Article

ಭಾರತ ಒಂದು  ಮರುಶೋಧನೆ

ಒಂದು ದೇಶದ ಬಗ್ಗೆ ಒಂದು ಪುಸ್ತಕದ ರೂಪವನ್ನು ಕೊಡಬೇಕಾದರೆ, ಆ ದೇಶದ ಈಗಿನ ಸ್ಥಿತಿಗತಿಗಳೇನೇ ಇರಲಿ, ನಾವು ಮೊದಲು ಕಂಡುಕೊಳ್ಳಬಯಸುವುದು ಅದರ ಇತಿಹಾಸವನ್ನೇ. ಅಷ್ಟಕ್ಕೂ ಇತಿಹಾಸವೆಂದರೇನು? 'ಇತಿ' ಎಂದರೆ ಹೀಗೆ ಮತ್ತು 'ಹಾಸ' ಎಂದರೆ ಇತ್ತು, ಅರ್ಥಾತ್ ಒಂದಾನೊಂದು ಕಾಲದಲ್ಲಿ ಕೆಲವು ಮುಖ್ಯವಾದ ಬದಲಾವಣೆಗೆ ಕಾರಣರಾದ ವ್ಯಕ್ತಿಗಳು ಮತ್ತು ಅವರ ಕಾರ್ಯಗಳಿಂದ ದೇಶವೊಂದರ ಒಟ್ಟಾರೆ ಜನಜೀವನ ಹೀಗಿತ್ತು ಎಂಬುದಾಗಿದೆ. ಇತಿಹಾಸದ ಮುಖ್ಯಧಾರೆಯಲ್ಲಿ ಬರೆಯುವ ಲೇಖಕರರಾದ ರವಿ ಹಂಜ್ ಅವರು ಈಗಿನ ವಾಸ್ತವಿಕ ಜಗತ್ತಿನಲ್ಲೂ ಕುಳಿತು ಎಂದೋ ಗತಿಸಿಹೋದ ದೇಶದ ಪೂರ್ವಜನ್ಮವನ್ನು ಮತ್ತೆ ಪುನರುಜ್ಜೀವನಗೊಳಿಸಿದ್ದಾರೆ. ತಮ್ಮ ಮೊದಲ ಐತಿಹಾಸಿಕ ಕೃತಿಯಾದ "ಹ್ಯುಯೆನ್ ತ್ಸಾಂಗ್ - ಮಹಾಪಯಣ"ದ ಮೂಲಕ ಪರಿಚಿತರಾದ ರವಿ ಅವರು ಇತಿಹಾಸದ ಬಗ್ಗೆ ಅಪಾರ ನಿರೀಕ್ಷೆ ಮೂಡಿಸಿದ್ದರು. ಅಂತೆಯೇ ಅವರ ಬಹುನಿರೀಕ್ಷಿತ ಕೃತಿ ’ಭಾರತ ಒಂದು ಮರು ಶೋಧನೆ’ ಎಲ್ಲಾ ನಿರೀಕ್ಷೆಗಳನ್ನು ಪೂರೈಸಿದೆ.

"History is Hysteria" ಎಂದು ಇತಿಹಾಸದ ಬಗ್ಗೆ ಒಂದು ಅಲರ್ಜಿ ಇದ್ದ ನನ್ನಂತಹ ವಿಜ್ಞಾನದ ವಿದ್ಯಾರ್ಥಿಗೂ ಐತಿಹಾಸಿಕ ಕುತೂಹಲ ಕೆರಳಿಸಿದವರು ರವಿ ಅವರು. ಶಂಕರ್ ಮೊಕಾಶಿ ಪುಣೇಕರ ಅದಾವ ಹರಪ್ಪಾ ಮೊಹೆಂಜೊದಾರೊದಲ್ಲಿ ದೊರೆತ ಫಲಕವೋಂದನ್ನು ಆಧರಿಸಿ ’ಅವಧೇಶ್ವರಿ’ಯನ್ನು ಬರೆದರೋ, ಅದೇ ರೀತಿ ರವಿ ಅವರೂ ಕೂಡ ’ಹ್ಯುಯೆನ್ ತ್ಸಾಂಗ್ ಮಹಾಪಯಣ’ವನ್ನು ಬರೆದಿದ್ದಾರೆ. ಪ್ರಸ್ತುತ ಅವರ "ಭಾರತ ಒಂದು ಮರು ಶೋಧನೆ" ಇದೊಂದು ಐತಿಹಾಸಿಕ ಶೋಧನೆ ವ ಅಧ್ಯಯನ ಕೃತಿಯಾದರೂ, ಇದು ಇತಿಹಾಸದ ಕ್ರೊನೊಲೊಜಿಕಲ್ (chronological) ಮತ್ತು ಆಂಥ್ರೊಪೊಲೊಜಿಕಲ್ ಚೌಕಟ್ಟು ಮೀರಿದ ವೈಶಿಷ್ಟ್ಯ ಹೊಂದಿದೆ. ಸಿಂಧೂ ಕಣಿವೆ ನಾಗರೀಕತೆಯಿಂದ ಹಿಡಿದು ಇಂದಿನ ಓಲೈಕೆಯ ರಾಜಕೀಯದ ಭಾರತದ ತ್ರಿಕಾಲ ಆತ್ಮಚರಿತ್ರೆಯನ್ನು ಸಮಗ್ರವಾಗಿ ಸಂಗ್ರಹಿಸಿದ್ದಾರೆ.

ಹಿಂದೂ, ಹಿಂದುತ್ವವ ಅಹಿಂದಗಳ ರಾಜಕೀಯ ಭರಾಟೆಯಲ್ಲಿ ಅರ್ಥ ಕಳೆದುಕೊಂಡ ’ಹಿಂದೂ’ ಪದದ ನಿಜವಾದ ಅರ್ಥ : ಸಿಂಧೂ ಯಾ ಹಿಂದೂ ಎಂದರೆ ಧರ್ಮವಿಲ್ಲದವರು ಎಂದರ್ಥ! ಹಾಗಾಗಿ ಹಿಂದೂ ಎಂಬುದು ಒಂದು ಸಂಸ್ಕೃತಿಯೇ ಹೊರತು ಅದೊಂದು ಧರ್ಮವಾಗಲಿ ಯಾ ಧರ್ಮಾಚರಣೆಯಾಗಲಿ ಅಲ್ಲ. ಭಾರತದಲ್ಲಿ ಲಿಂಗಾರಾಧನೆ, ಸರ್ಪಾರಾಧನೆ, ಪ್ರಕೃತಿಯಾರಾಧನೆಗಳಂತಹ ಆಚರಣೆಗಳು ಕೇವಲ ಮಾನವ ಸಹಜ ಸ್ವಭಾವಗಳಾದ ಕೃತಜ್ಞತೆ, ಭಯ, ಧನ್ಯತೆ, ಅರ್ಪಣಾ ಮನೋಭಾವಗಳನ್ನು ವ್ಯಕ್ತಪಡಿಸುವ ದಾರಿಗಳಾಗಿದ್ದವೆ ಹೊರತು ಧಾರ್ಮಿಕ ಆಚರಣೆಗಳಾಗಿರಲಿಲ್ಲ. ಪ್ರಕೃತಿಯಾರಾಧನೆಯ ಮಾನವ ಸಹಜ ಭಾವನೆಗಳನ್ನು ಒಂದು ನಿಯಮಬದ್ಧ ಆಚರಣೆಯಾಗಿಸುವ ಉದ್ದೇಶದಿಂದ ಋಗ್ವೇದ ರೂಪಿಸಲ್ಪಟ್ಟಿತು ಎಂದು ರವಿ ಹೇಳುತ್ತಾರೆ.

ಹ್ಯೂಯೆನ್ ತ್ಸಾಂಗ್ ಈ ದೇಶವನ್ನು ಹಿಂದೂ ಎಂದೂ ಮತ್ತು ಇಲ್ಲಿನ ಜನರನ್ನು "ಆರ್ಯರು" ಅಂದರೆ "ಉನ್ನತಿಯನ್ನು ಸಾಧಿಸಿದವರು" ಎಂದು ಸಂಬೋಧಿಸಿದ್ದಾನೆ. ಇನ್ನೂ ದ್ರಾವಿಡ ಎಂದರೆ ಯಾರು? ದ್ರಾವಿಡ ಪದ ಮೂಲವಾಗಿ ದ್ರವ್ಯ+ವಿಧ ಎಂದರೆ ನೀರು ಸೇರುವ ಸ್ಥಳ, ಅಂದರೆ ಅರಬ್ಬೀ, ಹಿಂದೂ ಮತ್ತು ಬಂಗಾಳ ಕೊಲ್ಲಿಗಳ ನಡುವಿನ ಸ್ಥಳದಲ್ಲಿ ವಾಸಿಸುವ ಜನರು ದ್ರಾವಿಡರು. ತಮ್ಮ ಈ ಸಂಶೋಧನೆಯಲ್ಲಿ ಭಾರತಕ್ಕೂ, ಗ್ರೀಕ್, ಆಫ್ರಿಕಾ ಮತ್ತು ಇತರ ಜನರ ಆಗಮನ ನಿರ್ಗಮನ ಪ್ರಭಾವವನ್ನು ತಿಳಿಸಿದ್ದಾರೆ.ಇಲ್ಲಿ ಚಿರಪರಿಚಿತ ಮೌರ್ಯರು, ಚಾಲುಕ್ಯರು, ಕುಶಾನ, ಸಕ, ಶಕ, ಶಕಕ್ಷಾತ್ರಪ, ಸತ್ರಪ, ಕದಂಬ, ಶಾತವಾಹನ, ಗಂಗರು, ಚೋಳರ, ಹೊಯ್ಸಳ ಮುಂತಾದ ರಾಜರ ಆಡಳಿತ ವ ಆಳ್ವಿಕೆಯನ್ನು ಹೇಳುತ್ತಾ, ರವಿ ಅವರು ಕಾಶ್ಮೀರದ ದೊರೆಯಾಗಿದ್ದನೆಂಬ ಲಲಿತಾದಿತ್ಯ ಮುಕ್ತಪಿದ ( ಕ್ರಿ ಶ ೭೨೪-೭೬೦)ನನ್ನೂ ಪರಿಚಯಿಸಿದ್ದಾರೆ.

ಇನ್ನೊಂದೆಡೆ ಬೌದ್ಧ, ಜೈನ, ಇಸ್ಲಾಂ, ಸೂಫಿ, ದ್ವೈತ, ಅದ್ವೈತ ವಿಶಿಷ್ಟಾದ್ವೈತ ಮುಂತಾದ ಧಾರ್ಮಿಕ ವಿಷಯಗಳು ದೇಶದ ಇತಿಹಾಸದಲ್ಲಿ ವಹಿಸಿದ ಪಾತ್ರವನ್ನು ವಿಶ್ಲೇಷಿಸಿದ್ದಾರೆ. ಮಾನವನ ಆಧ್ಯಾತ್ಮಿಕ ವಿಕಾಸಕ್ಕೆ ಪೂರಕವಾದ "ತಂತ್ರ" ಮತ್ತು ಅದು ಕೇರಳ ವ ದಕ್ಷಿಣ ಕರಾವಳಿಗಳಲ್ಲಿ ಶಕ್ತಿ (ಹೆಣ್ಣು)ಆರಾಧನೆಯಲ್ಲಿ ಅದರ ಮಹತ್ವದ ಬಗ್ಗೆ ತಿಳಿಸುತ್ತಾ, ಶಬರಿಮಲೆಯಲ್ಲಿ ಸ್ತ್ರೀ ಪ್ರವೇಶದ ಔಚಿತ್ಯವನ್ನು ಚೆನ್ನಾಗಿ ಚರ್ಚಿಸಿದ್ದಾರೆ. ಬ್ರಿಟಿಷರು ಮನುಸ್ಮೃತಿಯನ್ನು ದುರ್ಬಳಸಿ ಒಡೆದು ಆಳುತ್ತಾ, ಭಾರತದ ಬೌದ್ಧಿಕ ಪಂಥವಾಗಿದ್ದ ತಂತ್ರ ಪಂಥವೂ ಮೌಢ್ಯವೆನಿಸುತ್ತಾ ಹೋಯಿತು. ಬ್ರಟಿಷರು ಬಿಟ್ಟು ಹೋದ "ಕಾರಕೂನರನ್ನು" ಸೃಷ್ಟಿಸುವ ಶಿಕ್ಷಣ ವ್ಯವಸ್ಥೆ ಮತ್ತು ಓಲೈಕೆಯ ರಾಜಕಾರಣದಲ್ಲಿ ತೊಳಲಾಡುತ್ತಿರುವ ಇಂದಿನ ಭಾರತದ ಸ್ಥಿತಿಗತಿಗಳನ್ನು ಅರ್ಥಪೂರ್ಣವಾಗಿ ವಿಶ್ಲೇಷಿಸಿದ್ದಾರೆ. ಹೀಗೆ ಭಾರತದ ದೇಶದ ಐತಿಹಾಸಿಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಆಡಳಿತದ ಇತ್ಯಾದಿ ವಿಷಯಗಳನ್ನು ಅಭ್ಯಸಿಸಿ ಅಧ್ಯಯನಿಸುತ್ತಾ , ಮಟಿರೀಯಲಿಸ್ಟಿಕನಿಂದ ರೀಯಾಲಿಸ್ಟಿಕ್ ಆದ ಆತ್ಮಚರಿತ್ರೆಯನ್ನು ರವಿ ಹಂಜ್ ತಮ್ಮ ಈ ಕೃತಿಯ ಮೂಲಕ ಪುನರುತ್ಥಾನಗೊಳಿಸಿದ್ದಾರೆ.

ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಾಗರಾಜ ಷಣ್ಮುಖಪ್ಪ ರಂಗನ್ನವರ