ಕನ್ನಡದವರ ಮೇಲೆ ಇವರಿಗೆಲ್ಲ ಈ ಅಸಹನೆ ಯಾಕೆ?''

''ಈ ಪ್ರಶ್ನೆಯನ್ನು ನಿಮಗ್ ನೀವೇ ಕೇಳ್ಕೊಬೇಕು ..'' ಮೋಹನ್ ಪಾಟಣ್ ಕರ್ ತನ್ನ ಮರಾಠಿತನವನ್ನು ಬಿಟ್ಟುಕೊಡಲಾರದವ.. '' ಯು ಸೀ. ಉದ್ಯೋಗ ಅನ್ನೋ ಅನಿವಾರ್ಯತೆ ಯಾರನ್ನಾದ್ರೂ ಬಿಟ್ಟಿದೆಯಾ? ನೀವು ಕನ್ನಡದವರೇ ಎಲ್ಲೆಲ್ಲಿಗೆ ಹೋಗಿಲ್ಲ ದುಡೀಲಿಕ್ಕೆ? ಅದೂ ಅಲ್ದೆ ನೀ ಹೇಳೋಷ್ಟೇನೂ ಪರಿಸ್ಥಿತಿ ಕೆಟ್ಟಿಲ್ಲ...''

ಮಧ್ಯದಲ್ಲೇ ಇವ ''ನಾವು ಎಲ್ಲಿ ಹೋದರೂ ಅಲ್ಲಿನವರ ಮೇಲೆ ನಮ್ಮ ಅಧಿಕಾರ ಸ್ಥಾಪಿಸಿ ಅವರ್ನ ಹೀನಾಯ ಮಾಡಿ ನಾವಲ್ಲಿ ತಿನ್ನೋ ಅನ್ನಕ್ಕೆ ದ್ರೋಹ ಬಗೆಯಲ್ಲ ತಿಳ್ಕೊ...ನಿಮ್ ಭಾಷೆ ಕಲಿಯಲ್ಲ ಅಂತ ಹಠ ಮಾಡಲ್ಲ, ಇಲ್ಲಿ ಬಂದಿರೋ - ಈಗ ನಿನ್ನನ್ನೂ ಸೇರಿಸ್ಕೊಂಡು- ಒಬ್ಬರಾದ್ರೂ ಕನ್ನಡ ಕಲೀತೀರಾ?'' ಖೊಳ್ಳನೇ ನಕ್ಕ ಮೋಹನ್, ''ನಿಮ್ಮಲ್ಲೇ ನೀವು ಕನ್ನಡ ಕಲಿಸ್ತೀರಾ ಮಕ್ಕಳಿಗೆ ಅಥ್ವಾ ಎದ್ದ ಕೂಡ್ಲೇ ಇಂಗ್ಲೀಷಾ? ಮೊದ್ಲು ಉತ್ತರ ಕೊಡಿದಕ್ಕೆ..'' ಮಿಕಿಮಿಕಿ ನೋಡಿದ ಪುನೀತ್ ನೋಟಕ್ಕೆ ಗಮನ ಕೊಡದೆ,

''ಅಲ್ಲ ಹಾಗೆ ಏನೋ ಒಂದು ಭಾಷೆ ಪ್ರಾಬ್ಲೆಮ್ ಎಲ್ಲಿಲ್ಲ ನೀನೆ ಹೇಳು... ಒಂದ್ ಮಾತು ಕೇಳಿಸ್ಕೊ. ಕೆಲವು ಸಮಸ್ಯೆಗಳ ಬುಡಕ್ಕೆ ಕೈ ಹಾಕ್ಬಾರ್ದು.. ಯಾಕಂದ್ರೆ ಅವಕ್ಕೆ ಪರಿಹಾರ ಸಿಗೋದ್ ಕಷ್ಟ.. ಅನ್ಲೆಸ್ ಅಂಡ್ ಆಂಟಿಲ್ ನೀವು ಬದ್ಲಾಗೋಕೆ ಪ್ರಯತ್ನ ಮಾಡದಿದ್ರೆ ಖಂಡಿತ ಸಾಧ್ಯನೇ ಇಲ್ಲ. ಯಾರು ಬಗ್ಗಿ ಬೆನ್ನು ಕೊಡ್ತಾರೋ ಅವ್ರೇ ತುಳಿಸಿಕೊಳ್ಳೋದು. ಅತಿಯಾಗಿ ಬಾಗಬೇಡಿ.. ಎಲ್ಲ ಸರಿಹೋಗುತ್ತೆ.. ನೋ. ಅದಕ್ಕೆ ಸಹನೆ ಅನ್ನೋ ಹೆಸರು ಕೊಡಬೇಡಿ..ನಮ್ಮ ಅನ್ನ, ನಮ್ಮ ನೀರು ಅನ್ನೋ ಹಠಕ್ಕೆ ಏನರ್ಥ ಇದೆ? ಇಲ್ಲಿ ಬಂದೋರು ನಿಮ್ಮನ್ನು ಗೌರವಿಸೋ ಹಾಗೆ ಮಾಡೋದು ನಿಮ್ಮ ಕೈಯಲ್ಲೇ ಇದೆ.. ನಿಮ್ಮನ್ನು ನೀವು ಗೌರವಿಸ್ಕೊಳ್ಳೋದನ್ನ ಕಲೀರಿ ಮೊದ್ಲು.. ಸ್ವಾಭಿಮಾನ ಏಟು ತಿಂದ್ರೂ ಎದ್ದು ಕೂರದೆ ಇರುವಂಥ ನಿಮ್ಮವರಿಗೆ ಯಾರೇನು ಮಾಡಕ್ಕಾಗುತ್ತೆ? ''

ತಲೆ ತಿರುಗಿತ್ತು.. ಅವನನ್ನು ಸರಿಯಾಗಿ ಖಂಡಿಸಲೂ ಆಗದೆ ಟೇಬಲ್ ಮೇಲಿನ ಫೋನನ್ನೇ ದಿಟ್ಟಿಸಿ ನೋಡ್ತಿದ್ದಾಗ ಮೋಹನ್ ಯಾವಾಗ ಎದ್ದು ಹೋದನೋ ಅರಿವಿಗೆ ಬರ್ಲಿಲ್ಲ.

************************

ಆರು ತಿಂಗಳ ಹಿಂದಿರ್ಬೇಕು.. ಒಟ್ಟು ಎಂಬತ್ತು ಜನಕ್ಕೆ ಮೂರು ದಿನಗಳ ಒಂದು ತರಬೇತಿ ಕಾರ್ಯಾಗಾರ ನಡೆಸಬೇಕಿತ್ತು. ಇಂಥ ತರಬೇತುಗಳನ್ನೂ ಕೊಡಲು ತನ್ನನ್ನೂ ಸೇರಿಸಿ ಇನ್ನೂ ಇಬ್ಬರು ಸಮರ್ಥ ಟ್ರೇನರ್ಗಳಿರುವಾಗ ಹೊರಗಿನಿಂದ ದುಬಾರಿ ಫೀಸು ಕೊಟ್ಟು ಟ್ರೇನರ್ ಗಳನ್ನು ಕರೆಸುವ ಪರಿಪಾಠ ಹೆಚ್ಚ್ ಹೆಚ್ಚಾಗಿದ್ದು ಸಾಗರಿಕಾ ಕಾಲದಲ್ಲಿ. ಅಂದರೆ ಈ ಮೊದಲು ಇರಲಿಲ್ಲವೆಂದರ್ಥವಲ್ಲ.. ಆದರೂ ಇಲ್ಲೇನೋ ಮಸಲತ್ತಿನ ವಾಸನೆ ಬಡಿಯದಿದ್ದೀತೆ? ಸಿಬಿಲ್ ಮತ್ತೆ ಸಾಗರಿಕ ಸೇರಿ ವ್ಯವಸ್ಥೆ ಮಾಡಿದ ಆ ಟ್ರೇನಿಂಗ್ ವೆಚ್ಚದಲ್ಲಿ ಅವರು ಹೊಡೆದ ಲಕ್ಷಗಳ ಸುದ್ದಿ ಮಂದಲಿಗೆಯಡಿಯ ನೀರಿನ ಹಾಗೆ ತಮ್ಮಲ್ಲಿ ಕೆಲವರಿಗೆ ಹರಿದು ಬಂದು ಅದನ್ನೆಲ್ಲ ಹೆಡ್ಡಾಫೀಸಿಗೆ 'ನೀನು ತಿಳಿಸು ನೀನು...ನೀನು' ಅನ್ನುತ್ತಾ ತಮ್ಮ ಭುಜ ಕೊಡವಿ ಪಾರಾಗಿ ಇನ್ನೊಬ್ಬರಿಗೆ ದಾಟಿಸಿ ಕೊನೆಗೆಲ್ಲ ಅಲ್ಲೇ ಸತ್ತು ಹೋದ ವಾಸ್ತವ ಅದು...

ಇನ್ನೂ ಒಳಗಿನ ಕತೆಯೆಂದರೆ ಈ ಮತ್ತು ಇಂಥ ಭ್ರಷ್ಟಾಚಾರಗಳ ಸಂಗತಿ ಸ್ಟಾಕ್ ಹೋಮಿನ ಕೋರ್ ಮುಖಂಡರಿಗೆ ಗೊತ್ತಿಲ್ಲದ್ದೇನಲ್ಲ..ಗೊತ್ತಿದ್ದೂ? ಅದೇ ಪ್ರಶ್ನೆ. ಉತ್ತರವಾಗಿ ಎದುರು ಬಂದು ನಿಲ್ಲುತ್ತೆ ಟಾಮ್- ಥಾಮಸ್ ನ ಗುಳ್ಳೆನರಿಯಂಥ ಮುಖ .

''ಡಿಪಾರ್ಟ್ಮೆಂಟಿನ ಮುಖ್ಯಸ್ಥನಾಗಿ ಹದಿನಾರು ವರ್ಷಕ್ಕೂ ಹೆಚ್ಚು ಗಟ್ಟಿ ತಳಪಾಯ ಹೆಟ್ಟಿ ಕೂತಿದ್ದಾನಲ್ಲ... ಅದಕ್ಕಿಂತ ಇನ್ನೇನು ಬೇಕು ಈ ಸಾಗರಿಕ ಅಂಥ ಪ್ಯಾರಸೈಟ್ ಗಳು ಹಬ್ಬಿ ಬೆಳೆಯೋಕೆ...''

ಇದು ಮೋಹನ್ ಹೇಳಿದ ಸುದ್ದಿ. ಮ್ಯಾನೇಜರ್ ಆಗಿ, ಡಿಪಾರ್ಟ್ಮೆಂಟ್ ಹೆಡ್ ಆಗಿ ಬಂದ ದಿನದಿಂದ ತನ್ನ ಪರಿಚಿತ ಬಂಗಾಳಿಗಳನ್ನು ಮಾತ್ರ ಕಂಪನಿಯ ಖಾಲಿ ಹುದ್ದೆಗಳಿಗಾಗಿ ಸಂದರ್ಶನಗಳಲ್ಲಿ ಆರಿಸಿ ತಂದು ತಂದು ದೊಡ್ಡದೊಂದು ತಂಡವನ್ನೇ ಕಟ್ಟಿಕೊಂಡ ಸಾಗರಿಕಾ ತನ್ನ ಅವರಿಂದ ಬಹುಶ: ಇಷ್ಟಿಷ್ಟೇ ಭರ್ತಿಯಾಗುತ್ತಿದ್ದ ಖಜಾನೆಯನ್ನು ಹೆಬ್ಬಾವಿನ ಎಚ್ಚರಿಕೆಯಿಂದ ಕಾಯ್ದುಕೊಂಡಿದ್ದು ಯಾರಿಗೂ ಸರಿಯಾಗಿ ಅಥವಾ ಪೂರ್ಣ ವಿವರ ತಿಳಿಯದ ಒಳಗಿನ ಸತ್ಯ..

'ಟಾಮಿ ಇರೋತನಕ ಇವಳ ಆಟ' ಅಂತ ತಮ್ಮನ್ನೇ ಸಮಾಧಾನ ಪಡಿಸಿಕೊಳ್ಳುತ್ತಿದ್ದವರಿಗೆ ಥಾಮಸ್ ಅಲ್ಲೇ ಸ್ಟಾಕ್ ಹೋಮಿನಲ್ಲೇ ಇನ್ನೂ ಮೇಲಿನ ಜಾಗಕ್ಕೆ ಬಡ್ತಿ ಗಿಟ್ಟಿಸಿಕೊಂಡು ಇಡೀ ರೀಜನ್ ತನ್ನ ಬುಡಕ್ಕೆ ಹಾಕಿಕೊಂಡ ಸುದ್ದಿ ಮುಖಕ್ಕೆ ತಪರಾಕಿಯಂತೆ ರಾಚಿ ಕಾಫೀ ಟೇಬಲ್ಲಿನ ಗುಸುಗುಸು ಅಕ್ಷರಶ: ಅಳುವಿನ ಮಟ್ಟಕ್ಕೆ ಇಳಿದಿದ್ದು..

ಆಗೀಗ ಗಾಢ ವಿಷಾದದ ಮುಸ್ಸಂಜೆಗಳ ಸಮಯ ಅವನೊಂದಿಗೆ ಕಳೆವ ಪಬ್ಬಿನ ಮಂದ ಬೆಳಕಿನಲ್ಲಿ ಗ್ಲಾಸು ತುಂಬಿ ಖಾಲಿಯಾದಂತೆ ಅದರ ಕೆಂಬಣ್ಣ ಒಡಲೊಳಗಿಳಿದು ನಾಲಿಗೆಯ ಮೂಲಕ ಹೊರಚೆಲ್ಲುವ ಕಾರ್ಪೊರೇಟ್ ಜಗತ್ತಿನ ಕಥನಗಳಲ್ಲಿ ಸಾಗರಿಕಾ ಒಂದು ಪುಟ್ಟ ಮೀನಷ್ಟೇ!

''ತಿಮಿಂಗಲಗಳಿವೆ ಇಲ್ಲಿ.'. ''ಮೋಹನ್ ಆಗೀಗ ತನ್ನ ಸಂಕಟ ಬಿಚ್ಚಿಕೊಳ್ಳುತ್ತಿದ್ದ. ''ಈ ಸಾಗರಿ ಇಲ್ಲಿಗೆ ಬಂದಾಗ ನಾನಾಗಲೇ ಸೇರಿ ಆರು ವರ್ಷ ಆಗಿತ್ತು ಗೊತ್ತಾ?''

ಇವಳದೆಷ್ಟು ಈಗ ಲೆಕ್ಕ.. ಬಾರಿನ ಮಂದ ಬೆಳಕಿನ ಕಿರು ಝಳಕಿನ ಮಿಣ್ಣೆನ್ನುವ ಹಸಿ ಪದರಗಳ ಅನಾವರಣ..'ಹೂಂ..ಐದು ಸಮ್ಮರ್ ಕಳೆದಿದ್ದಾಳೆ ಇಲ್ಲಿ..ಹಾ.. ಹಾ.. ಸಮ್ಮರ್ ಎಲ್ಲಿ ಬಂತು ಎಲ್ಲಾ ಬೇಸಿಗೆಗಳನ್ನೂ ಟಾಮ್ ಗೆ ಮೀಸಲಾಗಿಟ್ಟಿರ್ತಿದ್ಳು ಪಿಶಾಚಿ.. ಇವಳಿಂದಾಗಿ ನನ್ನ ಪ್ರಮೋಷನ್ ಗೆ ಕಲ್ಲು ಬಿದ್ದಿದೆ ಗೊತ್ತಾ? ಇವಳ ಆಟ ನಡೀತಿರೋದಕ್ಕೆ ಕಾರಣ ಅವನೇ..ಬಾಸ್ಟರ್ಡ್ಸ್..'' ಫೂತ್ಕರಿಸಿ ಒಂದೆ ಗುಟುಕಿಗೆ ಉಳಿದದ್ದನ್ನೆಲ್ಲ ಖಾಲಿ ಮಾಡಿ ಎದ್ದಿದ್ದ ಮೋಹನ್.

''ಡಿಸ್ ಗಸ್ಟಿಂಗ್ ''ತಪ್ಪಿ ನುಡಿದಂತಿತ್ತು ತಾನು. ಮೋಹನ್ ನಕ್ಕ. ''ಅದೆಂಥ ಶಬ್ದ? ಅದಕ್ಕೇನಾದರೂ ಅರ್ಥ ಇದೆ ಅನ್ಕೊಂಡ್ಯ? ಪ್ರಾಮಾಣಿಕತೆ ? ಅದಕ್ಕೂ ಅರ್ಥ ಇಲ್ಲ ಪುನೀ.. ಇಲ್ಲಾಂದ್ರೆ ಎರಡೂವರೆ ಕೋಟಿ ಬೆಲೆಯ ಐದು ಬೆಡ್ರೂಮಿನ ಬಂಗ್ಲೆ ಖರೀದಿ ಇವಳಿಗೆ ಸಾಧ್ಯ ಅನ್ಕೊಂಡ್ಯಾ? ''

ಎದೆ ಧಸಕ್ಕೆಂದಿತ್ತು.. ಎರಡೂವರೆ ಕೋಟಿ ಹಣದ ಮನೆ...

ಎಲ್ಲ ಸೇರಿ ನಲವತ್ತು ನಲವತ್ತೈದು ಆಗಿದ್ದೀತು ಸಾಗರಿಕಾಗೆ.. ಕಲ್ಕತ್ತೆಯಿಂದ ಕೆಲಸಕ್ಕಾಗಿ ಅಲೆದಲೆದು ಕೊನೆಗೊಮ್ಮೆ ಬೆಂಗಳೂರು ಕಾಲಿಡಲಿಕ್ಕೆ ಜಾಗ ಕೊಟ್ಟು ಇಲ್ಲಿಗೆ ಬಂದಾಗ ಹೊಸದರಲ್ಲಿ ತನ್ನ ಅಪ್ಪ ಅಮ್ಮನಿಗೆ ಒಂದಿಪ್ಪತ್ತು ಸಾವಿರ ಕಳಿಸಲೂ ದುಡ್ಡಿಲ್ಲದೆ ಒದ್ದಾಡಬೇಕಾಗಿತ್ತು. ಇದು ಅವಳೇ ಒಮ್ಮೆ ತನ್ನಲ್ಲಿ ಹೇಳಿಕೊಂಡ ನಾಸ್ಟಾಲ್ಜಿಯಾ.. ನೋಡ ನೋಡುವಷ್ಟರಲ್ಲಿ ಕನಸುಗಳ ಸಾಕಾರ.. ಸರಸರನೆ ಏರಬಯಸಿದ ಏಣಿಗಳ ಹತ್ತಿ ನಿಂತು ನಕ್ಕ ನಗೆ! ಅವಳ ಗಂಡ ಬ್ಯಾನರ್ಜಿ ಕಾಲೇಜೊಂದರಲ್ಲಿ ಬಂಗಾಳಿ ಉಪನ್ಯಾಸಕ ಅಂದರೆ ಎಷ್ಟಿದ್ದೀತು ಅವನ ಸಂಬಳ? ಎರಡೂವರೆ ಕೋಟಿಯ ಮನೆ ಕೊಳ್ಳುವಷ್ಟು?

ಅದೇ ಪಬ್ಬಿನ ಮಬ್ಬಿನ ಮಂದ್ರದಲ್ಲಿ ಅಪ್ಪನ ಬಗ್ಗೆ ಎದೆಬಿಚ್ಚಿ ಹರವಿದ್ದು ತಾನು.. ಸೊಂಟದಿಂದ ಕೆಳಭಾಗ ದಿನದಿನಕ್ಕೆ ಕೊಳೆಯುತ್ತಿದೆ.. ಎಲ್ಲೀ ವರೆಗೆ ಕತ್ತರಿಸಿ ತಗೀಬಹುದು ದೇಹನ? ಅದಕ್ಕಿಂತ ಸಾವು ಬರಲಿ ಅಂತ ಹಲುಬುವ ಅಪ್ಪನ ಸಾವಿಗಾಗಿ ತಾನೂ ಹಂಬಲಿಸಿ ಒಂದೊಮ್ಮೆ ಇದೆಲ್ಲ ಮುಗಿಯಬಾರದೇ ಅನಿಸಿ ಮರುಕ್ಷಣ ತಪ್ಪಿತಸ್ಥ ಭಾವ ಕುದ್ದು..

'ಯೂಥನೇಶಿಯಾದ ಅರ್ಜಿ ಏನಾದೀತೋ ಅನ್ನುವಾಗ ಮನಸ್ಸಿಡೀ ತಪ್ಪಿತಸ್ಥ ಸಂಕಟ.' ಅದು ಅಪ್ಪನನ್ನುಳಿಸಿಕೊಳ್ಳಲಾಗದ ಅಸಹಾಯಕತೆಯೇ ದಯಾ ಮರಣಕ್ಕೆ ಅರ್ಜಿಗೆ ಉತ್ತರಿಸದೆ ಕೂತ ಕೋರ್ಟಿನ ಮೇಲಿನ ಆಕ್ರೋಶವೋ ಒಂದೂ ಅರ್ಥವಾಗದ ಅಯೋಮಯತೆ..ಆಫೀಸ್ ಬಿಟ್ಟು ಹೊರಡುವಾಗ ದಿನಾ ಸಂಜೆ ಅಪ್ಪನನ್ನೊಮ್ಮೆ ನೋಡಿಕೊಂಡೇ ಮನೆಗೆ ಮರಳುವ ಅಭ್ಯಾಸ. ಮಾತೇ ನಿಂತಿರುವ ಅವನ ಕಣ್ಣುಗಳಲ್ಲಿ ಪ್ರತಿರಾತ್ರಿ ಅದೇ ಪ್ರಶ್ನೆ..

ಉತ್ತರ ಇಲ್ಲದ, ಕೊಡಲಾಗದ ಪ್ರಶ್ನೆ.

''ಸಂಜಯಗೆ ಬರಲಿಕ್ಕಾಗಲಿಕ್ಕಿಲ್ಲ, ಅವನ ಪ್ರಾಜೆಕ್ಟ್ ಉದ್ದಕ್ಕೂ ಎಳಕೊಂಡೇ ಹೋಗ್ತಾ ಇದೆ..' ಅನ್ನುತ್ತ ಶ್ರೀನಿಧಿ'' ''ನಾನೇ ಒಂದಾರು ತಿಂಗಳು ಬಂದು ಇರೋಣ ಅಪ್ಪನ ಹತ್ತಿರ ಅಂದುಕೊಂಡಿದ್ದೀನಿ'' ಅಂತ ಫೋನಿಟ್ಟಿದ್ದಳು ನಿನ್ನೆ.

ಅದೂ ಸರಿ ಅನಿಸಿತ್ತು. ಶ್ರೀ ಬಂದು ಇದ್ದಲ್ಲಿ ಆಫೀಸಿನ ಹೇಳಭಾರದ ಕೆಲಸದ ಹೊರೆ- ಅದರಲ್ಲೂ ದಡ್ಡಿ ಸಿಬಿಲ್ ಗೆ ಸಹಾಯ ಮಾಡಬೇಕಾಗಿದ್ದದ್ದು ಸೇರಿ- ತನ್ನ ಕುತ್ತಿಗೆಯ ಮೇಲೇ ಕುಣೀತಾ ಇರೋ ಟೆನ್ಷನ್ ಒಂದಿಷ್ಟು ಕಡಿಮೆ ಆದೀತಲ್ಲ ಅನ್ನಿಸಿ ಅವತ್ತು ತನ್ನ ಕ್ಯೂಬಿಕಲ್ ಹೊಕ್ಕು ಕಂಪ್ಯೂಟರಿನಲ್ಲಿ ಕಣ್ಣು ಕೀಲಿಸುವಾಗ ಸಾಗರಿಕಾ ಫೋನಿಸಿ' ಬಾ ನನ್ನ ಚೇಂಬರಿಗೆ ಪುನೀತ್'' ಅಂದಿದ್ಲು.

ಹೋಗಿ ಒಳಗೆ ಕಾಲಿಟ್ಟರೆ ಹಿಡಿಂಬಿಯ ಮೋರೆ ಉರಿ ಉರಿ ಗಂಟು ಗಂಟು.. ಏನಾಯ್ತು? ?

''ಈ ಫೈಲ್ ನೀನೇ ಆಲ್ವಾ ಫಾರ್ವರ್ಡ್ ಮಾಡಿದ್ದು?'' ಆ ತೀಕ್ಷ್ಣ ಚುರುಕು ಕೊಂಚ ಬೆಚ್ಚಸಿದ್ದರೂ ಅವಳು ತಿರುಗಿಸಿದ ಲ್ಯಾಪ್ ಟಾಪ್ ತನ್ನಿಂದ ಅಂದರೆ ತನ್ನದೇ ಮೇಲ್ ಐಡಿಯಿಂದ ಇನ್ ಶೂರೆನ್ಸ್ ಕಂಪನಿಗೆ ಹೋಗಿದ್ದ ದಾಖಲೆಯೊoದನ್ನು ಬಿಚ್ಚಿ ಹರವಿತ್ತು.. ನೋಡಿದರೆ ಎದೆ ಧಸಕ್ಕೆಂದಿತು.. ಮುಖೋಪಾ ಸರಜೂ ಸಾಗರಿಯ ಅತ್ಯಾಪ್ತ ಭಂಟ. ಅವನ ಇನ್ಶುರನ್ಸ್ ಲೆಕ್ಕ ಹಾಕಿ ದುಡ್ಡು ಒದಗಿಸಿಕೊಡುಲು ಹೊರಗುತ್ತಿಗೆ ತೊಗೊಂಡ ಕಂಪನಿಯ ಬಳಿಗೆ ಅವನದಲ್ಲದೆ ಇಡೀ ಸೆಕ್ಷನ್ನಿನ ಎಲ್ಲಾ ಉದ್ಯೋಗಿಗಳ ಸ್ಯಾಲರಿಯ ಸಂಪೂರ್ಣ ವಿವರಗಳ ಟಾಪ್ ಸೀಕ್ರೆಟ್ ಫೈಲು ಅದು ಹೇಗೋ ಲಗತ್ತಿಸಿಕೊಂಡು ಹೋಗಿಬಿಟ್ಟಿತ್ತು!..ಹೇಗೆ..ಯಾವಾಗ...ಯಾಕೆ? ಇದು ತನ್ನ ಕೆಲಸವೇ ಅಲ್ಲದಿರುವಾಗ ತನ್ನ ಐ ಡಿಯಿಂದ ಹೋಯಿತಾದರೂ ಹೇಗೆ?

ತಕ್ಷಣ ನೆನಪು, ಸಿಬಿಲ್ ಕೆಲಸಕ್ಕೆ ತನ್ನ ಅನುನಯಿಸಿ ಒಪ್ಪಿಸಿ ಸಾಗರಿ ದುಡಿಸಿದಳಲ್ಲ ಆ ಸಮಯದ್ದಿರಬಹುದು. ಇರಬಹುದೇನು? ಅದೇ.. ರಾತ್ರಿ ಮನೆಗೆ ಹೊರಡುವ ಆತಂಕ, ಅಪ್ಪನ ಬಳಿ ವಾರ ಇಡೀ ಹೋಗಲಾಗಿರಲಿಲ್ಲದ ತಪ್ಪಿತಸ್ಥ ನೋವಿನ ತಾಕಲಾಟದಲ್ಲಿ ತರಾತುರಿಯಲ್ಲಿ ಕೆಲಸ ಮುಗಿಸಿ ಹೊರಬಿದ್ದ ಆ ದಿನ! ಸಿಬಿಲ್ ಕಳಿಸಿದ ಫೈಲಿಗೆ ಅಂಟಿಕೊಡಿದ್ದ ಇನ್ನೊಂದು ಫೈಲನ್ನು ಅದು ಏನು ಎಂದೂ ಚೆಕ್ ಮಾಡದೆ ತನ್ನನ್ನೇ ಅಂಟಿಸಿಕೊಂಡು ಹೋಗಿಬಿಟ್ಟಿತ್ತು.. ಅದಂತೂ ಮೂರ್ಖ ಹುಡುಗಿ, ತಪ್ಪು ಮಾಡುವುದರಲ್ಲಿ ಅವಳನ್ನು ಮೀರಿಸಿದವರಿಲ್ಲ, ತಾನೇಕೆ ಗಮನಿಸಲಿಲ್ಲ?

''ಡು ಯು ನೋ ದಿ ಇಂಪ್ಯಾಕ್ಟ್ ಆಫ್ ದಿಸ್ ಬ್ಲoಡರ್'?' ಕಿರುಚಿದ್ದಳು ಸಾಗರಿ. ''ಸ್ಟಾಕ್ ಹೋಮಿನಲ್ಲಿ ಇದಾಗಲೇ ಕೋರ್ ಮೀಟಿಂಗ್ ಟೇಬಲ್ಲಿಗೆ ಬಂದಿದೆ.. ಏನು ಕ್ರಮ ತೊಗೊಳ್ತಾರೋ ಗೊತ್ತೇ ನಿನಗೆ? ವೈ ವೇರ್ ಯೂ ನಾಟ್ ಕೇರ್ ಫುಲ್?''

''ಸಿಬಿಲ್ ನ ಕೆಲಸ..' ಮಾತು ಮುಗಿಯುವ ಮೊದಲೇ ''ಲುಕ್ ಪುನೀತ್ ಇಲ್ಲಿ ಮೇಲ್ ಕಳಿಸಿದೋನು ನೀನು. ಯೂ ವಿಲ್ ಬಿ ಕಂಪ್ಲೇಟ್ಲಿ ಹೆಲ್ಡ್ ರಿಸ್ಪಾನ್ಸಿಬಲ್.. ನಾನೇನೂ ಮಾಡಲಾರೆ. ಅವರು ಸುಲಭಕ್ಕೆ ನಿನ್ನ ಬಿಟ್ಟು ಬಿಡ್ತಾರೆ ಅಂತ ತಿಳಿದಿದ್ದೀಯ ''

ಹೌದೇ? ಇದು ಬಹು ದೊಡ್ಡ ಪ್ರಮಾದ ಅನ್ನೋದು ನಿಜ. ಆದರೆ ಸಾಗರಿಗೆ ಮನಸ್ಸಿದ್ದರೆ ಇದನ್ನು ಯಾವುದಾದರೊಂದು ಬಗೆಯಲ್ಲಿ ಸರಿಪಡಿಸುವುದು ಖಂಡಿತ ಸಾಧ್ಯ.. ನಿಜ, ಆದರೆ ಮನಸ್ಸು? ಅದೇ ಪ್ರಶ್ನೆ.

''ನೀನು ರಿಸೈನ್ ಮಾಡಿಬಿಡು ಪುನೀತ್. ಇದು ಇಷ್ಟಕ್ಕೆ ನಿಲ್ಲಲ್ಲ.. ಇಫ್ ಯೂ ರಿಸೈನ್ ಮತ್ತೆ ಹೇಗಾದ್ರೂ ನಿಭಾಯಿಸೋಣ.. ಇಲ್ಲ ಅಂದ್ರೆ ನನಗ್ಗೊತ್ತಿಲ್ಲ ನಿನ್ನ ಕರ್ಮ '' ಹೊಟ್ಟೆಯೊಳಗಿನ ಹುನ್ನಾರದ ಸುಳಿ ಹೊರಬಿದ್ದಿತ್ತು. ಈಗಿನ ಇಡೀ ಪ್ರಕರಣ ಇವರಿಬ್ಬರ ಮಾಸ್ಟರ್ ಪ್ಲಾನ್ ಪ್ರಕಾರ ನಡೆದಿರೋ ಸಾಧ್ಯತೆಯ ಸುಳಿವು ಬೆನ್ನ ಹುರಿಯಲ್ಲಿ ಸರಕ್ಕನೆ ಚಳಿ ತುಂಬಿತ್ತು. ತನಗೆ ಆಯ್ಕೆಯ ಅವಕಾಶವನ್ನೇ ಇಟ್ಟಿಲ್ಲ ಇವಳು. ಅರ್ಥಾತ್ ತನ್ನ ಹೊರದೂಡಿ ಅಲ್ಲಿ ಇನ್ನೊಬ್ಬ ಬಂಗಾಳಿಯನ್ನು ತಂದಿಕ್ಕುವ ಹುನ್ನಾರ! ಅಥವಾ ಯಾರಿಗ್ಗೊತ್ತು ಇನ್ನಾವ ಬಕ್ರಾ ಇವಳ ತಾಳಕ್ಕೆ ಕುಣಿಯಲು ಕಾಲು ಚಾಚಿ ನಿಂತಿದ್ದಾನೋ? ಒಂದೇಟಿಗೆ ಎರಡು ಹಕ್ಕಿ ಲೆಕ್ಕ ಇವಳದ್ದೇ?

ತಲೆ ಧಿಮ್ ಅನ್ನುವ ಹೊತ್ತಿನಲ್ಲಿ ಈ ಪ್ರಹಾರಕ್ಕೆ ತಾ ಕನ್ನಡದವನೆಂಬೊಂದೇ ಕಾರಣವೇ ಅಥವಾ ಇನ್ನೇನಾದರೂ ಇದ್ದೀತೆ..ಅನ್ನುವ ಆಲೋಚನೆ ಮಿದುಳಿಡೀ ಗಿರಕಿ ಹೊಡೆಯುತ್ತ ತಪ್ಪಿದ ತಾಳಕ್ಕೆ ತಾನೆಲ್ಲಿ ಬಲಿಯಾದೆನೆನ್ನುವ ಅಸ್ಪಷ್ಟ ಕಾರಣಗಳ ಸಾಧ್ಯತೆಗಳು ಸುಳಿದೂ ಸುಳಿಯದಂತೆ ತಾಕಲಾಡಿಸುತ್ತ ಎದುರಿನ ಹಿಡಂಬಿ ನಿಜಕ್ಕೂ ರಾಕ್ಷಸಿಯಾಗಿ ಕೈಯೊಳಗೆ ಭರ್ಚಿ ಹಿಡಿದು ಅಟ್ಟಿಸಿಕೊಂಡು ಬಂದ ಹಾಗೆ ಅಲ್ಲಿಂದ ಬಹು ದೂರ ಓಡಬೇಕನಿಸಿ ..ಎದ್ದು ನಿಲ್ಲಲು ಹೋಗಿ ಅಲ್ಲೇ ಕುರ್ಚಿಯೊಳಗೆ ಕುಕ್ಕರಿಸಿದ.

''ರಿಸೈನ್ ಮಾಡು, ರಿಸೈನ್ ಮಾಡು...'' ಕಿವಿಯೊಳಗೆ ತಮಟೆ ಹೊಡೀತಿತ್ತು.

*********************************************

ಸಂಜೆ ಮೋಹನನೆದುರು ಕೂತಾಗ ಗ್ಲಾಸು ತುಂಬಿದ ಜಿನ್ನಿನ ಕೆಂಪು ದ್ರವದೊಳಗೆ ಕಲಸಿಕೊಂಡು ಎದೆಯೊಳಗಿನ ಸಂಕಟವನ್ನೆಲ್ಲ ಕಾರಿದ್ದ.

'' ನಿನ್ನ ಸಾಯಿಸಲಿಕ್ಕೆ ಗ್ರೌಂಡ್ ರೆಡಿ ಮಾಡ್ಕೊಂಡಿದ್ದಾಳನ್ನು! ಹಾಂ.. ಕಳ್ಳೇ ಪುರಿ ತಿಂದಷ್ಟು ಸುಲಭ ಅಂದುಕೊಂಡಳೋ?'' ಒಂದೊಂದು ಮಾತೂ ಲಕ್ಷ್ಯವಿಟ್ಟು ಕೇಳಿ ಕನ್ನಡಕದ ತನ್ನ ಕೊಂಚ ಹಸುರು ಬಣ್ಣದ ಕಣ್ಣುಗಳನ್ನು ಕಿರಿದಾಗಿಸುತ್ತ ಮೋಹನ್ ಕೇಳಿದ. '' ಈಗ ನೀನೇನು ಯುದ್ಧಕ್ಕೆ ತಯಾರೋ ಅಥವಾ ಅವಳು ಕೊಡ್ತಿರೋ ಮರ್ಸಿ ಕಿಲ್ಲಿಂಗ್ ಒಪ್ಪಿಕೊಂಡು ನಿನ್ನ ಪ್ರಾಣ ಉಳಿಸಿಕೊಂಡು ಹೊರಗೆ ಹೋಗಿ ಬದುಕ್ತೀಯೋ?'' ಮರುಕ್ಷಣ ಪುನೀತನ ಅಪ್ಪನ ನೆನಪು ಸರಕ್ಕೆಂದು ಉಕ್ಕಿ ಬಂದು ತನ್ನ ಆ ಶಬ್ದ ಮಾಡಿರಬಹುದಾದ ಪರಿಣಾಮದ ಬಗ್ಗೆ ತಾನೇ ಕೊಂಚ ಅಳುಕಿ ತಪ್ಪಿತಸ್ಥನಂತೆ,

''ಇದರ ಹಿಂದಿನ ಪೂರಾ ಕಾರಣ ಕಂಡು ಹಿಡಿಯೋದು ಕಷ್ಟ ಪುನೀತ್.ಅವಳು ಇಷ್ಟು ಹಠಕ್ಕೆ ಬೀಳಲಿಕ್ಕೆ ನಿನ್ನ ಭಾಷೆ ಅಥವಾ ನಿನ್ನ ಹುಟ್ಟು..ಊಂ ಹೂಂ ಇರಲಿಕ್ಕಿಲ್ಲ. ಅವರಿಬ್ಬರೂ ಇಷ್ಟು ದುಡ್ಡು ಹೊಡೀತಿರೋ ಬಗ್ಗೆ ಬಗ್ಗೆ ನೀ ಯಾರಿಗಾದರೂ ರಿಪೋರ್ಟ್ ಮಾಡಿದ್ದೀಯಾ? ಯಾರಿಗಾದ್ರೂ ಹೇಳಿದ್ದ್ಯಾ?''

ಫಕ್ಕನೆ ನೆನಪು ತಿರುಗಿ ಶಿಯಾ ಬಂದ ಸಮಯಕ್ಕೆ ಹೋಗಿ, ಅವಳ ಜೊತೆ ಮಾತಾಡುವ ಭರದಲ್ಲಿ ಟ್ರೇನಿಂಗಿನ ನಿಜವಾದ ವೆಚ್ಚ, ಸಾಗರಿ ಸಿಬಿಲ್ ಹಾಕಿ ಕೊಟ್ಟಿದ್ದ ಬಿಲ್ಲು ಎಲ್ಲ ತಾನು ಸಹಜವಾಗಿ ಮಾತಾಡಿದ್ದು, ಶಿಯಾ ಕೆಲವು ದಾಖಲೆಗಳನ್ನೆಲ್ಲ ತಿರುವಿ ಹಾಕಿ ಕೆರಳಿ ಹುಬ್ಬು ಗಂಟಿಟ್ಟು ಮುಖ ಬಿಗಿದು... ಅಯ್ಯೋ! ಇಲ್ಲಿದೆ ಕಾರಣ.

'' ಶಿಯಾ ಎನಕ್ವಯಿರಿಗೆ ಬರೆಧಾಕಿ ಅದರಿಂದ ಉಳ್ಕೊಳ್ಳಲಿಕ್ಕೆ ಇವಳು ಏನೆಲ್ಲಾ ತಿಪ್ಪರಲಾಗ ಹಾಕಿದ್ಲು ಅನ್ನೋ ಒಂದು ಉತ್ತರಾರ್ಧ ಗೊತ್ತೇ ನಿನಗೆ?'' ಕೊಂಚ ತಡೆದ ಮೋಹನ್, ' ಆದರೆ ನಿನ್ನಿಂದ ಈ ಸಂಗತಿ ಮೇಲೆ ಹೋಗಿದ್ದು ತಿಳಿದಿರಲಿಲ್ಲ ನನಗೆ.' ವಿಚಿತ್ರ ಅಂದರೆ ಎಮ್ಮೆನ್ಸಿಗಳಲ್ಲಿ ಎಲ್ಲವೂ ಯಾರಿಗೂ ಪೂರ್ಣ ಗೊತ್ತಿರಲ್ಲ. ಕೆಲವು ಕೆಲವರಿಗಷ್ಟೇ ಗೊತ್ತಿರುವ ಚಕ್ರವ್ಯೂಹ..

ಮೋಹನ್ ಮಾತು ವ್ಯಗ್ರಗೊಳಿಸಿತ್ತು. ತಾನೆಷ್ಟು ಅಮಾಯಕ..ಬೆನ್ನ ಹಿಂದೆ ಏನೆಲ್ಲಾ ನಡೆಯುತ್ತೆ. ಶಿಯಾ ಈ ಬಗ್ಗೆ ನನಗೇನೂ ಸೂಚನೆ ಕೊಟ್ಟಿಲ್ಲ ಅಂದರೆ.. ಯಾವುದೊ ಸುಳಿಯೊಳಗೆ ತನ್ನ ಕಾಲು ಸಹ ಸಿಕ್ಕಿರುವ ಸಾಧ್ಯತೆ? ವಿಚಾರಣೆ ಶುರು ಆದರೆ ಹೇಗೆ ಉಳ್ಕೋತೀನಿ? ಹಿಡಿಂಬಿಗಿರುವಂತೆ ತನಗೂ ರಕ್ಶಿಸಿ ಉಳಿಸಿಕೊಳ್ಳಲಿಕ್ಕೆ ಯಾರಾದರೂ ಶುಗರ್ ಡ್ಯಾಡಿ ಇರಬಾರದಿತ್ತೇ ಸ್ವೀಡನ್ನಿನಲ್ಲಿ..ಅನಿಸಿ ಹಿಂದೆಯೇ ನಗು ಚಿಮ್ಮಿ.ಹಾಗೇನಾದ್ರೂ ಇದ್ದಿದ್ರೆ ತಾನೂ ಅವನೂ ಹ..ಹಾ.ಹಾ..

'' ಯಾಕೆ ನಗ್ತೀಯ..ನಗೋಂಥಾದ್ದೆನೀಗ?.''

ಮೋಹನ್ ಗುರಾಯಿಸಿದ್ದಕ್ಕೆ ಮತ್ತೆ ಮರಳಿ 'ಏನೋ ನೆನಪಾಯ್ತು'' ಅಂದು ''ಇದೆಲ್ಲ ಕಿರಿಕಿರಿ ಜೀವ ತಿಂದು ಹಾಕುತ್ತೆ..ಲೆಟ್ ಮೀ ಗೆಟ್ ಔಟ್ ಆಫ್ ಹೀಯರ್..'' ಎಲ್ಲಾದ್ರೂ ಬೇರೆ ಕಡೆ ಹೋಗಿ ನೆಮ್ಮದಿಯಾಗಿರ್ತೀನಿ.. ಅಪ್ಪನ ಕಂಡೀಷನ್ ನೋಡಲೋ ಇಲ್ಲಿ ಪ್ರಾಣ ಕಳ್ಕೊಳ್ಳಲೋ ಥೋ..ಎಂಥಾ ಕೊಚ್ಚೆ ಈ ಕಾರ್ಪೊರೇಟ್ ಜಗತ್ತು.. ''

ಮೋಹನನ ಕಣ್ಣುಗಳಲ್ಲಿ ಮರುಕದ, ನಿನ್ನಂಥ ಮೆದುಗರ ಜಾಗ ಅಲ್ಲ ಇದು ಅಂದನೆ?

ರಾತ್ರಿ ಜಾರುತ್ತ ಹೋಗಿ ಹಗಲಿನ ಮಡಿಲಿಗೆ ಬಿತ್ತು. ಎರಡು ವಾರದ ವಿಚಿತ್ರ ಮೌನದ ಪರದೆಯಡಿಯಲ್ಲಿ ಮುಸುಕು ಹಾಕಿಕೊಂಡ ಮೂರ್ತಿಯಂತೆ.. ಎಲ್ಲೋ ಏನೋ ಉತ್ಪಾತವೊಂದರ ತಯಾರಿ, ಭೂಕಂಪದ ಮೊದಲಿನ ಸ್ತಬ್ಧತೆಯ ಸುಳಿವು. ಭೂಮಿ ಅಲುಗಿಲ್ಲ ಆದರೆ ಕಂಪನ ಅನುಭವವಾಗ್ತಿರೋದು ಕೇವಲ ತನಗಾ? ಹನ್ನೆರಡು ಇಂಜೆಕ್ಷನ್ ಗಳು ಅಪ್ಪನ ಶರೀರಕ್ಕೆ ಸಹಾಯ ಮಾಡಿಲ್ಲ.. ಕೋರ್ಟು ಅವನ ಅರ್ಜಿಯನ್ನು ಅಡಿಗೆ ಹಾಕ್ಕೊಂಡು ಮುಗುಮ್ಮಾಗಿದೆ. ಶ್ರೀ ಒಮ್ಮೆ ಅತ್ತು ಒಮ್ಮೆ ಪ್ರಶ್ನಿಸಿ, ಮತ್ತೆ ನಿಟ್ಟುಸಿರು ಕಳಿಸಿ ಹೋಗಲಿ ಬಿಡು ಅಂತಾಳೆ. ಕಣ್ಣು ಬಿಡದೆ ಬಾಯಿ ತೆರೆದು ಮಲಗಿದ ಅಪ್ಪ ಎಲ್ಲಿ ನನ್ನ ಮುಕ್ತಿ ?ಎನ್ನುತ್ತ ಆಸ್ಪತ್ರೆಯ ಕೋಣೆಯ ತಾರಸಿಗಂಟಿಕೊಂಡಂತೆ..ಇಲ್ಲಿ ಹಿಡಿಂಬಿ ತಾನುಳಿಯಲಿಕ್ಕೆ ಯಾರನ್ನು ಬಲಿ ಹಾಕಲೆನ್ನುತ್ತ ತನ್ನನ್ನೂ ಸಿಬಿಲ್ಲನ್ನೂ ಭರ್ಚಿ ಹಿಡಿದು ಅಟ್ಟಿಸಿಕೊಂಡು ಬಂದಂತೆ...

ಆಫೀಸಿಡೀ ಅಲ್ಲೋಲ ಕಲ್ಲೋಲ, ಹದಿನಾರನೇ ಬೆಳಗಾಗುವಷ್ಟರಲ್ಲಿ ಬಂದೆರಗಿದ್ದು ಸಿಬಿಲ್ ಸತ್ತ ಸುದ್ದಿ...ಆತ್ಮಹತ್ಯೆ! ತಮ್ಮದೇ ಕಣ್ಣು ಕಿವಿಗಳನ್ನು ನಂಬದೆ ''ವಾಟ್?'' ಅಂದು ಬೆಚ್ಚಿ ಬಿದ್ದಿತ್ತು ಆಫೀಸು... ಸುಳ್ಳಾಗಲು ಬಂದಿಲ್ಲದ ಸುದ್ದಿ. ಅದ್ಕಕೀಗ ಹುಟ್ಟಿದ ಕವಲು ನೂರು.

ಕಾಫೀ ಟೇಬಲಿನಲ್ಲಿ ವಿಚಿತ್ರ ಮೌನ. ಮಾರ್ಚುರಿಯ ಶೀತ ಪೆಟ್ಟಿಗೆಯೊಳಗೆ ತಣ್ಣಗೆ ಚಾಚಿಕೊಂಡಿದ್ದ ಸಿಬಿಲ್ ನೂರು ಸಾವಿರ ಪ್ರಶ್ನೆಗಳನ್ನಷ್ಟೇ ಬಿಟ್ಟು ಹೋಗಿದ್ಲು. ನೂರಿಪ್ಪತ್ತು ವರ್ಷ ಬದುಕ್ತೀನಿ ಅಂದಿದ್ದ ಸಿಬಿಲ್ ಮೊಹಾಂತಿ ಮೂವತ್ತಕ್ಕೆ ಮುಗಿದು ಹೋಗಿದ್ಲು.

ಟೇಬಲ್ ಸುತ್ತ ಕೂತ ಬಾಯಿಗಳಿಗೆ ಸೊಲ್ಲಿಲ್ಲ. ಯಾರ ಬಗ್ಗೆ ಮಾತಾಡಬೇಕು? ಏನು ಆಡಬೇಕು..ಸಾಗರಿಕಾ ಎರಡು ದಿನದ ಹಿಂದೆ ಎರಡು ವಾರದ ರಜೆ ಬರೆದು ಎಲ್ಲೋ ಗಪ್ಪಾಗಿರೋ ಸಮಾಚಾರ ಒಳಗೊಳಗೇ ಗಿರ್ರನ್ನುತ್ತಿತ್ತು. ಅದಕ್ಕೂ ಇದಕ್ಕೂ ಕೊಂಡಿಯಾಗೋ ಕಾರ್ಯಕಾರಣ ಸಂಬಂಧ ಹುಡುಕುವುದು ಇನ್ನು ಮೇಲಷ್ಟೇ. ಮರಳಿ ಬರುತ್ತಾಳೆಯೇ ಇಲ್ಲವೇ?

ಇವನ ಚೇಂಬರಿಗೆ ಧಾವಿಸಿ ಬಂದಿದ್ದ ಮೋಹನ್ ಅಸಹಜ ಅನಿಸುವಷ್ಟು ಉದ್ವಿಗ್ನತೆಯಲ್ಲಿದ್ದ.

' ಎಂಥಾ ಶಾಕ್ ಪುನಿ. ವಾಟ್ ಹೆಲ್ ಯಾ.'

' ನಂಗೂ ದಿಮ್ ಅಂತಿದೆ..'' ಮಾತಾಡಲಾಗಲಿಲ್ಲ, ಗಂಟಲಿನಲ್ಲಿ ಏನೋ ಸಿಕ್ಕಿ ಹಾಕಿಕೊಂಡಂತೆ ಬಿಗಿದು ಬರ್ತಿದೆ. ಇದ್ದಲ್ಲೆಲ್ಲ ನಗು ತುಂಬುತಿದ್ದ ಸಿಬಿಲ್ ನ ನೀಲಿಗಟ್ಟಿದ್ದ ಬಿಳಿದೇಹ ಕಣ್ಣಿದುರು ಅಲ್ಲಾಡದೆ ನಿಂತಿತ್ತು. ಯಾರದೋ ಪಾಪಕ್ಕೆ ಇನ್ನಾರೋ ಬಲಿ ಎಷ್ಟು ಸಹಜ ಇಲ್ಲಿ!

ಏನು ಮಾಡ್ಕೊಂಡಿಯೇ ಸಿಬಿ? ಹಗಲೂ ರಾತ್ರಿ ಅವಳ ಜೊತೆ ಇರ್ತಿದ್ದ್ಯಲ್ಲ? ಸಾಗರಿ ಅಂತರಾಳದ ಸುಳಿವು ಹಿಡೀಲಿಕ್ಕಾಗಲಿಲ್ವೇನೇ..

'' ಮೂವತ್ತೆರಡು ಲಕ್ಷದ ಲಫಡಾ ಅಂತೆ ಇವಳು ಹಿಡಿಂಬಿ ಸೇರಿ ಹೊಡೆದ ಲೂಟಿ..''

''ಸೂಸೈಡ್ ನೋಟ್ ಬರ್ದಿದ್ದಾಳೆ ಸಿಬಿಲ್. ಬದುಕು ಸಾಕಾಯ್ತು ಇನ್ನು ಇರಲಾರೆ ತಪ್ಪೇನಿದ್ರೂ ಕ್ಷಮಿಸಿ ಅಂದಿದೆ ಹುಚ್ಚು ಹುಡುಗಿ.ಸಾಗರೀನ ಅಳತೆ ಮಾಡೋ ಶಕ್ತಿ ಇಲ್ದೆ ಟ್ರಾಪ್ ಗೆ ಸಿಕ್ಕುಬಿದ್ದು... ಛೇ ಬೇಸರ ಆಗುತ್ತೆ ಕಣೋ.. ಅಲ್ಲಿ ನೋಡಿದ್ರೆ ಟಾಮ್ ಬುಚರ್ ಹಿಡಿಂಬಿ ಇಬ್ರೂ ಸೇರಿ ಎಲ್ಲ ಆರೋಪ ಇವಳ ತಲೆಗೆ ಕಟ್ಲಿಕ್ಕೆ ವ್ಯವಸ್ಥೆ ಆಗಿತ್ತಂತೆ..'' ಅಂತೆ ಕಂತೆ. ''ಆ ಕತೆ ನೆನೆಪಿದೆಯಾ ನಿನಗೆ..ನೀರಲ್ಲಿ ಮುಳುಗೋ ಪರಿಸ್ಥಿತಿ ಬಂದ ಮಂಗ ಮೂಗಿನ ತನಕ ನೀರು ಬರುವ ತನಕ ಮರಿಯನ್ನು ಎತ್ತಿ ಹಿಡಿದಿತ್ತಂತೆ, ನೀರು ಮೂಗು ದಾಟುತೊಡಗಿದಾಗ ಮರಿಯನ್ನ ಕಾಲಿನ ಕೆಳಗೆ ಹಾಕಿ ಅದರ ಮೇಲೆ ತಾ ನಿಂತಿತಂತೆ.''

ನಿಟ್ಟುಸಿರು, ನಿಶ್ಯಬ್ದ, ಗಾಢ ವಿಷಾದದ ಕಟು ಮೌನ. ಇದೇ ನಿಜವೇ? ಅಲ್ಲವೇ? ನಿಜ ಯಾವುದು? ಎಲ್ಲಿ? ಇದೆಲ್ಲ ಪದರಗಳ ನಡುವೆಲ್ಲೋ ಅಡಗಿದೆ.

ಬರ ಇಲ್ಲ ಸುದ್ದಿಮಳೆಗೆ. ಹೌದು, ಇದರಲ್ಲಿ ಖರೆ ಎಷ್ಟು ಸುಳ್ಳೆಷ್ಟು? ಇಡೀ ಪ್ರಕರಣದ ಸಮಗ್ರ ಸತ್ಯ ಯಾರ್ಯಾರಿಗೂ ತಿಳಿದಿಲ್ಲ ಅನ್ನುವುದೇ ಕೊನೆಗೆ ನಿಂತು ಹೋದೀತೇ?

''ನೂರಿಪ್ಪತ್ತು ನನ್ನ ಆಯುಸ್ಸು '' ಅಂತಿದ್ದ ಸಿಬಿಲ್ ಮೊಹಾಂತಿ ಮೂವತ್ತಕ್ಕೇ ಆಟ ಬಿಟ್ಟು ಕರಗಿ ಮಾಯ.. ಹಿಂದಿರೋ ರಹಸ್ಯ ಪೂರ್ಣಹೊರಬಂದೀತೇ? ಕೈಗೆ ಬೀಳುತ್ತಿದ್ದ ಲಕ್ಷಗಳ ಹೊಳಪು ಸಿಬಿಲ್ ಕಣ್ಣಿಗೆ ಅದರ ಹಿಂದಿನ ಸರ್ಪವನ್ನು ಕಾಣದಿರುವಂಥ ಪಟ್ಟಿ ಬಿಗಿದಿದ್ದಿರಬಹುದೇ? ಒಂದು ಕೆಟ್ಟ ಕ್ಷಣ ಮುಂದಿನ ಪರಿಣಾಮ ಎದೆಯೊಡೆಸಿ ತನ್ನ ಸಾವಿನಲ್ಲಿ ಎಲ್ಲಕ್ಕೂ ರಹಸ್ಯದ ಮುಸುಕು ಬಿಗಿದು ಕರಗಿ ಹೋಗಿದ್ದೇ ಖರೆಯಾ? ಆದರೇನಾಯ್ತು , ಸಿಬಿಲ್ ಕರೆದಾಕ್ಷಣ ಬಂದು ನಿಂತು ನಡಿ ಅಂದುಬಿಟ್ಟಿತ್ತಲ್ಲ ಸಾವು. ಅದೇ ಕೊಟ್ಟ ದಯಾಮರಣವೇ? ಇವಳು ಎಳೆದುಕೊಂಡಿದ್ದೆ?

ಇನ್ನೇನು ಮುಂದೆ? ಇಡೀ ಸ್ಟಾಕ್ ಹೋಮೇ ಬುಡಕ್ಕೆ ಬೆಂಕಿ ಬಿದ್ದಂತೆ ಸೊಂಟ ಕಟ್ಟಿ ನಿಂತು ಇದೆಲ್ಲ ಮುಚ್ಚಿ ಹಾಕುತ್ತೆ.ಸಿಬಿಲ್ ಇಲ್ಲೊಂದು ಅತಿ ಸಣ್ಣ ಚುಕ್ಕಿ, ಅದು ಅಳಸಿ ಹೋದರೆ ನಷ್ಟ ಏನಿಲ್ಲ. ಅದೆಲ್ಲ ಸರಿ, ಸಿಬಿಲ್ ಸತ್ತದ್ದೇಕೆ? ಬೇಡ ಅಂದವರ ಬಳಿಗೆ ಓಡಿ ಬರ್ಲಿಕ್ಕೆ ಅದೆಷ್ಟು ಪ್ರೀತಿ ಸಾವಿಗೆ?

ಹಣೆ ಇಡೀ ಮೂಡಿ ಏರಿಳಿದ ನೆರಿಗೆಗಳ ತೀಡಿಕೊಳ್ಳುತ್ತ ಮುಂದೇನು ಮುಂದೇನಿನ ಜಾಡಿನಲ್ಲಿ ಕಳೆದು ಹೋಗುತ್ತಿರುವಾಗ ಅಡ್ವೊಕೇಟ್ ರಾಜನ್ ಫೋನಿಸಿದ್ದರು..''ಪುನೀತ್ ನಮ್ಮ ಪ್ಯಾಸಿವ್ ಯುಥನೇಷಿಯ ಅರ್ಜಿಗೆ ಕೋರ್ಟು ಒಪ್ಪಿದೆ. ನೌ ವೀ ಕ್ಯಾನ್ ಅಪ್ರೋಚ್ ದ ಡಾಕ್ಟರ್ಸ್..'' ಏರಿಳಿತವಿಲ್ಲದ ದನಿ..

ಸೆಲ್ ಫೋನು ಮೆಸೇಜೊಂದನ್ನು ಅದೇ ಕ್ಷಣಕ್ಕೆ ಗಂಟೆ ಹೊಡೆದು ಹೇಳಿತ್ತು.ಅಳು ಬಾರದು ತನಗೆ ನಗಲು ಆಗದು. ಹೇಳಿಬಿಡಬೇಕವರಿಗೆ, ಐದು ನಿಮಿಷದ ಹಿಂದಿನವರೆಗೆ ಬೇಕಿತ್ತು ಕೋರ್ಟಿನ ಹಾಳೆ..ಈಗ ಬೇಡ!

-ಜಯಶ್ರೀ ದೇಶಪಾಂಡೆ.

jayashree.deshpande@gmail.com

ಜಯಶ್ರೀ ದೇಶಪಾಂಡೆ

ಲೇಖಕಿ ಜಯಶ್ರೀ ದೇಶಪಾಂಡೆ  ಅವರು ಮೂಲತಃ ವಿಜಯಪುರದವರು. ಮನಃಶಾಸ್ತ್ರ ಹಾಗೂ ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವೀಧರರು. ದೇಶ ಸುತ್ತುವುದರ ಜೊತೆಗೆ ಅಲ್ಲಿಯ ಜನ, ಭಾಷೆ, ಆಹಾರ, ಸಂಸ್ಕೃತಿಯನ್ನು ತಮ್ಮ ಲೇಖನಗಳ ಮೂಲಕ ಪರಿಚಯಿಸುತ್ತಿದ್ದಾರೆ. 

ಕೃತಿಗಳು : ಪದ್ಮಿನಿ, ಮೂರನೆಯ ಹೆಜ್ಜೆ, ರೇಖೆಗಳ ನಡುವೆ, ಸ್ಥವಿರ ಜಂಗಮಗಳಾಚೆ ಹಾಗೂ ಉತ್ತರಾರ್ಧ (ಕಥಾ ಸಂಕಲನಗಳು), ಯತ್ಕಿಂಚಿತ್ (ಕವನ ಸಂಕಲನ),ಮಾಯಿ   ಕೆಂದಾಯಿ  ಸ್ಮೃತಿ ಲಹರಿ (ಲಲಿತ ಪ್ರಬಂಧ ಸಂಕಲನ)  ಹೌದದ್ದು ಅಲ್ಲ‌ ಅಲ್ಲದ್ದು ಹೌದು (ಹಾಸ್ಯಲೇಖನ ಸಂಕಲನ), ಕಾಲಿಂದಿ (ಮಯೂರ), ಕೆಂಪು ಹಳದಿ ಹಸಿರು (ತರಂಗ), ದೂರ ದಾರಿಯ ತೀರ (ತರಂಗ) , ಬೇವು‌ (ವಿಜಯ ಕರ್ನಾಟಕ),  ಚಕ್ರವಾತ (ನೂತನ), ಸರಸ್ವತಿ ಕಾಯದ ದಿನವಿಲ್ಲ. (ಉದಯವಾಣಿ)   ಇವು ಧಾರಾವಾಹಿಯಾಗಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿತ ಕಾದಂಬರಿಗಳು.:ಪ್ರಥಮ್ ಬುಕ್ಸ್ ಸಂಸ್ಥೆಗಾಗಿ ಸ್ವಂತ  ಕಥೆಗಳಲ್ಲದೆ ಮರಾಠೀ ಮತ್ತು ಇಂಗ್ಲಿಷ್ಶ್ ಭಾಷೆಗಳಿಂದ ಕನ್ನಡಕ್ಕೆ  ಭಾವಾನುವಾದ ಮಾಡಿದ ನಲವತ್ತರಷ್ಟು ಪುಸ್ತಕಗಳು  ಪ್ರಕಟವಾಗಿವೆ. 

ಪ್ರಶಸ್ತಿ-ಗೌರವ: ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ , ದೂರದರ್ಶನ, ಉದಯ ಟಿವಿ  ವಾಹಿನಿಗಳಲ್ಲಿ  ಸಂದರ್ಶನ, *ಅಕ್ಷರ ಪ್ರತಿಷ್ಠಾನದ ಮಕ್ಕಳ  "ಕಲಿಕಾ ಏಣಿ" ಯೋಜನೆಯ ಮಾರ್ಗದರ್ಶಕರಾಗಿದ್ದರು.  ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ. (ಯತ್ಕಿಂಚಿತ್- ಕವನ ಸಂಕಲನಕ್ಕೆ ),  ಕರ್ನಾಟಕ ಲೇಖಕಿಯರ ಸಂಘ ಕೊಡಮಾಡುವ 'ಸುಧಾ ಮೂರ್ತಿ ತ್ರಿವೇಣಿ ಸಾಹಿತ್ಯ ಪ್ರಶಸ್ತಿ'  (ಸ್ಥವಿರ ಜಂಗಮಗಳಾಚೆ' ಕಥಾ ಸಂಕಲನಕ್ಕೆ),  ಅತ್ತಿಮಬ್ಬೆ ಪ್ರಶಸ್ತಿ.  (ಹೌದದ್ದು ಅಲ್ಲ ಅಲ್ಲದ್ದು ಹೌದು- ಲಲಿತ ಪ್ರಬಂಧ ಸಂಕಲನಕ್ಕೆ), ಗೋರೂರು ಪ್ರತಿಷ್ಠಾನದ 'ಶ್ರೇಷ್ಠ ಪುಸ್ತಕ'  ಪ್ರಶಸ್ತಿ.( ಮೂರನೆಯ ಹೆಜ್ಜೆ- -ಕಥಾಸಂಕಲನಕ್ಕೆ), ರಾಜ್ಯಮಟ್ಟದ ಕಾದಂಬರಿ ವಿಮರ್ಶಾ ಪ್ರಶಸ್ತಿ.  ಅತ್ತಿಮಬ್ಬೆ ಪ್ರತಿಷ್ಠಾನದಿಂದ.  (ಬೆಳಗಾಂವಕರ್ ನಾಸು- ಕಾದಂಬರಿ‌ ಸುನಂದಾ -  ವಿಮರ್ಶೆ),  ದಿ. ಸಿ ಎನ್ ಜಯಲಕ್ಷ್ಮೀದೇವಿ (ಕಥಾಪ್ರಶಸ್ತಿ) 
         

 

More About Author