Article

ಬೇರೆ ಬೇರೆ ಹೂಗಳಿಂದ ಕಟ್ಟಿದ ಹಾರದ ವಿಶಿಷ್ಟ ಘಮ ‘ಕನಸುಗಳು ಖಾಸಗಿ’

ಸಾಹಿತ್ಯದ 'ರೀಡರ್ ಥಿಯರಿ' ಬಗ್ಗೆ ಯೋಚಿಸುವಾಗಲೆಲ್ಲಾ ನನಗೆ ನೆನಪಾಗುವ ಹೆಸರು - ನರೇಂದ್ರ ಪೈ ಯವರದು. ನರೇಂದ್ರ ಪೈ ನಮ್ಮ ವರ್ತಮಾನದ ಪ್ರಾಮಾಣಿಕ ಓದುಗರು. ಅವರ ಓದಿನ ವ್ಯಾಪ್ತಿ ದೊಡ್ಡದು. ಕನ್ನಡ, ಇಂಗ್ಲೀಷ್ ಭಾಷೆಗಳ ಮೂಲಕ ಜಾಗತಿಕ ಸಾಹಿತ್ಯವನ್ನು ಆಮೂಲಾಗ್ರವಾಗಿ ಗ್ರಹಿಸಿ, ವಿಶ್ಲೇಷಿಸಿ ಖಚಿತ ಅಭಿಪ್ರಾಯಗಳನ್ನು ಮಂಡಿಸುವ ಅವರು ವಿಮರ್ಶಕರಷ್ಟೇ ಅಲ್ಲ, ಚಂದದ ಕತೆಗಾರರು ಕೂಡಾ.

ಕಳೆದ ಎರಡು ದಶಕಗಳಿಂದ ಸೃಜನಶೀಲ ಬರಹಗಳಿಗೆ ತೊಡಗಿಕೊಂಡವರಿಗೆ ಒಂದು ಮುಕ್ತತೆ ಇದೆ, ಅಷ್ಟೇ ಜವಾಬ್ದಾರಿಯ ಹೊಣೆಗಾರಿಕೆಯೂ.‌ ಸಾಹಿತ್ಯಿಕವಾಗಿ ಯಾವುದೇ ಹೊಸ ಚಳುವಳಿ ರೂಪುಗೊಂಡಿರದ ಇಂದಿನ ವರ್ತಮಾನ ಒಂದು ಮುಕ್ತತೆಯನ್ನು ನಮಗೆ ಕೊಟ್ಟರೆ, ನವೋದಯದಿಂದ ದಲಿತ-ಬಂಡಾಯದವರೆಗಿನ ಚಳುವಳಿಗಳ ನಿಲುವು ಮತ್ತು ಸೃಜನಶೀಲ ಕಾಣ್ಕೆಗಳು ಮುಪ್ಪುರಿಗೊಂಡು ಜವಾಬ್ದಾರಿಯನ್ನೂ ಹೆಚ್ಚಿಸಿವೆ.‌ ಹಾಗಾಗಿಯೇ ಈ ಕಾಲಘಟ್ಟದಲ್ಲಿ ಬರೆಯುವುದೆಂದರೆ ಪರಿಚಿತ ಹಾದಿಯಲ್ಲಿ ಕ್ರಮಿಸಿಯೂ ನಮ್ಮದೇ ಒಂದು ಕಾಲು ಹಾದಿಯನ್ನು ಕಂಡುಕೊಳ್ಳುವುದು.

ಅತಿ ಹೆಚ್ಚು ಓದಿನ, ಆ ಓದಿನ ಮೂಲಕದ ಖಚಿತ ಗ್ರಹಿಕೆಗಳ ಲೇಖಕರೊಬ್ಬರು ಸ್ವತಃ ಬರೆಯುವಾಗ ಎದುರಿಸುವ ಬಿಕ್ಕಟ್ಟು ದೊಡ್ಡದು. ಅವರ ಪ್ರತಿ ಬರವಣಿಗೆಗೆ ಅವರದೇ ಓದಿನ ಗ್ರಹಿಕೆಗಳು, ರೂಪುಗೊಂಡ ನಿಲುವುಗಳು, ವರ್ತಮಾನವನ್ನು ರೂಪುಗೊಳಿಸಿದ ಗತಕಾಲದ ನಿದರ್ಶನಗಳು ತೊಡಕಾಗುವುದೇ ಹೆಚ್ಚು. ಆದರೆ ಯಶಸ್ವಿ ಬರಹಗಾರ ಮಾತ್ರ ಇಂತಹ ತೊಡರುಗಳನ್ನೆಲ್ಲಾ ಸಕಾರಾತ್ಮಕವಾಗಿ ನಿವಾರಿಸಿಕೊಂಡು, ತನ್ನದೇ ಸೃಜನಶೀಲತೆಯ ಗಟ್ಟಿ ಹೆಜ್ಜೆ ಮೂಡಿಸಬಲ್ಲ.

ಹಾಗೆ ಸೃಜನಶೀಲತೆಯ ಗಟ್ಟಿ ಹೆಜ್ಜೆ ಮೂಡಿಸಿದವರು - ನರೇಂದ್ರ ಪೈ ಅವರು.

ಅವರ ಕಥಾ ಸಂಕಲನ "ಕನಸುಗಳು ಖಾಸಗಿ" ನನ್ನ ಕೈಗೆ ಸಿಕ್ಕ ಕೂಡಲೇ ನನ್ನನ್ನು ಸೆಳೆದದ್ದು ಅವರ ಪ್ರಾಸ್ತಾವಿಕ ಮಾತುಗಳು. 'ಕತೆ ಹುಟ್ಟುವ ಪರಿ'ಯನ್ನು ಅವರ ಮಾತುಗಳಲ್ಲೇ ಕಟ್ಟಿಕೊಟ್ಟಿರುವ ಕತೆಗಾರ ಅವರ ಕತೆಗಳನ್ನು ಹೊಗಬಹುದಾದ ಮಾರ್ಗ ಮತ್ತು ಬಾಗಿಲುಗಳನ್ನು ಪರಿಚಯಿಸಿದ್ದಾರೆ. ಕತೆಯನ್ನು ಹೇಳುವ ಮತ್ತು ಕಾಣಿಸುವ ಮಾರ್ಗಗಳ ನಿರೂಪಣೆಗಳಲ್ಲಿ ಇವರದು ಹೆಚ್ಚು ಕಾಣಿಸುವ ಬಯಕೆಯ ಕಾಣ್ಕೆ. ಹಾಗಾಗಿ ಹೇಳುವ ಉನ್ಮಾದಕ್ಕಿಂತ ಭಿನ್ನವಾದ ಕಾಣಿಸುವ ಈ ಕ್ರಮಕ್ಕೆ ಅಗತ್ಯವಾದ ಸಾವಯವ ವಿವರಗಳು, ಸೂಕ್ಷ್ಮ ಸಂಗತಿಗಳು ಮತ್ತು ನೋಡಿದಾಗ ಕಾಣದೇ ಇವರು ಕಾಣಿಸಿದಾಗ ಕಾಣುವ ಅಚ್ಚರಿಯ ತಿರುವುಗಳು ಕತೆಗಳ ಓದನ್ನು ಒಂದು ರೋಚಕ ಅನುಭವವಾಗಿಸುತ್ತವೆ.‌ ಇಂತಹ ಕತೆಗಳು ಸಾವಧಾನದ ಓದನ್ನು ಬಯಸುತ್ತವೆ. ಮೊದಲ ಸಲ ಕಂಡರೂ ಎರಡನೆಯ ಓದಿನ ಬಾರಿ ಹೆಚ್ಚು ಪರಿಚಿತ, ಸ್ಪಷ್ಟ ಅನ್ನಿಸುವ ಸಂಗತಿಗಳಿಂದಾಗಿ ಕತೆಯ ಅಂತ್ಯದ ಬೆರಗು ಹೊಸ ಅರ್ಥ ಸಾಧ್ಯತೆಗಳನ್ನು ತೋರಿಸುತ್ತದೆ.

'ಕನಸುಗಳು ಖಾಸಗಿ' ಕತೆಯಲ್ಲಿನ ರಜನಿ ಕುರಿತಾದ ರಮ್ಯ ಪ್ರೇಮದ ಸಂಗತಿ ಕತೆಯ ಕೊನೆಯಲ್ಲಿ ವಿದ್ರಾವಕ ಅಂತ್ಯವಾಗುವಾಗ ಖಾಸಗಿತನದ ಘನತೆ, ಖಾಸಗಿಯೊಂದು ಸಾರ್ವಜನಿಕವಾದರೆ ಆಗುವ ಅಸಹಜತೆ ಮನವರಿಕೆಯಾಗುತ್ತದೆ.

ಬದುಕಿನ ನಿಗೂಢತೆ ಮತ್ತು ಅನಿರೀಕ್ಷಿತ ಆಯಾಮಗಳು ಸಹಜ ಸುಂದರವಾದುದನ್ನೂ ವಿಲಕ್ಷಣ ಗಹನವಾಗಿಸುವ ಪರಿಯ ಕತೆ 'ಕೆಂಪು ಹಾಲು', ಗಾಳಿ ಬಂದಂತೆ ತೂರುವ ಮೂಲಕ ವರ್ತಮಾನವನ್ನು ಮಾತ್ರ ರಮ್ಯ ತೀವ್ರಗೊಳಿಸಿಕೊಳ್ಳುವ ಲಾಲಸೆ ಹಾಗೂ ವಾಸ್ತವಿಕತೆಯ ಮುಖಾಮುಖಿಯಾದ ಕತೆ 'ರುಕ್ಕುಮಣಿ', ಬಾಹ್ಯ ಜಗತ್ತಿನ ವ್ಯಾವಹಾರಿಕತೆ ಮತ್ತು ಆಂತರಿಕ ಮಾನಸಿಕ ವ್ಯವಹಾರಗಳ ತಿಕ್ಕಾಟ ಹಾಗೂ ಮೂಡಿಸುವ ದಣಿವು ಸಾದೃಶವಾಗುವ ಕತೆ 'ರಿಕವರಿ',......

ಹೀಗೆ ಸಂಕಲನದ ಎಲ್ಲಾ ಕತೆಗಳು ಕಾಣಿಸುವ ಆಯಾಮ, ಮುಟ್ಟುವ ಮಜಲು, ಮೂಡಿಸುವ ಭಾವ ಎಲ್ಲವೂ ಭಿನ್ನ. ಕತೆಗಾರರು ತುಂಬಾ ತಾಳ್ಮೆಯಿಂದ ಬೇರೆ ಬೇರೆ ಹೂವುಗಳಿಂದ ಕಟ್ಟಿದ ಹಾರದ ವಿಶಿಷ್ಟ ಘಮ. ಒಂಭತ್ತು ಕತೆಗಳ ಈ ಸಂಕಲನದ ಕತೆಗಳು ಒಂದೇ ಕೇಂದ್ರದಿಂದ ಹೊಮ್ಮದೇ, ಒಂದೇ ಕೇಂದ್ರದ ಕಡೆಗೆ ಪಯಣಿಸದೇ ಅಷ್ಟ ದಿಕ್ಕುಗಳೆಡೆಗೂ ಚಲಿಸಿದರೂ ನವಗ್ರಹಗಳಿಗೆ ಒಂದೇ ಕೇಂದೆಡೆಗೆ ಸೆಳೆತದಂತೆ ಮತ್ತೆ ಮತ್ತೆ ಮಾನವೀಯ ಅಂತಃಕರಣದಿಂದ ತುಡಿತ ಮೂಡಿಸುತ್ತವೆ.‌

ಸರಾಗವಾದ ದಾರಿಯಲ್ಲೂ ಮತ್ತೆ ಮತ್ತೆ ನಿಲ್ಲಿಸಿ ನಡೆಸುವ ಈ ಪರಿಕ್ರಮ ‘ಕಥನ ಕುತೂಹಲ’ವೂ ಹೌದು.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಆನಂದ್ ಋಗ್ವೇದಿ

Comments