Article

ಅಗ್ರಹಾರರ 'ನೀರು ಮತ್ತು ಪ್ರೀತಿ' ಕುಡಿದಾಗ...

ಬಹಳ ದಿನಗಳಿಂದ ಕಾತರಿಸಿದ್ದ ಅಗ್ರಹಾರ ಕೃಷ್ಣಮೂರ್ತಿಯವರ 'ನೀರು ಮತ್ತು ಪ್ರೀತಿ' ಕಾದಂಬರಿ ಮರುಮುದ್ರಣಗೊಂಡು ಈಗಿನ ಓದುಗರಿಗೂ ಸಿಕ್ಕುವಂತಾಗಿದೆ. ಅಹರ್ನಿಶಿ ಪ್ರಕಾಶನ ಈ ಸಾರ್ಥಕ ಕೆಲಸ ಮಾಡಿದೆ.

'ನೀರು ಮತ್ತು ಪ್ರೀತಿ' ಕೈಗೆ ಸಿಕ್ಕ ತಕ್ಷಣ ಇದರ ಬಗ್ಗೆ ಹಿಂದಿನಿಂದಲೂ ಕೇಳಿ ಬಾಯಾರಿದ್ದ ನಾ ಕೂತಲ್ಲಿ ನಿಂತಲ್ಲೆ ಬಿಡದೆ ಒಂದೇ ಗುಕ್ಕಿಗೆ ಕುಡಿದು ಬಿಟ್ಟೆ!

ಸರಳವಾದ ವಸ್ತು ಒಂದನ್ನ ಅದೆಷ್ಟು ಮೋಹಕವಾಗಿ ಕಟ್ಟಿದ್ದಾರೆ. ಆ ಕಾಲಕ್ಕೆ ಏಕೆ ಈ ಕಾಲಕ್ಕೂ ಇದು ಕೆಂಪು ಗುಲಾಬಿಯೇ ಸರಿ.

ಮುಟ್ಟಿನಿಂದ ಶುರುವಾಗುವ ಕಾದಂಬರಿಯ ಮೊದಲ ಸಾಲುಗಳೆ.. ಓದುಗನನ್ನು ಸಮ್ಮೋಹಿಸಿ ಕೊನೆಯವರೆಗೂ ಹಿಡಿದಿಟ್ಟುಕೊಂಡು ಬಿಡುತ್ತವೆ.

ಹದಿಹರೆಯದವರ ತವಕ ತಲ್ಲಣಗಳು ಹೇಗಿರುತ್ತವೆ ಅಂದರೆ ಆ ಕ್ಷಣಕ್ಕೆ ಭವಿಷ್ಯದ ಕಲ್ಪನೆಗಳು, ಚಿಂತೆಗಳು ಸುಳಿಯುವುದೇ ಇಲ್ಲ. 'ನೀರು ಮತ್ತು ಪ್ರೀತಿ'ಯೂ ಸಹ ಆರಂಭದಲ್ಲಿ ಅದನ್ನ ಹಾಗೇ ನಿರ್ವಹಿಸಿದೆ. "ಗೆಳೆಯರೆ ಓ ನನ್ನ ಗೆಳತಿಯರೆ" ಎಂಬ ಪ್ರೇಮಲೋಕದ ಹಾಡಿನಂತೆ.. ಯುವ ಜೋಡಿಗಳು ನಾವು ಪ್ರೀತಿಸುತ್ತಿದ್ದೇವಾ ಎಂಬುದರ ಖಾತ್ರಿಗೂ ಮುನ್ನವೆ ಸುಖಿಸುತ್ತ ಎಂಜಾಯ್ ಮಾಡುತ್ತಾರೆ. ಕಾದಂಬರಿಯ ಓಟ ಅಷ್ಟು ಫ್ರೆಷ್ ಆಗಿದೆ.

ಆ ಕಾಲದ ಕಾಲೇಜು ಓದಿನ ವಿವರಣೆಯಂತೂ ಯತಾವತ್ ಮೂಡಿ ಬಂದಿದೆ. ಲೆಕ್ಚೆರರ್ ಮಾತಿಗೊಂದಾವರ್ತಿ ಬಳಸುವ "ಯುಸಿ"ಗಳು, ಇತರೆ ವಿಷಯದ ವಿದ್ಯಾರ್ಥಿ ತಮ್ಮ ಕ್ಲಾಸ್ ಕೇಳಲು ಬಂದಾಗ ಮುದಗೊಳ್ಳುವುದು ಇದೆಲ್ಲೆವೂ ಆ ಕಾಲದ, ಈ ಕಾಲದ ಎಲ್ಲ ಕಾಲದ ಹುಡುಗ ಹುಡುಗಿಯರಿಗೆ ದಕ್ಕಿದ ಅನುಭವದಂತೆಯೇ ಇದ್ದು, ಇದನ್ನೆಲ್ಲ ಕಂಡುಂಡೆ ಬರೆದಂತಿದೆ.

ಬಹುಶಃ ಈ ಕಾದಂಬರಿ ಬಂದಾಗ ಹಲವರು ತಮ್ಮ ಬೆನ್ನು ಮುಟ್ಟಿಕೊಂಡಿರಬಹುದು.. ಅದು ಜಲಜ ಮತ್ತು ಗೋಪಾಲರಂತಹವರ ಸ್ಪೀಡ್ ಪ್ರೀತಿಯ ಕಾರಣದಿಂದಲೂ ಇರಬಹುದು.. ಇಲ್ಲವೆ ವಿದ್ಯಾರ್ಥಿ ಕೆಣಕಿ ಕಪಾಳಮೋಕ್ಷ ಪಡೆದ ಲೆಕ್ಚರ್ ನಂತವರಿಂದಾಗಿಯೂ.. ಇಲ್ಲವೆ ರಜೆ ಮುಗಿಸಿ ಬರುವಾಗ ಕಾಲುಂಗರ ತೊಟ್ಟು ಬಂದ ಹುಡುಗಿಯರ ಕಾರಣಕ್ಕೂ ಇರಬಹುದು..

ಈ ಕಾದಂಬರಿಯುದ್ದಕ್ಕೂ ನೀರು ವಹಿಸಿರುವ ಪಾತ್ರ, ಅದನ್ನು ಪೋಷಿಸಿರುವ ಬಗೆ, ಅದು ಪ್ರೀತಿಯೊಂದಿಗೆ ತಳುಕು ಹಾಕಿಕೊಂಡಿರುವುದು.. ಇದೆಲ್ಲವೂ ಇನ್ನೆಲ್ಲೂ ಸಿಗದ ಅಪರೂಪದ ವಸ್ತು ಮತ್ತು ಬೆಸುಗೆ ಎನಿಸಿಬಿಡುತ್ತದೆ. ಮುಟ್ಟಿನೊಂದಿಗೆ ಶುರುವಾಗುವ ಕಾದಂಬರಿ ಬಾಯಿ ವಾಸನೆಯೊಂದಿಗೆ ಕೊನೆಗೊಳ್ಳುತ್ತೆ. ಸರಳ ಎನಿಸುವ ಸಂಗತಿಗಳೆರೆಡು ಹಬ್ಬುವ, ನಿರ್ಣಾಯಕವಾಗುವ ಪರಿ ಸೋಜಿಗವೆನಿಸುತ್ತೆ. 'ಮುಟ್ಟು' ಮತ್ತು 'ವಾಸನೆ' ಕಾದಂಬರಿಯ ಎರಡು ತುದಿಗಳು. ಇವೆರಡೂ ಜೀವ ತಳೆಯುವ ಪರಿ ಅನನ್ಯ.

ಕಾದಂಬರಿ ತನ್ನ ನೈಜ ವಿವರಣೆಗಳಿಂದಾಗಿ ಎಲ್ಲೂ ಸಹ ಅವಾಸ್ತವ ಎನಿಸುವುದಿಲ್ಲ. ಓದುಗನ ಅನುಭವದ ಮೂಸೆಯಲ್ಲೆ ಇಲ್ಲೇ ಎಲ್ಲೋ ನಡೆದಂತಿದೆ.

ಓದಲು ನಗರಕ್ಕೆ ಬಂದ ಹುಡುಗಿ ಪ್ರೀತಿಯ ನೀರಿಗೆ ಬಿದ್ದು ಕನ್ಯತ್ವ ಕಳೆದುಕೊಳ್ಳುವುದು, ಇದರ ಸುಳಿವರಿತ ಅಪ್ಪ ಓದು ಬಿಡಿಸಿ ಮದುವೆ ಮಾಡುವುದು, ಆಕೆ ಗಂಡನಲ್ಲಿ ಸಂತೋಷ ಕಾಣಲಾಗದೆ ಹಳೆ ಪ್ರಿಯಕರನನ್ನೆ ಹುಡುಕಿ ಬರುವುದು.. ಈ ಸರಳ ಸೂತ್ರವೇ ಇಲ್ಲೂ ಇದ್ದರೂ 'ನೀರು ಮತ್ತು ಪ್ರೀತಿ' ಮುಖ್ಯ ಎನಿಸುವುದು‌.. ಆ ತಿರುವುಗಳ ಮಧ್ಯೆ ಅನುಭವಿಸುವ ತುಮುಲಗಳ ವ್ಯವಧಾನ ಪೂರಿತ ನಿರ್ವಹಣೆಯಿಂದ.

ಎಲ್ಲೂ ಎಲ್ಲೆ ಮೀರದೆ ಅದರ ಇನ್ನಿತರ ಆಯಾಮಗಳೆಡೆಗೆ ಸಂಚರಿಸಿ ಒಂದು ಸಾಮಾಜಿಕ ಕಟು ವಾಸ್ತವತೆಯನ್ನ ತೆರೆದಿಡುತ್ತದೆ.

'ನೀರು ಮತ್ತು ಪ್ರೀತಿ'ಯ ಶುರುವಿನಿಂದ ಕೊನೆಯವರೆಗೂ ನನ್ನನ್ನು ಕಾಡಿದ ಸಂಗತಿ ಎಂದರೆ, ಆ ಕಾಲದ ಸಿನಿಮಾಸಕ್ತರಿಗೆ ಈ ಕತೆ ಸಿಗಲಿಲ್ಲವೆ? ಸಿಕ್ಕಿದ್ದರೆ ಅವರಿಗೆ ತಕ್ಕನಾದ ಎಲ್ಲವೂ ಇಲ್ಲಿತ್ತು.

ಇನ್ನೊಮ್ಮೆ ಅನಿಸಿದ್ದು, ಅವರಿಗೆ ಸಿಗದಿದ್ದೆ ಒಳ್ಳೆಯದಾಯಿತೇನೊ.. ಸಿಕ್ಕಿದ್ದರೆ ಇನ್ನಷ್ಟು ಮಸಾಲೆ ಬೆರೆಸಿ ಇದನ್ನೊಂದು ಮತ್ತೊಂದು 'ಅನುಭವ' ಮಾಡಿಬಿಡುತ್ತಿದ್ದರೇನೊ..

ಈ ಸೂಕ್ಷ್ಮವನ್ನು ಬಿಡಿಸಿ ಅದನ್ನೊಂದು ಸೃಜನಶೀಲ, ಎಲ್ಲ ಕಾಲಕ್ಕೂ ಸಲ್ಲುವ ಕಾದಂಬರಿಯನ್ನಾಗಿಸುವ ಅಗಾಧ ಶಕ್ತಿ ನಾನು ಗೌರವಿಸುವ ಕನ್ನಡದ ಮಹತ್ವದ ಲೇಖಕ ಅಗ್ರಹಾರರಿಗಷ್ಟೆ ಸಾಧ್ಯ!

 


 

ಗುರುಪ್ರಸಾದ್ ಕಂಟಲಗೆರೆ