Article

ಭಿನ್ನ ಧರ್ಮೀಯ ಆಚರಣೆ-ಸಂಸ್ಕೃತಿಗಳ ಪಾಕ-ತೇಜೋ ತುಂಗಭದ್ರಾ

ತೇಜೋ ತುಂಗಭದ್ರಾ ; ಐತಿಹಾಸಿಕ ಕಾದಂಬರಿ, ರೋಮಾಂಚನಕಾರಿ ಘಟನೆಗಳನ್ನು, ಕಣ್ಣಿಗೆ ಕಟ್ಟಿದಂತೆ ಹೇಳುವ ನಿರೂಪಣಾ ಶೈಲಿ ಅತ್ಯಂತ ಪರಿಣಾಮಕಾರಿಯಾಗಿದೆ. 2019ನೇ ಸಾಲಿನ ಪ್ರಕಟಿತ ಕಾದಂಬರಿಗಳ ಲೆಕ್ಕದಲ್ಲಿ ಓದುಗರಲ್ಲಿ ಇದೊಂದು ಹೊಸ ಸಂಚಲನ ಮೂಡಿಸಲಿದೆ. ಎರಡು ನದಿ ತೀರಗಳ ಸಾಮಾಜ್ಯವನ್ನು ಕಟ್ಟುವ ಮತ್ತು ವಿನಾಶದ ಸಂಗತಿಗಳನ್ನು ಕೇಂದ್ರವಾಗಿಟ್ಟುಕೊಂಡು ಕತೆ ಹೇಳುವಲ್ಲಿ  ಸಫಲತೆಯನ್ನು ಕಾದಂಬರಿಕಾರ ವಸುಧೇಂದ್ರ ಕಂಡಿದ್ದಾರೆ. ಇಲ್ಲಿ ರಾಜರು ಕ್ರೂರಿಗಳಾಗಿ ನಿರಂತರವಾಗಿ ಪ್ರಜೆಗಳ ಮೇಲೆ ಯುದ್ಧದ ಭಾರ ಹಾಕುತ್ತಲೇ ಇರುತ್ತಾರೆ. ಇತಿಹಾಸವೆಂದರೆ ಕೇವಲ ರಾಜರು ಕೈಗೊಂಡ ಸಾಮ್ರಾಜ್ಯ ವಿಸ್ತರಣೆಯಲ್ಲ, ಸಾಮಾನ್ಯ ಜನಗಳ ಬದುಕುವ ರೀತಿ ಅವರ ಸಾಹಸ, ಸಾಂಸ್ಕೃತಿಕ ಲೋಕದ ಕಥಾನಕಗಳ ಮುಖ್ಯ ಭೂಮಿಕೆಯಾಗಿಟ್ಟುಕೊಂಡು ಇತಿಹಾಸ ಸೃಷ್ಟಿಸಬೇಕಿದೆ ಎಂಬುದನ್ನು ಅವಲೋಕಿಸುವಂತೆ ಮಾಡುವ ಕಾರ್ಯ ಇಲ್ಲಿ ಲೇಖಕ ವಸುಧೇಂದ್ರ ಮಾಡಿದ್ದಾರೆ. ಎರಡು ದೇಶಗಳ, ಭಿನ್ನ ಧರ್ಮಗಳ ಆಚರಣೆ, ಸಂಸ್ಕೃತಿ ಎಲ್ಲವುಗಳ ಪಾಕ ಈ ಕಾದಂಬರಿಯಲ್ಲಿ ಮಡುಗಟ್ಟಿ ನಿಂತಿದೆ.

ಬಹಳ ನಿರೀಕ್ಷೆಯಿನ್ನಟ್ಟುಕೊಂಡು ಈ ಕಾದಂಬರಿ ಓದಲು ಸುರು ಮಾಡಿದೆ. ಆರಂಭದ ಪುಟಗಳಲ್ಲಿ ಓದುಗನನ್ನು ಬಂಧಿಯಾಗಿಸಿ ಬಿಡುತ್ತದೆ. ಕೊನೆ ತಲುಪುವರೆಗೂ ರೋಚಕತೆಯಿಂದಲೇ ಓದಿಸಿಕೊಂಡು ಹೋಗುತ್ತದೆ. ಇಬ್ಬರು ಪ್ರೇಮಿಗಳಿಂದ ಕಥನ ತೆರೆದುಕೊಂಡು ಮತ್ತೊಂದು ದಿಕ್ಕಿನಲ್ಲಿ ಪ್ರೇಮದ ಕೊಡುವಿಕೆ ಕಾದಂಬರಿ ಕೊನೆಯಲ್ಲಿ ಘಟಿಸುತ್ತದೆ. ಈ ಮಧ್ಯೆ ತೇಜೋ ನದಿ ಮತ್ತು ತುಂಗಭದ್ರಾ ನದಿಗಳ ಪಾಶ್ಚಿಮಾತ್ಯ ಮತ್ತು ಪೌರ್ವಾತ್ಯ ದೇಶಗಳ ಸಂಸ್ಕೃತಿ, ಜನಜೀವನ, ರಾಜಕೀಯ ಕ್ಷಿಪ್ರ ಬೆಳವಣಿಗೆಗಳನ್ನು ದಾಖಲಿಸುತ್ತಾ ಕಾದಂಬರಿ ಮುಂದುವರೆಯುತ್ತದೆ. ತುಂಗಭದ್ರಾ ನದಿಯ ದಡದ ವಿಜಯನಗರ ಸಾಮ್ರಾಜ್ಯ ಮತ್ತು ತೇಜೋ ನದಿ ದಡದ ಲಿಸ್ಬನ್ ನಗರದ ಪೋರ್ಚುಗಲ್ ಇತಿಹಾಸ ಕಣ್ಣಿಗೆ ಕಟ್ಟಿದಂತೆ ಕಟ್ಟಿಕೊಡುವ ಅವರ ಬರಹ ಶೈಲಿ ಓದುಗ ಮೆಚ್ಚಿಕೊಳ್ಳದೇ ಇರನು, ಆರು ಅಧ್ಯಾಯಗಳಲ್ಲಿ ನದಿ ಜುಳುಜುಳು  ಹರಿಯುತ್ತಲೇ ವೇಗ ಪಡೆದುಕೊಂಡು ಸಹೃದಯನನ್ನು ತುದಿಗಾಲಲ್ಲಿ ನಿಲ್ಲಿಸಿಬಿಡುತ್ತದೆ. ಕೊನೆಯ ಅಧ್ಯಾಯ ತೇಜೋ ತುಂಗಭದ್ರಾ ಎರಡು ನದಿಗಳ ಜನರನ್ನು ಒಟ್ಟಿಗೆ ಕೊಡುವಂತೆ ಮಾಡಿದ್ದು, ಬೆಲ್ಲಾ ಮತ್ತು ಗೆಬ್ರಿಯಲ್ ಕೊಡುವ ಕೊನೆಯ ಘಳಿಗೆವರೆಗೆ ಕಾದಂಬರಿಯಲ್ಲಿ ಮುಂದೇನು ಘಟಿಸುತ್ತದೆ? ಎಂಬ ಕುತೂಹಲ ಕೆರಳಿಸುತ್ತಲೇ ಹೋಗುತ್ತದೆ. 

ಭಾರತವು ಮಸಾಲೆ ಪದಾರ್ಥಗಳಿಂದಾಗಿ ಬಹಳ ಪ್ರಸಿದ್ಧಿ ಹೊಂದಿತ್ತು. ಬೇಡಿಕೆಯೂ ಸಾಕಷ್ಟಿದ್ದರೂ ಇಲ್ಲಿನವರಿಗೆ ರಪ್ತು ಮಾಡುವ ಸಾಧನಗಳಿರಲ್ಲಿಲ್ಲ, ಮೇಲಾಗಿ ಹೊರಜಗತ್ತಿನ ಸಂಪರ್ಕವೂ ಇರಲಿಲ್ಲ. 1492 ರಲ್ಲಿ ವಾಸ್ಕೋ ಡ ಗಾಮಾ ಭಾರತಕ್ಕೆ ಮಾರ್ಗ ಶೋಧ ಮಾಡಿದ ಮೇಲೆ, ಪರಕೀಯರು ಇಲ್ಲಿಗೆ ವ್ಯಾಪಾರಕ್ಕೆ  ಹೆಚ್ಚು ಬರತೊಡಗಿದರು.  ಸಾಕಷ್ಟು ದೋಚಿದರು, ಅಲ್ಲದೇ,ಇಲ್ಲಿಯೇ ನೆಲೆಯೂರಿದರು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ವ್ಯಾಪಾರಕ್ಕಾಗಿ ಬಂದ ಪೋರ್ಚಗೀಸರು, ಬ್ರಿಟಿಷರು, ಡಚ್ಚರು ನಿಧಾನವಾಗಿ ತಮ್ಮ ವ್ಯಾಪರ ಕೇಂದ್ರಗಳನ್ನು ತೆರೆದರು. ಮಸಾಲೆಗೆ ಪಾಶ್ಚಾತ್ಯರಲ್ಲಿ ಕೆಲವು ರಾಷ್ಟ್ರಗಳಲ್ಲಿ ಚಿನ್ನಕ್ಕಿಂತ ಹೆಚ್ಚು ಬೇಡಿಕೆಯಿತ್ತು ಎಂಬದು ಬೇರೆ ಹೇಳಬೇಕಿಲ್ಲ, ಅದಕ್ಕಾಗಿ ಸುಲಭವಾಗಿ ಸಿಗುತಿದ್ದ ಮಸಾಲೆಗೆ ಭಾರತವನ್ನೆ ಅವಲಂಬಿಸಿದ್ದರು. ಮೆಣಸು ಮಸಾಲೆಯ ಪದಾರ್ಥವಿಟ್ಟುಕೊಂಡು ಎಂತಹ ರೋಚಕ ದೃಶ್ಯ ಕಟ್ಟಿಕೊಡುವ ಈ ಕಥನ ಆರಂಭಗೊಳಿಸುವ ಪರಿಗೆ ಬೆರಗುಗೊಂಡೆ.

ಯಹೂದಿಯಾಗಿದ್ದ ಬೆಲ್ಲಾ ಕ್ಯಾಥೋಲಿಕ್ ಆಗಿ ಮತಾಂತರಗೊಂಡ ಮೇಲೆ ಗೆಬ್ರಿಯಲ್ ಮತ್ತು ಬೆಲ್ಲಾ ಳ ಪ್ರೀತಿಗೆ ಯಾವುದೇ ಅಡಚಣೆಯೂ ಆಗಿರಲಿಲ್ಲ, ಗೆಬ್ರಿಯಲ್, ಹಣ ಸಂಪಾದನೆಗೆ ಭಾರತಕ್ಕೆ ಬರಲು ಮೂಲ ಕಾರಣ, ತನ್ನ ಪ್ರೀತಿಯ ಬೆಲ್ಲಾಳಗಾಗಿ ಅವಳನ್ನು ಮದುವೆಯಾಗಲು, ಅವಳ ತಂದೆ ಬೆಲ್ಯಾಮ್ ಯಹೂದಿ ಹುಡುಗಿಯನ್ನು ಮದುವೆಯಾಗಲು ಕೊಡಬೇಕಾದ ವಧುದಕ್ಷಿಣೆ ಕುಹಕದ ಮಾತಿಗಾಗಿ ಶ್ರೀಮಂತನಾಗುವ ಹಂಬಲದಿಂದ ಗೆಬ್ರಿಯಲ್ ತನ್ನ ಪ್ರೀಯತಮೆಗಾಗಿ ಹಣ ಸಂಪಾದಿಸಲು ದೇಶವನ್ನು ತೊರೆದು ಭಾರತಕ್ಕೆ ಬರುವ ಯೋಜನೆ ಹಾಕಿಕೊಳ್ಳುತ್ತಾನೆ. ಬೆಲ್ಲಾ ಬೇಡವೆಂದರೂ ಕೇಳದೇ ನಾವೆಯನ್ನು ಹತ್ತಿಬಿಡುತ್ತಾನೆ. ಒಲ್ಲದ ಮನಸ್ಸಿನಿಂದ ಬೀಳ್ಕೊಟ್ಟ ಬೆಲ್ಲಾಳ ಪಾತ್ರ ಮತ್ತೇ ಕಾಣುವುದೇ ಕೊನೆಯ ಅಧ್ಯಾಯದಲ್ಲಿ, ಅವಳು ಒಬ್ಬ ಅಧಿಕಾರಿಯ ಹೆಂಡತಿಯಾಗಿ ಎಂಬುದನ್ನು ಕಂಡ ಗೆಬ್ರಿಯಲ್ ಗೆ ತನ್ನ ಅಸಹ್ಯ ವಿಕಾರವಾದ ಶರೀರ ತೋರಿಸುವದಕ್ಕೂ ಹೇಸಿಗೆಯುಂಟಾಗುತ್ತದೆ. ತನ್ನ ಪ್ರಿಯೆ ಮತ್ತೊಬ್ಬನ ಪತ್ನಿಯಾಗಿಯೇ ಇರಲೆಂದು ಬಯಸುವ ಕಥನ ದುಃಖದ ಕಟ್ಟೆಯನ್ನೊಡೆಯುತ್ತದೆ. 

ಭಾರತಕ್ಕೆ ಹಡಗಿನ ಮೂಲಕ ಪ್ರಯಾಣ ಬೆಳೆಸಿದ ಗೆಬ್ರಿಯಲ್ ಗೆ ಹಲವು ತೊಂದರೆ ಎದುರಾಗುತ್ತವೆ. ಒಂದೆಡೆ ಹಸಿವಿನಿಂದ ಬಳಲುತ್ತಾನೆ. ಗೋವಾ ಪ್ರವೇಶದ ಸಂದರ್ಭದಲ್ಲಿ ಭಾರತದ ಈ ಪ್ರದೇಶವನ್ನು ವಿಜಯಪುರದ ದೊರೆ ಆದಿಲ್ ಷಾ ಸುಲ್ತಾನನು ಆಳುತ್ತಿದ್ದ, ಹೀಗೆ ಬಂದವರನ್ನು ಮತಾಂತರಗೊಳಿಸುವ ಇಲ್ಲವೆ ಹತ್ಯೆ ಮಾಡುವ ಕಾರ್ಯ ನಿರಂತರವಾಗಿ ನಡೆದುಕೊಂಡು ಬರುತ್ತಿದ್ದವು, ಸೆರೆ ಸಿಕ್ಕ ಗೆಬ್ರಿಯಲ್ ಮತ್ತು ಇನ್ನುಳಿದ 6 ಜನರನ್ನು ಶಿಶ್ನದ ತುದಿಯ ಚರ್ಮವನ್ನು ಕತ್ತರಿಸುವ ಸುನ್ನಿ ಕಾರ್ಯದ ಮೂಲಕ ಮತಾಂತರ ಮಾಡಿದರು. ಇದಾದ ಮೂರು ತಿಂಗಳ ನಂತರ ಅಲ್ಬೂಕರ್ಕ ಮತ್ತೊಮ್ಮೆ ಆಕ್ರಮಣ ಮಾಡಿದ. ಗೋವಾ ನಡುಗಡ್ಡೆಯಲ್ಲಿದ್ದ ಆರು ಸಾವಿರಕ್ಕೂ ಹೆಚ್ಚು ಮುಸ್ಲಿಂರನ್ನು ಕೊಂದು ಗೋವಾ ಪ್ರಾಂತವನ್ನು ತನ್ನ ತೆಕ್ಕೆಗೆ ತೆಗೆದುಕೊಂಡನು. ಮತಾಂತರಗೊಂಡಿದ್ದ ಗೆಬ್ರಿಯಲ್ ನಿಗೆ ತಿಮ್ಮೋಜಿಯ ಸಲಹೆ ಮೇರೆಗೆ ಕೊಲ್ಲದೇ ಆತನಿಗೆ ಕಿವಿ ಮತ್ತು ಮೂಗು ಬಲಗೈ ಕತ್ತರಿಸಿ ಬದುಕಲು ಬಿಡಲಾಗಿತ್ತು. ಅದಾದ ನಂತರ, ವಿಜಯ ನಗರಕ್ಕೆ ಬಂದು ನೆಲೆಯೂರುತ್ತಾನೆ. ಇದಿಷ್ಟು ತೇಜೋ ನದಿದಡದ ವ್ಯಕ್ತಿಯೊಬ್ಬ ತುಂಗಭದ್ರಾ ನದಿದಡಕ್ಕೆ ಬಂದು ನೆಲೆಸುವ ಪರಿಯಾದರೆ. ಇನ್ನೊಂದು ಕಥನ ಭಾರತದೊಳಗಣ ವಿಜಯನಗರ ಸಾಮ್ರಾಜ್ಯದೊಳಗಡೆ ನಡೆದ ಘಟನೆಯಾಗಿದೆ.

ಮತಾತಂತರದ ಸನ್ನಿವೇಶಗಳು ಹೃದಯವನ್ನು ಹಿಂಡುತ್ತವೆ.  ಯಹೂದಿಗಳು ಕ್ಯಾಥೋಲಿಕ್ ಆಗುವ ಸಂದರ್ಭದಲ್ಲಿ ದೊಡ್ಡ ಕ್ರಾಂತಿಯೇ ಘಟಿಸುತ್ತದೆ. ಸಿಕ್ಕಸಿಕ್ಕ ಯಹೂದಿಗಳನ್ನು ಹತ್ಯೆ ಮಾಡಲಾಗುತ್ತದೆ, ಬೆಲ್ಲಾಳನ್ನು ಅಟ್ಟಿಸಿಕೊಂಡು ಬಂದರೂ ಅವಳು ಪಾರಾಗುತ್ತಾಳೆ. ಈ ಎಲ್ಲ ಚಿತ್ರಣಗಳು ಓದುಗನಲ್ಲಿ ಸ್ಥಾಯಿಯಾಗಿ ನಿಲ್ಲುತ್ತವೆ. ಭಾರತದಲ್ಲೂ ಮುಸ್ಲಿಂ ರಾಜರು ದೊಡ್ಡ ಪ್ರಮಾಣದಲ್ಲಿ ಮತಾಂತರ ಪ್ರಕ್ರಿಯೆ ಮಾಡುತ್ತಾರೆ. ಈ ದೃಶ್ಯಗಳು ಕಣ್ಣಿಗೆ ಕಟ್ಟುವಂತೆ ವಸುಧೇಂದ್ರ ನಿರೂಪಿಸಿದ್ದಾರೆ. ಇಂತಹ ಕ್ರೌರ್ಯಗಳು ಒಂದಡೆಯಾದರೆ ಭಾರತದಲ್ಲಿ ಆತ್ಮಬಲಿದಾನಗಳು ರೌರವ ನರಕ ದರ್ಶನದ ನೆನಪು ಮಾಡುತ್ತದೆ. ಧರ್ಮದ ಹೆಸರಿನಲ್ಲಿ ನಡೆಯುವ ಅನ್ಯಾಯಗಳು ಬಲವಂತವಾಗಿ ಸತಿಯಾಗುವಂತೆ ಮಾಡುತ್ತವೆ. ಇಲ್ಲಿ ಗಂಡ ಮಡಿದ ನಂತರ ಸತಿಯಾಗುವ ಸನ್ನಿವೇಶಗಳು ಬಿತ್ತರಿಸುವ ಕ್ರಮ ಅತ್ಯಂತ ಕುತೂಹಲಕಾರಿ. ಭೀಬೀತ್ಸ ರಸ ಓತಪ್ರೋತವಾಗಿ ಓದುಗನನ್ನು ಕಾಡುತ್ತದೆ. ಆತ್ಮಬಲಿದಾನದ ಭಾಗವಾದ ಲೆಂಕನಾಗುವ ಪದ್ದತಿಯ ಒಂದು ದೃಶ್ಯವಂತೂ ರಣಭೀಕರ.

ಬೆಲ್ಲಾ ಮತ್ರು ಗೆಬ್ರಿಯಾಲ್, ಕೇಶವ ಮತ್ತು ಹಂಪಮ್ಮ, ಮಾಪಳ ಮತ್ತು ತೆಂಬಕ್ಕ ಈ ಮೂರೂ ಜೋಡಿ ಪಾತ್ರಗಳು ಕಾದಂಬರಿಯಲ್ಲಿನ ಪ್ರಧಾನವಾಗಿ ಬಹುಮುಖ್ಯ ಭೂಮಿಕೆಯಲ್ಲಿ ಕಂಡರೂ ಅಗಲುವಿಕೆಯಿಂದಾಗಿ ಕಥಾನಕ ವಿಮುಖವಾಗಿ ಚಲಿಸುತ್ತದೆ.. ಬೆಲ್ಲಾ ಮತ್ತು ಗೆಬ್ರಿಯಾಲ್ ತೇಜೋ ನದಿಗೆ ಹೊಂದಿಕೊಂಡವು, ಉಳಿದೆರಡು ಜೋಡಿಗಳು ತುಂಗಭದ್ರಾ ನದಿಪಾತ್ರಕ್ಕೆ ಸೇರಿದ್ದು, ಮತಾಂತರ ಮತ್ತು ಆತ್ಮಬಲಿದಾನಕ್ಕೆ ಈ ಜೋಡಿಗಳು ತಮ್ಮ ಬದುಕನ್ನು ಹೊಂದಿಸುತ್ತಾರೆ. ಬೆಲ್ಲಾ ಒಲ್ಲದ ಮನಸ್ಸಿನಿಂದ ಗೆಬ್ರಿಯಾಲ್ ನನ್ನು ದೂರದ ಭಾರತಕ್ಕೆ ಬೀಳ್ಕೊಡುವ ಪ್ರಸಂಗ ಮತ್ತು ಹಂಪಮ್ಮ ವಿಜಯನಗರ ಸಾಮ್ರಾಜ್ಯವನ್ನು ತೊರೆಯಬೇಕಾದ ಪ್ರಮೇಯಗಳ ಸುತ್ತಲೂ ಧರ್ಮಸೂಕ್ಷ್ಮತೆ ಅಡಗಿದೆ. ಗೆಬ್ರಿಯಾಲ್ ನ ಪ್ರೇಯಸಿಯಾಗಿದ್ದ ಬೆಲ್ಲಾ ಅಧಿಕಾರಿಯ ಹೆಂಡತಿಯಾಗಿ ಭಾರತಕ್ಕೆ ಬರುವುದು ವಿಚಿತ್ರ್ಯವೇ ಎನ್ನಬೇಕು. ಕೊನೆಯಲ್ಲಿ,  ಗೆಬ್ರಿಯಾಲ್ ಭೇಟಿಯಾಗೋದು ಒಂದು ಪ್ರೇಮಮಯ ಸನ್ನಿವೇಶ ಎಂದರೂ ಅದು ತಾತ್ಕಾಲಿಕ. 

ಕೇಶವ ಶಿಲ್ಪಿ  ಮತ್ತು ಬಲಿಷ್ಠ ಪೈಲ್ವಾನ್ ಆಗಿದ್ದರೂ ತನ್ನ ಸ್ವಾರ್ಥದಾಸೆಗೆ ಲೆಂಕನಾಗುವ ಪ್ರಮಾಣ ಮಾಡುತ್ತಾನೆ. ಈ ವಿಷಯ ಹಂಪಮ್ಮಳಿಗೂ ತಿಳಿಯದು. ಸುಖಮಯ ಜೀವನ ಮಾಡಬೇಕಿದ್ದ ತರುಣ ಜೋಡಿಯೊಂದು ಬಲಿಯಾಗುವುದು ಮತ್ತು ಹಂಪಮ್ಮ ಸತಿಯಾಗುವ ನಿರ್ಧಾರ ಕೈಗೊಂಡರೂ ಕೊನೆ ಘಳಿಗೆಯಲ್ಲಿ ಬದುಕುವ ಮಹದಾಸೆಯಿಂದಾಗಿ ಓಡಿ ಹೋಗುತ್ತಾಳೆ, ಇಲ್ಲಿ ನಡೆಯುವುದೆಲ್ಲವೂ ವಿರುದ್ಧವಾದ ಆಲೋಚನೆಗಳಿಂದ ಎನ್ನುವುದು ಒಂದೆಡೆಯಾದರೆ. ಮೂರನೇ ಜೋಡಿ ಮಧ್ಯೆದಲ್ಲಿ ಜೀವನ ಯಾತ್ರೆ ನಿಲ್ಲಿಸಿಬಿಡುvuದು. ಕುಸ್ತಿ ಪಂದ್ಯದಲ್ಲಿ ಭೀಕರವಾಗಿ ಸಾವನ್ನಪ್ಪಿದ ಮಾಪಳ ಮತ್ತು ನಂತರದಲ್ಲಿ ಸತಿಯಾಗುವ ತೆಂಬಕ್ಕಳ ಪಾತ್ರ ಇವೆಲ್ಲವುಗಳು ಅವಸಾನದ ತಿರುವುಗಳು ಪಡೆದುಕೊಂಡ ಘಟನೆಗಳು. ಗೆಬ್ರಿಯಾಲ್ ಅಮ್ಮದಕಣ್ಣನಾಗುವುದು ಈ ತುಂಗೆಯ ದಡದಲ್ಲಿ. ಮತ್ತು ಹಂಪಮ್ಮಳಿಗೆ ಆಸರೆಯಾಗಿ ನಿಲ್ಲುವ ಗಳಿಗೆ ಸ್ವಲ್ಪ ನೆಮ್ಮದಿ ಎನಿಸಬಹುದು. ಹೋರಾಟದ ಬದುಕನ್ನು ಗೆಬ್ರಿಯಾಲ್ ರೂಢಿಸಿಕೊಂಡ ಘಟನಾವಳಿಗಳು ಇವೆಲ್ಲವು ಪ್ರಭುತ್ವದ ನೆಲದಲ್ಲಿ ಅರಳಿದ ಕುಸುಮಗಳಾಗುತ್ತವೆ.

ಎರಡು ದೇಶಗಳ ಪ್ರಭುತ್ವಗಳ ಹೋರಾಟ, ಭಾರತಕ್ಕೆ ಯುರೋಪಿಯನ್ನರು ವ್ಯಾಪಾರಸೂತ್ರ ಹಿಡಿದುಕೊಂಡು ಆಗಮಿಸಿದ್ದು, ಬೆಚ್ಚನೆಯ ಪ್ರೀತಿ,  ದೇಶೀಯ ಅರಸರ ಒಳಜಗಳ, ಧರ್ಮಂಧಾಕಾರದ ಮಡುಗಟ್ಟಿದ ಭೀಬಿತ್ಸತೆ ಎಲ್ಲವನ್ನೂ ತೆಕ್ಕೆಗೆ ತೆಗೆದುಕೊಂಡು ಜುಳಜುಳು ಹರಿಯುತ್ತಾ ನದಿ ಪಾತ್ರ ಸಾಗುತ್ತದೆ. ಈ ಕಾರಣಕ್ಕಾಗಿ, ತೇಜೋ-ತುಂಗಭದ್ರಾ ಸದಾಹರಿಯುವ, ಚರ್ಚೆಗೊಳಪಡುವ ಮಹಾನ್ ಕೃತಿಯಾಗುವ ಎಲ್ಲ ಸಾಧ್ಯತೆಗಳು ಇವೆ. ಇತ್ತೀಚಿನ  ವರ್ಷಗಳಲ್ಲಿ ನಾನು ಓದಿದ ಅತ್ಯಂತ ಮಹತ್ವದ ಕಾದಂಬರಿಗಳಲ್ಲಿ ಇದು ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಕೇವಲ ಪುರಾಣಗಳನ್ನು ಹರಿಬಿಡದೇ ಚಾರಿತ್ರಿಕ ಸಂಗತಿಗಳನ್ನು ಹಲವಾರು ಪುಸ್ತಕಗಳಿಂದ ಹೆಕ್ಕಿ ತೆಗೆದು ಸಂಶೋಧಿಸಿದ ವಸುಧೇಂದ್ರ , ಈ ಕೃತಿಗೆ ಶಕ್ತಿಯನ್ನು ತುಂಬಿದ್ದಾರೆ. ಕೆಲವು ದೃಶ್ಯಗಳನ್ನು ಓದುವಾಗಲಂತೂ ಓದುಗ ಸಣ್ಣಗೆ ನಡುಗುತ್ತಾನೆ, ಅಲ್ಲಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಾನೆ. ಕರುಣೆ, ಭಯಾನಕ ಮತ್ತು ಪ್ರೀತಿ ರಸಗಳು ಉಕ್ಕಿ ಮೌನಕ್ಕೆ ಜಾರುತ್ತಾನೆ. ಈ ಶತಮಾನದ ಆರಂಭ ಕಾಲದ  ಮಹಾನ್ ಕಾದಂಬರಿ ಎಂದು ನನಗನ್ನಿಸಿದೆ. ನಿಮಗೂ ಎನ್ನಿಸಬೇಕಾದರೆ ಒಂದು ಸಲ ಓದಿಯೇ ಹೇಳಬೇಕು. ಬಹಳ ಶ್ರದ್ದೆಯಿಂದ, ಚರಿತ್ರೆಯನ್ನು ಮುಂದಿಟ್ಟುಕೊಂಡು, ಸಂಶೋಧನೆಯ ಮೂಲಕ ಸಂಗತಿಗಳನ್ನು ಖಚಿತಪಡಿಸಿದ್ದಾರೆ. ಎಲ್ಲ ಕಾಲಕ್ಕೂ ಸಲ್ಲುವ ಈ ಕಥಾನಕ ಎಲ್ಲರಿಗೂ ಇಷ್ಟವಾಗಲಿದೆ ಎಂಬುದರ ಅರಿವಾದದ್ದು ಕೆಲವರಿಗೆ ಈ ಕಾದಂಬರಿ ಓದಿ ಎಂದು ಶಿಫಾರಸ್ಸು ಮಾಡಿದ ಮೇಲೆಯೇ!

 

 

ರಮೇಶ ಎಸ್. ಕತ್ತಿ