Article

ಅನುಭವದ ಮೂಸೆಯಲ್ಲಿ ಮೂಡಿದ ಭಾವ ‘ಗುಬ್ಬಿ ಎಂಜಲು’

ಬಹುದಿನಗಳ ನಂತರ ಲಲಿತ ಪ್ರಬಂಧಗಳನ್ನು ಓದಿ ಖುಷಿಪಟ್ಟಿರುವೆ. ಲಲಿತ ಪ್ರಬಂಧಗಳೇ ಹಾಗೆ ಅವುಗಳು, ಬರಹಗಾರನ ಬದುಕಿನ ಸುತ್ತ ನಡೆದ ಘಟನೆಗಳಾದರೂ ಅದೆಷ್ಟೋ ಬರೆಯದೇ ಇರುವ ಮನಸ್ಸುಗಳ ಅಂತರಂಗವೂ ಅವುಗಳಾಗಿರುತ್ತವೆ. ಅಂತಹ ಪ್ರಬಂಧಗಳನ್ನು ಓದಿದಾಗೆಲ್ಲ 'ಹೌದು ನಮ್ಮ ಬಾಲ್ಯವೂ ಹೀಗೇ ಇತ್ತು', 'ಹೌದು ನಮ್ಮನೆಯಲ್ಲೂ ಹೀಗೆ ನಡಿತಿತ್ತು', 'ಹೌದು ನಮ್ಮ ಶಾಲೆಯೂ ಹೀಗೆ ಇತ್ತು' ಎನ್ನುತ್ತಲೇ ಮನಸ್ಸು ಮುದಗೊಳ್ಳುತ್ತ ತನ್ನ ಬಾಲ್ಯಕ್ಕೆ ಕಾಲಿಡುತ್ತದೆ. ತನ್ನ ಬದುಕಿನ ಹಲವಾರು ನೆನಪುಗಳನ್ನು ತೆರೆದುಕೊಳ್ಳುತ್ತದೆ.

'ಗುಬ್ಬಿ ಎಂಜಲು' ಕೃತಿಯಲ್ಲಿ ಒಟ್ಟು ಹದಿನಾರು ಪ್ರಬಂಧಗಳಿದ್ದು ಅವುಗಳಲ್ಲಿ ಕೆಲವು ನಮ್ಮನ್ನು ಬಾಲ್ಯಕ್ಕೆ ಕರೆದುಕೊಂಡು ಹೋಗುತ್ತವೆ, ಇನ್ನೂ ಕೆಲವು ಮಾಲ್ಗುಡಿ ಡೇಸ್ ನೆನಪಿಸುವಂತವುಗಳು, ಪಕ್ಷಿಪ್ರಪಂಚದ ಚಿತ್ರಣಗಳಿವೆ, ಅಂತಸ್ತಿಗೆ ತಕ್ಕಂತೆ ವರಹುಡುಕುವವರ ಕಥನವಿದೆ, ಕ್ಷೌರಿಕನ ಲೋಕಜ್ಞಾನದ ಮಾತುಗಳಿವೆ, ಸತಿ-ಪತಿಗಳ ಸುಂದರ ಸಂಸಾರದ ಸಿಹಿಮಾತುಗಳಿವೆ ಹೀಗೆ ತಮ್ಮ ಅನುಭವದ ಮೂಸೆಯಲ್ಲಿ ಮೂಡಿದ ಭಾವಗಳನ್ನು ಸರಳವಾಗಿ ಸುಲಲಿತವಾಗಿ ತಮ್ಮ ಪ್ರಬಂಧಗಳಲ್ಲಿ ಚಿತ್ರಿಸಿದ್ದಾರೆ‌.

'ಬೆಕ್ಕಿಗೆ ಜ್ವರಾ ಬರುತ್ತಾ?', ಪ್ರಬಂಧದಿಂದ ಆರಂಭವಾಗುವ ಬರಹಗಳು ಓದುತ್ತಾ ಓದಂತೆ ಏನೂ ಇಲ್ಲವಲ್ಲ ಎಂದು ಎಂದೆನಿಸಿದರೂ ಅಬ್ಬಾ! ಹೌದಾ ಹೀಗೂ ಇಷ್ಟೆಲ್ಲ ವಿಷಗಳಿವೆಯಾ? ಎಂಬ ಅಚ್ಚರಿಯ ಜೊತೆಗೆ ಖುಷಿಯೂ ಆಗುತ್ತದೆ. ಪ್ರತಿ ಪ್ರಬಂಧದಲ್ಲೂ ತಿಳಿಹಾಸ್ಯಬೆರೆತಿದ್ದು ಬಹಳ ಇಷ್ಟವಾದವು.

ಬೆಕ್ಕಿಗೆ ಜ್ವರ ಬರುತ್ತಾ, ಜಿರಲೆ ಸಂಸಾರ ಪ್ರಬಂಧಗಳು ಪ್ರಾಣಿಗಳಿಂದ, ಕೀಟಗಳಿಂದ ಮನೆಗಳಲ್ಲಾಗುವ ವಿಪರೀತವೆನಿಸುವ ಅನಾಹುತಹಳನ್ನು ಸೊಗಸಾಗಿ ಚಿತ್ರಿಸಿದ್ದಾರೆ‌. ಇದು ತಲೆ ಕೂದಲ ಪುರಾಣದಲ್ಲಿ ಕ್ಷೌರಿಕನ ಮೂಲಕ ಜೀವನಸತ್ಯಗಳೆನಿಸುವಂತಹ ಮಾತುಗಳು ನಿಜಕ್ಕೂ ಇಷ್ಟವಾದವು‌.

ನನ್ ಹಿಂಬದಿ ಕಣ್ಣು ಒಡೆದೊಯ್ತು… ಅಮೇಲೆ…. ಏನೇನಾಯ್ತು..? ಪ್ರಬಂಧ ಓದಿದ ನಂತರ ನನಗೂ ನನ್ನ ಬೈಕಿನ ಬಲಗಡೆ ಮಿರರ್ ಮೇಲೆ ಪ್ರೀತಿ ಜಾಸ್ತಿಯಾಗಿದ. ಬಹಳ ಖುಷಿಕೊಟ್ಟ ಪ್ರಬಂಧ ಇದು.

ನಾ ನಿನ್ನ ಮದುವೆಯಾಗೋಲ್ಲ ಅಂದೆ ಅವಳು ಬ್ರಹ್ಮಕುಮಾರಿಗೆ ಸೇರಿದಳು! ಎಂಬ ಪ್ರಬಂಧವು ಲಟ್ಟಣಿಗೆಯೆ ಜೊತೆ ಬೆಸೆದುಕೊಂಡ ಬಗೆ, ಅದೊಮ್ಮೆ ಉಗಿಯೋವರ್ಗೂ ತೆಡಕೊಳ್ರೀ…. ಪ್ರಬಂಧವು ಮನೆಯ ನಲ್ಲಿಗಳ ಹಾವಭಾವದ ಸುತ್ತಲೂ ಬಿತ್ತರಗೊಂಡರೆ, ಪಾರಿವಾಳಗಳ ಸಂಸಾರ ಲೇಖಕರ ಪಕ್ಷಿಗಳೊಡನಾಟದ ಚಿತ್ರಣವನ್ನು ಕಟ್ಟಿಕೊಡುತ್ತದೆ‌.

ಹೀಗೆ ಒಂದೊಂದು ಪ್ರಬಂಧಗಳು ಒಂದೊಂದು ಭಾವಲಹರಿಯನ್ನು ಹೊತ್ತು ತಿಳಿಹಾಸ್ಯದಲ್ಲಿಯೇ ಜೀವನಪ್ರೀತಿಯನ್ನು ಸೂಸುತ್ತವೆ. ಪ್ರತಿ ಪ್ರಬಂಧ ಓದುವಾಗಲೂ ಒಬ್ಬನೇ ಮುಗುಳ್ನಕ್ಕದ್ದು ಉಂಟು ಖುಷಿಪಟ್ಟದ್ದು ಉಂಟು.

ಎಲ್ಲಕ್ಕಿಂತ ಹೆಚ್ಚಾಗಿ ಲೇಖಕರು ಈಗಾಗಲೇ "ವೇಂಡರ್ ಕಣ್ಣು" ಪತ್ರಿಕೆ ಹಂಚುವ ವೆಂಡರ್ಗಳ ಅನುಭವಗಳನ್ನು, "ಫೋಟೋ ಕ್ಲಿಕ್ಕಿಸುವ ಮುನ್ನ" ಛಾಯಾಚಿತ್ರದ ಕುರಿತಂತೆ ಸೊಗಸಾಗಿ ಮೂಡಿಬಂದ ಉತ್ತಮ ಕೃತಿಗಳನ್ನು ಕನ್ನಡಕ್ಕೆ ನೀಡಿದ್ದಾರೆ‌. ಗುಬ್ಬಿ ಎಂಜಲು ಬಹುದಿನಗಳಿಂದ ಹುಡುಕುತ್ತಿದ್ದೆ ಸಿಕ್ಕಿರಲಿಲ್ಲ. ಓದಿ ಖುಷಿಯಾಯ್ತು.

ಗುಬ್ಬಿ ಎಂಜಲು ಲಲಿತ ಪ್ರಬಂಧಗಳನ್ನು ಓದು ಮುಗಿಸಿದಾಗ ನಮ್ಮ ಅನುಭವಗಳನ್ನು ನಾವೂ ಹೀಗೆ ಬರೆಯಬಹುದಲ್ಲ ಎಂಬ ಸಣ್ಣ ಆಸೆ ಮನದೊಳಗೆ ಮೊಳಕೆಯೊಡೆಯಿತು‌. ಬರೆಯುವ ಹಂಬಲವಾದಾಗಲೆಲ್ಲ ಮರಳಿ‌ ಮರಳಿ ಓದಬಯಸುವೆ ಗುಬ್ಬಿ ಎಂಜಲನ್ನು.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜು ಹಗ್ಗದ