Article

ಭಾವ ಹೊತ್ತು ನಿಲ್ಲುವ ‘ಅಕಥ ಕಥಾ’

ಗ್ರಾಮೀಣ ಭಾಷೆಯ ಸೊಗಡಿನಲ್ಲಿ ಸುಂದರವಾಗಿ ರೂಪುಗೊಂಡ ಕಥೆಗಳು ಉತ್ತರಕರ್ನಾಟಕದ ಜವಾರಿ ಭಾಷೆಯ ಬಳಕೆ ಓದುಗರನ್ನು ಖುಷಿಪಡಿಸುತ್ತದೆ. ಇಂದಿನ ಬಹಳಷ್ಟು ಬರಹಗಾರರಲ್ಲಿ ತಾವು ಬೆಳೆದ ಹಳ್ಳಿ ಸೊಗಡಿನ ಆಡುಭಾಷೆಯನ್ನು ಮರೆತು ಮುನ್ನಡೆಯುವ ಕಾಲಘಟ್ಟದಲ್ಲಿ ಮೂರು ದಶಕಗಳ ಕಾಲ ಕಥಾ ಲೋಕದಲ್ಲಿ ತಮ್ಮದೆಯಾದ ವಿಶಿಷ್ಟ ಕಥೆಗಳನ್ನು ಹೇಳುವ ಮೂಲಕ ಗುರುತಿಸಿಕೊಂಡ ಲೇಖಕರು ತಮ್ಮ ಬದುಕಿನ ಬಹುಭಾಗ ಕಳೆದ ಆ ದಿನಗಳ ಆ ಪ್ರದೇಶ ಭಾಷೆಯನ್ನು ತಮ್ಮ ಎಲ್ಲ ಕಥೆಗಳಲ್ಲೂ ಚೆನ್ನಾಗಿ ಬಳಸಿದ್ದಾರೆ. ಆ ಭಾಷಾಶೈಲಿ ಓದುಗರಿಗೆ ಖುಷಿಕೊಡುತ್ತದೆ. ಎಲ್ಲೋ ಕೇಳಿದ ಶಬ್ದಗಳು ನಮ್ಮ ಮುಂದೆಯೇ ನಮ್ಮ ಬಾಲ್ಯದ ದಿನಗಳ ಸಂಭಾಷಣೆ ನಡೆದಂತೆ ಕಂಡವು.

ಕಥೆಗಳು ಒಂದಕ್ಕೊಂದು ವಿಭಿನ್ನ ಮಾದರಿಯಲ್ಲಿದ್ದು ಬದುಕಿನ ಬೇರೆ ಬೇರೆ ವಿಷಯಗಳ ಕುರಿತಾಗಿದ್ದು ಓದುಗರನ್ನು ಆವರಿಸಿಕೊಳ್ಳುತ್ತವೆ. 'ಅತಿಲೋಕಸುಂದರಿ', 'ಬಾರೋ ಗೀಜಗ' 'ನೀಲಿ ಆಕಾಶದ ಹಣ್ಣು', 'ಹೊಳೆಯ ಬದಿಯ ಬೆಳಗು' ನನಗೆ ತುಂಬಾ ಇಷ್ಟವಾದ ಕಥೆಗಳು. ಇನ್ನುಳಿದಂತೆ ಎಲ್ಲ ಕಥೆಗಳು ಬಗೆಬಗೆಯ ಭಾವಹೊತ್ತು ನಿಂತಿವೆ.

ಅಕಥ ಕಥಾ

ಕಥಾನಾಯಕ ಪ್ರಮೋದನಲ್ಲಾದ ಬದಲಾವಣೆ ನಮ್ಮಲ್ಲೂ ಆಗಬೇಕು. ಸಾಮಾನ್ಯನೊಬ್ಬ ಸಾಧುವಾದ ಕತೆ. ಕ್ರೂರತೆಯ ಮನದಲ್ಲಿ ಆಧ್ಯಾತ್ಮದ ಬೆಳಕು ಮಿಂಚಿದ ಕಥೆ. ಆಧ್ಯಾತ್ಮದ ನೆಪದಲ್ಲಿ ನಡೆಯುವ ಹಣಗಳಿಕೆಗೆ ಅವಕಾಶ ನೀಡದ ಕಥಾನಾಯಕ ಇಷ್ಟವಾಗುತ್ತಾನೆ. ಮನುಷ್ಯನೆದೆಯಾಳದ ಸ್ವಾಭಿಮಾನ ಎಲ್ಲರಲ್ಲೂ ಇರುತ್ತೆ. ಅದು ಸನ್ಯಾಸಿಯಲ್ಲೂ ಇದೆ ಬಡತನದಲ್ಲಿ‌ ಬದುಕುವ ವ್ಯಕ್ತಿಯಲ್ಲೂ ಇದೆ, ಆದರೆ ಅದನ್ನು ಅನುಸರಿಸುವುದು ಮಾತ್ರ ನಮ್ಮ ನಮ್ಮ ಮನಸ್ಸಿನ ನಿರ್ಧಾರದಲ್ಲಿದೆ ಎನ್ನುವ ಕಥಾಸಾಲುಗಳು ಇಷ್ಟವಾದವು. ಲೌಕಿಕ ಬದುಕಿನ ಅಡಿಪಾಯದಲ್ಲಿ ಅಲೌಕಿಕ ಬದುಕಿನ ಗೋಪುರವೋ!? ಅಲೌಕಿಕ ಬದುಕಿನ ಅಂತರಾಳದಲ್ಲಿ ಲೌಕಿಕ ಬದುಕೋ!? ಲೌಕಿಕ ಅಲೌಕಿಕ ಜೀವನದ ಸಮಾಗಮದ ಬದುಕು ಕಂಡ ಕಥಾನಾಯಕನ ಬದುಕು

ಅತಿಲೋಕ ಸುಂದರಿ

ತಾಯ್ತನದ ಮುಂದೆ ಎಲ್ಲ ಕ್ರೂರತೆಯನ್ನು ಮರೆಯುವ ಜೀವಗಳಲ್ಲಿ ಹೆಣ್ಣೇ ಶ್ರೇಷ್ಠಳೆನಿಸುತ್ತಾಳೆ. ತನ್ನ ಗಂಡನ ಎಲ್ಲ ಕ್ರೌರ್ಯಗಳನ್ನು ಮರೆತು ಮಗುವಿನ ನಗುವಲ್ಲಿ ಹೊಸಬದುಕಿನ‌ ಕನಸು ಕಾಣುತ್ತಾಳೆ. ಕಥೆಯ ಮಂಗಮ್ಮ ಬದಲಾದ ಪರಿ ಅಂತಹುದೇ ಆಗಿದೆ. ರಾಕ್ಷಸ ಪ್ರವೃತ್ತಿಯ ಮುಠಾಮೇಸ್ತ್ರಿಯಂತಹ ಕ್ರೌರ್ಯಯುತ ಬದುಕು ಸಾಗಿಸುವ ಗಂಡಸರು ಇಂದಿನ ಸಮಾಜದಲ್ಲೂ ಹೇರಳವಾಗಿ ಸಿಗುತ್ತಾರೆ. ಆದರೂ ಕ್ರೌರ್ಯವನ್ನು ಮರೆತ ಮುಠಾಮೇಸ್ತ್ರಿ ಮಗಳ ಕಂಡು ಬದಲಾಗುವ ಪರಿ ನಿಜಕ್ಕೂ ಬೆರಗು ಮೂಡಿಸುವಂತಹುದು.

ವೈಶಾಕದ ದಿನಗಳು

ಹಳೆಯ ಸಂಪ್ರದಾಯದ ಜೊತೆಗೆ ಹೊಸತನವನ್ನು ಅಪ್ಪಿಕೊಳ್ಳುವ ಧಾವಂತದಲ್ಲಿ ಹಿರಿಯ ಜೀವಗಳನ್ನು ಸಮಾಧಾನಿಸದೇ ತಮ್ಮ ಹಠವನ್ನೇ ಸಾಧಿಸುವ ನವಯುಗದ ಪೀಳಿಗೆಯವರು ಓದಬೇಕಾದ ಕಥೆ.
ಕೌಟುಂಬಿಕ ಸಂಪ್ರದಾಯಗಳನ್ನು ಪಾಲಿಸದೇ ಗಾಳಿಗೆ ತೂರಿ ನಡೆಯುವ ಮಕ್ಕಳನ್ನು ಕಂಡು ಮರುಗಬೇಕೋ ಅಥವಾ ಹೊಸತನದ ನೆಲೆಯಲ್ಲಿ ಬದುಕಲು ಬಿಡಬೇಕೋ ಎನ್ನುವ ಗೊಂದಲದಲ್ಲಿಯೇ ಹಿರಿಯರು 'ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು' ಎನ್ನುವಂತೆ ಎರಡರಿಂದಲೂ ರೂಪುಗೊಳ್ಳುವ ಹೊಸತನದ ಹೊಳಪನ್ನು ಖುಷಿಯಿಂದ ನೋಡುವ ಬಗೆ ಹೊಸತಲ್ಲ ಅದು ಆಯಾ ಕಾಲಘಟ್ಟದ ಬದಲಾಗುವ ಬದುಕಿನ ಲಕ್ಷಣಗಳು. ಅದು ಎಲ್ಲರಲ್ಲೂ ಇರಬೇಕಾದುದೆ. ಕಥಾನಾಯಕನ ತಂದೆಯ ಮಾತುಗಳು ಅಂತರಾಳ ಇದನ್ನೇ ಹೇಳುತ್ತವೆ. ಮಗ ಖುಷಿಯಿಂದ ಕುಣಿದಾಡುತ್ತಾನೆ.

ಹೊಳೆಯ ಬದಿಯ ಬೆಳಗು

ಹೊಳೆಯೆಂಬುದು ಬದುಕಿನ ಅಸ್ಥಿತ್ವಕ್ಕೆ ಸಾಕ್ಷಿ. ಹೊಳೆಯ ದಡದಲ್ಲಿ ದೇವರ ರೂಪದೊಳಗೆ ತಮ್ಮ ಬದುಕಿನ ಕಥನವನ್ನು ಹೇಳಿಕೊಳ್ಳುವ ಮೂರು ಜೀವಗಳು ಎಲ್ಲವನ್ನು ಮರೆತು ಕೊನೆಗೆ ದೈವತ್ವದಲ್ಲಿ ತಮ್ಮ ನೋವನ್ನು ಮರೆತು ನೆಮ್ಮದಿಯ ಪಡೆಯುವ ಕ್ಷಣವನ್ನು ಕಥೆಯಲ್ಲಿ‌ ಕಾಣಬಹುದು.
ಚಂದ್ರವ್ವ, ರುಕುಮವ್ವ, ಬೋಲ್ಡಿ ಬಾಬಾ ಇವರ ಬದುಕಿನ ಕಹಿನೆನಪುಗಳು ಮೌನೇಶನ ನೆಲದಲ್ಲಿ ಹರಿದಾಡಿದವು. ಒಬ್ಬರಿಗೊಬ್ಬರೂ ಸಾಂತ್ವಾನಿಸಿದರು. ಲೌಕಿಕ ಬದುಕನ್ನು ತೊರೆದು ಅಲೌಕಿಕ, ಸಾಧುಸಂತರ ಬದುಕನ್ನು ಆಯ್ದುಕೊಂಡ ಬಾಬಾನ ಕತೆ, ಇದ್ದೊಬ್ಬ ಮಗನನ್ನು ಧನೇರ ಸೆರೆಯಿಂದ ಬಿಡಿಸಬೇಕು ಎಂದು ಕನಸು ಹೊತ್ತ ಕುರುಡು ಜೀವ ರುಕುಮವ್ವ, ಗಂಡ ಬಂದಾನೇನೋ ಎಂದು ಕಾಯುವ ಚಂದ್ರವ್ವ ಎಲ್ಲರೂ ಸಮಾನ ದುಃಖಿಗಳೆ, ಆದರೂ ಭಗವಂತನ ನೆನೆಯುತ ತಮ್ಮತನವನು ಮರೆತು ಮೌನೇಶನ ರಥದ ಮೆರವಣಿಗೆಯಲ್ಲಿ ಕಳೆದೋಗುವ ಪರಿ ದೈವತ್ವದ ಪರಾಕಾಷ್ಠೆ ಎನ್ನಬಹುದು.

ನೀಲಿ ಆಕಾಶದ ಕಣ್ಣು

ನೀಲದ ಹಣ್ಣಿನಂತೆ ನಮ್ಮೆಲ್ಲರ ಬದುಕು. ಹುಳಿ, ಸಿಹಿ, ಒಗರುಗಳ ಮೆಲ್ಲುತ್ತಲೇ ಸಾಗಬೇಕು. ನಾವೆಲ್ಲ ಬರೀ ಸಿಹಿಯನುಂಡು ಬೆಳೆಯಬೇಕೆಂದರೆ ಆದಿತೆ. ಹೂವಿಯ ಬದುಕಿಗೆ ಬೆಳಕದಾ ಮಾಸ್ತಾರ ಹಾಗೂ ಸಾವಿತ್ರಕ್ಕ. ಹೂವಿಯ ಮಡಿಲಲ್ಲಿ ಹೆಣ್ಣು ಹುಟ್ಟಿತು ಎಂಬ ಕಾರಣಕ್ಕೆ ಬದುಕನ್ನೇ ಕತ್ತಲು ಮಾಡಿದ ಅತ್ತೆಯ ವರ್ತನೆ. ತಾಯಿಗೆ ಹೆದರುವ ಪುಕ್ಕಲು ಗಂಡ. ಇವರೆಲ್ಲರಿಂದ ದೂರ ಬಂದು ತಂದೆಯ ಊರಲ್ಲೇ ಬದುಕು ಕಟ್ಟಿಕೊಂಡು ನೆಮ್ಮದಿಯ ಬದುಕು ಸಾಗಿಸಿದ ಹೂವಿಯ ಬದುಕಂತೆ ವಾಸ್ತವ ಸಮಾಜದಲ್ಲೂ ಇಂದಿಗೂ ಬಹಳಷ್ಟು ಹೂವಿಯರು ತಮ್ಮ ಬದುಕನ್ನು ಹೂವಂತೆ ಅರಳಿಸಿಕೊಂಡು ಬದುಕುತ್ತಿದ್ದಾರೆ. ಹೆಣ್ಣು ಹೆತ್ತರೆ ಗಂಡನ ಮನೆಯವರು ವರ್ತಿಸುವ ವರ್ತನೆಯಿಂದ ಬೀದಿಗೆ ಬರುವ ಹೆಣ್ಣುಮಗಳ ಕಥನವೇ 'ನೀಲಿ ಆಕಾಶದ ಕಣ್ಣು' ಕಥೆಯಾಗಿದೆ. ಮಾಸ್ತಾರರಂತ ಸಹೃದಯಿಗಳ ನೆರಳಲ್ಲಿ ಬದುಕಿ ಬಾಳಿದ ಹೂವಿಯ ಬದುಕು ನೀಲಿ ಆಕಾಶದಂತೆ ಶುಭ್ರವಾಗಿತ್ತು

ಬಾರೋ ಗೀಜಗ

ಜಯತೀರ್ಥ ಹಾಗೂ ನೀಲಾಂಜನ ಇವರ ಒಡನಾಟದಲ್ಲಿ ತೆರೆದುಕೊಳ್ಳುವ ನೆನಪಿನ ಪಟಗಳು, ಅನುಭವದ ಮಾತುಗಳು, ತಾಯಿಯನ್ನು ಕಳೆದುಕೊಂಡು ತಂದೆಯನ್ನು ನೆಚ್ಚಿಕೊಂಡು ನೆಮ್ಮದಿಯ ಬದುಕ ಸಾಗಿಸುವ ನೀಲಾಂಜನ, ಮಗಳ ನೆನಪಲ್ಲಿ ತಮ್ಮ ಬದುಕನ್ನು ನೆನಪಿಸಿಕೊಂಡು ಹಸಿ ಹಸಿ ಭಾವಗಳನ್ನು ಹೊತ್ತು ನಡೆದ ಕದಂ ಅವರ ಬದುಕಿನ ಕಥನವನ್ನು ಬಾರೋ ಗೀಜಗ ಕತೆ ಹೇಳುತ್ತದೆ. ಮನುಷ್ಯ ಎಷ್ಟೇ ಬೆಳೆದರೂ ತನ್ನ ಬೇರುಗಳನ್ನೆಂದು ಮಾರೆಯಬಾರದು, ತಾನು ಹತ್ತಿದ ಮೆಟ್ಟಿಲುಗಳನ್ನು ಮರೆಯಬಾರದು. ಸ್ಥಾವರ ಜಂಗಮಗಳ ಒಡನಾಟವೂ ಪ್ರಕೃತಿಯಲ್ಲಿ ಸಂಭವಿಸುತ್ತದೆ. ಅದರಂತೆ ನಮ್ಮ ಬದುಕು ರೂಪುಗೊಳ್ಳಬೇಕು ಎಂದು ಕಥೆ ಹೇಳುತ್ತದೆ.
ಗೀಜಗದ ಗೂಡಂತೆ ನಮ್ಮ ಬದುಕನ್ನು ಕಟ್ಟಿಕೊಳ್ಳುವುದು ಮನುಷ್ಯ ಕಲಿಯಬೇಕಿದೆ ಎಂಬುದನ್ನು ಕಥೆ ಚಿತ್ರಿಸುತ್ತದೆ.

ಮಾಘ ಮಾಸದ ಇಳಿಸಂಜೆ

ನೆನಪುಗಳ ಸರಮಾಲೆ. ಬಾಲ್ಯದ ದಿನಗಳೊಡನಾಟದ ಕ್ಷಣಗಳು ಮರೆಯಾಗಿ ಮಕಾಡೆ ಮಲಗಿದಾಗ ದುತ್ತೆಂದು ಹಳೆಯ ಗೆಳೆಯರೆಲ್ಲರೂ ಸೇರುವ ಘಳಿಗೆ ಬಂದಾಗ, ಆ ಬಾಲ್ಯದ ನೆನಪುಗಳ ಹೂರಣವನ್ನು ಬಿಚ್ಚಿಡುವ ಪರಿಯೇ ಮಾಘ ಮಾಸದ ಇಳಿಸಂಜೆ ಕತೆಯ ತಿರುಳು. ಅಲ್ಲಿ ನೆನಪುಗಳಷ್ಟೇ ಅಲ್ಲ ಮಾಸದ ಗಾಯಗಳಿರುತ್ತವೆ, ಹಿಡಿಹಿಡಿ ನೆನಪುಗಳಿರುತ್ತವೆ, ಹಾಸ್ಯದ ರಸನಿಮಿಷಗಳಿರುತ್ತವೆ, ಗೆಳೆಯರ ಕಾಲೆಳೆಯುವ ಪ್ರಸಂಗಗಳಿರುತ್ತವೆ, ಹರೆಯದ ಭಾವಗಳ ಗುಚ್ಚವೇ ಅಲ್ಲಿರುತ್ತದೆ. ಅಂತಹ ಸುಮಧುರ ನೆನಪುಗಳನ್ನು ಮರುಕಳಿಸುವ ಚುಟುಕಾದ ಕಥೆ ಇದಾಗಿದೆ.

ಕನ್ಯಾಗತ

ವಾಸಣ್ಣ ತನ್ನ ತಾಯಿಯ ನೆನಪಲ್ಲಿ ಮರಳಿ ಊರಿಗೆ ಬರುವುದರಿಂದ‌ ಆರಂಭವಾಗುವ ಕಥೆ ವಾಸಣ್ಣನ ಬದುಕನ್ನೇ ನಮ್ಮೆದುರು ಬಿಚ್ಚಿಡುತ್ತದೆ. ಮಸಲತ್ತು ಮಾಡಿ ಕಳ್ಳತನದಿಂದ ತನ್ನನ್ನು ಊರಿಂದ ಹೋಗುವಂತೆ ಮಾಡಿದ ಕುಟುಂಬದವರೆದುದು ವಾಸಣ್ಣ ಭಕ್ತಿಭಾವದ ಮನುಷ್ಯನಾಗಿ ನಿಂತಿದ್ದ. ಭೋಗದ ವಸ್ತುಗಳಲ್ಲಿಯೇ ಸುಖವೆಂದು ಕಾಣುವ ಜನಕೆ ಅಂತರಾತ್ಮದ ಖುಷಿ ಸಿಗುವುದೇ ಇಲ್ಲ. ವಾಸಣ್ಣ ಬಂಗಾರದ ಆಭರಣಗಳನ್ನು ನೀರಿಗೆ ಹಾಕಿ ಮಣ್ಣುಮಾಡಿದಾಗ ಕುಟುಂಬದವರ ಮನದೊಳಗೆ ಮೂಡಿರಬಹುದಾದ ಹಪಹಪಿಯ ಭಾವನೆಗಳು ವಾಸ್ತವ ಜಗದ ಎಲ್ಲ ಮನಸ್ಸುಗಳಲ್ಲಿ ಕಾಣಬಹುದು.

ಕತೆಗಾರನ ಅಕ್ರಮ ಕತೆ

ಕಥೆಗಾರರು ಕಥೆಗಳನ್ನು ಬರೆಯುವ ಬಗೆ, ಅವುಗಳು ರೂಪುಗೊಳ್ಳುವ ವಿಧಾನಗಳು, ಬದಲಾದ ಕಾಲಘಟ್ಟದಲ್ಲಿ ಕತೆಗಳ ಮಹತ್ವ, ಕಥೆಗಾರ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು, ಕಾಡಿದ ಕಥೆಗಳು ಬರೆದು ಮುಗಿಸಿದಾಗ ಕಾಡುವ ಖಾಲಿತನ, ಮತ್ತೊಂದು ಕಥೆ ರೂಪುಗೊಳ್ಳುವವರೆಗೆ ಹೊಸತನಕ್ಕೆ ಕಾಯುವ ಕ್ರಿಯೆ ಹೀಗೆ ಬಹಳಷ್ಟು ಕಥೆಗಾರರಾದ ಲೇಖಕರು ತಮ್ಮ ಕಥನಕ್ರಮದ ಕುರಿತು ಸೊಗಸಾಗಿ ವಿವರಿಸಿದ್ದಾರೆ.
----
ಎಲ್ಲ ಕಥೆಗಳು ಓದುಗರನ್ನು ಬಹಳ ಸಮಯದವರೆಗೂ ಕಾಡುತ್ತವೆ. ನಮ್ಮೊಳಗೆ ನಮ್ಮನ್ನು ಅಲ್ಲಾಡಿಸುತ್ತವೆ. ಕಥಾಸಂಕಲನ ಮುಗಿದ ನಂತರ ಬಹಳಷ್ಟು ಪಾತ್ರಗಳ ಪದೇ ಪದೇ ಎನನ್ನೋ ಹೇಳಿದಂತೆ ಆಗಾಗ ಮರುಕಳಿಸುತ್ತಲೇ ಇವೆ. ಒಂದೊಳ್ಳೆ ಕಥಾಸಂಕಲನ ಓದಿದ ಖುಷಿ ಮಾತ್ರ ಸದಾ ನನಗೆ. 

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜು ಹಗ್ಗದ