Article

ದೇವರೇಕೆ ದಾರಿ ತಪ್ಪಿಸಿದನು? 

ಅಕ್ಷರಗಳೆಂದರೆ " ಅನುಭವ". ಹೀಗೆ ಹೊಳೆಯಬೇಕಾದರೆ ನೀವೆಲ್ಲ, ಒಂದ್ಸಲ ಕುಳಿತ್ಕೊಂಡು "  ದಾರಿ ತಪ್ಪಿಸು ದೇವರೆ " ಎಂದು ಪ್ರಾರ್ಥಿಸಬೇಕು. ಹೀಗೆ ಬೇಕು ಬೇಕೂಂತಲೇ ದಾರಿ ತಪ್ಪುವ ಮಂಜುನಾಥ್ ಕಾಮತ್ ಅನುಭವಗಳ ತಿಜೋರಿಯನ್ನು ಬಿಚ್ಚಿಡುತ್ತಾರೆ. ನನ್ಗೆ ಇವರ ಬಗ್ಗೆ ಪರಿಚಯಿಸಿದವರು, ನಮ್ಮ ಡಾ. ಹನೀಫ್ ಬೆಳ್ಳಾರೆ‌. " ಬಿಡುವಾದ್ರೆ ಒಂದ್ಸಲ ಮಂಜುನಾಥರ ಗೋಡೆಗೆ ಕನ್ನ ಹಾಕಿ ಬಾ" ಅಂದಿದ್ದರು. 'ಚೋಮನ ದುಡಿ' ಓದಿನಲ್ಲಿ ತಲ್ಲೀನನಾಗಿದ್ದ ನನಗೆ ಅದು ಮರೆತೇ ಹೋಗಿತ್ತು. ಎರಡನೇ ಬಾರಿ ಫೋನ್ ಮಾಡಿದಾಗ " ಮಂಜುನಾಥ ಕಾಮತರ ಹೊಸ ಪುಸ್ತಕ ಮಾರುಕಟ್ಟೆಗೆ ಬಂದಿದೆ, ಕಡ್ಲೇ ಪುರಿಯಂತೆ ಖರ್ಚಾಗುತ್ತಿದೆ" ಅಂದಿದ್ದರು. ಮತ್ತೂ ಕುತೂಹಲ ಗರಿಗೆದರಿತ್ತು. ಮೊನ್ನೆ ಮಂಗಳೂರಿಗ ಹೋಗುತ್ತ ನೆನಪು ಮಾಡೊಕೊಂಡು " ದೇವರು ದಾರಿ ತಪ್ಪಿಸಲಿ" ಎಂದು ಉರ ಹೊಡೆಯುತ್ತಾ ಬಸ್ಸಿನಲ್ಲಿ ಹೊರಟಿದ್ದೆ. ಸಹ ಪ್ರಯಾಣಿಕ ಏನೆನಿಸಿಕೊಂಡಿದ್ದಾನೋ?, ಯಾರಿಗೆ ಗೊತ್ತು. ನವಕರ್ನಾಟಕ ‌ಪುಸ್ತಕ ಮಳಿಗೆಗೆ ಹೋದಾಗಲೂ ಇದೇ ಹೆಸರು ಹೇಳಿಕೊಂಡು ಅಟ್ಟ ಹತ್ತುತ್ತಿದ್ದೆ. ಪುಸ್ತಕ ಕೈಯಲ್ಲಿ ಕೊಡುವಾಗ, ಹೆಸರು ನೋಡುತ್ತೇನೆ "ದಾರಿ ತಪ್ಪಿಸು ದೇವರೇ!" ಫಜೀತಿ‌. ಸುಮ್ಮನೆ ಮುಸಿ ಮುಸಿ ನಕ್ಕೆ. ಒಂದ್ಸಲ ಮಂಜುನಾಥರ ಪ್ರೊಫೈಲ್ ಕೂಡಾ ನೋಡಿದ್ದೆ, ಕ್ಲಾಸ್ರೂಂ ನಲ್ಲಿ ನಾಗರ ಹಾವು ಹಿಡಿದ ಅನುಭವ ಓದಿದ್ದೆ. ಅದೇ ಬರಹ ಪುಸ್ತಕದಲ್ಲಿ ಕಾಣ ಸಿಕ್ಕಿತು. ಬಹುಃಶ ಅವರು ಫೇಸ್ಬುಕ್ನಲ್ಲಿ ಬರೆಯುತ್ತಿದ್ದ‌ ಬರಹಗಳ ಸಂಗ್ರಹವಾಗಿರಬೇಕು 'ದಾರಿ ತಪ್ಪಿಸು ದೇವರೇ' ಎಂದು ತಡವಾಗಿ ತಿಳಿಯಿತು.

ಪುಸ್ತಕ ಓದುತ್ತಾ, ಮಂಜುನಾಥರು ನಮ್ಮನ್ನೇ ಕಾಳಿಂಗ ಹತ್ತಿಸಿ ಬಿಡುತ್ತಾರೆ. ಮುಂದೆ ಹೋದಂತೆ ನಮಗೂ ಕಥೆ ಹೇಳುತ್ತಾ ಅಲ್ಲೆಲ್ಲಾ ಸುತ್ತಾಡಿಸಿ ಬರುತ್ತಾರೆ. "ನೀವು ಕಾಳಿಂಗನನ್ನು ಓಡಿಸಿ, ನಾನು ಹಿಂದೆ ಕುಳಿತು ಕಥೆ ಹೇಳುತ್ತೇನೆ "ಎನ್ನುವಾಗ  ವಿಕ್ರಮಾದಿತ್ಯನ ಬೆಂಬಿಡದ ಬೇತಾಳದ ನೆನಪಾಗುತ್ತದೆ. ಕನಸುಗಳು ಅದ್ಭುತವಾಗಿ ಅವರಿಗೆ ಕೊನರಿದೆ, ಬಲಿತು ಹೂವಾಗಿ ಕಾಯಿಯಾಗಿದೆ. ಅನುಭವಗಳು ಅವರ ತಿಜೋರಿಯಲ್ಲಿ ದಟ್ಟವಾಗಿದೆ. ಗೆಳೆಯರಾದ ಸಿ.ಎಂ. ಹನೀಫ್ ರಿಗೂ ಇದೇ ಗೀಳು. ದಾರಿ ಕಂಡಲ್ಲೆಲ್ಲಾ ಸಂಚರಿಸುವುದು, ಸಿಗದ ಊರಿಗೆ ದಾರಿ ಕಂಡು ಹಿಡಿಯುವುದು, ಊರು, ಕೇರಿಗಳ ಇತಿಹಾಸವನ್ನು ಕೆದಕುವುದು, ಇನ್ನೂ. ನನಗೂ ಇದೇ ಉಮೇದು. ತಥಾ ಕಥಿತ ಒಂದಷ್ಟು ಅಧ್ಯಾಯಗಳನ್ನು ಈ ಪುಸ್ತಕ ತೆರೆದಿಡುತ್ತದೆ. ಮಲೆ ನಾಡು, ಕರಾವಳಿ, ಪಶ್ಚಿಮ ಘಟ್ಟಗಳ ಬಗ್ಗೆ,ಅಲ್ಲಿನ ಸಂಸ್ಕೃತಿ ಜನ ಜೀವನದ ಬಗ್ಗೆ ಚರ್ಚಿಸುವ ಅವರ ಅನುಭವಗಳು, ವಿಚಾರಗಳು ಖಂಡಿತಾ ಓದುಗರನ್ನು ತುದಿಗಾಲಲ್ಲಿ ನಿಲ್ಲಿಸುತ್ತದೆ. ಕಾಜೂರಿನ ನದಿ, ಆಗುಂಬೆ, ಕೊಡಚಾದ್ರಿ ಈ ಬಗ್ಗೆ ಹೇಳುತ್ತಾ ಸಾಗುವ ನೂರು ನೂರು ನೆನಪುಗಳು ಹೊಸ ಜಗತ್ತಿಗೊಯ್ಯುತ್ತದೆ. ಕೆಲವೆಡೆ ಲೇಖಕರು ಅತೀವ ಭಾವುಕರಾಗುತ್ತಾ ಸಮಾಜದಿಂದ ಏನೋ ನಿರೀಕ್ಷಿಸುತ್ತಿರುವಂತೆ ಬೇಡಿಕೊಳ್ಳುತ್ತಾರೆ. ಎಂ.ಬಿ‌.ಎ ಕಲಿತು ಏನೋ ಸಾಧಿಸಬೇಕೆಂದಿದ್ದ ಮಂಜುನಾಥ್ ಪತ್ರಿಕೋದ್ಯಮದಲ್ಲೇ ಮುಂದುವರಿದಿದ್ದಾರೆ. ನಾನೂ ಅವರಂತೆ ಪಿಯು ಸೈನ್ಸ್, ಮತ್ತೆ ಬಿ.ಕಾಂ, ಆ ಬಳಿಕ ಎಂ.ಬಿ.ಎ ಮಾಡಿದವನು. ಜರ್ನಲಿಸಂ ಮಾಡಬೇಕೆಂದೆನಿಸುವುದಾದರೂ ಸದ್ಯಕ್ಕೆ‌‌ ಅದೇ ದಾರಿಯನ್ನು ಸವೆಸುತ್ತೇನೆಂದು ನಿರ್ಲಿಪ್ತನಾಗುತ್ತೇನೆ.

ರಾಷ್ಟ್ರೀಯ ಹಾಕಿ ಆಟಗಾರನಾಗದ ನಿರುತ್ಸಾಹ, ಬೈಕ್ ಮೂರ್ಮೂರು ಬಾರಿ ಕೈ ಕೊಡುವ ಶನಿ, ನಾಗರ ಹಾವಿನ ಶಾಪ ಪಕೃತಿ ನಿಯಮದಷ್ಟೇ ಸಿಲ್ಲಿಯಾಗಿ ಸ್ವೀಕರಿಸುತ್ತಾರೆ. ವಿದ್ಯಾರ್ಥಿನಿ ಹೇಳಿದ ಮಾತ್ರಕ್ಕೆ ಕುತೂಹಲ ಹುಟ್ಟಿ ಕಡಲ ದಾಟಿ ಹೋಗಿ ಕಂಡ ನೇತ್ರಾಣಿ ದ್ವೀಪ ನಮಗೂ ಹೋಗಬೇಕೆಂದೆನಿಸುತ್ತದೆ. ಒಂದೊಂದು ಅನುಭವಗಳು ಮನದಲ್ಲೇ ಚಿತ್ರಿಸುತ್ತಾ ಅವರ ಜೊತೆ ಪಯಣ ಬೆಳೆಸಿದಷ್ಟೇ ಖುಷಿ ಮನೆ ಮಾಡುತ್ತದೆ. ಅವರು ಹೇಳಿದ ಹೆಚ್ಚಿನ ಅನುಭವಗಳೂ ನನಗೂ ಆಗಿದೆ‌. ಕಾಲೇಜಿನಲ್ಲಿ ಬಂಕ್ ಮಾಡಿದಾಗಲೂ, ತರಗತಿ ತಪ್ಪಿದಾಗಲೂ, ಸ್ಟ್ರೈಕ್ ಮಾಡಿದಾಗಲೂ ಲೈಬ್ರರಿಯಲ್ಲಿ ಕುಳಿತುಕೊಂಡದ್ದೂ ನೆನಪಿಗೆ ಬರುತ್ತದೆ‌. ಜಲ ಪಾತದಲ್ಲಿ ನಲಿಯುವ ಮೀನನ್ನೂ ಹಿಡಿಯಬೇಕು. ಮತ್ತೆ ಕರಿದು ತಿನ್ನಬೇಕು, ತೆಪ್ಪದಲ್ಲಿ ಸಾಗಬೇಕು, ಹೊಸಬರ ಜೊತೆ ಮಾತಿಗಿಳಿಯ ಬೇಕು. ಒಂದಷ್ಟು ಊರು ಸುತ್ತಬೇಕು. ಮತ್ತೆ ಮತ್ತೆದಾರಿ ತಪ್ಪುತ್ತಲೇ ಇರಬೇಕು. ಇಂಥದೆಲ್ಲ ಆಸೆಗಳು ರೆಕ್ಕೆ ಬಿಚ್ಚಿ ಗಾಳಿ ಪಟದಂತೆ ಹಾರಾಡತೊಡಗಿದೆ.

ವಿದೇಶಕ್ಕೂ ಹೊರಡುತ್ತಾರಂತೆ, ಶುಭವಾಗಲಿ. ಬರುವ ಹೊತ್ತಿಗೆ ಒಂದಷ್ಟು ಟಿಪ್ಪಣಿ ಬರೆದಿಟ್ಟು ಇಂಥದೇ ಅದ್ಭುತ ಪುಸ್ತಕ ಹೊರತನ್ನಿ. ಕಾಯುತ್ತಿದ್ದೇವೆ.ಇನ್ನೂ ತುಂಬಾ ಹೇಳಲಿಕ್ಕಿದೆ, ನಾನು ಹೇಳಿದಂತಲ್ಲ, ನೀವು ಓದಲೇ ಬೇಕು. ಓದುತ್ತಾ ಹೋದಂತೆ ಕಾಳಿಂಗ ನಿಮ್ಮಜೊತೆಗಿರುತ್ತೆ, ಮಂಜುನಾಥ್ ಹಿಂದಿನಿಂದ ಕುಳಿತು ಖಂಡಿತಾ ಕಥೆ ಹೇಳುತ್ತಲೇ ಇರುತ್ತಾರೆ.

ಪುಸ್ತಕದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ- https://www.bookbrahma.com/book/daari-tappisu-devare

ಮುನವ್ವರ್ ಜೋಗಿಬೆಟ್ಟು