Article

ಆಫ್ರಿಕಾ ನೋವು, ನಲಿವಿನ ’ಸೂರ್ಯನ ನೆರಳು’

ಪೋಲೆಂಡಿನ ಪತ್ರಕರ್ತ ರೈಷಾರ್ಡ್ ಕಪುಶಿನ್ ಸ್ಕಿ 'ಹೆಬಾನ್' ಎಂಬ ಶೀರ್ಷಿಕೆಯುಳ್ಳ ಪುಸ್ತಕವನ್ನು ಬರೆದರು. ಇದನ್ನು ಕ್ಲಾರಾ ಗ್ಲೋವೆಸ್ಕಾ ಇಂಗ್ಲಿಷ್ ಗೆ 'ಶಾಡೋ ಆಫ್ ದ ಸನ್' ಎಂಬ ಹೆಸರಿನಲ್ಲಿ ಅನುವಾದಿಸಿದರು. ಇದನ್ನು ಸಹನಾ ಹೆಗಡೆಯವರು ಕನ್ನಡಕ್ಕೆ "ಸೂರ್ಯನ ನೆರಳು" ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ.

'ಆಫ್ರಿಕಾದ ನೋವು, ಸಂಕಷ್ಟಗಳನ್ನು ಕುರಿತಾದ ಪ್ರಾಮಾಣಿಕ,ಸವಿವರ ಆದರೆ ಅಷ್ಟೇ ನಿರ್ಭಾವುಕ ಪ್ರವೇಶಿಕೆ ಹಾಗೂ ಅದರ ಗಾಢ ಆಕರ್ಷಣೆಯಿಂದ ಹುಟ್ಟಿದ ಒಂದು ನಿಶ್ಯಬ್ದ ಪ್ರೇಮಗೀತೆ' ಎಂದು ವಾಲ್ ಸ್ಟ್ರೀಟ್ ಜರ್ನಲ್ ಹೇಳಿರುವುದು ಅತ್ಯಂತ ಸೂಕ್ತವಾಗಿದೆ.

ಈ ಪುಸ್ತಕವು ಬಿಳಿಯ ವರ್ಣದ ಕಪುಶಿನ್ ಸ್ಕಿ ಅರವತ್ತರ ದಶಕದಿಂದ ತೊಂಬತ್ತರವರೆಗಿನ ದಶಕದ ಅವಧಿಯಲ್ಲಿ ಕಗ್ಗತ್ತಲ ಖಂಡ ಮತ್ತು ಕರಿಯರ ನಾಡು ಎಂದೇ ಹೆಸರಾದ ಆಫ್ರಿಕಾ ಖಂಡದ ತುಂಬೆಲ್ಲಾ ಓಡಾಡಿ ಪಡೆದ ಅನುಭವಗಳು ಮತ್ತು ಸಂಗ್ರಹಿಸಿದ ಮಾಹಿತಿಗಳ ಸಂಗ್ರಹ. ಇದು ಆಫ್ರಿಕಾದ ಆಂತರ್ಯಕ್ಕೆ ಇಳಿದು ಅವರು ರಚಿಸಿರುವ ಪುಸ್ತಕ. ಇಡೀ ಕೃತಿಯುದ್ದಕ್ಕೂ ಉರಿಬಿಸಿಲು, ನೆರಳಿನ ಹುಡುಕಾಟ,ಜನರ ಅಲೆಮಾರಿತನ, ವಸಾಹತುಶಾಹಿ ಆಳ್ವಿಕೆ ಮತ್ತು ಸ್ವಾತಂತ್ರ್ಯದ ನಂತರ ಬುಡಕಟ್ಟು ಜನಾಂಗಗಳ ಮಧ್ಯೆ ಅಧಿಕಾರಕ್ಕಾಗಿ ಸಂಘರ್ಷ ಹಾಗೂ ಸಾಮೂಹಿಕ ಹತ್ಯೆಗಳ ಪ್ರಸ್ತಾಪ ಕಾಡುತ್ತದೆ.  ಈ ಕೃತಿಯ ಆರಂಭದ ಒಂದೆರಡು ಅಧ್ಯಾಯಗಳನ್ನು ಪಟ್ಟು ಹಿಡಿದು ಓದಿದಿರಾದರೆ ಆಮೇಲೆ ಸುಲಭವಾಗಿ ಪುಸ್ತಕವನ್ನು ಕೆಳಗಿಡುವುದು ಸಾಧ್ಯವಿಲ್ಲ. ಇಲ್ಲಿಯ ಓದಿನ ಅನುಭವಗಳಿಂದ ಕಳಚಿಕೊಳ್ಳುವುದು ಸುಲಭವಲ್ಲ.

ಪ್ರತ್ಯೇಕ ಅಧ್ಯಾಯಗಳ ಅಡಿಯಲ್ಲಿ ಬರುವ ಘಟನೆಗಳು ಭಾವತೀವ್ರತೆಯಿಂದ ಕೂಡಿವೆ. ತಣಿಯುತ್ತಿರುವ ನರಕ ಎಂಬ ಅಧ್ಯಾಯವಂತೂ ದೃಶ್ಯಗಳು ಕಣ್ಮುಂದೆ ಬಂದಂತೆ ಕ್ರೌರ್ಯದ ಅನಾವರಣ ಮಾಡುತ್ತದೆ. ಡಾ.ಡೊಯ್ಲ್, ಸಲೀಂ - ಈ ಅಧ್ಯಾಯಗಳು ಅಲ್ಲಿನ ಜನರ ವಿಶಿಷ್ಟತೆಯನ್ನು ಹೇಳುತ್ತವೆ. ದಂಗೆಯ ಅಂಗರಚನೆ ಆಫ್ರಿಕಾದಲ್ಲಿ ಆದ ರಾಜಕೀಯ ಬದಲಾವಣೆಗಳನ್ನು ಹೇಳುತ್ತದೆ. ಆಫ್ರಿಕಾದಲ್ಲಿನ ದಾರಿದ್ರ್ಯ, ಬಂಡಾಯ, ಆಂತರಿಕ ಯುದ್ಧ, ವಿದೇಶಿಯರ ಆಕ್ರಮಣ, ಗುಲಾಮರ ಮಾರಾಟ, ಭಯಂಕರ ಬಿಸಿಲನ್ನು ಬಿಚ್ಚಿಟ್ಟು ಬೆಚ್ಚಿ ಬೀಳಿಸುವ ಲೇಖನಗಳ ಮಾಲೆಯಿದು.

ಪಾಶ್ಚಾತ್ಯರು ಗಡಿಯಾರಕ್ಕೆ ಸರಿಯಾಗಿ ಬದುಕುತ್ತಿದ್ದರೆ, ಆಫ್ರಿಕನ್ನರು ಬದುಕಿಗೆ ಸರಿಯಾಗಿ ಗಡಿಯಾರವನ್ನು ಹೊಂದಿಸಿಕೊಳ್ಳುವ ಜನ ಎನ್ನುತ್ತಾರೆ ಲೇಖಕರು. ಜನ ಭರ್ತಿಯಾದಾಗ ಹೊರಡುವ ಬಸ್. ಆದರೆ ಅಲ್ಲಿನ ಪಯಣಗಳು ಕಿಲೋಮೀಟರುಗಳಿಗೆ ಸಂಬಂಧಿಸಿದ್ದಲ್ಲ, ಗಂಟೆ ಅಥವಾ ದಿನಗಳಿಗೆ ಸಂಬಂಧಿಸಿದ್ದು. ಯಾಕೆಂದರೆ ಅಲ್ಲಿ ರಸ್ತೆಗಳೇ ಇಲ್ಲ ಅಥವಾ ಪೂರ್ಣವಾಗಿ ಹಾಳಾಗಿರುತ್ತವೆ.ಅಲ್ಲಿನ ಜನ ಅಜ್ಞಾನ, ನಿರುದ್ಯೋಗದಿಂದ ನರಳುವುದು, ಹಸಿವು ಮತ್ತು ನೀರಡಿಕೆಗಳಿಂದ ಸಾಯುವುದು ಕಾಡುತ್ತದೆ. ಲೇಖಕರು ಒಂದು ಕಡೆ ಬಸ್ಸಿಳಿದಾಗ ಪೋಲೀಸನೊಬ್ಬ ಅಲ್ಲಿರುವ ಜನರೆಲ್ಲರನ್ನೂ ತೋರಿಸಿ 'ಕಳ್ಳರು' ಎಂದು ಹೇಳಿ, 'ನನ್ನನ್ನು ಮಾರ್ಗದರ್ಶಿಯಾಗಿ ನೇಮಿಸಿಕೊಳ್ಳಿ, ನನಗೂ ಬದುಕಲು ಬಿಡಿ' ಎಂದು ಅವರ ಮಧ್ಯೆ ಅಂಗಲಾಚುವುದು ಅಲ್ಲಿಯ ವಾಸ್ತವಕ್ಕೆ ಹಿಡಿದ ಕನ್ನಡಿ.

ಇಲ್ಲಿ ಅನುವಾದಕಿ ಸಹನಾ ಹೆಗಡೆ ಅವರನ್ನು ಹೊಗಳಲೇಬೇಕು. ಅನುವಾದವೆನ್ನುವುದು ಸುಲಭದ ಕೆಲಸವಲ್ಲ. ಮೂಲಕ್ಕೆ ಚ್ಯುತಿ ಬಾರದಂತೆ ಅದ್ಭುತವಾಗಿ ಸಹನಾ ಅವರು ಅನುವಾದವನ್ನು ಮಾಡಿದ್ದಾರೆ. ಈ ಅನುವಾದಿತ ಕೃತಿಯು, ವಿಭಿನ್ನ ಅನುಭವದ ನೋಟಕ್ಕಾಗಿ ಹೆಚ್ಚು ಜನರನ್ನಾದರೂ ತಲುಪಬೇಕು ಎಂಬ ಆಶಯ ನನ್ನದು. ಹಾಗಾಗಿ ಎಲ್ಲರೂ ಒಮ್ಮೆ ಕೊಂಡು ಓದಿ, ಸೂರ್ಯನ ನೆರಳನ್ನು ಖಂಡಿತಾ ಕಾಣಿರಿ.


ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

https://www.bookbrahma.com/book/sooryana-neralu

ಅಜಿತ ಹೆಗಡೆ