Article

ಬೊಗಸೆ ಒಡ್ಡಿ ನಿಲ್ಲಬೇಕಾದ ಹೊತ್ತಿನಲ್ಲಿ..

ಈ ಶತಮಾನದ ಅನೇಕ ಬಿಕ್ಕಟ್ಟುಗಳಲ್ಲಿ ಪರಿಸರದ ಕುರಿತದು ಅತಿ ಮಹತ್ವದ್ದು. ಮುಂದಿನ ತಲೆಮಾರಿಗೆ ಪರಿಸರ ಪ್ರಜ್ಞೆಯನ್ನು ಮೂಡಿಸಲೆಂದೇ ಹಸಿರು ಸಾಹಿತ್ಯವೆನ್ನುವುದು ಉದ್ಭವಿಸಿದೆ. ತಂತ್ರಜ್ಞಾನ, ಆಧುನಿಕ ಜೀವನ ಶೈಲಿಯ ಮೋಹಕ್ಕೆ ಒಳಗಾಗಿರುವ ಮಕ್ಕಳಲ್ಲಿ ನಿಸರ್ಗದೊಂದಿಗೆ ಸಾವಯವ ಸಂಬಂಧವನ್ನು ಬೆಳೆಸುವಲ್ಲಿ ಈ ಬಗೆಯ ಬರಹಗಳ ಬೆಸುಗೆತನ ಅಗತ್ಯದ್ದು. ಮಕ್ವಾನ್ಯ ಮತ್ತು ಡಿಕ್ ಹೇಳುವಂತೆ; ‘ಮಕ್ಕಳ ಸಾಹಿತ್ಯವು ಪರಿಸರದ ಕುರಿತು ಜ್ಞಾನ, ಜಾಗೃತಿ ಮತ್ತು ಜವಾಬ್ದಾರಿಯನ್ನು ಬೆಳೆಸುತ್ತದೆ.’ ಪ್ರಸ್ತುತ ‘ಗಿರಗಿಟ್ಟಿ’ ಕಥಾ ಸಂಕಲನದ ಕಥೆಗಳೂ ಈ ಉದ್ದಿಷ್ಟವನ್ನು ಈಡೇರಿಸಲು ಪ್ರಯತ್ನಿಸಿವೆ. 

ನಿತ್ಯ ಜೀವನದಲ್ಲಿ ಎಲ್ಲರಂತೆ ಸಹಜವಾಗಿರುವ ಲೇಖಕರು ತಮ್ಮ ಸೃಜನಶೀಲ ಗÀಳಿಗೆಯಲ್ಲಿ ಮಾತ್ರ ಅಸಾಮಾನ್ಯ, ಅಸಹಜ ಎನ್ನಿಸಬಹುದಾದ್ದನ್ನು ನಿರ್ಮಿಸುತ್ತಾರೆ. ಇದಕ್ಕೆ ಲೇಖಕರ ಮನೋಸಿದ್ಧತೆ ಬಹು ಮುಖ್ಯ ಪಾತ್ರವಹಿಸುತ್ತದೆ. ಅದರಲ್ಲೂ ಮಕ್ಕಳಿಗಾಗಿ ಬರೆಯುವಾಗ ಒಂದಿಷ್ಟು ಹೆಚ್ಚೇ ತಯಾರಿ, ತೊಡಗಿಸಿಕೊಳ್ಳುವಿಕೆ ಅತ್ಯಗತ್ಯವಾಗಿರುತ್ತದೆ. ಇದು ಬದುಕಿನ ಅತ್ಯಂತ ಸೂಕ್ಷ್ಮ ಸಂಗತಿಗಳನ್ನು ಆಪ್ತತೆಯಿಂದ ನೋಡುವವರಿಗೆ ಮಾತ್ರ ಮಕ್ಕಳ ಮನಸ್ಸಿನ ಆಳದ ಅರಿವಾಗಲು ಸಾಧ್ಯವಾಗುತ್ತದೆ. 

ನಿಸರ್ಗದ ನಲಿವುಗಳು, ಬಾಲ್ಯದ ಸಂಗಾತಗಳನ್ನೆಲ್ಲಾ ತಮ್ಮ ಬರಹಗಳಲ್ಲಿ ಇದುವರೆಗೆ ಅತ್ಯಂತ ಸಹಜವೆನ್ನುವಂತೆ ಹರಹುತ್ತಾ ಬರುತ್ತಿರುವ ತಮಣ್ಣ ಬೀಗಾರರು ಮಲೆನಾಡಿನ ಜೀವ ಜಗತ್ತನ್ನು ಮಕ್ಕಳಿಗೆ ಆಪ್ತವಾಗುವಂತೆ, ಒಪ್ಪ ಓರಣಗೊಳಿಸಿ ನೀಡುತ್ತಿರುವುದು ಅವರೊಳಗಿನ ನಿತ್ಯ ಕಿಶೋರತೆಯನ್ನು ಪ್ರತಿನಿಧಿಸುತ್ತದೆ. ಬೆಟ್ಟದ ನಾಡಿನ ನಿಸರ್ಗ ಸೌಂದರ್ಯ, ಬಾಲ್ಯದ ಹುಡುಗಾಟಿಕೆ, ವಾಸ್ತವ ಬದುಕು, ಪ್ರಾಣಿ ಪಕ್ಷಿಗಳೊಂದಿಗಿನ ಮಕ್ಕಳ ಬಾಂಧವ್ಯ ಹೀಗೆ ಬಹುಮುಖಿ ನೆಲೆಯಲ್ಲಿ ಮಕ್ಕಳ ಜಗತ್ತನ್ನು ಅವರ ಕಥನಗಳು ಪ್ರವೇಶಿಸಿವೆ.  

ಮಕ್ಕಳ ಸಾಹಿತ್ಯ ಲೋಕದಲ್ಲಿ ಪ್ರಾಣಿ ಪಕ್ಷಿಗಳದ್ದು ಅಗ್ರÀ್ರಸ್ಥಾನ. ಆದರೆ, ಇಲ್ಲೂ ಕೆಲವೇ ಜೀವಿಗಳು ಬಹುತೇಕರ ಬರಹಗಳಲ್ಲಿ ಕಾಣಸಿಗುತ್ತವೆ. ಈ ಹಿನ್ನೆಲೆಯಲ್ಲಿ ಬೀಗಾರರು ಪ್ರಾಣಿ ಪಕ್ಷಿಲೋಕದ ಅಲಕ್ಷಿತ ವರ್ಗದ ಕಣ್ನೆಲೆಯಿಂದ ಪರಿಸರವನ್ನು ನೋಡಲು ಪ್ರಯತ್ನಿಸಿದ್ದಾರೆ. ಇದು ತಮ್ಮಣ್ಣ ಅವರು ಈ ಹಿಂದಿನ ಕಥನಗಳಲ್ಲಿ ಬಳಸಿರುವ ಕಥಾ ಮಾಧ್ಯಮಕ್ಕಿಂತ ಭಿನ್ನ ಮತ್ತು ವಿಶಿಷ್ಟವಾದ ಮಾದರಿ ಬಳಸಿದ್ದಾರೆ.

ತಮ್ಮಣ್ಣ ಬೀಗಾರರ ‘ಗಿರಗಿಟ್ಟಿ’ ಕಥೆಗಳನ್ನು ನಿಸರ್ಗದ ಸುತ್ತ ಹರಡಿಕೊಂಡ ಕಥೆಗಳೆಂದು ಸಾಮಾನ್ಯವಾಗಿ  ಪರಿಭಾವಿಸಬಹುದಾದರೂ ಅದಷ್ಟೇ ಇವರ ಕಥೆಗಳ ಒಟ್ಟೂ ಪರಿಮಾಣ ನಿರ್ಧರಿಸಲಾರದು. ಅವರ ಕಥೆಗಳನ್ನು ಜೀವ ಕಾರುಣ್ಯದ ನೆಲೆಗಳಲ್ಲಿ ವಿಭಾಗಿಸಬೇಕಾಗುತ್ತದೆ. ನಿಸರ್ಗದ ಕೌತುಕಗಳನ್ನು ಅಚ್ಚರಿಯ ಕಣ್ಣಿಂದ ನೋಡುವ ಮಕ್ಕಳು, ಸುತ್ತಲಿನ ಜೀವ ಜಂತುಗಳೊಂದಿಗೆ ಪ್ರೀತಿ ತೋರುವ ಜೀವಗಳು ಇಲ್ಲಿ ಕಂಡುಬರುತ್ತವೆ. ಕಪ್ಪೆ ಕಣ್ಣು ಕಥೆಯಲ್ಲಿ ರವಿಯು ಕಪ್ಪೆಗಳ ಕುರಿತಾದಂತಹ ವಿಶೇಷವಾದ ಆಸಕ್ತಿ ಬೆಳೆಸಿಕೊಳ್ಳುತ್ತಾನೆ. ಕಪ್ಪೆಯ ಕಣ್ಣು, ದೈಹಿಕ ರಚನೆ, ನಡೆವಳಿಕೆ ಹೀಗೆ ಅದರ ಕುರಿತಾದ ದೀರ್ಘ ಅವಲೋಕನವನ್ನು ಅವನು ಮಾಡತೊಡಗುತ್ತಾನೆ. ಅದರಲ್ಲೂ ವಿಶೇಷವಾಗಿ ಕಣ್ಣುಗಳು ಅವನನ್ನು ವಿಶೇಷವಾಗಿ ಸೆಳೆಯುತ್ತವೆ. 
ಆತ್ಮ ಕಥಾನಕದ ರೀತಿಯಲ್ಲಿ ಸಾಗುವ ‘ಕಲ್ಲಿನೊಂದಿಗೆ’ ಕಥೆ ನಿರ್ಜೀವ ವಸ್ತುವಿನೊಂದಿಗೆ ಭಾವನಾತ್ಮಕ ಸಂಬಂಧ ಹೊಂದುವುದು. ಅದನ್ನು ಪ್ರೀತಿಯ ಗೆಳೆಯನಂತೆ ಭಾವಿಸುವುದು, ಸೂರ್ಯನ ಹಾಗೆ ಕಲ್ಲೂ ಕೂಡ. ಬಾಗುತ್ತದೆ ಬೀಳುವುದಿಲ್ಲ. ಲೇಖಕ ತನ್ನ, ನಿಸರ್ಗದ ನಡುವಿನ ಅನ್ಯೋನ್ಯತೆಯನ್ನು ಕಲಾ ಮಾಧ್ಯಮದಲ್ಲೂ ಕಥೆಗಳ ಮೂಲಕ ವ್ಯಕ್ತಪಡಿಸಿದ್ದಾರೆ. ಇದು ಮಕ್ಕಳಲ್ಲಿ ಕಲೆಯ ಅಭಿವ್ಯಕ್ತಿ ಕ್ರಮ ಮತ್ತು ಬದುಕಿನಲ್ಲಿ ಪ್ರಕೃತಿಯೊಂದಿಗೆ ಮನುಷ್ಯ ಹೊಂದಿರಬಹುದಾದ ತಾದಾತ್ಮತೆಯ ಅಗತ್ಯವನ್ನು ಇವು ಪ್ರತಿಪಾದಿಸುತ್ತವೆ.

ರೋಹನ, ಗಣಪ ಮತ್ತು ನಾನು ಈ ಮೂರು ಪಾತ್ರಗಳು ಸೇರಿ ಕಾಡು ನೋಡ ಹೊರಡುವ ಕಥೆಯೊಂದಿದೆ. ಇಲ್ಲಿ, ರೋಹನ ಹಳ್ಳಿಯ ಯಾವ ಗಂಧಗಾಳಿಯೂ ಗೊತ್ತಿರದ ನಗರದ ನಡವಳಿಕೆ ಮಾತ್ರ ತಿಳಿದವನು. ಜಂಗಲ್ ಬುಕ್‍ನ ಮೋಗ್ಲಿ ಎನಿಸಿಕೊಂಡ, ಹಳ್ಳಿ ಗುಣದ ತದ್ರೂಪಿ ಗಣಪನಿದ್ದಾನೆ. ಇವರಿಬ್ಬರ ಮಧ್ಯೆ ಎರಡನ್ನೂ ಬಲ್ಲ ಹುಡುಗನ ಸ್ಥಾನದಲ್ಲಿ ಲೇಖಕರಿದ್ದಾರೆ. ಇದೊಂದು ಮಕ್ಕಳನ್ನು ನಿಸರ್ಗದತ್ತ ಕೊಂಡೊಯ್ಯುವ ಪ್ರಯತ್ನವಾಗಿದೆ. ಕಾಡು ಕ್ಷೀಣವಾಗುತ್ತಿರುವ ಇಂದಿನ ಕಾಲದಲ್ಲಿ ಹಳ್ಳಿಯ ಮಕ್ಕಳೇ ದಟ್ಟ ಮರಗಳಿಂದ ದೂರವಾಗುತ್ತಿದ್ದಾರೆ. ಇನ್ನು; ನಗರದ ಅನೇಕ ಮಕ್ಕಳು ಕಾಡಿನ ಪರಿಚಯವನ್ನು ಪುಸ್ತಕಗಳಲ್ಲಿ ಮಾತ್ರ ಕಾಣುವಂತಾಗಿದೆ. ತಂತ್ರಜ್ಞಾನ ಇಷ್ಟೊಂದು ಬೆಳೆದರೂ ಮಕ್ಕಳ ಬೌದ್ಧಿಕ ವಿಕಾಸ, ಮಾನವೀಯ ಮೌಲ್ಯಗಳ ಅರಿವು, ಪ್ರಾಣಿ ದಯಾಪರತೆ ಇವೆಲ್ಲಾ ನಿಸರ್ಗದಿಂದ ಮಾತ್ರ ದಕ್ಕಬಲ್ಲವು. ಹಾಗಾಗಿ ಮತ್ತೆ ನಾವೆಲ್ಲಾ ಪ್ರಕೃತಿಗೆ ಶರಣು ಹೇಳದೆ ವಿಧಿಯಿಲ್ಲ. 

ಇಲ್ಲಿ ಗಣಪ ಮತ್ತು ರೋಹನ ಇಬ್ಬರು ಲೇಖಕರೊಂದಿಗೆ ಸೇರಿ ಕಾಡಿನಲ್ಲಿ ಪೊಟರೆಯೊಳಗಿರುವ ಜೇನನ್ನು ಬಿಡಿಸಿಕೊಂಡು ತಿಂದು ಬರುತ್ತಾ ಇಲ್ಲಿ ರೋಹನ್ ಅವನಿಗೆ ಒಂದು ಜೇನುಹುಳ ಕಚ್ಚುತ್ತದೆ ಇದು ಉಳಿದವರಿಗೆ ತುಂಬಾ ನಗು. ಆದರೆ ಅವನಿಗೆ ಭಯವನ್ನುಂಟುಮಾಡುತ್ತದೆ. ಉಳಿದವರಿಗೆ ಇದೆಲ್ಲ ಮಾಮೂಲು. ಅವರು ರೋಹನ್ ವಾಸಿಯಾಗುತ್ತದೆ ಎಂದು ಸಮಾಧಾನ ಗೊಳಿಸುತ್ತಾರೆ. ಲೇಖಕರು ಜೀವ ಜಗತ್ತಿನ ಅತ್ಯಂತ ಸಣ್ಣ ಸಣ್ಣ ಕೀಟಗಳನ್ನು ಕೂಡ ತಿಳಿದಿದ್ದಾರೆ, ಎನ್ನುವುದು ಈ ಕಥೆಯಲ್ಲಿ ವ್ಯಕ್ತವಾಗಿದೆ. 

ಕತ್ತಲು ಕಥೆಯಲ್ಲಿ ಇಶಾನ್ ಎನ್ನುವ ಬಾಲಕ ನಾಯಿಮರಿಯನ್ನು ತುಂಬಾ ಪ್ರೀತಿಯಿಂದ ಮನೆಗೆ ಕೊಂಡೊಯ್ಯುವ ಪ್ರಯತ್ನವಿದೆ. ಆದರೆ ದಾರಿಯಲ್ಲಿ ಸಿಗುವ ಅಪ್ಪನ ನಡತೆ ಮಕ್ಕಳ ಮನದ ತುಡಿತ ತಿಳಿಯದ ಹಿರಿಯರ ಮೌಢ್ಯತನ ಹಾಗೂ ಕ್ರೌರ್ಯವನ್ನು ಅನಾವರಣಗೊಳಿಸಿದೆ. ಹಸಿವಾಗಿಲ್ವಾ ಕಥೆಯಲ್ಲಿ ತಾಯಿ ನಸುಕಿನಿಂದ ರಾತ್ರಿ ಮಲಗುವವರೆಗೆ ಮನೆಯ ಮಂದಿಯೊಂದಿಗೆ ಅನಾದಿ ಪ್ರಾಣಿ ಕುಲವನ್ನೂ ಸಲಹುತ್ತಾಳೆ. ಇದು ಮನುಷ್ಯತ್ವದ ದರ್ಶನತೆಗೆ ಕನ್ನಡಿಯೆಂತಿದೆ. ಪುಟ್ಟಿ ಜಿರಲೆಯನ್ನು ಬದುಕಿಸುವುದು, ರವಿ ಕಪ್ಪೆಯ ಕಣ್ಣನ್ನು ಕಾಣುವುದು, ಬುಲ್ ಬುಲ್ ಮರಿಗಳ ಬದುಕು, ಸಾನ್ವಿ ಹಾವು ಕಂಡದ್ದು ಇವೆಲ್ಲಾ ಮಕ್ಕಳು ಪರಿಸರದ ಜೀವಕೋಟಿಗಳ ಆಂತರ್ಯವನ್ನೂ ಅರಿತು ನಡೆಯಬೇಕೆಂಬುದನ್ನು ಹೇಳ ಹೊರಟಿವೆ. 
‘ಕಥೆ ಹೇಳುವ ಮರ’ದಲ್ಲಿ ‘ಮರದ ಮಾಮಾ ನಾನು ಪುಟ್ಟು ಬಂದಿದ್ದೇನೆ. ನನಗೊಂದು ಕಥೆ ಹೇಳು’ ಎಂದು ಹುಡುಗನೊಬ್ಬ ಕೇಳಿಕೊಳ್ಳುತ್ತಾನೆ. ಮರದ ಕೊಂಬೆಯೊಂದು; ‘ಒಮ್ಮೆ ಇಬ್ಬರು ಮಕ್ಕಳು ನನಗೆ ಹಗ್ಗ ಹಾಕಿ ಜೋಕಾಲಿ ಜೀಕುತ್ತಾ ಸಂಭ್ರಮ ಪಡುತ್ತಿದ್ದರು. ಬಹಳ ದಿನಗಳ ನಂತರ ಮೊನ್ನೆ ಬಂದಿದ್ದರು... ಅವರು ದೊಡ್ಡವರಾಗಿದ್ದಾರೆ... ಈಗ ಅವರು.. ಕೊಡಲಿ ಹಿಡಿದು ಬಂದಿದ್ದರು.’ ಈ ಎರಡು ಮಾತುಗಳು ನಿಸರ್ಗದ ನಿಷ್ಕಲ್ಮಶ ಕೊಡುಗೆ, ಮನುಷ್ಯನ ಸ್ವಾರ್ಥಪರತೆಯನ್ನು ಸಾಕ್ಷೀಕರಿಸುತ್ತವೆ. ಈ ಬಗೆಯ ಕೃತ್ರಿಮ, ಕೃತಘ್ನ ನಡೆವಳಿಕೆಗಳು ಹಸಿರು ಸಾಹಿತ್ಯವನ್ನು ಪ್ರೇರೇಪಿಸಿವೆ.

ಲೇಖಕ ತನ್ನತನದ ಇರವು, ಸಮಾಜದ ಅರಿವು ಎರಡೂ ಸಮ್ಮಿಳತಗೊಂಡು ರಚಿಸಿದ ಕಲಾಕೃತಿ ಸಾರ್ವಕಾಲಿಕವಾಗುತ್ತದೆ. ಆ ಬಗೆಯ ಒಂದು ನಿಷ್ಕಲ್ಮಶ ಅಭಿವ್ಯಕ್ತಿ ತಮ್ಮಣ್ಣ ಬೀಗಾರರ ಗದ್ಯ ಬರವಣಿಗೆಗಳಲ್ಲಿ ಕಂಡುಬರುತ್ತದೆ. ‘ತನ್ನ ಕೃತಿ ತನ್ನ ದೃಷ್ಟಿಗೆ ಪ್ರಮಾಣವಾಗಿ ನಿಲ್ಲುತ್ತದೆ’ ಆದ್ದರಿಂದ ಇವರು ಸುತ್ತಲ ಜಗತ್ತನ್ನೇ ಕಲಾತ್ಮಕ ಕುಸುರಿಯಲ್ಲಿ ಅನಾಮತ್ತಾಗಿ ನೇಯಿಸಿದ್ದಾರೆ. ಈ ನೇಯ್ಗೆಗಳ ಸೂಕ್ಷ್ಮತೆ, ಮಕ್ಕಳ ಮನೋವ್ಯಾಪಾರ ಅರಿತವರಿಗೆ ಮಾತ್ರ ಅನುಭವಕ್ಕೆ ದಕ್ಕುತ್ತದೆ. 
ಮನುಷ್ಯ ನಿಸರ್ಗದ ಸಹಜ ಪ್ರವೃತ್ತಿಗೆ, ಸಾತ್ವಿಕ ಸಂಚಲನೆಗೆ ವಿರುದ್ಧವಾಗಿ ಕಾಂಕ್ರೀಟ್ ಕಮಾಯಿಯ ಹಿಂದೆ ಬಿದ್ದು ಹಸಿರು ಅಂದವನ್ನು ಬುದ್ಧಿಪೂರ್ವಕವಾಗಿ ಹಾಳುಗೆಡವಿದ್ದಾನೆ. ಇದರಿಂದ ಇಡೀ ಸಂಕುಲವೇ ಬೆಲೆ ತೆರಬೇಕಾಗಿದೆ. ಇದನ್ನು ಸರಿಪಡಿಸಲು ‘ನಮಸ್ಕರಿಸುವುದಲ್ಲ ಬೊಗಸೆ ಒಡ್ಡಿ ನಿಲ್ಲಬೇಕಾಗಿದೆ’. ಈ ಒಂದು ಮಾತೇ ಇಡೀ ಸಂಕಲನದ ಕಥೆಗಳ ಜೀವಾಳದಂತಿದೆ. 

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗಿರಗಿಟ್ಟಿ

ಕೆ. ಶಿವಲಿಂಗಪ್ಪ ಹಂದಿಹಾಳು

Comments