Article

ಅರ್ಥಪೂರ್ಣ ಕತಾಗುಚ್ಛ ‘ಒಂದು ಖಾಲಿ ಖುರ್ಚಿ’

ವಿಜಯ್ ಹೂಗಾರ್ ಅವರ 'ಒಂದು ಖಾಲಿ ಖುರ್ಚಿ' ಕಥಾಸಂಕಲನ ತನ್ನ ಸಹಜತೆ, ಸ್ಪಷ್ಟತೆ ಮತ್ತು ಪ್ರಾಮಾಣಿಕ ಅನುಭವಗಳೊಂದಿಗೆ ಓದುಗರನ್ನು ಹಿಡಿದಿಟ್ಟುಕೊಳ್ಳುತ್ತದೆ. ಅತಿ ರೂಪಕತೆ, ಸಂಕೇತಗಳ ಭಾರವಿಲ್ಲದೆ, ಓದುಗರನ್ನು ಬೆಚ್ಚಿ ಬೀಳಿಸಲೇಬೇಕೆಂಬ ಯಾವುದೇ ಪೂರ್ವ ನಿರ್ಧಾರಿತ ಚಿಲ್ಲರೆ ಗಿಮಿಕ್ಕುಗಳಿಲ್ಲದೆ ಓದುಗರನ್ನು ತಟ್ಟುವಲ್ಲಿ ಯಶಸ್ವಿಯಾಗುತ್ತದೆ. ಇದಕ್ಕೆ ಮುಖ್ಯ ಕಾರಣವೇನೆಂದು ಯೋಚಿಸುವಾಗ ಉತ್ತರವಾಗಿ ಹೊಳೆದದ್ದು ವಿಜಯ್ ಎತ್ತಿಕೊಂಡಿರುವ ಕಥಾವಸ್ತುಗಳು. ಇವರ ಹಲವು ಕಥೆಗಳನ್ನು ಓದುವಾಗ ರಿತುಪರ್ಣೋ ಘೋಷರ ಕೆಲವು ಸಿನಿಮಾಗಳು ನೆನಪಾಗುತ್ತವೆ. ಹೀಗೆ ನೆನಪಾಗುವುದು ಕಥೆಗಳ ಯಶಸ್ಸು ಎಂದೆ ಭಾವಿಸಿರುವೆ. ವಿಜಯ್ ಅವರ ಕಥಾ ಚೌಕಟ್ಟಿನಲ್ಲಿ ಬರುವ ಪಾತ್ರಗಳು ನಾವು ದಿನನಿತ್ಯ ಕಂಡೂ ಆಳಕ್ಕಿಳಿದಿರದ ಜೀವಗಳು. ಈ ಅಕ್ಯುಪಂಚರಿನಲ್ಲಿ ಹೇಗೆ ಪರಿಣತರಿಗೆ ಒತ್ತಡದ ಬಿಂದುಗಳು(ಪ್ರೆಷರ್ ಪಾಯಿಂಟ್ಸ್) ಗಳು ಗೊತ್ತಿದ್ದು ಅವುಗಳನ್ನು ಅದುಮಿ ಬಿಟ್ಟಾಗ ಹೇಗೆ ಹಗುರಾಗಿ ಬಿಡುತ್ತೀವೋ ಅಂತಹುದೇ ಅನುಭವ ಇವರ ಕಥಾಸಂಕಲನ ಓದುವಾಗ ಆಗುತ್ತದೆ.

ಕಥೆಯ ಕ್ಯಾನ್ವಾಸಿಗೆ ತಕ್ಕ ಹಾಗೆ ಗ್ರಾಮ್ಯ ಹಾಗೂ ಪೇಟೆಯ ಭಾಷೆಯನ್ನು ದುಡಿಸಿಕೊಂಡಿರುವುದು ಈ ಕಥೆಗಳ ಮತ್ತೊಂದು ಧನಾತ್ಮಕ ಅಂಶ. 'ರಾಮತೀರ್ಥದಲ್ಲೊಂದು ಅಶ್ವಮೇಧಯಾಗ' ಬಹುಕಾಲ ನೆನಪಿನಲ್ಲುಳಿಯುವ ಸಶಕ್ತ ಕಥೆ. ಈ ಕಥೆಯ ವಸ್ತುನಿಷ್ಠತೆ fiction is disproportionate reality ಎನ್ನುವ ಮಾತನ್ನು ಮತ್ತೊಮ್ಮೆ ಮರುಧ್ಯಾನಿಸುವಂತೆ ಮಾಡುತ್ತವೆ. ಇಲ್ಲಿನ ಎಲ್ಲಾ ಕಥೆಗಳಲ್ಲಿ ಬರುವ ಎಲ್ಲಾ ಸ್ತ್ರೀ ಪಾತ್ರಗಳನ್ನು ಅತ್ಯಂತ ಘನತೆಯಿಂದ ನಡೆಸಿಕೊಂಡಿರುವುದು ಚಿತ್ತಾಲರನ್ನು ನೆನಪಿಸುತ್ತದೆ. ಮುಖಾಮುಖಿ, ಒಂದು ಅಪೂರ್ಣ ಚಿತ್ರ, ನದಿಗಿಲ್ಲ ದಡದ ಹಂಗು, ಗೂಡು ಕಥೆಗಳು ಆಪ್ತವಾಗುವಂತಿವೆ.

ವಿಜಯ್ ಹೂಗಾರ್ ಕೆಲವೊಂದು ಕಡೆ ಹಲವು ಪಾತ್ರಗಳ ಭಾರದಲ್ಲಿ ಅಲ್ಲಲ್ಲಿ ಹದ ಕಡಿಮೆಯಾಯಿತೇನೋ ಅನಿಸುತ್ತವೆ. ನಮ್ಮ ಹಿಂದಿನ ತಲೆಮಾರನ್ನು ಕಟ್ಟಿಕೊಡುವಾಗ ಸಂಪೂರ್ಣವಾಗಿ ಒಳ್ಳೆಯತನ ಆರೋಪಿಸಿಬಿಡುವುದು ಅಲ್ಲಲ್ಲಿ ಕಾಣುತ್ತದೆ. ನಮ್ಮ ನೊಸ್ಟಾಲ್ಜಿಯಾ ಯಾವತ್ತೂ ಅಷ್ಟೊಂದು ಸುಂದರವಾಗಿ ಕಾಣುತ್ತದ? ಇವೆ ಕೆಲವು ಪ್ರಶ್ನೆಗಳನ್ನು ಹೊರತುಪಡಿಸಿದರೆ 'ಒಂದು ಖಾಲಿ ಖುರ್ಚಿ' ಒಂದು ಉತ್ತಮ ಕಥಾಸಂಕಲನ ಎನ್ನುವುದರಲ್ಲಿ ಎರಡು ಮಾತಿಲ್ಲ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ದಾದಾಪೀರ್‌ ಜೈಮನ್‌