Article

‘ಏಪ್ರಿಲ್ ಫೂಲ್‌’ನ ಸಮಾಜಮುಖಿ ಕಥೆಗಳು

‘ಏಪ್ರಿಲ್ ಫೂಲ್’ ಕಥೆ ಓದುವಾಗ ತಡೆದುಕೊಳ್ಳಲಾಗದಷ್ಟು ಒತ್ತರಿಸಿಕೊಂಡು ಹೊರಬರುವ ನಗು ಒಂದ್ಕಡೆಯಾದರೆ, ಇನ್ನೊಂದ್ಕಡೆ ಇದು ಕಾಲ್ಪನಿಕ ಅನ್ನಿಸಿದರೂ, ದಿಟವಾಗುವ ದಿನಗಳು ದೂರವಿಲ್ಲ ಅನ್ನೊ ಆತಂಕ ಒಳಗೊಳಗೇ ತಣ್ಣಗೆ ಇರಿಯುತ್ತದೆ. ಹನುಮಂತ ಹಾಲಿಗೇರಿಯವರ ಕಥೆ ಕಟ್ಟುವ ಕೌಶಲ್ಯಕ್ಕೆ ನಿಜಕ್ಕೂ ನಾನು ಬೆರಗಾಗಿ ಶರಣಾಗಿಬಿಟ್ಟೆ. ಕಥೆ ಓದುವಾಗ ಅತೀ ಹೆಚ್ಚು ನಕ್ಕಿದ್ದು ಪ್ರಾಯಶಃ ಇದೇ ಮೊದಲು.

ಸುಡುವ ನೆಲದವರ (ಬಯಲು ಸೀಮೆಯವರ) ಒಲವು, ನಿಲುವು, ಮುಗ್ದತೆಯನ್ನು ಅರ್ಥೈಸಿಕೊಂಡು, ಅಲ್ಲಿಯೇ ನೆಲಸಿರುವ ಕೆಲ ದುಷ್ಟಶಕ್ತಿಗಳು ರಾಷ್ಟ್ರಪ್ರೇಮ, ರಾಷ್ಟ್ರ ರಕ್ಷಣೆ, ಧರ್ಮದ ನೆಪದಲ್ಲಿ ಇಡೀ ಊರಿನ ಸಾಮರಸ್ಯವನ್ನೇ ಕುಲಗೆಡಿಸುವ ಕುತಂತ್ರದ ಚಿತ್ರಣವನ್ನು ‘ಅಲೈದೇವ್ರು’ ಕಥೆ ತುಂಬಾ ಅರ್ಥಪೂರ್ಣವಾಗಿ ತೆರೆದಿಟ್ಟಿದೆ.

ಸ್ಮಶಾನದಲ್ಲಿ ಹೂತಿರೊ ಹೆಣಗಳನ್ನೇ ದೇವರೆಂದು ನಂಬಿ, ಕುಣಿತೊಡಿ ಬದುಕು ಕಟ್ಟಿಕೊಂಡವರ ತಲ್ಲಣಗಳು, ಸಮಾಜ ಅವರನ್ನು ನಡೆಸಿಕೊಳ್ಳುವ ರೀತಿ, ಪೊಲೀಸರ ಅಮಾನವೀಯತೆ, ಮುಳುವಾಗುವ ತಂತ್ರಜ್ಞಾನ ‘ಸುಡುಗಾಡು’ ಕಥೆಯಲ್ಲಿ ಓದುಗರ ಕರುಳ ಹಿಂಡುತ್ತವೆ. ಕಟ್ಟಕಡೆಯವರ ಕುರಿತು ಕಥೆಗಾರನಿಗಿರುವ ಕಾಳಜಿ ಕಂಡು ಪ್ರತಿ ಓದುಗನು ತೆಲೆಬಾಗಲೇಬೇಕು.

ಸ್ಥಿತಪ್ರಜ್ಞ, ಸಿದ್ದಯ್ಯನ ಪವಾಡ ಮತ್ತು ಪ್ರೀತಿಗೆ ಸೋಲಿಲ್ಲ ಈ ಮೂರು ಕಥೆಗಳಲ್ಲಿ ಇಂದಿನ ಸ್ವಾಮಿಗಳ ಭಾವಶೂನ್ಯತೆ, ಅಸಹಿಷ್ಣುತೆ, ನಿಷ್ಕುರುಣೆ, ನಿರ್ಧಯತೆ ಎಲ್ಲವುಗಳ ಅನಾವರಣವಾಗಿದೆ. ಮೌಢ್ಯ ಬಿತ್ತುವ, ವೈಚಾರಿಕ ವಿರೋಧಿ ಮಠಗಳಿಂದ ಜನ ಆದಷ್ಟು ಬೇಗ ವಿಮುಖರಾಗಬೇಕೆಂಬ ಸಂದೇಶವನ್ನು ತುಂಬಾ ಸ್ಪಷ್ಟವಾಗಿ ಸೂಚಿಸಿವೆ. ಹರಿಯುವ ಜೀವಪ್ರೀತಿಗೆ ಕಪಟ ಸ್ವಾಮೀಜಿಗಳು ಕಟ್ಟುವ ತಡೆಗಳನ್ನು, ಮಠಗಳ ಮುಖವಾಡಗಳನ್ನು ಕಥೆಗಾರರು ಕೆಡುವಿದ್ದಾರೆ.

ಇಂದಿನ ಕಾರ್ಪೋರೇಟ್ ಸಂಸ್ಕøತಿಯಲ್ಲಿ ಸ್ವಾರ್ಥಕ್ಕಾಗಿ ಬದ್ಧತೆಯನ್ನೇ ಬದಿಗೊತ್ತಿ, ಮೇಲಾಧಿಕಾರಿಗಳೊಂದಿಗೆ ರಾಜಿಮಾಡಿಕೊಂಡು ಬದುಕುವ ಸೊಗಲಾಡಿ ವ್ಯಕ್ತಿಗಳ ಚಿತ್ರಣ ‘ಫಾರಿನ್ ಹೊಲಿಯಾ’ ಕಥೆಯಲ್ಲಿ ರೋಚಕವಾಗಿದೆ. ಇಲ್ಲಿ ಮುಖ್ಯವಾಗಿ ಆಹಾರ ಪದ್ದತಿಯ ಕುರಿತು ಸ್ವದೇಶಿ ಹಾಗೂ ವಿದೇಶಿ ವೈರುದ್ಯಗಳ ಕುರಿತು ಆರೋಗ್ಯಕರ ಚರ್ಚೆ ಸಕಾಲಿಕವಾಗಿದೆ. ಮುಖ್ಯವಾಗಿ ದೇಶಭಕ್ತಿಯ ನಶೆಯಲ್ಲಿರುವ ಇಂದಿನ ಯುವ ಸಮುದಾಯ ಹಾಗೂ ವಿದ್ಯಾರ್ಥಿಗಳು ಈ ಕಥೆಯನ್ನು ಓದಲೇಬೇಕು.

ಒಟ್ಟಾರೆ ‘ಏಪ್ರಿಲ್ ಫೂಲ್’ ಕಥಾ ಸಂಕಲನದಲ್ಲಿರುವ ಹದಿನಾರೂ ಕಥೆಗಳನ್ನು ಓದಿದ ಮೇಲೆ ಲೇಖಕರ ಸಮಾಜಮುಖಿ ಕಾಳಜಿ, ವರ್ತಮಾನಕ್ಕೆ ಮುಖಾಮುಖಿಯಾಗುವ ತೀರ್ವತೆ, ಸ್ವಾರ್ಥಿಗಳ ಕುರಿತು ಸಾತ್ವಿಕ ಸಿಟ್ಟಿನೊಡನೆ, ಬಹುತ್ವದ ಕನಸು ಕಟ್ಟುವ ಕಥೆಗಾರರ ಒಳನೋಟ ಆಪ್ತವೆನ್ನಿಸಿತು.

ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಬರೆಯದೇ, ತುಂಬಾ ಸ್ಪಷ್ಟವಾಗಿ ಹಲವು ಪಾತ್ರಗಳ ಮೂಲಕ ಎಲ್ಲವನ್ನೂ ಹೇಳಿಸಿರುವ ನೇರಕ್ರಿಯೆ ಇಷ್ಟವಾಯ್ತು. ವಿಶೇಷವಾಗಿ ಉತ್ತರ ಕರ್ನಾಟಕದ ಜವಾರಿ ಭಾಷೆಯ ಶೈಲಿ ಭಾಳಾ ಅಂದ್ರ ಭಾಳಾ ಹಿಡಸ್ತು, ಗೆಳೆಯನಿಗೆ ತುಂಬು ಹೃದಯದ ಅಭಿನಂದನೆಗಳು.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕೆ.ಬಿ.ವೀರಲಿಂಗನಗೌಡ್ರ