Article

‘ದುಪ್ಪಟ್ಟು’ ಬಹಿರಂಗಪಡಿಸುವ ಕಹಿ ಸತ್ಯಗಳು

ಸುದ್ದಿವಾಹಿನಿಯಲ್ಲಿ ಕೆಲಸ ಮಾಡುವವರೊಬ್ಬರು ಇತ್ತೀಚೆಗೆ ನಾಡಿನ ಪ್ರಮುಖ ಸುದ್ದಿಪತ್ರಿಕೆಯೊಂದರಲ್ಲಿ ಒಂದು ದೀರ್ಘ ಲೇಖನ ಬರೆದರು. ವಿಷಯ- ಕರ್ನಾಟಕ ಭೂಸುಧಾರಣಾ ಕಾಯಿದೆಯ ತಿದ್ದುಪಡಿ. ತಿದ್ದುಪಡಿ ಮಾಡಿದ್ದು ಸರಿ, ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂಬುದು ಅವರ ವಾದ. ಅವರಿಗೆ ಹಾಗೆ ವಾದಿಸುವ ಹಕ್ಕಿದೆ. ಆದರೆ ಸದರಿ ಲೇಖನದಲ್ಲಿ ಸಶಕ್ತ ವಾದದ ಬದಲಿಗೆ ಬಹುತೇಕ ಇದ್ದುದು ಕಾಯಿದೆಗೆ ತಿದ್ದುಪಡಿ ವಿರೋಧಿಸುವವರ ವೈಯಕ್ತಿಕ ನಿಂದನೆ. ರೈತರೇ ಅಲ್ಲದವರೆಲ್ಲ ಇದನ್ನು ವಿರೋಧಿಸುತ್ತಿದ್ದಾರೆ ಎಂಬ ತರ್ಕ. ಈ ತರ್ಕವನ್ನು ಒಪ್ಪುವುದು ಕಷ್ಟ. ಹಾಗಾದರೆ ಈವತ್ತಿನ ಕೃಷಿ ಕ್ಷೇತ್ರದ ಬಿಕ್ಕಟ್ಟಿನ ಬಗ್ಗೆ ರೈತರು ಮಾತ್ರ ಮಾತನಾಡಬೇಕೇ? ನಾವೆಲ್ಲರೂ ಅನ್ನ ತಿನ್ನುವವರಾದುದರಿಂದ ಅನ್ನ ಸೃಷ್ಟಿಯ ಕ್ಷೇತ್ರದ ಬಗ್ಗೆ ನಮಗೂ ಚಿಂತೆ ಬೇಡವೇ? ಕೃಷಿ ಕ್ಷೇತ್ರದ ಬಿಕ್ಕಟ್ಟು ರೈತರು ಮತ್ತು ರೈತರಲ್ಲದವರು ಎಲ್ಲರನ್ನೂ ಒಂದಲ್ಲ ಒಂದು ರೀತಿಯಲ್ಲಿ ಕಾಡುವುದಿಲ್ಲವೇ?

ಇದನ್ನು ಹೇಳುವ ಹೊತ್ತು ನನ್ನ ಕೈಯಲ್ಲಿ ರಾಜಾರಾಮ ತಲ್ಲೂರು ಅವರ ‘ದುಪ್ಪಟ್ಟು’ ಪುಸ್ತಕವಿದೆ. ಎರಡೆರಡು ಬಾರಿ ಅದನ್ನು ನಾನು ಓದಿದ್ದೇನೆ. ಅದರ ಬಗ್ಗೆ ಹೇಳುವ ಮೊದಲು ರಾಜಾರಾಮ್ ಅವರು ತಮ್ಮ ಪುಸ್ತಕದ ಆರಂಭದಲ್ಲಿ ಹೇಳಿರುವ ಹಾಗೆಯೇ ನಾನೂ ಎರಡು ಕತೆಗಳನ್ನು ಹೇಳುತ್ತೇನೆ.

ಮಂಗಳೂರಿನಲ್ಲಿ ರಿಫೈನರಿ ಸ್ಥಾಪನೆಯಾದಾಗ ಅನೇಕ ಕೃಷಿಕರು ತಮ್ಮ ಜಮೀನು ಕಳೆದುಕೊಂಡರು. ಒಂದು ಕಾಲನಿ ಸ್ಥಾಪಿಸಿ ಅಲ್ಲಿ ಅವರಿಗೆ ವಸತಿ ಕಲ್ಪಿಸಲಾಯಿತು. ಈ ಸಂದರ್ಭ ಗೆಳೆಯ ನಟೇಶ ಉಳ್ಳಾಲ್ ಈ ನಿರ್ವಸಿತರ ಬಗ್ಗೆ ಒಂದು ಸಾಕ್ಷ್ಯ ಚಿತ್ರ ನಿರ್ಮಿಸಿದರು. ಅದರಲ್ಲಿ ಒಬ್ಬಳು ವಯೋವೃದ್ದೆ ಮಾತನಾಡುತ್ತಾ “ಇತ್ತೆ ದಾದ ಮಲ್ಪುನ ಮಗ, ಬಾನ ತೂವೊಂದು ಕುಲ್ಲುನ” (ಈಗ ಏನು ಮಾಡುವದು ಮಗಾ, ಆಕಾಶ ನೋಡುತ್ತ ಕೂರುವುದು) ಎಂದು ನೋವಿನಿಂದ ಹೇಳುತ್ತಾಳೆ!

ಎರಡನೆಯ ಕತೆ: ಆಕೆ ಬದುಕಿನ ಇಳಿಸಂಜೆಯಲ್ಲಿರುವಾಕೆ. ಇಡಿಯ ಬದುಕನ್ನು ಬದುಕಿದ್ದು ತುಂಡು ಭೂಮಿಯ ಆ ಗುಡಿಸಲಿನಲ್ಲಿ. ಗಂಡ ತೀರಿ ಹೋದ ಮೇಲೆ ಒಂಟಿ. ಮನೆಯ ಬೆಕ್ಕು, ನಾಯಿ, ಕೋಳಿ ಇವೆಲ್ಲ ಆಕೆಯ ಸಹವಾಸಿಗಳು. ಮದುವೆಯಾಗಿ ದೂರ ಇರುವ ಮಗಳಿಗಾದರೋ ಪಾಪ ಪ್ರಜ್ಞೆ. ಇಳಿ ವಯಸಿನ ತಾಯಿ ಒಬ್ಬಳೇ ಇದ್ದಾಳಲ್ಲ ಎಂದು. ‘ಅಲ್ಲಿ ಬಿಟ್ಟು ಬಾ ನಮ್ಮೊಂದಿಗಿರು’ ಎಂದು ಒತ್ತಾಯ. ಆದರೆ ಮುದುಕಿ ಕೇಳುತ್ತಲೇ ಇರಲಿಲ್ಲ. ‘ಹುಟ್ಟಿದ್ದೂ ಇಲ್ಲಿಯೇ ಸಾಯುವುದೂ ಇಲ್ಲಿಯೇ’ ಎಂಬುದು ಮುದುಕಿಯ ಮಾತು. ಆದರೆ ಮಗಳು ಬಿಡಲೇ ಇಲ್ಲ. ‘ಊರವರೆಲ್ಲ ನನ್ನನ್ನು ದೂರುತ್ತಾರೆ ನೀನು ಬರಲೇಬೇಕು’ ಎಂದು. ಕೊನೆಗೂ ಮಗಳ ಹಠ ಗೆದ್ದಿತು. ಮುದುಕಿ ಕಣ್ಣೀರು ಹಾಕುತ್ತಲೇ ಹೊರಟಿತು. ಮಗಳ ಮನೆಗೆ ಹೋದ ಮಾರನೇ ದಿನವೇ ತೀರಿಕೊಂಡಿತು.

ಈ ಎರಡು ಕತೆಗಳನ್ನು ಯಾಕೆ ಹೇಳಿದೆ ಎಂದರೆ ನಮ್ಮದು ಕೃಷಿ ಪ್ರಧಾನ ದೇಶ. ಒಂದಲ್ಲ ಒಂದು ಕಾಲದಲ್ಲಿ ಎಲ್ಲರೂ ಕೃಷಿಕರೇ ಆಗಿದ್ದವರು. ಭೂಮಿಯೊಂದಿಗೆ ನಮ್ಮದು ಭಾವನಾತ್ಮಕ ಸಂಬಂಧ. ಒಂದು ತುಂಡಾದರೂ ಭೂಮಿ ಇರುವವರಿಗೆ ಸುಖ ಇಲ್ಲದಿರಬಹುದು. ಆದರೆ ನೆಮ್ಮದಿಯಿತ್ತು. ಮೇಲೆ ಹೇಳಿದ ಕತೆಗಳ ಇಬ್ಬರು ಮುದುಕಿಯರಿಗೂ ಮನೆಯಲ್ಲಿ ಅಂತಹ ಸಂಪಾದನೆಯೇನೂ ಇರಲಿಲ್ಲ. ಆದರೆ ಬಸಳೆ ತೊಂಡೆ ದೊಂಪದ ಹತ್ತಿರ ಸುಳಿದಾಡುತ್ತಾ ನಾಯಿ ಕೋಳಿಗಳೊಂದಿಗೆ ಮಾತನಾಡುತ್ತಾ ನೆಮ್ಮದಿಯಿಂದ ಬದುಕಿದವರು ಅವರು. ಆ ಭೂಮಿಯಿಂದ ಬೇರ್ಪಡಿಸಿದಾಕ್ಷಣ ಬೇರು ಕಿತ್ತ ಗಿಡದ ಪರಿಸ್ಥಿತಿ ಅವರದು.

ಈ ಭಾವನಾತ್ಮಕ ಸಂಬಂಧವೂ ಇಲ್ಲಿನ ರೈತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಒಂದು ದೊಡ್ಡ ಸಮಸ್ಯೆ. ಈ ಬಡವರಿಗೆ ತಮ್ಮ ಜಮೀನು ಜೀವ ಇದ್ದಂತೆ. ಆದರೆ ಸರಕಾರಕ್ಕೆ, ಕೃಷಿ ಮಾಡ ಹೊರಟ ಉದ್ಯಮಿಗಳಿಗೆ ಆ ಭಾವನಾತ್ಮಕ ಸಂಬಂಧವಿಲ್ಲ. ಅವರು ನೋಡುವುದು ಬರಿಯ ಆದಾಯದ ಕಣ್ಣಿನಿಂದ, ಹಣದ ಕಣ್ಣಿನಿಂದ. ಆದ್ದರಿಂದಲೇ ಬಹುವಾಗಿ ಕೃಷಿ ಕ್ಷೇತ್ರದ ಬಗ್ಗೆ ಸರಕಾರ ಮಾಡುವ ನೀತಿ ನಿರೂಪಣೆಗಳಲ್ಲಿ ಅಭಿವೃದ್ಧಿ, ಆದಾಯ ಎಲ್ಲವೂ ಇರುತ್ತದೆ. ಆದರೆ ಅಲ್ಲಿ ರೈತನೇ ಇರುವುದಿಲ್ಲ.
ಸರಿಯಾಗಿ ಮೂರು ದಶಕಗಳಿಗಿಂತ ಹಿಂದೆ ನಾವು ಈಗಿನಂತಹ ರೈತ ಆತ್ಮಹತ್ಯೆಗಳನ್ನು ಕೇಳಿದ್ದೆವೇ? ಕಳೆದ ಮೂರು ದಶಕಗಳಲ್ಲಿ ನಡೆದ ರೈತ ಆತ್ಮಹತ್ಯೆಗಳ ಸಂಖ್ಯೆ ಎಷ್ಟು ಲಕ್ಷ? ಕಳೆದ ಶತಮಾನದ ಕೊನೆಯ ದಶಕದ ಆರಂಭ ಭಾಗದಲ್ಲಿ ಹಠಾತ್ತಾಗಿ ಡಂಕೆಲ್ ಕರಡು, ಗ್ಯಾಟ್ ಒಪ್ಪಂದ ಮೊದಲಾದ ಪದಗಳು ಕೇಳಿ ಬರಲಾರಂಭಿಸಿದವು. ಸ್ವಾಭಾವಿಕವಾಗಿಯೇ ಸರಕಾರ ಅದರ ಪರವಿದ್ದರೆ ಅನೇಕ ಪ್ರಜ್ಞಾವಂತರು ಅದನ್ನು ವಿರೋಧಿಸುತ್ತಾ ಅದು ಹೇಗೆ ನಮ್ಮ ರೈತರ ಬದುಕನ್ನು ನಾಶಮಾಡಲಿದೆ ಎಂದು ಎಚ್ಚರಿಸತೊಡಗಿದರು. ಆದರೆ ನಮ್ಮ ಜನರ ಕತೆ ಗೊತ್ತಲ್ಲ. ಈ ಒಪ್ಪಂದ ಏನು ಎತ್ತ ಇದರಿಂದ ತಮ್ಮ ಬದುಕಿನ ಮೇಲೆ ಆಗಲಿರುವ ಪರಿಣಾಮ ಏನು ಎಂಬ ಅರಿವು ಇಲ್ಲದ ನಮ್ಮ ರೈತರು ಎಂದಿನಂತೆ ತಮ್ಮ ಹೊಲದ ಕೃಷಿ ಕೆಲಸಗಳಲ್ಲಿ ವ್ಯಸ್ತರಾಗಿದ್ದರು. ಈ ಒಪ್ಪಂದಗಳ ಪರಿಣಾಮ ಅರಿವಾಗುವಾಗ ಕಾಲ ಮಿಂಚಿಹೋಗಿತ್ತು. ಈವತ್ತು ರೈತ ಬಿಕ್ಕಟ್ಟಿನಲ್ಲಿ, ಭಯಬೀಳಿಸುವ ಪ್ರಮಾಣದ ರೈತ ಆತ್ಮಹತ್ಯೆಗಳಲ್ಲಿ ಈ ಅಂತಾರಾಷ್ಟ್ರೀಯ ಒಪ್ಪಂದಗಳ ಪಾಲೂ ಇದೆ.
ಈ ಹಿನ್ನೆಲೆಯಲ್ಲಿಯೇ ನಮಗೆ ರಾಜಾರಾಮ ತಲ್ಲೂರು ಅವರ ‘ದುಪ್ಪಟ್ಟು’ವಿನಂತಹ ಪುಸ್ತಕ ಮುಖ್ಯವಾಗುವುದು. ದುಪ್ಪಟ್ಟು ಆದಾಯದ ಹಿಂದಿನ ಮರ್ಮವನ್ನು ಹೇಳುವುದಕ್ಕೆ.

ನಮ್ಮ ಪ್ರಧಾನಿಗಳು 2022 ನೇ ಇಸವಿಗಾಗುವಾಗ ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದು ಹೇಳಿಕೊಳ್ಳುತ್ತಲೇ ಬಂದಿದ್ದಾರೆ (ಆ ಹೇಳಿಕೆಗೆ ಈಗ ಸ್ವಲ್ಪ ಕಡಿಮೆಯಾಗಿದೆ, ಕಾರಣ ಎಲ್ಲರಿಗೂ ಗೊತ್ತು). ಇಲ್ಲಿ ರೈತ ಆದಾಯ ದುಪ್ಪಟ್ಟು ಆಗುವುದು ಹೇಗೆ? ಎಲ್ಲ ರೈತರ ಆದಾಯವೂ ದುಪ್ಪಟ್ಟಾಗುವುದೇ? ಅದಕ್ಕಿಂತಲೂ ಮುಖ್ಯವಾಗಿ ಸರಕಾರದ ಪ್ರಕಾರ ‘ರೈತ’ರು ಎಂದರೆ ಯಾರು? ಈ ಬಗ್ಗೆ ವಿವರವಾಗಿ ಚರ್ಚಿಸುತ್ತದೆ ಈ ಕೃತಿ.

ಭಾರತದ ಕೃಷಿ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟು ಇಂದು ನಿನ್ನೆಯದಲ್ಲ. ಅದಕ್ಕೆ ಸುಲಭ ಪರಿಹಾರಗಳೂ ಇಲ್ಲ. ಸದರಿ ಕೃತಿಗೆ ಪ್ರತಿಕ್ರಿಯಾ ಲೇಖನ ಬರೆದಿರುವ ಎಂ ಎಸ್ ಶ್ರೀರಾಮ್ ಅವರು ಹೇಳುವ ಹಾಗೆ ‘ಸೂಚಿಸಲಾದ ಪರಿಹಾರವೇ ಮುಂದೆ ಒಂದು ಸಮಸ್ಯೆಯಾಗುವುದೂ ಇದೆ’. ಇದೇ ಹಿನ್ನೆಲೆಯಲ್ಲಿ ರಾಜಾರಾಮ ತಮ್ಮ ಪುಸ್ತಕದಲ್ಲಿ ಪರಿಹಾರ ಸೂಚಿಸುವುದಕ್ಕಿಂತಲೂ ಕೃಷಿ ಸಂಬಂಧದ ಅಂತಾರಾಷ್ಟ್ರೀಯ ಮತ್ತು ದೇಶೀ ಕಾರ್ಯನೀತಿಗಳು ಏನು ಹೇಳುತ್ತಿವೆ ಎಂದು ಸರಳವಾಗಿ ವಿವರಿಸುವುದಕ್ಕೆ ಮತ್ತು ಸಮಸ್ಯೆಯನ್ನು ಎತ್ತಿತೋರಿಸುವುದಕ್ಕೆ ಆದ್ಯತೆ ನೀಡುತ್ತಾರೆ. ಪರಿಹಾರದ ಮೊದಲ ಮೆಟ್ಟಿಲು ಎಂದರೆ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವುದೇ ಅಲ್ಲವೇ?. ಕೃಷಿ ಸಮಸ್ಯೆಯನ್ನು ಪರಿಹರಿಸಲು, ಕೃಷಿ ಆದಾಯವನ್ನು ಹೆಚ್ಚಿಸಲು ಸರಕಾರ ರೂಪಿಸಿರುವ ಕಾರ್ಯನೀತಿಗಳು, ಕಾರ್ಯಕ್ರಮಗಳು ಹೇಗೆ ಸಣ್ಣ ರೈತರಿಗೆ ಶಾಪವಾಗಿ ಪರಿಣಮಿಸುತ್ತಾ ಸೂಟುಬೂಟಿನ ರೈತರಿಗೆ ವರದಾನವಾಗಲಿದೆ ಎಂಬುದನ್ನೂ ಅವರು ಬೆಟ್ಟುಮಾಡುತ್ತಾರೆ.

ಕೃಷಿ ಆದಾಯ ದುಪ್ಪಟ್ಟು ಎಂದರೆ ನಾವೆಲ್ಲರೂ ಉತ್ಪಾದಕತೆ ಹೆಚ್ಚುವ ಮೂಲಕ ಮತ್ತು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುವ ಮೂಲಕ ಪ್ರತಿಯೊಬ್ಬ ರೈತನ ಆದಾಯವೂ ದುಪ್ಪಟ್ಟಾಗುತ್ತದೆ ಎಂದೇ ಅಂದುಕೊಂಡಿದ್ದೆವು. ಆದರೆ ಕೃಷಿಕರ ಸಂಖ್ಯೆಯನ್ನೇ ಕಡಿಮೆ ಮಾಡಿ ಆದಾಯ ದುಪ್ಪಟ್ಟಾಯಿತು ಎಂದು ತೋರಿಸುವ ಸರಕಾರಿ ಕುತಂತ್ರದ ಬಗ್ಗೆ ಮತ್ತು ಆದಾಯ ದುಪ್ಪಟ್ಟಾದರೂ ಅದು ನಮ್ಮ ಬಡ ರೈತರ ಆದಾಯ ದುಪ್ಪಟ್ಟಾಗುವ ಬದಲಿಗೆ ಕಾರ್ಪೋರೇಟ್ ರೈತರ ಆದಾಯ ದುಪ್ಪಟ್ಟಾಗುವ ಸಾಧ‍್ಯತೆಯ ಬಗ್ಗೆಯೂ ಈ ಪುಸ್ತಕ ಎಚ್ಚರಿಸುತ್ತದೆ. 

ನಮ್ಮ ರೈತರಿಗೆ ಅರಿವೇ ಇಲ್ಲದ ಹಾಗೆ ಅವರ ದುಡಿದುಣ್ಣುವ ಬದುಕಿನ ಬಗ್ಗೆ ಯಾರೋ ಎಲ್ಲೋ ತೆಗೆದುಕೊಳ್ಳಲಾಗುತ್ತಿರುವ ತೀರ್ಮಾನಗಳ ಬಗ್ಗೆ ಯೋಚಿಸುವಾಗ ನಿಜಕ್ಕೂ ಭಯವಾಗುತ್ತದೆ. ಕೃಷಿಯಿಂದ ಬರುತ್ತಿರುವ ಆದಾಯ ಕಡಿಮೆಯಿರುವುದರಿಂದ ಅವರಲ್ಲಿ ಅನೇಕರನ್ನು ಕೃಷಿಯೇತರ ಉದ್ಯೋಗಗಳತ್ತ ಒಯ್ಯುವ ವಿಷಯ ಬಂದಾಗ ಯುವಕರನ್ನೇನೋ ಹಾಗೆ ತೊಡಗಿಸಬಹುದು. ಆದರೆ ಮಧ‍್ಯ ವಯಸ್ಸು ದಾಟಿದವರ, ಬದುಕಿನ ಇಳಿಸಂಜೆಯಲ್ಲಿರುವವರ ಕತೆಯೇನು? ಅವರಿಗೆ ನೇರ ಕೃಷಿ ಹೊರತುಪಡಿಸಿ ಬೇರೆ ಏನು ಕೆಲಸ ಗೊತ್ತಿದೆ? ಅವರು ಈ ವಯಸ್ಸಿನಲ್ಲಿ ಹೊಸ ಕೌಶಲಗಳನ್ನು ಕಲಿತು ದುಡಿಯುವುದು ಸಾಧ್ಯವೇ? ಹೀಗೆ ಯಾವುದೇ ಮಗ್ಗುಲಿನಿಂದ ನೋಡಿದರೂ ಕೃಷಿ ಕ್ಷೇತ್ರದ್ದು ಸುಲಭ ಪರಿಹಾರಗಳಿಲ್ಲದ ಸಂಕೀರ್ಣ ಬಿಕ್ಕಟ್ಟು.

ಗುತ್ತಿಗೆ ಕೃಷಿ, ಕಾರ್ಪೋರೇಟ್ ಕೃಷಿ ಇತ್ಯಾದಿ ಪದ್ಧತಿಗಳು ಸಣ್ಣ ಮತ್ತು ಅತಿಸಣ್ಣ ರೈತರಿಗೆ ಹೇಗೆ ಮಾರಕ ಎನ್ನುವುದನ್ನು ವಿವರಿಸುತ್ತಲೇ ಸಹಕಾರಿ ಕೃಷಿ ಪದ್ಧತಿಯು ಇಲ್ಲಿ ಒಂದು ಪರಿಹಾರವಾಗಬಲ್ಲುದು ಎಂದು ರಾಜಾರಾಮ್ ಸೂಚಿಸುತ್ತಾರೆ. ಆದರೆ ಸದರಿ ಪುಸ್ತಕಕ್ಕೆ ಕಿರೀಟಪ್ರಾಯವಾದ ಪರ್ಯಾಯ ಪ್ರತಿಕ್ರಿಯೆ ಬರೆದಿರುವ ಎಂ ಎಸ್ ಶ್ರೀರಾಮ್ ಅವರು ಇಂತಹ ಪ್ರತಿಯೊಂದು ಪರಿಹಾರಗಳಲ್ಲೂ ಇರುವ ಸಮಸ್ಯೆಯನ್ನು ಹಿಂದಿನ ಅನುಭವಗಳ ಆಧಾರದಲ್ಲಿ ವಿವರಿಸುತ್ತಾರೆ. 
ಶ್ರೀರಾಮ್ ಅವರು ಗುರುತಿಸುವ ಹಾಗೆ ಈ ಸಮಯೋಚಿತವಾದ ಪುಸ್ತಕ ನಮ್ಮನ್ನೆಲ್ಲ ಯೋಚನೆಗೆ ಹಚ್ಚುತ್ತದೆ, ಚರ್ಚೆಗೆ ಆಹ್ವಾನಿಸುತ್ತದೆ. ಈ ಅರ್ಥದಲ್ಲಿ ‘ದುಪ್ಪಟ್ಟು’ ಪುಸ್ತಕ ರಚನೆಯ ಮೂಲಕ ರಾಜಾರಾಮ್ ಸಾರ್ಥಕ ಕೆಲಸವೊಂದನ್ನು ಮಾಡಿದ್ದಾರೆ. ಎಂದಿನಂತೆ ಮುದ್ದಾಗಿ ಪ್ರಕಟಿಸಿದ ಬಹುರೂಪಿ ಪ್ರಕಾಶನವೂ ಇಲ್ಲಿ ಅಭಿನಂದನೀಯ.

 

ಶ್ರೀನಿವಾಸ ಕಾರ್ಕಳ