Article

ಚಿತ್ರಪಟಗಳಂತೆ ಸರಿದು ಹೋಗುವ ’ಲಂಕೇಶ’ರ ವ್ಯಕ್ತಿಚಿತ್ರಗಳು

ಪಿ. ಲಂಕೇಶ್ ಅವರು ಕನ್ನಡ ಸಾಹಿತ್ಯ, ಸಂಸ್ಕೃತಿ – ಪತ್ರಿಕಾರಂಗವನ್ನು ಪ್ರಭಾವಿಸಿದವರು. ಇವರ ವರ್ತುಲದಲ್ಲಿದ್ದವರು ತಾವು ಕಂಡ ಲಂಕೇಶ್ ಅವರನ್ನು ಚಿತ್ರಿಸಿದ್ದಾರೆ. ಆದರೆ ಆ ಕೃತಿಗಳಲ್ಲಿ ಲಂಕೇಶರು  ಚೆದುರಿದ ಚಿತ್ರಗಳು ಎನ್ನುವ ಹಾಗೆ ಕಾಣಿಸಿಕೊಂಡಿದ್ದಾರೆ. ಇಂಥ ಸಂದರ್ಭದಲ್ಲಿಯೇ ಅವರ ವಿದ್ಯಾರ್ಥಿ, ಅನುಗಾಲದ ಗೆಳೆಯ ಶೂದ್ರ ಶ್ರೀನಿವಾಸ್ ಅವರು "ಲಂಕೇಶ್ ಮೋಹಕ ರೂಪಕಗಳ ನಡುವೆ" ಕೃತಿ ಬರೆದಿದ್ದಾರೆ. ಕೃತಿಯ ಆರಂಭದಲ್ಲಿ ಶೂದ್ರ ಶ್ರೀನಿವಾಸ್ ಹೀಗೆ ಹೇಳುತ್ತಾರೆ "ಡಾ. ಜಾನ್ಸನ್ ಮತ್ತು ಬಾಸ್ ವೆಲ್ ಎಂಬ ಎರಡು ದೀಪಸ್ತಂಭಗಳನ್ನು ರೂಪಕವಾಗಿಟ್ಟುಕೊಂಡು 'ಲಂಕೇಶ್; ಮೋಹಕ ರೂಪಗಳ ನಡುವೆ' ಕೃತಿಯನ್ನು ನೋಡಲು ಪ್ರಯತ್ನಿಸಿರುವೆ. ಇಲ್ಲಿ ನನಗೆ ಲಂಕೇಶ್ ಅವರ ವ್ಯಕ್ತಿತ್ವವೇ ಪ್ರಧಾನ" ಲೇಖಕರ ಇರಾದೆ ಹೀಗಿದ್ದರೂ ಅದು ಅವರು ಅಂದುಕೊಂಡ ಚೌಕಟ್ಟನ್ನೂ ಮೀರಿ ಬೆಳೆದು ಚಿತ್ರಪಟಗಳಂತೆ ಸರಿದು ಹೋಗುವ ವ್ಯಕ್ತಿಚಿತ್ರಗಳಾಗಿವೆ.

ಲಂಕೇಶ್ ಅವರ ಒಡನಾಟದಲ್ಲಿ, ಸಾಂಗತ್ಯದಲ್ಲಿ, ಪರಿಧಿಯಲ್ಲಿ ಬಂದುಹೋದ ಕರ್ನಾಟಕ ಸಾಂಸ್ಕೃತಿಕ-ರಾಜಕೀಯ ಲೋಕದ ಗಣ್ಯರುಗಳು ಬಂದು ಹೋಗಿದ್ದಾರೆ. ಲಂಕೇಶರ ವ್ಯಕ್ತಿತ್ವವನ್ನು ಇಡಿಯಾಗಿ ಹಿಡಿಯ ಹೊರಟ ಶೂದ್ರ ಶ್ರೀನಿವಾಸರು ಇಂಥ ಬಹುತೇಕರ ವ್ಯಕ್ತಿಚಿತ್ರಣವನ್ನೂ ಕಟ್ಟಿಕೊಡುತ್ತಾರೆ. ಅದೇ ಕಾಲದಲ್ಲಿ ಆ ವ್ಯಕ್ತಿಗಳ ಕಣ್ಣುಗಳಲ್ಲಿ ಲಂಕೇಶ್ ಚಿತ್ರಿತವಾದ ರೀತಿಯೂ ಇಲ್ಲಿ ಅನಾವರಣಗೊಂಡಿದ್ದೆ. ಇದು 'ಲಂಕೇಶ್; ಮೋಹಕ ರೂಪಗಳ ನಡುವೆ' ಕೃತಿಯ ಬಹುಮುಖ್ಯ ವೈಶಿಷ್ಟ್ಯ. ಶೂದ್ರ ಶ್ರೀನಿವಾಸ್ ಈ ಕೃತಿಯನ್ನು ಏಕೆ ಬರೆದರು ಎಂಬುದೂ ಪ್ರಶ್ನೆ. ತಮಗೆ ಪಾಠ ಮಾಡಿದ, ಪ್ರಭಾವಿಸಿದ, ಸಾಮಿಪ್ಯದಿಂದ ರೇಗಿಸಿದ, ನೋಯಿಸಿದ ಲಂಕೇಶರು ಇಲ್ಲವಾದ ನಂತರವೂ ಮನೋಭಿತ್ತಿಯಲ್ಲಿ ಅನುಗಾಲವೂ ಕಾಡುತ್ತಿರುವುದರಿಂದ ಬಿಡುಗಡೆ ಪಡೆದು ನಿರಾಳವಾಗುವ ಹಿನ್ನೆಲೆಯಲ್ಲಿ ಬರೆದಿದ್ದಾರೆ ಎಂಬುದು ಇದನ್ನೋದುವಾಗ ಗಮನಕ್ಕೆ ಬರುತ್ತದೆ. ಆದ್ದರಿಂದಲೇ ತಮ್ಮ ಆರಂಭದ ಮಾತುಗಳಿಗೆ ಅವರಿಟ್ಟ ಹೆಸರು "ನಿರಾಳವಾಗುವುದೆಂದರೆ" ಲಂಕೇಶರನ್ನು ಹತ್ತಿರದಿಂದ ಕಾಣದೇ ಅವರ ಕೃತಿಗಳ ಮೂಲಕವೇ ಪರಿಚಯಿಸಿಕೊಂಡವರು ಅನೇಕ. ಅವರ ವ್ಯಕ್ತಿ ಚಿತ್ರಣ ನೀಡುವ ಪುಸ್ತಕಗಳಿಂದ, ಗೊತ್ತಿದ್ದವರು, ಗೊತ್ತಿಲ್ಲದವರು ಹೇಳುವ ವರ್ಣರಂಜಿತ ಹೇಳಿಕೆಗಳಿಂದ ಅಸ್ಪಷ್ಟ ವ್ಯಕ್ತಿಚಿತ್ರಣವನ್ನೂ ಕಟ್ಟಿಕೊಂಡಿರುತ್ತಾರೆ. ಆದರೆ ಈ ಕೃತಿ ಅವರ ಬಗ್ಗೆ ಸ್ಪಷ್ಟ ಚಿತ್ರಣವನ್ನು ಕಟ್ಟಿಕೊಡಲು ಯತ್ನಿಸುತ್ತದೆ. ಇದಿಷ್ಟೇ ಅಲ್ಲ; ಈ ಕೃತಿಯಿಂದ 50 ವರ್ಷಗಳ ಕರ್ನಾಟಕದ ರಾಜಕೀಯ- ಸಾಂಸ್ಕೃತಿಕ – ರಾಜಕೀಯ ದಿನಗಳ ಪರಿಚಯವೂ ಆಗುತ್ತದೆ. ಸಾಹಿತಿ ರಾಜೇಂದ್ರ ಚೆನ್ನಿ ಅವರು ಮುನ್ನಡಿ "ಲಂಕೇಶರ ಬಗೆಗಿನ ಕೃತಿಯನ್ನು ಓದುವುದು, ಕೆಲವು ದಶಕಗಳ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆ ಓದಿದಂತೆ. ಕೊನೇ ಪಕ್ಷ ಎರಡು ತಲೆಮಾರುಗಳ ಪ್ರಜ್ಞೆಯನ್ನು ರೂಪಿಸಿದ ಎಲ್ಲ ಸಾಂಸ್ಕೃತಿಕ ಘಟನೆಗಳ ಹಿಂದೆ ಲಂಕೇಶ್ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಇದ್ದಾರೆ. ಲಂಕೇಶ್ ಪತ್ರಿಕೆ ಸೆಕ್ಯುಲರ್ ಸಂವೇದನೆ ಕಾಪಾಡಿ ಬೆಳೆಸಿದೆ. ರಾಜಕೀಯ ಹಾಗೂ ಇತರ ಅಧಿಕಾರ ಕೇಂದ್ರಗಳನ್ನು ಆದಷ್ಟು ಮಟ್ಟಿಗೆ ಎಚ್ಚರವಾಗಿಸಿದೆ. ಶೂದ್ರರ ನಿರೂಪಣೆಯಲ್ಲಿ ಆ ಕಾಲದ ಎಲ್ಲ ಮುಖ್ಯಘಟನೆಗಳೂ ಬಂದು ಹೋಗುತ್ತವೆ.

ಲಂಕೇಶರ ಯೌವನ, ಗರ್ವ, ಆರ್ಥಿಕ ಅಸಹಾಯಕತೆ, ಶ್ರೀಮಂತಿಕೆ, ಜನಪ್ರಿಯತೆ ಎಲ್ಲವನ್ನೂ ಕಂಡ ಲೇಖಕರು ಅವರು ಸಾಯುವ ಕೆಲವು ದಿನಗಳ ಮುಂಚೆ ಭೇಟಿ ಮಾಡುತ್ತಾರೆ. ಆಗ ಲಂಕೇಶರು ಹೇಳುವ ಮಾತುಗಳು ಓದುಗರನ್ನು ಆರ್ದ್ರಗೊಳಿಸುತ್ತವೆ. ಮನುಷ್ಯನ ಅಸಹಾಯಕ ಘಳಿಗೆಗಳು ದಿಗಿಲು ಮೂಡಿಸುವಂತೆ, ನಮ್ಮೊಳಗನ್ನು ನಾವೇ ನೋಡಿಕೊಳ್ಳುವಂತೆ ಮಾಡುತ್ತವೆ.

ಪುಸ್ತಕದ ಬಗ್ಗೆ ಹೆಚ್ಚಿನ ವಿವರ ತಿಳಿಯಲು ಇಲ್ಲಿ ಕ್ಲಿಕ್ಕಿಸಿ 

ಕುಮಾರ ರೈತ