Article

ಆದರ್ಶದ ಬದುಕಿನ ಅವಲೋಕನ ‘ನಾನು ಕಸ್ತೂರ್‌’

ಬಹಳ ದಿನಗಳ ನಂತರ ಒಂದು ಒಳ್ಳೆಯ ಓದು.. 'ನಾನು ಕಸ್ತೂರ್' ಡಾ.ಎಚ್.ಎಸ್.ಅನುಪಮಾ ಬರೆದ ಕಸ್ತೂರಬಾ ಜೀವನ ಕಥನ.. ಕಸ್ತೂರಬಾ ತಾವೆ ನಿರೂಪಿಸಿದಂತೆ ಲೇಖಕಿ ಬರೆದಿದ್ದಾರೆ.. ಗಾಂಧೀಜಿಯವರ ಕುರಿತು ಕನ್ನಡದಲ್ಲಿ ಬೇಕಾದಷ್ಟು ಪುಸ್ತಕಗಳಿದ್ದರೂ, ಕಸ್ತೂರಬಾ ಕುರಿತ ಬರೆಹ ಕಡಿಮೆ.. ಲೇಖಕಿ ಅನುಪಮಾ, ಬಾ ಕುರಿತ ಮಾಹಿತಿ ಸಂಗ್ರಹಿಸಲು ಸಾಕಷ್ಟು ಶ್ರಮವಹಿಸಿ, ಪೋರ್ ಬಂದರ್ ಗೆ ಹೋಗಿ, ಈಗ ಸ್ಮಾರಕವಾಗಿರುವ ’ ಬಾ’ ಅವರ ತವರು ಮನೆಯನ್ನು ನೋಡಿ, ಅವರ ಕುರಿತು ಇಂಗ್ಲಿಷ್ ನಲ್ಲಿ ಬಂದ ಪುಸ್ತಕಗಳನ್ನೂ ಅಧ್ಯಯನ ಮಾಡಿ ಈ ಪುಸ್ತಕವನ್ನು ಸ್ತ್ರೀ ದೃಷ್ಟಿಕೋನದಿಂದ ಬರೆದಿದ್ದಾರೆ.

ಹದಿಮೂರು ವರ್ಷಗಳ ಕಸ್ತೂರಬಾ ತಮಗಿಂತ ಕಿರಿಯರಾದ ಮೋಹನ ದಾಸ್ ಅವರನ್ನು ಮದುವೆಯಾದಾಗಿನಿಂದ ಪ್ರಾರಂಭಿಸಿ, ಮೊದಲ ಮಗ ಹರಿಲಾಲ್ ಹುಟ್ಟಿದ ಮೇಲೆ ಗಾಂಧಿಯವರು ಇಂಗ್ಲೆಂಡ್ ಗೆ ಕಾನೂನು ಕಲಿಯಲು ಹೋದಾಗ ಅನುಭವಿಸಿದ ಒಂಟಿತನ, ಆಮೇಲೆ ದಕ್ಷಿಣ ಆಫ್ರಿಕಾದ ಬದುಕು, ಹೋರಾಟ, ಅಲ್ಲಿದ್ದಾಗ ಗಾಂಧಿಯವರ ವ್ಯಕ್ತಿತ್ವ, ರೂಪುಗೊಂಡ ಬಗೆ, ತಮ್ಮ ಮೇಲೆ ಆದ ಪರಿಣಾಮ, ಬಹಳ ಸೂಕ್ಷ್ಮವಾಗಿ ಕಸ್ತೂರಬಾ ಅವರೇ ಹೇಳುತ್ತಿದಾರೆ ಎಂಬಂತಹ ನಿರೂಪಣೆ. ಆಮೇಲೆ, ಗಾಂಧಿ, ಕಸ್ತೂರಬಾ ಅವರಿಗೆ ತಾವಿಬ್ಬರೂ ದೈಹಿಕವಾಗಿ ದೂರ ಇರುವ ನಿರ್ಧಾರದ ಕುರಿತು ಹೇಳಿದಾಗ ’ಬಾ” ಅವರ ಪ್ರತಿಕ್ರಿಯೆ, ಆಶ್ರಮದ ಬದುಕು, ತಮ್ಮದೆನ್ನುವುದನ್ನು ಇಟ್ಟುಕೊಳ್ಳದ ಮನಸ್ಥಿತಿಯನ್ನು ರೂಢಿಸಿಕೊಂಡ ಸನ್ನಿವೇಶಗಳು, ಮನಮುಟ್ಟುವ ನಿರೂಪಣೆ...

ಕಸ್ತೂರಬಾ ಅವರ ತಂದೆ ತಾಯಿಗಳಿಗೆ ನಾಲ್ಕು ಜನ ಮಕ್ಕಳಿದ್ದರೂ ಅವರಾರಿಗೂ ಮಕ್ಕಳಿರಲಿಲ್ಲ.. ಅವರ ಮನೆಯ ಸಂತತಿ ಕಸ್ತೂರಬಾ ಅವರ ಮಕ್ಕಳಿಂದ ಮುಂದುವರೆದಿದೆ... ಗಾಂಧೀಜಿಯವರ ದೊಡ್ಡ ವ್ಯಕ್ತಿತ್ವ, ಆದರ್ಶಗಳ ಜತೆ ತಾವೂ ಹೋರಾಡುತ್ತ, ಬೆಳೆಯುವ ರೀತಿ ರೋಮಾಂಚನಗೊಳಿಸುತ್ತದೆ.. ಇವರ ಆದರ್ಶಗಳನ್ನು ಸ್ವಲ್ಪವಾದರೂ ಅಳವಡಿಸಿಕೊಂಡರೆ ಇವತ್ತಿನ ಪರಿಸರ ಮಾಲಿನ್ಯ ಇರುವುದಿಲ್ಲ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಲ್. ಸಿ. ಸುಮಿತ್ರ