Article

ಅಸಂಗತ ಅರಿವಿನ ’ಪತನ’

ನೊಬೆಲ್‌ ಪ್ರಶಸ್ತಿ ವಿಜೇತ ಆಲ್ಬರ್ಟ್ ಕಮೂ ಅವರ ಮೂಲ ಕೃತಿಯಾದ ’The fall’ನ್ನು ಕನ್ನಡಕ್ಕೆ ’ಪತನ’ವಾಗಿ ಮೂಲ ಕೃತಿಯಷ್ಟೇ ಜತನವಾಗಿ ಅನುವಾದಿಸಿದ್ದಾರೆ ಕಾರಕ್ಕಿಯವರು. ಈ ಪುಸ್ತಕದ ಆರಂಭದಲ್ಲಿ ಕಮೂ ನೊಬೆಲ್ ಪ್ರಶಸ್ತಿಯನ್ನು ಸ್ವೀಕರಿಸುತ್ತ ಮಾಡಿದ ಭಾಷಣವನ್ನೂ ಸೊಗಸಾಗಿ ಸಲೀಸಾಗಿ ಓದುವಂತೆ ಮಾಡಿದ್ದಾರೆ ಕಾರಕ್ಕಿ.

ಕಮೂ ತನ್ನ ತೀರಾ ನೇರಾನೇರವಾದ ವಿಚಾರಗಳನ್ನು ವಾಸ್ತವ ಜಗತ್ತಿನಲ್ಲಿ ಅತ್ಯಂತ ಕಠೋರವಾದರೂ ಸಹ, ಸಹನೀಯ ರೀತಿಯಲ್ಲಿ ತನ್ನ ಕೃತಿಗಳ ಮೂಲಕ ಪ್ರಕಟಿಸುತ್ತ ಬಂದವ. ಕಮೂ ಕೃತಿಗಳ ಕುರಿತು ಓಶೋ ಅವರಿಂದ ಹಿಡಿದು ಕೇಶವ ಮಳಗಿಯವರು ವಿಚಾರಿಸಿ ವಿಮರ್ಶಿಸಿದ್ದಾರೆ. ಕಮೂ ಕೃತಿಗಳು ಯಾವ ಭಾಷೆಯ ಹಂಗೂ ಇಲ್ಲದೇ ಅತೀ ಹೆಚ್ಚು ವಿಮರ್ಶೆಗೊಳಗಾಗಿವೆ.

ಕಮೂ ಬರಹಗಾರನ ಬದುಕು ಬರಹ ಬವಣೆಯನ್ನು ಯಥಾವತ್ತಾಗಿ ಹೀಗೆ ಹೇಳುತ್ತಾರೆ...

"ತಾನು ಎಲ್ಲರಿಗಿಂತ ಭಿನ್ನ ಎಂದು ತಿಳಿದು ಬರಹದ ಬದುಕನ್ನು ಆರಿಸಿಕೊಂಡವನಿಗೆ ತಾನೂ ಎಲ್ಲರಂತೆಯೇ ಎಂಬ ಸತ್ಯವನ್ನು ಒಪ್ಪಿಕೊಳ್ಳದೆ ತನ್ನ ಕಲೆಯನ್ನಾಗಲೀ ಭಿನ್ನತೆಯಾಗಲೀ ಕಾಯ್ದುಕೊಳ್ಳಲು ಸಾಧ್ಯವೇ ಇಲ್ಲ ಎಂಬುದು ಬಹಳ ಬೇಗ ಮನವರಿಕೆ ಆಗುತ್ತದೆ. ತನ್ನ ಕಲೆಯ ಸೌಂದರ್ಯವನ್ನೂ ಬಿಟ್ಟು ಕೊಡಲಾಗದೆ ಹಾಗೂ ತನ್ನ ಸಮುದಾಯದಿಂದಲೂ ತನ್ನನ್ನು ಬೇರ್ಪಡಿಸಿಕೊಳ್ಳಲಾರದೆ ಬರಹಗಾರ ಇವೆರಡರ ನಡುವೆ ತನ್ನನ್ನು ಬೆಸೆದುಕೊಳ್ಳುತ್ತಲೇ ರೂಪುಗೊಳ್ಳುತ್ತ ಹೋಗುತ್ತಾನೆ".

ವೈಯಕ್ತಿಕ ದೌರ್ಬಲ್ಯವನ್ನು ಮೀರುವ ಕಲೆಯ ಬದ್ಧತೆಗಳ ಕುರಿತು ಕಮೂ ಹೇಳುತ್ತಾರೆ...

"ನಮ್ಮ ವೈಯಕ್ತಿಕ ದೌರ್ಬಲ್ಯಗಳೇನೇ ಇದ್ದರೂ ನಮ್ಮ ಕಲೆಗಾರಿಕೆಯ ಹಿರಿಮೆಗೆ ಮೂಲ ರೂಢಿಸಿಕೊಳ್ಳಲು ಕಷ್ಟವೆನಿಸುವಂತಹ ಎರಡು ಬದ್ಧತೆಗಳು. ಒಂದು, ಸತ್ಯವನ್ನು ತಿರುಚದೆ, ಮರೆಮಾಚದೆ ಹೇಳುವುದು, ಮತ್ತೊಂದು, ಶೋಷಣೆಯ ವಿರುದ್ಧ ನಿಲ್ಲುವುದು"

ಬದುಕಿನ ಮೇಲೆ ಅಪಾರ ಪ್ರೇಮ ವ ವಿಶ್ವಾಸವನ್ನು ಪ್ರತಿಪಾದಿಸಿದ ಕಮೂ ಎಂತಹ ನಿರಾಶಾದಾಯಕ ಸಂದರ್ಭಗಳಲ್ಲೂ ಹತಾಶೆಯನ್ನು ಬದಿಗೊತ್ತಿ ಬಾಳುವ ಭರವಸೆ ನೀಡುತ್ತಾರೆ...

"ಬೆಳಕಿನ ಈ ಜಗತ್ತನ್ನು, ಈ ಇರುವಿಕೆಯ ಆನಂದವನ್ನು ಮತ್ತು ನಾನು ಬೆಳೆದಂಥ ಸ್ವಾತಂತ್ರ್ಯವನ್ನು ತ್ಯಜಿಸಲು ಎಂದಿಗೂ ನನಗೆ ಸಾಧ್ದಯವಾಗಿಲ್ಲ. ನನ್ನ ಈ ನೆನಪುಗಳ ಮೋಹ ನನ್ನ ತಪ್ಪುಗಳಿಗೆ, ಎಡವಿಕೆಗಳಿಗೆ ಕಾರಣವಾದರೂ, ಸಂದ ಕಾಲದೆಡೆಗಿನ ಈ ಮೋಹ ನನ್ನ ಬರವಣಿಗೆಯ ಕಲೆಗಾರಿಕೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಕ್ಷಣಕಾಲದ ಸ್ವತಂತ್ರ ಆನಂದದ ಬರಿಯ ನೆನಪುಗಳೊಂದಿಗೆ, ಆನಂದ ಮತ್ತೆ ಹಿಂದಿರುಗಬಹುದೆಂಬ ನಿರೀಕ್ಷೆಯ ಬಲವೊಂದರಿಂದಲೇ ಜೀವನವನ್ನು ಸಾಧ್ಯವಾಗಿಸಿಕೊಂಡು ಮೌನದಲ್ಲೇ ಬದುಕುತ್ತಿರುವವರ ಪರವಾಗಿ ಯಾವುದೇ ಹಿಂಜರಿಕೆ ಇಲ್ಲದೆ ನಿಲ್ಲಲು ನನ್ನ ಈ ನೆನಪುಗಳ ಮೋಹದಿಂದಲೇ ಇಂದಿಗೂ ನನಗೆ ಸಾಧ್ಯವಾಗುತ್ತಿರುವುದು.  "

ಕೊನೆಯದಾಗಿ  "ಈ ಬದುಕು ಬದುಕಲು ಯೋಗ್ಯವೋ ಅಲ್ಲವೋ?" ಎಂಬುದೇ ನಮ್ಮ ಮುಂದೆ ಇರುವ ಮೂಲಭೂತ ಪ್ರಶ್ನೆ ಎಂದ ಕಮೂ ಆತ್ಮಹತ್ಯೆ ಪರಿಹಾರವಲ್ಲ ಎಂದೇ ಪ್ರತಿಪಾದಿಸುತ್ತಾರೆ. ಬದುಕಿನ ಅರ್ಥ ಹುಡುಕುವ ಪ್ರಯತ್ನಕ್ಕೆ ಜಗತ್ತಿನ ದಿವ್ಯಮೌನ ಎದುರಾಗಿ ನಿಂತಾಗ 'ಅಸಂಗತ' ಹುಟ್ಟುತ್ತದೆ. ಈ ಅಸಂಗತವನ್ನು ಸ್ವೀಕರಿಸಿ ಬದುಕುವುದೇ ಇದನ್ನು ಪ್ರತಿಭಟಸುವ ಮಾರ್ಗವೂ ಹೌದು ಮತ್ತು ಈ ಪ್ರತಿಭಟನೆಯೇ ಬದುಕಿಗೆ ಅರ್ಥವನ್ನು ನೀಡುತ್ತದೆ ಎನ್ನುತ್ತಾನೆ.

ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಾಗರಾಜ ಷಣ್ಮುಖಪ್ಪ ರಂಗನ್ನವರ