Article

’ಅವ್ವ ಮತ್ತು ಅಬ್ಬಲಿಗೆ’ಯಲ್ಲಿ ಬಂಡಾಯದ ದನಿ

ತನ್ನ ಮೊದಲ ಕವನಸಂಕಲನವೊಂದನ್ನು ಪ್ರಕಟಣೆಗೆ ಕೊಂಡೊಯ್ಯುವುದು ಒಂದು ರೀತಿಯ ಸವಾಲಿನ ಕೆಲಸ. ಅದರೊಂದಿಗೆ ಕಳವಳ, ಆತಂಕಗಳೂ ಬೆರೆಯುವುದು ನಿಜ. ವಾಚಕರು ಕವನಗಳನ್ನು ಹೇಗೆ ಸ್ವೀಕರಿಸುವರು.. ಎಷ್ಟರಮಟ್ಟಿಗೆ ಕವನಗಳು "ಕವನ" ಎನುವ ಪರಿಕಲ್ಪನೆಗೆ ಹತ್ತಿರವಾಗಿವೆ.. ತನ್ನೊಳಗೆ ಇಳಿದ ಕವಿತೆಯನ್ನು ಅಷ್ಟೇ ಸಶಕ್ತವಾಗಿ, ಯೋಗ್ಯ ರೀತಿಯಲ್ಲಿ ನಿರೂಪಿಸಲು ತನಗೆ ಸಾಧ್ಯವಾಗಿದೆಯೆ..? ಕಾಡುವ ಇಂಥ ಹಲವಾರು ಸಂಗತಿಗಳು. ಸ್ವತಃ ನನ್ನನ್ನು ಬಾಧಿಸುವ ಇಂಥ ವಿಚಾರಗಳು ಗೆಳತಿ ಶೋಭಾಳನ್ನು ಕಾಡಿರುವವು ಎಂದು ನನಗೆ ತೋರಿದರೆ ಅದಕ್ಕೆ ಕಾರಣವಿದೆ.

ತಮ್ಮ ಮೊದಲ ಕವನ ಸಂಕಲನವನ್ನು ಪ್ರೀತಿಯಿಂದ ಕಳಿಸಿರುವ ಶೋಭಾ ಅದರ ಜೊತೆಗೊಂದು ಅಡಿ ಟಿಪ್ಪಣಿ ಇರಿಸಿದ್ದಾರೆ.. 'ಓದಿ ಮೇಡಂ. ಮಹಿಳಾ ಓದುಗರಾಗಿ ನಿಮ್ಮ ನಾಲ್ಕು ಸಾಲಿನ ಪ್ರತಿಕ್ರಿಯೆ ನಿರೀಕ್ಷಿಸುವೆ.' ನೋಡಿದ ತಕ್ಷಣ ಗಮನ ಸೆಳೆಯುವ ಮುಖಪುಟ ಹೊತ್ತ ಸಂಕಲನದ ಶೀರ್ಷಿಕೆಯೂ ಅಷ್ಟೇ ಆಪ್ತವಾಗಿದೆ.ತಮ್ಮ ಚೊಚ್ಚಲ ಕೃತಿಯನ್ನು 'ಶ್ರಮಿಕರ ಬೆವರಿಗೆ' ಅರ್ಪಿಸುವ ಅವರ ಕಕ್ಕುಲಾತಿ ಇನ್ನೂ ಮಧುರ. ಅವರೇ ಹೇಳುವಂತೆ ಮಲೆನಾಡ ಸೆರಗಿನಲ್ಲಿ ಹುಟ್ಟಿ ಬೆಳೆದವರು.. ಕೃಷಿಯನ್ನು ಉಸಿರಾಗಿಸಿಕೊಂಡವರು. ಈ ಅಂಶ ಸಂಕಲನದುದ್ದಕ್ಕೂ ಗಮನ ಸೆಳೆಯುವುದು.

'ನನ್ನ ಕವಿತೆ ನಿಮ್ಮಂಥವರಿಗಲ್ಲವೇ ಅಲ್ಲ.. ' ಎಂದು ಸಾಗುವ ಕವನದಲ್ಲಿ ತನ್ನ ಕವಿತೆ ಜೀವಂತ ಕಾವ್ಯಗಳಾಗಿರುವ ಅಪ್ಪನಿಗಾಗಿ, ಅವ್ವನಿಗಾಗಿ, ಅಣ್ಣ-ಅಕ್ಕ-ತಂಗಿಯರಿಗಾಗಿ ಎಂಬ ಆಪ್ತ, ನಿವೇದನೆಯಿದೆ. 'ಅವರಿಗೆ ಅರ್ಥವಾಗದ ನೂರೊಂದು ಪದ ಕಟ್ಟಿ ಸಾಲಾಗಿಸಿ ಕವಿಯೆನಿಸಲಾರೆ' ಎಂಬ ದಿಟ್ಟ ನಿಲುವಿದೆ. ಹಂಚಿಕೊಂಡುಣ್ಣುವ ಕೃಷಿ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಜೀವ 'ಅನ್ನಕ್ಕಿಂತಲೂ ಹೆಚ್ಚೇ ಎಣ್ಣೆ ದೀಪ?' ಎಂದು ಪ್ರಶ್ನಿಸುತ್ತದೆ.. 'ತವರೆಂದರೆ ಬರಿ ಹಂಚಿನದೊಂದು ಮಾಡೆ.. ?' ಎಂಬ ಚಿಂತನೆಗೆಳಸುತ್ತದೆ.

ಪ್ರತಿ ಹೆಣ್ಣೂ ತನ್ನ ಜೀವಮಾನದ ಅರ್ಧಕ್ಕಿಂತ ಹೆಚ್ಚು ಕಾಲ ಮುಟ್ಟಿಗೊಳಗಾಗುವಳು. ಆದರೆ ಎಷ್ಟು ಜನ ಅದನ್ನು ಕುರಿತು ಮುಕ್ತವಾಗಿ, ಬಹಿರಂಗವಾಗಿ ಮಾತಾಡುವರು!! ತನ್ನದೇ ಕಾರಣಗಳಿಂದ ಅಸಂಗತವೆನಿಸಿರುವ ಮುಟ್ಟಿನ ಕುರಿತು ಸಹಜವಾಗಿ, ಸ್ವಚ್ಛಂದವಾಗಿ ಪ್ರಸ್ತಾಪಿಸುವ ೩-೪ ಕವಿತೆ ಇಲ್ಲಿರುವುದು ವಿಶೇಷ. ಮೊದಲ ಋತು ಸಂಭವಿಸಿದಾಗ ಕಂಡ ಮೊಡವೆಯಲ್ಲಿ ಕಾಮನಬಿಲ್ಲು ಮೂಡಿತ್ತು ಎನ್ನುತ್ತಾಳೆ ಕವಯಿತ್ರಿ. ಅಲ್ಲಿ ಹೆಮ್ಮೆಯ ಭಾವವಿದೆ. 'ಪ್ರತಿ ಮಾಸವೂ ಥೇಟ್ ಹೆರಿಗೆಯದ್ದೇ ನೋವುಂಡರೂ|ಜೀವ ಜಕ್ಕಾಗಲಿಲ್ಲ.. ಬದಲು ಅರಳಿತ್ತು ಹೆಣ್ತನದ ಹೂವಾಗಿ' ಎಂಬ ಕೃತಾರ್ಥತೆಯಿದೆ.

ಎಲ್ಲರೊಡನಿದ್ದೂ ಏಕಾಂಗಿಯಾಗಿ ಬಿಡುವ, ತನ್ನವರೊಡನಿದ್ದೂ ಪರಕೀಯಳಾಗಿ ಬಿಡುವ 'ಅವಳನ್ನು' ಕವಯಿತ್ರಿ "ಅವಳು ಮುಟ್ಟಿನ ಬಟ್ಟೆಯಂತವಳು.. ಹೊರ ಜಗುಲಿಗೆ ನಿಷಿದ್ಧವಾದೊಂದು ಕೈಚೌಕದ ಚಿಂದಿ" ಎನ್ನುತ್ತಾಳೆ. ಬಾಲಕ ಅಯ್ಯಪ್ಪನನ್ನು "ಹುಲಿ ಹಾಲನುಂಡವನೆ ನೋಡು ಬಾ ತಾಯ ಹಾಲ ರುಚಿ.. " ಎಂದು ಆಹ್ವಾನಿಸುತ್ತಲೇ "ಥೇಟ್ ನನ್ನ ಮಗನಂತೆ ಎತ್ತಿಕೊಂಡು ಮುತ್ತಿಡುವೆ.. ಈಗ ಹೇಳು, ನನ್ನ ಮುಟ್ಟು ನಿನಗೆ ಮೈಲಿಗೆಯೆ? " ಎಂದು ಪ್ರಶ್ನಿಸುವ ಕವಿ ಮೂಲಭೂತವಾದಿಗಳಿಗೆ ತಣ್ಣಗೆ ಸವಾಲೆಸೆಯುತ್ತಾರೆ. ಮರಿ ಹಾಕಿದ ನಾಯಿಯಲ್ಲೂ ಬಾಣಂತಿಯನು ಕಾಣುವ ಕವಿ ಅನ್ನವಿಲ್ಲದೆ ಸತ್ತ ಜೀವಿಗಾಗಿ ಮರುಗುತ್ತಾರೆ..ಇಷ್ಟಾದರೂ "ಮರಿಗಳ ಹೆತ್ತಪ್ಪ ಮುಖ ತೋರಲೇ ಇಲ್ಲ.. ಯಾವ ಬೀದಿಯಲಿತ್ತೊ ಗಂಡು ಪ್ರಾಣಿ!" ಎಂಬ ಉದ್ಗಾರದಲ್ಲಿ ಪಿತೃ ಸಂಸ್ಕೃತಿಯ ಪಾರಮ್ಯದ ವಿರುದ್ಧ ತಣ್ಣಗಿನ ಒಂದು ಬಂಡಾಯದ ದನಿ ಎತ್ತುತ್ತಾರೆ.

ಈ ಕವಿತೆಗಳಲ್ಲಿ ಏನನ್ನೋ ನಿಷ್ಕರ್ಷಿಸುವ ತರ್ಕ, ವಾಗ್ವಾದಕೆಳಸುವ ಧಾವಂತ, ತನ್ನ ನಿಲುವನ್ನು ಸಮರ್ಥಿಸಿಕೊಳ್ಳುವ ಒಲವು..ಎಂಥದೂ ಇಲ್ಲ. ತಾನು ಕಂಡುದನ್ನು ಕಂಡಂತೆ ನಿರೂಪಿಸುವ ಸಹಜ ವಾಂಛೆಯಿದೆ, ತನ್ನ ಪಾಡಿಗೆ ತಾನು ಜುಳು ಜುಳು ಹರಿವ ತೊರೆಯಂತೆ. ಮೊದಲ ಕವನ ಸಂಕಲನ ಎಂಬ ಪರಿಮಿತಿಯನ್ನು ಮೀರುವ ಹಲವಾರು ಸಶಕ್ತ ಸಾಲುಗಳಿವೆ.. ಹೃದ್ಯವೆನಿಸುವ ಸುಂದರ ಪ್ರತಿಮೆಗಳಿವೆ. 

ಪುಸ್ತಕದ ಕುರಿತಾದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಚಂದ್ರಪ್ರಭಾ