Article

ದಾಸ್ತೋವ್ ಸ್ಕಿಯ ಅನಾವರಣ ‘ಅಧೋಲೋಕದ ಟಿಪ್ಪಣಿಗಳು’

"ಬುದ್ಧನ ಕುತ್ತಿಗೆ ಪಟ್ಟಿ ಹಿಡಿದು, ಅವನ ತುಟಿಗೆ ಬಲವಾಗಿ ಮುತ್ತಿಟ್ಟು, 'ನಿನ್ನ ಸಿದ್ಧಾಂತ ಶುದ್ಧ ಸತ್ಯ' ಎಂದು ಹೇಳುವ ಛಾತಿ ಇರುವುದು ದಾಸ್ತೋವ್ ಸ್ಕಿಗೆ ಮಾತ್ರ".

ಈ ಸಾಲುಗಳನ್ನೊಮ್ಮೆ ನೋಡಿದಾಗ ತುಂಬಾ ಅಚ್ಚರಿಯಾಯಿತು, ಆದರೆ ಪುಸ್ತಕದ ಮುಂಬರುವ ಪುಟಗಳನ್ನೊಮ್ಮೆ ತಿರುವಿದಾಗ ಮತ್ತಷ್ಟು ಅಚ್ಚರಿ ಅನ್ನಿಸಿದರೂ ತುಂಬಾ ಹಿಡಿಸತೊಡಗಿತು. ಪಾಶ್ಚಿಮಾತ್ಯ ಸಾಹಿತ್ಯದ ಗಂಧ ಗಾಳಿಯು ಗೊತ್ತಿರದ ನನಗೆ ಕೇಶವ ಮಳಗಿ ಅವರ ಕಮು ತರುಣ ವಾಚಿಕೆಯಾಗಲಿ, ನಟರಾಜ್ ಹುಳಿಯಾರವರ ಶೇಕ್ಸಪೀಯರ್ನ ನಾಟಕಗಳಾಗಲಿ, ಇವೆಲ್ಲ ಪುಸ್ತಕಗಳು ನನ್ನನ್ನು ಅಲ್ಲಿನ ಸಾಹಿತ್ಯದ ಪರಿಚಯವನ್ನು ತುಂಬಾ ಚನ್ನಾಗಿಯೇ ಅರ್ಥೈಸಿವೆ.

"ನಿಸರ್ಗದ ಮೌನವನ್ನು ಪ್ರತಿಭಟಿಸಿ ಬದುಕಬಯಸುವ ಮನುಜರೆಲ್ಲಾದಂಗೆ ಏಳುವುದರಲ್ಲೇ ಮುಕ್ತಿಯ ಕಾಣಬೇಕು"

"ಮನುಷ್ಯ ತನ್ನ ವಿಶಿಷ್ಟ ಸಿದ್ಧಾಂತವನ್ನು ಸಮರ್ಥಿಸಲೆಂದೇ ಎಲ್ಲಾ ತರದ ವಿವೇಚನೆಗಳನ್ನು ಗಾಳಿಗೆ ತೂರಿ ಹಾರುವನು, ಹಾಗೆ ಹಾರುತ್ತಲೇ ನಿಯಮಗಳು ನಿರೂಪಿಸಿರುವ ವಿವೇಕದಿಂದ ಬೇರೆಯಾಗಲು ಉದ್ದೇಶಪೂರ್ವಕವಾಗಿಯೇ ಹುಚ್ಚನಾಗಿ ತನ್ನ ಸ್ವಂತ ಸೃಷ್ಟಿಯಾದ ಶೂನ್ಯ ಪಂಥದ ದೊರೆಯಾಗುವನು. ತಾನು ಹಾಗೆಂದೇ ನಂಬಿರುವವನು. ಮನುಷ್ಯನಾಗುವ ವ್ಯಾಪಾರವದೆಯಲ್ಲ, ಅದರ ವಹಿವಾಟು ನಡೆಯುವುದೇ ಹೀಗೆ; ಪ್ರತಿಕ್ಷಣವೂ ತಾನು ಮನುಷ್ಯ, ಕೀಲು ಗೊಂಬೆಯಲ್ಲವೆಂದು ಆತ ಕನಿಷ್ಟ ಪಕ್ಷ ತನಗೆ ತಾನೇ ಆದರೂ ಸಾಬೀತು ಮಾಡುತ್ತಿರಬೇಕು. ತನ್ನ ಜೀವನವನ್ನು ಒತ್ತೆಯಿಟ್ಟಾದರೂ ಆತ ಇದನ್ನು ಸಮರ್ಥಿಸುವನು. ತನ್ನ ಚರ್ಮ ಸುಲಿದುಕೊಂಡೋ, ಪುನಃ ಶಿಲಾಯುಗದ ಮಾನವನಾಗಿ ಬದುಕಿಯೋ, ನರಭಕ್ಷಕನಾಗಿಯೋ, ಎಲ್ಲರಿಂದಲೂ ಛೀಮಾರಿ, ಬಹಿಷ್ಕಾರ ಹಾಕಿಸಿಕೊಂಡೋ ಆತನು ತಾನು ಏಕಮಾತ್ರ ಮನುಷ್ಯನೆಂದು ಸಾಧಿಸುವನು".

ಈ ತರಹದ ಟಿಪ್ಪಣಿಗಳೇ ಮನಸ್ಸಿಗೆ ತುಂಬಾ ಹತ್ತಿರವಾಗುತ್ತವೆ, ಅದರಲ್ಲೂ ಇವತ್ತಿನ ಜೀವಮಾನಕ್ಕೆ ತುಂಬಾ ಅರ್ಥಪೂರ್ಣವಾಗಿವೆ ಎಂದು ಹೇಳ ಬಯಸುತ್ತೇನೆ.

ಅಂದ ಹಾಗೆ ಇದನ್ನೋದಿದಾಗ ತಿಳಿದು ಬಂದಿದ್ದು ದಾಸ್ತೋವ್ ಸ್ಕಿ ಒಬ್ಬ ಅಪ್ಪಟ ಪ್ರಾಮಾಣಿಕ ಬರಹಗಾರ, ಅವರಂತೆಯೇ ನಮ್ಮ ಗೌತಮ್ ಸಹ ತುಂಬಾ ಪ್ರಾಮಾಣಿಕತೆಯಿಂದಲೇ ಅನುವಾದಿಸಿದ್ದಾರೆ. ಇಲ್ಲಿ ಅನುವಾದಿಸಿದ್ದಾರೆ ಅಂತ ಅನ್ನುವುದಕ್ಕಿಂತಲೂ ಅವರು ಅನುಭವಿಸಿದ್ದಾರೆ ಅಂತ ನನಗೆ ಅನ್ನಿಸುತ್ತದೆ. ಯಾಕೆಂದರೆ ಇದರಲ್ಲಿನ ಮತ್ತೊಂದು ಸಾಲು ಸಹ ಅವರೇ ಹೇಳಿದಹಾಗೆ "ತನ್ನ ಆತ್ಮಕ್ಕಾದ ವೈರುಧ್ಯಮಯ ನಿರ್ದಾಕ್ಷಿಣ್ಯ ಪ್ರಹಾರವನ್ನು ಪ್ರಾಮಾಣಿಕವಾಗಿ ಹೃದಯದ ಕೋಣೆ ಕೋಣೆಯಿಂದ ಕಿತ್ತೆಸೆದು ಬರೆಯುತ್ತಿದ್ದ ದಾಸ್ತೋವ್ ಸ್ಕಿ ಅಪ್ಪಟ ಪ್ರಾಮಾಣಿಕ" ಇಂತಹ ಪ್ರಾಸವನ್ನೊತ್ತ ಸಾಲುಗಳು ಓದುಗನ ಮನಮುಟ್ಟದೆ ಹೃದಯಾಳಕ್ಕಿಳಿದು ಒಂದೊಮ್ಮೆ ಭಾವುಕನಾಗಿ ಮಾಡುತ್ತದೆ, ಹಾಗೆಯೇ ನನಗು ಓದುವಾಗ ಆಗಿರುವುದರಲ್ಲಿ ಸಂದೇಹವೇ ಇಲ್ಲ.

ಸಂಗಮೇಶ ಸಜ್ಜನ