Article

ಬದುಕಿನ ಸೌಂದರ್ಯ `ದಯಾ....ನೀ| ಭವಾ.....ನೀ'

ಸಂಚಯ ಪತ್ರಿಕೆಯನ್ನು ಮೂರು ದಶಕಗಳ ಕಾಲ ಅತ್ಯಂತ ಮುತುವರ್ಜಿಯಿಂದ, ಪ್ರತಿ ಬಾರಿಯೂ ಅದೊಂದು ವಿಶೇಷಾಂಕ ಆಗುವಂತೆ ಸಂಯೋಜಿಸಿ, ಅರ್ಹರಿಂದ ಬರೆಸಿ, ನಡೆಸಿದ ಡಿ ವಿ ಪ್ರಹ್ಲಾದ್ ಕವಿತೆಗಳನ್ನು ಕೂಡ ಬರೆಯುತ್ತಾರೆಂದು ನನಗಂತೂ ಗೊತ್ತೇ ಇರಲಿಲ್ಲ. ಇದು - "ದಯಾ....ನೀ| ಭವಾ.....ನೀ" ಅವರ ಮೂರನೆಯ ಸಂಕಲನ ಎಂದು ತಿಳಿದಾಗ ಆಶ್ಚರ್ಯವೇ ಆಯಿತು.

ಒಂದು ಸಂಕಲನ ಹೇಗಿದೆ ಎಂದು ತಿಳಿಯಲು ಯಾವುದಾದರೂ ಒಂದು ಕವಿತೆ ಸಾಕು. ಅದರ ಮಟ್ಟ ಗೊತ್ತಾದರೆ, ಆ ಕವಿ ಬರೆದರೆ ಎಂಥ ಕವಿತೆಗಳನ್ನು ಬರೆಯುತ್ತಾನೆಂದು ಕಣ್ಮುಚ್ಚಿ ಹೇಳಬಹುದು. ಈ ಸಂಕಲನದ ಮೊದಲ ಕವಿತೆಯೇ ನನ್ನನ್ನು ಬೆರಗುಗೊಳಿಸಿದ ಪರಿ ಹೇಗಿತ್ತೆಂದರೆ ಅದನ್ನು ನಿಮ್ಮೊಡನೆ ಹಂಚಿಕೊಳ್ಳದೇ ಇದ್ದರೆ ನನ್ನ ಆತ್ಮಕ್ಕೆ ಶಾಂತಿಯೇ ಸಿಗಲಾರದು ಅನಿಸುತ್ತಿದೆ.

ಆ ಕವಿತೆ ಹೀಗಿದೆ:

ಮರಳಿ ಮನೆಗೆ

ಬೀಗದ ಕೈ ತಿರುಗಿಸಿದಾಗ
ಅದೇ ಪರಿಚಿತ ಚಿಲಕದ ಸದ್ದು
ಎದೆ ತುಂಬುವ ಆಪ್ತ ಗಾಳಿ
ಎಲ್ಲ ಮೂಲೆಗಳಲ್ಲೂ ಅವಿತ ಅದದೇ ಮೌನ

ಅದೇ ಪಾದಗಳು, ಎಡವಿ ಬೀಳುವ ಬಿಸಿಲಕೋಲು
ನಿಜದಲ್ಲಿ ತೂಗದೆ ನಿಂತು ಬಿಟ್ಟ ಉಯ್ಯಾಲೆ

ಕವಿ ಸಮಯಕ್ಕೆ ಒದಗಿ ಬರುವ ಪದಗಳು
ಎಚ್ಚರ ನಿದ್ದೆಯ ನಡುವಿನ ಗಳಿಗೆಗಳು
ರಕ್ತದಲ್ಲಿ ಸೇರಿ ಹೋದ ಪೂರ್ವಸೂರಿಗಳು
ಸೂರ್ಯ-ಚಂದ್ರರಿಗೇ ಕಣ್ಣು ಹೊಡೆದವನಿಗೆ
ಹುಡುಗಾಟಿಕೆಯ ತೆವಲುಗಳು

ಈ ಕ್ಷಣದ ಹೂ ಹೊತ್ತ
ಸಣ್ಣ ಕೊಂಬೆಯ ಮೇಲೊಂದು
ಚಂಚಲ ಹಕ್ಕಿಯ
ಚಿವುಗುಡುವ ಭಾವ
ಶ್! ಸದ್ದು ಮಾಡಿದರದು
ಹಾರಿ ಹೋಗುವುದು.

ಬನ್ನಿ ಸಮಯಗಳೇ
ದೇಶ ಕಾಲಗಳೇ
ತೆರೆದ ಮನವಿದೆ
ಮಿಡಿವ ಎದೆಯಿದೆ
ಅವತರಿಸುವ ಕವಿತೆಗಾಗಿ
ಮಣೆಯ ಹಾಸಿ ಕಾದಿದೆ.

- ಕವಿತೆ ಏಕಕಾಲಕ್ಕೆ ಮೂರು ಪಾತಳಿಯಲ್ಲಿ ದುಡಿಯುತ್ತಿದೆ. ಒಂದು ಅದು ಕವಿತೆಯನ್ನು ಆವಾಹಿಸಿಕೊಳ್ಳುವ ಕವಿಮನದ ಅಭಿವ್ಯಕ್ತಿಯಾಗಿ. ಇನ್ನೊಂದು ಅದು ಕವಿಮನ ಕಾಣುತ್ತಿರುವ ಬದುಕಿನ ಕ್ಷಣಭಂಗುರ ಚಿತ್ರಗಳನ್ನು ನಮಗೆ ಕಾಣಿಸುವ ಸೊಗಸಾದ ಕವಿತೆಯಾಗಿ. ಮೂರನೆಯದು ಕವಿತನದ ಹೊರತಾಗಿ ನಾವು ಬದುಕನ್ನು ಗ್ರಹಿಸುವ, ಗ್ರಹಿಸಬೇಕಾದ ಒಂದು ಕ್ರಮವಾಗಿಯೂ. ಬಹುಶಃ ಮೂರನೆಯದೇ ಹೆಚ್ಚು ಮುಖ್ಯವಾದದ್ದು ಎಂದು ನನಗನಿಸಿದ್ದರಿಂದ ಅದರ ಬಗ್ಗೆ ಮಾತ್ರ ಮಾತನಾಡುವೆ.

ಮೊದಲಿಗೆ ಇಲ್ಲಿ ಬೀಗ ತೆರೆಯುವ ಒಂದು ಕ್ರಿಯೆಯೊಂದಿಗೇ ಮನಸ್ಸಿಗೆ ಬರುವ ಒಂದಿಷ್ಟು ಚಿತ್ರಗಳಿವೆ. ಎದೆ ತುಂಬುವ ಆಪ್ತಗಾಳಿ - ನೀವು ಮನೆಯೊಳಗೆ ಕಾಲಿಟ್ಟ ಬಳಿಕದ್ದು. ಅದು, ಆ ಗಾಳಿ ನಿಮಗೆ ತುಂಬ ಆಪ್ತವಾಗಿದೆ. ಅದೇ ಹೊತ್ತಿಗೆ ಅಲ್ಲಿ ನಿಮ್ಮನ್ನು ಬಿಟ್ಟರೆ ಇನ್ಯಾರೂ ಇಲ್ಲ ಎನ್ನುವ ಸೂಚನೆಯೂ ಇದೆ. ಅಲ್ಲಿನ ಎಲ್ಲ ಮೂಲೆಗಳಲ್ಲೂ ಅದದೇ ಮೌನ ಅವಿತಿದೆ. ಹಾಗಿದ್ದೂ, ಅಥವಾ ಆ ಕಾರಣಕ್ಕೇ ಆ ಗಾಳಿ, ಆ ಮೌನ, ಆ ಮೂಲೆಗಳು ನಿಮಗೆ ಆಪ್ತವಾಗಿರುವುದೂ. ಇದು ಒಬ್ಬ ಧ್ಯಾನಸ್ಥ, ಏಕಾಂತಪ್ರಿಯ ಮನುಷ್ಯನ ಕಲ್ಪನೆಯನ್ನು ಮನಸ್ಸಿಗೆ ತರುತ್ತಿದೆ.

ಆದರೆ ಇದೆಲ್ಲ ಸುಳ್ಳಾಗಿರಲೂ ಬಹುದು. ಎಕೆಂದರೆ ಎಡವಿ ಬೀಳುವ ಬಿಸಿಲಕೋಲು ಮತ್ತು ಅದೇ ಪಾದಗಳು ಕಾಣುತ್ತಿವೆ ಈಗ. ಅದು ಮಗುವಿನದ್ದೆ? ಅಲ್ಲಿ ಒಂದು ಮಗು ಓಡಾಡಿದೆಯೆ, ಎಡವಿ ಬಿದ್ದಿದೆಯೆ? ಅದು ನಡೆದಾಡುವಾಗೆಲ್ಲ ಆ ಬಿಸಿಲಕೋಲು ಎಡವಿತ್ತೆ?

ಆದರೆ ಸದ್ಯ ಆ ಮಗು ಮನೆಯೊಳಗಿಲ್ಲ. ಹೆಂಡತಿಯ ಜೊತೆ ತವರಿನಲ್ಲಿರಬಹುದು, ಇನ್ನೆಲ್ಲಿಗೋ ಹೋಗಿರಬಹುದು. ಈಗ ಬಿಸಿಲಕೋಲು ಎಡವದೆ ನೇರ ಸುರಿಯುತ್ತಿರಬಹುದು, ಕೋಣೆಯ ಮೌನದಲ್ಲಿ.

ಇನ್ನು ನಿಜದಲ್ಲಿ ತೂಗದೆ ಬಿಟ್ಟ ಉಯ್ಯಾಲೆ ಎಂಬ ನುಡಿ ನೋಡಿ. ಉಯ್ಯಾಲೆ ಎನ್ನುತ್ತಲೇ ಅದು ನಮ್ಮ ಮನಸ್ಸಲ್ಲಿ ತೂಗತೊಡಗುತ್ತದೆ! ಆದರೆ ಇಲ್ಲಿ ಕವಿ ಅದನ್ನು ಉದ್ದೇಶಪೂರ್ವಕವಾಗಿ ಸ್ತಬ್ಧಗೊಳಿಸಿ ನಿಲ್ಲಿಸಿಡುತ್ತಾರೆ! ಉಯ್ಯಾಲೆಗೆ ಕೂಡ ಒಂದು ಧ್ಯಾನಸ್ಥ ಸ್ಥಾಯೀ ಭಾವವನ್ನು ಅವರು ಕೊಟ್ಟುಬಿಟ್ಟ ಕ್ರಮವಿದು.

ಆಮೇಲೆ ಒಂದಿಷ್ಟು ಚಿತ್ರಗಳು ಒಟ್ಟಿಗೇ ಸಿಗುತ್ತವೆ.

ಕವಿ ಸಮಯಕ್ಕೆ ಒದಗಿ ಬರುವ ಪದಗಳು
ಎಚ್ಚರ ನಿದ್ದೆಯ ನಡುವಿನ ಗಳಿಗೆಗಳು
ರಕ್ತದಲ್ಲಿ ಸೇರಿ ಹೋದ ಪೂರ್ವಸೂರಿಗಳು
ಸೂರ್ಯ-ಚಂದ್ರರಿಗೇ ಕಣ್ಣು ಹೊಡೆದವನಿಗೆ
ಹುಡುಗಾಟಿಕೆಯ ತೆವಲುಗಳು

- ಇಲ್ಲಿ ಕವಿ ಸಮಯವನ್ನು ಎರಡೂ ತರ ಓದಬಹುದು. ಕವಿಯ ಸಮಯಕ್ಕೆ ಒದಗಿ ಬರುವ ಪದಗಳೂ ಹೌದು, ಆ ಪದಗಳು ಕವಿಸಮಯವಾಗಿ ಬಿಡುವ ಕಷ್ಟವೂ ಹೌದು. ಉಳಿದುದೆಲ್ಲ ಮನಸ್ಸಲ್ಲಿ, ಸುಪ್ತಮನಸ್ಸಿನಲ್ಲಿ, ಚಿತ್ತದಲ್ಲಿ ನಡೆವ ಚಿತ್ರಚಿತ್ತಾರ. ಅವೂ ಕವಿಸಮಯವೇ, ಅವೂ ಕವಿಗೆ ಒದಗಿ ಬರುವ ರೂಪಕಗಳೇ, ಪ್ರತಿಮೆಗಳೇ. ಹುಡುಗಾಟಿಕೆ, ತೆವಲು ಎಲ್ಲವೂ ಕವಿಗೆ ದ್ರವ್ಯವೇ!

ನಂತರದ್ದೇ ಈ ಇಡೀ ಕವಿತೆಯ ಆತ್ಮ ಸದೃಶ ಸಾಲುಗಳು.

ಈ ಕ್ಷಣದ ಹೂ ಹೊತ್ತ
ಸಣ್ಣ ಕೊಂಬೆಯ ಮೇಲೊಂದು
ಚಂಚಲ ಹಕ್ಕಿಯ
ಚಿವುಗುಡುವ ಭಾವ
ಶ್! ಸದ್ದು ಮಾಡಿದರದು
ಹಾರಿ ಹೋಗುವುದು.

ಈ ಕ್ಷಣದ ಹೂ ಎಂಬ ಪ್ರಯೋಗ ಗಮನಿಸಿ. ಕವಿಗೆ (ನಮಗೂ) ಒಂದು ಭಾವ ಆ ಕ್ಷಣದ ಸತ್ಯ, ಇಲ್ಲಿ ಮತ್ತು ಈಗ ಸತ್ಯವಾಗುವ ದೈವಿಕತೆ ಅದು. ಅದನ್ನು ಹೊತ್ತ ಸಣ್ಣ ಕೊಂಬೆಯ ಮೇಲೆ ಕೂತ ಹಕ್ಕಿ ಮಾತ್ರ ಸದಾ ಚಂಚಲ. ಒಂದು ಗಳಿಗೆ ಕುಳಿತಲ್ಲಿ ಕೂರದೆ ಪುಟಿಯುತ್ತಲೇ ಇರುವ ದೇಹ, ಚಿಂವ್ ಗುಡುತ್ತಲೇ ಇರುವ ಭಾವ. ಇದೆಲ್ಲ ಇರುವುದೆಲ್ಲಿ? ಕವಿಯ ಮನಸ್ಸೊಳಗೇನೆ! ಈ ಕ್ಷಣದ ಹೂವು ಮತ್ತು ಕೊಂಬೆಯ ಮೇಲಿನ ಹಕ್ಕಿ ಎರಡೂ ಕವಿಯೇ!

ಇನ್ನು ಸದ್ದು ಮಾಡಿದರೋ, ಬಿಸಿಲಕೋಲು ಎಡವಿದರೋ, ಮೌನ ಅಲ್ಲಾಡಿದರೋ, ಉಯ್ಯಾಲೆ ತೂಗಿದರೋ.... ಶ್ಶ್! ಹಕ್ಕಿ ಹಾರಿ ಹೋಗುವುದು! ಹಾರಿ ಹೋಗದಿದ್ದರೆ ನಿಮಗೊಂದು ಕವಿತೆ ಸಿಗುವುದು! ಕವಿ ಅದನ್ನು ಭಾಷೆಯಲ್ಲಿ ಹಿಡಿದು ನಿಮಗೂ ಕೊಡುವನು!

ನಮಗೂ ಒಂದು ಧ್ಯಾನಸ್ಥ ಸ್ಥಿತಿ ಪ್ರಾಪ್ತವಾದರಷ್ಟೇ ಯಾವುದೋ ಒಂದು ಅನುಭೂತಿ ದಕ್ಕಬಹುದು, ಕ್ಷಣ ಸಿದ್ಧಿಸಬಹುದು. ಇಲ್ಲವಾದರೆ ಹಕ್ಕಿ ಹಾರಿ ಹೋದಂತೆಯೇ...

ಬದುಕಿನ ಸೌಂದರ್ಯ, ಸವಿ ಕೂಡ ಹೀಗೆಯೇ ಅಲ್ಲವೆ? ನಾವು ಸಂಬಂಧಗಳನ್ನು, ಪ್ರೀತಿಯನ್ನು, ಸವಿ ನೆನಪನ್ನು ಶಾಶ್ವತವಾಗಿಸಲು ಏನೇನೆಲ್ಲ ಸರ್ಕಸ್ಸು ಮಾಡುತ್ತಲೇ ಇರುತ್ತೇವೆ. ಆದರೆ ಇಲ್ಲಿ ಎಲ್ಲವೂ ಕ್ಷಣಭಂಗುರವಾದದ್ದು ಮತ್ತು ಅದೇ ಅದರ ಸೌಂದರ್ಯ ಎಂಬ ಸತ್ಯವನ್ನು ಮರೆಯುತ್ತೇವೆ. ಕ್ಷಣಭಂಗುರವಾದದ್ದು ಕೂಡ ನೆನಪುಗಳಲ್ಲಿ ಶಾಶ್ವತವಾಗುವ ಮಾಯಕಶಕ್ತಿ ನಮ್ಮೊಳಗೇ ಇದೆ ಎನ್ನುವುದು ನಮ್ಮ ವಿಸ್ಮೃತಿಗೆ ಸಂದಿದೆ. ನಾವು ಕಳೆದು ಹೋದುದರ ಬಗ್ಗೆ ಕಳೆದು ಹೋಯಿತೆಂದುಕೊಂಡು ಕೊರಗುವುದು ಹೆಚ್ಚು, ಮನದಲ್ಲಿ ಉಳಿದಿರುವುದರ ಬಗ್ಗೆ ಬೆರಗಾಗುವುದು ಕಮ್ಮಿ.

- ಈ ಕವಿತೆಗಳಿಗೆ ಕವಿ, ವಿಮರ್ಶಕ ಡಿ ಎಸ್ ರಾಮಸ್ವಾಮಿಯವರ ಸೊಗಸಾದ ವಿವರವಾದ ಅಧ್ಯಯನಪೂರ್ಣ ಹಿನ್ನುಡಿಯಿದೆ. ಡಿ ವಿ ಪ್ರಹ್ಲಾದ್ ಅವರೇ ಪ್ರಕಟಿಸಿರುವ ಈ ಪುಟ್ಟ ಹೊತ್ತಿಗೆಯನ್ನು ಉದಾರವಾಗಿ ಓದುಗರ ಕೈಗೆ ಒದಗಿಸುವ ಕೆಲಸಕ್ಕೆ ನಮ್ಮ ಋತುಮಾನ ಅಂಗಡಿ, ಸಂಗಾತ ಪುಸ್ತಕ ಮುಂದೆ ಬಂದರೆ ಕವಿಯನ್ನೂ ಓದುಗರನ್ನೂ ಪೊರೆದಂತಾಗುವುದು. ಇಲ್ಲವಾದಲ್ಲಿ ಪುಸ್ತಕ ಪ್ರಕಟಿಸಿದ ತಪ್ಪಿಗೆ ಅವರು ಎಲ್ಲರಿಗೂ ಫ್ರೀ ಕಾಪಿಯನ್ನು ಅಂಚೆವೆಚ್ಚ ಸಮೇತ ಒದಗಿಸಬೇಕಾದೀತು.

ನರೇಂದ್ರ ಪೈ