Article

ಬೆಂಬಿಡದೆ ಕಾಡುವಂತಹ ಪದ್ಯಗಳು

 ನಮ್ಮ ನೆಲದ ಹಾಡು ಹಾಡುತ್ತಲೇ ಮತ್ತೊಂದು ನೆಲದ ನಂಟು ಹೃದಯಕ್ಕೆ ಇಳಿಸುವ ಹಲವು ಕವಿತೆಗಳು ಇಲ್ಲಿವೆ. ಇಲ್ಲಿನ ಕವಿತೆಗಳು ಒಂದಕ್ಕಿಂತ ಒಂದು ಭಿನ್ನ ವಸ್ತುಗಳು ಹೊಂದಿದ್ದು. "ಒಂದೇ ಉಸಿರಿಗೆ ಕಸಿ ಮಾಡಿದಂತೆ ಟಿಸಿಲೊಡೆದಿವೆ". ಕವನ ಸಂಕಲನದ ಹೆಸರಿನ ಮೂಲಕವೇ ಕೂತೂಹಲ ಹುಟ್ಟಿಸುವ ಇಲ್ಲಿನ ಪದ್ಯಗಳು, ಸಹಜವಾಗಿ ನಮ್ಮ ಬಿಸಿಲು ಉಂಡ  ಬನದೊಳಗಿನ ಹಣ್ಣುಗಳ ರುಚಿಯಂತೆ ಇವೆ. " ಪ್ರಸ್ತುತ ಸಂಕಲನದ ಮೂಲಕ ವಿಕ್ರಮ ವಿಸಾಜಿ ಕನ್ನಡ ಕಾವ್ಯದಲ್ಲಿ ಇನ್ನೊಮ್ಮೆ ತನ್ನ ವಿಶಿಷ್ಟ ಛಾಪನ್ನು ಮೂಡಿಸಿದ್ದಾನೆ" - ಎಚ್ ಎಸ್ ಶಿವಪ್ರಕಾಶ್ ಅವರು ಬೆನ್ನುಡಿಯಲ್ಲಿ ಬರೆದಿರುವ ಈ ಮಾತು ಇಲ್ಲಿನ ಪದ್ಯಗಳು ಓದಿದಾಗ ನಿಜ ಅನಿಸುತ್ತದೆ.

ಈ ಸಂಕಲನದಲ್ಲಿ ನನಗೆ ಮೊದಲಿಗೆ ಸೆಳೆದ ಕವನ " ಮಂಟೊ ಕತೆಗಳನ್ನು ಓದಿದಾಗ" ... ಸಾದತ್ ಹಸನ್ ಮಂಟೊನ ಪತ್ರಗಳು, ಪುಟ್ಟ ಕಥೆಗಳು, ಅವನ ಜೀವನ ಆಧಾರಿತ ಚಲನಚಿತ್ರ ಇವೆಲ್ಲ ನೋಡಿದವರಿಗೆ, ಈ ಪದ್ಯದ ಕೊನೆಯ ನಾಲ್ಕು ಸಾಲುಗಳು ಹಿಡಿದು ನಿಲ್ಲಿಸದೆ ಇರಲಾರವು.

ಹಸಿ ಗಾಯಗಳ ನೆಕ್ಕುವ ನಾಲಿಗೆ
ಇದು ದೇಹದ ಯಾವ ಭಾಗದ ಗಾಯ
ಯಾರ ದೇಹದ ಗಾಯ, ಯಾವ ಧರ್ಮದ ಗಾಯ
ನಾಲಿಗೆ ಆಡುತ್ತಾಡುತ್ತ ಜೋಮು ಹಿಡಿದು ನಿಂತಿದೆ.

ಸುಟ್ಟ ಮನೆಗಳ ದಟ್ಟ ಹೊಗೆ
ಕಾಲಿಗೆ ತೊಡರುವ ಸತ್ತ ಕೂಸುಗಳು
ಅಂಗಾಲಿಗೆ ಅಂಟಿದ ರಕ್ತದಲ್ಲಿ ಧರ್ಮದ ಕೀವು
ಪಾಳುಬಿದ್ದ ಮನೆಯ ಕಿಟಕಿ ಸರಿಸಿದೆ
ಅಂಗಾತ ಮಲಗಿದ ಹೆಣ್ಣೊಬ್ಬಳು ತನ್ನ
ಲಂಗ ಮೇಲೆತ್ತಲು ಹರಸಾಹಸ ಪಡುತ್ತಿದ್ದಳು.

ಲಂಕೇಶರ ಪಾಪದ ಹೂಗಳ ಮೂಲಕ ನನಗೆ ಪರಿಚಯವಾದ ಬೋದಿಲೇರ್ ,ಇಲ್ಲಿ ನನಗೆ ಇನ್ನೊಂದು ಬಗೆಯಲ್ಲಿ ಸಿಕ್ಕು, ಮಾತಾಡಿಸಿದ.

ಸಾಯಬಾರದಿತ್ತು ಚಿಕ್ಕ ವಯಸ್ಸು
ಆದರೆ ಸತ್ತ, ನಿಜ ಹೇಳಬೇಕೆಂದರೆ
ಇಂಥ ತರುಣಿಯರ ಕಣ್ಣುಗಳಲ್ಲಿ
ಜೀವಂತವಾಗಿ ಬೆಳಗುತ್ತಲೇ ಇದ್ದ.
(ಬೋದಿಲೇರ್ ಮತ್ತು ತರುಣಿ ಕವನದಿಂದ)

ಈ ಸಂಕಲನದಲ್ಲಿ ಚೆನ್ನಣ್ಣ ವಾಲೀಕಾರ ಹಿಡಿದು ಏಟ್ಸವರೆಗೂ ಹಲವು ಕನ್ನಡದ, ಹೊರಗಿನ ಕವಿಗಳು, ಸಂಡೂರಿನ ಕಾಡು ಹೀಗೆ ಒಟ್ಟು  43 ಪದ್ಯಗಳಿವೆ. ಇಲ್ಲಿ ಕವಿ ಸಾವಿನ ಕುರಿತು " ಒಮ್ಮೆಲೆ ಹರಿದುಹೋದಂತೆ ತಂಬೂರಿನ ತಂತಿ" ಎಂದು ಬರೆದರೆ, ಚೂರು ತಮಾಷೆಯಾಗಿ ಮತ್ತೆ ಗಂಭೀರವಾಗಿ " ಖಂಡಿತ ಕೇರಳದ ಹುಡುಗಿಯರು ಮೊದಲಿನಂತಿಲ್ಲ ಅವರಷ್ಟೇ ಅಲ್ಲ...ನಾವು ನೀವು ಈ ಭವ್ಯ ಭಾರತವೂ ಮೊದಲಿನಂತಿಲ್ಲ"  ಎನ್ನುತ್ತಾರೆ. ಈ ಪದ್ಯದಲ್ಲಿ ತಿರುಮಲೇಶರು ಹೇಳಿದ ಸಾಲಿಗೆ ಪ್ರತಿಸಾಲುಗಳು ಅಚ್ಚುಕಟ್ಟಾಗಿ ಹೆಣೆದಿದ್ದಾರೆ. 
ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿಗೆ, ವೃದ್ಧನಿಂದ ತರುಣಿಯರವರೆಗೆ, ಜೋಗುಳದ ಪದಗಳಿಂದ ಭಿಕ್ಷಾಟನೆಗೆ ಕುಳಿತ ತಾಯಿ ಮಗು ಬಗ್ಗೆ ಸಹ ಬರೆದಿದ್ದಾರೆ. ಹತ್ತು ಹಲವು ದಿಕ್ಕುಗಳಲ್ಲಿ ಕಣ್ಣಿಟ್ಟು, ಧ್ಯಾನಿಸಿ ಬರೆದ ಈ ಪದ್ಯಗಳು ಓದಿಯೇ ಅನುಭವಿಸಬೇಕು. ಪದ್ಯಗಳೆಂದರೆ ವಿವರಿಸುವುದಲ್ಲ ಓದಿಯೇ ಅನುಭವಿಸಬೇಕಾದವುಗಳು...ಅಂತಹ ಸಾಲಿಗೆ ಈ ಪದ್ಯಗಳು ಖಂಡಿತ ನಿಲ್ಲುತ್ತವೆ.

ಓದಿದ ಎಷ್ಟೋ ದಿನಗಳ ನಂತರವೂ ಕಾಡುವಂತಹ  ಪದ್ಯಗಳು ಕೊಟ್ಟಿರುವ ವಿಕ್ರಾಮ ವಿಸಾಜಿ ಸರ್ ಅವರಿಗೆ ವಂದನೆಗಳು.

ಕಪಿಲ ಪಿ. ಹುಮನಾಬಾದೆ