Article

ಬುದ್ಧಿ, ಭಾವಗಳ ‘ಪಕ್ಕಿಹಳ್ಳದ ಹಾದಿಗುಂಟ’

ನಾನು ತೀರ ಇತ್ತೀಚೆಗೆ ಓದಿದ ಕಾದಂಬರಿಗಳಲ್ಲಿ ಅನುಪಮಾ ಪ್ರಸಾದ್ ಅವರ ‘ಪಕ್ಕಿಹಳ್ಳದ ಹಾದಿಗುಂಟ’ ಕೃತಿಯು ಮಹತ್ವದ್ದಾಗಿದೆ. ಹಲವು ಬಗೆಯ ಭಾಷಿಕ ವಿನ್ಯಾಸ ಹಾಗೂ ನಿರೂಪಣೆಯ ವಿಧಾನಗಳಿಂದ ಬೇರೆ ಬೇರೆ ತಲೆಮಾರುಗಳ ಬದುಕನ್ನು ಚಿತ್ರಿಸಿದೆ. ಘಟನೆಗಳ ಹೆಣಿಗೆಯ ವಿನ್ಯಾಸದಲ್ಲಿಯೇ ಕತೆಯನ್ನು ಯಾವ ಹಂಗಿಲ್ಲದೆ ಸಹಜವಾಗಿ ಹೇಳುತ್ತ ಹೋಗಲಾಗಿದೆ. ಕಥನದ ವಿವರಗಳು ಎಲ್ಲೂ ವಾಚ್ಯ ಎನ್ನಿಸುವುದಿಲ್ಲ; ಅಲಂಕಾರಿಕ ಭಾಷೆಯ ಬಳಕೆಯಂತೂ ಮೊದಲೇ ಇಲ್ಲ; ಲೌಕಿಕ ಬದುಕಿನ ಜಂಜಾಟಗಳನ್ನು ಅವು ಇರುವಂತೆಯೇ ತೆರೆದಿಡಲಾಗಿದೆ. ಆದರೆ ಅತ್ಯುತ್ತಮ ಸೃಜನಶೀಲ ಕೃತಿಯೊಂದರಲ್ಲಿ ಲೌಕಿಕ ವಿವರಣೆಗಳು ಯಾವತ್ತೂ ಯಥಾವತ್ತಾಗಿ ವರದಿಯ ರೂಪದಲ್ಲಿ ಇರುವುದು ಅಸಾಧ್ಯವೇ ಸರಿ.

ಕಾದಂಬರಿ ಓದಿದಾಗ ನಮ್ಮೊಳಗೆ ಏನಾಗುತ್ತದೆ? ಕಾದಂಬರಿ ಏಕಕಾಲದಲ್ಲಿ ಹಲವು ನಿಲುವುಗಳನ್ನು ನಿರೂಪಿಸುತ್ತಿರುತ್ತದೆ. ನಾವು ಓದುವಾಗ ಹಲವು ದ್ವನಿಗಳು ನಮ್ಮೊಳಗೂ ಇಳಿದು ವಿಶಿಷ್ಟ ಅನುಭವವನ್ನು ಒದಗಿಸುತ್ತದೆ. ಈ ಕಾದಂಬರಿಯ ಓದು ನಮ್ಮ ಅಂತರಂಗವನ್ನು ಕಲಕದೇ ಇರುವುದಿಲ್ಲ. ಬದುಕಿನ ನಿಗೂಢತೆಯನ್ನೂ ಶೋಧಿಸುವ ಹಾಗೂ ಅದನ್ನು ತೆರೆದಿಡುವ ಕ್ರಮದಲ್ಲಿಯೇ ಈ ಕೃತಿಯ ಹೆಚ್ಚುಗಾರಿಕೆ ಇದೆ.

ಕಾದಂಬರಿಯ ಮೊದಲ ಭಾಗದ ಅರವತ್ತು ಎಪ್ಪತ್ತು ಪುಟಗಳು ದರ್ಬಾರಿ ರಾಗದ ಆಲಾಪದಂತೆ ನಿಧಾನ ಗತಿಯಲ್ಲಿ ಸಾಗುತ್ತದೆ. ಓದುಗರ ತಾಳ್ಮೆಯನ್ನು ಪರೀಕ್ಷಿಸುವ ಭಾವ ಮೂಡಿಸುತ್ತದೆ.ಆದರೆ ಸಂಗೀತದ ಸ್ವರ, ರಾಗ, ತಾಳ ಮತ್ತು ಹಾಡುಗಾರಿಕೆಯು ಒಂದರೊಳಗೊಂದು ಮಿಳಿತಗೊಂಡು ಪ್ರೇಕ್ಷಕರ ಮನ ಮುಟ್ಟುವ ಹಾಗೆ ಈ ಕೃತಿಯು ಓದುಗರ ಬುದ್ಧಿ ಭಾವಗಳ ಒಳಕ್ಕೆ ನಿಧಾನವಾಗಿಯೇ ಇಳಿಯುತ್ತದೆ. ಆದುದರಿಂದ ಸಂಗೀತಕ್ಕೂ ಈ ಕೃತಿಯ ವಿನ್ಯಾಸಕ್ಕೂ ಬಿಡಿಸಲಾಗದ ನಂಟಿದೆ. ಇದರಲ್ಲಿ ಬರುವ ಮುಕ್ತಾತಾಯಿ ಕನ್ನಡ ಕಾದಂಬರಿ ಲೋಕದಲ್ಲಿಯೇ ಅಪೂರ್ವ ಪಾತ್ರವಾಗಿದೆ. ಪ್ರದೇಶ, ಪರಿಸರ, ಕೃಷಿ, ಶಿಕ್ಷಣ, ತಲೆಮಾರುಗಳ ಅಂತರ, ಹೆಣ್ಣುಲೋಕ, ಮಕ್ಕಳ ಜಗತ್ತು-ಇನ್ನೂ ಹಲವು ಆಯಾಮಗಳಿಂದ ಗಂಭೀರ ಚರ್ಚೆಯನ್ನು ಬಯಸುವ ಕೃತಿ ಇದು. ಬದುಕಿನ ಧಾರುಣತೆಗಳ ನಡುವೆಯೂ ಒಳ್ಳೆಯತನ ಹಾಗೂ ಮನುಷ್ಯ ಪ್ರೀತಿಯಲ್ಲಿ ಗಾಢವಾದ ನಂಬಿಕೆಯನ್ನು ಇಟ್ಟಿರುವ ಕೃತಿಯೂ ಹೌದು.

ಅನುಪಮಾ ಪ್ರಸಾದ್ ಅವರ ಮೊದಲ ಕಾದಂಬರಿ ಇದು. ಈ ಮೊದಲು ಸಣ್ಣ ಕತೆಗಳನ್ನು ಬರೆದವರು; ಕಥಾ ಸಂಕಲನಗಳನ್ನೂ ಪ್ರಕಟಿಸಿದವರು. ಸಾಹಿತ್ಯದ ಜನಪ್ರಿಯತೆಯಿಂದ ಸದಾ ದೂರವೇ ಇರಲು ಇಚ್ಛಿಸುವ ಅನುಪಮಾ ಪ್ರಸಾದ್ ಅವರು ಕನ್ನಡ ಕಾದಂಬರಿ ಪರಂಪರೆಗೆ ಅಪರೂಪದ ಕೃತಿಯನ್ನು ನೀಡಿದ್ದಾರೆ. ಕನ್ನಡ ಕಾದಂಬರಿ ಹೊಸ ಹಾದಿ ಹಿಡಿದಿರುವುದನ್ನು ಗುರುತಿಸಬಹುದು.

ಈ ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸುಭಾಷ ರಾಜಮಾನೆ