Article

ಅಕಥ ಕಥಾದೊಳೊಂದು ಬದುಕಿನಶೋಧ 

ಕೇಶವ ಮಳಗಿ ಸರ್ ಅವರು ಬರೆದ 'ಅಕಥಾ ಕಥಾ' ಪುಸ್ತಕ ಇತ್ತಿಚೇಗೆ ಓದಿದೆ. ಕಥಾಸಂಕಲನ ಒಟ್ಟು 8 ಕಥೆಗಳಿಂದ ಕೂಡಿದೆ. ಇದರಲ್ಲಿನ ಏಳು ಕಥೆಗಳು ಹೈ.ಕ, ಉ.ಕ ಮತ್ತು ಉತ್ತರಕನ್ನಡ ಜಿಲ್ಲೆಗಳ ಸುತ್ತಮುತ್ತಲಿನ ಜನಜೀವನ ಕುರಿತಾಗಿವೆ. ಒಂದು ಉತ್ತರದ ಭಾರತದ ಕಡೆ ನಡೆಯುವ ಕವಿಗೋಷ್ಠಿ ಕುರಿತದ್ದಾಗಿದೆ.ಇಲ್ಲಿನ ಒಂದೊಂದು ಕಥೆಗಳು ಒಂದೊಂದು ಜಗತ್ತು. ವಿಶೇಷವೆಂದರೆ ಕಥೆಗಳಲ್ಲಿ ಬಳಸಲಾಗಿರುವ ಭಾಷೆ. ಅದಕ್ಕಿರುವ ಸೊಗಡು. ಶಿಕ್ಷಣ, ಹೊಟ್ಟೆಪಾಡು ಎಂದು ಉತ್ತರ ಕನ್ನಡ, ಉತ್ತರ ಕರ್ನಾಟಕದ ಕೆಲ ಭಾಗಗಳನ್ನು ಸುತ್ತಿದ ಕಾರಣದಿಂದ ಅಲ್ಲಿನ ಜನರ ಬದುಕು, ಭಾಷೆ, ಸಂಸ್ಕೃತಿಗಳನ್ನು ಅರೆಬರೆಯಾಗಿ ಕಾಣಲಿಕ್ಕೆ ಚೂರೇ ಚೂರು ಸಾಧ್ಯವಾಗಿದೆ. 'ಅಕಥ ಕಥಾ' ಪುಸ್ತಿಕೆ ಓದು ಈಗ ಮತ್ತೆ ಅದೇ ಜಾಗಗಳಿಗೆ ಕೊಂಡೊಯ್ದು ಆ ಲೋಕದ ಬದುಕುಗಳ ದರ್ಶನ ಮಾಡಿಸಿದೆ. ಮರೆತಂತಿದ್ದ ಕೆಲ ಪದಗಳು, ನುಡಿಗಟ್ಟುಗಳು ಮತ್ತೆ ಜೀವ ಪಡೆದ ಪುಳಕ. ಕಥೆಯ ಒಂದೊಂದು ವಿಷಯವಸ್ತುಗಳು ಒಂದೊಂದು ಬೆರಗಿನ ಲೋಕ. ಕೆಲ ಕಥೆಗಳು ಏಕಾಂತದಲ್ಲಿ ಕುಳಿತು ಶೋಧಿಸಿಕೊಳ್ಳುವಂಥವು.

ಅಕಥ ಕಥಾ 

ತನ್ನ ಕೆಲಸ ಸಂಶೋಧನೆ ಮಾತ್ರ ಎಂದುಕೊಂಡ ಸಲೋಮಿ ಮೇಹಿಯಾ, ಔಚರ್ ಬರೆದು ಬರೆದು ದುಡ್ಡು ಮಾಡಿಕೊಳ್ಳತ್ತಿರುವ ಪಕ್ಕಾ ಲೆಕ್ಕಾಚಾರದ ಋತುಜ, ಇದು ಗೊತ್ತಿದ್ದರೂ ಖಂಡಿಸದಿದ್ದ ಸಲೋಮಿಯ ನಡುವಳಿಕೆಗೆ ರೋಸಿ ಹೋಗುವ ಪ್ರಮೋದ್ ಒಟ್ಟು ಸಂಶೋಧನೆಯ ದಿಕ್ಕುದಿಶೆಗಳನ್ನು ಪ್ರಶ್ನಿಸುವ ಧೈರ್ಯ ಇಲ್ಲಿ ಕಾಣಿಸುತ್ತದೆ. (ನಿನ್ನ ಪ್ರಾಮಾಣಿಕತೆಯನ್ನು ಎಲ್ಯರ ತಗೊಂಡು ಹೋಗಿ ಸುಟ್ಟು ಬಾ! ನಮ್ಮ ದೇಶದಾಗಿನ ಅಧ್ಯಾತ್ಮ ಹುಡುಕಿ ಬರೋ ನಿಮ್ಮಂಥಬರ ಹಣೆ ಬರಹನೇ ಇಷ್ಟು. ನಿಮಗೇನರೆ ಸಿಗೂತನಾ ಈ ಅಧ್ಯಾತ್ಮವನ್ನು ಹಿಂಜುವರು ನೀವು. ವರ್ಷಕ್ಕೊಂದು ಸಲ ಯೂನಿವರ್ಸಿಟಿ ರೊಕ್ಕದಾಗ ರಿಸರ್ಚ್ ಹೆಸರಿನಿಂದ ಬರೂದು, ಇಲ್ಲಿ ಅಧ್ಯಾತ್ಮ ಖರೀದಿ ಮಾಡಿಕೊಂಡಿ ನಿಮ್ಮ ಅಕೆಡೆಮಿಕ್ ವಜನ್ ಹೆಚ್ಚು ಮಾಡಿಕೊಳ್ಳೋದು. ಅಧ್ಯಾತ್ಮ ಅಂದ್ರ ಏನು ಅಂತ ತಿಳೀದ ನಿಮ್ಮ ಮಡ್ಡ ವಿದ್ಯಾರ್ಥಿಗಳಿಗಿ ಕೊರೆದು ದೊಡ್ಡ ಮನುಷ್ಯರಾಗೋದು. ನಿನ್ನ ಡೀನ್ ಇಲ್ಲಿನ ಸಾಧುಗಳ ಹೆಸರಿನಿಂದ ದುಡ್ಡು ತಿನ್ನೂದು, ಋತುಜ ಅದರಾಗ ಪಾಲು ಪಡೆಯೋದು, ಇದ್ಯಾವುದೂ ನಿನಗ ಜೀವನ್ಮರಣದ ಪ್ರಶ್ನೆಯಲ್ಲ (ಪು.ಸಂ೨೨). ಈ ಮಾತುಗಳು ಕೇವಲ ಸಂಶೋಧನೆಗೆ ಸಿಮೀತಗೊಳಿಸದೆ ಒಟ್ಟಾರೆ ಮನುಷ್ಯರು ತಮ್ಮ ನೈತಿಕತೆ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳುವಂಥಹ ವಿಶಾಲ ಅರ್ಥದಲ್ಲಿ ಗ್ರಹಿಸಬೇಕಾಗುತ್ತದೆ.

ಅತಿಲೋಕ ಸುಂದರಿ 

ದೀಪ ಹಚ್ಚಿಟ್ಟಲ್ಲಿ ಹೇಗೆ ಕತ್ತಲು ದೂರ ಸರಿಯುವುದೋ ಹಾಗೆ ಒಂದು ಮುಗ್ಧ, ಪ್ರಾಮಾಣಿಕ ಮನಸ್ಸು ವ್ಯಕ್ತಿಯನ್ನು ಬದಲಿಸಬಹುದು ಎನ್ನುವುದಕ್ಕೆ 'ಅತಿಲೋಕ ಸುಂದರಿ' ನಿದರ್ಶನ. ಮಹಾನಗರಗಳ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಮೇಸ್ತ್ರಿ ಕೆಲಸಿಗ ಮುಠಾಮೇಸ್ತ್ರಿ. ತನ್ನ ಕೈ ಕೆಳಗೆ ಕೂಲಿ ಕೆಲಸ ಮಾಡ್ತಿದ್ದ ಅಲುಮೇಲು ಮಂಗಮ್ಮಳನ್ನು ಮದುವೆಯಾಗುತ್ತಾನೆ. ಆಕೆಗದು ಇಷ್ಟವಿರದ ಮದುವೆ. ಲೈಂಗಿಕ ಹಿಂಸೆಯೂ ಹೌದು. (ಲಗ್ನಾ ಆದಮ್ಯಾಲ ದಿನಾ ರಾತ್ರಿ ಗಂಡಸರು ರಕ್ತಾ ಕುಡಿತಾರಂಗೇ ರಗತಾ ಕುಡಿತಾರೆಂದು ಗೆಳತಿಯರು ಹೇಳಿದ್ದು ಆಕೆಯ ಅನುಭವಕ್ಕೆ ಬರತೊಡಗಿತು.ಪು.ಸಂ 35:) ಮುಠಾಮೇಸ್ತ್ರಿ ಕುರಿತು ಆಕೆಗೆ ತಿರಸ್ಕಾರ. ಎಷ್ಟೆಂದರೆ ಆಕೆಗೆ ಹುಟ್ಟುವ ಕೂಸು ಸಹ ಬೇಡವೆನಿಸುತ್ತದೆ. ಕೂಸಿಗೆ ಎದೆಹಾಲ ಉಣಿಸಲು ಆಕೆ ನಿರಾಕರಿಸುತ್ತಾಳೆ. ಆದರೆ ಮಗುವಿನ ಮೃದುಲ ಸ್ಪರ್ಶ ಎದೆ ತಟ್ಟುತ್ತಿದ್ದಂತೆ ವಾತ್ಸಲ್ಯದ ಕಟ್ಟೆ ಒಡೆದು ಪರವಶಳಾಗುತ್ತಾಳೆ. ಮುಠಾಮೇಸ್ತ್ರಿಯ ಪಶ್ಚಾತಾಪ ಮುಂದೊಂದು ದಿನ ಮಂಗಮ್ಮಳ ಹೃದಯವನ್ನೂ ಗೆಲ್ಲಬಹುದು... ಆತ ಇನ್ನೂ ಮೃದುವಾಗಬಹುದು...

ವೈಶಾಖದ ದಿನಗಳ

ಸಿಟಿಯಲ್ಲಿದ್ದ ವಿನಾಯಕ ಮತ್ತು ಶಾರದಾ ತಮ್ಮ ಮಗ ಸಮೀರನಿಗೆ ಬ್ರಹ್ಮೋಪದೇಶ ಮಾಡಿಸಲು ಕೂರ್ವೆಗೆ ಬರುತ್ತಾರೆ. ಆ ಹೊಳೆಸಾಲು, ನದಿ ದಂಡೆ ಅಲ್ಲಿನ ಜೀವನ ಓದುಗರಿಗೆ ಮುದ ನೀಡುತ್ತದೆ. ಪರಮೇಶ್ವರರಿಗೂ ಕಲ್ಯಾಣಿಗೂ ಸಂಬಂಧ ಕುರಿತಾದ ಪುಕಾರಿನ ಕುರಿತಾಗಿ ಭಾಗಿರಥಿ ವಿನಾಯಕನಿಗೆ ಹೇಳಿದ ಮಾತು ಬಹುಶಃ ಸಮಾಜದ ಎಲ್ಲರಿಗೂ ಅನ್ವಯಿಸುವಂಥದ್ದು. ಪರಮೇಶ್ವರ ದೀಕ್ಷಿತರ ವ್ಯಕ್ತಿತ್ವ ಥೇಟು ಬೆಟ್ಟದ ಜೀವದ ಭಟ್ಟರನ್ನು ನೆನಪಿಸುತ್ತದೆ. ಆಪ್ತವಾಗುತ್ತದೆ.

ಹೊಳೆ ಬದಿಯ ಬೆಳಗು 

ತಿಂಥಿಣಿ ಮೌನೇಶನ ಜಾತ್ರೆಯೊಳಗೆ ನಡೆಯುವ ಕಥೆ. ಗಂಡ ದೇವೆಂದ್ರನನ್ನು ಹುಡುಕತ್ತ ಬಂದ ಚಂದ್ರವ್ವ, ಮೊಮ್ಮಗನ ಬದುಕು ಚಂದಗಾಣಿಸ ಹೊರಟ ಕುರುಡಿ ಚೊಂಚ್ ರುಕಮವ್ವ, ತೊಗಲಿನ ಸಂಬಂಧಗಳನ್ನು ಕಳಚಿ ನಾಥಪಂಥದ ಸಾಧು ಸಂಗ ಅರಸಿ ದೇಶಾಂತರ ಸುತ್ತುತ್ತಿರುವ ಬಾಬಾ ಮೂವರು ಕೃಷ್ಣೆಯ ತಟದಲ್ಲಿ ತಮ್ಮ ಬದುಕಿನ ಘಟನೆಗಳನ್ನು ಹೇಳಿಕೊಂಡು ಒಬ್ಬರಿಗೊಬ್ಬರು ಸ್ಪಂದಿಸುವುದನ್ನ ಇಲ್ಲಿ ಕಾಣಬಹುದು. ಮನುಷ್ಯರಿಗೆ ಎದುರಾಗುವ ಕಷ್ಟ, ಸಮಸ್ಯೆಗಳು ನೋವು, ಆತಂಕಗಳನ್ನು ಸೃಷ್ಟಿಸಿದರೂ ಅವುಗಳನ್ನು ಆಸ್ಥೆಯಿಂದ ಕೇಳುವ, ಸ್ಪಂದಿಸುವ ಅಂತಃಕರಣದ ಮನಸುಗಳು ಸಿಕ್ಕಾಗ ಬದುಕುವ ಉಮೇದು ಹೆಚ್ಚುತ್ತದೆ ಅನ್ನೋದನ್ನ ಇಲ್ಲಿ ಕಾಣಬಹುದು.

ನೀಲಿ ಆಕಾಶದ ಹಣ್ಣು 

ನೀಲಿ‌ ಆಕಾಶದ ಹಣ್ಣು ಸ್ತ್ರೀ ಸಬಲೀಕರಣದ ಕುರಿತದ್ದಾಗಿದೆ. ತನ್ನ ಗಂಡ ಮಕ್ಕಳು, ಸೊಸೆಯಂದಿರಾದಿಯಾಗಿ‌ ಎಲ್ಲರೂ ತನ್ನ ಹಿಡಿತದಲ್ಲಿ ಇರಬೇಕೆನ್ನುವ, ಎಲ್ಲವೂ ತನ್ನ ಮೂಗಿನ ನೇರದಲ್ಲಿಯೇ ನಡೆಯಬೇಕೆನ್ನುವ ಸಣ್ಣತನದ ಹೆಂಗಸು ಸಾವಳವ್ವ. ಕಿರಿ ಸೊಸೆ ಹೂವಕ್ಕ ಹೆಣ್ಣು ಹಡೆದಳೆಂಬ ಕಾರಣಕ್ಕೆ ತಾತ್ಸಾರದಿಂದ ಕಾಣುತ್ತಾಳೆ. ತಾಯಿಯ ಉಪಟಳ ತಾಳದೇ ಊರೂರು ಸುತ್ತುತ್ತ ಹೆಂಡತಿ ಮಗಳ ಮೋಹ ತೊರೆಯುವ ಹೂವಕ್ಕಳ ಗಂಡ ಮೈಲಾರಿ. ಗಂಡನಿಲ್ಲದೇ ಮೇಲೆ ತವರುಮನೆಗೆ ಬಂದ ಹೂವಕ್ಕ ಹೇಗೆ ತನ್ನ ಹೊಸ ಬದುಕನ್ನು ಕಟ್ಟಿಕೊಳ್ಳುತ್ತಾಳೆ ಕುರಿತಾಗಿ ಕಥೆ ಸಾಗುತ್ತದೆ. ಶೇಖರ ಮಾಸ್ತರ ಮತ್ತವನ ಹೆಂಡತಿ ಸಾವಿತ್ರಿ ತರದವರ ಕಳಕಳಿ ಈಗಲೂ ಹಳ್ಳಿಗಳಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಮೇಷ್ಟ್ರುಗಳನ್ನು ನೆನಪಿಸುತ್ತದೆ. ಹುಳಿ, ಸಿಹಿ, ಒಗರುಗಳ ಮಿಶ್ರಣದ ನೇರಳೆ ಹಣ್ಣನ್ನು ಇಲ್ಲಿ ಲೇಖಕರು ಬದುಕಿಗೆ ರೂಪಕವಾಗಿ ಕಟ್ಟಿಕೊಡುವ ಪರಿ ಬೆರಗು ಮೂಡಿಸುತ್ತದೆ. 'ಇಲ್ಲದ ಸಂಸಾರ ಸುಖಕ್ಕೆ ದುಃಖ ಪಡೋದಕ್ಕಿಂತ, ಇರೋ ದುಃಖ ನೀಗಿಸಿ ಸುಖಾ ಹೆಂಗ ಪಡೆಯೋದು ಅಂತಾ ವಿಚಾರ ಮಾಡು.' ಅನ್ನೋ ಸಾವಿತ್ರಿಯ ಮಾತು ಗಮನಾರ್ಹ.

ಬಾರೋ ಗೀಜಗ 

ಈ ಕಥೆ ಕವಿಗೋಷ್ಠಿಯ ಕುರಿತದ್ದಾಗಿದೆ. ಪ್ರೊ. ಕದಂ ಮತ್ತು ಕಾರ್ಯಕ್ರಮದ ಸಂಘಟಕಿ ನೀಲಾಂಜನಾ ನಡುವೆ ನಡೆಯುವ ತಾತ್ವಿಕ ನೆಲೆಯ ಸಂಭಾಷಣೆಗಳು ಬಹಳ ಆಪ್ತ. ಪ್ರೊ. ಕದಂ ಪ್ರತಿ ಮಾತು ಮತ್ತು ಆಲೋಚನೆಗಳು ಓದುಗರ ಅಂತರಂಗದಲ್ಲಿ ಗದ್ದಲ ಎಬ್ಬಿಸಿ ಯೋಚನೆಗೆ ಹಚ್ಚುತ್ತವೆ ಮತ್ತು ತಮ್ಮೊಳಗನ್ನು ಕಾಣಲಿಕ್ಕೆ ಸಹಕಾರಿಯಾಗಿ ಇಡೀ ಕಥೆ ಮತ್ತೆ ಮತ್ತೆ ಓದಿಸಿಕೊಳ್ಳುತ್ತದೆ.

ಮಾಘ ಮಾಸದ ಇಳಿಸಂಜೆ 

ತನ್ನ ಬಾಲ್ಯಕಾಲದ ನವಿರಾದ ಪ್ರೇಮವನ್ನು ಯಾವತ್ತೂ ಹಸಿರಾಗಿಸಿಕೊಂಡಿದ್ದ ಕಥಾನಾಯಕ ವಾಸ್ತವದಲ್ಲಿ ನಡೆಸುತ್ತಿದ್ದುದು ಯಾಂತ್ರಿಕ ಬದುಕು. ತಾನು ಕಲಿತ ಶಾಲೆಯಿಂದ ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮವೊಂದರ ಆಹ್ವಾನ ಪತ್ರಿಕೆ ಬಂದಿದೆ. ತನ್ನ ಪ್ರೇಯಸಿಯನ್ನು ಕಾಣಬಹುದೆಂಬ ಒಂದೇ ಒಂದು ಕಾರಣಕ್ಕೆ ಕಥಾನಾಯಕ ಕಾರ್ಯಕ್ರಮಕ್ಕೆ ಹೊರಡುತ್ತಾನೆ. ಪ್ರೇಮಿಗಳಿಬ್ಬರೂ ಪರಸ್ಪರ ಭೇಟಿಯಾದಾಗ ನಡೆಯುವ ಮಾತುಕತೆಯ ಸಂದರ್ಭಗಳು, ಸನ್ನಿವೇಷಗಳು ಓದುಗರಿಗೂ ತಮ್ಮ ಬಾಲ್ಯದ/ಪ್ರಥಮ ಪ್ರೇಮ ಒಂದು ಗಳಿಗೆಯಾದರೂ ಕಾಡದೇ ಉಳಿಯದು.

ಕನ್ಯಾಗತ 

ಕುಟುಂಬದವರು ಮಾಡಿದ ಅವಮಾನ ತಾಳದೇ ವಾಸುದೇವ ಮನೆ ಬಿಟ್ಟು ಹೋದಂಥವನು. ರಾಘವೇಂದ್ರನ ಸ್ಮರಿಸುತ್ತ ದೇಶದ ತೀರ್ಥಸ್ಥಳ, ಯಾತ್ರೆ ಮಾಡುವುದೇ ತನಗೆ ಮುಕ್ತಿ ಮಾರ್ಗವೆಂದು ಪಥಿಕನಾಗುತ್ತಾನೆ. ಮನೆಯಲ್ಲಿ ತನ್ನನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದುದ್ದುದ್ದೇ ತಾಯಿ ರಿಂದವ್ವ. ಆಕೆಯ ಪ್ರೀತಿ ಆತನನ್ನು‌ ಇನ್ನೂ ಸೆಳೆಯುತ್ತಲೆ ಇತ್ತು. ಸೆಳೆತವೇ ಆತನಿಗೆ ಕನಸು ಬೀಳಿಸಿತ್ತು. ಆತನನ್ನು ಆ ಕೂಡಲೇ ಮನೆಗೆ ಕರೆತಂದಿತ್ತು ಸಹ. ಮನೆಗೆ ಹೋದ ತುಸು‌ ದಿನಗಳಲ್ಲಿ ತಾಯಿ‌ ರಿಂದವ್ವ ಸಾಯತ್ತಾಳೆ. ತಾಯಿ ಸತ್ತಮೇಲೆ ತನ್ನದೆನ್ನೆವುದು ಅಲ್ಲೇನು ಇಲ್ಲವೆಂದು ವಾಸುದೇವ ಮತ್ತೆ ತೀರ್ಥಯಾತ್ರೆ ಹೊರಡುತ್ತಾನೆ.‌ ರಿಂದವ್ವ ಮತ್ತೊಮ್ಮೆ ಕನಸಿನಲ್ಲಿ ಬಂದಿದ್ದಕ್ಕಾಗಿ ವಾಸುದೇವ ಮತ್ತೆ ಊರಿಗೆ ಹೊರಡುತ್ತಾನೆ. ಅದು ಮನೆಯ ಬಟವಾರೆ ನಡೆಯುತ್ತಿರುವ ಸಂದರ್ಭವೂ ಹೌದು. ಒಂದಿನ ವಾಸುದೇವ ಪೂಜೆ ಮಾಡುವ ಸಂದರ್ಭದಲ್ಲಿ ಅಪ್ಪ ಅವ್ವ ಕೂಡಿಟ್ಟ ಬಂಗಾರ ಬೆಳ್ಳಿಯ ಗಂಟು ಸಿಗುತ್ತದೆ. ರಿಂದವ್ವಳ ಕನಸಿನ ತಿರುಳು ವಾಸಿದೇವನಿಗೆ ಅರ್ಥವಾಗುತ್ತದೆ. ಕುಟುಂಬ ಬಂಧನದಿಂದ ಮುಕ್ತನಾಗಬಯಸಿದ್ದ ವಾಸುದೇವ ಆ ಗಂಟನ್ನು ಹೊಳೆಯಲ್ಲಿ ಬಿಟ್ಟು ಬರುತ್ತಾನೆ. ಆ ಮೂಲಕ ವಾಸುದೇವ ಕುಟುಂಬದ ಎಲ್ಲ ಋಣಗಳಿಂದ ಮುಕ್ತನಾದ ಎನ್ನುವುದು ಕಥೆಯ ತಾತ್ಪರ್ಯ. ಹೌದಾ? ಎನ್ನುವ ಪ್ರಶ್ನೆ ಕಾಡದೇ ಇರದು. ಅಣ್ಣಂದಿರ ಅಸೂಯೇ, ತಾತ್ಸಾರ, ಅವಮಾನ, ತಿರಸ್ಕಾರ, ತಮ್ಮನೆಂಬ ಅಕ್ಕರೆಯೂ ಇಲ್ಲದ ಪುಷ್ಪಕ್ಕಳ ವ್ಯಾವಹಾರಿಕ ಮಾತು, ತನ್ನ ಸಹವಾಸಗಳು ಗೊತ್ತಾಗಿವೆ ಎನ್ನುವ ಕಾರಣಕ್ಕಾಗಿ ಈತ ಇನ್ನು ಇಲ್ಲಿದ್ದರೆ ತನಗೆ ಕುತ್ತು ಎಂದು ಕಳ್ಳತನದ ಅಪವಾದ ಹೊರೆಸುವ ಅತ್ತಿಗೆಯ ನೀಚತನ, ಸಣ್ಣತನಗಳು... ಇದೆಲ್ಲದರಿಂದಾಗಿಯೇ ಹುಟ್ಟಿದ ವಾಸುದೇವನ ಅನಾಥ ಪ್ರಜ್ಞೆ ಮಾತ್ರ ಓದುಗರ ಹೃದಯವನ್ನು ಆರ್ಧೃಗೊಳಿಸುತ್ತದೆ.

ಅಕಥ ಕಥಾ ಸಂಕಲನದ ಪ್ರತಿ ಕಥೆಗಳೂ ಓದುಗರ ವ್ಯಕ್ತಿತ್ವದ ಜೊತೆ, ಬದುಕಿನ ಅನುಭವಗಳ ಜೊತೆ ತಾತ್ವಿಕ ನೆಲೆಯಲ್ಲಿ ಸಂವಾದ ನಡೆಸುತ್ತವೆ. ಹಾಗಾಗಿ ಇವು ಮತ್ತೆ ಮತ್ತೆ ಓದಿಸಿಕೊಳ್ಳುವಂಥವುಗಳು. 

ಪುಸ್ತಕದ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ- https://www.bookbrahma.com/book/akatha-katha

ರುಕ್ಮಿಣಿ ನಾಗಣ್ಣವರ್