Article

ಏಪ್ರಿಲ್ ಫೂಲ್ : ಮೂರ್ಖತ್ವ ಸಮಾಜದೊಂದಿಗಿನ ಮನುಷ್ಯತ್ವದ ಮುಖಾಮುಖಿ

ನಮ್ಮ ಕಣ್ಣಳತೆಯ ಸುತ್ತಲೇ  ಕುಸಿದು ಬಿದ್ದ ಎಷ್ಟೋ ನಗಣ್ಯ ಅನಿಸಿರಬಹುದಾದ ವಿಚಾರಗಳೇ ಇಲ್ಲಿನ ಬಹುತೇಕ ಕತೆಗಳ ವಿಷಯ ವಸ್ತು.ಕತೆ ಕಟ್ಟುವುದಲ್ಲ, ಕಟ್ಟಿಕೊಳ್ಳುವುದು ಮತ್ತು ಓದುಗರನು ಬಿಟ್ಟುಗೊಡದೆ ಅವರೊಂದಿಗೆ ಹಾದಿ ಸವೆಸುವ ಹೊಣೆಗಾರಿಕೆಯನ್ನು ಕತೆಗಾರ ಹೊತ್ತಿರುತ್ತಾನೆ. ಇಂಥ ಸಾಮಾಜಿಕ ಜವಾಬ್ದಾರಿಗಳ ಬೆಟ್ಟ ಹೊತ್ತಿರುವ ಹನುಮಂತ ಹಾಲಗೇರಿ ಅವರ "ಏಪ್ರಿಲ್ ಫೂಲ್" ಕಥಾ ಸಂಕಲನದಲ್ಲೂ ಬಹಳ ಅಂಶಗಳು 'ಕಟ್ಟಿಕೊಳ್ಳುವುದೇ ಇದೆ. 

ಇಲ್ಲಿನ ಬಹುತೇಕ ಕತೆಗಳಿಗೆ ಬಹು ಆಯಾಮದ ನೆರಳುಗಳಿವೆ. ತೀಷ್ಣ ವಿಮರ್ಶೆ ಅದರ ಬೇರಾಗಿದ್ದರೆ, ಹೊಸ ಮನ್ವಂತರ ಕತೆಯ ಆಶಯದ ರೂಪದಲ್ಲಿ ಚಿಗುರಾಗೆ ಇರುತ್ತದೆ.  ಸಮ ಸಮಾಜದಲ್ಲಿ ಯಾವುದೂ ಸಮವಾಗಿ ಹಂಚಿಕೆ ಆಗಿಲ್ಲ ಎಂಬ ಅರಿವಿರುವ ಕತೆಗಾರ, ಖಾಲಿ ಬೊಗಸೆ ತುಂಬುವ ಕೆಲಸ ಮಾಡಿದ್ದಾನೆ. ಲಿಂಗ ತಾರತಮ್ಯ ತಾರಕ್ಕಕೇರಿದಾಗ ಗತಿಸಬಹುದಾದ ಕಲ್ಪನಾ ವಿಲಾಸಿ ಜಗತ್ತು, ಗಂಡಿಗೆ ಹೇಗೆ ಬೆವರಿಳಿಸಬಲ್ಲದು ಎಂಬ ಸಂಭವಿಸಬಹುದಾದ ಜಗತ್ತನ್ನು 'ಏಪ್ರಿಲ್ ಫೂಲ್' ಕತೆಯಲ್ಲಿ ಕಾಣಬಹುದು. ಮೇಲ್ನೋಟಕ್ಕೆ ತಿಳಿ ಹಾಸ್ಯದಂತೆ ಚಿತ್ರಿಸಿದ ಈ ಚಿತ್ರಕಥೆ ತನ್ನೊಡಳೊಗೆ ಅಸಂಖ್ಯಾತ ನೋವಿನ ನಗುಗಳನ್ನಿಟ್ಟುಕೊಂಡಿದೆ. ವ್ಯವಸ್ಥೆ ಪರಸ್ಪರ ಭಿನ್ನ ಲಿಂಗಿಗಳಿಗೆ ಸಹಜ ಸಮಾನತೆ ನೀಡದಿದ್ದರೆ, ಅದರ ಬುಡ ಮೇಲಾಗುವ ಸಣ್ಣ ಝಲಕ್ ಈ ಕತೆಯ ವಿನ್ಯಾಸ. 

 'ಅದು' ಕತೆಯೂ ಬಹಳ ಕುತೂಹಲದ ಟೈಟಲ್ನೊಂದಿಗೆ ಮನೋ ಸಹಜವಾದ ಸೆಳೆತ ಮಿಡಿತಗಳ ಸಮಗುಚ್ಚವೇ ಆಗಿದೆ. ಲೈಂಗಿಕತೆಯನ್ನು ಗೌಪ್ಯತೆ ಮತ್ತು ಮಡಿವಂತಿಕೆಯಲ್ಲಿ ಬಂಧಿಸಿದ ದೇಶದ ಜನಸಂಖ್ಯೆ ಜಗತ್ತಿಗೆ ಧಿಗಿಲಾಗುವಂತೆ ಮಾಡುತ್ತಿರುವುದು ವಿಪರ್ಯಾಸ. ಕಾಮಾಭಿಲಾಷೆಯನ್ನು ವ್ಯಕ್ತ ಪಡಿಸುವ ಅಥವಾ ಅದಕ್ಕಾಗಿ ಹಾತೋರೆಯು ಜೀವಿಗಳನ್ನು ಘನಗೋರ ಅಪರಾಧಿಯಂತೆ ಕಾಣುವ ಸಮಾಜ, ಕೊಂದೇ ತೀರುವ ಅವರ ’ಅದು’ ಮೆಚ್ಚ ತಕ್ಕದ್ದೆ!

ಇನ್ನೂ 'ಅಲೈ ದೇವ್ರು' ಮತ್ತು 'ಸುಡುಗಾಡು' ಕತೆಗಳು ಬದುಕಿನ ಭಿನ್ನ ನೆಲೆಗಳತ್ತ ಕಣ್ಣಾಡಿಸುತ್ತವೆ. ಧರ್ಮದ ವ್ಯಾಪಾರದಂಗಡಿಯಲ್ಲಿ ಮಾನವೀಯತೆ ಮತ್ತು ಸಂಬಂಧಗಳ ಸರಕಿಗೆ ಕಿಮ್ಮತ್ತಿಲ್ಲದ ಲೋಕವನ್ನು ಗೇಲಿ ಮಾಡಿದಂತಿದೆ‌. ಮನುಷ್ಯನಿಗಿಂತ ಮಿಗಿಲಾಗಿ ಜಗದಲ್ಲಿ ಯಾವುದೂ ಇರಬಾರದಿತ್ತು. ಆದರೆ ಇಲ್ಲಿ ಧರ್ಮದ ಎದುರು ಎಲ್ಲವೂ ಗೌಣ. ಬೇನೆಯನ್ನೆ ತಿಂದು ಬದುಕುವ ಈ ಬದುಕಿಗೆ ಆಶ್ರಯ ನೀಡದ ಧರ್ಮವನ್ನು ಯಾವ ಸುಡಗಾಡಿಗಲ್ಲಿ ಸುಡಬೇಕೋ ಎಂಬ ನಿರಾಶೆ ಮತ್ತು ಕನಿಕರದ ಭಾವ ಮೂಡದೇ ಇರಲಾರದು. ಬಹಳಷ್ಟು ಸ್ತ್ರೀ ಕೇಂದ್ರಿತ ನೆಲೆಯಲ್ಲಿರುವ ಕತೆಗಳು ಪುರುಷತ್ವದ ಹಸಿವು ಮತ್ತು ಅಸೂಯೆಯಲ್ಲಿ ನರಳುವ ನೋವಿನ ಚಿತ್ರಣವನ್ನೆ ಚಿತ್ರಿಸಿವೆ. ಹಸಿವ ನೀಗಿಸಲು ದೇಹಿ ಎನ್ನುವ ಅಥವಾ ದೇಹ ಮಾರಿಕೊಳ್ಳುವ ದಾರಿಗಳ ಹೊರತು ಮತ್ತೇನೂ ಆಯ್ಕೆ ನೀಡದ ಸಮಾಜ ಸ್ತ್ರೀ ಯನ್ನು ದೇವರಾಗಿ ಆರಾಧಿಸುವುದು ಭಾರತದ ಬಹಳ ದೊಡ್ಡ ವ್ಯಂಗ್ಯ ಸಂಸ್ಕೃತಿ ಅನ್ನಿಸುತ್ತದೆ. ಅಂತೆಯೇ 'ಸಿದ್ದಯ್ಯನ ಪವಾಡ', 'ಪ್ರೀತಿಗೆ ಸೋಲಿಲ್ಲ', 'ಫಾರಿನ್ ಹೊಲೆಯ' ಹೀಗೆ ಹಲವು ಕತೆಗಳು ಭಾರತ ದೇಶದ ಸೋಕಾಲ್ಡ್ ಸಂಸ್ಕೃತಿಯ ವ್ಯಂಗ್ಯ ಚಿತ್ರದಂತೆ ಇವೆ. ಸತ್ಯ ಮತ್ತು ದೇವರು ಪರಸ್ಪರ ವಿರುದ್ಧ ಪದಗಳಂತೆ ಇರುವ ಈ ಧುರುಳ ವರ್ತಮಾನದಲ್ಲಿ ದೇವರೇ ಸತ್ಯ ಎನ್ನುವ ಭಕ್ತ ಮಹಾಶಯರು ಒಂದೆಡೆಯಾದರೆ, ಸತ್ಯವೇ ದೇವರು  ಅದೇ ಪ್ರಕೃತಿ ಎನ್ನುವ ಜ್ಙಾನವನ್ನುಬೋಧಿಸಿದವನು ತಲೆ ಕೆಟ್ಟವನಂತೆ ಕಾಣುವುದು ಸಹಜ. ಮತ್ತು ಸಹಜವಾದ ಆಕರ್ಷಣೆಯ ವಸ್ತುಗಳಾದ ಕಾಮಪ್ರೇಮಾದಿಗಳನು ನಿಗ್ರಹಿಸಲು ನೇಮಕವಾಗಿರುವ ಧರ್ಮದ ನಿಯಂತ್ರಣ ಮಂಡಳಿ ಮತ್ತು ಮನುಷ್ಯನೇ ಆಗಿರುವ ಸ್ವಾಮಿ ಒಬ್ಬನೆ ಉಪನ್ಯಾಸ ಧಾರ್ಮಿಕ ಕಾಮಿಡಿ ಎನಿಸುತ್ತದೆ. 

ಇನ್ನೂ 'ಫಾರಿನ್ ಹೊಲೆಯ' ಕತೆಯಂತು ಸ್ವಯಂ ಘೋಷಿತ "ವಿಶ್ವ ಗುರು"ವಿನ ನೆರಳಚ್ಚು. ಭಾರತದ ಭಾವನಾತ್ಮಕ ಸಂಗತಿಗಳೆಂದು ಆರೋಪಿಸಿರುವ ಗೋವು ಮತ್ತು ಆಹಾರ ಸಂಸ್ಕೃತಿಯನ್ನು ಕಂಡು ನಗಬೇಕೋ ಅಳಬೇಕೋ ಎಂದು ತಿಳಿಯದ ಫಾರಿನ್ನಿನ ಆಸಾಮಿಯ ವಿಶ್ಲೇಷಿಸುವ ರೀತಿ, ಭಾರತೀಯರಾದ ನಮಗೂ ನಾಚಿಕೆ ಆಗುವಂಥದ್ದು. ಧರ್ಮದ ಪೂಜ್ಯತೆ ಒಂದೆಡೆಯಾದರೆ, ಆಹಾರದ ಅನಿವಾರ್ಯತೆ ಇನ್ನೊಂದೆಡೆ ಇರುವ ಈ ದೇಶದ ವಿಚಿತ್ರ ಸಂಸ್ಕೃತಿಯ ಹಲವು ಮುಖಗಳನ್ನು ತೆರೆದಿಡಲಾಗಿದೆ. ಒಟ್ಟಿನಲ್ಲಿ ನಕ್ಷತ್ರಗಳನ್ನು ನದಿಗೆಸೆದು ಕಡಲೊಳಗೆ ನಕ್ಷತ್ರ ಮೀನಿಗಾಗಿ ಬಲೆ ಬೀಸುವ ಕುಸುರಿ ಕೆಲಸ ಈ ಕತೆಗಳಲ್ಲಿವೆ. ಅಲ್ಲಲ್ಲಿ ಕತೆಗಳನು ಹೆಣೆಯುವ ಭರಾಟೆಯಲ್ಲಿ ಕತೆಗಾರ ತನ್ನದಲ್ಲದ ಭಾವಾವೇಷಕ್ಕೆ ಒಳಗಾಗಿ ಸೋತ ಹಾಗೆ ಕಾಣುತ್ತಿದ್ದಂತೆ, ಮತ್ತೆ ಎಚ್ಚರವಾಗುವ ಅವನ ಸುಪ್ತ ಪ್ರಜ್ಞೆಯನ್ನು ಮೆಚ್ಚಲೇ ಬೇಕು. ಹಳ್ಳಿಯ ಅನುಭಾವಿ ಜಗತ್ತಿನಿಂದ ನಗರದತ್ತ ಹೆಜ್ಜೆ ಹಾಕಿದ ಅನುಭವ ಹಾಲಗೇರಿ ಅವರ ಕತೆಗಳಲ್ಲಿ ಕಾಣಲು ಸಿಕ್ಕಿವೆ. ಇಂಥ ವರ್ತಮಾನದ ಕನ್ನಡಿಯನ್ನು ಪುಸ್ತಕದಲಿ ನಮ್ಮೆದುರಿಗೆ ಹಿಡಿದ ನೆಚ್ಚಿನ ಕತೆಗಾರ ಹನುಮಂತ ಹಾಲಗೇರಿ ಅವರಿಗೆ ನಲ್ಮೆಯ ಖುಷಿಯೊಂದಿಗೆ ಓದಿದ್ದೇನೆ !

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಚಾಂದ್ ಪಾಷಾ (ಕವಿಚಂದ್ರ)